ಶೀರ್ಷಿಕೆ ನೋಡಿ ಅಚ್ಚರಿಯಾಗಿರಬಹುದು ! ಆದರೆ ಈ ಮಾತು ಅಕ್ಷರಶಃ ಸತ್ಯ. ಏಕೆಂದರೆ ನೆಮ್ಮದಿ ತರಬೇಕಾಗಿದ್ದ ಆಧುನಿಕತೆ ಅದನ್ನು ಕಿತ್ತುಕೊಂಡಿದೆ. ಭ್ರಮೆಯಲ್ಲಿ ಬದುಕುತ್ತಿದ್ದೇವೆ. ಇದಕ್ಕೆಲ್ಲ ಕಾರಣ ನಾವೇ ಅಂದರೆ ಮನುಷ್ಯರೇ ಮಾಡಿರುವ, ಮಾಡುತ್ತಿರುವ ಪರಿಸರ ಮಾಲಿನ್ಯ !!

ಭಾರತದ ಮಹಾನಗರಗಳ ವಾಯು ಗುಣಮಟ್ಟದ ಬಗ್ಗೆ ಇತ್ತೀಚೆಗೆ ಅಧ್ಯಯನ ನಡೆದಿದೆ. ಅದನ್ನು ಲ್ಯಾನ್ಸೆಟ್ ಅಧ್ಯಯನ ಎಂದು ಕರೆಯಲಾಗುತ್ತದೆ. 10 ಪ್ರಮುಖ ನಗರಗಳಲ್ಲಿ ಪರಿವೀಕ್ಷಣೆ ನಡೆಸಲಾಗಿದೆ. ಇದರಿಂದ ಆಘಾತಕಾರಿ ಫಲಿತಾಂಶ ಕಂಡು ಬಂದಿದೆ.

ಮಹಾನಗರಗಳ ನಿವಾಸಿಗಳಾಗಿ ಉದ್ಯೋಗ ನಿಮಿತ್ತ ದಿನನಿತ್ಯ ಹೊರಗೆ ಸಂಚರಿಸುವವರು, ವಾರಕ್ಕೊಮ್ಮೆ ಹೊರಗೆ ಬರುವ ಹಿರಿಯ ಜೀವಗಳು “ತುಂಬ ಪರಿಸರ ಮಾಲಿನ್ಯವಾಗಿದೆ. ಹೊರಗೆ ಓಡಾಡುವುದೇ ಕಷ್ಟ” ಎಂದು ಹೇಳುತ್ತಿರುತ್ತಾರೆ. ಈ ಕಷ್ಟ ನಾವು ಅಂದುಕೊಂಡಿರುವುದಕ್ಕಿಂತ ಘೋರವಾಗಿದೆ.

ಅನೇಕ ರೀತಿಯ ಅನಾರೋಗ್ಯಗಳಿಗೆ ಪರಿಸರ ಮಾಲಿನ್ಯ ಕಾರಣವಾಗುತ್ತಿದೆ. ನಿತ್ಯ ಸಾವನ್ನಪ್ಪುವವರ ಸಂಖ್ಯೆಯಲ್ಲಿ ನೂರಕ್ಕೆ 7 ರಿಂದ 12 ಮಂದಿ ಮಾಲಿನ್ಯದ ಕಾರಣದಿಂದಲೇ ಸಾವನ್ನಪುತ್ತಿದ್ದಾರೆ. ಈ ಸಂಖ್ಯೆ ಮತ್ತಷ್ಟೂ ಹೆಚ್ಚಬಹುದು.

ಇದು ಸಹಜ ಸಾವುಗಳಲ್ಲ ! ಬದಲಾಗಿ ಪರಿಸರ ಮಾಲಿನ್ಯ ಮಾಡುತ್ತಿರುವ ಕೊಲೆ. ಆದರೆ ಈ ಕೊಲೆಗಾರನನ್ನು ರೂಪಿಸಿರುವುದು ನಾವೇ ! ಏಕೆಂದರೆ ಪರಿಸರದಲ್ಲಿ ಮಾಲಿನ್ಯ ಉಂಟು ಮಾಡಿರುವುದು, ಮಾಡುತ್ತಿರುವುದು ನಾವೇ !

ವಾಹನಗಳು, ಕೈಗಾರಿಕೆಗಳಿಂದ ಪಿಎಂ 2.5 ಎಂದು ಕರೆಯಲಾಗುವ ಸೂಕ್ಷ್ಮ ಕಣಗಳು ಹೊರ ಬೀಳುತ್ತಲೇ ಇರುತ್ತವೆ. ವಾಹನ ಹಳೆಯದಾದಷ್ಟು, ಕಾರ್ಖಾನೆಗಳಲ್ಲಿ ಸೂಕ್ತ ನಿರ್ವಹಣಾ ವ್ಯವಸ್ಥೆ ಇಲ್ಲದಿದ್ದರೆ  ಹೊರ ಬರುವ ಇಂಥ ಕಣಗಳ ಸಂಖ್ಯೆ ಅಗಾಧ !

ಇವುಗಳನ್ನು ಕಣಗಳು ಎನ್ನುವ ಬದಲು ಪುಟ್ಟಪುಟ್ಟ ಚೂರಿಗಳು ಎನ್ನುವುದು ಸೂಕ್ತ. ಈ ಹರಿತವಾದ ಚೂರಿಗಳು ಶ್ವಾಸಕೋಶಗಳಿಗೆ, ರಕ್ತ ಪ್ರವಾಹದೊಳಗೆ ನುಗ್ಗುತ್ತವೆ.

ಅಧ್ಯಯನ ನಡೆದಿರುವ ಮಹಾನಗರಗಳ ಮಾಲಿನ್ಯದಲ್ಲಿ ಇರುವ ಇಂಥ ಚೂರಿಗಳ ಸಂಖ್ಯೆ, ಮಿತಿಗಿಂತಲೂ ಅತ್ಯಧಿಕ. ವಿಶ್ವ ಆರೋಗ್ಯ ಸಂಸ್ಥೆ ಪರಿಸರದಲ್ಲಿ ಇರಬೇಕಾದ ಪಿಎಂ 2.5 ಮಟ್ಟವನ್ನು ಹೇಳಿದೆ. ಆದರೆ ಅಧ್ಯಯನ ನಡೆದಿರುವ ಮಹಾನಗರಗಳಲ್ಲಿ ಆ ಶಿಫಾರಸನ್ನು ಶೇಕಡ 99.8ರಷ್ಟು ಉಲ್ಲಂಘಿಸಲಾಗಿದೆ.

ದೆಹಲಿ, ಮುಂಬೈ ಮತ್ತು ಬೆಂಗಳೂರಿನಲ್ಲಿ ಪರಿಸರ ಮಾಲಿನ್ಯ ಮಟ್ಟದ ಬಗ್ಗೆ ಆಳವಾದ ಅಧ್ಯಯನ ನಡೆದಿದೆ. ದೆಹಲಿಯಲ್ಲಿ ಗರಿಷ್ಠ ಮಟ್ಟದ ಮಾಲಿನ್ಯ ಉಂಟಾಗಿದೆ. ಅಲ್ಲಿ ಉಂಟಾಗುತ್ತಿರುವ ಸಾವುಗಳಲ್ಲಿ ಶೇಕಡ 11.5ರಷ್ಟು ಮಾಲಿನ್ಯದ ಕಾರಣದಿಂದ ಆಗುತ್ತಿದೆ. ಅಂದರೆ ಒಂದು ವರ್ಷದಲ್ಲಿ 12 ಸಾವಿರ ಮಂದಿ ಇದರಿಂದಾಗಿಯೇ ಮರಣವನ್ನಪ್ಪುತ್ತಿದ್ದಾರೆ.

ಮಾಲಿನ್ಯಕಾರಕಗಳಲ್ಲಿ ಪ್ರತಿ ಘನ ಮೀಟರಿಗೆ 10 ಮೈಕ್ರೋಗ್ರಾಮ್ ಹೆಚ್ಚಳವಾದರೂ ಸಾವಿನ ಸಂಖ್ಯೆಯಲ್ಲಿ ಶೇಕಡ 1.4ರಷ್ಟು ಹೆಚ್ಚಳವಾಗುತ್ತದೆ. ಕಟ್ಟಡಗಳ ನಿರ್ಮಾಣದ ಸಂದರ್ಭದಲ್ಲಿ ಉಂಟಾಗುವ ಧೂಳು, ತ್ಯಾಜ್ಯಗಳನ್ನು ಸುಡುವಾಗ ಹೊರಬರುವ ಕಣಗಳು ಸಹ ಮಾಲಿನ್ಯಕ್ಕೆ ಗಣನೀಯ ಪಾಲು ನೀಡುತ್ತಿವೆ.

ಪರಿಸರ ಮಾಲಿನ್ಯವನ್ನು ಪೂರ್ಣವಾಗಿ ತಡೆಯಲಾಗುವುದಿಲ್ಲ. ಆದರೆ ವಿಶ್ವ ಆರೋಗ್ಯ ಸಂಸ್ಥೆ ಸೂಚಿಸಿರುವ ಗುಣಮಟ್ಟಗಳನ್ನು ಅಳವಡಿಸಿಕೊಳ್ಳಬಹುದು. ಹೀಗೆ ಮಾಡುವುದರಿಂದ ಮಾಲಿನ್ಯದ ಮಟ್ಟವನ್ನು ಗಣನೀಯವಾಗಿ ತಗ್ಗಿಸಬಹುದು. ನಾವು ಉಸಿರಾಡುವ ಗಾಳಿಯ ಗುಣಮಟ್ಟ ಹೆಚ್ಚಿಸುವುದರಿಂದ ಅಮೂಲ್ಯ ಜೀವಗಳನ್ನು ಉಳಿಸಲು ಸಾಧ್ಯ !!

Similar Posts

Leave a Reply

Your email address will not be published. Required fields are marked *