ಒಂಟಿ ಕುದುರೆ, ಅದರಿದು ಇಳಿದು ನಿಂತ ಯುವಕ, ನಿರ್ಜನ ಪ್ರದೇಶ. ಬ್ಯಾಂಕು, ಅದರ ಮುಂದಿನ ಬಾವಿ, ಅದರಳಗೆ ತುಸು ಇಳಿಬಿಟ್ಟ ಬಕೇಟ್. ಲಾಂಗ್ ಶಾಟ್ ಮೂಲಕ ನಿರ್ದೇಶಕ ಕಥೆಗೆ ಚಾಲನೆ ನೀಡುತ್ತಾನೆ. ಕ್ಯಾಮೆರಾ, ಯುವಕನ ಮೇಲೆ ಕ್ಲೋಸ್ ಆಫ್ ಆಗುತ್ತದೆ. ಆತನ ಮುಖದಲ್ಲಿ ಯೋಚನೆಯ ಭಾವ.. ಕಣ್ಣುಗಳು ಕಿರಿದಾಗುತ್ತವೆ. ವಾಚ್ಯವಾಗಿ ಏನೊಂದು ಹೇಳದೇ ಆತನ ತುಮುಲಗಳನ್ನು ಕಟ್ಟಿಕೊಡುತ್ತಾನೆ.
ಬ್ಯಾಂಕ್ ಪ್ರವೇಶಿಸುತ್ತಾನೆ. ಕ್ಯಾಮೆರಾ ಆತನ ಪಾದಗಳತ್ತ ತಿರುಗುತ್ತದೆ. ನಿಧಾನಗತಿಯ ಹೆಜ್ಜೆಗಳು ಆತನಿಗೇನೂ ಅವಸರವಿಲ್ಲ ಎಂಬುದನ್ನು ತೋರಿಸುತ್ತವೆ. ಬ್ಯಾಂಕರ್ ಒಂಟಿಯಾಗಿರುವುದು ಧೈರ್ಯ ಹೆಚ್ಚಿಸುತ್ತದೆ. ಬ್ಯಾಗಿಗೆ ದುಡ್ಡು ತುಂಬಿಕೊಂಡು ಹೊರಬರುವ ಬಾಗಿಲನ್ನು ಸರಿಸುತ್ತಾನೆ. ಲಾಂಗ್ ಶಾಟಿನಲ್ಲಿ ಬಾವಿ, ಇಳಿಬಿಟ್ಟ ಬಕೇಟು, ಕುದುರೆ. ಅತ್ತ ಒಡುತ್ತಾನೆ. ಗಂಟು ಕಟ್ಟದ ಬ್ಯಾಗಿನಿಂದ ರೂಪಾಯಿ ನೋಟುಗಳು ರೊಯ್ಯನೆ ಹಾರುತ್ತವೆ. ಹಿಂದಿನಿಂದ ಆತನತ್ತ ಗುಂಡು ಹಾರುತ್ತದೆ.
ಇವೆಲ್ಲದರ ಮೂಲಕ ಆ ಯುವಕನ ಕುತೂಹಲ, ಸಾಹಸ ಪ್ರವೃತ್ತಿ, ದರೋಡೆಗೆ ಹೊಸಬ, ಯಾವುದೇ ಪ್ಲಾನ್ ಅನ್ನು ಕೂಡ ಅತ ಮಾಡಿಲ್ಲ. ದುಡುಕಿದ್ದಾನೆ ಎನ್ನುವುದನ್ನು ನಿರ್ದೇಶಕ ಹೇಳುತ್ತಾನೆ. ನೋಡುನೋಡುತ್ತಿದಂತೆ ಬ್ಯಾಂಕರ್ ಬೀಸಿದ ಬಂದೂಕಿನ ಹಿಂಬದಿ ಬಲವಾಗಿ ಬಡಿಯುತ್ತದೆ. ಮೂರ್ಛೆ ಹೋಗುತ್ತಾನೆ. ಇಡೀ ತೆರೆಯಲ್ಲಿ ಕ್ಷಣ ಕತ್ತಲು ಆವರಿಸುತ್ತದೆ.
ಕತ್ತಲು ಸರಿದೊಡನೆ ಕ್ಯಾಮೆರಾ ಸೂರ್ಯನತ್ತ ತಿರುಗುತ್ತದೆ. ಪ್ರಖರ ಬಿಸಿಲು, ಹಾಗೆ ಕ್ಯಾಮೆರಾ ಡೌನ್ ಆಗತೊಡಗುತ್ತದೆ. ಹಗ್ಗ, ನೇಣಿನ ಕುಣಿಕೆಯಲ್ಲಿ ಆ ಯುವಕ ಕತ್ತು. ನಿಧಾನವಾಗಿ ಕಣ್ಣು ತೆರೆದು ನೋಡಿದರೆ ಎದರಿಗೆ ಕಾನೂನು ಪಾಲಕರು. ಅವರು ಆತನಿಗೆ ಮರಣ ದಂಡನೆ ಜಾರಿ ಮಾಡುವಷ್ಟರಲ್ಲಿ ಅವರಿಗೇ ಮರಣ ಬಂದೆರಗುತ್ತದೆ. ಯಮಸ್ವರೂಪಿಯಾಗಿ ಬಂದವರು ಆ ಯುವಕನನ್ನು ಅದೇ ಸ್ಥಿತಿಯಲ್ಲಿ ಬಿಟ್ಟು ಹೋಗುತ್ತಾರೆ.
ಹಸಿರು ಎಲೆಗಳನ್ನು ತುಂಬಿಕೊಂಡ ಮರ, ಇಳಿಬಿದ್ದ ಹಗ್ಗ, ನೇಣಿನ ಕುಣಿಕೆಯಲ್ಲಿ ಕುದುರೆ ಮೇಲೆ ಕುಳಿತವನ ಕುತ್ತಿಗೆ. ಅಷ್ಟೆಲ್ಲ ಗದ್ದಲದಲ್ಲಿಯೂ ಬೆದರದೇ ಸಾಕಿದವನ ಪ್ರಾಣ ರಕ್ಷಿಸಿದ ಕುದುರೆ. ಇದು ಲಾಂಗ್ ಶಾಟ್. ಇದರ ಮೂಲಕ ನಿರ್ದೇಶಕ ಅದ್ಬುತವಾದ ರೂಪಕವನ್ನು ಕಟ್ಟಿಕೊಡುತ್ತಿದ್ದಾನೆ. ಅದು ನಮ್ಮಲ್ಲಿ ಅನೇಕ ಭಾವಗಳನ್ನು ಚಿಮ್ಮಿಸುತ್ತದೆ.
ಅದುವರೆಗೂ ಚಲಿಸದ ಕುದುರೆ ಈಗ ತುಸು ಚಲಿಸಿದೆ. ಅದಕ್ಕೆ ಹಸಿವಾಗಿದೆ. ಕೆಳಗಿರುವ ಒಣಗಿದ ಹುಲ್ಲಿಗೆ ಬಾಯಿ ಹಾಕಿದೆ. ಕ್ಯಾಮೆರಾ ಅತ್ತ ಪೋಕಸ್ ಆಗುತ್ತದೆ. ಅದು ತುಸು ಜರಿದಂತ ಈತನ ಶರೀರವೂ ಹಿಂದಕ್ಕೆ ಜರುಗುತ್ತದೆ. ಕುತ್ತಿಗೆಯನ್ನು ನೇಣು ಬಿಗಿಯಾಗತೊಡಗುತ್ತದೆ. ಈ ಸ್ಥಿತಿಯಿಂದ ಆತನಿಗೆ ವಿಮೋಚನೆ ದೊರಕುತ್ತದೆ. ಅದೂ ಒಬ್ಬ ಒಂಟಿ ದನಗಳ್ಳನಿಂದ !
ದೊರದಲ್ಲಿ ಮತ್ತೊಂದು ಪೊಲೀಸ್ ತಂಡ. ಧಾವಿಸಿ ಬರುತ್ತಿರುವ ಅವರತ್ತ ಈತನ ಕುತೂಹಲಕರ ಕಣ್ಣುಗಳು. ಬಂಧಿಸಿ ನಗರದೊಳಗೆ ಕರೆ ತಂದಿದ್ದಾರೆ. ನೇಣಿಗೇರಿಸಲು ಅಜ್ಞೆ. ನೇಣುಗಂಭದ ವೇದಿಕೆಯಲ್ಲಿ ನಾಲ್ವರಿದ್ದಾರೆ. ಎಲ್ಲರ ಕುತ್ತಿಗೆಯಲ್ಲಿಯೂ ನೇಣು ಬಿಗಿದಿದೆ. ಪಕ್ಕದಲ್ಲಿರುವ ಮುದುಕ ರೋಧಿಸುತ್ತಿದ್ದಾನೆ. ಈ ಯುವಕ ಕೇಳುವುದು “ಇದು ಮೊದಲ ಬಾರಿಯ ಅನುಭವವೇ ? ಮುದುಕ ಅವಾಕ್ಕಾಗುತ್ತಾನೆ.
ಕ್ಯಾಮೆರಾ ಈಗ ನೇಣಿನ ವೇದಿಕೆ ಮುಂಭಾಗ ತಿರುಗುತ್ತದೆ. ಮುಂದೆ ಕುತೂಹಲಭರಿತ ಸಾರ್ವಜನಿಕರಿದ್ದಾರೆ. ಅವರಲ್ಲೊಬ್ಬಳು ಸುಂದರ ಯುವತಿ. ಯುವಕನ ದೃಷ್ಟಿ ಅತ್ತ ತಿರುಗುತ್ತದೆ. ಇಬ್ಬರ ಕಣ್ಣುಗಳು ಸಂಧಿಸುತ್ತವೆ. ಮುಗುಳ್ನಗೆಗಳ ವಿನಿಮಯ ಮಾಡಿಕೊಳ್ಳುತ್ತಾರೆ. ಇದಕ್ಕಿಂದಂತೆ ನೇಣು ವೇದಿಕೆಯ ಕೆಳಗಿನ ಹಲಗೆ ಸರಿಯುತ್ತದೆ. ಖಲ್ಲಾಸ್…
ಬಹುಶಃ ಒಂದು ಶತಮಾನಕ್ಕೂ ಹಿಂದಿನ ಕಾಲಘಟ್ಟದ ಕಥೆಗಳ ಸಂಗಮವಾಗಿರುವ “ದ ಬಲ್ಲದರ್ ಆಫ್ ಬಸ್ಟರ್ ಸ್ಕರ್ಗ್ಸ್” ಅಮೆರಿಕನ್ ಸಿನೆಮಾ. ಇದು 2018ರ ನವೆಂಬರಿನಲ್ಲಿ ಅಮೆರಿಕಾದಲ್ಲಿ ತೆರೆಕಂಡಿದೆ. ಇದರ ಒಂದು ಕಥೆ “ನಿಯರ್ ಅಲ್ಗೊಡನ್ಸ್ (Near Algodones) ಚಿತ್ರಣವಿದು. ಇಲ್ಲಿ ಹೆಚ್ಚು ಸಂಭಾಷಣೆಗಳಿಲ್ಲ. ಪ್ರತಿಯೊಂದು ಫ್ರೇಮು ಕೂಡ ಸಮರ್ಥ ಕಲಾವಿದನೊಬ್ಬನ ಚಿತ್ರಿಕೆಯಂತೆ ಭಾಸವಾಗುತ್ತದೆ.
ಮರಣದ ಅಂಚಿನಲ್ಲಿರುವಾಗಲೂ ಧೃತಿಗೆಡದ ಯುವಕ. ಆತನ ಹೃದಯದಲ್ಲಿ ಬದುಕುವ ಹೊಂಗನಸಿದೆ. ಸಾವನ್ನೂ ಹೆದುರಿಸಬಲ್ಲ ಛಾತಿಯಿದೆ. ಭಯವೇ ಇಲ್ಲದ ಕಣ್ಣುಗಳಿಂದ ಆ ಯುವತಿಯನ್ನು ನೋಡಿ ಮುಗುಳ್ನಗುತ್ತಾನೆ. ನಿಭೀತತನ ದೃಷ್ಟಿಗೆ ಮನಸೋಲುವ ಆಕೆಯೂ ಮುಗುಳ್ಣಗೆ ಮೂಲಕ ಪ್ರತಿಸ್ಪಂದಿಸುತ್ತಾಳೆ. ಮರುಕ್ಷಣವೇ ಮೃತ್ಯು ಆತನನ್ನು ಅಪ್ಪುತ್ತದೆ. ಈ ದೃಶ್ಯ ನೋಡುಗರಲ್ಲಿ ತಲ್ಲಣಗಳನ್ನು ಮೂಡಿಸುತ್ತದೆ. ಕ್ಷಣಕಾಲ ದಿಗ್ಬ್ರಮೆ ಆವರಿಸುತ್ತದೆ.
ಧೃತಿಗೆಡದ ಯುವಕನ ಪಾತ್ರಧಾರಿ ಜೇಮ್ಸ್ ಫ್ರಾಂಕೊ ಅಭಿನಯ ವ್ಹಾವ್ ಎನಿಸುತ್ತದೆ. ಪ್ರತಿಯೊಂದು ದೃಶ್ಯವನ್ನೂ ಸಮರ್ಥವಾಗಿ ಕಟ್ಟಿಕೊಡುವ ನಿರ್ದೇಶಕರಾದ ಅವರ ಪರಿಶ್ರಮ ಅಪಾರ. ಚಿತ್ರಕಥೆಯೂ ಇವರದೇ. ಇವರ ಆಲೋಚನೆಗಳಿಗೆ ಅತ್ಯುತ್ತಮ ವರ್ಕ್ ಮೂಲಕ ಛಾಯಾಗ್ರಾಹಕ ಬರ್ನೋ ಡೆಲ್ಬೊನೆಲ್ ಅನುಭೂತಿಗಳನ್ನೇ ಸ್ಪುರಿಸುವ ದೃಷ್ಟಿ ನೀಡಿದ್ದಾನೆ. ರೊಡ್ರಿಕ್ ಜಾಯ್ನೆಸ್ ಸಂಕಲನ ಕಾರ್ಯ ಅಚ್ಚುಕಟ್ಟು. ಕರ್ಟರ್ ಬುರ್ವೆಲ್ ನೀಡಿರುವ ಸಂಗೀತ ಕಥೆಯೊಳಗೆ ಮಿಳಿತವಾಗಿದೆ.