ಸಾಮಾನ್ಯವಾಗಿ ಗೂಢಚಾರರೆಂದರೆ ರೋಮ್ಯಾಂಟಿಕ್ ಆದ ಕಲ್ಪನೆಯಿದೆ. ಐಷಾರಾಮಿ ಬದುಕು, ಸುತ್ತಲೂ ಹೆಂಗಳೆಯರು ಇತ್ಯಾದಿ. ಇಂಥ ಕಲ್ಪನೆಗಳು ಬರುವುದಕ್ಕೆ ಜೇಮ್ಸ್ ಬಾಂಡ್ ಮಾದರಿಯ ಸಿನೆಮಾಗಳು ಕಾರಣವೆನ್ನಬಹುದು. ಆದರೆ “ಬೆರೂಟ್” ಸಿನೆಮಾ ಇದಕ್ಕಿಂತ ಭಿನ್ನ ಪ್ರಪಂಚವನ್ನು ನಮ್ಮ ಮುಂದಿರುತ್ತದೆ.
ರಾಷ್ಟ್ರಗಳ ಒಳಗೆ ನಡೆಯುವ ಒಳಜಗಳಗಳು, ಭಯೋತ್ಪಾದಕರ ಗುಂಪುಗಳು, ಅವುಗಳನ್ನು ಪರಿಹರಿಸುವಲ್ಲಿ ಬಲ್ಯಾಢ್ಯ ರಾಷ್ಟ್ರಗಳ ಹಿತಾಸಕ್ತಿ, ಇದನ್ನು ವಿರೋಧಿಸುವ ರಾಷ್ಟ್ರಗಳು, ಸರ್ಕಾರಗಳು ತೆಗೆದುಕೊಳ್ಳುವ ತೀರ್ಮಾನಗಳು, ರಾಯಭಾರಿ ಕಚೇರಿಗಳ ಚಟುವಟಿಕೆಗಳು, ಇವೆಲ್ಲದರ ನಡುವೆ ಪ್ರತಿಕ್ಷಣದ ವಿದ್ಯಮಾನಗಳನ್ನು ತಮ್ಮ ಸರ್ಕಾರಗಳ ಭದ್ರತಾ ಏಜೆನ್ಸಿಗಳಿಗೆ ವರದಿ ಮಾಡಬೇಕಾದ ಗೂಢಚಾರರು, ಸಂಧಾನಕಾರರ ಬದುಕು ಹೇಗೆ ನಲುಗಿ ಹೋಗುತ್ತದೆ ಎಂಬುದನ್ನು ಬೆರೂಟ್ ಹೇಳುತ್ತದೆ.
“ಬೆರೂಟ್” ಅಮೆರಿಕನ್ ಸಿನೆಮಾ. ಇಂಗ್ಲಿಷ್ ಭಾಷೆಯಲ್ಲಿದೆ. 2018ರ ಏಪ್ರಿಲ್ ನಲ್ಲಿ ತೆರೆಕಂಡಿದೆ. ಹಾಲಿವುಡ್ಡಿನ ದೈತ್ಯ ಪ್ರೊಡಕ್ಷನ್ ಕಂಪನಿಗಳಾದ ‘ರಾಡಾರ್ಸ್ ಪಿಕ್ಚರ್ಸ್, ಶಿವ್ಹಾಸ್ ಪಿಕ್ಚರ್ಸ್ ಇದನ್ನು ನಿರ್ಮಿಸಿವೆ. ಥ್ರಿಲ್ಲರ್, ಹಾರಾರ್ ಸಿನೆಮಾಗಳ ನಿರ್ದೇಶನದಲ್ಲಿ ಖ್ಯಾತಿ ಹೊಂದಿರುವ ಬ್ರಾಡ್ ಅಂಡರ್ಸನ್ ತನ್ನ ಹಿಂದಿನ ಸಿನೆಮಾಗಳಿಗಿಂತ ವಿಭಿನ್ನವಾಗಿ ನಿರ್ದೇಶಿಸಿರುವ ಸಿನೆಮಾವಿದು. ಹಾಲಿವುಡ್ಡಿನ ಪ್ರಖ್ಯಾತ ಸಿನೆಮಾಟೋಗ್ರಾಫರ್ ಬಿಜೊಮ್ ಕಾರ್ಪೆಂಟಿಯರ್ ಇದಕ್ಕೆ ಕ್ಯಾಮೆರಾ ಹಿಡಿದ್ದಿದ್ದಾರೆ.
1980ರ ದಶಕದಲ್ಲಿ ಲೆಬನಾನ್ ದೇಶದಲ್ಲಿ ಸಿವಿಲ್ ವಾರ್ ಉತ್ತುಂಗ ಸ್ಥಿತಿಯಲ್ಲಿದ್ದ ಸಂದರ್ಭದ ಕಥೆಯಿದು. ಆದರೆ ಇದರ ಮೊಳಕೆ 1972ರಲ್ಲಿಯೇ ಇದೆ. ಮ್ಯೂನಿಚ್ ಒಲಂಪಿಕ್ಸ್ ಸಂದರ್ಭದಲ್ಲಿ ಭಯೋತ್ಪಾದನೆ ನಡೆಸಿ ಹಲವರ ಸಾವಿಗೆ ಕಾರಣರಾದವರನ್ನು ಪತ್ತೆಹಚ್ಚಲು ಅಮೆರಿಕಾದ ಸೆಂಟ್ರಲ್ ಇನ್ವೆಸ್ಟಿಗೇಶನ್ ಏಜೆನ್ಸಿ ಪ್ರಯತ್ನಿಸುತ್ತಿರುತ್ತದೆ.
ಕೃತ್ಯ ನಡೆಸಿದ ತಂಡದಲ್ಲಿ ರಮಿ ಎಂಬ ಭಯೋತ್ಪಾದಕನ ಕಿರಿಯ ಸಹೋದರ ಸುಮಾರು 13 ವರ್ಷದ ಕರೀಮ್. ಇವರಿಬ್ಬರೂ ಪಾಲೆಸ್ಟೈನಿಯರು. ಲೆಬನಾನಿನ ರಾಜಧಾನಿ ಬೆರೂಟ್ ನಲ್ಲಿ ಇರುವ ಅಮೆರಿಕಾ ದೂತವಾಸದ ಪ್ರಮುಖ ಸಂಧಾನಕಾರ ಮ್ಯಾಸನ್ ಸ್ಕೈಲ್ಸ್. ಈತ ಮೂಲತಃ ಬೆರೂಟ್ ನಿವಾಸಿಯೇ ಆದ ನಾಡಿಯಾರನ್ನು ವಿವಾಹವಾಗಿರುತ್ತಾನೆ. ತನ್ನವರು ಅನ್ನುವವರು ಯಾರೂ ಇಲ್ಲ ಎಂದು ಹೇಳಿಕೊಂಡಿದ್ದ ಕರೀಮ್ಗೆ ಇವರಿಬ್ಬರೂ ಆಶ್ರಯ ನೀಡಿರುತ್ತಾರೆ.
ಗೂಢಚಾರ ಕಾಲ್ ರಿಲೇ ಕರೀಮ್ ಬಗ್ಗೆ ಶಂಕೆ ವ್ಯಕ್ತಪಡಿಸುತ್ತಾನೆ. ಇದರ ಬಗ್ಗೆ ಮ್ಯಾಸನ್ ಸ್ಕೈಲ್ಸ್ ಕರೀಮ್ನನ್ನು ವಿಚಾರಿಸುತ್ತಾನೆ. ಈ ನಂತರ ಸ್ಕೈಲ್ಸ್ ಮನೆಯ ಮೇಲೆ ದಾಳಿಯಾಗುತ್ತದೆ. ಭಯೋತ್ಪಾದಕ ರಮಿ ತನ್ನ ಸಹೋದರ ಕರೀಮ್ ನನ್ನು ಅಲ್ಲಿಂದ ಕರೆದುಕೊಂಡು ಹೋಗುವಾಗ ಗುಂಡಿನ ಚಕಮಕಿ ನಡೆಯುತ್ತದೆ. ನಾಡಿಯಾ ಬಲಿಯಾಗುತ್ತಾರೆ. ಸ್ಕೈಲ್ ಖಿನ್ನತೆಗೊಳಗಾಗಿ, ಆ ದೇಶ, ಕೆಲಸ ಬಿಟ್ಟು ಬರುತ್ತಾನೆ.
ಇದಾದ ಹತ್ತು ವರ್ಷಗಳ ಬಳಿಕ ಗೂಢಚಾರ ಕಾಲ್ ರಿಲೇ, ಭಯೋತ್ಪಾದಕರಿಂದ ಅಪಹರಣಕ್ಕೀಡಾಗುತ್ತಾನೆ. ಆತನನ್ನು ಸುರಕ್ಷಿತವಾಗಿ ಕರೆತರಲು ಅಮೆರಿಕಾದ ಸೆಂಟ್ರಲ್ ಇನ್ವೆಸ್ಟಿಗೇಶನ್, ಸ್ಕೈಲ್ ನೆರವು ಕೇಳುತ್ತದೆ. ಇಲ್ಲಿಂದ ಬೆರೂಟ್ ಸಿನೆಮಾ ಕಥೆ ತೀವ್ರವಾಗಿ ಬೆಳವಣಿಗೆಯಾಗುತ್ತದೆ. ಈ ಕುರಿತ ವಿವರಗಳನ್ನು ನಾನು ಚರ್ಚಿಸಲು ಹೋಗುವುದಿಲ್ಲ. ಆದರೆ ಇಂಥದೊಂದು ದುರ್ಘಟನೆಯನ್ನು ಹೇಳಿರುವ ಪರಿ ಹೇಗಿದೆ, ತಾಂತ್ರಿಕ ವಿವರಗಳೇನು ಎಂಬುದರತ್ತ ನನ್ನ ಗಮನ.
ಟೊನಿ ಗಿಲ್ರಾಯ್ ಬರೆದಿರುವ ಚಿತ್ರಕಥೆ ಲೆಬನಾನ್ ಪ್ರಜೆಗಳು, ಸಿವಿಲ್ ವಾರ್, ಬಗ್ಗೆ, ಅದನ್ನು ಪರಿಹರಿಸಲು ಅಮೆರಿಕಾಕ್ಕಿದ ಆಸಕ್ತಿಗೆ ಕಾರಣವೇನು, ಈ ಸಂದರ್ಭದಲ್ಲಿ ಪಾಲೆಸ್ಟೈನ್ ಮತ್ತು ಇಸ್ರೇಲಿನ ಪಾತ್ರವೇನು ಎಂಬ ವಿವರಗಳನ್ನು ಚರ್ಚಿಸಲು ಹೋಗುವುದಿಲ್ಲ. ಇದು ಕೇವಲ ಕಾಲ್ ರಿಲೇ ಬಂಧನ, ಬಿಡುಗಡೆಯ ಯತ್ನ ಕುರಿತಂತೆಯೇ ಕೇಂದ್ರಿತವಾಗಿದೆ. ವಿಚಿತ್ರ ಎಂದರೆ ಈತನ ವಿವರಗಳನ್ನು ಕೂಡ ಸಮರ್ಥವಾಗಿ ಕಟ್ಟಿಕೊಡುವುದಿಲ್ಲ. ಸ್ಕೈಲ್ ಪಾತ್ರಕ್ಕೆ ಗಮನ ನೀಡಲಾಗಿದೆ. ಇದು ಅತೀ ಎನಿಸುವಷ್ಟರ ಮಟ್ಟಿಗೆ ಇದೆ. ಈ ಎಲ್ಲ ನಿಟ್ಟಿನಲ್ಲಿ ಚಿತ್ರಕಥೆ ಅಷ್ಟು ಉತ್ತಮ ಎನಿಸುವುದಿಲ್ಲ.
ಒಂದುಹಂತದಲ್ಲಿ ಚಿತ್ರ, ನಿರ್ದೇಶಕನ ಕೈ ಜಾರಿದೆ ಎನಿಸುತ್ತದೆ. ಆದರೆ ಮತ್ತೆ ಕಥೆಯ ಓಟ ಟ್ರಾಕಿಗೆ ಬರುತ್ತದೆ. ಪೋಷಕ ಪಾತ್ರಗಳ ಸಂಯೋಜನೆ, ಪೋಷಣೆ ದೃಷ್ಟಿಯಿಂದಲೂ ಚಿತ್ರಕಥೆ ದುರ್ಬಲ ಎನಿಸುತ್ತದೆ. ಕೆಲವೊಂದು ಸನ್ನಿವೇಶಗಳಲ್ಲಿ ಇದು ಡಾಕ್ಯುಮೆಂಟರಿ ಇರಬಹುದು ಎಂಬ ಭಾವ ಮೂಡುತ್ತದೆ. ಆದರೆ ಅದರ ಮುಂದುವರಿಕೆಗೆ ಅವಕಾಶ ನೀಡದಿರಲು ಬ್ರಾಡ್ ಅಂಡ್ರಿಸನ್ ಹೆಣಗಿರುವುದು ನಿಚ್ಚಳವಾಗಿ ಗೊತ್ತಾಗುತ್ತದೆ. ಸಂಕಲದ ದೃಷ್ಟಿಯಿಂದಲೂ ಬೆರೂಟ್ ಪರಿಣಾಮಕಾರಿಯಲ್ಲ. ಒಂದಷ್ಟು ದೃಶ್ಯಗಳಿಗೆ ನಿರ್ದಾಕ್ಷಿಣ್ಯವಾಗಿ ಕತ್ತರಿಯಾಕಬೇಕಿತ್ತು.
ಮೂರು ದಶಕಗಳ ಹಿಂದಿನ ದೃಶ್ಯಗಳು, ಉಡುಪುಗಳು, ಕೇಶಾಲಂಕಾರಗಳನ್ನು ಉತ್ತಮವಾಗಿ ಕಟ್ಟಿಕೊಡಲಾಗಿದೆ. ಇಡೀ ಸಿನೆಮಾವನ್ನು ಎತ್ತಿ ನಿಲ್ಲಿಸಿರುವುದು ಬಿಜೊಮ್ ಕಾರ್ಪೆಂಟಿರಿಯರ್ ಅವರ ಛಾಯಾಗ್ರಾಹಣ. ಪ್ರತಿಯೊಂದು ಫ್ರೇಮು, ಶಾಟ್ಸ್ ಬಹುಪರಿಣಾಮಕಾರಿ. ಬೆಳಕಿನ ಸಂಯೋಜನೆಯಂತೂ ಅತ್ಯುತ್ತಮ.
ಮ್ಯಾಸಮ್ ಸ್ಕೈಲ್ಸ್ ಪಾತ್ರಧಾರಿ ಜಾನ್ ಹ್ಯಾಮ್ ಮತ್ತು ಪಾಲೆಸ್ಟೈನ್ ಭಯೋತ್ಪಾದಕ ಕರೀಮ್ ಪಾತ್ರಧಾರಿ ಐದಿರ್ ಚೆಂದರ್ ಅಭಿನಯ ನೆನಪಿನಲ್ಲಿ ಉಳಿಯುತ್ತದೆ. ಅಮೆರಿಕನ್ ಗೂಢಚಾರ ಸಂಸ್ಥೆಯ ಕ್ಷೇತ್ರಾಧಿಕಾರಿ ರೊಸ್ಮುಂಡ್ ಪೈಕ್ ಪಾತ್ರಧಾರಿ ಸ್ಯಾಮಡಿ ಕ್ರೊಢರ್, ಬಿಗಿಮುಖ ಮಾಡಿಕೊಳ್ಳುವುದನ್ನೇ ನಟನೆ ಎಂದು ಭಾವಿಸಿರುವಂತಿದೆ.
1970 ಮತ್ತು 80ರ ದಶಕದಲ್ಲಿ ಲೆಬನಾನಿನಲ್ಲಿದ್ದ ಅಮೆರಿಕನ್ ಸಂಧಾನಕಾರ, ಗೂಢಚಾರರ ಸ್ಥಿತಿಗತಿ, ಅವರು ಎದುರಿಸಿದ ಅಪಾಯಗಳನ್ನು ಕಟ್ಟಿಕೊಡುವಲ್ಲಿ ನಿರ್ದೇಶಕ ಬ್ರಾಡ್ ಅಂಡ್ರಿಸನ್ ಬಹಳ ಕಷ್ಟದಿಂದ ಯಶಸ್ವಿಯಾಗಿದ್ದಾರೆ. ಇದು ಮತ್ತು ಬಿಜೊಮ್ ಕಾರ್ಪೆಂಟರಿಯರ್ ಕ್ಯಾಮೆರಾ ವರ್ಕ್ ದೃಷ್ಟಿಯಿಂದ ಇದು ನೋಡಬೇಕಾದ ಸಿನೆಮಾ.