Kannadaಪರಿಸರ

ಅಲೆಮಾರಿ ಕುರುಬರ ಅನನ್ಯ ಪರಿಸರ ಕಾರ್ಯ ಗೊತ್ತೆ ?

ನಾವು ಕಾರಿನ ಗ್ಲಾಸ್ ಏರಿಸಿ, ಎಸಿ ಆನ್ ಮಾಡಿ ಹೆದ್ದಾರಿಗಳಲ್ಲಿ ವೇಗವಾಗಿ ಸಾಗುವಾಗ, ಎದುರಾಗುವ ಕುರಿ-ಮೇಕೆಗಳ ಹಿಂಡನ್ನು ಕಂಡು ಕಿರಿಕಿರಿ ಮಾಡಿಕೊಳ್ಳುತ್ತೇವೆ. ಸಾಂಪ್ರದಾಯಿಕ ಉಡುಪು ಧರಿಸಿ, ಧೂಳಿನ ನಡುವೆ ಕುರಿಮೇಕೆಗಳು, ದನಕರುಗಳನ್ನು ಅಟ್ಟಿಕೊಂಡು ಹೋಗುತ್ತಿರುವ ಆ ಜನರನ್ನು ಕೇವಲ ಅಲೆಮಾರಿ ಕುರುಬರೆಂದೋ ಸುಗಮ ವಾಹನ ಸಂಚಾರಕ್ಕೆ ಅಡ್ಡಿಪಡಿಸುವವರೆಂದೋ ಭಾವಿಸುತ್ತೇವೆ.
ಕಣ್ಣಿಗೆ ಕಾಣುವ ಆ ಧೂಳಿನ ಆಚೆಗಿರುವ ಕಠಿಣ ಬದುಕಿನ ಹಿಂದೆ ಜಗತ್ತೇ ಬೆರಗಾಗುವಂತಹ ಸತ್ಯವೊಂದಿದೆ. ಇತ್ತೀಚೆಗೆ ಆಕ್ಸ್ಫರ್ಡ್ ವಿಶ್ವವಿದ್ಯಾಲಯ ಪ್ರಕಟಿಸಿರುವ ಸಂಶೋಧನಾ ವರದಿಯೊಂದು ಕಣ್ಣು ತೆರೆಸುವ ಸತ್ಯವನ್ನು ನಮ್ಮ ಮುಂದಿಟ್ಟಿದೆ. ಜಮ್ಮು ಮತ್ತು ಕಾಶ್ಮೀರದ ಹಿಮಾಲಯ ಪರ್ವತಗಳ ಕಣಿವೆಗಳಲ್ಲಿ ವಾಸಿಸುವ ಗುಜ್ಜರ್ (Gujjars), ಬಕರ್ವಾಲ್ (Bakkerwals) ಮತ್ತು ಗದ್ದಿ (Gaddis) ಸಮುದಾಯಗಳ ಅಲೆಮಾರಿ ಪಶುಪಾಲಕರು ಕೇವಲ ತಮ್ಮ ಹೊಟ್ಟೆಪಾಡಿಗಾಗಿ ಅಲೆಯುತ್ತಿಲ್ಲ; ಪರಿಸರ ಸಂರಕ್ಷಣೆಗೆ (Ecosystem Services) ಅಮೂಲ್ಯ ಕಾಣಿಕೆ ನೀಡುತ್ತಿದ್ದಾರೆ. ಇದನ್ನು ಹಣದ ರೂಪದಲ್ಲಿ ಲೆಕ್ಕ ಹಾಕಿದರೆ ಅದರ ಮೌಲ್ಯ ಒಂದು ವರ್ಷಕ್ಕೆ ಬರೋಬ್ಬರಿ 6,000 ಕೋಟಿ ರೂಪಾಯಿ

ಇದನ್ನೂ ಓದಿ:ಇವರು ನೀಡುವ ಹವಾಮಾನ ಮುನ್ಸೂಚನೆ ರಾಡಾರ್ ಗಿಂತಲೂ ನಿಖರ

ಪ್ರಕೃತಿಯ ಒಡನಾಡಿಗಳು
ಋತುಮಾನದ ಬದಲಾವಣೆಗೆ ತಕ್ಕಂತೆ, ಪ್ರಕೃತಿಯ ಲಯಕ್ಕೆ ಹೆಜ್ಜೆ ಇಡುತ್ತಾ, ತಮ್ಮ ಜಾನುವಾರುಗಳೊಂದಿಗೆ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ವಲಸೆ ಹೋಗುವ ಅಲೆಮಾರಿ ಪಶುಪಾಲಕರನ್ನು ವೈಜ್ಞಾನಿಕವಾಗಿ ‘ಟ್ರಾನ್ಸ್ಹ್ಯೂಮನ್ಸ್’ (Transhumants) ಎನ್ನಲಾಗುತ್ತದೆ. ಕಾಶ್ಮೀರದ ಸುಮಾರು 6 ಲಕ್ಷ ಅಲೆಮಾರಿಗಳಲ್ಲಿ, ಪ್ರತಿ ವರ್ಷ 5 ಲಕ್ಷಕ್ಕೂ ಹೆಚ್ಚು ಜನ ಹೆಣ್ಣು-ಮಕ್ಕಳು, ವೃದ್ಧರು, ಹಸುಗೂಸುಗಳ ಸಮೇತ ಈ ಸಾಹಸಮಯ ಜೈವಿಕ ವಲಸೆ ಕೈಗೊಳ್ಳುತ್ತಾರೆ.
ಬೇಸಿಗೆಯ ಬಿಸಿ ಕಾವಿಗೆ ಜಮ್ಮುವಿನ ಬಯಲು ಸೀಮೆ ಒಣಗುತ್ತಿದ್ದಂತೆ, ಇವರು ತಮ್ಮ ಪ್ರಾಣಿಗಳನ್ನು ಉಳಿಸಿಕೊಳ್ಳಲು ಶಿವಾಲಿಕ್, ಪೀರ್ ಪಂಜಾಲ್ ಮತ್ತು ತ್ರಿಕೂಟ ಬೆಟ್ಟಗಳ ತಂಪಾದ ಮಡಿಲಿನತ್ತ ಹೆಜ್ಜೆ ಹಾಕುತ್ತಾರೆ. ಸುಮಾರು 600 ಕಿಲೋಮೀಟರ್ಗಳ ಈ ಕಠಿಣ, ಪ್ರಾಣ ಪಣಕ್ಕಿಡುವ ‘ಲಂಬ ವಲಸೆ’ (Vertical Migration) ಮುಗಿಸಲು ಇವರಿಗೆ ಕನಿಷ್ಠ 30 ರಿಂದ 45 ದಿನಗಳು ಬೇಕಾಗುತ್ತವೆ. ಮತ್ತೆ ಚಳಿಗಾಲದ ಮಂಜು ಮುಸುಕುವಾಗ ಬಯಲು ಸೀಮೆಗೆ ಮರಳುತ್ತಾರೆ. ಶತಮಾನಗಳಿಂದಲೂ ಈ ಸಮುದಾಯಗಳು ಪ್ರಕೃತಿ ಮತ್ತು ಮಾನವ ಸಮುದಾಯಗಳ ನಡುವೆ ಜೀವಂತ ಕೊಂಡಿಯಾಗಿ ಉಸಿರಾಡುತ್ತಿವೆ.
ಸದ್ದುಗದ್ದಲವಿಲ್ಲದೇ ನಡೆಯುವ ಕಾರ್ಯ
ಆಕ್ಸ್ಫರ್ಡ್ ವಿಶ್ವವಿದ್ಯಾಲಯದ ವರದಿಯು ಈ ಅಲೆಮಾರಿಗಳು ಪ್ರಕೃತಿಗೆ ನೀಡುವ ಕೊಡುಗೆಯನ್ನು ಕೇವಲ ಭಾವನಾತ್ಮಕವಾಗಿ ಅಷ್ಟೇ ಅಲ್ಲದೆ, ವೈಜ್ಞಾನಿಕವಾಗಿ ಲೆಕ್ಕಹಾಕಿದೆ. ಆಧುನಿಕ ಯಂತ್ರಗಳೂ ಮಾಡಲಾಗದ ಮೂರು ಮಹತ್ತರ ಕೆಲಸಗಳನ್ನು ಇವರು ಜಗತ್ತಿಗೆ ಮಾಡುತ್ತಿದ್ದಾರೆ:
• ಕಾಳ್ಗಿಚ್ಚು ತಡೆಗೆ ಮುಂಜಾಗ್ರತೆ: ಈ ಅಲೆಮಾರಿಗಳು ಕಾಡಿನಲ್ಲಿ ಸಂಚರಿಸುವಾಗ ನೆಲದ ತುಂಬೆಲ್ಲಾ ಬಿದ್ದಿರುವ, ಕಾಳ್ಗಿಚ್ಚಿಗೆ ಪ್ರಮುಖ ಕಾರಣವಾಗುವ ಒಣಗಿದ ಪೈನ್ ಎಲೆಗಳು (Pine Needles) ಮತ್ತು ಒಣ ಕಡ್ಡಿಗಳನ್ನು ತಮ್ಮ ಉರುವಲಿಗಾಗಿ ಆಯ್ದು ಇಡೀ ಕಾಡನ್ನು ಸ್ವಚ್ಛಗೊಳಿಸುತ್ತಾರೆ. ಇವರ ಈ ನಿರಂತರ ನಡಿಗೆಯಿಂದಾಗಿ ಪ್ರತಿವರ್ಷ ಸುಮಾರು 7,000 ದಿಂದ 12,000 ಹೆಕ್ಟೇರ್ ಅರಣ್ಯ ಪ್ರದೇಶವು ಭೀಕರ ಕಾಳ್ಗಿಚ್ಚಿಗೆ ಬೂದಿಯಾಗುವುದು ತಪ್ಪುತ್ತಿದೆ.
• ಹುಲ್ಲುಗಾವಲುಗಳಿಗೆ ಮರುಜೀವ: ಇವರು ಒಂದೇ ಕಡೆ ಜಾನುವಾರುಗಳನ್ನು ಮೇಯಿಸಿ ಭೂಮಿಯನ್ನು ಬಂಜರು ಮಾಡುವುದಿಲ್ಲ. ಇವರದು ಕಾಲೋಚಿತ ವಲಸೆ (Rotational Grazing). ಇವರು ಜಾಗ ಬದಲಾಯಿಸುತ್ತಿದ್ದಂತೆ ಹಳೆಯ ಭೂಮಿಗೆ ವಿಶ್ರಾಂತಿ ಸಿಗುತ್ತದೆ, ಹುಲ್ಲುಗಾವಲುಗಳು ತಾವಾಗಿಯೇ ಮರುಜನ್ಮ ಪಡೆಯುತ್ತವೆ.
• ಭೂಕುಸಿತಕ್ಕೆ ನೈಸರ್ಗಿಕ ತಡೆಗೋಡೆ: ಇವರ ಸಾವಿರಾರು ಜಾನುವಾರುಗಳು ಬೆಟ್ಟದ ಕಡಿದಾದ ಹಾದಿಯಲ್ಲಿ ನಡೆಯುವಾಗ ಮಣ್ಣು ಹದವಾಗಿ ಮೆತ್ತಗಾಗುತ್ತದೆ. ಇದು ಮಳೆನೀರನ್ನು ಭೂಮಿಯ ಆಳಕ್ಕೆ ಇಂಗಿಸಿಕೊಳ್ಳುವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಅಷ್ಟೇ ಅಲ್ಲ, ಜಾನುವಾರುಗಳ ಸಗಣಿ – ಗಂಜಲ ಭೂಮಿಗೆ ನೈಸರ್ಗಿಕ ಅಮೃತ ಗೊಬ್ಬರವಾಗುತ್ತದೆ. ಅವುಗಳ ನಡಿಗೆಯಲ್ಲೇ ವಿವಿಧ ಅಪರೂಪದ ಸಸ್ಯಗಳ ಬೀಜ ಪ್ರಸರಣವಾಗುತ್ತದೆ. ಹಿಮಾಲಯದಲ್ಲಿ ಇಂದು ಕಾಂಕ್ರೀಟ್ ರಸ್ತೆಗಳಿಂದ ಹೆಚ್ಚಾಗುತ್ತಿರುವ ಭೂಕುಸಿತವನ್ನು (Landslides) ಈ ಅಲೆಮಾರಿಗಳ ಹೆಜ್ಜೆಗಳು ನೈಸರ್ಗಿಕವಾಗಿ ತಡೆಯುತ್ತಿವೆ!
ಈ ಮೂರು ಸೇವೆಗಳ ಮೌಲ್ಯವೇ ಸುಮಾರು 5,880 ಕೋಟಿ ರೂಪಾಯಿಗಳು. ಇದಲ್ಲದೆ ಜಾಗತಿಕ ತಾಪಮಾನ ತಗ್ಗಿಸುವ ‘ಕಾರ್ಬನ್ ಸಿಂಕ್’ ಪ್ರಕ್ರಿಯೆ, ಜೀವವೈವಿಧ್ಯದ ರಕ್ಷಣೆ ಮತ್ತು ಆಧುನಿಕತೆಯ ಅಬ್ಬರದಲ್ಲಿ ನಾಶವಾಗುತ್ತಿರುವ ಬುಡಕಟ್ಟು ಭಾಷೆ ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ಇವರು ತಮ್ಮ ಎದೆಯೊಳಗೆ ಇಟ್ಟುಕೊಂಡು ಕಾಪಾಡುತ್ತಿದ್ದಾರೆ.
ಹಣೆಪಟ್ಟಿ ಕಟ್ಟಿದ ಇತಿಹಾಸ ಮತ್ತು ಇಂದಿನ ಕರಾಳ ವಾಸ್ತವ
ದುರಂತವೆಂದರೆ, ಇಷ್ಟೆಲ್ಲಾ ಉಪಕಾರ ಮಾಡುವ ಇವರನ್ನು ಇತಿಹಾಸ ಮತ್ತು ವ್ಯವಸ್ಥೆ ಕ್ರೂರಿಯಾಗಿ ನೋಡಿದೆ. ಬ್ರಿಟಿಷರ ಆಡಳಿತಾವಧಿಯಲ್ಲಿ ಜಾರಿಗೆ ಬಂದ 1865 ಮತ್ತು 1878 ರ ‘ಭಾರತೀಯ ಅರಣ್ಯ ಕಾಯ್ದೆ’ಗಳು ಅರಣ್ಯವನ್ನು ಕೇವಲ ಸರ್ಕಾರದ ಆದಾಯದ ಆಸ್ತಿಯಾಗಿ ನೋಡಿದವು. ಶತಮಾನಗಳಿಂದ ಕಾಡನ್ನೇ ತಾಯಿಯಂತೆ ನಂಬಿ ಬದುಕಿದ್ದ ಈ ಅಲೆಮಾರಿಗಳ ಮುಕ್ತ ಸಂಚಾರವನ್ನು ಬ್ರಿಟಿಷರು ‘ಅಪರಾಧ’ (Criminalised) ಎಂದು ಮುದ್ರೆ ಒತ್ತಿದರು. ಸ್ವಾತಂತ್ರ್ಯದ ನಂತರವೂ ಪರಿಸರ ರಕ್ಷಣೆಯ ಹುಸಿ ಸುಖದ ಸುಪ್ಪತ್ತಿಗೆಯಲ್ಲಿದ್ದ ವ್ಯವಸ್ಥೆ, 1972 ರ ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಹೆಸರಿನಲ್ಲಿ ಇವರನ್ನು ಕಾಡಿನಿಂದ ಹೊರದಬ್ಬುವ ಕಟುಕತನ ತೋರಿತು.
ಅಂತಿಮವಾಗಿ 2006 ರ ‘ಅರಣ್ಯ ಹಕ್ಕುಗಳ ಕಾಯ್ದೆ’ (FRA) ಇತಿಹಾಸದ ಈ ಮಹಾ ಅನ್ಯಾಯವನ್ನು ಒಪ್ಪಿಕೊಂಡು ಇವರಿಗೆ ಕೆಲವು ಹಕ್ಕುಗಳನ್ನು ನೀಡಿತು. ಆದರೆ ಕಾಶ್ಮೀರದ ಈ ಜನರಿಗೆ ಆ ಹಕ್ಕು ಸಿಗಲು 2019 ರವರೆಗೆ ಕಾಯಬೇಕಾಯಿತು! ಆದಾಗ್ಯೂ, ಇಂದಿಗೂ ಅವರು ವಲಸೆ ಹೋಗುವ ಕಣಿವೆ ಹಾದಿಗಳಲ್ಲಿ ಅರಣ್ಯ ಅಧಿಕಾರಿಗಳ ಕಿರುಕುಳ, ಹಕ್ಕುಗಳ ಮಂಜೂರಾತಿಯಲ್ಲಿ ಕಾಗದ ಪತ್ರಗಳ ರಾಜಕೀಯ ಮತ್ತು ಪಾರದರ್ಶಕತೆಯ ಕೊರತೆಯನ್ನು ಎದುರಿಸುತ್ತಾ ಕಣ್ಣೀರು ಹಾಕುತ್ತಲೇ ಇದ್ದಾರೆ.
ಹೆದ್ದಾರಿಯ ಧೂಳು, ಹಸಿವು ಮತ್ತು ಹೆಪ್ಪುಗಟ್ಟುವ ಸವಾಲುಗಳು
ಸ್ಥಿರವಾಗಿ ಒಂದೆಡೆ ಬದುಕುವ ನಮಗೆ ಸಿಗುವ ರೇಷನ್, ಆಧಾರ್, ಆಸ್ಪತ್ರೆ, ಶಾಲೆ ಯಾವುದೂ ಈ ನಿರಂತರ ಚಲನೆಯಲ್ಲಿರುವ ಈ ಅಲೆಮಾರಿ ಜೀವಗಳಿಗೆ ಸಿಗುವುದಿಲ್ಲ. ವಲಸೆಯ ಅವಧಿಯಲ್ಲಿ ಗರ್ಭಿಣಿಯರಿಗೆ ಹೆರಿಗೆಯ ಸೂಕ್ತ ಆರೋಗ್ಯ ಸೇವೆ ಸಿಗುವುದಿಲ್ಲ, ಕುಡಿಯುವ ಶುದ್ಧ ನೀರಿಲ್ಲ, ಕಾಯಿಲೆ ಬಿದ್ದರೆ ಜಾನುವಾರುಗಳಿಗೆ ಪಶುವೈದ್ಯರಿಲ್ಲ.
ಈ ಕತ್ತಲ ನಡುವೆ ಜಮ್ಮು-ಕಾಶ್ಮೀರ ಸರ್ಕಾರ ಆರಂಭಿಸಿರುವ ‘ಮೊಬೈಲ್ ಶಾಲೆಗಳು’ (ಸಂಚಾರಿ ಶಿಕ್ಷಣ ಕೇಂದ್ರಗಳು) ಆಶಾದಾಯಕ ಆಶಾಕಿರಣವಾಗಿ ಮೂಡಿಬಂದಿವೆ. ಸದ್ಯ ಬೆಟ್ಟದ ಮೇಲಿನ ಇವರ ತಾತ್ಕಾಲಿಕ ಬಿಡಾರಗಳಲ್ಲಿ (Dhoks) ಸುಮಾರು 33,000 ಮಕ್ಕಳು ನಕ್ಷತ್ರಗಳ ಬೆಳಕಿನಲ್ಲಿ ಅಕ್ಷರ ಕಲಿಯುತ್ತಿದ್ದಾರೆ.
ಇವರು ಸಂರಕ್ಷಕರು!
ವಿಶ್ವಸಂಸ್ಥೆಯು ಈ ವರ್ಷವನ್ನು (2026) “ಅಂತರರಾಷ್ಟ್ರೀಯ ಹುಲ್ಲುಗಾವಲುಗಳು ಮತ್ತು ಪಶುಪಾಲಕರ ವರ್ಷ” (International Year for Rangelands and Pastoralists) ಎಂದು ಘೋಷಿಸಿದೆ. ಈ ಸಂದರ್ಭದಲ್ಲಾದರೂ ನಾವು ನಮ್ಮ ದೃಷ್ಟಿಕೋನವನ್ನು ಬದಲಾಯಿಸಿಕೊಳ್ಳಬೇಕಿದೆ. ಕಾಶ್ಮೀರದ ಈ ಸಮುದಾಯಗಳ ಕೊಡುಗೆಯನ್ನು ಕೇವಲ ಸರ್ಕಾರದ ‘ಕಲ್ಯಾಣ ಯೋಜನೆಗಳ’ ಫಲಾನುಭವಿಗಳಾಗಿ ನೋಡದೆ, ಈ ದೇಶದ ‘ಪರಿಸರದ ಅಪ್ರತಿಮ ರಕ್ಷಕರು’ ಎಂದು ಗೌರವಿಸಬೇಕಿದೆ.
ಜಾಗತಿಕವಾಗಿ ಚಾಲ್ತಿಯಲ್ಲಿರುವ ‘ಪರಿಸರ ಸೇವೆಗಳಿಗೆ ಪಾವತಿ’ (Payment for Ecosystem Services – PES) ಮಾದರಿಯನ್ನು ಭಾರತದಲ್ಲೂ ಯುದ್ಧೋಪಾದಿಯಲ್ಲಿ ಅಳವಡಿಸಿಕೊಳ್ಳಬೇಕು. ಇವರು ಪ್ರಕೃತಿಗೆ ಉಚಿತವಾಗಿ ನೀಡುತ್ತಿರುವ 6,000 ಕೋಟಿಯ ಸೇವೆಗೆ ಪ್ರತಿಯಾಗಿ ಸರ್ಕಾರ ಇವರಿಗೆ ನೇರ ಆರ್ಥಿಕ ನೆರವು, ಮೊಬೈಲ್ ಹೆಲ್ತ್ ಕಾರ್ಡ್ ಮತ್ತು ಜಾನುವಾರು ವಿಮೆ ಸೌಲಭ್ಯಗಳನ್ನು ಹಕ್ಕಿನ ರೂಪದಲ್ಲಿ ನೀಡಬೇಕು.
ಮುಂದಿನ ಬಾರಿ ಹೆದ್ದಾರಿಯಲ್ಲಿ ಇವರ ಕುರಿ ಹಿಂಡು ಎದುರಾದಾಗ ಹಾರ್ನ್ ಮಾಡಿ ಕಿರಿಕಿರಿ ಮಾಡಿಕೊಳ್ಳಬೇಡಿ. ಕಿಟಕಿ ಗ್ಲಾಸ್ ಇಳಿಸಿ ಗೌರವದಿಂದ ಕೈಮುಗಿಯಿರಿ. ಏಕೆಂದರೆ, ಎಸಿ ರೂಮಿನಲ್ಲಿ ಕುಳಿತು ಜಾಗತಿಕ ತಾಪಮಾನದ ಬಗ್ಗೆ ಭಾಷಣ ಬಿಗಿಯುವ ನಮಗಿಂತ, ಹಿಮಾಲಯದ ಹಿಮದ ನಡುವೆ ಬರಿಗಾಲಿನಲ್ಲಿ ನಡೆದು ಭೂಮಿಯನ್ನು ತಂಪಾಗಿಸುತ್ತಿರುವ ಆ ಅಲೆಮಾರಿಗಳೇ ಈ ದೇಶದ ನಿಜವಾದ ಹೀರೋಗಳು, ಹೀರೋಯಿನ್ ಗಳು !!

ಆಧಾರ

Leave a Reply

Your email address will not be published. Required fields are marked *

error: Content is protected !!