ಮಧುಮೇಹಿಗಳು ಮಾವಿನ ಹಣ್ಣು ತಿನ್ನಬಹುದೇ?
ಬೇಸಿಗೆ ಬಂತೆಂದರೆ ಸಾಕು, ಮಾರುಕಟ್ಟೆಯಲ್ಲಿ ತರಹೇವಾರಿ ಮಾವಿನ ಹಣ್ಣುಗಳ ಸುವಾಸನೆ ಎಲ್ಲರನ್ನೂ ಕೈಬೀಸಿ ಕರೆಯುತ್ತದೆ. ಮಾವಿನ ಹಣ್ಣು ಕೇವಲ ಒಂದು ಹಣ್ಣಲ್ಲ, ಅದು ನಮ್ಮ ಬಾಲ್ಯದ ನೆನಪು ಹಾಗೂ ಸಂಭ್ರಮ. ಆದರೆ, ಮಧುಮೇಹ (ಡಯಾಬಿಟಿಸ್) ಇರುವವರಿಗೆ ಮಾತ್ರ ಮಾವಿನ ಹಣ್ಣು ಕಂಡರೆ ಒಂದು ಕಡೆ ಆಸೆ, ಇನ್ನೊಂದು ಕಡೆ ರಕ್ತದಲ್ಲಿನ ಸಕ್ಕರೆ ಪ್ರಮಾಣ (Blood Sugar) ಹೆಚ್ಚಾಗಬಹುದು ಎಂಬ ಭಯ.
“ಮಧುಮೇಹಿಗಳು ಮಾವಿನ ಹಣ್ಣನ್ನು ಮುಟ್ಟಲೇಬಾರದು” ಎಂಬುದು ಸಮಾಜದಲ್ಲಿರುವ ಗ್ರಹಿಕೆ. ಇತ್ತೀಚಿನ ವೈದ್ಯಕೀಯ ಸಂಶೋಧನೆಗಳು ಮತ್ತು ಹಿರಿಯ ಮಧುಮೇಹ ತಜ್ಞರ ಪ್ರಕಾರ, ಮಧುಮೇಹಿಗಳು ಕೂಡ ಮಾವಿನ ಹಣ್ಣನ್ನು ತಿನ್ನಬಹುದು. ಆದರೆ ಅದಕ್ಕೊಂದು ಶಿಸ್ತು ಮತ್ತು ನಿಯಮವಿದೆ.
ಸಿಹಿಯಾಗಿದ್ದರೂ ಮಾವಿನ ಹಣ್ಣು ಮಧುಮೇಹಿಗಳಿಗೆ ಹಾನಿಕಾರಕವಲ್ಲ ಏಕೆ?
ಮಾವಿನ ಹಣ್ಣು ಸಿಹಿಯಾಗಿರುವುದರಿಂದ ಅದು ರಕ್ತದ ಸಕ್ಕರೆಯನ್ನು ತಕ್ಷಣವೇ ಹೆಚ್ಚಿಸುತ್ತದೆ ಎಂದು ಅನೇಕರು ಭಾವಿಸುತ್ತಾರೆ. ಆದರೆ ಆಹಾರ ವಿಜ್ಞಾನವೇ ಬೇರೆ. ಮಾವಿನ ಹಣ್ಣಿನಲ್ಲಿ ಕೇವಲ ನೈಸರ್ಗಿಕ ಸಕ್ಕರೆ (Fructose) ಮಾತ್ರವಲ್ಲದೆ, ಸಮೃದ್ಧವಾದ ನಾರಿನಂಶ (Fibre), ಆಂಟಿಆಕ್ಸಿಡೆಂಟ್ಗಳು, ವಿಟಮಿನ್ ಎ, ವಿಟಮಿನ್ ಸಿ ಮತ್ತು ಪಾಲಿಫೆನಾಲ್ಸ್ಗಳಂತಹ ಸಸ್ಯಜನ್ಯ ಸಂಯುಕ್ತಗಳಿವೆ.
ಇದರಲ್ಲಿರುವ ನಾರಿನಂಶವು ಜೀರ್ಣಕ್ರಿಯೆಯನ್ನು ನಿಧಾನಗೊಳಿಸುತ್ತದೆ. ಇದರಿಂದಾಗಿ ಹಣ್ಣಿನಲ್ಲಿರುವ ಸಕ್ಕರೆಯು ರಕ್ತಕ್ಕೆ ತಕ್ಷಣವೇ ಸೇರದೆ, ನಿಧಾನವಾಗಿ ಬಿಡುಗಡೆಯಾಗುತ್ತದೆ. ಮಾವಿನ ಹಣ್ಣಿನ ಗ್ಲೈಸೆಮಿಕ್ ಇಂಡೆಕ್ಸ್ (GI) 51 ರಿಂದ 56 ರಷ್ಟಿದ್ದು, ಇದನ್ನು ‘ಮಧ್ಯಮ‘ (Medium GI) ಶ್ರೇಣಿಗೆ ಸೇರಿಸಲಾಗಿದೆ. ಆದ್ದರಿಂದ, ಇದನ್ನು ಮಿತವಾಗಿ ಸೇವಿಸಿದರೆ ಯಾವುದೇ ತೊಂದರೆಯಿಲ್ಲ.
ಮಾವಿನ ಹಣ್ಣು ತಿನ್ನುವಾಗ ಮಧುಮೇಹಿಗಳು ಪಾಲಿಸಬೇಕಾದ 4 ಪ್ರಮುಖ ನಿಯಮಗಳು
ಮಾವಿನ ಹಣ್ಣನ್ನು ಹೇಗೆ, ಯಾವಾಗ ಮತ್ತು ಎಷ್ಟು ಪ್ರಮಾಣದಲ್ಲಿ ತಿನ್ನಬೇಕು ಎಂಬುದು ಮುಖ್ಯವಾಗುತ್ತದೆ. ತಜ್ಞರು ಸೂಚಿಸುವ ನಿಯಮಗಳು ಇಲ್ಲಿವೆ:
1. ಪ್ರಮಾಣವೇ ಪ್ರಧಾನ (Portion Control)
ಮಧುಮೇಹ ನಿರ್ವಹಣೆಯಲ್ಲಿ ಅತ್ಯಂತ ಮುಖ್ಯವಾದುದು ನಿಯಂತ್ರಣ. ಒಂದೇ ಬಾರಿಗೆ ಎರಡೂ ಮೂರು ಹಣ್ಣುಗಳನ್ನು ತಿನ್ನುವ ಬದಲು, ದಿನಕ್ಕೆ ಅರ್ಧ ಅಥವಾ ಒಂದು ಕಪ್ (ಸುಮಾರು 80-100 ಗ್ರಾಮ್) ಮಾವಿನ ಹಣ್ಣಿನ ತುಂಡುಗಳನ್ನು ಮಾತ್ರ ಸೇವಿಸಿ. ಇದು ನಿಮ್ಮ ದೇಹಕ್ಕೆ ಅಗತ್ಯವಾದ ಕಾರ್ಬೋಹೈಡ್ರೇಟ್ಗಳನ್ನು ಸಮತೋಲನದಲ್ಲಿಡಲು ಸಹಾಯ ಮಾಡುತ್ತದೆ.
2. ಪ್ರೋಟೀನ್ ಅಥವಾ ಆರೋಗ್ಯಕರ ಕೊಬ್ಬಿನೊಂದಿಗೆ ಸೇವಿಸಿ (Food Pairing)
ಮಾವಿನ ಹಣ್ಣನ್ನಷ್ಟೇ ತಿನ್ನುವ ಬದಲು, ಅದರೊಂದಿಗೆ ಸ್ವಲ್ಪ ಪ್ರೋಟೀನ್ ಅಥವಾ ಆರೋಗ್ಯಕರ ಕೊಬ್ಬು ಇರುವ ಆಹಾರಗಳನ್ನು ಸೇರಿಸಿ ತಿನ್ನಿ. ಉದಾಹರಣೆಗೆ ಮಾವಿನ ತುಂಡುಗಳ ಜೊತೆ 4-5 ಬಾದಾಮಿ ಅಥವಾ ಆಕ್ರೋಟ್ (Walnuts) ತಿನ್ನುವುದು ಅಥವಾ ಕುಂಬಳಕಾಯಿ ಬೀಜಗಳೊಂದಿಗೆ ಸೇವಿಸುವುದು. ಗಟ್ಟಿ ಮೊಸರು (Greek Yogurt) ಅಥವಾ ಪನೀರ್ ಜೊತೆಗೆ ತಿನ್ನುವುದು. ಇದು ರಕ್ತದಲ್ಲಿ ಸಕ್ಕರೆಯ ಮಟ್ಟ ದಿಢೀರನೆ ಏರದಂತೆ ತಡೆಯುತ್ತದೆ (Glucose Spike). ಊಟ ಮಾಡುವಾಗ ಉದಾಹರಣೆ ರಾಗಿಮುದ್ದೆ ಸೇವಿಸುವಾಗಲೂ ಮಾವಿನಹಣ್ಣು ತಿನ್ನಬಹುದು.
3. ಸರಿಯಾದ ಸಮಯದ ಆಯ್ಕೆ (Timing is Key)
ಮಾವಿನ ಹಣ್ಣನ್ನು ತಿನ್ನುವ ಸಮಯ ಕೂಡ ಮುಖ್ಯ. ಖಾಲಿ ಹೊಟ್ಟೆಯಲ್ಲಿ ತಿನ್ನಬೇಡಿ. ಬೆಳಿಗ್ಗೆ ಎದ್ದ ತಕ್ಷಣ ಅಥವಾ ಮಧ್ಯಾಹ್ನ ತೀವ್ರ ಹಸಿವಿರುವಾಗ ಖಾಲಿ ಹೊಟ್ಟೆಯಲ್ಲಿ ಮಾವಿನ ಹಣ್ಣು ತಿಂದರೆ ಸಕ್ಕರೆ ಮಟ್ಟ ವೇಗವಾಗಿ ಹೆಚ್ಚುತ್ತದೆ. ರಾತ್ರಿ ವೇಳೆ ಬೇಡ. ರಾತ್ರಿ ದೇಹದ ಚಯಾಪಚಯ ಕ್ರಿಯೆ (Metabolism) ಮತ್ತು ಇನ್ಸುಲಿನ್ ಸೂಕ್ಷ್ಮತೆ ಕಡಿಮೆ ಇರುತ್ತದೆ. ಹಾಗಾಗಿ ರಾತ್ರಿ ಊಟದ ನಂತರ ಅಥವಾ ಮಲಗುವ ಮುನ್ನ ಇದನ್ನು ತಿನ್ನಬೇಡಿ.
ಉತ್ತಮ ಸಮಯ ಎಂದರೆ ಬೆಳಗಿನ ಉಪಾಹಾರ ಮತ್ತು ಮಧ್ಯಾಹ್ನದ ಊಟದ ನಡುವಿನ ಸಮಯದಲ್ಲಿ (Mid-morning snack) ಅಥವಾ ಸಂಜೆಯ ಲಘು ಆಹಾರದ ಸಮಯದಲ್ಲಿ ತಿನ್ನುವುದು ಅತ್ಯುತ್ತಮ.
4. ಜ್ಯೂಸ್, ಮಿಲ್ಕ್ಶೇಕ್ ರೂಪದಲ್ಲಿ ಬೇಡವೇ ಬೇಡ
ಮಾವಿನ ಹಣ್ಣನ್ನು ಯಾವಾಗಲೂ ಕತ್ತರಿಸಿ ತುಂಡುಗಳ ರೂಪದಲ್ಲೇ ತಿನ್ನಬೇಕು. ಇದನ್ನು ಜ್ಯೂಸ್, ಮಿಲ್ಕ್ಶೇಕ್, ಮಾವಿನ ಹಣ್ಣಿನ ರಸ (ಸೀಕರಣೆ) ಅಥವಾ ಐಸ್ಕ್ರೀಮ್ ರೂಪದಲ್ಲಿ ಸೇವಿಸಿದಾಗ ಅದರಲ್ಲಿರುವ ನಾರಿನಂಶ (Fibre) ನಾಶವಾಗುತ್ತದೆ. ಅಲ್ಲದೆ, ಜ್ಯೂಸ್ ಮಾಡಲು ಹೆಚ್ಚಿನ ಪ್ರಮಾಣದ ಹಣ್ಣುಗಳನ್ನು ಬಳಸುವುದರಿಂದ ದೇಹಕ್ಕೆ ಅತಿಯಾದ ಸಕ್ಕರೆ ಮತ್ತು ಕ್ಯಾಲೊರಿಗಳು ಸೇರುತ್ತವೆ.
ಜೀವನಶೈಲಿಯೂ ಮುಖ್ಯ. ಕೇವಲ ಮಾವಿನ ಹಣ್ಣನ್ನು ಮಾತ್ರ ದೂಷಿಸುವುದರಿಂದ ಪ್ರಯೋಜನವಿಲ್ಲ. ರಕ್ತದಲ್ಲಿನ ಸಕ್ಕರೆ ಮಟ್ಟವು ನಮ್ಮ ಜೀವನಶೈಲಿಯ ಮೇಲೆ ಆಧಾರಿತವಾಗಿರುತ್ತದೆ.
ಊಟದ ನಂತರದ ನಡಿಗೆಯೂ ಮುಖ್ಯ. ಮಾವಿನ ಹಣ್ಣು ತಿಂದ ನಂತರ ಕನಿಷ್ಠ 15 ರಿಂದ 20 ನಿಮಿಷಗಳ ಕಾಲ ಲಘು ನಡಿಗೆ (Short Walk) ಮಾಡಿ. ಇದು ದೇಹವು ಗ್ಲುಕೋಸ್ ಅನ್ನು ಶಕ್ತಿಯಾಗಿ ಬಳಸಿಕೊಳ್ಳಲು ಸಹಾಯ ಮಾಡುತ್ತದೆ.
ಇತರ ಕಾರ್ಬೋಹೈಡ್ರೇಟ್ಗಳ ಕಡಿತ ಮಾಡುವುದು ಸಹ ಅಗತ್ಯ. ನೀವು ಮಾವಿನ ಹಣ್ಣು ತಿನ್ನುವ ದಿನ, ನಿಮ್ಮ ಪ್ರಧಾನ ಊಟದಲ್ಲಿರುವ ಅನ್ನ ಅಥವಾ ಚಪಾತಿಯ ಪ್ರಮಾಣವನ್ನು ಸಾಧ್ಯವಾದಷ್ಟೂ ಕಡಿಮೆ ಮಾಡಿ. ಇದರಿಂದ ದಿನದ ಒಟ್ಟು ಕಾರ್ಬೋಹೈಡ್ರೇಟ್ ಸಮತೋಲನದಲ್ಲಿರುತ್ತದೆ.
ಗ್ಲುಕೋಸ್ ಮಾನಿಟರಿಂಗ್ ಕೂಡ ಅಗತ್ಯ. ಪ್ರತಿಯೊಬ್ಬರ ದೇಹದ ಪ್ರಕೃತಿ ಬೇರೆ ಬೇರೆ ಇರುತ್ತದೆ. ಮಾವಿನ ಹಣ್ಣು ತಿಂದ ಎರಡು ಗಂಟೆಗಳ ನಂತರ ನಿಮ್ಮ ಗ್ಲುಕೋ ಮೀಟರ್ ಮೂಲಕ ಸಕ್ಕರೆ ಮಟ್ಟವನ್ನು ಪರೀಕ್ಷಿಸಿ. ಇದರಿಂದ ನಿಮ್ಮ ದೇಹಕ್ಕೆ ಮಾವಿನ ಹಣ್ಣು ಎಷ್ಟು ಒಗ್ಗುತ್ತಿದೆ ಎಂಬುದು ತಿಳಿಯುತ್ತದೆ.
ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟ ಈಗಾಗಲೇ ತುಂಬಾ ಹೆಚ್ಚಾಗಿದ್ದರೆ (Uncontrolled Diabetes), ಮಾವಿನ ಹಣ್ಣು ತಿನ್ನುವ ಮುನ್ನ ನಿಮ್ಮ ವೈದ್ಯರ ಅಥವಾ ಆಹಾರ ತಜ್ಞರ (Dietitian) ಸಲಹೆ ಪಡೆಯುವುದು ಕಡ್ಡಾಯ.
