Nomadic shepherds

ಬಳ್ಳಾರಿಯಲ್ಲಿ ನಾನು ನ್ಯೂಸ್ ಚಾನೆಲ್ಗೆ ಕೆಲಸ ಮಾಡುತ್ತಿದ್ದಾಗ “ಅಲೆಮಾರಿ ಕುರಿಗಾಹಿಗಳು” ಬಗ್ಗೆ ಒಂದಷ್ಟು ವಿಡಿಯೋ ಮಾಡಿದ್ದೆ. ಬಹುನಿಧಾನ, ನಿಧಾನವಾಗಿ ಪುಸ್ತಕದಂತೆ ತೆರೆದುಕೊಳ್ಳುವ ಇವರ ಮಾತುಗಳೇ ಜೀವವಿಜ್ಞಾನಿಗಳು ಬರೆದ ಪುಸ್ತಕ ಓದಿದಂತೆ. ಹವಾಮಾನದ ಬಗ್ಗೆ ಅತ್ಯಾಧುನಿಕ ರಾಡಾರ್ಗಳು ನೀಡುವ ಮಾಹಿತಿ ತಪ್ಪಾದರೂ ಇವರು ಹೇಳುವುದು ತಪ್ಪಾಗುವುದೇ ಇಲ್ಲ. ತಮಗೆ ಗೊತ್ತಿರುವ ಸಂಗತಿಗಳು ಅಮೂಲ್ಯ ವಿಜ್ಞಾನ ಎಂಬುದು ಇವರಿಗೆ ಗೊತ್ತಿಲ್ಲ. ಇಂಥವರ ಬದುಕಿನ ಬಗ್ಗೆ ಜಗತ್ತಿನ ಬೇರೆಬೇರೆ ಕಡೆಯ ಆಸಕ್ತರು ದಾಖಲೀಕರಣಗಳನ್ನು ಮಾಡಿದ್ದಾರೆ.

ನಿಖರ ಮುನ್ಸೂಚನೆ

ನಿಸರ್ಗದ ಹೃದಯದ ಮಿಡಿತ ಆಲಿಸುವ ಅಲೆಮಾರಿ ಕುರಿಗಾಹಿಗಳು ಇಂಥದ್ದೇ ದಿನ ಮಳೆ ಬರುತ್ತೆ ಅಥವಾ ಬರುವುದಿಲ್ಲ ಎಂಬುದನ್ನು ನಿಖರವಾಗಿ ಹೇಳಬಲ್ಲರು. ಸುತ್ತಲೂ ಮೋಡಗಳು ಹೆಪ್ಪುಗಟ್ಟಿದ್ದರೂ ಕೆಲವೊಮ್ಮೆ ಇವರು ಗಡಿಬಿಡಿಯೇ ಮಾಡುವುದಿಲ್ಲ; “ಗಾಳಿ ಹಾರಿಸ್ಕಂಡು ಹೋಯ್ತುದೆ” ಅಂತ ನಿರ್ಲಿಪ್ತವಾಗಿ ಇರ್ತಾರೆ. ಆಕಾಶ ತಿಳಿಯಾಗಿ ದೂರದಲ್ಲೆಲ್ಲೂ ಚೆದುರಿದಂತೆ ಮೋಡಗಳಿರುವ ಸಮಯದಲ್ಲಿ ಕೆಲವೊಮ್ಮೆ ಬೇಗ ಸುರಕ್ಷಿತ ಸ್ಥಾನ ಸೇರಿಕೊಳ್ಳಲು ಅವಸರಿಸುತ್ತಾರೆ. “ಯಾವ ಕ್ಷಣದಲ್ಲಿಯೂ ಮೋಡಗಳು ಕವಚ್ಕಂಡು ಮಳೆ ಬರುತ್ತೆ” ಎಂಬುದೇ ಇವರ ಅವಸರಕ್ಕೆ ಕಾರಣ.

ಹವಾಮಾನದ ಲೆಕ್ಕಾಚಾರ

ಹಿಂದಿನ ವರ್ಷಗಳ ಅನುಭವದ ಮೇಲೆ ಈ ವರ್ಷ ಜೋರಾಗಿ ಮಳೆ ಬತ್ತುದೆ ಅಥವಾ ಸುಮಾರು ಅಥವಾ ಮಳೆ ತೀರ ಕಡಿಮೆಯಾಗಲೂ ಬಹುದು ಎಂದು ಹೇಳಬಲ್ಲ ನಿಖರತೆ ಇವರಿಗೆ ಸಿದ್ದಿಸಿದೆ. ಇದನ್ನೆಲ್ಲ ಕೇಳಿದರೆ ನಿಮಗೆ ಆಶ್ಚರ್ಯವಾಗಬಹುದು ! ಅವರೊಡನೆ ಇದ್ದು ತಿರುಗಾಡಿ, ಟೆಂಟುಗಳಲ್ಲಿ ಅಥವಾ ಆಕಾಶದ ನಕ್ಷತ್ರಗಳನ್ನು ನೋಡುತ್ತಾ, ಅವುಗಳ ಅಸಂಖ್ಯತೆ ಎಣಿಸುತ್ತಾ ಮಲಗಬಹುದು. ಅವರು ನಿಮ್ಮ ಹೊಟ್ಟೆಗಂತೂ ಕಡಿಮೆ ಮಾಡಲಾರರು. ಅತಿಥಿ ದೇವೋಭವ ಎಂಬುದನ್ನು ಅವರು ಕೇಳಿಲ್ಲದೆಯೂ ಅನುಕರಿಸುವವರು

ಬಿಡಾರ

ಅಲೆಮಾರಿ ಕುರಿಗಾಹಿಗಳ ಪರಿವಾರ ದೊಡ್ಡದು, ಕುರಿಗಳಷ್ಟೇ ಅಲ್ಲದೇ ನಾಯಿಗಳು ಕುದುರೆಗಳು, ಎತ್ತುಗಳು ಇರುತ್ತವೆ. ಒಮ್ಮೆ ಊರು ಬಿಟ್ಟರೆ ಮತ್ತೆ ಹಿಂದಿರುಗುವುದು ವರ್ಷಕ್ಕೋ ಅಥವಾ ಕೆಲವು ವರ್ಷಗಳಿಗೊಮ್ಮೆಯೋ. ಎಲ್ಲೇ ಇದ್ದರೂ ಮನೆದೇವರಿಗೆ ನಡೆದುಕೊಳ್ಳುತ್ತಾರೆ. ಸಮುದಾಯದ ಊರ ಹಬ್ಬಗಳಿಗೆ ಎಲ್ಲರೂ ಹೋಗಲಾಗದಿದ್ದರೂ ತಮ್ಮ ಪ್ರತಿನಿಧಿಯನ್ನು ಕಳಿಸಿಕೊಡುತ್ತಾರೆ. ಹೀಗೆ ಊರು, ಕಾಡುಮೇಡು ಅಲೆಯುತ್ತಾ ಹೋಗುವ ಇವರು ಎಲ್ಲೆಂದರಲ್ಲಿ ಬಿಡಾರಗಳನ್ನು ಹೂಡುವುದಿಲ್ಲ. ಒಂದು ಸ್ಥಳ ಆಯ್ಕೆ ಮಾಡಿದರು ಎಂದರೆ ಅದು ಸಾಧ್ಯವಾದಷ್ಟು ಸುರಕ್ಷಿತ ಎಂದರ್ಥ !

ಭಾರತ ಅಲಿಖಿತ ಜ್ಞಾನಗಳ ನಿಧಿ. ಓರ್ವ ರೈತ, ದನಗಾಹಿ, ಕುರಿಗಾಹಿ, ಕಾಡಿನ ಬುಡಕಟ್ಟು ಜನಾಂದ ವ್ಯಕ್ತಿ, ನಾಟಿ ವೈದ್ಯ, ಈ ಸಮುದಾಯಗಳಲ್ಲಿರುವ ಜ್ಞಾನಕ್ಕೆ ಬೆಲೆ ಕಟ್ಟಲಾಗದು. ಆದರೆ ಇವರುಗಳ ಅಲಿಖಿತ ಜ್ಞಾನದ ಬಗ್ಗೆ ಇಲ್ಲಿ ಹೆಚ್ಚು ಅಧ್ಯಯನ ನಡೆದಿಲ್ಲ. ವಿಡಿಯೋ ಡಾಕ್ಯುಮೆಂಟರಿಗಳಾಗಿರುವುದಂತೂ ವಿರಳ.

ಡಾಕ್ಯುಮೆಂಟರಿ

ಇಂಥ ಸಂದರ್ಭದಲ್ಲಿ ಕೇಟ್ ಹಂಬಲ್ (kate humble living with nomads) ಎನ್ನುವ ಮಹಿಳೆ “ಅಲೆಮಾರಿ ಕುರಿಗಾಹಿಗಳು” ಬಗ್ಗೆಯೇ ಸರಣಿ ಡಾಕ್ಯುಮೆಂಟರಿಗಳನ್ನು ಮಾಡಿದ್ದಾರೆ. ಇವುಗಳು ಯೂ ಟ್ಯೂಬ್‌ ನಲ್ಲಿ ಉಚಿತವಾಗಿ ನೋಡಲು ಸಿಗುತ್ತವೆ ಸಾಮಾನ್ಯವಾಗಿ ಡಾಕ್ಯುಮೆಂಟರಿಗಳ ನಿರೂಪಕರು ಷೋ ಅಫ್ ಮಾಡುವುದು ಹೆಚ್ಚು. ಆದರೆ ಹಂಬಲ್ ಇದಕ್ಕೆ ಹೊರತು. ಇವರು ರೂಪಿಸಿರುವ ಹಿಮಾಲಯಗಳ ತಪ್ಪಲಿನ ಬುಡಕಟ್ಟು ಕುರಿಗಾಹಿಗಳ ಜೀವನದ ಡಾಕ್ಯುಮೆಂಟರಿ ಅನನ್ಯ. “ಎಲ್ಲಿಯೂ ನಿಲ್ಲದಿರು, ಮನೆಯನ್ನೆಂದು ಕಟ್ಟದಿರು” ಎಂಬ ಪದಶಃ ಅರ್ಥವನ್ನು ಅಳವಡಿಸಿಕೊಂಡಿರುವ ಇವರ ಬದುಕು ಮಾದರಿ. ನಿಸರ್ಗದ ರಮ್ಯ ಚಿತ್ರಣವಿರುವ ಈ ಸರಣಿಗಳನ್ನು ನೋಡುವುದು ಕಣ್ಣಿಗೂ ಹಬ್ಬ

Similar Posts

1 Comment

  1. 👍ಮನುಷ್ಯನ ಆಸೆ ಮಿತಿಮೀರಿದ ಮಟ್ಟ ತಲುಪಿದೆ,ಎಲ್ಲವೂ ನನಗೆ ಬೇಕೇ ಬೇಕು ಎಂಬಲ್ಲಿವರೆಗೆ . ಕುರಿಗಳೊಂದಿಗೆ ಬದುಕುವ ಜನರಿಗೆ ಪರಿಸರದ ಬಗೆಗಿನ ಅರಿವು ಪ್ರೀತಿಯಿಂದಲೇ ಅವರ ಬದುಕುವ ಕಲೆ ಲಭಿಸಿದೆ.

Leave a Reply

Your email address will not be published. Required fields are marked *