ಸಂಗೀತಕ್ಕೆ ಹೇಗೆ ಶೃತಿ, ಲಯವಿದೆಯೋ ಹಾಗೆಯೇ ಮಳೆಗೂ ಇದೆ. ಇದು ಪ್ರದೇಶದಿಂದ ಪ್ರದೇಶಕ್ಕೆ ಭಿನ್ನ. ಹಿಂದೂಸ್ತಾನಿ, ಕರ್ನಾಟಕ ಸಂಗೀತ ಪ್ರಕಾರಗಳಲ್ಲಿ ಹೇಗೆ ಬೇರೆಬೇರೆ ರಾಗಗಳು ಇವೆಯೋ ಹಾಗೆ. ಪ್ರತಿಯೊಂದು ರಾಗವೂ ಚೆನ್ನ. ಮಲೆನಾಡಿನಲ್ಲಿನ ಮಳೆಯ ನಿನಾದಕ್ಕೂ ಬಯಲುಸೀಮೆಯ ಮಳೆ ನಿನಾದಕ್ಕೂ ಭಿನ್ನತೆ ಇದೆ.
ನಿತ್ಯ ಹರಿದ್ವರ್ಣ ಕಾಡುಗಳಲ್ಲಿನ ಮಳೆಯ ನಾದಕ್ಕೂ ಕುರುಚಲು ಕಾಡಿನ ನಾದಕ್ಕೂ ವ್ಯತ್ಯಾಸವಿದೆ. ನಾನೀಗ ಮುಖ್ಯವಾಗಿ ಹೇಳ ಹೊರಟಿರುವುದು ತೇಗದ ಕಾಡಿನಲ್ಲಿ ಬೀಳುವ ಮಳೆಯ ನಿನಾದ, ಶೃತಿ, ಲಯದ ಬಗ್ಗೆ. ಜೊರ್ರನೇ ಸುರಿಯುವ ಮಳೆಯ ನಿನಾದ ಅದರ ಮೂಲ ಶೃತಿಯ ನೂರು, ಸಾವಿರಪಟ್ಟು ಹೆಚ್ಚಾಗುತ್ತದೆ. ಆಗ ಕೇಳಬೇಕು ಅದರ ಸಂಗೀತ.
ಈ ನಾದಕ್ಕೆ ತಲೆದೂಗುವಂತೆ ಉಳಿದ ಶಬ್ದಗಳೆಲ್ಲ ನಿಶಬ್ದವಾಗುತ್ತವೆ. ಮಳೆಯ ರಭಸ ಹೆಚ್ಚಿದಷ್ಟೂ ತೇಗದ ಎಲೆಗಳ ಮೇಲೆ ಬೀಳುವ ಮಳೆ ಹನಿಗಳ ನಾದ ಹೆಚ್ಚುತ್ತದೆ. ಹಾಗೆ ಕೆಳಗೆ ಹರಡಿದ ಒಣಗಿದ ಎಲೆಗಳ ಮೇಲೆ ಬೀಳುವ ಹನಿಗಳಿಂದ ಹೊಮ್ಮುವ ನಾದವೇ ಬೇರೆ. ಇವೆರಡೂ ಸೇರಿದಾಗ ಅಲ್ಲೊಂದು ಹೊಸ ರಾಗವೇ ಸೃಷ್ಟಿಯಾಗುತ್ತದೆ.
ತೇಗದ ಕಾಡುಗಳ ಸುತ್ತಮುತ್ತ ಇರುವ ಬುಡಕಟ್ಟು ನಿವಾಸಿಗಳು ಮನೆಯಿಂದ ಹೊರಗೆ ಹೊರಟಾಗ ಸಾಮಾನ್ಯವಾಗಿ ನಗರವಾಸಿಗಳಂತೆ ಕೊಡೆ ಹಿಡಿದು ಹೊರಡುವುದಿಲ್ಲ. ಮಳೆ ತೀವ್ರವಾದರೆ ತೇಗದ ಎಲೆಗಳನ್ನು ಕೂಡಿಸಿ ಕೊಡೆಯ ಹಾಗೆ ಮಾಡಿಕೊಳ್ಳುತ್ತಾರೆ. ಮನೆ ಸಮೀಪಿಸುತ್ತಿದ್ದಂತೆ ಅಲ್ಲೇ ಸನಿಹದಲ್ಲಿ ಹಾಕುತ್ತಾರೆ. ಆ ಎಲೆಗಳು ಅಲ್ಲಿಯೇ ಕಳಿತು ಪೋಷಕಾಂಶವಾಗುತ್ತದೆ. ಹೀಗೆ ಇದೊಂದು ಸಾವಯವ ಚಕ್ರವೂ ಹೌದು.
ನಾನು ಬೈಕಿನಲ್ಲಿ ವಯನಾಡು ಸುಲ್ತಾನ್ ಬತೇರಿಯಿಂದ ಬಾವಲಿಯತ್ತ ಬರುತ್ತಿದ್ದಾಗ ನಡುವೆ ಸಿಕ್ಕ ತೇಗದ ಕಾಡಿನಲ್ಲಿ ಮಳೆ ಸುರುವಾಯ್ತು. ಒಂದಷ್ಟು ನಿಮಿಷ ಧೋ ಎಂದು ಸುರಿದು ಮಾಯವಾಯ್ತು. ಆ ಸಂದರ್ಭದ ಅನುಭವವೇ ಅಪೂರ್ವ.
ಮಳೆಗಾಲ ಸಮೀಪಿಸುತ್ತಿದೆ. ಕರ್ನಾಟಕದ ಮೈಸೂರು, ಚಾಮರಾಜನಗರ ಜಿಲ್ಲೆಗಳಲ್ಲಿ ತೇಗದ ಕಾಡುಗಳಿವೆ. ಸಮಯ ಮಾಡಿಕೊಂಡು ಅಲ್ಲಿಗೆ ಹೋಗಿ ತೇಗದ ಕಾಡಿನ ಮಳೆಯ ನಿನಾದ ಅನುಭವಿಸಿ. ಇದು ಸಹ ನಮ್ಮನ್ನು ಮತ್ತೊಂದು ನಾದಮಯ ಲೋಕಕ್ಕೆ ಕರೆದುಕೊಂಡು ಹೋಗುತ್ತದೆ.
ಲೇಖನ ಚೆನ್ನಾಗಿದೆ.