ಅಪರಾಧ ಮತ್ತು ತನಿಖೆ ಕುರಿತ ಬಹುತೇಕ ಸಿನೆಮಾಗಳು ವಾಸ್ತವಾಂಶದಿಂದ ಬಹು ದೂರವಾಗಿರುತ್ತವೆ. ನೈಜಘಟನೆಗಳನ್ನು ಆಧರಿಸಿದಂತವುಗಳು ಕೂಡ ಅಪರಾಧಿ/ ಅಪರಾಧಿಗಳು ಅಥವಾ ಪೊಲೀಸ್/ ಪೊಲೀಸರನ್ನು ವೈಭವೀಕರಿಸಿರುತ್ತವೆ. ನಡೆದ ವಿದ್ಯಮಾನಗಳನ್ನು ಇದ್ದಂತೆಯೇ ಕಟ್ಟಿಕೊಟ್ಟರೂ ಆಸಕ್ತಿಕರ ಎನಿಸುವಂಥವುಗಳನ್ನೂ ಚಿತ್ರಕಥೆಗಾರ, ನಿರ್ದೇಶಕ ಹಾಳು ಮಾಡಿರುತ್ತಾರೆ.
ಇಂಥವುಗಳಿಗೆ ಹೊರತಾಗಿ ಪೊಲೀಸ್ ತನಿಖೆ, ಮಾಧ್ಯಮದ ನೋಟ, ಜನತೆಯ ಗ್ರಹಿಕೆ ಇವೆಲ್ಲವುಗಳನ್ನು ವಿಶ್ಲೇಷಣೆ ಮಾಡಿ ಬರೆದ ಚಿತ್ರಕಥೆಗಳು ಇಲ್ಲವೇ ಇಲ್ಲ ಎಂದು ಹೇಳಲು ಸಾಧ್ಯವಿಲ್ಲ. ಆದರೆ ವಿರಳ. ಇಂಥವುಗಳ ಸಾಲಿಗೆ ಸೇರುತ್ತದೆ ಎಂಬ ಕಾರಣಕ್ಕಾಗಿಯೇ “ದ ಹೈವೇ ಮೆನ್” ಮುಖ್ಯವಾಗುತ್ತದೆ. ನಾನು ಇಲ್ಲಿ ಸಿನೆಮಾದ ಕಥೆಯ ಪೂರ್ಣ ವಿವರಗಳನ್ನು ನೀಡಲು ಹೋಗುವುದಿಲ್ಲ. ಅದು ನಿಮ್ಮ ಆಸಕ್ತಿಯನ್ನು ಕುಂದಿಸಬಹುದು. ನೋಡಲು ಪ್ರೇರೇಪಿಸಬಹುದಾದ ವಿಷಯಗಳನ್ನಷ್ಟೇ ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ.


ಅಮೆರಿಕಾದ ಗಣರಾಜ್ಯಗಳಲ್ಲಿ ಒಂದಾದ ಟೆಕ್ಸಾಸ್ ನಲ್ಲಿ 1930 ರಿಂದ 34ರ ಅವಧಿಯಲ್ಲಿ ನಡೆದ ಘಟನೆಯಿದು. ಅದು ಆರ್ಥಿಕ ಕುಸಿತದ ಸಂದರ್ಭ. ಇದಕ್ಕಿದ್ದ ಹಾಗೆ ಅಪರಾಧಿಕ ಕೃತ್ಯಗಳು ತೀವ್ರವಾಗುತ್ತವೆ. ಬಯಲು ಕಾರಾಗೃಹಗಳಿಗೂ ನುಗ್ಗಿ ಖೈದಿಗಳನ್ನು ಬಿಡಿಸಿಕೊಂಡು ಹೋಗುತ್ತಾರೆ. ಗಸ್ತು ಪೊಲೀಸರು, ಹೆದ್ದಾರಿಯಲ್ಲಿ ಸಂಚರಿಸುವ ಪಯಣಿಕರು ಕೊಲೆಗೀಡಾಗತೊಡಗುತ್ತಾರೆ. ಆತಂಕಕ್ಕೀಡಾಗುವ ಗವರ್ನರ್ ( ಭಾರತೀಯ ರಾಜ್ಯಗಳ ಮುಖ್ಯಮಂತ್ರಿ ಮಾದರಿ) ತನಿಖೆಯನ್ನು ನಿವೃತ್ತ ಪೊಲೀಸ್ ಅಧಿಕಾರಿ ಫ್ರಾಂಕ್ ಹ್ಯಾಮರ್ ಗೆ ವಹಿಸುತ್ತಾರೆ. ಇವರು ನಿವೃತ್ತ ಪೊಲೀಸ್ ಅಧಿಕಾರಿಯೂ ಆಗಿರುವ ಗೆಳೆಯ ಮ್ಯಾನಿ ಗಾಲ್ಟ್ ಜೊತೆಗೂಡಿ ಅಪರಾಧಿಗಳನ್ನು ಪತ್ತೆ ಮಾಡುವ ಕಥನವಿದು.
ಅಮೆರಿಕಾದ ಪೊಲೀಸ್ ಇಲಾಖೆಯಲ್ಲಿಯೂ 1930ರಲ್ಲಿ ಆಧನಿಕ ಪತ್ತೇದಾರಿ ಉಪಕರಣಗಳಿರಲಿಲ್ಲ. ಇಂಥ ಸಂದರ್ಭದಲ್ಲಿ ವಯೋನಿವೃತ್ತಿ ಹೊಂದಿದ ಇಬ್ಬರು ವ್ಯಕ್ತಿಗಳು ಅಪರಾಧಿಗಳ ಜಾಡು ಹಿಡಿಯುವ ರೀತಿ ಅನನ್ಯ. ಇವರಿಬ್ಬರಿಗೆ ತನಿಖೆ ಹಾದಿಯಲ್ಲಿ ಸಿಗುತ್ತಿರುವ ಸುಳಿವುಗಳು ಗೊಂದಲ ಮೂಡಿಸುತ್ತಿರುತ್ತವೆ. ಟೆಕ್ಸಾಸ್ ಜೊತೆ ಗಡಿ ಹಂಚಿಕೊಂಡ ಇತರ ದೇಶಗಳಲ್ಲಿನ ಅಪರಾಧಿಗಳ ಜೊತೆಯಲ್ಲಿಯೂ ಸಂಪರ್ಕ ಇರಿಸಿಕೊಂಡು ಬೇಕಾದಾಗ ಬೇಕಾದಲ್ಲಿ ಪಯಣಿಸುವ ಗ್ಯಾಂಗ್ ಪತ್ತೆ ಮಾಡುವಲ್ಲಿ ಇವರು ಮಾಡುವ ಶ್ರಮ ಅಪಾರ.
ಇವರಿಬ್ಬರು ತಮ್ಮ ಉದ್ದೇಶಿತ ಗುರಿ ಮುಟ್ಟುವ ಮಾರ್ಗದಲ್ಲಿನ ತನಿಖಾ ವಿಧಾನಗಳ ಎಳೆಎಳೆಯೂ ಚಿತ್ರದಲ್ಲಿ ಅನಾವರಣಗೊಳ್ಳುತ್ತಾ ಹೋಗುತ್ತವೆ. ಪೊಲೀಸರು ಚಾಣಾಕ್ಷರಾದರೆ ಅವರಿಂದ ಎಂಥಾ ಅಪರಾಧಿಯೂ ತಪ್ಪಿಸಿಕೊಳ್ಳಲು ಆಗುವುದಿಲ್ಲ ಎಂಬುವುದಕ್ಕೆ ಕುಖ್ಯಾತ ಪ್ರಣಯ ಜೋಡಿ, ಕ್ರಿಮಿನಲ್ ಗ್ಯಾಂಗ್ ಬಾಸ್ ಗಳಾದ ಬೋನಿ ಎಲೆಜೆಬೆತ್ ಪಾರ್ಕರ್ ಮತ್ತಿವಳ ಸಂಗಾತಿ ಕ್ಲೈಂಡ್ ಚೆಸ್ಟ್ನೆಟ್ ಬಾರೊ ಅವರ ಕಾಟವನ್ನು ಅಂತ್ಯಗೊಳಿಸುವ ರೀತಿ ಸಾಕ್ಷಿ.
30 ರ ದಶಕದಲ್ಲಿ ನಡೆದ ವಿದ್ಯಮಾನಗಳನ್ನು ಸಿನೆಮಾ ಆಗಿ ತರುವುದು ಸವಾಲಿನ ಕೆಲಸ. ಅಂದು ಬಳಕೆಯಾಗುತ್ತಿದ್ದ ಉಡುಪುಗಳು, ಹೇರ್ ಸ್ಟೈಲ್, ವಾಹನಗಳು, ಪೊಲೀಸರು, ಅಪರಾಧಿಗಳು ಬಳಸುತ್ತಿದ್ದ ಆಯುಧಗಳು, ವಾಸಿಸುತ್ತಿದ್ದ ಕಟ್ಟಡಗಳನ್ನು ಯಥಾವತ್ತಾಗಿ ತೆರೆ ಮೇಲೆ ತರಬೇಕಾಗುತ್ತದೆ. ಇವೆಲ್ಲ ವಿಷಯಗಳಿಗೂ ನ್ಯಾಯ ಒದಗಿಸುವಲ್ಲಿ ಈ ಸಿನೆಮಾ ಯಶಸ್ವಿಯಾಗಿದೆ.


ಅಭಿನಯದ ವಿಷಯದಲ್ಲಿ ನಿವೃತ್ತ ಪೊಲೀಸ್ ಅಧಿಕಾರಿಗಳ ಪಾತ್ರಗಳಲ್ಲಿ ಕೆವಿನ್ ಕೊಸ್ಟ್ನರ್, ಹೂಡಿ ಹ್ಯಾರ್ಲಸ್ಟನ್,ಪರಕಾಯ ಪ್ರವೇಶ ಮಾಡಿದ್ದಾರೆ. ಇವರಿಬ್ಬರ ಆಂಗಿಕ ಭಾಷೆ, ವಿಶೇಷವಾಗಿ ಭಾವನೆಗಳನ್ನು ವ್ಯಕ್ತಪಡಿಸುವಿಕೆ, ಸಂಭಾಷಣೆ ಹೇಳುವ ರೀತಿ ಅನನ್ಯ. ಇತರೇ ಪಾತ್ರಧಾರಿಗಳು ಅಭಿನಯವೂ ಅಚ್ಚುಕಟ್ಟು
ಚಿತ್ರಕಥೆ ಕಟ್ಟುವುದರಲ್ಲಿ ಜಾನ್ ಫಾಸ್ಕೊ ವಿಶೇಷ ಶ್ರಮ ವಹಿಸಿರುವುದು ಅಡಿಗಡಿಗೂ ಗೋಚರಿಸುತ್ತದೆ. ಇದನ್ನು ನಿರ್ದೇಶಕ ಜಾನ್ ಲೀ ಹ್ಯಾನ್ ಕಾಕ್ ಅಷ್ಟೇ ಶ್ರದ್ಧೆಯಿಂದ ತೆರೆಗೆ ತಂದಿದ್ದಾರೆ. ಜಾನ್ ಸ್ಕಾವರ್ಟ್ಮನ್ ಅವರ ಕ್ಯಾಮೆರಾ, ಥಾಮಸ್ ನ್ಯೂಮನ್ ಅವರ ಸಂಗೀತ, ರಾಬರ್ಟ್ ಫ್ರಾಜೆನ್ ಅವರ ಸಂಕಲನ ಮೆಚ್ಚುಗೆಗೆ ಪಾತ್ರವಾಗುತ್ತದೆ.
“ ದ ಹೈವೇಮೆನ್” ಸಿನೆಮಾದ ವಿಶೇಷತೆಯೇನೆಂದರೆ ಅತೀ ವೇಗವೂ ಅಲ್ಲದ, ಅತೀ ಮಂದವೂ ಅಲ್ಲದ ಮಧ್ಯಮ ಮಾರ್ಗ/ ಘಟನೆಗಳನ್ನು ಕಟ್ಟುತ್ತಾ ಹೋಗಿರುವ ರೀತಿ, ಡೈಲಾಗ್ ಗಳ ಮೂಲಕ 90 ವರ್ಷ ಹಿಂದಿನ ಸತ್ಯಘಟನೆಗಳನ್ನು ಆಧರಿಸಿದ ಚಿತ್ರ ಬಿಚ್ಚಿಕೊಳ್ಳುತ್ತಾ ಸಾಗುತ್ತದೆ. ಛಾಯಾಗ್ರಹಣ ಮತ್ತು ಹಿನ್ನೆಲೆ ಸಂಗೀತವೂ ಕಥೆಗೆ ತಕ್ಕಂತಿರುವುದರಿಂದ ಈ ಮಾದರಿ ಸಿನೆಮಾಗಳನ್ನು ನೋಡಲು ಬಯಸುವವರಿಗೆ ಕಿಂಚಿತ್ತೂ ನಿರಾಶೆಯಾಗುವುದಿಲ್ಲ. ಇದು ನೆಟ್ ಫ್ಲಿಕ್ಸ್ ನಲ್ಲಿದೆ.

Similar Posts

Leave a Reply

Your email address will not be published. Required fields are marked *