ತಂದೆ-ತಾಯಿಯರನ್ನು ಕಳೆದುಕೊಂಡ ವಿರುದ್ಧ ಸ್ವಭಾವಗಳ ಇಬ್ಬರು ಪರಸ್ಪರ ಆತ್ಮೀಯ ಬಾಲಕರು, ಇನ್ನೊಂದೆಡೆ ಅಸಹಜ ಬೆಳವಣಿಯಾಗುತ್ತಿರುವ ಪುಟ್ಟ ಮಗಳ ತಿಂಡಿಪೋತತನವನ್ನು ಕಾಯಿಲೆ ಎಂದು ಒಪ್ಪಿಕೊಳ್ಳಲಾಗದ ತಾಯಿ, ಸ್ಯಾಡಿಸ್ಟ್ ಅಪ್ಪನಿಂದಾಗಿ ಅಮ್ಮನನ್ನು ಕಳೆದುಕೊಳ್ಳುವ ಮಗಳು. ತಂದೆಯಿದ್ದೂ ಇವಳು ಅನಾಥೆ. ಬದುಕಿನ ಬಂಡಿ ಯೌವನದ ಏರುಗತಿಯಲ್ಲಿರುವಾಗ ಈ ಮೂವರು ಸಂಧಿಸುತ್ತಾರೆ. ಸೌಮ್ಯ ಸ್ವಭಾವದ ಉತ್ತಮ ಬಾಣಸಿಗನೊಂದಿಗೆ ಆಕೆಗೆ ಪ್ರೇಮ ಅಂಕುರಿಸುತ್ತದೆ. ಜೀವನದ ರೈಲು ಸಮರ್ಪಕವಾಗಿ ಚಲಿಸುತ್ತಿದೆ ಎನ್ನುವಾಗಲೇ ಹಳಿ ತಪ್ಪುತ್ತದೆ.
ಇದನ್ನು ಮತ್ತೆ ಹಳಿಗೆ ತರುವ ಕಾರ್ಯದಲ್ಲಿ ಪ್ರೇಮಿಯಿಂದ “ಭೀಮಸೇನ ನಳಮಹಾರಾಜ” ಎಂದು ನಾಮಂಕಿತನಾದವನ ಪ್ರಯತ್ಬ ಏನಾಗುತ್ತದೆ ಎಂಬುದನ್ನು ಸಿನೆಮಾ ಹೇಳುತ್ತದೆ. ಇದರ ನಿರೂಪಣೆಗೆ ನಿರ್ದೇಶಕ ಕಾರ್ತೀಕ್ ಸರಗೂರು ಆಯ್ಕೆಮಾಡಿಕೊಂಡ ತಂತ್ರಗಳು ಆಸಕ್ತಿಕರ. ವಿಭಿನ್ನ ಮಾದರಿಯಲ್ಲಿ ಕಥೆ ಹೇಳುವ ಪ್ರಯತ್ನ ಮಾಡಿದ್ದಾರೆ. ಆದರೆ ಅದರಲ್ಲಿ ಅವರು ಯಶಸ್ವಿಯಾದರೆ ಎಂಬ ಪ್ರಶ್ನೆ ಎದುರಾಗುತ್ತದೆ.
ಪಾತ್ರ ಪೋಷಣೆ- ನೆರಳು – ಬೆಳಕಿನ ತಂತ್ರಗಳನ್ನು ಬಳಸಿಕೊಳ್ಳುವ ವಿಷಯದಲ್ಲಿ ಸಿನೆಮಾ ಖಂಡಿತವಾಗಿಯೂ ಯಶಸ್ವಿಯಾಗಿದೆ. ಆದರೆ ಇಡೀ ಕಥೆಯನ್ನು ಕಟ್ಟುವಿಕೆಯಲ್ಲಿ ಸೋತಿದೆ. ಉತ್ತಮ ಕಥಾವಸ್ತುನ್ನು ಆಯ್ಕೆ ಮಾಡಿಕೊಂಡ ನಿರ್ದೆಏಶಕ ( ಕಥೆ- ಚಿತ್ರಕಥೆಯೂ ಇವರದೇ) ಅದನ್ನು ಅಷ್ಟೇ ಚಿತ್ರಕಥೆ, ದೃಶ್ಯಗಳನ್ನು ಕಟ್ಟುವಿಕೆ ವಿಷಯದಲ್ಲಿಯೂ ಸಂಯಮ ತೋರಿದ್ದರೆ ಅತ್ಯುತ್ತಮ ಚಿತ್ರಗಳಾಗುವ ಎಲ್ಲ ಸಾಧ್ಯತೆಗಳೂ ಇತ್ತು.


ಛಾಯಾಚಿತ್ರಗ್ರಾಹಣ (ರವೀಂದ್ರನಾಥ್) ಮಾಡಿದವರಿಂದ ಉತ್ತಮ ಕೆಲಸ ತೆಗೆದಿರುವ ಕಾರ್ತೀತ್ ಸರಗೂರು, ಇದೇ ಕುಶಲತೆಯನ್ನು ಸಂಕಲನ ಮಾಡುವ ವಿಷಯದಲ್ಲಿಯೂ ತೋರಿಸಬೇಕಿತ್ತು. ಇದರಿಂದ ಅನಗತ್ಯವಾದ ಅನೇಕ ಫ್ರೇಮುಗಳಿಗೆ/ದೃಶ್ಯಗಳಿಗೆ ಕತ್ತರಿ ಹಾಕಿ ಸಿನೆಮಾವನ್ನೂ ಇನ್ನಷ್ಟೂ ಬಿಗಿಗೊಳಿಸಬಹುದಾಗಿತ್ತು. ಆದರೆ ಕಂಡಿದ್ದೆಲ್ಲವೂ ಚೆನ್ನಾಗಿದೆ ಎಂಬ ಕಾರಣಕ್ಕೆ ಪೇರಿಸುತ್ತಾ ಹೋಗಿರುವುದೇ ಎಡವಟ್ಟಾಗಿದೆ.
ನಿರ್ದೇಶಕರನ್ನು ಕೆಲವು ವಿಷಯಗಳಿಗೆ ಪ್ರಶಂಸಿಸಬೇಕು. ಉತ್ತಮ ಕಥಾವಸ್ತು. ಪಾತ್ರಗಳಿಗೆ ಹೊಂದುವ ಕಲಾವಿದರ ಆಯ್ಕೆ. ಕಥೆ ಕೇಳುವಂಥ ಲೋಕೇಶನ್, ಇಂಥ ಕಥೆಯನ್ನು ಆರ್ಥ ಮಾಡಿಕೊಳ್ಳುವ ಕ್ಯಾಮೆರಾಮೆನ್ ಆಯ್ಕೆ. ಇದು ಹೇಗಿದೆಯೆಂದರೆ ಕಸಬು ಗೊತ್ತಿರುವ ಮನೆ ನಿರ್ಮಾಣದ ಮೇಸ್ತ್ರಿ, ಕಟ್ಟುವಿಕೆ ಯೋಜನೆಯಲ್ಲಿ ವಿಫಲವಾದ ರೀತಿ.
ಚಿತ್ರಕಥೆ ಹಂತದಲ್ಲಿ ,ಪರಿಣಿತ ವೈದ್ಯರು, ಮನಃಶಾಸ್ತ್ರಜ್ಞರು, ಮನೋವಿಜ್ಞಾನಿಗಳ ಸಲಹೆಗಳು, ದೃಶ್ಯಗಳನ್ನು ಕಟ್ಟುತ್ತಾ ಅನಗತ್ಯವೆನ್ನಿಸುವುದಕ್ಕೆ ಕತ್ತರಿ ಹಾಕುತ್ತಾ ಹೋಗುವ ಕಾರ್ಯವನ್ನು ಮಾಡದೇ ಇದ್ದ ಕಾರಣಕ್ಕೆ ಉತ್ತಮ ಶ್ರಮ ಹಾಕಿದ್ದರೂ ಸಿನೆಮಾ ವಿಫಲಗೊಳ್ಳುವಂತೆ ಆಗಿದೆ. ಈ ವಿಷಯಗಳಲ್ಲಿ ನಿರ್ದೇಶಕ ಎಡವಿದ್ದಾರೆ.


ಇಡೀ ಸಿನೆಮಾದಲ್ಲಿ ವೇದವಲ್ಲಿಯ ಬಾಲ್ಯ ಹಂತದ ಪಾತ್ರಧಾರಿ ಚಿತ್ರಾಳಿ ತೇಜಪಾಲ್, ಲಲ್ಲಿಯಾಗಿರುವ ಆದ್ಯಾ ಉಡುಪಿ. ಆರೋಹಿಯಾಗಿರುವ ಅರೋಹಿ ನಾರಾಯಣ, ಸಾರಾ/ ವೇವವದಲ್ಲಿಯಾಗಿರುವ ಪ್ರಿಯಾಂಕ ತಿಮ್ಮೇಶ್, ಲತ್ತೇಶನಾಗಿ ಅರವಿಂದ್ ಅಭಿನಯ ಗಮನ ಸೆಳೆಯುತ್ತದೆ ಎಂದಿನಂತೆ ಅಚ್ಯುತ ಕುಮಾರ್ ನಟನೆ ಚೆಂದ. ಉಳಿದ ಎಲ್ಲ ಕಲಾವಿದರೂ ಉತ್ತಮವಾಗಿ ನಟಿಸಿದ್ದಾರೆ. ವಿಭಿನ್ನ ಕಥಾ ತಂತ್ರಗಳನ್ನು ಬಳಸಿಕೊಳ್ಳುವ ಪ್ರಯತ್ನ ಮಾಡಿರುವ ಕಾರ್ತೀಕ್ ಸರಗೂರು ಅವರಿಂದ ಯಶಸ್ವಿಯೆನ್ನಿಸುವ ಸಿನೆಮಾಗಳನ್ನು ನಿರೀಕ್ಷಿಸಬಹುದು.

Similar Posts

Leave a Reply

Your email address will not be published. Required fields are marked *