ಕೊರೊನಾ ಕಾರಣದ ಲಾಕ್ಡೌನ್ ನಾನಾ ರೀತಿಯ ಅನುಭವಗಳನ್ನು ನೀಡಿದೆ. ಬಂಧು – ಮಿತ್ರರನ್ನು ಭೇಟಿಯಾಗಲು, ಕರ್ತವ್ಯ, ಪ್ರವಾಸ ಇತ್ಯಾದಿ ಕಾರಣಗಳಿಂದ ಪರ ಊರುಗಳಿಗೆ ಹೋದವರು ದಿಢೀರ್ ಲಾಕ್ಡೌನ್ ಘೋಷಣೆಯಿಂದ ಅಲ್ಲಲ್ಲಿಯೇ ಉಳಿಯುವಂಥ ಸ್ಥಿತಿ ಉಂಟಾಯಿತು. ಅಸಂಖ್ಯಾತ ಮಂದಿ ದೀರ್ಘಕಾಲಿಕ ರಜೆ, ಹೊರಗೆಲ್ಲೋ ಹೋಗಲ್ಲಾಗದ ಕಾರಣ ಮನೆಯಲ್ಲಿಯೇ ಉಳಿದರು. ಇವೆಲ್ಲ ಸಿಹಿಕಹಿ ಭಾವಗಳನ್ನು ನೀಡಿದೆ. ಸಂಬಂಧಗಳು ಬೆಸೆದಿವೆ – ಒಡೆದಿವೆ. ಇಂಥ ಭಾವಗಳನ್ನೆಲ್ಲ ಹಿಡಿದು ಸಿನೆಮಾ ಆಗಿ ಕೊಟ್ಟರೆ ಹೇಗಿರುತ್ತದೆ. ತಮಿಳಿನ “ ಪುತ್ತಮ್ ಪುದು ಕಾಲೈ” ಅಂಥದೊಂದು ಯಶಸ್ವಿ ಪ್ರಯತ್ನ.
ಇದೊಂದು ತೀರಾ ಸಾಧಾರಣ ಚಲನಚಿತ್ರವಾಗಿದ್ದರೆ ಈ ವಿಮರ್ಶೆ ಬರೆಯುವ ಅಗತ್ಯವೇ ಇರಲಿಲ್ಲ. ಕೊರೊನಾ ಕಾಲಘಟ್ಟದಿಂದಾಗಿ ಸೋತು ಸುಣ್ಣವಾಗಿರುವ ಚಿತ್ರರಂಗಕ್ಕೆ ಇದೊಂದು ಚೈತನ್ಯವನ್ನು, ಹೊಸ ಹೊಳವುಗಳನ್ನು ನೀಡುವಂಥದ್ದಾಗಿದೆ. ಅದೂ ಅಲ್ಲದೇ ಈಗಾಗಲೇ ಬೇರೆಬೇರೆ ಕಥೆಗಳನ್ನು ಹೊಂದಿರುವಂಥ ಏಕ ಸಿನೆಮಾಗಳು ಬಂದಿವೆ. ಕೆಲವು ಗೆದ್ದಿವೆ. ಕೆಲವು ಸೋತಿವೆ. ನಾಲ್ಕು ದಶಕಗಳ ಹಿಂದೆ ಕನ್ನಡದಲ್ಲಿಯೇ ತೆರೆಕಂಡ ಕಥಾಸಂಗಮ ಯಶಸ್ವಿಯಾಗಿದೆ. ಆದರೆ ಇವೆಲ್ಲವೂ ಓಬ್ಬೊಬ್ಬರೆ ನಿರ್ದೇಶಕರಿಂದ ಮೂಡಿಬಂದಂತವುಗಳು. ಭಾರತೀಯ ಚಿತ್ರರಂಗದಲ್ಲಿ ಒಂದೇ ಸಿನೆಮಾದಲ್ಲಿನ ಬೇರೆಬೇರೆ ಕಥೆಗಳನ್ನು ಬೇರೆಬೇರೆ ನಿರ್ದೇಶಕರು, ತಂತ್ರಜ್ಞರು ನಿರ್ವಹಿಸಿರುವಂಥವುಗಳು ಅಪರೂಪ. ಇಂಥವುಗಳ ಸಾಲಿಗೆ “ ಪುತ್ತಮ್ ಪುದು ಕಾಲೈ” ಸೇರಿದೆ.
ಈ ಸಿನೆಮಾದಲ್ಲಿ ಒಂದಕ್ಕೊಂದು ಸಂಬಂಧ ಇಲ್ಲದ ಐದು ಕಥೆ ಅಥವಾ ಉಪ ಸಿನೆಮಾಗಳಿವೆ. ಇಳಮೈ ಇದೋ ಇದೋ, ಅವರುಮ್ ನಾನುಮ್, ಕಾಫಿ ಎನಿಯೋನ್, ರೀ ಯುನಿಯನ್, ಮಿರಾಕಲ್. ಆದರೆ ಇವೆಲ್ಲವುಗಳಿಗೆ ಇರುವ ಸಾಮಾನ್ಯ ಎಳೆಯೆಂದರೆ ಕೊರೊನಾ – ಲಾಕ್ಡೌನ್. ಆದ್ದರಿಂದ ಇವುಗಳನ್ನು ಲಾಕ್ಡೌನ್ ಕಾಲದ ಕಥೆಗಳೆಂದೂ ಕರೆಯಬಹುದು. ಈ ಎಲ್ಲ ಕಥೆಗಳ ವಿವರಗಳನ್ನು ನೀಡಲು ಹೋಗುವುದಿಲ್ಲ. ಅದು ನಿಮ್ಮ ಸಿನೆಮಾ ನೋಡುವ ಆಸಕ್ತಿ ಕೆರಳಿಸಬಹುದು. ಸಿನೆಮಾ ನೋಡಲೇಬೇಕು ಎನಿಸುವಂಥ ಎಳೆಗಳ ಬಗ್ಗೆ ಹೇಳುತ್ತೇನಷ್ಟೆ.
“ಇಳಮೈ ಇದೊ ಇದೋ” ಈ ಉಪ ಸಿನೆಮಾವನ್ನು ಸುಧಾ ಕೊಂಗಾರ ನಿರ್ದೆಶಿಸಿದ್ದಾರೆ. ಮಧ್ಯ ವಯಸ್ಕ ವಿಧುರ – ವಿಧವೆಯ ಪ್ರೀತಿ ಪ್ರೇಮ ಪ್ರಣಯದ ಕಥೆಯಿದು. ಮುಖದಲ್ಲಿ ಮುಗುಳ್ನಗೆ ಮೂಡಿಸುವ, ಕಚಗುಳಿ ಇಡುವಂಥ ದೃಶ್ಯಗಳಿವೆ. ಸುಧಾ ಅವರು ಈ ಕಥೆ ಹೇಳುವ ರೀತಿ ಅನನ್ಯ. ಇಲ್ಲಿ ಅವರು ಯುವ – ಮಧ್ಯ ವಯಸ್ಕ ಜೋಡಿಯ ಪ್ರತಿಬಿಂಬಗಳನ್ನು ಸೃಷ್ಟಿಸಿದ್ದಾರೆ. ಇದು ಕಥೆಯನ್ನು ಮತ್ತಷ್ಟೂ ಬಿಗಿಗೊಳಿಸಿದೆ. ಇದರ ಅಂತ್ಯ ಆಸಕ್ತಿಕರ. ಪಾತ್ರಧಾರಿಗಳ ಆಯ್ಕೆಯೂ ಸೂಕ್ತ. ಜಯರಾಮ್, ಊರ್ವಶಿ, ಕಾಳಿದಾಸ್ ಜಯರಾಮ್, ಕಲ್ಯಾಣಿ ಪ್ರಿಯದರ್ಶನ್ ಅಭಿನಯ ವ್ಹಾವ್ ಎನಿಸುವಂತೆ ಎನಿಸುವಂತೆ ಮಾಡುತ್ತದೆ. ಆದರೆ ಊರ್ವಶಿ ಅವರ ಮೊಗದ ಮೇಲೆ ವಯಸ್ಸಿನ ನೇಗಿಲು ಹೆಚ್ಚು ಕೆಲಸ ಮಾಡಿದೆ. ಸುಸ್ತಾದವರಂತೆ ಕಾಣುತ್ತಾರೆ. ಇವರ ಬದಲು ಬೇರೆ ಕಲಾವಿದರ ಆಯ್ಕೆ ಮಾಡಬೇಕಿತ್ತು ಎನಿಸದಿರದು.
“ಅವರುಮ್ ನಾನುಮ್” ಉಪ ಸಿನೆಮಾವನ್ನು ಗೌತಮ್ ಮೆನನ್ ನಿರ್ದೇಶಿಸಿದ್ದಾರೆ. ತಾತ ಮೊಮ್ಮಗಳ ಬಾಂಧವ್ಯ ಮತ್ತಷ್ಟೂ ಬೆಸೆಯುವ, ಬೇರೆಬೇರೆ ಕಾರಣಗಳಿಂದ ದೂರಾಗಿದ್ದ ಅಪ್ಪ – ಮಗಳನ್ನು ಮತ್ತೆ ಒಂದುಗೂಡುವಂತೆ ಮಾಡುವ ಕಥೆಯಿದು. ತಾತನಾಗಿ ಎಂ.ಎಸ್. ಭಾಸ್ಕರ್, ಮೊಮ್ಮಗಳಾಗಿ ರೀತು ವರ್ಮ ಅಭಿನಯ ಮನೋಜ್ಞ. ಈ ಕಥೆಯನ್ನು ಹೇಳಿರುವ ರೀತಿಯೇ ಭಿನ್ನವಾಗಿದೆ.
“ಕಾಫಿ ಎನಿಯೋನ್” ಉಪ ಸಿನೆಮಾವನ್ನು ಸುಹಾಸಿನಿ ಮಣಿರತ್ನಮ್ ನಿರ್ದೇಶಿಸಿದ್ದಾರೆ. ಬಹು ಭಾವುಕತೆಯ ಕಥೆಯನ್ನು ಎಲ್ಲಿಯೂ ಹಳಿ ತಪ್ಪದ ಹಾಗೆ ಹೋಗುವಂತೆ ಮಾಡಲು ಅವರು ಬಹಳ ಸರ್ಕಸ್ ಮಾಡಿ ಯಶಸ್ಸು ಗಳಿಸಿದ್ದಾರೆ. ಕೋಮಾ ಸ್ಥಿತಿಗೆ ತಲುಪಿದ ತಾಯಿ, ನಿಷ್ಠುರದ ಅಪ್ಪನಂತೆ– ಪತ್ನಿಯನ್ನು ಅಪಾರವಾಗಿ ಪ್ರೀತಿಸುವಂಥ ವ್ಯಕ್ತಿತ್ವದ ಮಹೇಂದ್ರನ್, ಭಿನ್ನಭಿನ್ನ ವ್ಯಕ್ತಿತ್ವದ ಮೂವರು ಹೆಣ್ಣುಮಕ್ಕಳು. ಇದರಲ್ಲಿ ಸುಹಾಸಿನಿ ಅವರದು ಓವರ್ ಆಕ್ಟಿಂಗ್. ಅನು ಹಾಸನ್, ಕತಾಡಿ ಕೃಷ್ಣಮೂರ್ತಿ ಅವರದಂತೂ ಮಾಗಿದ ಅಭಿನಯ. ಬಹುಶಃ ಪಾತ್ರಗಳನ್ನು ಸಮರ್ಥವಾಗಿ ನಿರ್ವಹಿಸುವ ಪೈಪೋಟಿಯಲ್ಲಿ ಸುಹಾಸಿನಿ ಅವರು ಅತೀ ಅಭಿನಯ ಮಾಡಿದಂತೆ ಕಾಣುತ್ತದೆ.
“ರಿ ಯೂನಿಯನ್” ಅನ್ನು ರಾಜೀವ್ ಮೆನನ್ ನಿರ್ದೇಶಿಸಿದ್ದಾರೆ. ಬಾಲ್ಯ ಕಾಲದ ಆಪ್ತ ಸಹಪಾಠಿಗಳಿಬ್ಬರು ತಮ್ಮ ಅವ್ಯಕ್ತ ಪ್ರೇಮವನ್ನು ಅನಾವರಣ ಮಾಡುವ ರೀತಿಯೇ ಸೂಕ್ಷ್ಮತೆಯಿಂದ ಕೂಡಿದೆ. ಇದನ್ನು ನಿರ್ದೇಶಕ ನಿರ್ವಹಣೆ ಮಾಡಿರುವ ರೀತಿ ಮೆಚ್ಚುಗೆ ಮೂಡಿಸುತ್ತದೆ. ಕಥೆಯ ಆರಂಭ – ಬೆಳವಣಿಗೆ – ಅಂತ್ಯಗಳ ಅನುಬಂಧ ಎಲ್ಲಿಯೂ ಸಡಿಲಚಾಗಿಲ್ಲ. ಅಂದಿರಾ ಜಿರ್ಮಿಯಾ, ಲೀಲಾ ಸ್ಯಾಮ್ಸನ್, ಸಿಕ್ಕಿಲ್ ಗುರುಚರಣ್ ಅವರುಗಳದು ಸಹಜಾಭಿನಯ. ಪಾತ್ರಗಳೇ ತಾವಾಗಿ ಅಭನಯಿಸಿದ್ದಾರೆ.
“ಮಿರಾಕಲ್” ಅನ್ನು ಕಾರ್ತಿಕ್ ಸುಬ್ಬುರಾಜ್ ನಿರ್ದೇಶಿಸಿದ್ದಾರೆ. ಸಿನೆಮಾಗಳ ಬಗ್ಗೆ ಭಾರಿ ಕನಸುಗಳದ್ದರೂ ಕೈಯಲ್ಲಿ ಕಾಸಿಲ್ಲದ ನಿರ್ದೇಶಕ, ನಿರುದ್ಯೋಗಿಗಳಾಗಿರುವ ಯುವಕರಿಬ್ಬರು “ ಬದುಕಿನಲ್ಲಿ ಪವಾಡ” ನಡೆಯುತ್ತದೆ ಎಂದು ಹೇಳುವ ಟಿವಿ ಗುರುವಿನ ಕಾರ್ಯಕ್ರಮದ ವೀಕ್ಷಕರು. ಇವರ ಬದುಕಿಲ್ಲಿ ನಡೆಯುವ ಪವಾಡದಂಥ ಘಟನೆಗಳ ಬಗ್ಗೆ ಸಿನೆಮಾ ಮಾತನಾಡುತ್ತದೆ. ಈ ಕಥೆಯನ್ನು ನಿರ್ದೇಶಕ ನಿರೂಪಿಸಿರುವ ರೀತಿ ಗಮನಾರ್ಹ.
ಒಳಾಂಗಣ ದೃಶ್ಯಗಳು:
ಮಿರಾಕಲ್ ಕಥೆಯಲ್ಲಿ ಮಾತ್ರ ಒಂದೇ ಒಂದು ಹೊರಾಂಗಣ ದೃಶ್ಯ ಅದು ಬಹಳ ಕ್ಷಿಪ್ರವಾಗಿ ಮುಗಿಯುವಂಥದ್ದು ಬಂದು ಹೋಗುತ್ತದೆ. ಉಳಿದಂತೆ ಐದು ಸಿನೆಮಾಗಳೂ ಒಳಾಂಗಣದಲ್ಲಿಯೇ ಚಿತ್ರಿತವಾಗಿವೆ. ಅದು ಮನೆ ಮತ್ತು ಕೊಠಡಿಗಳಲ್ಲಿ. ಆದರೂ ಎಲ್ಲಿಯೂ ಏಕತಾನತೆ, ಬೇಸರ ಎನಿಸುವುದಿಲ್ಲ. ಇದು ಬಹಳ ಪ್ರಮುಖವಾದ ಸಂಗತಿ. ಇದಕ್ಕೆ ಕಾರಣವೇನೆಂದರೆ ಬಿಗಿಯಾದ ಕಥೆಗಳು, ಚೆಂದದ ಅಭಿನಯ, ಉತ್ತಮ ನಿರೂಪಣೆ, ಬಿಗಿಯಾದ ಸಂಕಲನ, ಕಥೆಗಳಿಗೆ ಪೂರಕವಾಗಿ ಕೆಲಸ ಮಾಡಿರುವ ಛಾಯಾಗರಣ.
ಉಪ ಸಿನೆಮಾಗಳೇ ?
ಒಂದೇ ಸಿನೆಮಾದ ಚೌಕಟ್ಟಿನ ಒಳಗೆ ಸ್ವತಂತ್ರ ಚೌಕಟ್ಟುಳ್ಳ ಭಿನ್ನ ಕಥೆಗಳ ಸಿನೆಮಾಗಳನ್ನು ಉಪ ಸಿನೆಮಾ ಎಂದು ಕರೆದಿದ್ದೇನೆ. ಆದರೆ ಇವ್ಯಾವುದೂ ಅಪೂರ್ಣವಲ್ಲ, ಅತಾರ್ಕಿಕ ಅಂತ್ಯಗಳನ್ನು ಕಾಣುವುದಿಲ್ಲ ಅಥವಾ ಒಂದರ ಕಥೆಗೆ ಇನ್ನೊಂದು ಕಥೆ ಸಂಬಂಧವೂ ಇಲ್ಲ. ಇವುಗಳನ್ನು ಬೇರೆಬೇರೆಯಾಗಿ ಪ್ರದರ್ಶನ ಮಾಡಿದರೂ ಆಗುವ ಅನುಭೂತಿಳಲ್ಲಿ ಬದಲಾವಣೆ ಆಗುವುದಿಲ್ಲ. ಇಂಥವು ಸಿನೆಮಾದೊಳಗಿರುವ ಪೂರ್ಣ ಸಿನೆಮಾಗಳೇ ಅಲ್ಲವೇ. ಎಂದೂ ಅನಿಸುತ್ತದೆ.
ಮೀನಾಕ್ಷಿ ಸಿನೆಮಾ, ಲಯನ್ ಟೂಥ್ ಸ್ಟುಡಿಯೋಸ್, ಮದ್ರಾಸ್ ಟಾಕೀಸ್, ರಾಜೀವ್ ಮೆನನ್ ಪ್ರೊಡಕ್ಷನ್, ಸ್ಟೋನ್ ಬೆಂಚ್ ನಂಥ ವಿಭಿನ್ನ ನಿರ್ಮಾಣ ಸಂಸ್ಥೆಗಳು ನಿರ್ಮಿಸಿರುವ ಈ ಸಿನೆಮಾವನ್ನು ಅಮೆಜಾನ್ ಪ್ರೈಮ್ ಓಟಿಟಿ ಫ್ಲಾಟ್ ಫಾರ್ಮ್ ಹಂಚಿಕೆ ಮಾಡಿದೆ. ಅಕ್ಟೋಬರ್ 16 ರಂದು ಬಿಡುಗಡೆಯಾಗಿದೆ. ಓ.ಟಿ.ಟಿ ಫ್ಲಾಟ್ ಫಾರ್ಮ್ ನಲ್ಲಿದು ನಿಜಕ್ಕೂ ದೊಡ್ಡ ಮತ್ತು ಅಪೂರ್ವ ಪ್ರಯತ್ಮ. ಈಗಾಗಲೇ ಇದರ ಬಗ್ಗೆ ಸಕಾರಾತ್ಮಕ ಮಾತುಗಳು ಕೇಳಿ ಬರುತ್ತಿವೆ. ಇದು ಈ ವೇದಿಕೆಯನ್ನು ಇನ್ನಷ್ಟೂ ವಿಸ್ತರಿಸುವುದಕ್ಕೆ ಸಹಾಯಕವಾಗಬಲ್ಲದು.