Kannadaಸಿನಿಮಾ

ಅಚ್ಚುಕಟ್ಟು ಚಿತ್ರಕಥೆ – ಅಭಿನಯದ “ಭಾಗ್ಯರಾಜ”

ದಕ್ಷಿಣ ಭಾರತದ ಚಿತ್ರರಂಗದ ದಂತಕಥೆ, ಪ್ರೇಕ್ಷಕರ ನಾಡಿಮಿಡಿತ ಅರಿತ ಚಿತ್ರ ಕಥೆಗಾರ – ನಿರ್ದೇಶಕ -ಕಲಾವಿದ ಕೆ. ಭಾಗ್ಯರಾಜ್ ಅವರ ಅಗಲಿಕೆ ಇಡೀ ಕಲಾ ಜಗತ್ತಿಗೆ ತುಂಬಲಾರದ ನಷ್ಟ. ಇನ್ನೂ 73 ವರ್ಷ. ಖಂಡಿತ ಸಾಯುವ ವಯಸ್ಸಂತೂ ಅಲ್ಲ! ಓರ್ವ ಕಲಾವಿದನಾಗಿ ಮಾತ್ರವಲ್ಲದೆ, ಕಥೆ-ಚಿತ್ರಕಥೆಯ ಮೂಲಕ ಸಾಮಾನ್ಯ ಜನರ ಬದುಕಿಗೆ ಕನ್ನಡಿ ಹಿಡಿದ ಅಪರೂಪದ ದೃಶ್ಯ ಮಾಂತ್ರಿಕ
ಕೆ.ಭಾಗ್ಯರಾಜ್ ನಿರ್ದೇಶನ ಹಾಗೂ ನಟನೆಯ ‘ಮುಂದಾನೈ ಮುಡಿಚ್ಚು’ (Mundhanai Mudichu) ಚಿತ್ರದ ಆ ಮುಗ್ಧತೆ, ಕೌಟುಂಬಿಕ ಹಾಸ್ಯ ಇಂದಿಗೂ ತಮಿಳು ಸಿನೆಮಾ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆಯಲ್ಪಟ್ಟಿದೆ. ‘ಮೌನ ಗೀತಂಗಳ್’ (Mouna Geethamgal) “ಚಿನ್ನ ವೀಡು” (Chinna Veedu) ಮತ್ತು “ಡಾರ್ಲಿಂಗ್ ಡಾರ್ಲಿಂಗ್ ಡಾರ್ಲಿಂಗ್” (Darling, Darling, Darling) ನಂತಹ ಚಲನಚಿತ್ರಗಳ ಮೂಲಕ ಬದುಕಿನ ಸಂಕೀರ್ಣ ಸಂಬಂಧಗಳನ್ನು ಸರಳವಾಗಿ ಬಿಡಿಸಿಟ್ಟ ಪರಿ ಅನನ್ಯ. ದೊಡ್ಡ ಆಕ್ಷನ್ ಸಿನಿಮಾಗಳ ಅಬ್ಬರದ ನಡುವೆಯೂ, ಮಧ್ಯಮ ವರ್ಗದ ಸಂಸಾರದ ಸುಖ-ದುಃಖಗಳನ್ನು ಬೆಳ್ಳಿತೆರೆಯ ಮೇಲೆ ಕಾವ್ಯದಂತೆ ತಂದ ಹೆಗ್ಗಳಿಕೆ
ಭಾಗ್ಯರಾಜ್ ಅವರು ತಮ್ಮ ಸಿನೆಮಾ ಪ್ರಯಾಣದ ಬಗ್ಗೆ ಹೇಳುತ್ತಿದ್ದ ಆ ಒಂದು ಮಾತು ಇಂದಿಗೂ ಪ್ರತಿಯೊಬ್ಬ ನಿರ್ದೇಶಕನಿಗೂ ದಾರಿದೀಪ “ನಾನು ಬೆಳ್ಳಿತೆರೆಯ ಮೇಲೆ ಎಂದಿಗೂ ಅಜೇಯನಾದ ಸೂಪರ್ ಹೀರೊ ಆಗಲು ಬಯಸಲಿಲ್ಲ. ನನ್ನ ಸಿನೆಮಾದ ನಾಯಕ ತಪ್ಪುಗಳನ್ನು ಮಾಡುತ್ತಾನೆ, ಸೋಲುತ್ತಾನೆ, ಕಣ್ಣೀರಿಡುತ್ತಾನೆ ಮತ್ತು ಆ ತಪ್ಪುಗಳಿಂದಲೇ ಕಲಿಯುತ್ತಾನೆ. ಏಕೆಂದರೆ ಪ್ರತಿಯೊಬ್ಬ ಸಾಮಾನ್ಯ ಮನುಷ್ಯನ ಬದುಕು ಇರುವುದೇ ಹೀಗೆ. ಚಿತ್ರಮಂದಿರದಿಂದ ಹೊರಬರುವಾಗ ಪ್ರೇಕ್ಷಕನಿಗೆ ಇದು ನನ್ನದೇ ಕಥೆ  ಅನಿಸಬೇಕೇ ಹೊರತು, ಬೇರೊಬ್ಬನ ಕಥೆಯಲ್ಲ.ಗುರು ಭಾರತಿರಾಜ ಅವರ ನೆರಳಿನಲ್ಲಿ ಬೆಳೆದು, ತಾವೇ ಒಂದು ದೊಡ್ಡ ಆಲದ ಮರವಾಗಿ ನೂರಾರು ಪ್ರತಿಭೆಗಳಿಗೆ ಆಸರೆಯಾಗಿದ್ದ ಆ ದಿನಗಳನ್ನು ಅವರು ಸದಾ ಕೃತಜ್ಞತೆಯಿಂದ ಸ್ಮರಿಸುತ್ತಿದ್ದರು.
ತಮ್ಮ ವಿಶಿಷ್ಟ ನಗು, ತುಂಬು ಅಚ್ಚುಕಟ್ಟು ಚಿತ್ರಕಥೆ ಹಾಗೂ ಸಹಜ ನಟನೆಯ ಮೂಲಕ ಅಭಿಮಾನಿಗಳ ಹೃದಯಗಳಲ್ಲಿ ಮನೆ ಮಾಡಿದ್ದ ಭಾಗ್ಯರಾಜ್ ಅವರು ಭೌತಿಕವಾಗಿ ನಮ್ಮನ್ನು ಅಗಲಿರಬಹುದು. ಆದರೆ ಅವರು ಸೃಷ್ಟಿಸಿದ ಕಥೆಗಳು, ಪಾತ್ರಗಳು ಮತ್ತು ಸಿನೆಮಾ ತತ್ವಗಳು ಭಾರತೀಯ ಚಿತ್ರರಂಗವಿರುವವರೆಗೂ ಅಮರವಾಗಿರುತ್ತವೆ. ಕನ್ನಡ ನಾಡಿನ ಸಿನೆಮಾ ಪ್ರೇಮಿಗಳ ಪರವಾಗಿ ಈ ಸಾಧಕನಿಗೆ ಗೌರವಪೂರ್ವಕ ಶ್ರದ್ಧಾಂಜಲಿ.

Leave a Reply

Your email address will not be published. Required fields are marked *

error: Content is protected !!