ಕೃತಕ ಬುದ್ದಿಮತ್ತೆಯ ರೋಬೊಟ್ ಗಳಿಂದ ಆಗಬಹುದಾದ ಅಪಾಯಗಳನ್ನು ನಿರ್ದೇಶಕ ಎಸ್ ಶಂಕರ್ ಅವರು “ಎಂದಿರನ್” ಸಿನೆಮಾದಲ್ಲಿ ಹೇಳಿದ್ದರು. ಇದರ ಮುಂದುವರಿದ ಭಾಗವಾಗಿ   ಅಧಿಕ ಸಾಮರ್ಥ್ಯದ ತರಂಗಾತಂರಗಳು ಉಂಟುಮಾಡಿರುವ,  ಮುಂದೆ ತಂದೊಡ್ಡುವ ದುಷ್ಪರಿಣಾಮಗಳ  ಬಗ್ಗೆ 2.0 ಸಿನೆಮಾದಲ್ಲಿ ಎಚ್ಚರಿಸಿದ್ದಾರೆ. ಮೇಲ್ನೋಟ್ಟಕ್ಕೆ ಇದು ಕಾಲ್ಪನಿಕ ವಿಜ್ಞಾನಸರಣಿ ಚಿತ್ರದಂತೆ ಕಂಡರೂ ಅಂತರ್ಯದಲ್ಲಿ ಬೇರೆಯದೇ ಆಗಿದೆ. ರೂಪಕಗಳ ಪರಿಭಾಷೆಯಲ್ಲಿ ಇಡೀ ಸಿನೆಮಾ ಚಿತ್ರಿತವಾಗಿದೆ.

ಭೂ ಪರಿಸದ ಸಮತೋಲವನ್ನು ಕಾಪಾಡುವಲ್ಲಿ ಹಕ್ಕಿ-ಪಕ್ಷಿಗಳ ಪಾತ್ರ ಅಪಾರ. ಪರಾಗಸ್ಪರ್ಶ ಪ್ರಕ್ರಿಯೆಯಲ್ಲಿ ಜೇನುನೊಣಗಳು ಎಷ್ಟು ಮಹತ್ತರ ಪಾತ್ರವನ್ನು ವಹಿಸುತ್ತವೆಯೋ ಅಷ್ಟೇ ಪ್ರಮುಖ ಪಾತ್ರವನ್ನು ಸಣ್ಣಸಣ್ಣ ಹಕ್ಕಿಗಳು ವಹಿಸುತ್ತವೆ. ತಂತ್ರಜ್ಞಾನಗಳು ಉಂಟು ಮಾಡಿರುವ ಹಲವು ಬಗೆಯ ಮಾಲಿನ್ಯಗಳಿಂದಾಗಿ ಇಂಥ ಸಣ್ಣಸಣ್ಣ ಹಕ್ಕಿಗಳ ಕೆಲವು ಪ್ರಬೇಧಗಳೇ ಅಳಿದುಹೋಗಿವೆ. ಪರಾಗಸ್ಪರ್ಶ ಕ್ರಿಯೆಗೆ ಇವುಗಳನ್ನೇ ಅವಲಂಬಿಸಿದ್ದ ಹಲವು ಪ್ರಬೇಧಗಳ ಸಸ್ಯಗಳನೇಕವು ಅಳಿದಿವೆ. ಇನ್ನಷ್ಟು ಅಳಿವಿನ ಅಂಚಿನಲ್ಲಿವೆ.

ಇನ್ನು ದೊಡ್ಡದೊಡ್ಡ ಪಕ್ಷಿಗಳಂತೂ ಬಹುವಿಶಿಷ್ಟ ಪ್ರಬೇಧದ ವೃಕ್ಷಗಳ ಹಣ್ಣುಗಳನ್ನು ತಿಂದು ಅವುಗಳನ್ನು ಅರಗಿಸಿಕೊಳ್ಳುತ್ತವೆ. ಅವುಗಳ ಹಿಕ್ಕೆಯ ಜೊತೆಗೆ ಹೊರಬೀಳುವ ಬೀಜಗಳು ಭೂಮಿಗೆ ಬಿದ್ದ ನಂತರವೇ ಮೊಳಕೆ ಹೊಡೆಯಲು ಆರಂಭಿಸುತ್ತವೆ. ಈ ವೃಕ್ಷಗಳಿಂದ ನೇರವಾಗಿ ಭೂಮಿಗೆ ಬೀಳುವ ಬೀಜಗಳು ಮೊಳಕೆ ಹೊಡೆಯುವುದಿಲ್ಲ. ಬೀಜದ ಮೇಲಿರುವ ನಾರುರೂಪದ ಮೇಲ್ಬಾಗವನ್ನು ಪಕ್ಷಿ ತಿಂದು ಅದರ ಹೊಟ್ಟೆಯಲ್ಲಿಯೇ ಬೀಜೋಪಚಾರದ ರಾಸಾಯನಿಕ ಪ್ರಕ್ರಿಯೆ ನಡೆದ ನಂತರವೇ ಅದಕ್ಕೆ ಮೊಳಕೆಯೊಡೆಯುವ ಭಾಗ್ಯ ದಕ್ಕುವುದು  ಇಂಥ ಪ್ರಕ್ರಿಯೆಯನ್ನು ನಡೆಸುತ್ತಿರುವುದರಲ್ಲಿ ಪಶ್ಚಿಮಘಟ್ಟ ಶ್ರೇಣಿಗಳಲ್ಲಿ ಕಾಣಸಿಗುವ ಹಾರ್ನ್ ಬಿಲ್ ಬರ್ಡ್ ಪಾತ್ರವೂ ಮಹತ್ತರ.

ಬೆಳೆಗಳಿಗೆ ಬಹುಬಗೆಯಲ್ಲಿ ಬಾಧೆ ನೀಡುವ ಕೀಟಗಳನ್ನು ಹಿಡಿದು ತಿಂದು ಅವುಗಳ ಸಂಖ್ಯೆಯನ್ನು ನಿಯಂತ್ರಣದಲ್ಲಿಡುವ ಕಾರ್ಯವನ್ನು ಪಕ್ಷಿಗಳು ಮಾಡುತ್ತವೆ. ಇವುಗಳಿಲ್ಲದಿದ್ದರೆ ನಿಸರ್ಗದತ್ತವಾದ ಕೀಟಹತೋಟಿ ಸಾಧ್ಯವೇ ಇಲ್ಲ. ಈ ಕಾರ್ಯಕ್ಕೆ ರಾಸಾಯನಿಕ ಕೀಟನಾಶಕಗಳನ್ನು ಬಳಸುವುದು ನಮ್ಮ ಕಣ್ಣನ್ನು ನಾವೇ ಚುಚ್ಚಿಕೊಂಡಂತೆ. ಈ ಕೆಲಸ ಆರಂಭವಾಗಿ ದಶಕಗಳೇ ಕಳೆದಿವೆ. ರಾಸಾಯನಿಕ ಕೀಟನಾಶಕಗಳ ದುಷ್ಪರಿಣಾಮ ಗೋಚರಿಸುತ್ತಿದೆ. ಆದರೂ ಎಚ್ಚೆತ್ತುಕೊಳ್ಳಬೇಕಾದ ಪ್ರಮಾಣದಲ್ಲಿ ಮನುಕುಲ ಎಚ್ಚೆತ್ತುಕೊಂಡಿಲ್ಲ.

ನಮ್ಮೆಲ್ಲರ ಮನೆ ಅಂಗಳದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಕಾಣಸಿಗುತ್ತಿದ್ದ ಗುಬ್ಬಚ್ಚಿ ಇಂದು ಕಣ್ಮರೆಯ ಹಂತದಲ್ಲಿದೆ. . ದೇಹ ಸಣ್ಣದಾಗಿದ್ದರೂ ಇವುಗಳು ನಿಸರ್ಗಕ್ಕೆ ನೀಡುವ ಕಾಣಿಕೆ ಅಪಾರ.  ಬೆಂಗಳೂರಿನಂಥ ಮಹಾನಗರಗಳಲ್ಲಿ ಇವುಗಳು ಹುಡುಕಿದರೂ ಕಾಣುವುದಿಲ್ಲ. ಹೀಗೆ ಕಣ್ಮರೆಯಾದ, ಕಣ್ಮರೆಯಾಗುವ ಹಂತದಲ್ಲಿರುವ ಹಕ್ಕಿಪಕ್ಷಿಗಳೆಷ್ಟೊ. ಇದ್ಯಾವುದರ ಪರಿವೆ ಇಲ್ಲದೇ ಆಧುನಿಕ ಆವಿಷ್ಕಾರಗಳಲ್ಲಿ ಒಂದಾದ ಮೊಬೈಲ್ ಪೋನ್ ಗಳನ್ನು ಬಹು ಆನಂದದಿಂದ ಬಳಸುತ್ತಿದ್ದೇವೆ.

ಆಧುನಿಕ ಆವಿಷ್ಕಾರಗಳನ್ನು ತಳ್ಳಿಹಾಕಲು ಸಾಧ್ಯವಿಲ್ಲ ನಿಜ. ಆದರೆ ಅದರಿದುಂಟಾಗುವ ಅಪಾಯಗಳನ್ನು ಸಾಕಷ್ಟು ಕಡಿಮೆ ಮಾಡುವ ಸಾಧ್ಯತೆಯಂತೂ ಇದ್ದೇಇದೆ. ಆದರೆ ಲಾಭಬಡುಕತನ, ದುರಾಸೆಯ ತುತ್ತತುದಿಯಲ್ಲಿರುವ ಟೆಲಿಕಾಂ ಕಂಪನಿಗಳಿಂದ ಮತ್ತು ಇವುಗಳ ಮೇಲೆ ನಿಯಂತ್ರಣ ಸಾಧಿಸಬೇಕಾದ ಸರ್ಕಾರಗಳ ಭ್ರಷ್ಟತೆ, ಹೊಣೆಗೇಡಿತನದಿಂದ ಇದ್ಯಾವುದೂ ಸಾಧ್ಯವಾಗುತ್ತಿಲ್ಲ. ಪರಿಣಾಮ ಹಕ್ಕಿಪಕ್ಷಿಗಳು ಸಾಯುತ್ತಲೇ ಇವೆ. ನಿಸರ್ಗದ ಮೇಲೆ ಮಾರಕ ಪರಿಣಾಮಗಳು ಉಂಟಾಗುತ್ತಲೇ ಇವೆ. ತಾನು ನಿಸರ್ಗದ ಒಂದು ಅಂಗ. ಇಲ್ಲಿ ಆಗುವ ಯಾವುದೇ ದುಷ್ಪರಿಣಾಮ ತನನ್ನು ಕಾಡುತ್ತದೆ ಎಂಬುದನ್ನು ಮನುಷ್ಯರು ಮರೆತಂತೆ ಕಾಣುತ್ತದೆ. ಈ ಸಂಗತಿಯನ್ನೇ “ 2.0” ಸಿನೆಮಾ, ರೂಪಕಗಳಲ್ಲಿ ಸಮರ್ಥವಾಗಿ ಕಟ್ಟಿಕೊಟ್ಟಿದೆ.

ಅಧಿಕ ಸಾಮರ್ಥ್ಯದ ಮೊಬೈಲ್ ತರಂಗಾಂತರಗಳಿಂದ ಹಕ್ಕಿಪಕ್ಷಿಗಳ ಮೇಲಾಗುತ್ತಿರುವ ದುಷ್ಪರಿಣಾಮ, ಅವುಗಳ ಸಾವು-ನೋವುಗಳ ಬಗ್ಗೆ ಪಕ್ಷಿಶಾಸ್ತ್ರಜ್ಞ ಪಕ್ಷಿರಾಜ್, ಸಂಬಂಧಿಸಿದ ಮಂತ್ರಿಗಳು, ಉದ್ಯಮಿಗಳು ಮತ್ತು ಜನತೆ ಗಮನ ಸೆಳೆಯಲು ಯತ್ನಿಸಿದರೂ ವಿಫಲವಾಗುತ್ತಾರೆ. ಪದೇಪದೇ ಅವಮಾನಕ್ಕೀಡಾಗುತ್ತಾರೆ. ಇವರ ರಿಸರ್ಚ್ ಸೆಂಟರಿನ ಮುಂದಿನ ಅಂಗಳದಲ್ಲಿಯೇ ಮೊಬೈಲ್ ಟವರ್ ಎದ್ದುನಿಲ್ಲುತ್ತದೆ.  ಪಕ್ಷಿಗಳ ಮೊಟ್ಟೆಗಳು ಅಪಕ್ವವಾಗುತ್ತವೆ. ದಿನೇದಿನೇ  ವಿಲವಿಲನೆ ಒದ್ದಾಡಿ ಪ್ರಾಣ ಕಳೆದುಕೊಳ್ಳುವ ಪಕ್ಷಿಗಳ ಸಂಖ್ಯೆ ಹೆಚ್ಚುತ್ತದೆ. ಇದರಿಂದ ನೊಂದ ಪಕ್ಷಿರಾಜ್, ಮೊಬೈಲ್ ಟವರಿಗೆ ನೇಣು ಬಿಗಿದುಕೊಂಡು ಪ್ರಾಣ ಕಳೆದುಕೊಳ್ಳುತ್ತಾರೆ. ಆದರೆ ಅವರ ಹೋರಾಟದ ಕೆಚ್ಚು ಪ್ರೇತಾತ್ಮದ ರೂಪದಲ್ಲಿ ಹೊರಬರುತ್ತದೆ.

ಇಲ್ಲಿ ಬಹಳ ಮುಖ್ಯವಾಗಿ ಗಮನಿಸಬೇಕಾದ್ದು ಮನುಷ್ಯರ ಪ್ರೇತಾತ್ಮಗಳ ಬಗ್ಗೆಗಿನ ಎಲ್ಲೆಡೆ ನಂಬಿಕೆ ಚಾಲ್ತಿಯಲ್ಲಿದೆ. ಆದರೆ ಹಕ್ಕಿಪಕ್ಷಿಗಳ ಆತ್ಮಗಳು ಪ್ರೇತಾತ್ಮಗಳಾಗುತ್ತವೆ ಎಂಬುದಂತೂ ಎಲ್ಲಿಯೂ ಇದ್ದಂತಿಲ್ಲ. ತರಂಗಾಂತರದ ದುಷ್ಪರಿಣಾಮದಿಂದ ಪ್ರಾಣ ಕಳೆದುಕೊಂಡ ಹಕ್ಕಿಪಕ್ಷಿಗಳ ಆತ್ಮಗಳು ಪಕ್ಷಿರಾಜ್ ಆತ್ಮಕ್ಕೆ ಸೇರಿಕೊಂಡು ಬಲ ತುಂಬುತ್ತವೆ. ಇದರಿಂದ ಬಹುಬಲಿಷ್ಠ ಪ್ರೇತಾತ್ಮ ಮೂಡಿ ಅದು ಪಕ್ಷಿರಾಜ ಎಂದೇ ಕರೆಯಿಸಿಕೊಳ್ಳುವ ಗರುಡನ ರೂಪ ತಳೆಯುತ್ತದೆ.

ಇಲ್ಲಿ ಪಕ್ಷಿವಿಜ್ಞಾನಿಯ ಹೆಸರು ಪಕ್ಷಿರಾಜ, ಆತನ ಸಾವಿನ ನಂತರ ತಳೆಯುವ ರೂಪವೂ ಗರುಡನದು. ಇವೆಲ್ಲವೂ ಈ ಸಿನೆಮಾದ ರೂಪಕಗಳು. ಅದರಲ್ಲಿಯೂ ಹಕ್ಕಿಪಕ್ಷಿಗಳ ಆತ್ಮಗಳು ತಮ್ಮ ಒಳಿತನ್ನು ಬಯಸುವ ವ್ಯಕ್ತಿಯ ಪ್ರೇತಾತ್ಮದೊಡನೆ ವಿಲೀನವಾಗುವುದಂತೂ ಅದ್ಬುತ ರೂಪಕ. ಇದು ಮಹಾಶಕ್ತಿಶಾಲಿಯಾದ ರಾಕ್ಷಸನ ವಿರುದ್ಧ ಹೋರಾಡಲು ಎಲ್ಲ ದೇವದೇವಾನುತೆಗಳು ಓರ್ವ ದೇವತೆಗೆ ತಮ್ಮ ಶಕ್ತಿಯನ್ನೆಲ್ಲ ಧಾರೆ ಎರೆದ ಮಾದರಿಯ ರೂಪಕದಂತಿದೆ.

ಇಲ್ಲಿ ಅಧಿಕ ಸಾಮರ್ಥ್ಯದ ಮೊಬೈಲ್ ತರಂಗಾಂತರ ದುರಾಶೆಯ ರೂಪಕವಾಗಿ ಚಿತ್ರಿತವಾಗಿದೆ. ಕಾನೂನುಬಾಹಿರವಾಗಿ ಅಧಿಕ ಸಾಮರ್ಥ್ಯದ ತರಂಗಾಂತರ ಬಳಸುವ ಟೆಲಿಕಾಂ ಉದ್ಯಮಿ, ಮೊಬೈಲ್ ಮಾರಾಟಗಾರ ಮತ್ತು ಇವರೆಲ್ಲರ ಚಟುವಟಿಕೆಗೆ ಪ್ರೋತ್ಸಾಹಕನಾಗಿ ನಿಂತಿರುವ ಟೆಲಿಕಾಂ ಮಂತ್ರಿ ಇವರೆಲ್ಲರು ಮೊಬೈಲ್ ಕಾರಣದಿಂದ ಹೊಟ್ಟೆಯೊಡೆದು ಸಾಯುವುದೂ ರೂಪಕದ ಮಾದರಿ ಅಣಕ.

ಇಲ್ಲಿ ಮನುಷ್ಯರ ಅತ್ಯಾಸೆಯ ಪ್ರತೀಕದಂತಿರುವ ರೋಬೊಟ್ ಚಿಟ್ಟಿ ಮತ್ತು ಈ ದುರಾಶೆಗಳನ್ನು ಅಳಿಸುವ ಪಣತೊಟ್ಟ ಪಕ್ಷಿರಾಜನ ಪ್ರೇತಾತ್ಮದ ಕಾದಾಟವೂ ಸಾಂಕೇತಿಕವೆ. ಇಲ್ಲಿ ಪಕ್ಷಿರಾಜನ ಪ್ರೇತಾತ್ಮ ಸಕಾರಾತ್ಮಕ ಕಾರಣದಿಂದ ಹೋರಾಡುತ್ತಿದ್ದರೂ ಅದರಿಂದ ಮನುಷ್ಯರಿಗೆ ಅಪಾಯವುಂಟಾಗುತ್ತಿದೆ ಎಂಬ ಕಾರಣಕ್ಕೆ  ಅದು ನೆಗೆಟಿವ್ ಪೋರ್ಸ್. ಅಂದರೆ ನಕಾರಾತ್ಮಕ ಶಕ್ತಿ. ಇದರ ಅಂತ್ಯವುಂಟಾಗುವುದು ಸಕಾರಾತ್ಮಕ ಅಂದರೆ ಪಾಸಿಟಿವ್ ತರಂಗಾಂತರಗಳಿಂದ ಎಂಬುದನ್ನು ಗಮನಿಸಬೇಕು. ಇಲ್ಲಿ ನೆಗೆಟಿವ್ ಪೋರ್ಸ್ ಆಗಿರುವ ಮೊಬೈಲ್ ಹೈ ಫ್ರಿಕ್ವೆನ್ಸಿ ಸಿಗ್ನಲ್ ಗಳು, ಇದರ ವಿರುದ್ಧ ಹೋರಾಡುತ್ತಿರುವ ಪಾಸಿಟಿವ್ ಎನರ್ಜಿಯಾದ ಪಕ್ಷಿರಾಜ ನೇಣುಹಾಕಿಕೊಂಡು ಸತ್ತು ನೆಗೆಟಿವ್ ಪೋರ್ಸ್ ಆಗುವುದು. ಈ ಎರಡೂ ನೆಗೆಟಿವ್ ಪೋರ್ಸ್ ನಡುವೆ ಪ್ರವೇಶಿಸುವ ಪಾಸಿಟಿವ್ ಹೈ ಫ್ರಿಕ್ವೆನ್ಸಿ ಸಿಗ್ನಲ್ ಗಳು. ಇದರ ದಿಶೆಯಿಂದ ಪಕ್ಷಿರಾಜನ ಅಂತ್ಯ. ಇವೆಲ್ಲವನ್ನು ನೋಡಿದಾಗ 2.0 ಅದ್ಬುತ ರೂಪಕಗಳಿರುವ ಕಥೆ. ಇದನ್ನು ಅಷ್ಟೇ ಸಮರ್ಥವಾಗಿ ಚಿತ್ರಕತೆಯಾಗಿ ಪರಿವರ್ತಿಸಿ, ಪರಿಣಾಮಕಾರಿ ಸಿನೆಮಾವಾಗಿ ರೂಪಿಸಲಾಗಿದೆ ಎಂಬುದು ಮೆಚ್ಚುಗೆಯ ಸಂಗತಿ.

ಸಿನೆಮಾ 2.0  ಕಥೆ ಬರೆದು, ಚಿತ್ರಕಥೆ ರಚಿಸಿ, ಅಷ್ಟೇ ಸಮರ್ಥವಾಗಿ ನಿರ್ದೇಶಿಸಿರುವ ಎಸ್. ಶಂಕರ್ ಅವರ ಪರಿಶ್ರಮ ಎದ್ದುಕಾಣುತ್ತದೆ. ಇದಕ್ಕೆ ಬಿ. ಜಯಮೋಹನ್ ಅಷ್ಟೇ ಪರಿಣಾಮಕಾರಿಯಾಗಿ ಸಂಭಾಷಣೆ ಬರೆದಿದ್ದಾರೆ. ಇಂಥ ಸಿನೆಮಾಗಳ ಸಂಕಲನಕಾರ್ಯ ಮಾಡುವುದು ಬಹುಸವಾಲಿನ ಕೆಲಸ. ಇದನ್ನು ಸ್ವೀಕರಿಸಿರುವ ಅಂತೋನಿ ತಮ್ಮ ಜವಾಬ್ದಾರಿ ನಿರ್ವಹಿಸಿದ್ದಾರೆ. ನೀರವ್ ಶಾ ಅವರು ಛಾಯಾಗ್ರಹಣವೂ ಸಿನೆಮಾ ಕಥೆಗೆ ಪೂರಕವಾಗಿರುವಂತೆ ನೋಡಿಕೊಂಡಿದ್ದಾರೆ. ಪೂರಕ ಸಂಗೀತ ನೀಡಿರುವ ಎ.ಆರ್. ರೆಹಮಾನ್ ಶ್ರಮವೂ ಗಮನ ಸೆಳೆಯುತ್ತದೆ.

ರಜನೀಕಾಂತ್ ಅವರು ರೋಬೊಟಿಕ್ಸ್ ವಿಜ್ಞಾನಿಯ ಪಾತ್ರವನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ. ಎಲ್ಲಿಯೂ ಅವರು ಈ ಪಾತ್ರದಲ್ಲಿ ತಮ್ಮ ಮಾಮೂಲಿ ಮ್ಯಾನರಿಸಂಗಳನ್ನು ಪ್ರದರ್ಶಿಸಿಲ್ಲ. ಇವರೇ ಸೆಕೆಂಡ್ ಎಡಿಷನ್ ರೋಬೊಟ್ ಚಿಟ್ಟಿಯ ಪಾತ್ರ ನಿರ್ಹಣೆ ಮಾಡಿದ್ದಾರೆ. ಇಲ್ಲಿಯೂ ಮಾಮೂಲಿ ಮ್ಯಾನರಿಸಂಗಳಿಲ್ಲ. ಈ ಚಿಟ್ಟಿಯ ಡಿಸ್ ಮ್ಯಾಂಟೆಲ್ ಆದ ನಂತರ ಹೊಸದಾಗಿ ರೂಪುಗೊಳ್ಳುವ ರೋಬೋ ಪಾತ್ರದಲ್ಲಿ ರಜನಿ ಖಂಡಿತವಾಗಿ ಒಂದು ಮಿಂಚು. ತಮ್ಮ ಅಭಿನಯದ ಪ್ರಖರತೆಯನ್ನು ಇಲ್ಲಿ ಜಳಪಿಸಿದ್ದಾರೆ.

ಪಕ್ಷಿರಾಜನ ಪಾತ್ರ ಮಾಡಿರುವ ಅಕ್ಷಯ್ ಕುಮಾರ್ ನಟನೆ ಮನೋಜ್ಞ. ಇವರ ಅಭಿನಯ ಸಿನೆಮಾದ ಬಹುದೊಡ್ಡ ಹೈಲೈಟ್. ರೋಬೊಟ್ ನೀಲಾ ಆಗಿರುವ ಅಮಿ ಜಾಕ್ಸನ್ ತಮ್ಮ ಪಾತ್ರದ ಸೀಮಿತತೆ ಅರಿತು ನಟಿಸಿದ್ದಾರೆ. ಇತರ ಪೋಷಕ ಪಾತ್ರಗಳ ನಟನಟಿಯರ ಅಭಿನಯವೂ ಅಗತ್ಯ ಚೌಕಟ್ಟು ದಾಟಿಲ್ಲ. ಈ ಮಾದರಿ ಸಿನೆಮಾಕ್ಕೆ ಬಹುಕೋಟಿ ರೂಗಳನ್ನು ವೆಚ್ಚಮಾಡಿದ್ದ ನಿರ್ಮಾಪಕ ಎ. ಸುಭಾಸ್ಕರನ್ ಧೈರ್ಯ ಮೆಚ್ಚಬೇಕು. ಅವರ ಆತ್ಮವಿಶ್ವಾಸ ಹುಸಿಯಾಗಿಲ್ಲ.

ಬಹುಸಮರ್ಥವಾಗಿ ತಂತ್ರಜ್ಞಾನಗಳ ದುಷ್ಪರಿಣಾಮಗಳ ಆಯಾಮಗಳು, ಭ್ರಷ್ಟತೆಯ ಪರಿಣಾಮಗಳು ಇವೆಲ್ಲದರಿಂದ ಭೂ ಕುಲಕ್ಕೆ ಉಂಟಾಗುತ್ತಿರುವ ಅಪಾಯಗಳನ್ನು  ಹೇಳಿರುವ 2.0 ಸಿನೆಮಾವನ್ನು ಶಾಲಾ ವಿದ್ಯಾರ್ಥಿಗಳಿಗೆ ತೋರಿಸಬೇಕಾದ ಅವಶ್ಯಕತೆ ಇದೆ. ಇದರಿಂದ ಮುಂದೆ ಭೂಮಿಯ ಎಲ್ಲಜೀವಿಗಳ ಹಿತವನ್ನು ಗಮನದಲ್ಲಿಟ್ಟುಕೊಳ್ಳುವ ಆಡಳಿತಗಾರರು, ಉದ್ಯಮಿಗಳು, ವಿಜ್ಞಾನಿಗಳ ಸಂಖ್ಯೆ ಹೆಚ್ಚಾಗಬಹುದು.

Similar Posts

Leave a Reply

Your email address will not be published. Required fields are marked *