Kannadaಮಾಧ್ಯಮ

ಅರ್ಥಪೂರ್ಣ ನಗುವಿನ ಮನುಷ್ಯ ಎನ್.ಎಸ್. ಶಂಕರ್

ಎನ್.ಎಸ್. ಶಂಕರ್ ಅವರದು ಅರ್ಥಪೂರ್ಣ ನಗು. ಈ ಥರ ನಗುವವರು ಅಪರೂಪ. ಅವರು ಜೋರಾಗಿ ನಕ್ಕಿದ್ದು ಅಪರೂಪ! ಎದುರುಗೊಂಡಾಗ “ಹೇಗಿದ್ದೀರಿ ಕುಮಾರ್” ಎಂದು ನಗು ಮಿಶ್ರಿತವಾಗಿ ಮಾತು ಆರಂಭಿಸುತ್ತಿದ್ದರು. ಚರ್ಚೆಯ ಸಂದರ್ಭದಲ್ಲಿ ಆಯಾ ಸನ್ನಿವೇಶಕ್ಕೆ ತಕ್ಕಂತೆ ನಗುವಿನ ಮೂಲಕವೇ ಪ್ರತಿಕ್ರಿಯೆ ನೀಡುತ್ತಿದ್ದರು. ನಮ್ಮ ನಡುವಿನ ಸಾಹಿತಿ, ಕಲಾವಿದ, ಪತ್ರಕರ್ತರ ಬಗ್ಗೆ ಮಾತು ಬಂದಾಗಲೆಲ್ಲ ನಗುವಿನ ಮೂಲಕವೇ ಮಾತು ಆರಂಭಿಸಿ ನಗುವಿನಿಂದಲೇ ಮುಕ್ತಾಯಗೊಳಿಸುತ್ತಿದ್ದರು. ಅವರ ಆರಂಭದ ನಗುವೇ ಒಂದು ಹೊಳವು ಕೊಡುತ್ತಿತ್ತು. ಅವರ ಮುಕ್ತಾಯ ನಗುವೇ ಮೊದಲ ನಗುವಿಗೆ ಸ್ಪಷ್ಟತೆ ನೀಡುತ್ತಿತ್ತು!
ಟೆವಿ ಪತ್ರಿಕೋದ್ಯಮದಿಂದ ಕೊಂಚಕಾಲ ಬಿಡುವು ಪಡೆದುಕೊಂಡಿದ್ದೆ. ಮತ್ತೆ ಟಿವಿ ಜರ್ನಲಿಸಂಗೆ ಮರಳಬೇಕು ಎನಿಸಿತು. ಹಿರಿಯ ಪತ್ರಕರ್ತ ಶಶಿಧರ್ ಭಟ್ ಅವರು “ಸುದ್ದಿ” ಟಿವಿ ಆರಂಭಿಸಿದ್ದರು. ಇವರ ಪ್ರಧಾನ ಸಂಪಾದಕತ್ವದ “ಸುವರ್ಣ ನ್ಯೂಸ್” ಟಿವಿಯಲ್ಲಿ ಕೆಲಸ ಮಾಡಿದ್ದೆ. ಇಲ್ಲಿಗೆ ಸೇರುವುದಕ್ಕೂ ಮೊದಲು ಇವರ ಬ್ಲಾಗ್ ಬರೆಹಗಳ ಖಾಯಂ ಓದುಗ!. ಈಗಲೂ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಕಟವಾಗುವ ಅವರ ಬರೆಹ ಓದುವುದನ್ನು ತಪ್ಪಿಸಿಕೊಳ್ಳುವುದಿಲ್ಲ. ಇವರನ್ನು ಭೇಟಿಯಾದೆ. “ನೀವೊಮ್ಮೆ ಎನ್.ಎಸ್. ಶಂಕರ್ ಅವರನ್ನು ಮಾತನಾಡಿಸಿ” ಎಂದವರೇ ಪೋನಿನಲ್ಲಿ “ಕುಮಾರ್ ಭೇಟಿಯಾಗಲು ಬರುತ್ತಾರೆ” ಎಂದರು.
ಒಂದೆರಡು ಕ್ಯಾಬಿನ್ ಪಕ್ಕದ್ದೇ ಶಂಕರ್ ಅವರ ಕ್ಯಾಬಿನ್! ಬಾಗಿಲು ತೆರೆಯುತ್ತಿದ್ದಂತೆ ನಗು ಮಿಶ್ರಿತವಾಗಿ “ಬನ್ನಿ ಕುಮಾರ್” ಎಂದರು. ಒಂದಿಷ್ಟು ಮಾತಾದ ಮೇಲೆ ಇತ್ತೀಚೆಗೆ ನೀವು ಮಾಡಿರುವ ವರ್ಕ್ ಇದ್ದರೆ ತೆಗೆದುಕೊಂಡು ಬನ್ನಿ” ಎಂದರು. ಕೃಷಿ ಡಾಕ್ಯುಮೆಂಟರಿ ತೆಗೆದುಕೊಂಡು ಹೋಗಿ ಕೊಟ್ಟು ಬಂದಿದ್ದೆ. ಒಂದೆರಡು ದಿನದ ನಂತರ ಅವರದ್ದೇ ಪೋನ್! ʼಬಂದು ಜಾಹಿನ್ ಆಗಿ” ಎಂದರು.
ಸುದ್ದಿಟಿವಿಯಲ್ಲಿ ಎನ್.ಎಸ್. ಶಂಕರ್ ಎಡಿಟೋರಿಯಲ್ ಅಡ್ವೈಸರ್. ಇವರು ಮತ್ತು ಶಶಿಧರ್ ಭಟ್ ಇರುತ್ತಿದ್ದ ರಾಜಕೀಯ ಸಂವಾದಗಳು ಅನೇಕ ವಿಚಾರಗಳ ದರ್ಶನ ಮಾಡಿಸುತ್ತಿದ್ದವು. ಶಂಕರ್ ಅವರದು ತೀಷ್ಣ ಗಮನಿಸುವಿಕೆ. “ಸುದ್ದಿಟಿವಿ”ಯ ಬಹುತೇಕ ಎಲ್ಲ ಕಾರ್ಯಕ್ರಮಗಳನ್ನು ವಿಮರ್ಶಾತ್ಮಕವಾಗಿ ನೋಡುತ್ತಿದ್ದರು. ಕಾರ್ಯಕ್ರಮದ ರೂಪುರೇಷೆ ಹೇಗಿರಬೇಕು ಎಂದು ಸೂಚಿಸುತ್ತಿದ್ದರು. ಸಣ್ಣತಪ್ಪು ಸಹ ಅವರ ಕಣ್ತಪ್ಪಿಸಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಬ್ರೇಕಿಂಗ್ ನ್ಯೂಸ್, ಸ್ಕ್ರಾಲಿಂಗ್ ನಲ್ಲಿ ಕಾಗುಣಿತ ತಪ್ಪಿದ್ದರೆ ಕ್ಯಾಬಿನ್ ನಿಂದ ಓಡಿ ಬಂದು ಸಂಬಂಧಿಸಿದವರಿಗೆ ಸರಿ ಮಾಡಲು ಹೇಳುತ್ತಿದ್ದರು.
ಆಫೀಸಿನಲ್ಲಿ ಕಾಫಿ ಮೇಷಿನ್ ಇತ್ತು. ಅದರ ಕಾಫಿ ಕುಡಿಯುತ್ತಿದ್ದದ್ದು ತೀರಾ ಅಪರೂಪ. ಕಾಫಿಗೆಂದು ಹೊರಗೆ ಹೋಗುವಾಗ “ಕುಮಾರ್ ಬನ್ನಿ” ಎಂದು ಕರೆಯುತ್ತಿದ್ದರು. ಎಡಿಟೋರಿಯಲ್ ಡೆಸ್ಕ್ ತುದಿಯಲ್ಲಿ ಪತ್ರಕರ್ತ ಪ್ರದೀಪ್ ಮಾಲ್ಗುಡಿ ಕುಳಿತಿರುತ್ತಿದ್ದರು. “ಅವರನ್ನೂ ಕರೆಯಿರಿ” ಎನ್ನುತ್ತಿದ್ದರು. ಗಾಸಿಪ್ ಅವರ ಬಳಿ ಸುಳಿಯುತ್ತಿರಲಿಲ್ಲ. ಈರ್ಷೆ, ದ್ವೇಷ, ಅಸೂಯೆ ಎಂಬುದೂ ಅವರ ಬಳಿ ಸುಳಿಯಲು ಹೆದರುತ್ತಿದ್ದವು. ನಾವು ಮಾತನಾಡುವುದಕ್ಕಿಂತ ಅವರ ಮಾತು ಕೇಳುವುದು ಖುಷಿಯಾಗುತ್ತಿತ್ತು. ಯಾವುದೇ ವಿಚಾರ ಮಾತನಾಡಿದರೂ ತಳಸ್ಪರ್ಶಿಯಾಗಿ ಮಾತನಾಡುತ್ತಿದ್ದರು.
೨೦೧೭ರ ಜೂನ್ ಕೊನೆಯ ವಾರ. “ಸುದ್ದಿಟಿವಿ” ಬಿಟ್ಟರು. ನನ್ನ ಜೊತೆಗೆ ಮಾತನಾಡುವಾಗ ಇದರ ಸುಳಿವು ನೀಡಿದ್ದರು. ಆದರೆ ಖಚಿತತೆ ಇರಲಿಲ್ಲ. ಇದಾದ ಮೇಲೆ ೨೦೧೭ರ ಜುಲೈ ೨ನೇ ತಾರೀಖು ನಾನು, ಪ್ರದೀಪ್ ಮಾಲ್ಗುಡಿ ಅವರು ಶಂಕರ್ ಮನೆಗೆ ಹೋದೆವು. ಸುದ್ದಿಟಿವಿ ಬಿಟ್ಟಿದ್ದನ್ನು ಅವರು ಮನಸಿಗೆ ಹಚ್ಚಿಕೊಂಡಿರಲಿಲ್ಲ. “ಕರೆದರು ಹೋದೆ, ಬೇಡ ಎಂದರು ಬಂದೆ” ಎಂದಷ್ಟೆ ಹೇಳಿದರು
ಅವರೊಂದಿಗಿನ ನಿಕಟ ಸಂಪರ್ಕ ಕಡಿತವೇನೂ ಆಗಲಿಲ್ಲ. “ಆಲಿಸಿರಿ” ಆಡಿಯೋ ಬುಕ್ ಗೆ ನಾನು ಸೇರಿದಾಗ ಅವರ ಪುಸ್ತಕಗಳನ್ನು ಬಹು ಪ್ರೀತಿಯಿಂದ ಕೊಟ್ಟಿದ್ದರು. ಇದಕ್ಕೂ ಮೊದಲೇ ಅವರು ಬರೆದಿದ್ದ ಎಲ್ಲ ಪುಸ್ತಕಗಳನ್ನು ಓದಿದ್ದೆ. ಪ್ರತಿಗಳು ಮುಗಿದಿದ್ದು ಹೊರಗೆ ಖರೀದಿಗೆ ಲಭ್ಯವಿಲ್ಲದಿದ್ದ ಪುಸ್ತಕ ನೀಡುವಾಗ “ಹುಷಾರು, ಇದೊಂದೇ ಕಾಪಿ ಇರೋದು” ಅಂತೇಳಿ ಕೊಡುತ್ತಿದ್ದರು. ಓದಿ ಜತನವಾಗಿ ವಾಪಸು ನೀಡುತ್ತಿದ್ದೆ.‌ ಅವರ ಒಂದೆರಡು ಪುಸ್ತಕಗಳ ವಿಮರ್ಶೆಯನ್ನು ಬ್ಲಾಗಿನಲ್ಲಿ ಬರೆದಿದ್ದೆ! ಅವರು ಬರೆಯುತ್ತಿದ್ದ ವ್ಯಕ್ತಿ ಚಿತ್ರಗಳನ್ನು ಓದುವುದು ನನಗೆ ಇಷ್ಟ! ಓದಿದಾಗಲೆಲ್ಲ ಹೇಳುತ್ತಿದ್ದೆ. ಮುಗುಳ್ನಗುತ್ತಿದ್ದರು. ವಡ್ಡರ್ಸೆ ರಘುರಾಮಶೆಟ್ಟರ ಪ್ರಧಾನ ಸಂಪಾದಕತ್ವದಲ್ಲಿ ಆರಂಭವಾಗಿ, ಅಲ್ಪಯುಷಿಯಾದ “ಮುಂಗಾರು” ಪತ್ರಿಕೆ ದಿನಗಳನ್ನು ನೆನಪು ಮಾಡಿಕೊಳ್ಳುತ್ತಿದ್ದರು. ಹಿರಿಯ ಪತ್ರಕರ್ತ ಚಿದಂಬರ ಬೈಕಂಪಾಡಿ ಅವರು “ಮುಂಗಾರು”ಪತ್ರಿಕೆಯಲ್ಲಿ ಕೆಲಸ ಮಾಡಿದ್ದರ ಅವಧಿಯ ಬಗ್ಗೆ ಪುಸ್ತಕ ಬರೆದಿದ್ದಾರೆ. ಅದರ ಬಗ್ಗೆ ನನ್ನ ಬ್ಲಾಗಿನಲ್ಲಿ ಪರಿಚಯಾತ್ಮಕ ಲೇಖನ ಬರೆದಿದ್ದೆ. ಅದರ ಪ್ರಸ್ತಾಪವಾದಾಗ ಮುಂಗಾರು ಬಗ್ಗೆ ತುಸು ದೀರ್ಘವಾಗಿಯೇ ಮಾತನಾಡಿದ್ದರು.
ಆಗಾಗ ಬಸವೇಶ್ವರ ನಗರದ ಸಿದ್ದಯ್ಯ ಪುರಾಣಿಕ್ ರಸ್ತೆಯ ಹೋಟೆಲಿನಲ್ಲಿ ಕಾಫಿ ಕುಡಿಯಲು ಭೇಟಿಯಾಗುತ್ತಿದ್ದವು. ಮುಂದೆ “ಸುದ್ದಿಟಿವಿ” ನಿಂತು ಹೋಯಿತು. ಒಂದಿಬ್ಬರು ನನ್ನ ಸಂಪಾದಕತ್ವದಲ್ಲಿ ನ್ಯೂಸ್ ಚಾನೆಲ್ ಆರಂಭಿಸಲು ಆಸಕ್ತಿ ತೋರಿದರು. ಆಗ ಶಂಕರ್ ಅವರನ್ನು ಸಂಪರ್ಕಿಸಿ “ಏನಾದರೂ ಮಾಡೋಣ ಸರ್” ಎಂದಿದ್ದೆ. “ಆಗಲಿ, ನೋಡೋಣ” ಎಂದಷ್ಟೇ ಹೇಳಿದ್ದರು. ಆದರೆ ಆ ಯೋಜನೆ ಸೆಟ್ಟೆರಲೇಯಿಲ್ಲ!
ಆಗಷ್ಟೇ ಕೋವಿಡ್ ಕಾಲ ಮುಗಿಯುತ್ತಾ ಬಂದಿತ್ತು. ನಾನಾಗ ನಾಗರಬಾವಿಯಲ್ಲಿದ್ದೆ. ಒಂದು ದಿನ ಕಾಲ್ ಮಾಡಿದವರೇ “ಕುಮಾರ್ ನಿಮ್ಮ ಏರಿಯಾದಲ್ಲಿ ಖಾಲಿ ಮನೆ ಕಂಡರೆ ತಿಳಿಸಿ” ಎಂದಿದ್ದರು. ಆಗ ನಾನು ಸಾಮಾನ್ಯವಾಗಿ ಓಡಾಡುವ ರಸ್ತೆಗಳಲ್ಲಿದ್ದ “ಮನೆ ಖಾಲಿ ಇದೆ” ಫಲಕವಿದ್ದ ಮನೆಗಳನ್ನು ಗುರುತು ಹಾಕಿಕೊಂಡು ಅವರನ್ನು ಕರೆದಿದ್ದೆ. ನನ್ನ ಹಳೆಯ ಅಪಾಚೆ ಬೈಕ್ ಹತ್ತುವಾಗ “ಸೀಟು ತುಂಬ ಹೈಟಿದೆ” ಎಂದೇಳಿ ಹತ್ತಲು ಪ್ರಯಾಸಪಟ್ಟಿದ್ದರು! ಮೆಟ್ಟಿಲು ಪಕ್ಕ ಬೈಕ್ ನಿಲ್ಲಿಸಿ ಅವರನ್ನು ಹತ್ತಿಸಿಕೊಂಡಿದ್ದೆ. ಒಂದಷ್ಟು ಖಾಲಿ ಮನೆಗಳ ಒಳಹೊಕ್ಕು ನೋಡಿದೆವು. ಕೆಲವು ಸಣ್ಣವು, ಕೆಲವು ತುಂಬ ದೊಡ್ಡವು. ಅವರಿಗೊಪ್ಪುವ ಮನೆ ದೊರಕಿರಲಿಲ್ಲ.
ಸಾಹಿತ್ಯ, ಪತ್ರಿಕೋದ್ಯಮದಂತೆ ಸಿನಿಮಾ ಅವರ ಬಹುದೊಡ್ಡ ಆಸಕ್ತಿಯ ಕ್ಷೇತ್ರ. ಎನ್.ಎಸ್. ಶಂಕರ್ ನಿರ್ದೇಶನದ ಚಿತ್ರ “ಉಲ್ಟಾಪಲ್ಟಾ” ನೋಡಿರದ ಕನ್ನಡಿಗರೇ ಇಲ್ಲವೇನೂ ಎನ್ನುವಷ್ಟು ಮಟ್ಟಿಗೆ ಆ ಸಿನಿಮಾ ಜನಪ್ರಿಯ! ನನಗೂ ಸಿನಿಮಾ ಆಸಕ್ತಿ ವಿಷಯ! ಫಿಲ್ಮ್ ಫೆಸ್ಟಿವಲ್ ಗಳ ಆರಂಭಕ್ಕೆ ಮುನ್ನ ಅವರಿಗೆ ನನ್ನ ಪೋನ್ ಇದ್ದೇ ಇರುತ್ತಿತ್ತು. “ನೀವು ಆಯ್ಕೆ ಮಾಡಿಕೊಂಡ ಸಿನಿಮಾಗಳ ಬಗ್ಗೆ ತಿಳಿಸಿ” ಎಂದರೆ “ಒಂದೆರಡಷ್ಟೆ ಗುರುತು ಹಾಕಿಕೊಂಡಿದ್ದೇನೆ” ಎಂದು ವಿವರ ಹೇಳುತ್ತಿದ್ದರು. ಫೆಸ್ಟಿವಲ್ ನಡೆಯುವಾಗ ಭೇಟಿಯಾಗುತ್ತಿದ್ದೆ. “ಯಥಾ ಪ್ರಕಾರ ಸಿನಿಮಾದ್ದೇ ಮಾತು”
ಸಾಮಾಜಿಕ ಜಾಲತಾಣದಲ್ಲಿಯೂ ಸಕ್ರಿಯರಾಗಿದ್ದ ಅವರು ತಮ್ಮ ಆತ್ಮೀಯ ವಲಯದಲ್ಲಿದ್ದವರ ಪೋಸ್ಟ್ ಗಳನ್ನು ಗಮನಿಸುತ್ತಿದ್ದರು. ಒಮ್ಮೆ ಕಾಲ್ ಮಾಡಿ “ಏಕೆ ಕುಮಾರ್ ಹುಷಾರಿಲ್ವ, ತುಂಬ ಸಣ್ಣಗಾಗಿದ್ದೀರಿ” ಎಂದರು. ಫೇಸ್ಬುಕ್ಕಿನಲ್ಲಿ ಸೈಕಲ್ ತುಳಿಯುತ್ತಿರುವ ಚಿತ್ರ ಹಾಕಿದ್ದೆ. ಅದನ್ನು ನೋಡಿ ಕಾಲ್ ಮಾಡಿದದ್ರು. ಆಗ ಅನಾರೋಗ್ದದ ಕಾರಣ ತುಂಬ ಸೊರಗಿದ್ದೆ. “ ಆರೋಗ್ಯ ನೋಡಿಕೊಳ್ಳಿ” ಎಂದೇಳಿದ್ದರು.
ಒಂದು ವರ್ಷದ ಹಿಂದೆ ಕರ್ನಾಟಕ ಸರ್ಕಾರದ EMPRI ಅವರು ಪತ್ರಕರ್ತರಿಗಾಗಿ ಪರಿಸರ ಕಾರ್ಯಾಗಾರ ಆಯೋಜಿಸಿದ್ದರು. ನಾನು ಶಿಬಿರಾರ್ಥಿಯಾಗಿದ್ದೆ. ಎನ್.ಎಸ್. ಶಂಕರ್ ಅವರು ಉಪನ್ಯಾಸ ನೀಡಲು ಬಂದಿದ್ದರು. ಅವರು ಯಾವುದೇ ಕಾರ್ಯಕ್ರಮಕ್ಕೂ ವಿಳಂಬವಾಗಿ ಹೋಗುತ್ತಿರಲಿಲ್ಲ. ಅಂದು ತುಸು ಹೊತ್ತಿಗೆ ಮುಂಚೆ ಬಂದಿದ್ದರು. ಇಬ್ಬರೂ ಊಟ ಮಾಡುತ್ತಾ ಒಂದಷ್ಟು ವಿಷಯ ಮಾತನಾಡಿದೆವು.
೨೦೨೬ರ ಜನವರಿ – ಫೆಬ್ರವರಿಯಲ್ಲಿ ಲುಲು ಮಾಲಿನಲ್ಲಿ ಆಯೋಜಿತವಾಗಿದ್ದ ಫಿಲಂ ಫೆಸ್ಟಿವಲ್ ಅನ್ನು ಅಟೆಂಡ್ ಮಾಡಿದ್ದರು. ಅಷ್ಟರಲ್ಲಾಗಲೇ ಅವರ ಪತ್ನಿ ಉಮಾರಾಣಿ ಅವರು ಅನಾರೋಗ್ಯದಿಂದ (ಜನವರಿ ೨೪, ೨೦೨೬) ಮೃತರಾಗಿದ್ದರು. ಅವರ ಅಗಲಿಕೆ ಶಂಕರ್ ಅವರನ್ನು ತೀವ್ರವಾಗಿ ಬಾಧಿಸುತ್ತಿತ್ತು. ಇದೀಗ ಎನ್.ಎಸ್. ಶಂಕರ್ ತಮ್ಮ ಪತ್ನಿ ಹಾದಿಯನ್ನೇ ಹಿಂಬಾಲಿಸಿದ್ದಾರೆ. ಇವರಿಬ್ಬರದ್ದೂ ಸಾಯುವ ವಯಸ್ಸಾಗಿರಲಿಲ್ಲ. ಆದರೇನು ಸಾವಿಗೆ ಲೆಕ್ಕಾಚಾರವಿಲ್ಲ!

Leave a Reply

Your email address will not be published. Required fields are marked *

error: Content is protected !!