ನೀರ ಮೇಲಿನ ಗುಳ್ಳೆ ನಿಜವಲ್ಲ ಹರಿಯೇ
ರೇವ್ ಪಾರ್ಟಿಯಲ್ಲಿ ಭಾಗವಹಿಸಲು ಹೋಗಿ ಕಾಣೆಯಾದ ಮಗಳು ಮಾರಿಯಾ, ಅವಳನ್ನು ಹುಡುಕುತ್ತಿರುವ ತಂದೆ, ಮತ್ತವಳ ಕಿರಿಯ ಸಹೋದರ, ರೇವ್ ಪಾರ್ಟಿ ನಶೆ, ಮದ್ಯ, ಮಾದಕ ದ್ರವ್ಯಗಳು ಮತ್ತು ಸೆಕ್ಸ್ ಮೂಲಕ ನೆಮ್ಮದಿ ಅರಸುತ್ತಿರುವ ಅಲೆಮಾರಿ ರೇವರ್ಸ್ (nomadic rave) ಗಳ ಜರ್ನಿಯ ಕಥನವನ್ನು ಸ್ಪೈನ್ ದೇಶದ ಸ್ಪ್ಯಾನಿಷ್ ಭಾಷೆಯ “ಸಿರತ್” (Sirat)ಹೊಂದಿದೆ.
ಅಧ್ಯಾತ್ಮಿಕತೆ ಬಗ್ಗೆ ಭಾಷಣ ಬಿಗಿಯಾದೇ, ವಾಚ್ಯವಾಗದೇ ಅದನ್ನು ಕಥನದ ಮೂಲಕವೇ ಹೇಳುತ್ತಾ ಸಾಗುವ ಸಿರತ್ ದಾಟಿಸುವ ಸಂದೇಶ ದಂಗುಬಡಿಸುತ್ತದೆ. ಅದರ ಹ್ಯಾಂಗೋವರ್, ದುಗುಡತೆ ಬಹುದಿನಗಳು ಆವರಿಸುವಂತೆ ಮಾಡುತ್ತದೆ.
ಮಾರಿಯಾ ಪಟ ಹಿಡಿದುಕೊಂಡು ದಕ್ಷಿಣ ಮೊರಕ್ಕೋದ ಸಹರಾ ಮರಳುಗಾಡಿನಲ್ಲಿ ಆಯೋಜಿತವಾಗಿದ್ದ ರೇವ್ ಪಾರ್ಟಿಗೆ ಲೂಯಿಸ್ ((Sergi López)ಮತ್ತಿವನ ಮಗ ಎಸ್ತೆಬಾನ್ ಬರುತ್ತಾರೆ. “ನನ್ನ ಮಗಳನ್ನು ಕಂಡಿರಾ, ನನ್ನ ಸಹೋದರಿಯನ್ನು ಕಂಡಿರಾ” ಎಂದು ವಿಚಾರಿಸುತ್ತಾ ಸಾಗುತ್ತಾರೆ. ಯಾರೂ ಕಂಡಿದ್ದೇವೆ ಎನ್ನುವುದಿಲ್ಲ. ಕಳೆದುಕೊಂಡಿದ್ದನ್ನು ಕಳೆದುಕೊಂಡಲ್ಲೇ ಹುಡುಕಬೇಕು ಎನ್ನುವಂತೆ ಯಾವುದಾದರೊಂದು ರೇವರ್ಸ್ (Ravers) ಗುಂಪಿನಲ್ಲಿ ಮಾರಿಯಾ ಸಿಕ್ಕೇ ಸಿಗುತ್ತಾಳೆ ಎಂದು ನಂಬಿರುತ್ತಾರೆ.
ಅಲೆಮಾರಿ ರೇವರ್ಸ್ ಜೊತೆಗೆ ಪಯಣ ಸಾಗುತ್ತದೆ. ಪೊಲೀಸ್, ಮಿಲಿಟರಿ ಕಣ್ತಪ್ಪಿಸುತ್ತಾ ಇವರ ದಾರಿ ಸಾಗುತ್ತದೆ. ಸಹರಾ ಮರಳುಗಾಡಿನಲ್ಲಿ ಬಹುದೂರಕ್ಕೆ ಸಾಗುತ್ತಾರೆ. ಈ ಹಾದಿಯಲ್ಲಿ ಅನಿರೀಕ್ಷಿತವಾಗಿ ಒಬ್ಬೊಬ್ಬರೇ ಹಿಂದಿರುಗಿ ಬಾರದ ಹಾದಿಗೆ ಪಯಣಿಸುತ್ತಾರೆ.
ಈ ಪಯಣವನ್ನು ಸಿನಿಮಾ ದಂಗು ಬಡಿಯುವಂತೆ ಕಟ್ಟಿಕೊಡುತ್ತದೆ. ಬದುಕಿನ ಕ್ಷಣಿಕತೆ, ನಶ್ವರತೆಯನ್ನು ಪ್ರತಿಪಾದಿಸುತ್ತದೆ. ಪುರಂದರ ದಾಸರ “ ಯಾರಿಗೆ ಯಾರುಂಟು ಎರವಿನ ಸಂಸಾರ; ನೀರ ಮೇಲಣ ಗುಳ್ಳೆ ನಿಜವಲ್ಲ ಹರಿಯೇ” ಎನ್ನುವುದರ ತಾತ್ವಿಕತೆಯನ್ನೇ ಅಕ್ಷರಶಃ ಹೇಳುತ್ತದೆ. ಇಸ್ಲಾಮಿಕ್ eschatologyಯಲ್ಲಿ “Sirāt” ಎಂದರೆ ಸ್ವರ್ಗ-ನರಕ ಸಂಪರ್ಕಿಸುವ ಸೇತುವೆ ಎಂದರ್ಥ. (ಈ ಸೇತುವೆ ಕೂದಲಿಗಿಂತ ತೆಳು, ಖಡ್ಗಕ್ಕಿಂತ ಹರಿತ). ಇದು ಜೀವನದ ಪ್ರಯಾಣ, ನಿರ್ಣಯ ಮತ್ತು ಮಾನವ ದೌರ್ಬಲ್ಯಗಳನ್ನು ಸಂಕೇತಿಸುತ್ತದೆ ಎನ್ನಲಾಗುತ್ತದೆ. ರೇವ್ (Rave) ಉತ್ಸಾಹದೊಂದಿಗೆ ಆರಂಭವಾಗುವ ಸಿನಿಮಾ ಪಯಣ ಸಾಗುತ್ತಿದ್ದಂತೆ ಅಧ್ಯಾತ್ಮಿಕತೆ (metaphysica) ಆಗಿ ಬದಲಾಗುವ ಪರಿ ಅಚ್ಚರಿ – ದಿಗ್ಬ್ರಮೆ – ವಿಷಾದ ಮೂಡಿಸುತ್ತದೆ.
ಫ್ರೆಂಚ್-ಸ್ಪ್ಯಾನಿಷ್ ಡೈರೆಕ್ಟರ್ ಒಲಿವರ್ ಲ್ಯಾಕ್ಸೆ ಚಿತ್ರವನ್ನು ಕಟ್ಟಿರುವ ರೀತಿ ಅನನ್ಯ ! ಈತ ಮತ್ತು ಸ್ಯಾಟಿಯಾಗೋ ಪಿಲೊಲ್ ರಚಿಸಿರುವ ಚಿತ್ರಕಥೆ ಅತೀ ಬಿಗಿಯಾಗಿದೆ. ಇದರಿಂದಾಗಿಯೇ ಸಿನಿಮಾದಲ್ಲಿ ಅನಗತ್ಯವಾದ ಒಂದೇ ಒಂದು ದೃಶ್ಯ, ಮಾತಿಲ್ಲ !!
ಸಂಗೀತ ನಿರ್ದೇಶಕ ಕಾಂಗ್ಡಿಂಗ್ ರೇ ನೀಡಿರುವ ಸಂಗೀತ, ಉತ್ಸಾಹ ಮತ್ತು ದುಗುಡತೆಯನ್ನು ಆಳವಾಗಿ ಕಟ್ಟಿಕೊಡುತ್ತದೆ. ಮೌರೊ ಹೆರ್ಸೆ ಮಾಡಿರುವ ಛಾಯಾಗ್ರಹಣ ದೃಶ್ಯಕಾವ್ಯವೇ ಆಗಿದೆ. ಕಾಣುವ ಸುಂದರತೆ ಹಿಂದೆ ಸಾವು ಇರಬಹುದು ಎಂದು ಹೇಳುತ್ತಿರಬಹುದು ಎನಿಸುತ್ತದೆ.
ಸಿನಿಮಾದಲ್ಲಿ ಅಭಿನಯಿಸಿರುವ ಕಲಾವಿದರಾದ ಸೆರ್ಗಿ ಲೋಪೆಜ್, ಬ್ರೂನೋ ನೂನೆಜ್ ಅರ್ಜೋನಾ, ರಿಚರ್ಡ್ ಬೆಲ್ಲಾಮಿ, ಸ್ಟೆಫಾನಿಯಾ ಗಡ್ಡಾ, ಜೋಶುವಾ ಲಿಯಾಮ್ ಹೆಂಡರ್ಸನ್, ಟೋನಿನ್ ಜಾನ್ವಿಯರ್, ಜೇಡ್ ಓಕಿಡ್ ನಟಿಸಿದ್ದಾರೆ ಎನ್ನುವುದಕ್ಕಿಂತ ಪಾತ್ರವೇ ಆಗಿ ಜೀವಿಸಿದ್ದಾರೆ.
ಸಿರತ್ ಸಿನಿಮಾದ ಟ್ರೈಲರ್
