ಭೂಗತ ಜಗತ್ತಿನಲ್ಲೂ ಬೇರೆಬೇರೆ ಆಯಾಮಗಳಿವೆ. ರಿಯಲ್ ಎಸ್ಟೇಟ್ ಮೇಲೆ ಹಿಡಿತ ಸಾಧಿಸಲೆತ್ನಿಸುವ ಗುಂಪುಗಳಿರುವಂತೆ ಮಾದಕವಸ್ತುಗಳ ಸರಬರಾಜು ಮೇಲೆ ಬಿಗಿ ಸಾಧಿಸಲು ಯತ್ನಿಸುವ ಗುಂಪುಗಳಿರುತ್ತವೆ. ಮೇಲ್ನೋಟ್ಟಕ್ಕೆ ಇವುಗಳ ವ್ಯವಹಾರ ತಿಳಿಯದಿದ್ದರೂ ಅಂತರಾಳದಲ್ಲಿ ಭೋರ್ಗರೆದು ಹರಿಯುತ್ತಿರುತ್ತದೆ. ಇದರ ಸೆಳವಿಗೆ ಎದುರಿಗೆ ಬಂದ ಯಾರನ್ನೂ ಕೊಚ್ಚಿಕೊಂಡು ಹೋಗುವ ಶಕ್ತಿ. ಇಂಥದೊಂದು ಮಾದಕಜಾಲದ ನಿಗೂಢ ವ್ಯವಹಾರಗಳನ್ನು “ನಾರ್ಕೋಸ್ ಮೆಕ್ಸಿಕೊ” ಧಾರವಾಹಿ ತೆರೆದಿಡುತ್ತಾ ಹೋಗುತ್ತದೆ.
80ರ ದಶಕದಲ್ಲಿ ದಕ್ಷಿಣ ಅಮೆರಿಕಾದ ಕೆಲವು ರಾಷ್ಟ್ರಗಳು ಅದರಲ್ಲಿಯೂ ಮೆಕ್ಸಿಕೊ, ಮಾದಕವಸ್ತುಗಳ ಮಾಫಿಯಾದ ಸ್ವರ್ಗ. ಸ್ಥಳೀಯ ಆಡಳಿತದ ಭ್ರಷ್ಟತೆಯನ್ನೇ ಗೊಬ್ಬರವಾಗಿಸಿಕೊಂಡು ನೋಡುನೋಡುತ್ತಿದ್ದಂತೆ ಅಗಾಧವಾಗಿ ಬೆಳೆದು ನಿಲ್ಲುತ್ತದೆ. ಮೇಲೆರಲು ಅವಕಾಶ ಕೊಟ್ಟವರನ್ನೂ ಅಪೋಶನ ತೆಗೆದುಕೊಳ್ಳಲು ಶುರು ಮಾಡುತ್ತದೆ.
ಮಾದಕವಸ್ತುಗಳ ಅಕ್ರಮ ಮಾರಾಟ ಜಾಲಕ್ಕೆ ಹಲವಾರು ಹಂತ, ಹಲವಾರು ಬಾಸುಗಳು. ಪ್ರತಿಯೊಬ್ಬರು ಸುಪ್ರೀಮ್ ಎಂದು ಕಂಡರೂ ಅವರ ಮೇಲೊಬ್ಬ, ಆತನ ಮೇಲೊಬ್ಬ ಇರುತ್ತಾರೆ. ಕಿಂಗ್ ಪಿನ್ ಯಾರೆಂಬುದು ಕೆಲವೇಕೆಲವರಿಗೆ ಗೊತ್ತಿರುತ್ತದೆ. ಮಾದಕವಸ್ತುಗಳಿಗೆ ಬೇಕಾದ ಮೂಲವಸ್ತುಗಳನ್ನು ತಯಾರಿಸಲು ಬಳಸುವ ಸಸ್ಯಗಳನ್ನು ಸಾವಿರಾರು ಹೆಕ್ಟೇರ್ ಗಳಷ್ಟು ಜಾಗದಲ್ಲಿ ಬೆಳೆಯುತ್ತಿದ್ದರೂ ಅದನ್ನು ಕಟಾವು ಮಾಡುವಲ್ಲಿ ತೊಡಗಿಸಿಕೊಂಡವರಿಗೂ ಅದ್ಯಾವ ಜಾಗ ಎಂದು ಗೊತ್ತಾಗದಷ್ಟು ನಿಗೂಢ ಕಾರ್ಯಾಚರಣೆ.
ನೆರೆಯ ಅಮೆರಿಕಾದತ್ತಲೂ ಮಾದಕವಸ್ತುಗಳ ಡಾನ್ ಗಳು ತಮ್ಮ ಕರಾಳ ಜಾಲ ಚಾಚಲು ಯತ್ನಿಸುತ್ತಿದ್ದಂತೆ ಅಲ್ಲಿನ ಆಡಳಿತ ಇದನ್ನು ಮಟ್ಟ ಹಾಕಲು ನಿರ್ಧರಿಸುತ್ತದೆ. ನಾರ್ಕೋಟಿಕ್ ಡ್ರಗ್ಸ್ ಕುರಿತು ತನಿಖೆ ಮಾಡುವ ಡಿಇಎ ಇಲಾಖೆಗೆ ಅದನ್ನು ವಹಿಸುತ್ತದೆ. ನಿರ್ಭೀತ ಅಧಿಖಾರಿಯೊಬ್ಬ ಜಾಲದ ಬೆನ್ನಹಿಂದೆ ಬೀಳುತ್ತಾನೆ. ಇನ್ನೇನು ಆತ ಜಾಲವನ್ನು ನಾಮಾವಶೇಷ ಮಾಡಬೇಕು ಎನ್ನುವ ಹಂತದಲ್ಲಿ ಮಾಫಿಯಾ ಮತ್ತೊಂದು ಭಿನ್ನಹೆಜ್ಜೆ ಇಡುತ್ತದೆ.


ಮಾದಕಜಾಲ ಮಾಫಿಯಾದೊಂದಿಗೆ ನಿಕಟ ಸಂಪರ್ಕವಿರಿಸಿಕೊಂಡಿದ್ದ ಪೊಲೀಸ್ ಅಧಿಕಾರಿ ಫೆಲಿಕ್ಸ್ ಗ್ಯಾಲಾರ್ಡೋ ತಾನೇ ಆ ಮಾಫಿಯಾದ ಡಾನ್ ಆಗಿಬಿಡುವ ಬೆಳವಣಿಗೆಯನ್ನು ಪರಿಪರಿಯಾಗಿ ಚಿತ್ರಿಸಿದ್ದಾರೆ. ನಿರಂತರ ಸ್ಪರ್ಧೆ ನಡುವೆಯೂ ಬಹುದೊಡ್ಡ ಸಾಮ್ರಾಜ್ಯ ಕಟ್ಟುವ ಈತ ತನಗೆ ಬೇಕಾದ ಭ್ರಷ್ಟ ರಾಜಕಾರಣಿಗಳು ಇರುವ ಪಕ್ಷವೇ ಚುನಾವಣೆಯಲ್ಲಿ ಗೆಲ್ಲುವು ಸಾಧಿಸಲು ನಡೆಸುವ ಅಕ್ರಮ ಬೆಚ್ಚಿಬೀಳಿಸುತ್ತದೆ. ಅದಕ್ಕಾಗಿ ಯಾವ ರೀತಿ ಅತ್ಯಾಧುನಿಕ ತಾಂತ್ರಿಕತೆ ಮಾಡುತ್ತಾರೆ ಎಂಬುದು ಬಹಳ ಕುತೂಹಲಕಾರಿಯಾಗಿದೆ.
ಪ್ರತಿಕಂತು ಒಂದೊಂದು ಸಿನೆಮಾ:
“ನಾರ್ಕೋಸ್ ಮೆಕ್ಸಿಕೊ” ಹತ್ತುಕಂತುಗಳಿಗೆ ಚಾಚಿಕೊಂಡಿದೆ. ಇವುಗಳ ಸೂತ್ರಧಾರರಾದ ಕ್ರಿಸ್ ಬ್ರಾನ್ಕೆಟೊ, ಕ್ಯಾರಿಯೋ ಬರ್ನಾಡ್ ಮತ್ತು ಡೌಗ್ ಮಿರೊ ಅವರ ಕಾರ್ಯ ಕಠಿಣ ಪರಿಶ್ರಮ ಎದ್ದುಕಾಣುತ್ತದೆ.. ಪ್ರತಿಕಂತು, ಒಂದರಿಂದ ಒಂದೂವರೆ ಗಂಟೆ ತನಕ ಚಾಚಿಕೊಂಡಿದೆ. ಮೆಕ್ಸಿಕೋದಲ್ಲಿ ಹುಟ್ಟಿ, ಜಗತ್ತಿನ ಬೇರೆಬೇರೆ ದೇಶಗಳಲ್ಲಿಯೂ ವಿಷವೃಕ್ಷವಾಗಿ ಬೇರು-ರೆಂಬೆ-ಕೊಂಬೆ ಚಾಚುವ ಮಾಫಿಯಾದ ಪ್ರತಿ ಬೆಳವಣಿಗೆಯ ವಿವರಗಳು ದಟ್ಟವಾಗಿವೆ. ವಿಶೇಷವೇನೆಂದರೆ ಈ ಧಾರವಾಹಿಗಳನ್ನು ಸಾಮಾನ್ಯ ಧಾರವಾಹಿಗಳಿಗೆ ಹೋಲಿಸಲು ಸಾಧ್ಯವಾಗುವುದಿಲ್ಲ. ಏಕೆಂದರೆ ಇಲ್ಲಿನ ಪ್ರತಿಯೊಂದು ಕಂತು ಕೂಡ ಒಂದೊಂದು ಉತ್ತಮ ಸಿನೆಮಾ.
ತಾಂತ್ರಿಕವಾಗಿ ಕೂಡ ಪ್ರತಿಯೊಂದು ಕಂತು ಕೂಡ ಅತ್ಯುತ್ತಮ. ಸ್ಕ್ರಿಪ್ಟ್, ಛಾಯಾಗ್ರಹಣ, ಸಂಕಲನ, ಸಂಗೀತ ಎಲ್ಲವೂ ಗುಣಮಟ್ಟದಲ್ಲಿ ಒಂದನ್ನೊಂದು ಮೀರಿಸುತ್ತವೆ. 2018ರ ನವೆಂಬರ್ನಲ್ಲಿ ಇದರ ಮೊದಲ ಕಂತು ಪ್ರದರ್ಶನಗೊಂಡಿತು. ಕೊನೆಯ ಕಂತು 2020ರ ಆರಂಭದಲ್ಲಿ ಬಿಡುಗಡೆಯಾಯಿತು. 1980ರ ಮೆಕ್ಸಿಕೊ, ಅಮೆರಿಕಾ ಮತ್ತಿತ್ತರ ದೇಶಗಳ ಉಡುಗೆ – ತೊಡುಗೆ, ಮಾತನಾಡುವ ಶೈಲಿ, ಕಾರುಗಳ ವಿನ್ಯಾಸ, ಎಲ್ಲವೂ ಬದಲಾಗಿದೆ. ಆದರೆ ಈ ಚಿತ್ರತಂಡ 1080ರ ವಿಶೇಷತೆಗೆಳನ್ನು ಹಾಗೆಯೇ ತಂದಿದೆ. ಯಾವುದರಲ್ಲಿಯೂ ಕಿಂಚಿತ್ ರಾಜಿ ಮಾಡಿಕೊಂಡಿಲ್ಲ. ಪ್ರತಿಕಂತಿಗೂ ಅಪಾರ ಹಣ ಖರ್ಚು ಮಾಡಲಾಗಿದೆ.


ನೂರಾರು ಜನ ಕಲಾವಿದರು ನಟಿಸಿದ್ದಾರೆ. ಮುಖ್ಯಪಾತ್ರಗಳಲ್ಲಿ ನಟಿಸಿರುವ ಪ್ರತಿಯೊಬ್ಬರು ಉತ್ತಮವಾಗಿ ನಟಿಸಿದ್ದಾರೆ. ಇವರಲ್ಲಿ ಮಾಫಿಯಾ ಕಿಂಗ್ ಫೆಲಿಕ್ಸ್ ಗ್ಯಾಲಾರ್ಡೊ ಪಾತ್ರಧಾರಿ ಡಿಯಾಗೊ ಲೂನಾ, ಪೊಲೀಸ್ ಅಧಿಕಾರಿ ಪಾತ್ರಧಾರಿ ಮೈಕೆಲ್ ಪೆರಿಯ ಅಭಿನಯ ಅನನ್ಯ. ಆಯಾ ಪಾತ್ರಕ್ಕೆ ತಕ್ಕಂತೆ ಇವರುಗಳ ಬಾಡಿ ಲಾಂಗ್ವೇಜ್, ಮ್ಯಾನರಿಸಂ, ಸಂಭಾಷಣೆ ಒಪ್ಪಿಸುವ ಪರಿ, ಟೈಮಿಂಗ್ ಅತ್ಯುತ್ತಮ.
ದಿನಕ್ಕೊಂದು ಕಂತಿನಂತೆ ಹತ್ತುದಿನಗಳ ಕಾಲ ನೋಡಿಸಿಕೊಂಡ ಧಾರವಾಹಿಯಲ್ಲಿ ಹಿಂಸೆ ಢಾಳಾಗಿದೆ. ಆದರೆ ಕಥೆ ಕೇಳುವ ಅನಿವಾರ್ಯತೆಯಿಂದಾಗಿ ಅವುಗಳನ್ನು ತಂದಿದ್ದಾರೆ. 1980ರ ದಶಕದಲ್ಲಿ ನಡೆದಿರುವ ದುರಾದೃಷ್ಟಕರ ಬೆಳವಣಿಗೆಯ ಯಥಾವತ್ ಸಿನೆರೂಪ ಇದಾಗಿರುವುದು ಮತ್ತೊಂದು ವಿಶೇಷ. ನೆಟ್ ಫ್ಲಿಕ್ಸ್ ನಲ್ಲಿ “ನಾರ್ಕೋಸ್ ಮೆಕ್ಸಿಕೊ” ಲಭ್ಯವಿದೆ.

Similar Posts

1 Comment

  1. ನಾರ್ಕೊಸ್ ಮೆಕ್ಸಿಕೊ ಚಿತ್ರ ಧಾರಾವಾಹಿ ಬಗ್ಗೆ ಲೇಖನ ಚೆನ್ನಾಗಿದೆ..ಚಿತ್ರ ನೋಡಬೇಕು..ಈ ಮುಂಚೆ ಪಾಬ್ಲೋ ಎಸ್ಕೊಬಾರ್ ನ ಜೀವನ ಆಧಾರಿತ ಸಿನಿಮಾ ಸೀರಿಯಲ್ ನೋಡಿದ್ದೆ..

Leave a Reply

Your email address will not be published. Required fields are marked *