ಸಿನಿಮಾ

ತಿನಿಸುಗಳಿಗೆ ಏಕೆ ನಿರ್ಬಂಧ ? ಇದು ಯಾರ ಉತ್ಸವ ?

ಲುಲು ಮಾಲ್‌ ಆಡಳಿತ ಮಂಡಳಿಯ ಧೋರಣೆ, ಕರ್ನಾಟಕ ಚಲನಚಿತ್ರ ಅಕಾಡೆಮಿಯ ಉದಾಸೀನ ತಿನಿಸುಗಳಿಗೆ ಏಕೆ ನಿರ್ಬಂಧ ? ಇದು ಯಾರ ಉತ್ಸವ ? ಎಂದು ಪ್ರಶ್ನಿಸುವಂತೆ ಮಾಡಿದೆ. ಮಾಲ್‌ ಆಡಳಿತ ಮಂಡಳಿಯ ಕ್ರಮ ಹುಬ್ಬೇರಿಸುವಂತೆ ಮಾಡಿದೆ.

೧೭ನೇ ಬೆಂಗಳೂರು ಚಲನಚಿತ್ರೋತ್ಸವ ಬೆಂಗಳೂರಿನ ರಾಜಾಜಿನಗರದಲ್ಲಿರುವ ಲುಲು ಮಾಲ್‌ ನಲ್ಲಿ ಜನವರಿ ೩೦ ರಿಂದ ನಡೆಯುತ್ತಿದೆ. ಇಲ್ಲಿ ಫೆಸ್ಟಿವಲ್‌ ನಡೆಸಲು ರಾಜ್ಯ ಸರ್ಕಾರ ನೀಡುವ ಅನುದಾನದಿಂದ ಕರ್ನಾಟಕ ಚಲನಚಿತ್ರ ಅಕಾಡೆಮಿ ಬಾಡಿಗೆ ನೀಡುತ್ತದೆ. ಇಂಥ ಸಂದರ್ಭದಲ್ಲಿ ಸೆಕ್ಯುರಿಟಿ ಹೊರತುಪಡಿಸಿ ಉಳಿದ ನೀತಿಗಳನ್ನು ನಿರೂಪಿಸಬೇಕಾಗಿರುವುದು ಅಕಾಡೆಮಿ ಹೊರತು ಮಾಲ್‌ ಆಡಳಿತ ಮಂಡಳಿಯಲ್ಲ.

Cine Polis.jpg 3

ಮಾಲ್‌ ಒಳಗೆ ಬರುವಾಗ ತಂದ ಬ್ಯಾಗುಗಳನ್ನು ತಪಾಸಣೆ ಮಾಡುವುದಕ್ಕೆ ಯಾರ ವಿರೋಧವೂ ಇಲ್ಲ. ಆದರೆ ಚಿತ್ರಮಂದಿರಗಳಿರುವ ಮೂರನೇ ಮಹಡಿಯಲ್ಲಿ ಮತ್ತೆ ತಪಾಸಣೆ ಇದೆ. ಬ್ಯಾಗ್‌ ತೆರೆದು ಅದರಲ್ಲಿ ಏನೇನಿದೆ ಎಂಬುದನ್ನು ಅಲ್ಲಿರುವ ಭದ್ರತಾ ಸಿಬ್ಬಂದಿ ನೋಡುತ್ತಾರೆ. ಅಪಾಯಕಾರಿ ವಸ್ತು ಇದೆಯೋ ಇಲ್ಲವೋ ಎಂಬುದನ್ನು ತಿಳಿಯಲು ಮಾಡುವ ತಪಾಸಣೆ ಇದಲ್ಲ. ಆಹಾರ ವಸ್ತುಗಳನ್ನು ತೆಗೆದುಕೊಂಡು ಹೋಗುತ್ತಿದ್ದಾರೆಯೇ ಎಂಬುದನ್ನು ತಿಳಿಯಲು ಹೀಗೆ ಮಾಡಲಾಗುತ್ತದೆ. ಇದರಿಂದ ಕೊನೆಕ್ಷಣದಲ್ಲಿ ಸಿನಿಮಾ ನೋಡಲು ಹೋಗುವವರ ಸಮಯವೂ ಹಾಳಾಗುತ್ತಿದೆ.

ಚಿತ್ರಮಂದಿರಗಳ ಸಮೂಹ ಇರುವ ಪ್ರವೇಶದ್ವಾರದ ಒಳಗೆ ಇರುವ ಮಳಿಗೆಗಳಲ್ಲಿ ಅತೀ ದುಬಾರಿ ಬೆಲೆ ತೆತ್ತು ತಿನಿಸು ಖರೀದಿಸಿ ಥಿಯೇಟರ್‌ ಒಳಗೆ ತೆಗೆದುಕೊಂಡು ಹೋಗುವುದಕ್ಕೆ ಯಾವ ನಿರ್ಬಂಧವೂ, ತಪಾಸಣೆಯೂ ಇಲ್ಲ. ಮಾಲ್‌ ನ ಉಳಿದ ಭಾಗಗಳಲ್ಲಿ ಇರುವ ಮಳಿಗೆಗಳಿಂದ ತಿನಿಸು ಖರೀದಿಸಿ ತೆಗೆದುಕೊಂಡು ಹೋದರೂ ಒಳಗೆ ಬಿಡುವುದಿಲ್ಲ. ಅಷ್ಟೇಕೆ ? ಮೂರನೇ ಮಹಡಿಯಲ್ಲಿ ಚಿತ್ರಮಂದಿರದ ಪ್ರವೇಶದ್ವಾರದಲ್ಲಿಯೇ ಇರುವ ತಾತ್ಕಾಲಿಕ ಕಾಫಿ ಸೆಂಟರಿನಿಂದ ಕಾಫಿ ತೆಗೆದುಕೊಂಡು ಒಳಗೆ ಹೋಗುವುದಕ್ಕೂ ಆಸ್ಪದವಿಲ್ಲ

ಕೆಲವರಿಗೆ ಪದೇಪದೇ ಹಸಿವಾಗುತ್ತಿರುತ್ತದೆ. ಡಯಾಬಿಟಿಕ್‌ ಇರುವವರಂತೂ ಹಸಿವನ್ನು ತಡೆಯಲಾರರು. ಇಂಥವರೆಲ್ಲ ಬ್ಯಾಗಿನಲ್ಲಿ ಬಿಸ್ಕೆಟ್‌ ಅಥವಾ ಹಣ್ಣುಗಳನ್ನು ಇಟ್ಟುಕೊಂಡಿರುತ್ತಾರೆ. ಇದನ್ನು ಒಳಗೆ ತೆಗೆದುಕೊಂಡು ಹೋಗಲು ಬಿಡುವುದಿಲ್ಲವೆಂದರೆ ಏನರ್ಥ ? ಫೆಸ್ಟಿವಲ್‌ ಆರಂಭಕ್ಕೆ ಮುನ್ನ “ ಮಾಲ್‌ ನಲ್ಲಿ ಎಲ್ಲರ ಕೈಗೆಟುಕುವ ಬೆಲೆಗೆ ಆಹಾರ ಪದಾರ್ಥ ಲಭ್ಯವಾಗುವಂತೆ ಮಾಡುತ್ತೇವೆ” ಎಂದು ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸಾಧು ಕೋಕಿಲಾ ಭರವಸೆ ಕೊಟ್ಟಿದ್ದರು. ಅದನ್ನು ಈಡೇರಿಸುವ ಸಾಮರ್ಥ್ಯ ಅವರಲ್ಲಿ ಇಲ್ಲದಿದ್ದರೂ‌ ಫಿಲ್ಮ್‌ ಫೆಸ್ಟಿವಲ್‌ ನಡೆಯುವಷ್ಟು ದಿನ ಪಾಸುಗಳನ್ನು ಹೊಂದಿರುವವರು ಚಿತ್ರಮಂದಿರಗಳ ಒಳಗೆ ತಿನಿಸುಗಳನ್ನು ತೆಗೆದುಕೊಂಡು ಹೋಗಲು ನಿರ್ಬಂಧ ವಿಧಿಸಬಾರದು ಎಂದು ಹೇಳುವಷ್ಟು ಸಾಮರ್ಥ್ಯವೂ ಇಲ್ಲವೇ ? ಇಂಥ ಉದಾಸೀನ ಗಮನಿಸಿದರೆ ಫಿಲ್ಮ್‌ ಫೆಸ್ಟಿವಲ್‌ ಅನ್ನು ಚಲನಚಿತ್ರ ಅಕಾಡೆಮಿ ನಡೆಸುತ್ತಿದೆಯೋ ಅಥವಾ ಲುಲು ಮಾಲ್‌ ಆಡಳಿತ ಮಂಡಳಿ ನಡೆಸುತ್ತಿದೆಯೋ ಎನಿಸುತ್ತದೆ !

Leave a Reply

Your email address will not be published. Required fields are marked *

error: Content is protected !!