ಆರೋಗ್ಯ

ಹೋಟೆಲುಗಳಲ್ಲಿ ಕಾಫಿ ಟೀ ಕುಡಿಯುವುದು ಎಷ್ಟು ಸುರಕ್ಷಿತ ?

ಬಹಳಷ್ಟು ಮಂದಿ ಪ್ರತಿದಿನ ಕನಿಷ್ಟ ನಾಲ್ಕು ಸಲವಾದರೂ ಕಾಫಿ / ಚಹಾ ಕುಡಿಯುವ ಅಭ್ಯಾಸ ರೂಢಿಸಿಕೊಂಡಿರುತ್ತಾರೆ. ಇವರು ಮನೆಯಲ್ಲಿರಲಿ ಅಥವಾ ಉದ್ಯೋಗದ ಸ್ಥಳಗಳಲ್ಲಿ, ಪ್ರವಾಸಿ ಸ್ಥಳಗಳಲ್ಲಿ ಇರಲಿ ತಮ್ಮ ಅಭ್ಯಾಸ ಬಿಡುವುದಿಲ್ಲ. ಕೆಲವರಂತೂ ಬೆಳಗ್ಗೆ ಎದ್ದ ನಂತರ (ಬೆಡ್‌ ಕಾಫಿ), ಪೇಪರ್‌ ಓದುವಾಗ, ಉಪಹಾರ ಸೇವಿಸಿದ ನಂತರ, ಬೆಳಗ್ಗೆ 11 ರಿಂದ 12ರ ನಡುವೆ, ಊಟವಾದ ನಂತರ, ಸಂಜೆ ಹೀಗೆ ಕಾಫಿ ಅಥವಾ ಚಹಾ ಸೇವಿಸುತ್ತಲೇ ಇರುತ್ತಾರೆ.

ಇತ್ತೀಚಿನ ದಶಕಗಳಲ್ಲಿ ವಿಶೇಷವಾಗಿ ಭಾರತದಲ್ಲಿ ಮಧುಮೇಹ (ಸಕ್ಕರೆ ಕಾಯಿಲೆ) ಹೊಂದಿರುವವರ, ಹೊಂದುವವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಇಂಥವರು ಸಹ ಕಾಫಿ ಅಥವಾ ಚಹಾ ಕುಡಿಯುವುದನ್ನು ಕಡಿಮೆ ಮಾಡಿರುವುದಿಲ್ಲ. ಇವರು ಮನೆಯಲ್ಲಿದ್ದಾಗ ಸಕ್ಕರೆ ರಹಿತ ಕಾಫಿ ಅಥವಾ ಚಹಾ ಕುಡಿಯುವ ಖಾತರಿ ಇರುತ್ತದೆ. ಆದರೆ ಹೊರಗೆ !

ಮಧುಮೇಹ ಹೊಂದಿರುವ ವ್ಯಕ್ತಿಗಳು ಹೋಟೆಲಿಗೆ, ಕೆಫೆಗೆ ಹೋದಾಗ ಶುಗರ್‌ ಲೆಸ್‌ ಕಾಫಿ / ಚಹಾ ಕೊಡಿ ಎಂದು ಕೇಳುತ್ತಾರೆ. ಕೆಫೆಗಳಲ್ಲಿ ಎಷ್ಟು ಬೇಕೋ ಅಷ್ಟು ಹಾಕಿಕೊಳ್ಳಲಿ ಎಂದು ಸಕ್ಕರೆ ಇರುವ ಸಣ್ಣ ಪ್ಯಾಕೇಟುಗಳನ್ನು ಪ್ರತ್ಯೇಕವಾಗಿ ಕೊಡುತ್ತಾರೆ. ಕಾಫಿ ಕುಡಿದ ನಂತರ ದುಡ್ಡು ಕೊಟ್ಟು ಸಕ್ಕರೆ ಹಾಕದ ಕಾಫಿ ಕುಡಿದೆವು ಎಂಬ ಸಮಾಧಾನದೊಂದಿಗೆ ಹಿಂದಿರುಗುತ್ತಾರೆ.

ವಾಸ್ತವವಾಗಿ ದೇಹಕ್ಕೆ ಮತ್ತಷ್ಟು ಸಕ್ಕರೆ ತುಂಬಿಸಿಕೊಂಡಿರುತ್ತಾರೆ. ಪ್ರತಿಸಲ ಕಾಫಿ, ಚಹಾ ಕುಡಿದಾಗಲೂ ಸಕ್ಕರೆ ಮಟ್ಟವನ್ನು ಏರಿಸಿಕೊಳ್ಳುತ್ತಲೇ ಇರುತ್ತಾರೆ. ದಿನನಿತ್ಯ ಶುಗರ್‌ ಕಂಟ್ರೋಲ್‌ ಟ್ಯಾಬ್ಲೆಟ್‌ ಅಥವಾ ಇನ್ಸುಲಿನ್‌ ತೆಗೆದುಕೊಳ್ಳುತ್ತಿದ್ದರೂ ಸಕ್ಕರೆ ಮಟ್ಟ ಏಕೆ ಕಡಿಮೆಯಾಗುತ್ತಿಲ್ಲ ಎಂಬ ಚಿಂತೆ ಕಾಡುತ್ತಲೇ ಇರುತ್ತದೆ.

ಇದಕ್ಕೆ ಹಲವು ಕಾರಣಗಳಿರುತ್ತವೆ. ಅವುಗಳಲ್ಲಿ ಮನೆಯಿಂದ ಹೊರಗೆ ಕಾಫಿ / ಚಹಾ ಸೇವಿಸುವುದು. ಬಹುತೇಕ ಹೋಟೆಲುಗಳಲ್ಲಿ ಕಾಫಿ ಡಿಕಾಕ್ಷನ್‌ ತಯಾರಿಸುವಾಗಲೂ ಸಕ್ಕರೆ ಹಾಕಿರುತ್ತಾರೆ. ಹಾಲು ಕಾಯಿಸುವಾಗಲೂ ಸಕ್ಕರೆ ಹಾಕಿರುತ್ತಾರೆ. ಶುಗರ್‌ ಲೆಸ್‌ ಎಂದು ಕೊಡುವ ಕಾಫಿಗೆ ಹಾಕಿದ ಹಾಲಿಗೆ ಹಾಕಿರುವ ಸಕ್ಕರೆ ಪ್ರಮಾಣ ಕಡಿಮೆ ಇರುತ್ತದೆ ಅಷ್ಟೆ ! ಸಕ್ಕರೆ ಹಾಕದಿದ್ದರೆ ಕಾಫಿ ಡಿಕಾಕ್ಷನ್‌, ಹಾಲಿನ ರುಚಿ ಹೆಚ್ಚುವುದಿಲ್ಲ ಎಂಬ ನಂಬಿಕೆ ಇದೆ !

ಕೆಲವರು ಮನೆಗಳಲ್ಲಿಯೂ ಕಾಫಿ ಡಿಕಾಕ್ಷನ್‌ ತಯಾರಿಸುವಾಗ ಸಕ್ಕರೆ ಬೆರೆಸುತ್ತಾರೆ. ಮನೆಯಲ್ಲಿ ಮಧುಮೇಹಿಗಳಿದ್ದರೂ ಈ ಅಭ್ಯಾಸ ಬಿಡುವುದಿಲ್ಲ. ಎರಡು ಸ್ಪೂನ್‌ ಸಕ್ಕರೆ ಹಾಕಿದರೆ ಏನೂ ಆಗುವುದಿಲ್ಲ ಎಂಬ ತಪ್ಪು ನಂಬಿಕೆ ಇರುತ್ತದೆ. ಇಂಥವರು ಹಾಲು ಕಾಯಿಸುವಾಗಲೂ ಸಕ್ಕರೆ ಹಾಕಿರುತ್ತಾರೆ. ಇದೆಲ್ಲ ಆದ ನಂತರವೂ ಡಿಕಾಕ್ಷನ್‌ ಮತ್ತು ಹಾಲು ಬೆರೆಸುವಾಗಲೂ ಸಕ್ಕರೆ ಹಾಕಿಕೊಳ್ಳುತ್ತಾರೆ. ಮಧುಮೇಹಿಗಳಿಗೆ ಕೊಡುವ ಸಂದರ್ಭದಲ್ಲಿ ಮತ್ತೆ ಸಕ್ಕರೆ ಬೆರೆಸಿರುವುದಿಲ್ಲ ಅಷ್ಟೆ ! ಆದರೆ ಮೊದಲೆರಡು ಹಂತಗಳಲ್ಲಿ ಸಕ್ಕರೆ ಬೆರೆಸಿರುವುದನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ!!

ಹೀಗೆ ದಿನನಿತ್ಯ ಸಕ್ಕರೆಯನ್ನು ದೇಹಕ್ಕೆ  ಹೆಚ್ಚೆಚ್ಚು  ಸೇರಿಸುತ್ತಾ ಹೋಗುವುದರಿಂದ ಅನೇಕ ತೊಂದರೆಗಳು ಕಾಡುತ್ತವೆ.ಟೈಪ್ 2 ಮಧುಮೇಹ, ಹೃದ್ರೋಗ ಮತ್ತು ಕೆಲವು ಕ್ಯಾನ್ಸರ್‌ಗಳು ಸೇರಿದಂತೆ ಹಲವಾರು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಇದು ಮಾನಸಿಕ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ, ಆತಂಕ ಮತ್ತು ಖಿನ್ನತೆಗೆ ಕಾರಣವಾಗಬಹುದು. ಇದಲ್ಲದೆ ಸಕ್ಕರೆ ಸೇವನೆಯು ಹುಳುಕು ಹಲ್ಲು, ಯಕೃತ್ತಿನ ಕಾಯಿಲೆ ಮತ್ತು ಉರಿಯೂತಕ್ಕೆ ಕಾರಣವಾಗಬಹುದು, ಇದು ಇತರ ಆರೋಗ್ಯ ಸಮಸ್ಯೆಗಳನ್ನು ಮತ್ತಷ್ಟು ಉಲ್ಬಣಗೊಳಿಸಬಹುದು.

ತೂಕ ಹೆಚ್ಚಾಗುವುದು ಮತ್ತು ಬೊಜ್ಜು:

ಸಕ್ಕರೆ ಖಾಲಿ ಕ್ಯಾಲೊರಿಗಳನ್ನು ಒದಗಿಸುತ್ತದೆ. ಅಂದರೆ ಇದು ಗಮನಾರ್ಹ ಪೌಷ್ಟಿಕಾಂಶದ ಮೌಲ್ಯವಿಲ್ಲದೆ ಕ್ಯಾಲೊರಿಗಳನ್ನು ನೀಡುತ್ತದೆ. ವಿಶೇಷವಾಗಿ ಸಕ್ಕರೆ ಪಾನೀಯಗಳಿಂದ ಹೆಚ್ಚು ಸಕ್ಕರೆಯನ್ನು ಸೇವಿಸುವುದರಿಂದ ತೂಕ ಹೆಚ್ಚಾಗುತ್ತದೆ.  ಬೊಜ್ಜಿನ ಅಪಾಯವನ್ನು ಹೆಚ್ಚಿಸುತ್ತದೆ.

ಟೈಪ್ 2 ಮಧುಮೇಹ:

ಅಧಿಕ ಸಕ್ಕರೆ ಸೇವನೆಯು ಇನ್ಸುಲಿನ್ ಪ್ರತಿರೋಧಕ್ಕೆ ಕಾರಣವಾಗಬಹುದು, ಅಲ್ಲಿ ಜೀವಕೋಶಗಳು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವ ಹಾರ್ಮೋನ್ ಇನ್ಸುಲಿನ್‌ಗೆ ಕಡಿಮೆ ಸ್ಪಂದಿಸುತ್ತವೆ. ಇದು ಅಂತಿಮವಾಗಿ ಟೈಪ್ 2 ಮಧುಮೇಹಕ್ಕೆ ಕಾರಣವಾಗಬಹುದು.

ಹೃದಯ ಕಾಯಿಲೆ:

ಅತಿಯಾದ ಸಕ್ಕರೆ ಸೇವನೆಯು ರಕ್ತದೊತ್ತಡವನ್ನು ಹೆಚ್ಚಿಸಬಹುದು, ಉರಿಯೂತವನ್ನು ಹೆಚ್ಚಿಸಬಹುದು ಮತ್ತು ಟ್ರೈಗ್ಲಿಸರೈಡ್ ಮಟ್ಟವನ್ನು ಹೆಚ್ಚಿಸಬಹುದು, ಇವೆಲ್ಲವೂ ಹೃದ್ರೋಗಕ್ಕೆ ಕಾರಣವಾಗುವ ಅಪಾಯಕಾರಿ ಅಂಶಗಳಾಗಿವೆ.

ಯಕೃತ್ತಿನ ಕಾಯಿಲೆ:

ಯಕೃತ್ತು ಹೆಚ್ಚುವರಿ ಫ್ರಕ್ಟೋಸ್ (ಒಂದು ರೀತಿಯ ಸಕ್ಕರೆ) ಅನ್ನು ಕೊಬ್ಬಾಗಿ ಪರಿವರ್ತಿಸುತ್ತದೆ, ಇದು ಆಲ್ಕೊಹಾಲ್ಯುಕ್ತವಲ್ಲದ ಕೊಬ್ಬಿನ ಪಿತ್ತಜನಕಾಂಗದ ಕಾಯಿಲೆಗೆ (NAFLD) ಕಾರಣವಾಗಬಹುದು.

ಹುಳುಕು ಹಲ್ಲುಗಳು:

ಸಕ್ಕರೆಯು ಬಾಯಿಯಲ್ಲಿ ಬ್ಯಾಕ್ಟೀರಿಯಾದ ಬೆಳವಣಿಗೆಯನ್ನು ಉತ್ತೇಜಿಸುತ್ತದೆ, ಇದು ಹಲ್ಲಿನ ದಂತಕವಚವನ್ನು ಸವೆಸುವ ಆಮ್ಲಗಳನ್ನು ಉತ್ಪಾದಿಸುತ್ತದೆ, ಇದು ಕುಳಿಗಳಿಗೆ ಕಾರಣವಾಗುತ್ತದೆ.

ಉರಿಯೂತ:

ಅಧಿಕ ಸಕ್ಕರೆ ಸೇವನೆಯು ದೇಹದಾದ್ಯಂತ ದೀರ್ಘಕಾಲದ ಉರಿಯೂತವನ್ನು ಉತ್ತೇಜಿಸಬಹುದು, ಇದು ಅನೇಕ ರೋಗಗಳಿಗೆ ಕಾರಣವಾಗುವ ಅಂಶವಾಗಿದೆ.

ಮಾನಸಿಕ ಆರೋಗ್ಯ:

ಸಕ್ಕರೆಯು ರಕ್ತದಲ್ಲಿನ ಸಕ್ಕರೆ ಮಟ್ಟದಲ್ಲಿ ತ್ವರಿತ ಏರಿಕೆಗೆ ಕಾರಣವಾಗಬಹುದು ಮತ್ತು ನಂತರ ಶಕ್ತಿಯ ಕುಸಿತ, ಆಯಾಸ ಮತ್ತು ಕಿರಿಕಿರಿಗೆ ಕಾರಣವಾಗಬಹುದು. ಸಕ್ಕರೆಯು ಮೆದುಳಿನಲ್ಲಿ ಡೋಪಮೈನ್ ಬಿಡುಗಡೆಯನ್ನು ಪ್ರಚೋದಿಸಬಹುದು. ಇದು ಆಹ್ಲಾದಕರ ಸಂವೇದನೆಯನ್ನು ಉಂಟುಮಾಡುತ್ತದೆ ಮತ್ತು ಕಡುಬಯಕೆಗಳು ಮತ್ತು ವ್ಯಸನಕ್ಕೆ ಕಾರಣವಾಗಬಹುದು. ಕ್ರಮೇಣ  ಆತಂಕ ಮತ್ತು ಖಿನ್ನತೆ ಉಂಟಾಗಬಹುದು. ಅಧಿಕ ಸಕ್ಕರೆ ಸೇವನೆ ಮತ್ತು ಆತಂಕ ಮತ್ತು ಖಿನ್ನತೆಯ ಅಪಾಯದ ಹೆಚ್ಚಳದ ನಡುವಿನ ಸಂಬಂಧವನ್ನು ಅಧ್ಯಯನಗಳು ಸೂಚಿಸುತ್ತವೆ.

ಬಹಳ ಬೇಗ ವಯಸ್ಸಾಗುವಿಕೆ:

ಅಧಿಕ ಸಕ್ಕರೆಯು ಕಾಲಜನ್ ಮತ್ತು ಎಲಾಸ್ಟಿನ್ ಅನ್ನು ಹಾನಿಗೊಳಿಸುತ್ತದೆ. ಇದು ಚರ್ಮ ಮತ್ತು ಇತರ ಅಂಗಾಂಶಗಳ ಅಕಾಲಿಕ ವಯಸ್ಸಾಗುವಿಕೆಗೆ ಕಾರಣವಾಗುತ್ತದೆ. ಚರ್ಮ ಬಹಳ ಬೇಗ ಸುಕ್ಕುಗಟ್ಟುತ್ತದೆ. ನರಗಳು ಶಕ್ತಿ ಕಳೆದುಕೊಳ್ಳುತ್ತವೆ. ಮೆದುಳಿನ ಸಾಮರ್ಥ್ಯವೂ ಕುಗ್ಗುವ ಸಾಧ್ಯತೆ ಹೆಚ್ಚು.

One thought on “ಹೋಟೆಲುಗಳಲ್ಲಿ ಕಾಫಿ ಟೀ ಕುಡಿಯುವುದು ಎಷ್ಟು ಸುರಕ್ಷಿತ ?

  • ಜಿ ಎಸ್ ಶ್ರೀನಾಥ

    ನಿಜ, ಆದರೆ ಇತ್ತೀಚೆಗೆ ಬೆಲ್ಲ ಕೂಡ ಅಪಾಯಕಾರಿ ಆಗಿದೆಯಲ್ಲ

    ಬೆಲ್ಲಕ್ಕೆ ಬೆಲೆ ಜಾಸ್ತಿ ಇರುವುದರಿಂದ ಅದನ್ನು ಸಹ ಸಕ್ಕರೆಯಿಂದ ತಯಾರಿಸುತ್ತಾರೆ

    ಬೆಲ್ಲದ ಪುಡಿ ಗಟ್ಟಿಯಾಗದಂತೆ ರಾಸಾಯನಿಕ ಬಳಸುತ್ತಾರೆ

    Reply

Leave a Reply

Your email address will not be published. Required fields are marked *

error: Content is protected !!