Home ಸಾಹಿತ್ಯKannadaಭಾಷಾ ವಿಜ್ಞಾನದ ದೀವಿಗೆ, ಸಾಹಿತ್ಯ ಚಿಂತನೆಯ ಅನನ್ಯ ಮಾರ್ಗದರ್ಶಿ

ಭಾಷಾ ವಿಜ್ಞಾನದ ದೀವಿಗೆ, ಸಾಹಿತ್ಯ ಚಿಂತನೆಯ ಅನನ್ಯ ಮಾರ್ಗದರ್ಶಿ

ಕೆ.ವಿ. ನಾರಾಯಣ ಅವರಿಗೆ ಅಕ್ಷರ ನಮನ

by Kumara Raitha
0 comments

ಭಾಷಾವಿಜ್ಞಾನಿ ಕೆ.ವಿ.ನಾರಾಯಣ ಅವರ ವಿದ್ವತ್‌ ಉಪನ್ಯಾಸಗಳನ್ನು ಕೇಳಿದ್ದೆ. ಆದರೆ ಕಮ್ಮಟಗಳಲ್ಲಿ ಭಾಗವಹಿಸಿರಲಿಲ್ಲ. ೨೦೨೪ರಲ್ಲಿ ಸಾಹಿತಿ ಡಾ.ಬೆಸಗರಹಳ್ಳಿ ರಾಮಣ್ಣ ಪ್ರತಿಷ್ಠಾನವು ಕುಪ್ಪಳ್ಳಿಯಲ್ಲಿ ವಿಚಾರ ಕಮ್ಮಟ ಆಯೋಜಿಸಿದ್ದರು. ಅರ್ಜಿ ಹಾಕಿದೆ. ಆಯ್ಕೆಯೂ ಆದೆ. ಕೆ.ವಿ. ಎನ್‌ ಅವರೇ ಶಿಬಿರದ ನಿರ್ದೇಶಕರು. ಇವರೂ ಸೇರಿದಂತೆ ಸಂಪನ್ಮೂಲ ವ್ಯಕ್ತಿಗಳು, ಶಿಬಿರಾರ್ಥಿಗಳು ಇದ್ದ ವಾಟ್ಸಪ್‌ ಗ್ರೂಪ್‌ ರಚನೆಯಾಯಿತು.

ಶಿಬಿರದ ನಿರ್ದೇಶಕರು ಶಿಬಿರಾರ್ಥಿಗಳು ಅಧ್ಯಯನ ಮಾಡಿ ಬರಬೇಕಾದ ಪಠ್ಯಗಳನ್ನು, ಚರ್ಚೆಯಾಗುವ ವಿಷಯಗಳ ಅನುಕ್ರಮಣಿಕೆಯನ್ನು ನೀಡಿದ್ದರು. ಇದನ್ನು ಪರಿಶೀಲಿಸಿದಾಗಲೇ ಇದೇನೂ ಕಾಟಾಚಾರದ ಕಮ್ಮಟವಲ್ಲ ಎಂಬುದು ಅರಿವಿಗೆ ಬಂತು! ಗಂಭೀರವಾಗಿ ಅಧ್ಯಯನ ಮಾಡಿದೆ. ನಿರ್ದೇಶಕರು ಕಮ್ಮಟದಲ್ಲಿ ಅನೇಕ ವಿಚಾರಗಳ ಒಳನೋಟಗಳನ್ನು ನೀಡಿದ್ದು ವಿಶೇಷ.

ಕನ್ನಡ ಸಾರಸ್ವತ ಲೋಕದಲ್ಲಿ ಓರ್ವ ಗಭೀರ ವಿದ್ವಾಂಸರಾಗಿ, ಭಾಷಾ ವಿಜ್ಞಾನಿಯಾಗಿ ಮತ್ತು ಸಂಸ್ಕೃತಿ ಚಿಂತಕರಾಗಿ ಪ್ರೊ. ಕೆ.ವಿ. ನಾರಾಯಣ ನೀಡಿರುವ ಕೊಡುಗೆ ಅಪಾರ. ಕನ್ನಡ ಸಾಹಿತ್ಯದ ಗಂಭೀರ (ಇಂಗ್ಲಿಷ್‌ ನ ಸೀರಿಯಸ್‌ ರೀಡರ್ಸ್‌ ಎನ್ನುವುದರ ಬದಲಾಗಿ ಗಂಭೀರ ಪದವನ್ನು ಮತ್ತೆಮತ್ತೆ ಬಳಸಿದ್ದೇನೆ) ಓದುಗರ  ಸಾಹಿತ್ಯ ಓದುವಿಕೆಯ ದಿಕ್ಕನ್ನೇ ಬದಲಾಯಿಸಿದ ಚಿಂತಕ. ‘ಮಲೆಗಳಲ್ಲಿ ಮದುಮಗಳು’ ಕಾದಂಬರಿಯನ್ನು ಇಟ್ಟುಕೊಂಡು ಅವರು ನಡೆಸಿಕೊಟ್ಟ ಕಮ್ಮಟ ಸಾಹಿತ್ಯ ವಿಮರ್ಶೆಗೆ ಹೊಸ ಆಯಾಮವನ್ನು ತಂದುಕೊಟ್ಟಿವೆ ಎಂಬುದು ನನ್ನ ಅಭಿಪ್ರಾಯ!

​ಕಮ್ಮಟದ ಅನುಭವಗಳು ಮತ್ತು ಹೊಸ ಒಳನೋಟಗಳು

​ಸಾಹಿತಿ ಡಾ.ಬೆಸಗರಹಳ್ಳಿ ರಾಮಣ್ಣ ಪ್ರತಿಷ್ಠಾನವು ಕುಪ್ಪಳ್ಳಿಯಲ್ಲಿ ೨೦೨೫ರಲ್ಲಿ ಆಯೋಜಿಸಿದ್ದ ‘ಮಲೆಗಳಲ್ಲಿ ಮದುಮಗಳು’ ಕಾದಂಬರಿಯ ಕಮ್ಮಟವು ಪಾಲ್ಗೊಂಡ ಕನ್ನಡ ಸಾಹಿತ್ಯಾಸಕ್ತರಿಗೆ ಒಂದು ಅಪೂರ್ವ ಅನುಭವ ಒದಗಿಸಿತು. ಇದರಲ್ಲಿ ಭಾಗವಹಿಸಿದ್ದೆ. ಈ ಕಮ್ಮಟದಲ್ಲಿ ಪಾಲ್ಗೊಂಡಿದ್ದ ಕಾದಂಬರಿಯನ್ನು ಕೇವಲ ಮೇಲ್ನೋಟಕ್ಕೆ ಪದ ಬಿಡಿಸಿ ಓದುವುದಕ್ಕಿಂತ ಮಿಗಿಲಾಗಿ, ಅದನ್ನು ವಿವಿಧ ನಿರೂಪಣಾ ವಿಧಾನಗಳ ಮೂಲಕ ಗ್ರಹಿಸುವ ಹೊಸ ದಾರಿಯನ್ನು ಈ ಕಮ್ಮಟ ತೋರಿಸಿಕೊಟ್ಟಿತು.

​ವಿಭಿನ್ನ ನಿರೂಪಣಾ ಶೈಲಿಗಳು: ಕಾದಂಬರಿಯೊಂದನ್ನು ಓದುವಾಗ ತೋರಿಸುವ ನಿರೂಪಣೆ, ಹೇಳುವ ನಿರೂಪಣೆ, ವಿವರಿಸುವ ನಿರೂಪಣೆ ಮತ್ತು ವ್ಯಾಖ್ಯಾನಿಸುವ ನಿರೂಪಣೆ ಎಂಬ ನಾಲ್ಕು ಬಗೆಯ ಭಿನ್ನ ಆಯಾಮಗಳನ್ನು ಅರಿಯಲು ಈ ಕಮ್ಮಟ ಸಹಕಾರಿಯಾಯಿತು.

​ಸಿದ್ದಾಂತಗಳ ಮುಕ್ತತೆ: ಯಾವುದೇ ಪೂರ್ವಗ್ರಹ ಪೀಡಿತ ಸಿದ್ಧಾಂತಗಳನ್ನು ಇಟ್ಟುಕೊಳ್ಳದೆ, ಕಾದಂಬರಿಯ ಒಳಗಿನ ವಿವರಗಳನ್ನೇ ಆಧರಿಸಿ ಕೃತಿಯನ್ನು ಪ್ರವೇಶಿಸುವ ಬಗೆಯನ್ನು ಕೆ.ವಿ. ನಾರಾಯಣ ಅವರು ಕಲಿಸಿಕೊಟ್ಟರು.

​ಆಳವಾದ ಚರ್ಚೆಗಳು: ಕಾದಂಬರಿಯಲ್ಲಿ ಉತ್ಪಾದನಾ ಸಂಬಂಧಗಳ ಕೊರತೆ, ಶ್ರಮಿಕ ವರ್ಗದ ಬದುಕು, ಮತ್ತು ಅಂದಿನ ವ್ಯವಸ್ಥೆಯ ಕ್ರೂರ ಮುಖಗಳನ್ನು ಯಾವ ಪೂರ್ವಗ್ರಹಗಳೂ ಇಲ್ಲದೆ ವಿಶ್ಲೇಷಿಸುವ ಗಂಭೀರ ಚರ್ಚೆಗಳು ಇಲ್ಲಿ ನಡೆದವು.  ಕಾದಂಬರಿಯನ್ನು ಸಮಾಜೋ – ರಾಜಕೀಯ ಹಿನ್ನೆಲೆಯಲ್ಲಿ ಆಳವಾಗಿ ವಿಶ್ಲೇಷಿಸಬೇಕಿತ್ತು. ಆದರೆ ಅದಾಗಲಿಲ್ಲ. ಇದು ಒಂದು ಕೊರತೆ ಎಂದು ನನಗನ್ನಿಸಿತು. ಈ ಸಂದರ್ಭದಲ್ಲಿಯೇ ಹೇಳುವುದಾದರೆ ಅವರ ʼಹೊಸ ಓದುಗರಿಗೆ ಕುವೆಂಪುʼಕೃತಿಯ ಬಗ್ಗೆಯೂ ನನಗೆ ತಕರಾರುಗಳಿವೆ. ಮತ್ತೆ ಬರೆಯಲು ಪ್ರಯತ್ನಿಸುತ್ತೇನೆ.

​ಕೆ.ವಿ. ನಾರಾಯಣ ಅವರು ಯಾವುದೇ ಗಹನವಾದ ಚರ್ಚೆಯನ್ನು ಕಡೆಗಣಿಸುತ್ತಿರಲಿಲ್ಲ. ಕಾದಂಬರಿಯ ಜಗತ್ತಿನಲ್ಲಿ ಸಿಗುವ ಸಣ್ಣಪುಟ್ಟ ಸುಳಿವುಗಳನ್ನು ಹಿಡಿದು ಅದರ ಆಳ-ಅಗಲಗಳನ್ನು ಗ್ರಹಿಸುವ ದಾರಿಯನ್ನು ಅವರು ತೋರಿಸುತ್ತಿದ್ದರು. ಕೇವಲ ಉಪನ್ಯಾಸಗಳಿಗೆ ಸೀಮಿತವಾಗದೆ, ಸಾಹಿತ್ಯದ ಪ್ರತಿ ಅಕ್ಷರದಲ್ಲೂ ಅಡಗಿರುವ ಮನುಷ್ಯ ಸಂಬಂಧಗಳ ಸಂಕೀರ್ಣತೆಯನ್ನು ಅರ್ಥೈಸುತ್ತಿದ್ದರು.

​ಅವರ ಈ ಚಿಂತನಾ ಕ್ರಮವು ಸಾಹಿತ್ಯ ಲೋಕದಲ್ಲಿ ಕೇವಲ ಓದುವಿಕೆಯನ್ನು ವಿಸ್ತರಿಸುವುದಷ್ಟೇ ಅಲ್ಲದೆ, ಬರವಣಿಗೆಯ ದಿಕ್ಕನ್ನೇ ಬದಲಾಯಿಸುವ ಶಕ್ತಿಯನ್ನು ಹೊಂದಿದೆ. ಕೆ.ವಿ. ನಾರಾಯಣ ಅವರ ಅಗಲಿಕೆ ಕನ್ನಡ ನಾಡಿಗೆ ಮತ್ತು ಭಾಷಾ ವಿಜ್ಞಾನ ಕ್ಷೇತ್ರಕ್ಕೆ ತುಂಬಲಾರದ ನಷ್ಟ. ಆದರೆ ಅವರು ಬಿಟ್ಟುಹೋಗಿರುವ ಚಿಂತನೆಯ ದಾರಿಗಳು ಮುಂದಿನ ಪೀಳಿಗೆಯ ಸಂಶೋಧಕರಿಗೆ ಮತ್ತು ಸಾಹಿತ್ಯಾಸಕ್ತರಿಗೆ ಸದಾ ದಾರಿದೀಪವಾಗಿರುತ್ತವೆ.

ಮುಕ್ತಾಯದ ಮುನ್ನ

ಸಾಮಾನ್ಯವಾಗಿ ೬೦ ವರ್ಷ ಆಯಿತು ಎಂದರೆ ಕೆಲವರು ʼಅರಳು-ಮರಳುʼ ಎನ್ನುವಂತೆ ಇರುತ್ತಾರೆ. ಕೆ.ವಿ.ಎನ್.‌ ಇದಕ್ಕೆ ಅಪವಾದ. ೭೮ನೇ ವಯಸ್ಸಿನಲ್ಲಿಯೂ ಅವರಿಗಿದ್ದ ನೆನಪಿನ ಶಕ್ತಿ ಅಗಾಧ. ಕುಪ್ಪಳ್ಳಿಯ ಕಮ್ಮಟಗಳಲ್ಲಿ ಪರಸ್ಪರ ಪರಿಚಯದ ಸೆಶನ್‌ ನಂತರ ಶಿಬಿರಾರ್ಥಿಗಳಲ್ಲಿ ಯಾರಾದರೂ ಮಾತನಾಡಿದರೆ ಅವರ ಹೆಸರು ಹಿಡಿದು ಮಾತನಾಡುತ್ತಿದ್ದರು. ರೌಂಡ್‌ ಟೇಬಲ್‌ ಮಾದರಿಯ ಸೆಶನ್‌ ಗಳಲ್ಲಿಯೂ ಅವರ ಹಿಂದೆ ಕುಳಿತವರು ಮಾತನಾಡಿದರೆ ಧ್ವನಿಯಿಂದಲೇ ಅವರು ಯಾರು ಎಂದು ಗುರುತಿಸಿ, ಹೆಸರು ಹೇಳಿಯೇ ಮುಂದಿನ ಸಂಭಾಷಣೆಗೆ ಅನುವು ಮಾಡಿಕೊಡುತ್ತಿದ್ದರು. ಶಿಬಿರಕ್ಕೂ ಮುನ್ನ ಒಂದೆರಡು ಸಂಗತಿಗಳ ಚರ್ಚೆಯನ್ನು ನಾನು ಮಾಡಿದ್ದೆ. ಅವುಗಳನ್ನು ನೆನಪಿನಲ್ಲಿ ಇಟ್ಟುಕೊಂಡು ನನ್ನ ಹೆಸರು ಉಲ್ಲೇಖಿಸಿ ಆ ಸಂಗತಿಗಳನ್ನು ಪ್ರಸ್ತಾಪಿಸುತ್ತಿದ್ದರು. ಎರಡೂ ಶಿಬಿರಗಳಲ್ಲಿಯೂ ಕೆ.ವಿ.ಎನ್.‌ ಅವರು ನನ್ನ ಹೆಸರನ್ನು ಹೆಚ್ಚು ಬಾರಿ ಉಲ್ಲೇಖಿಸಿ ಮಾತನಾಡಿದ್ದು ನನ್ನ ಅದೃಷ್ಟ ಎಂದೇ ಭಾವಿಸುತ್ತೇನೆ.

ಕೆ.ವಿ.ಎನ್.‌ ಅವರು ಕಾಲದಲ್ಲಿ ಲೀನವಾದರು ಎಂದು ನಾನು ಭಾವಿಸುವುದಿಲ್ಲ. ಕಾಲದಲ್ಲಿ ಕಾಲವಾದರು ಎನ್ನುತ್ತೇನೆ. ಏಕೆಂದರೆ ಕಾಲ ಸದಾ ಜೀವಂತ! ಅವರು ನೀಡಿದ ಕೃತಿಗಳು ಸಹ ಹಾಗೆಯೇ. ಅಂದಹಾಗೆ ಕೆ.ವಿ.ಎನ್.‌ ಸ್ನೇಹಬಳಗದವರು ಇದೇ ನವೆಂಬರ್‌ ೧೪ರಂದು  ಬೆಂಗಳೂರು ಅರಮನೆ ರಸ್ತೆಯ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ನುಡಿ ನಮನ ಆಯೋಜಿಸಿದ್ದಾರೆ. ನೀವೂ ಬನ್ನಿ

You may also like

Leave a Comment

error: Content is protected !!