ದ್ರಾವಿಡರ ಆಚರಣೆಗಳು ವಿಭಿನ್ನ – ವಿಶಿಷ್ಟ. ಅದರಲ್ಲಿಯೂ ತಮಿಳುನಾಡು, ಅಲ್ಲಿಯೂ ದಕ್ಷಿಣ ತಮಿಳುನಾಡಿನ ಪ್ರದೇಶಗಳಲ್ಲಿ ಹುಟ್ಟು ಮತ್ತು ಸಾವಿನ ಆಚರಣೆಗಳು ಮತ್ತಷ್ಟೂ ವಿಶಿಷ್ಟ. “ಹೆಣ ಶೃಂಗಾರ ಅರಿಯುವುದೇ; ಊರು ಉಪಕಾರ ಬಲ್ಲುದೇ ಎಂಬ ರೂಢಿ ಮಾತಿದೆ. ಆದರವರು ಹೆಣ ಶೃಂಗಾರ ಅರಿಯುವುದಿಲ್ಲ ಎಂದು ಭಾವಿಸುವುದಿಲ್ಲ. ಮೃತದೇಹಕ್ಕೆ ಅಲಂಕಾರ ಮಾಡುವ, ಆತನ ಗುಣಗಾನ ಮಾಡುವ, ನರ್ತನ ಮಾಡುವ ಮೂಲಕ ಅಪರೂಪದ ಗೌರವ ಸಲ್ಲಿಸುತ್ತಾರೆ.
ನೀವು ರುಡಾಲಿ ಸಿನೆಮಾ ನೋಡಿರಬಹುದು. ಶವಗಳ ಮುಂದೆ ಬಾಡಿಗೆ ಪಡೆದು ರೋಧಿಸುವವರು. ಹೆಚ್ಚುಹೆಚ್ಚು ರೋಧಿಸಿದಷ್ಟು ಅವರಿಗೆ ಸಂಭಾವನೆ ಹೆಚ್ಚೆಚ್ಚು ಕೊಡುವವರೂ ಇದ್ದಾರೆ. ತಮಿಳುನಾಡಿನ ಮಧುರೈ ಮತ್ತದರ ಸುತ್ತಮುತ್ತಲಿನ ಪ್ರದೇಶದಲ್ಲಿಯೂ ಇದೇ ಮಾದರಿ ಆಚರಣೆ ಇದೆ. ಇದು “ಒಪ್ಪಾರಿ” ಜನಪದ ಶೈಲಿಯ ರಾಗಬದ್ಧ ಪ್ರಲಾಪ. ಮೃತನ ಸಂಬಂಧಿಕರ ಮಹಿಳೆಯರಿಗೆ ಇಂಥ ಶೈಲಿಯ ಪರಿಚಯವಿದ್ದರೆ ಅವರೂ ಪ್ರಲಾಪಿಸುತ್ತಾರೆ. ಸಂಬಂಧಿಕರಲ್ಲದ ಮಹಿಳೆಯರಿಂದಲೂ “ಒಪ್ಪಾರಿ” ಮಾಡಿಸಿ ಗೌರವಧನ ನೀಡಿ ಕಳಿಸುವವರರೂ ಇದ್ದಾರೆ. ಇವೆಲ್ಲದರ ಜೊತೆಗೆ ಶವಕ್ಕೆ ಮೇಕಪ್ ಮಾಡಿಸಿದ ನಂತರವೇ ಮೆರವಣಿಗೆ ಮಾಡಿ ಅಂತ್ಯಕ್ರಿಯೆ ನಡೆಸಲಾಗುತ್ತದೆ. ಅಂದಹಾಗೆ ನೂರಾರು ವರ್ಷಗಳಿಂದ ಪರಂಪರೆ ಪರಂಪರೆಯಾಗಿ ಶವಕ್ಕಷ್ಟೆ ಮೇಕಪ್ ಮಾಡುವುದನ್ನೇ ವೃತ್ತಿಯನ್ನಾಗಿಸಿಕೊಂಡವರು ಅಲ್ಲಿದ್ದಾರೆ.
ಒಪ್ಪಾರಿ ಮತ್ತು ಶವಕ್ಕೆ ಮೇಕಪ್ ಮಾಡುವ ವೃತ್ತಿಯಲ್ಲಿರುವವರ ಕಥನಗಳನ್ನು “ಸೆತುಂ ಆಯಿರಮ್ ಪಣ್” ತಮಿಳು ಸಿನೆಮಾ ಹೇಳುತ್ತದೆ. ಇದು ಸಂಪ್ರದಾಯಗಳನ್ನಷ್ಟೇ ಹೇಳುವುದಕ್ಕೆ ಸೀಮಿತವಾಗಿದ್ದರೆ ಖಂಡಿತ ಡಾಕ್ಯುಮೆಂಟರಿಯಾಗುತ್ತಿತ್ತು. ಗ್ರಾಮೀಣರ ಭಾವನೆ-ಭಾವೋನ್ಮದ – ವಿರಸ –ಸರಸಗಳನ್ನು ಕೂಡ ಕಟ್ಟಿಕೊಡುತ್ತದೆ.
ಬಿಸಿಲು ರವರವ ರಾಚುವ – ನೆಲ ಕಾದು ನಿಗಿನಿಗಿ ಎನ್ನುವ ಹೊತ್ತಿನಲ್ಲಿ ಭಾರದ ಲಗೇಜು – ದುಬಾರಿ ಮೇಕಪ್ ಕಿಟ್ ನೊಂದಿಗೆ ಯುವತಿಯೊಬ್ಬಳು “ಅಪ್ಪಾನೂರು” ಎಂಬ ಗ್ರಾಮ ಇನ್ನೂ ಸಾಕಷ್ಟು ದೂರವಿರುವಾಗಲೇ ಬಸ್ಸಿನಿಂದ ಇಳಿಯುತ್ತಾಳೆ. ಕ್ಯಾಮೆರಾ ಕಥೆ ಹೇಳಲು ಆರಂಭಿಸುತ್ತದೆ.ಈಕೆ ತನ್ನ ಅಜ್ಜಿಯನ್ನು ಅಗಲಿ ಬಹಳ ವರ್ಷಗಳಾಗಿವೆ. ಮೊಗದ ನೆನಪಾಗಲಿ – ಮನೆಯ ನೆನಪಾಗಲಿ ಇಲ್ಲ. ಆದರೆ ಅಜ್ಜಿ ಬಗ್ಗೆ ಗೊತ್ತಿಲ್ಲದವರೇ ಇಲ್ಲ. ಸಣ್ಣಮಕ್ಕಳಿಗೂ ಪರಿಚಯವಿದೆ.
ಅವರು ವೃದ್ಧನ ಶವವನ್ನು ಮನೆ ಹೊರಗಿಟ್ಟುಕೊಂಡಲ್ಲಿ ತಂದು ಬಿಡುತ್ತಾರೆ. ಅಜ್ಜಿಯ ಒಪ್ಪಾರಿ ಕಥನಶೈಲಿಯ ಪ್ರಲಾಪಿಸುವಿಕೆ, ಯುವಕನೊಬ್ಬ ಶವಕ್ಕೆ ಮೇಕಪ್ ಮಾಡುವುದರ ದಟ್ಟ ವಿವರಗಳು ಆಕೆಗೂ ಪ್ರೇಕ್ಷಕರಿಗೂ ದೊರೆಯುತ್ತಾ ಹೋಗುತ್ತದೆ. ಅಜ್ಜಿಯಿಂದಲೇ ಊರು ಬಿಟ್ಟು ಹೋಗುವಂತೆ ಆಯಿತು, ತನ್ನಪ್ಪ ಸತ್ತಾಗಲೂ ಬರಲಿಲ್ಲ ಎಂಬ ಸಿಟ್ಟಿನಿಂದ ಅಜ್ಜಿ ಕೃಷ್ಣವೇಣಿ ಮೇಲೆ ಕುದಿಯುತ್ತಿದ್ದ ಮೀರಾ ಅಲಿಯಾಸ್ ಕುಂಜಮ್ಮನಿಗೆ ಸತ್ಯದ ಅರಿವು ಆಗತೊಡಗಿದಂತೆ ಆತ್ಮೀಯತೆ ಮೊಳೆತು ಬೆಳೆಯಲು ಶುರು ಆಗುತ್ತದೆ. ಈ ನುಡವೆ ಹೆಣದ ಮೇಕಪ್ ಆರ್ಟಿಸ್ಟ್ ಗೂ ತನಗೂ ಇರುವ ಸಂಬಂಧಗಳು, ಆ ಕುಟುಂಬದ ಜೊತೆ ಆದ ವಿರಸದದ ವಿವರಗಳೂ ಬಿಚ್ಚಿಕೊಳ್ಳುತ್ತವೆ.
ಚೆನ್ನೈ ಆಕೆಯನ್ನು ಮತ್ತೆ ಕರೆಯುತ್ತದೆ. ಸಿನೆಮಾ ಕಲಾವಿದರಿಗೆ ಮೇಕಪ್ ಮಾಡುವ ತನ್ನ ಎಂದಿನ ಕಾಯಕದಲ್ಲಿ ತೊಡಗಿಸಿಕೊಳ್ಳುತ್ತಾಳೆ. ಒಂದಷ್ಟು ದಿನಗಳ ನಂತರ ಅಪ್ಪಾನೂರಿನಿಂದ ಕರೆ ಬರುತ್ತದೆ. ಆ ಎಲ್ಲ ವಿವರಗಳನ್ನೂ ಹೇಳಲು ಹೋಗುವುದಿಲ್ಲ. ಬಂದವಳು ಒಪ್ಪಾರಿ ಶೈಲಿಯಲ್ಲಿ ಬಹುದುಃಖದಿಂದ ಪ್ರಲಾಪಿಸಲು ಆರಂಭಿಸುತ್ತಾಳೆ.
ಇಲ್ಲಿ ಸ್ವತಃ ಈ ಸಿನೆಮಾಕ್ಕೆ ಕಥೆ – ಚಿತ್ರಕಥೆ ಬರೆದು ನಿರ್ದೇಶಿಸಿದ ಆನಂದ್ ರವಿಚಂದ್ರನ್ ಮನೋಭಾವ ಅನಾವರಣವಾಗುತ್ತದೆ. ನಗರ ಮತ್ತು ಹಳ್ಳಿಯ ಬಗ್ಗೆಗಿರುವ ಆತನ ಧೋರಣೆ ಅರ್ಥವಾಗತೊಡಗುತ್ತದೆ. ಒಪ್ಪಾರಿ ವೃತ್ತಿ ಆಗಲಿ, ಹೆಣಕ್ಕೆ ಮೇಕಪ್ ಮಾಡುವ ಕಾಯಕವನ್ನಾಗಲಿ ಯಾರೂ ಬಯಸಿ ಬಯಸಿ ಮಾಡುವುದಿಲ್ಲ. ಅದೊಂದು ಅನುಚಾನಕ ಅನಿವಾರ್ಯತೆಯಿಂದ ಒಪ್ಪಿಕೊಳ್ಳುವುದಷ್ಟೆ. ಆದರೆ ಅಂಥ ಅನಿವಾರ್ಯತೆ ಇಲ್ಲದ ಮೀರಾ ಕೂಡ ಮತ್ತದೇ ಪಥದಲ್ಲಿ ಸಾಗುತ್ತಾಳೆ ಎನ್ನುವುದು ಎನನ್ನು ಸೂಚಿಸುತ್ತದೆ ?
ಈ ಸಿನೆಮಾದ ಕ್ಯಾಮೆರಾ ವರ್ಕ್ ಅನನ್ಯ. ಛಾಯಾಗ್ರಾಹಕ ಮಣಿಕಾಂತನ್, ಕೃಷ್ಣಮೂರ್ತಿ ಕ್ಯಾಮೆರಾ ಪರಿಭಾಷೆಗಳನ್ನು ಸಶಕ್ತವಾಗಿ ದುಡಿಸಿಕೊಂಡಿದ್ದಾರೆ. ಚಿತ್ರಕಥೆ ವಿಷಯದ ಬಗ್ಗೆ ಹೇಳುವುದಾದರೆ ಅದನ್ನು ಇನ್ನೂ ತಿದ್ದಿತೀಡಬೇಕಿತ್ತು. ನಿರ್ದೇಶನವೂ ಅಲ್ಲಲ್ಲಿ ಬಿಗು ಕಳೆದುಕೊಂಡಿದೆ ಎಂಬ ಭಾವ ಮೂಡದಿರದು. ಸಂಕಲನ, ಹಿನ್ನೆಲೆ ಸಂಗೀತ ಉತ್ತಮ.
ಮೀರಾ, ಕಷ್ಣವೇಣಿ ಮತ್ತು ಕುಬೇರ ಪಾತ್ರಧಾರಿಗಳಾದ ನಿವೇದಿತಾ ಸತೀಶ್, ಶ್ರೀಲೇಖಾ ರಾಜೇಂದ್ರನ್, ಅವಿನಾಶ್ ರಘುದೇವನ್ ತಮ್ಮ ಪಾತ್ರಗಳಿಗೆ ನ್ಯಾಯ ಸಲ್ಲಿಸಿದ್ದಾರೆ. ವಿಶೇಷವಾಗಿ ಕೃಷ್ಣವೇಣಿ ಪಾತ್ರಧಾರಿಯ ಅಭಿನಯ ಮೆಚ್ಚುಗೆ ಪಡೆಯುತ್ತದೆ. ಇನ್ನಿತರ ನಟ-ನಟಿಯರ ಅಭಿನಯವೂ ಕೂಡ ಉತ್ತಮ. ಎಲ್ಲರದು ರಿಯಾಲಿಸ್ಟಿಕ್ ಅನ್ನು ತಲುಪಲೆತ್ನಿಸುವ ಅಭಿನಯ.
ಚಿತ್ರಮಂದಿರಗಳಲ್ಲಿ ತೆರೆಕಾಣಬೇಕಾದ ಸಿನೆಮಾ, ಕೊರೊನಾ ಕಾರಣದಿಂದಾಗಿ 2020ರ ಏಪ್ರಿಲ್ ನಲ್ಲಿ ನೆಟ್ ಫ್ಲಿಕ್ಸ್ ನಲ್ಲಿ ಬಿಡುಗಡೆಯಾಗಿದೆ. ನಿನ್ನೆಯಷ್ಟೇ ನೋಡಿದೆ. ಕಥೆಗಾರ – ನಿರ್ದೇಶಕ ವಿಶೇಷವಾದ ಸಂಗತಿಗಳನ್ನು ಹೇಳುತ್ತಿದ್ದಾನೆ ಎನಿಸಿದರೂ ನಂತರ ಪಿಚ್ಚೆನಿಸಿತು.