ಕಾನ್ ಫಿಲ್ಮ್ ಫೆಸ್ಟಿವಲ್ ಪಾಲ್ಮೆ ಡಿ ಒರ್, ಅಕಾಡೆಮಿ ನೀಡುವ ಆಸ್ಕರ್ ಪ್ರಶಸ್ತಿ ಪಡೆದ ಚಿತ್ರಗಳೆಂದರೆ ಸಿನೆಮಾ ಆಸಕ್ತರಲ್ಲಿ ಬಹು ಕುತೂಹಲವಿರುತ್ತದೆ. ಅದರಲ್ಲಿಯೂ ಸಿನೆಮಾ ಅಧ್ಯಯನಕಾರರಿಗೆ ಬಹುಬಗೆಯ ನಿರೀಕ್ಷೆಗಳಿರುತ್ತವೆ. ಇವರುಗಳ ಅಪೇಕ್ಷೆಯ ಮಟ್ಟವನ್ನು ಮುಟ್ಟುವಲ್ಲಿ “ಪ್ಯಾರಾಸೈಟ್ ಯಶಸ್ವಿಯಾಗಿದೆಯೇ ? ಈ ಪ್ರಶ್ನೆಯನ್ನಿಟ್ಟುಕೊಂಡೆ ಬರೆದ ಲೇಖನವಿದು.
ದಕ್ಷಿಣ ಕೊರಿಯಾದ ವರ್ಗ ವೈರುಧ್ಯಗಳನ್ನೇ ಕೇಂದ್ರಪ್ರಜ್ಞೆಯಾಗಿಟ್ಟುಕೊಂಡು ನಿರ್ಮಿಸಿದ ಸಿನೆಮಾ ಪ್ಯಾರಾಸೈಟ್. ಅಲ್ಲಿನ ತಳ ಆರ್ಥಿಕ ವರ್ಗ – ಬಂಡವಾಳಶಾಹಿ ಶ್ರೀಮಂತ ವರ್ಗಗಳ ನಡುವೆ ಇರುವ ಆರ್ಥಿಕ ಅಂತರಗಳನ್ನೇ ಹೇಳುತ್ತಾ ಹೋಗುವ ಈ ಸಿನೆಮಾ ದುರಂತಗಳ ಸಂದರ್ಭದಲ್ಲಿ ಅವರುಗಳ ಸ್ಥಿತಿ ಏನಾಗಬಹುದು ಎಂಬುದನ್ನೂ ಹೇಳುತ್ತದೆ. ದುರಂತವೆಂದರೆ ಅದು ಪ್ರಾಕೃತಿಕ ದುರಂತವಾಗಬಹುದು, ಯುದ್ಧಗಳ ಸಂದರ್ಭದಲ್ಲಿನ ನ್ಯೂಕ್ಲಿಯರ್ ಬಾಂಬ್ ಸ್ಟೋಟದಿಂದಾಗುವ ದುರಂತವಿರಬಹುದು ಅಥವಾ ನಗರ ನಿರ್ಮಾಣದಲ್ಲಿನ ತಾರತಮ್ಯಗಳ ದುರಂತವಾಗಬಹುದು.
ಸಿನೆಮಾ, ಆರಂಭದಲ್ಲಿಯೇ ನಗರದ ತಗ್ಗು ಪ್ರದೇಶದ ಬೇಸ್ಮೆಂಟಿನಲ್ಲಿ ವಾಸಿಸುವ ಕಿಮ್ ಕುಟುಂಬದ ಆರ್ಥಿಕ ಸ್ಥಿತಿಗತಿ, ಕಷ್ಟಗಳನ್ನು ಕಟ್ಟಿಕೊಡುತ್ತಾ ಹೋಗುತ್ತದೆ.ಅಸಹನೀಯ ವಾತಾವರಣದಲ್ಲಿ ಅವರು ಹೇಗೆ ಬದುಕುತ್ತಿದ್ದಾರೆ, ಅವರುಗಳ ಆಸೆ – ನಿರೀಕ್ಷೆಗಳ ಬಗ್ಗೆ ಹೇಳುತ್ತಾ ಹೋಗುತ್ತದೆ. ಈ ಕುಟುಂಬದ ಯುವಕ ಕಿ ವೂ, ಉದ್ದಿಮೆದಾರ ಪಾರ್ಕ್ ನಿವಾಸಕ್ಕೆ ಹೋದಾಗ ಅಲ್ಲಿನ ವೈಭೋವೋಪೇತ ನಿವಾಸವನ್ನು ವಿವರ ವಿವರವಾಗಿ ತೋರಿಸುತ್ತದೆ.
ಎರಡು ವರ್ಗಗಳ ನಡುವಿನ ಬದುಕಿನ ರೀತಿಗಳನ್ನು ತೋರಿಸಲು ಮಳೆಯೂ ಇಲ್ಲಿ ಒಂದು ಸಾಧನವಾಗಿದೆ. ಕಿಮ್ ಪ್ರತಿನಿಧಿಸುವ ಕುಟುಂಬಕ್ಕೆ ಮಳೆ ದುಸ್ನಪ್ನವಾದರೆ ಪಾರ್ಕ್ ಪ್ರತಿನಿಧಿಸುವ ವರ್ಗಕ್ಕೆ ಅದು ಸುಸ್ವಪ್ನ. ಇದನ್ನು ಸಿನೆಮಾ ದಟ್ಟವಾಗಿಯೇ ಕಟ್ಟಿಕೊಡುತ್ತದೆ. ನಾಟಕೀಯ ಘಟನೆಗಳ ಮುಖಾಂತರ ಪಾರ್ಕ್ ಕುಟುಂಬದ ನೌಕರರಾಗಿ ಒಬ್ಬೊಬ್ಬರಾಗಿ ಸೇರಿಕೊಳ್ಳುವ ಕಿಮ್ ಕುಟುಂಬ ತಮ್ಮ ಅರಿವಿಗೇ ಬಾರದಂತೆ ದುರಂತದೆಡೆಗೆ ಚಲಿಸುತ್ತಾ ಹೋಗುತ್ತದೆ.
ನ್ಯೂಕ್ಲಿಯರ್ ಯುದ್ಧವಾದರೆ ಆಗುವ ಭೀಕರ ಸಾವು – ನೋವುಗಳಿಂದ ಪಾರಾಗಲು ಪಾರ್ಕ್ ನಿವಾಸದಲ್ಲಿ ಇರುವ ಬಂಕರ್ ಚಿತ್ರಣವನ್ನು ಸಿನೆಮಾ ತೆರೆದಿಡುತ್ತದೆ. ನಿರ್ದೇಶಕ ಇದಕ್ಕೆ ಹೆಚ್ಚು ಒತ್ತು ಕೊಟ್ಟಿದ್ದಾನೆ. ಇದೇ ಬಂಕರ್ ಮೂರು ಕುಟುಂಬಗಳ ದುರಂತಕ್ಕೂ ಕಾರಣವಾಗುತ್ತದೆ. ಚಿತ್ರಕಥೆಯನ್ನು ರಚಿಸಿರುವ ಬಾಂಗ್ ಜೂನ್ ಹೂ ಅವರಿಗೆ ಬಂಡವಾಳಶಾಹಿಗಳು ತಮ್ಮನ್ನು ರಕ್ಷಿಸಿಕೊಳ್ಳಲು ಏನೆಲ್ಲ ವ್ಯವಸ್ಥೆ ಮಾಡಿಕೊಂಡಿರುತ್ತಾರೆ ಎಂಬುದನ್ನು ತೋರಿಸುವುದೇ ಮುಖ್ಯ ಉದ್ದೇಶವೆಂಬುದು ಮನದಟ್ಟಾಗುತ್ತದೆ. ಉಳಿದಂತೆಯ ಘಟನೆಗಳು ಇದಕ್ಕೆ ನೆಪವಾಗಿವೆ.
ನಿರ್ದೇಶಕ ತನ್ನ ಉದ್ದೇಶದಲ್ಲಿ ಸಫಲನಾದರೂ ಕಥೆ ಹೇಳುವ ಕ್ರಮದಲ್ಲಿ ಅತಿಹೆಚ್ಚು ರಂಜಕತೆಯೇ ತುಂಬಿಕೊಂಡಿದೆ. ಅವಾಸ್ತವಿಕತೆಗಳ ಸರಮಾಲೆ ಎನಿಸುತ್ತದೆ. ಕಿಮ್ ಕುಟುಂಬದ ಸದಸ್ಯರೆಲ್ಲರೂ ಒಬ್ಬೊಬ್ಬರಾಗಿ ಪಾರ್ಕ್ ಕುಟುಂಬದ ನೌಕರರಾಗಿ ಸೇರಿಕೊಳ್ಳುವ ಕ್ರಮ ಕೂಡ ಇದರಲ್ಲಿ ಸೇರಿದೆ. ಈ ದೃಷ್ಟಿಯಲ್ಲಿ ಪಾರ್ಕ್ ಪ್ರತಿನಿಧಿಸುವ ವರ್ಗವನ್ನು ಹೆಡ್ಡರು ಎಂಬಂತೆ ತೋರಿಸಲಾಗಿದೆ.
ತತ್ವ ಹೇಳುವ ತನ್ನ ಅದುವರೆಗಿನ ವರ್ತನೆಗೆ ಪಶ್ಚಾತಾಪ ಪಟ್ಟಿರುವ ಕಿಮ್ ಅಪ್ರಚೋದಿತವಾಗಿ ಮಾಲೀಕ ಪಾರ್ಕ್ ಎದೆಗೆ ಚೂರಿ ಇರಿಯುವುದಂತೂ ಅಸಹಜವಾಗಿದೆ. ತಳವರ್ಗದವರ ಸಿಟ್ಟು ಮೇಲ್ವರ್ಗದವರ ಮೇಲೆ ಹೀಗೆ ಹೊಮ್ಮುತ್ತದೆ, ಅವರು ಸೇಡು ತೀರಿಸಿಕೊಳ್ಳುತ್ತಾರೆ ಎಂದು ಹೇಳುವುದು ನಿರ್ದೇಶಕನ ಉದ್ದೇಶವಾಗಿದ್ದರೂ ಅದನ್ನು ಹೇಳಿರುವ ರೀತಿ ಅಪ್ರಬುದ್ಧವಾಗಿದೆ. Cinema – Parasite – South Korea – Bong Joon-ho – oscar
ನೆಲಮಾಳಿಗೆಯಲ್ಲಿ ಅವಿತುಕೊಂಡು ನಿರ್ಜೀವದಂತಾಗಿದ್ದ ಗಿವೂನ್ ಸೆ ದೇಹಧ್ಯಾಢ್ಯ ಪಟುವಿನಂತೆ ಎಲ್ಲರ ಮೇಲೂ ಎರಗಿ ಹೋಗುವುದು ಕೂಡ ಇಡೀ ಒಟ್ಟಂದಕ್ಕೆ ಒಗ್ಗಿಕೊಳ್ಳದೇ ಹೋಗುತ್ತದೆ. ಪ್ರೇಕ್ಷಕರನ್ನು ಅನಿರೀಕ್ಷಿತ ತಿರುವುಗಳಿಂದ ಬೆಚ್ಚಿಬೀಳಿಸುವ ಉದ್ದೇಶ ಹೊಂದಿರುವ ಬಾಂಗ್ ಜೂನ್ ಹು ಅದಕ್ಕೊಂದು ತಾರ್ಕಿಕ ಸ್ಪರ್ಶ ಕೊಡುವಲ್ಲಿ ವಿಫಲವಾಗಿದ್ದಾರೆ.
“ಪ್ಯಾರಾಸೈಟ್ ಸಿನೆಮಾಕ್ಕಿಂತಲೂ ಬಹು ಸಮರ್ಥವಾಗಿ ವರ್ಗ ಸಂಘರ್ಷ, ವೈರುಧ್ಯ, ತಾರತಮ್ಯ ಹೇಳುವ ಸಿನೆಮಾಗಳು ಬಂದಿವೆ. ಬರ್ನಿಂಗ್, ದ ಪೋಸ್ಟ್, ಮದರ್ ಇದಕ್ಕೆ ಕೆಲವು ಉದಾಹರಣೆಗಳು. ವರ್ಗ ವೈರುಧ್ಯವನ್ನು ವಿಭಿನ್ನವಾಗಿ ಹೇಳಲು ಹೊರಟ ನಿರ್ದೇಶಕ ಬಾಂಗ್ ಜೂನ್ ಹು ಅದರಲ್ಲಿ ಸಫಲವಾಗಿಲ್ಲ. ಇದು ಮಸಾಲೆ ಸಿನೆಮಾದ ಎಲ್ಲ ಅಂಶಗಳನ್ನು ಇಟ್ಟುಕೊಂಡಿರುವ, ಸಾಧಾರಣ ನಿರೂಪಣೆ ಚಿತ್ರ. ಪಾಲ್ಮೆ ಡಿ ಒರ್, ಆಸ್ಕರ್ ಬಂದಿದೆ ಎಂಬ ಮಾತ್ರಕ್ಕೆ ಇದನ್ನು ಅತ್ಯುತ್ತಮ ಎಂದು ಪರಿಗಣಿಸುವ ಅವಶ್ಯಕತೆಯಿಲ್ಲ” ಎಂದು ಕಾಲೇಜು ಉಪನ್ಯಾಸಕ, ಸಿನೆಮಾ ಅಧ್ಯಯನಕಾರ ಪ್ರದೀಪ್ ಕುಮಾರ್ ಅಭಿಪ್ರಾಯಪಡುತ್ತಾರೆ.
“ಬೆಂಗಳೂರು ಫಿಲ್ಮ್ ಫೆಸ್ಟಿವಲ್ ಸಂದರ್ಭದಲ್ಲಿ ಎರಡು ತಾಸು ಸರದಿಯಲ್ಲಿ ಕಾದು ಕುಳಿತು ಸಿನೆಮಾ ನೋಡಿದೆ. ಹೊರಬಂದ ನಂತರ ನನ್ನಲ್ಲಿ ಉಳಿದಿದ್ದು ನಿರಾಶೆ ಮಾತ್ರ. ಇದು ತೀರಾ ಸಾಧಾರಣ ಸಿನೆಮಾ, ಚಿತ್ರಕಥೆ ರಚನೆಯಲ್ಲಿಯೂ ಅನೇಕ ದೋಷಗಳಿವೆ. ದೃಶ್ಯಗಳನ್ನು ಬೆಳೆಸಿರುವ ಕ್ರಮವೂ ಅತಾರ್ಕಿಕ. ಛಾಯಾಗ್ರಹಣವೂ ಬೆಸ್ಟ್ ಎನ್ನುವ ರೀತಿ ಇಲ್ಲ. ಇಂಥ ಸಿನೆಮಾಕ್ಕೆ ಆಸ್ಕರ್ ಬಂದಿರುವುದು ಅಚ್ಚರಿಯ ವಿಷಯ” ಎಂದು ಛಾಯಾಗ್ರಾಹಕ, ಡಿಸೈನರ್ ಗೌರೀಶ್ ಕಪನಿ ಅಚ್ಚರಿ ವ್ಯಕ್ತಪಡಿಸುತ್ತಾರೆ.
ಗೌರೀಶ್ ಕಪನಿ ಅವರು ಚಿತ್ರಕಥೆಯ ಲೋಪಗಳನ್ನು ಪಟ್ಟಿ ಮಾಡುತ್ತಾ ಹೋಗುತ್ತಾರೆ. ಉದ್ದಿಮೆದಾರ ಪಾರ್ಕ್ ಹೆಡ್ಡ ಎನ್ನುವಂತೆ, ಶ್ರೀಮತಿ ಪಾರ್ಕ್ ಮುಗ್ದೆ ಎಂಬಂತೆ ಚಿತ್ರಿಸಿರುವುದು, ಮನೆ ಗಲೀಜಾಗಿದ್ದರೂ, ವಾಸನೆ ಬರುತ್ತಿದ್ದರೂ ಅದರ ಬಗ್ಗೆ ಅರಿಯಲು ಹೋಗದೇ ವಾಸನೆ ಬರುತ್ತಿರುವುದರ ಸ್ಥಳದಲ್ಲಿಯೇ ಮಲಗುವುದು, ಕಾರಿನಲ್ಲಿ ಹೋಗುವಾಗ ಚಾಲಕ ಕಿಮ್ ಧರಿಸಿದ್ದ ಬಟ್ಟೆಯ ದುರ್ವಾಸನೆ ಗ್ರಹಿಸುವ ಪಾರ್ಕ್, ಶ್ರೀಮತಿ ಪಾರ್ಕ್ ಆತನೊಂದಿಗೆ ಆತನ ಇಬ್ಬರು ಮಕ್ಕಳು ಸನಿಹದಲ್ಲಿಯೇ ಅಡಗಿದ್ದರೂ ಅದರ ವಾಸನೆ ಸಹಿಸಿಕೊಂಡು ಸುಮ್ಮನಾಗುವುದು, ಗಿವೂನ್ ಸೆ ಆಂಗಿಕ ಭಾಷೆ , ವಾಸ್ತವತೆಗೆ ಕೊಂಚವೂ ಹೊಂದಿಕೊಳ್ಳದಂತೆ ಸಂಪೂರ್ಣ ಬದಲಾಗುವುದು, ಕಿಮ್ ಅನಿರೀಕ್ಷಿತವಾಗಿ ಪಾರ್ಕ್ಗೆ ಚೂರಿ ಹಾಕುವುದು, ಮನೆಯ ವಿದ್ಯುತ್ ದೀಪಗಳು ಪದೇಪದೇ ಆನ್ ಆ್ಯಂಡ್ ಆಫ್ ಆಗುತ್ತಿದ್ದರೂ ಮನೆ ಮಾಲೀಕರು ನಿರ್ಲಕ್ಷ್ಯ ವಹಿಸುವುದು, ಕೊಲೆ ಮಾಡಿದ ನಂತರ ಕಿಮ್ ಇದ್ದಕ್ಕಿಂತೆ ಹೇಗೆ ಅದೃಶ್ಯನಾದ ಹೇಗೆ ಎಂದು ತನಿಖೆ ಮಾಡುವ ಪೊಲೀಸರು ನೆಲಮಾಳಿಗೆ ಸಾಧ್ಯತೆ ಬಗ್ಗೆ ಯೋಚಿಸದಿರುವುದು, ಹೀಗೆ ಅನೇಕ ಅತಾರ್ಕಿಕ ಅಂಶಗಳನ್ನು ಹೇಳುತ್ತಾರೆ.
ರಾಜಕೀಯವಿದೆಯೇ
ಯುರೋಪಿನ ಕಾನ್ ಫೆಸ್ಟಿವಲ್ ಸಂದರ್ಭದ ಗೋಲ್ಡನ್ ಪಾಮ್ಸ್ (ಪಾಲ್ಮೆ ಡಿ ಒರ್) ಫಿಲಂ ಅಮೆರಿಕಾದ ಆಸ್ಕರ್ ಪ್ರಶಸ್ತಿ ಬಗ್ಗೆ ಅನೇಕ ಅಸಮಧಾನಗಳು, ತಕರಾರುಗಳು ಇವೆ. ಇಲ್ಲಿ ಪ್ರಶಸ್ತಿ ಪಡೆದ ಚಿತ್ರಗಳೆಲ್ಲವೂ ಅತ್ಯುತ್ತಮ ಎಂದು ಪರಿಗಣಿಸಬೇಕಿಲ್ಲ ಎಂದು ಅನೇಕರು ಅಭಿಪ್ರಾಯಪಡುತ್ತಾರೆ. ಏಶಿಯಾದ ಕೆಳವರ್ಗ – ಮೇಲ್ವರ್ಗಗಳ ನಡುವಿನ ಆಕಾಶ –ಭೂಮಿಯಷ್ಟು ಅಸಮಾನತೆ, ಬಂಡವಾಳಶಾಹಿಗಳು ಭೀಕರ ಅಪಾಯಗಳಿಂದ ಪಾರಾಗಲು ಮಾಡಿಕೊಂಡ ವ್ಯವಸ್ಥೆಯನ್ನು ಜಗತ್ತಿಗೆ ಎತ್ತಿ ತೋರಿಸುವ ಉದ್ದೇಶವೂ ಪ್ರಶಸ್ತಿ ಹಿಂದೆ ಇರುವುದನ್ನು ತಳ್ಳಿ ಹಾಕಲು ಸಾಧ್ಯವಿಲ್ಲ.