ಕಾವಲು ಇದ್ದವರೇ ಕಳ್ಳರಾದರೆ ಯಾರನ್ನು ನಂಬುವುದು ? ಅರಣ್ಯ ಇಲಾಖೆಯಲ್ಲಿ ಮಾವುತರದ್ದು ಮಹತ್ವದ ಹುದ್ದೆ. ಶ್ರೇಣಿಯಲ್ಲಿ ಕೆಳಹಂತದ ಹುದ್ದೆಯಾದರೂ ಇರುವ ಜವಾಬ್ದಾರಿ ಹೆಚ್ಚಿನದು. ಆನೆಯ ಉಸ್ತುವಾರಿ ನೋಡಿಕೊಳ್ಳುವುದರ ಜೊತೆಗೆ ಅರಣ್ಯ ಸಂರಕ್ಷಣೆ ಮಾಡುವ ಜವಾಬ್ದಾರಿಯೂ ಇವರಿಗಿರುತ್ತದೆ. ವಿಶೇಷವಾಗಿ ಹಳ್ಳಿಯ ಸರಹದ್ದಿಗೆ ಹೋದ ಹುಲಿ, ಆನೆಗಳನ್ನು ಸಾಕಾನೆಗಳ ನೆರವಿನೊಂದಿಗೆ ಕಾಡಿನತ್ತ ತೆರಳುವಂತೆ ಮಾಡುವ ಕಾರ್ಯದಲ್ಲಿ ಮಹತ್ವದ ಪಾತ್ರ ವಹಿಸುತ್ತಾರೆ.
ಇಂಥ ಜವಾಬ್ದಾರಿ ಹೊಂದಿದ್ದ ನಾಗರಹೊಳೆ ಹುಲಿ ಸಂರಕ್ಷಿತಾರಣ್ಯದ ಇಬ್ಬರು ಮಾವುತರು ಕಾಡು ಹಂದಿ ಬೇಟೆಯಲ್ಲಿ ತೊಡಗಿಸಿಕೊಂಡಿದ್ದು ಸಾಬೀತಾದ ಹಿನ್ನೆಲೆಯಲ್ಲಿ ಉದ್ಯೋಗದಿಂದ ಅಮಾನತುಗೊಳಿಸಲಾಗಿದೆ.
ನಾಗರಹೊಳೆ ಹುಲಿ ಅಭಯಾರಣ್ಯದ ವ್ಯಾಪ್ತಿಯ ಹುಣಸೂರು ವಿಭಾಗದ ದೊಡ್ಡ ಹರವೆ ಆನೆ ಶಿಬಿರದ ಸಾಕಾನೆ ಮಾಸ್ತಿ, ಮಾವುತ ಹೆಚ್.ಎನ್. ಮಂಜು, ರಾಮಯ್ಯ ಹೆಸರಿನ ಸಾಕಾನೆ ಮಾವುತ ಜೆ.ಡಿ. ಮಂಜು ಅಮಾನತಾದವರು. ನಾಗರಹೊಳೆ ಅಭಯಾರಣ್ಯದ ಉಪ ಅರಣ್ಯ ಸಂರಕ್ಷಣಾಧಿಕಾರಿ ಪಿ.ಎ. ಸೀಮಾ ಅವರು ಈ ಸಂಬಂಧಿತ ಆದೇಶ ಹೊರಡಿಸಿದ್ದಾರೆ.
ಆರೋಪಿಗಳಿಬ್ಬರೂ ನಾಗಪುರ ಬುಡಕಟ್ಟು ವಸಾಹತು ನಿವಾಸಿಗಳು. ಇವರು ಹುಣಸೂರು ಸನಿಹದ ನೇರಲಕುಪ್ಪೆ ಗ್ರಾಮದ ಕಳ್ಳ ಬೇಟೆಗಾರ ಮಂಜು ಜೊತೆ ವನ್ಯಪ್ರಾಣಿಗಳನ್ನು ಬೇಟೆಯಾಡುವುದರಲ್ಲಿ ಶಾಮೀಲಾಗಿದ್ದರು ಎಂದು ಆರೋಪಿಸಲಾಗಿದೆ. ದೊಡ್ಡ ಹರವೆ ಅರಣ್ಯದ ಉಪ ವಲಯ ಅರಣ್ಯಾಧಿಕಾರಿಯು ಆರೋಪಿ ಮಾವುತನ ಮನೆಯಲ್ಲಿ ಅಕ್ರಮ ಬಂದೂಕು ಇದ್ದಿದ್ದು ಪತ್ತೆ ಹಚ್ಚಿ ವಶಪಡಿಸಿಕೊಂಡಿದ್ದಾರೆ.
ಅಕ್ರಮ ಬಂದೂಕು, ಕಳ್ಳಬೇಟೆಗಾರ ಮಂಜುವಿಗೆ ಸೇರಿದ್ದು ಎನ್ನಲಾಗಿದೆ. ಇದನ್ನು ಬಳಸಿ ಮೂವರು ಆರೋಪಿಗಳು ವನ್ಯಪ್ರಾಣಿಗಳನ್ನು ಬೇಟೆಯಾಡುತ್ತಿದ್ದರು. ದೊಡ್ಡ ಹರವೆ ಕಾಡಿನ ಸರಹದ್ದಿನಲ್ಲಿ ಮೂವರು ಕಾಡು ಹಂದಿ ಬೇಟೆಯಲ್ಲಿ ಪಾಲ್ಗೊಂಡಿದ್ದರು. ಕಳ್ಳ ಬೇಟೆಗಾರ ಮಂಜು ಪರಾರಿಯಾಗಿದ್ದು ಆತನ ಪತ್ತೆಗಾಗಿ ತನಿಖೆ ಮುಂದುವರಿದಿದೆ. ಆರೋಪಿಗಳ ಮೇಲೆ ವನ್ಯಜೀವಿ ರಕ್ಷಣಾ ಕಾಯಿದೆ 1972ರ ಅನ್ವಯ ಪ್ರಕರಣ ದಾಖಲಾಗಿದೆ. ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಲಾಗುವುದು ಎಂದು ಅರಣ್ಯಾಧಿಕಾರಿಗಳು ಹೇಳಿದ್ದಾರೆ.
ನಾಗರಹೊಳೆ ಟೈಗರ್ ರಿಸರ್ವಿಗೆ ಸೇರಿದ ಸಿಬ್ಬಂದಿಯ ಮೇಲೆ ಮೊದಲ ಬಾರಿಗೆ ವನ್ಯಪ್ರಾಣಿಗಳ ಕಳ್ಳಬೇಟೆ ಆರೋಪ ಉಂಟಾಗಿದೆ. ಆರೋಪಿಗಳ ವಿಚಾರಣೆ ನಂತರ ಅವರನ್ನು ಕೆಲಸದಿಂದ ವಜಾ ಮಾಡಲು ಯೋಜಿಸಲಾಗಿದೆ ಎಂದು ಅರಣ್ಯಾಧಿಕಾರಿ ಹೇಳಿದ್ದಾರೆ.
ಇದನ್ನೂ ಓದಿ: http://ಮಾಹಿತಿದಾರರ ಮಾಹಿತಿಯನ್ನು ಬಹಿರಂಗಪಡಿಸುವುದು ನೈತಿಕತೆಯೇ
ಇಂದು ಬೆಳಗ್ಗೆ ಕುಮಾರರೈತ ಡಾಟ್ ಕಾಮ್ ನಲ್ಲಿ ಪ್ರಕಟವಾದ “ಮಾಹಿತಿದಾರರ ಮಾಹಿತಿಯನ್ನು ಬಹಿರಂಗಪಡಿಸುವುದು ನೈತಿಕತೆಯೇ” ಶೀರ್ಷಿಕೆ ಲೇಖನದಲ್ಲಿ” ನಾಗರಹೊಳೆಯಲ್ಲಿ ಕೆಲವು ಮಾವುತರು ಮತ್ತು ಕವಾಡಿಗಳು ನಿಯಮಿತವಾಗಿ ಜಿಂಕೆ ಮತ್ತಿತರ ವನ್ಯಪ್ರಾಣಿಗಳನ್ನು ಬೇಟೆಯಾಡಿ ಆನೆ ಶಿಬಿರಗಳಲ್ಲಿ ತಮ್ಮ ಸಹೋದ್ಯೋಗಿಗಳೊಂದಿಗೆ ಹಂಚಿಕೊಳ್ಳುತ್ತಾರೆ ಎಂಬ ಆರೋಪಗಳಿವೆ. ಇದರ ಬಗ್ಗೆಯೂ ತನಿಖೆಯಾಗಿ ಆರೋಪ ನಿಜವಾಗಿದ್ದರೆ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಪರಿಸರವಾದಿಗಳು ಒತ್ತಾಯಿಸಿದ್ದಾರೆ” ಎಂಬುದು ಉಲ್ಲೇಖವಾಗಿತ್ತು.

Similar Posts

Leave a Reply

Your email address will not be published. Required fields are marked *