ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ, ನಿವೃತ್ತರ ಸ್ವರ್ಗ, ಐತಿಹಾಸಿಕ ನಗರಿ, ಸ್ವಚ್ಚ, ಸುಂದರ ನಗರ ಇತ್ಯಾದಿ ಸಕಾರಾತ್ಮಕ ಹೆಗ್ಗಳಿಕೆಗಳಿಗೆ ಮೈಸೂರು (Mysuru) ಪಾತ್ರವಾಗಿದೆ. ಇದು ಕರ್ನಾಟಕ ರಾಜ್ಯದ ಮತ್ತೊಂದು ಸಿಲಿಕಾನ್ ವ್ಯಾಲಿ (Silicon Valley) ಆಗಬೇಕೇ ?
“ಮೈಸೂರನ್ನು ಸಿಲಿಕಾನ್ ವ್ಯಾಲಿಯಾಗಿ ರೂಪಿಸಲು ಎಲ್ಲ ರೀತಿಯ ಅವಕಾಶವಿದೆ. ಈ ದಿಶೆಯಲ್ಲಿ ಸಂಬಂಧಿಸಿದವರು ಕಾರ್ಯಪ್ರವೃತರಾಗುವ ಅವಶ್ಯಕತೆ ಇದೆ ಎಂದು ಇನ್ಫೋಸಿಸ್ ಸಂಸ್ಥಾಪಕ ಎನ್.ಆರ್. ನಾರಾಯಣಮೂರ್ತಿ ಹೇಳಿದ್ದಾರೆ. ಎರಡು ದಿನಗಳ ಹಿಂದೆ ಮೈರಾ ಸ್ಕೂಲ್ ಆಫ್ ಬಿಸಿನೆಸ್ ಹಾಗೂ ಭೇರುಂಡ ಪ್ರತಿಸ್ಠಾನ ವತಿಯಿಂದ ಮೈಸೂರಿನ ಮೈರಾ ಸಂಸ್ಥೆಯಲ್ಲಿ ಉದ್ಯಮಿಗಳು ಹಾಗೂ ಕೌಟುಂಬಿಕ ವ್ಯವಹಾರಕ್ಕೆ ಸಂಬಂಧಿಸಿದ ತರಬೇತಿ ಕೇಂದ್ರ ಉದ್ಘಾಟನೆ ಸಂದರ್ಭದಲ್ಲಿ ಹೀಗೆ ಹೇಳಿದ್ದಾರೆ.
” ದೇಶದ ಸ್ವಚ್ಛ ಮತ್ತು ಸುಂದರ ನಗರಗಳಲ್ಲಿ ಮೈಸೂರು ಒಂದಾಗಿದೆ. ಈ ನಗರದಲ್ಲಿ ಮಾಹಿತಿ ತಂತ್ರಜ್ಞಾನಕ್ಕೆ ಸಂಬಂಧಿಸಿದ ಕಂಪನಿಗಳನ್ನು ಸ್ಥಾಪನೆ ಸಲುವಾಗಿ ಅಗತ್ಯಗಳನ್ನು ಪೂರೈಸಿ, ದೇಶದ ದೊಡ್ಡ ಸಿಲಿಕಾನ್ ವ್ಯಾಲಿಯಾಗಿ ಪರಿವರ್ತಿಸಲು ಸಾಧ್ಯವಿದೆ. ಐಟಿ ಕ್ಷೇತ್ರದಲ್ಲಿ ಕೆಲಸ ಮಾಡುವ ಸುಮಾರು ಶೇ. 35-45ರಷ್ಟು ಉದ್ಯೋಗಿಗಳು ಕರ್ನಾಟಕದ ಹೊರಗಿನಿಂದ ಬಂದಿರುತ್ತಾರೆ. ಅವರಿಗೆ ಅಂತರಾಷ್ಟ್ರೀಯ ಶಾಲೆ, ಸಂಗಾತಿಗಳಿಗೆ ಉದ್ಯೋಗಾವಕಾಶ, ಅಂತಾರಾಷ್ಟ್ರೀಯ ಮಟ್ಟದ ಹೋಟೆಲ್ಗಳಂತಹ ಮೂಲಸೌಕರ್ಯಗಳನ್ನು ಸೃಷ್ಟಿಸಬೇಕು. ಆಗ ಮತ್ತಷ್ಟು ಕಂಪನಿಗಳು ಮೈಸೂರಿಗೆ ಬರುತ್ತವೆ,” ಎಂದಿದ್ದಾರೆ.
ಮಾಹಿತಿ ತಂತ್ರಜ್ಞಾನ ಕ್ಷೇತ್ರದ ದೊಡ್ಡ ಕಂಪನಿ ಸಂಸ್ಥಾಪಕರು ತಮ್ಮ ಅಭಿಪ್ರಾಯ ಹೇಳಿದ್ದಾರೆ. ತಮ್ಮ ಅಭಿಪ್ರಾಯ ಹೇಳುವ ಹಕ್ಕು, ಸ್ವಾತಂತ್ರ್ಯ ಅವರಿಗಿದೆ. ಆದರೆ ಇದರಿಂದ ಆಗುವ ಅನಾನುಕೂಲಗಳೇನು ಎಂಬುದನ್ನೂ ವಿಚಾರ ಮಾಡಬೇಕಲ್ಲವೇ ? ಈಗಾಗಲೇ ದೇಶದ ಸಿಲಿಕಾನ್ ವ್ಯಾಲಿ ಎಂಬ ಪ್ರತಿಷ್ಠೆಯನ್ನು ಬೆಂಗಳೂರು ಪಡೆದಿದೆ. ಈಗ ಮೈಸೂರು ಮತ್ತೊಂದು ಸಿಲಿಕಾನ್ ವ್ಯಾಲಿ ಆದರೆ ಅದರಿಂದ ಆಗುವ ಪ್ರಯೋಜನಗಳೇನು ?
ಸಿಲಿಕಾನ್ ವ್ಯಾಲಿಯಾಗಿ ಬೆಂಗಳೂರಿಗೆ ದಕ್ಕಿದ್ದೇನು ?
೨೧ನೇ ಶತಮಾನದ ಆರಂಭದಲ್ಲಿ ಅಂದಿನ ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರು ತೆಗೆದುಕೊಂಡ ಆಸಕ್ತಿ ಫಲವಾಗಿ ಬೆಂಗಳೂರು ಸಿಲಿಕಾನ್ ವ್ಯಾಲಿ ಎಂಬ ಹೆಗ್ಗಳಿಕೆ ಪಡೆಯಲು ಸಾಧ್ಯವಾಯಿತು. ಈ ದಿಶೆಯಲ್ಲಿ ಸಾಫ್ಟ್ ವೇರ್ ಕಂಪನಿಗಳಿಗೆ ಅಗತ್ಯವಿರುವ ಎಲ್ಲ ಅನುಕೂಲಗಳನ್ನು ಅವರು ಮಾಡಿಕೊಟ್ಟರು. ಅಗ್ಗದ ದರದಲ್ಲಿ ವಿಸ್ತಾರವಾದ ಜಮೀನುಗಳನ್ನು ನೀಡಿದರು. ಅನೇಕ ವಿನಾಯ್ತಿಗಳನ್ನು ನೀಡಿದರು. ಇದರ ಹಿಂದೆ ವಿಶ್ವದ ನಕಾಶೆಯಲ್ಲಿ ಎಲ್ಲರೂ ಬೆಂಗಳೂರನ್ನು ಗುರುತಿಸಬೇಕೆಂಬ ಸದಾಶಯವಿತ್ತು. ಇದರಿಂದ ರಾಜ್ಯದ ರಾಜಧಾನಿ ಸಿಲಿಕಾನ್ಯ ವ್ಯಾಲಿ ಎಂದೇನೋ ಹೆಸರಾಯಿತು. ಇದರಿಂದ ಕನ್ನಡಿಗರಿಗೆ, ಅದರಲ್ಲೂ ಬೆಂಗಳೂರಿಗರಿಗೆ ದಕ್ಕಿದ್ದೇನು ?
ಗಗನಕ್ಕೇರಿದ ನಿವೇಶನಗಳ ದರ
ಬೆಂಗಳೂರಿನಲ್ಲಿ ೨೦೦೫ರವರೆಗೂ ಸಹ ಕೆಳ ಮಧ್ಯಮ, ಮಧ್ಯಮ ವರ್ಗದವರು ತಮ್ಮ ಜೀವಿತಾವಧಿಯ ದುಡಿಮೆಯಲ್ಲಿ ನಿವೇಶನ ಖರೀದಿಸಿ, ಪುಟ್ಟ ಮನೆಯೊಂದನ್ನು ಕಟ್ಟಿಕೊಳ್ಳಲು ಸಾಧ್ಯವಿತ್ತು. ಒಂದರ ಹಿಂದೆ ಒಂದು ಸಾಫ್ಟ್ ವೇರ್ ಕಂಪನಿಗಳು ಬಂದು ಇಲ್ಲಿ ತಳವೂರುತ್ತಿದ್ದಂತೆ ನೋಡುನೋಡುತ್ತಿದ್ದಂತೆ ಇಲ್ಲಿ ರಿಯಲ್ ಎಸ್ಟೇಟ್ ಅಗಾಧವಾಗಿ ಬೆಳೆಯಿತು. ಮೇಲ್ಮಧ್ಯಮ ವರ್ಗದವರು ಸಣ್ಣದೊಂದು ನಿವೇಶನ ಖರೀದಿಲು ಪ್ರಯಾಸಪಡುವ ದುಸ್ಥಿತಿ ನಿರ್ಮಾಣವಾಯಿತು.
ತರಕಾರಿ ಬೆಳೆಯುತ್ತಿದ್ದ ಜಮೀನುಗಳು ನಿವೇಶನಗಳಾದವು
ಮಹಾನಗರ ಪಾಲಿಕೆಯಾಗಿದ್ದ ಬೆಂಗಳೂರು, ಸುತ್ತಲಿನ ನೂರಾರು ಹಳ್ಳಿಗಳನ್ನು ತನ್ನೊಳಗೆ ಸೇರಿಸಿಕೊಂಡು ಬೃಹತ್ ನಗರ ಪಾಲಿಕೆಯಾಯಿತು. ಸಾಕಷ್ಟು ಜನರಿಗೆ ಗೊತ್ತಿಲ್ಲದ ಸಂಗತಿ ಏನೆಂದರೆ ಬೆಂಗಳೂರು ಸುತ್ತಮುತ್ತಲಿನ ಹಳ್ಳಿಗಳು ಗುಣಮಟ್ಟದ ತರಕಾರಿ, ಸೊಪ್ಪುಗಳು, ಹಣ್ಣುಗಳಿಗೆ ಖ್ಯಾತವಾಗಿದ್ದವು. ನಗರಕ್ಕಷ್ಟೇ ಅಲ್ಲದೇ ಸುತ್ತಮುತ್ತಲಿನ ರಾಜ್ಯಗಳಿಗೂ ಇಲ್ಲಿಂದ ಅವುಗಳು ಸರಬರಾಜ ಆಗುತ್ತಿದ್ದವು. ಆ ಸಂದರ್ಭದಲ್ಲಿ ಟೊಮ್ಯಾಟೋ ಆಗಲಿ ಮತ್ತೊಂದು ತರಕಾರಿಯಾಗಲಿ ಸಾಮಾನ್ಯರ ಕೈಗೆಟ್ಟುಕದ ರೀತಿಯಲ್ಲಿ ಬೆಲೆ ಪಡೆದುಕೊಂಡಿರಲಿಲ್ಲ. ಹಳ್ಳಿಗರು ಕೂಡ ನೆಮ್ಮದಿಯ ಸುಸ್ಥಿರ ಜೀವನ ನಡೆಸುತ್ತಿದ್ದರು.
ಈ ಹಳ್ಳಿಗಳ ಜಮೀನುಗಳೆಲ್ಲ ರಿಯಲ್ ಎಸ್ಟೇಟ್ ತೆಕ್ಕೆಗೆ ಬಂದವು. ಜಮೀನಿನ ವಿಸ್ತಾರಕ್ಕೆ ತಕ್ಕಂತೆ ಮಾಲಿಕರುಗಳಿಗೆ ಹಣವೂ ಬಂತು. ಅದನ್ನು ಎಲ್ಲಿ ತೊಡಗಿಸುವುದು ಎಂಬ ಅಂದಾಜು, ಯೋಜನೆ ಇಲ್ಲದ ಸಲುವಾಗಿ ಶೇಕಡ ೮೦ರಷ್ಟು ಮಂದಿ ಬಳಿಯಿದ್ದ ಹಣ ನೋಡುನೋಡುತ್ತಿದ್ದಂತೆ ಖರ್ಚಾಯಿತು. ಜಮೀನು ಉಳ್ಳವರು ಎಂಬ ಖ್ಯಾತಿ ಇದ್ದ ಅನೇಕರು ನಗರಗಳಿಗೆ ಬಂದು ಕೆಲಸಗಾರರಾದರು.
ಹದಗೆಟ್ಟ ವಾತಾವರಣ
ಸಾಫ್ಟ್ ವೇರ್ ಕಂಪನಿಗಳ ಹಿಂದೆಯೇ ಇತರ ಉದ್ದಿಮೆಗಳು ಸಹ ಬೆಂಗಳೂರಿಗೆ ಬಂದವು. ಹೊರ ರಾಜ್ಯಗಳಿಂದ ಮಹಾ ಪ್ರವಾಹದ ರೀತಿ ವಲಸೆ ಆರಂಭವಾಯಿತು. ಬಾಡಿಗೆ ಮನೆಗಳ ದರ ಗಗನಕ್ಕೇರಿತು. ಸಣ್ಣಪುಟ್ಟ ಉದ್ಯೋಗಗಳಲ್ಲಿದ್ದ ಸ್ಥಳೀಯರು ಪರದಾಡುವಂತಾಯಿತು. ಈ ದುಸ್ಥಿತಿ ಇನ್ನೂ ನಿಂತಿಲ್ಲ.
ಇವೆಲ್ಲದರ ಜೊತೆಗೆ ಉದ್ಯಾನ ನಗರಿ ಎಂಬ ಖ್ಯಾತಿ ಹೊಂದಿದ್ದ ಬೆಂಗಳೂರು ಭಯಾನಕ ಟ್ರಾಫಿಕ್ ಜಾಮ್ ನಗರಿ ಎಂಬ ಅಪಖ್ಯಾತಿಗೆ ಒಳಗಾಯಿತು. ಕಡು ಬೇಸಿಗೆ ದಿನಗಲ್ಲಿಯೂ ೨೫ ರಿಂದ ೨೮ ಡಿಗ್ರಿ ಸೆಲ್ಸಿಯಸ್ ಮೀರದಿದ್ದ ನಗರದ ವಾತಾವರಣ ೪೦ ಡಿಗ್ರಿ ಸೆಲ್ಸಿಯಸ್ ಮುಟ್ಟಿತು. ವಾತಾವರಣದಲ್ಲಿ ತೀವ್ರ ಮಾಲಿನ್ಯ ಉಂಟಾಗಿದೆ. ಆಸ್ತಮಾ ತೊಂದರೆಯುಳ್ಳವರ ಸಂಖ್ಯೆ ಹೆಚ್ಚಾಗುತ್ತಿದೆ. ಮಾಲಿನ್ಯ ಕಾರಣದಿಂದ ಉಂಟಾಗುವ ಇತರ ಕಾಯಿಲೆಗಳೂ ಹೆಚ್ಚಾಗುತ್ತಿವೆ.
ಬರಿದಾಗುತ್ತಿರುವ ಅಂತರ್ಜಲ
ಬಂದ, ಬರುತ್ತಿರುವ ವಲಸಿಗರ ಅವಶ್ಯಕತೆಗಳಿಗಾಗಿ ನಾಯಿಕೊಡೆಗಳಂತೆ ಅಪಾರ್ಟ್ ಮೆಂಟ್ ಗಳು ತಲೆ ಎತ್ತಿವೆ, ಹೊಸಹೊಸ ಅಪಾರ್ಟ್ ಮೆಂಟ್ ಗಳು ಬರುತ್ತಿವೆ. ನೀರಿಗಾಗಿ ಒಂದೊಂದು ವಸತಿ ಸಂಕೀರ್ಣವೂ ಹಲವು ಕೊಳವೆ ಬಾವಿಗಳನ್ನು ಕೊರೆಸಿವೆ, ಕೊರೆಸುತ್ತಿವೆ. ಇದರಿಂದ ಅಮೂಲ್ಯ ಅಂತರ್ಜಲ ಬರಿದಾಗುತ್ತಿದೆ. ಇನ್ನೂ ಕೆಲವೇ ವರ್ಷಗಳಲ್ಲಿ ನಗರದಲ್ಲಿ ಅಂತರ್ಜಲವೇ ಇಲ್ಲ ಎನ್ನುವ ದುಸ್ಥಿತಿ ಎದುರಾಗಬಹುದು.
ಹೆಚ್ಚಾದ ಅಪರಾಧಗಳ ಸಂಖ್ಯೆ
ಒಂದು ನಗರ ಇತಿಮಿತಿಯಿಲ್ಲದೇ ಬೆಳೆದರೆ ಅಲ್ಲಿ ಕ್ರೈಮ್ ರೇಟ್ ಹೆಚ್ಚಾಗುತ್ತದೆ. ಭೂ ಮಾಫಿಯಾ ಬೆಳೆದಂತೆ ವಿವಾದಗಳಿಂದ, ರೌಡಿ ಗುಂಪುಗಳ ಘರ್ಷಣೆಗಳಿಂದ ಕೊಲೆಗಳು ಹೆಚ್ಚಾಗಿವೆ. ಹೊರ ರಾಜ್ಯದಿಂದ ಬರುವ (ಎಲ್ಲರೂ ಅಲ್ಲ) ಅಪರಾಧ ಹಿನ್ನೆಲೆಯುಳ್ಳವರು ಅಪರಾಧ ಎಸಗಿ ಪರಾರಿಯಾಗುತ್ತಿರುವ ಪ್ರಕರಣಗಳೂ ನಡೆಯುತ್ತಿವೆ. ವಾಹನ ಅಪಘಾತಗಳ ಸಂಖ್ಯೆ ಹೆಚ್ಚಿದೆ. ಇದರಿಂದಾಗುತ್ತಿರುವ ಸಾವುನೋವುಗಳ ಸಂಖ್ಯೆ ಗಣನೀಯವಾಗಿದೆ. ಶಾಲಾ-ಕಾಲೇಜು ವಿದ್ಯಾರ್ಥಿಗಳು ನೆಮ್ಮದಿಯಾಗಿ ಸಂಚರಿಸುವ ಸ್ಥಿತಿಯೂ ಇಲ್ಲವಾಗಿದೆ.
ಮೂಲಭೂತ ಸೌಕರ್ಯ ಹೆಚ್ಚಿದೆಯೇ ?
ಬೆಂಗಳೂರಿನ ಅನೇಕ ಪ್ರದೇಶಗಳಲ್ಲಿ ಇಂದಿಗೂ ಸೂಕ್ತ ಬೀದಿದೀಪಗಳ ವ್ಯವಸ್ಥೆಯಿಲ್ಲ, ಒಳ ಚರಂಡಿ ವ್ಯವಸ್ಥೆ ಸಮರ್ಪಕವಾಗಿಲ್ಲ. ಅಂಡರ್ ಪಾಸ್ ಗಳು ಸುಸ್ಥಿತಿಯಲಿಲ್ಲ. ಸಣ್ಣದೊಂದು ಮಳೆ ಬಂದರೂ ನಿವಾಸಿಗಳು ಅನುಭವಿಸುವ ಮಾನಸಿಕ – ದೈಹಿಕ ಹಿಂಸೆ ಅಪಾರ. ಮನೆಗಳ ಒಳಗೆ ನೀರು ನುಗ್ಗಿ ಅವರು ಅಪಾರ ತೊಂದರೆ ಅನುಭವಿಸುತ್ತಾರೆ. ಇದರ ಜೊತೆಗೆ ಹೆಚ್ಚಿನ ರಸ್ತೆಗಳ ಸ್ಥಿತಿ ಸಮರ್ಪಕವಾಗಿಲ್ಲ, ಹೊಂಡಗಳ ಒಳಗೆ ರಸ್ತೆ ಹುಡುಕಬೇಕಾದ ದುಸ್ಥಿತಿ ಇದೆ. ಇದರಿಂದಾಗಿರುವ ಸಾವುನೋವುಗಳ ಸಂಖ್ಯೆ ಏನೂ ಕಡಿಮೆಯಿಲ್ಲ
ಉದ್ಯೋಗದಲ್ಲಿ ಕನ್ನಡಿಗರಿಗೆ ಆದ್ಯತೆ ಇದೆಯೇ ?
ಬೆಂಗಳೂರಿಗೆ ಬಂದು ಸರ್ಕಾರದಿಂದ ಅರ್ಥಾತ್ ಸ್ಥಳೀಯರ ತೆರಿಗೆ ಹಣದಿಂದ ಅನೇಕ ರಿಯಾಯ್ತಿ, ಸೌಲಭ್ಯ ಪಡೆದಿರುವ ಸಾಫ್ಟ್ ವೇರ್ ಕಂಪನಿಗಳ ಉದ್ಯೋಗಗಳಲ್ಲಿ ಸ್ಥಳೀಯರಿಗೆ ಅಂದರೆ ಕನ್ನಡಿಗರಿಗೆ ಉದ್ಯೋಗಗಳಲ್ಲಿ ಆದ್ಯತೆ ಇದೆಯೇ ? ಖಂಡಿತ ಇಲ್ಲ. ಇದರಿಂದ ಹೊರ ರಾಜ್ಯಗಳವರ ಸಂಖ್ಯೆಯೇ ಹೆಚ್ಚಾಗಿದೆ. ಇದರಿಂದ ಬೆಂಗಳೂರಿನಲ್ಲಿ ಕನ್ನಡಕ್ಕೂ ಅಪಾಯ ಎದುರಾಗಿದೆ.
ಡ್ರಗ್ಸ್ ಮಾಫಿಯಾ
ಬೆಂಗಳೂರಿನಲ್ಲಿ ಡ್ರಗ್ಸ್ ಮಾಫಿಯಾ ಕೂಡ ಜೋರಾಗಿದೆ. ಸ್ಥಿತಿವಂತರ ಮಕ್ಕಳು ಓದುವ ದುಬಾರಿ ಶಾಲಾ –ಕಾಲೇಜು ವಿದ್ಯಾರ್ಥಿಗಳನ್ನು ಇದಕ್ಕಾಗಿ ಟಾರ್ಗೇಟ್ ಮಾಡಿಕೊಳ್ಳಲಾಗಿದೆ.
ಮೈಸೂರಿಗೂ ಇಷ್ಟೆಲ್ಲ ದುಸ್ಥಿತಿ ಬರಬೇಕೇ ?
ಈಗ ಹೇಳಿ, ನೆಮ್ಮದಿಯಾಗಿರುವ ಮೈಸೂರಿನಲ್ಲೂ ಇಷ್ಟೆಲ್ಲ ದುಸ್ಥಿತಿಗಳು ಬರಬೇಕೇ ? ವಿದ್ಯಾನಗರಿ, ಪಿಂಚಣಿದಾರರ ಸ್ವರ್ಗ ಎಂಬ ಹೆಗ್ಗಳಿಕೆಗಳು ಕಳೆದು ಹೋಗಬೇಕೇ ? ಸ್ಥಳೀಯರ ನೆಮ್ಮದಿಯ ಬದುಕಿಗೆ ಸಂಚಕಾರ ಒದಗುವುದು ಬೇಕೇ ?
ಸಾಂಸ್ಕೃತಿಕ ನಗರವಾಗಿಯೇ ಇರಲಿ