ಈಗ ಪೆಟ್ರೋಲ್, ಡಿಸೇಲ್, ಎಲ್.ಪಿ.ಜಿ.,  ಸಿ.ಎನ್.ಜಿ., ಇವಿ  ಆಧರಿತ ಇಂಜಿನ್ ಗಳ ಜಮಾನ. ಆದರೆ ಇವುಗಳ್ಯಾವುದು ಶಾಶ್ವತವಲ್ಲ. ಆದ್ದರಿಂದ ಸಂಶೋಧಕರು ಬದಲಿ ಇಂಜಿನ್ ಗಳ ಅನ್ವೇಷಣೆಯಲ್ಲಿ ನಿರತರಾಗಿದ್ದಾರೆ. ಈಗಾಗಲೇ ಜೈವಿಕ ಇಂಧನಗಳ ಬಳಕೆಯಲ್ಲಿ ಅಭಿವೃದ್ಧಿಯಾಗಿದ್ದರೂ ಈಗ ಇರುವ ಇಂಜಿನ್ ಗಳಲ್ಲಿ ಸಂಪೂರ್ಣವಾಗಿ ಅಂದರೆ ಶೇಕಡ 100ಕ್ಕೆ 100ರಷ್ಟು ಅವುಗಳನ್ನೇ ಬಳಸಲು ಆಗುತ್ತಿಲ್ಲ.

ಪ್ರಸ್ತುತ ಸಂಶೋಧಕರು ಅಭಿವೃದ್ಧಿಪಡಿಸಿರುವ ಡಚ್ ಇಂಜಿನ್ ಎಲ್ಲವುಗಳಿಗೂ ಪರ್ಯಾಯವಾಗಿ ಗೋಚರಿಸುತ್ತಿದೆ. ಇದು ಎಲ್ಲ ದಾಖಲೆಗಳನ್ನು ಮುರಿಯುತ್ತಿದೆ. ಇದರಿಂದ ಭವಿಷ್ಯತ್ತಿನ ಇಂಧನ ಎನಿಸಿಕೊಂಡ ಹೈಡ್ರೋಜನ್ ಅವಶ್ಯಕತೆಯೂ ಇಲ್ಲ ಎಂದು ಹೇಳಲಾಗುತ್ತಿದೆ.

ಸಂಶೋಧಕರು ಅಭಿವೃದ್ಧಿಪಡಿಸಿರುವ ಆಲ್ಕೋಹಾಲ್ ಆಧರಿತ ಇಂಜಿನ್ ಅನ್ನು ಲೋಹದ ಬಳಕೆಯಿಲ್ಲದೇ ರೂಪಿಸಲಾಗಿದೆ. ಇದು ಮೆಗ್ನೀಸಿಯಮ್ನಲ್ಲಿ ಚಲಿಸುತ್ತದೆ ಆದ್ದರಿಂದಲೇ ಇದಕ್ಕೆ ವಿಚಿತ್ರ ಇಂಜಿನ್ ಎಂದು ಹೇಳಲಾಗುತ್ತಿದೆ.

ಪರಿಸರಸ್ನೇಹಿ ಇಂಧನ ಬಳಕೆಯ ಅನ್ವೇಷಣೆಯಲ್ಲಿ ನಿರಂತರವಾಗಿ ತೊಡಗಿರುವ ಮೂಲತಃ ಅಮೆರಿಕಾದ ಸಂಸ್ಥೆಗಳ ಸಂಶೋಧಕರು ಮತ್ತು ಅಭಿವೃದ್ದಿಕಾರರ ಪರಿಶ್ರಮದಿಂದ ಎಥೆನಾಲ್ ಆಧಾರಿತ,  ಕ್ಷಮತೆಯ, ಉತ್ತಮ ಸಾಮರ್ಥ್ಯದ ಇಂಜಿನ್ ರೂಪುಗೊಂಡಿದೆ.

ಈ ಪ್ರಮುಖ ಬದಲಾವಣೆಗೆ CNH ಇಂಡಸ್ಟ್ರಿಯಲ್‌ನ ಭಾಗವಾಗಿರುವ,  ಕೃಷಿ ಸಲಕರಣೆಗಳ ಬ್ರ್ಯಾಂಡ್ ಆಗಿರುವ ಕೇಸ್ IH ಕಾರಣವಾಗಿದೆ. ಎಥೆನಾಲ್‌ನಿಂದ ಚಾಲಿತವಾಗುವ ದಕ್ಷ  ಎಂಜಿನ್ ಅನ್ನು ಅಭಿವೃದ್ಧಿಪಡಿಸುವಲ್ಲಿ  FPT ಇಂಡಸ್ಟ್ರಿಯಲ್‌ ಸಹ  ಪಾಲುದಾರಿಕೆ ಹೊಂದಿದೆ.

ಮೊದಲಿಗೆ ಇಂಥ ವಿನೂತನ ಇಂಜಿನ್ ಅನ್ನು ಬ್ರೆಜಿಲ್‌ನ ರಿಬೈರೊ ಪ್ರಿಟೊದಲ್ಲಿ 2010ರಲ್ಲಿ ನಡೆದ ಕೃಷಿಮೇಳದಲ್ಲಿ ಪ್ರದರ್ಶಿಸಲಾಯಿತು. ಕೃಷಿ ಯಂತ್ರೋಪಕರಣಗಳಿಗೆ ಈ ಇಂಜಿನ್ ಅನ್ನು ಬಳಸಲಾಗಿತ್ತು. ಆದರೆ ಆ ಇಂಜಿನ್ ಇನ್ನೂ ಪರಿಷ್ಕರಣೆಯಾಗುವ ಅಗತ್ಯವಿದ್ದ ಕಾರಣ ಮಾರುಕಟ್ಟೆಗೆ ಬಿಡುಗಡೆಯಾಗಿರಲಿಲ್ಲ. ಪ್ರಸ್ತುತ ಈ ಇಂಜಿನ್ ಅನ್ನು ಇನ್ನಷ್ಟು ಪರಿಷ್ಕರಿಸಲಾಗಿದೆ.  ಸಂಪೂರ್ಣ ಅಂದರೆ ಶೇಕಡ 100ರಷ್ಟು ಎಥೆನಾಲ್ ಆಧರಿತ ಡಚ್-ಎಂಜಿನಿಯರ್ಡ್ ಇಂಜಿನ್ ಅಭಿವೃದ್ಧಿಯಾಗಿದೆ.

ಮೊದಲಿಗೆ ಇದನ್ನು ಕೃಷಿ ಯಂತ್ರೋಪಕರಣಗಳಿಗೆ ಅಳವಡಿಸಿ ಬಳಸಲಾಗುತ್ತಿದೆ. ಇದರಿಂದ ಎಂದೂ ಕ್ಷಯವಾಗದ ಸುಸ್ಥಿರ ಶಕ್ತಿಯ ಇಂಧನದ ಸಮರ್ಥ ಬಳಕೆ ಸಾಧ್ಯವಾಗಿದೆ. ಮೊದಲ ಎಥೆನಾಲ್-ಚಾಲಿತ ಎಂಜಿನ್ ಎಂದು ಕರೆಯಲ್ಪಡುವ ಇದನ್ನು ಮೊದಲೇ ವಿವರಿಸಿದಂತೆ  ಕೇಸ್ IH ಮತ್ತು ಅದರ ಪಾಲುದಾರ, ಪವರ್‌ಟ್ರೇನ್ ತಂತ್ರಜ್ಞಾನಗಳಲ್ಲಿ ಜಾಗತಿಕ ತಜ್ಞ FPT ಇಂಡಸ್ಟ್ರಿಯಲ್ ಅಭಿವೃದ್ಧಿಪಡಿಸಿದೆ.

ಕಬ್ಬಿನಿಂದ ಪಡೆದ ಎಥೆನಾಲ್ ಅನ್ನು ಕರ್ಸರ್ 13 ಎಂಜಿನ್ ಮೂಲಮಾದರಿಯ ಚಾಲನೆಗೆ ಬಳಸುವಿಕೆ ಈಗಾಗಲೇ ಆರಂಭವಾಗಿದೆ.  ಇದು ನವೀಕರಿಸಬಹುದಾದ ಇಂಧನ ಮೂಲವಾಗಿದ್ದು, ಬ್ರೆಜಿಲ್ ನಲ್ಲಿ ಅಪಾರ ಪ್ರಮಾಣದಲ್ಲಿ ಸಂಗ್ರಹಿಸಿ ಬಳಸಬಹುದು.

ಎಥೆನಾಲ್ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಬ್ರೆಜಿಲ್‌ನಲ್ಲಿ ಕಬ್ಬಿನ ಕೃಷಿ ಅಗಾಧ ಪ್ರಮಾಣದಲ್ಲಿದೆ.  ಇದರ  ಪ್ರಮಾಣವನ್ನು ಪರಿಗಣಿಸಿದರೆ ಎಥೆನಾಲ್ ಆಯ್ಕೆಯು ಹಸಿರುಮನೆ ಅನಿಲಗಳ ಹೊರಸೂಸುವಿಕೆಯನ್ನು ಕಡಿಮೆ ಮಾಡುತ್ತದೆ. ಜೊತೆಗೆ  ಡೀಸೆಲ್ ಇಂಧನಕ್ಕೆ ಪರ್ಯಾಯ  ಪರಿಸರಸ್ನೇಹಿ ಪರಿಹಾರವನ್ನು ನೀಡುತ್ತದೆ. ಇದನ್ನು ಕೃಷಿ ತಂತ್ರಜ್ಞಾನಗಳಲ್ಲಿ ವ್ಯಾಪಕವಾಗಿಯೂ ಬಳಸಬಹುದು.

ಈಗಾಗಲೇ ಸಂಪೂರ್ಣ ಎಥೆನಾಲ್ ಆಧರಿತ ಕರ್ಸರ್ 13 ಎಂಜಿನ್  ಚಾಲನೆಗೊಳಿಸಿದ್ದರೂ ಇದನ್ನು ಇನ್ನಷ್ಟು ಉತ್ತಮ ಮಟ್ಟಕ್ಕೆ ತೆಗೆದುಕೊಂಡು ಹೋಗಲು ಕೇಸ್ IH  ನಿರ್ಧರಿಸಿದೆ.  ಮುಂದಿನ ಸುಗ್ಗಿಯ ವೇಳೆಗೆ ಈ ಇಂಜಿನ್ ಅನ್ನು ಸ್ಥಳೀಯ ಮಾರುಕಟ್ಟೆಗೆ ಬಿಡುಗಡೆ ಮಾಡಲು ಆಲೋಚಿಸುತ್ತಿದೆ. ಮುಖ್ಯವಾಗಿ ಆರಂಭದಲ್ಲಿ  ಈ ಮಾದರಿಯ ಇಂಜಿನ್ ಅನ್ನು ಕಬ್ಬು ಕಟಾವು ಮಾಡಲು ಬಳಸುವ ಯಂತ್ರಗಳಿಗೆ ಅಳವಡಿಸಲಾಗಿದೆ.

ಕೊಯ್ಲು ಯಂತ್ರಗಳಿಗೆ ಕಡಿಮೆ ಬೆಲೆಯ, ನವೀಕರಿಸಬಹುದಾದ ಪರಿಸರಸ್ನೇಹಿ ಇಂಧನವನ್ನು ನೂರಕ್ಕೆ ನೂರರಷ್ಟು ಬಳಸಿದಾಗ ಕೃಷಿಯ ಖರ್ಚುವೆಚ್ಚ ಸಹ ಗಣನೀಯವಾಗಿ ತಗ್ಗುತ್ತದೆ. ಇದರಿಂದ ರೈತರ ಆದಾಯವೂ ಗಮನಾರ್ಹವಾಗಿ ಹೆಚ್ಚಾಗಲಿದೆ.

ಕೃಷಿ ಯಂತ್ರೋಪಕರಣಗಳಿಗೆ ಅಳವಡಿಸಿದ ಕರ್ಸರ್ 13 ಎಂಜಿನ್  ಕ್ಷಮತೆಯನ್ನು ನಿರಂತರವಾಗಿ ಗಮನಿಸಿ ನಂತರವೇ ಇತರ ರೀತಿಯ ವಾಹನಗಳು ಮತ್ತು ಯಂತ್ರೋಪಕರಣಗಳಿಗೂ ಅಳವಡಿಸಿಲು ಕಂಪನಿ ಯೋಜಿಸಿದೆ. ಮುಖ್ಯವಾಗಿ ಕಾರುಗಳ ಇಂಜಿನ್ ಆಗಿ ಅಳವಡಿಸುವ ದಿಶೆಯಲ್ಲಿ ಪರಿಷ್ಕರಣೆ ಕಾರ್ಯ ಸಾಗುತ್ತಿದೆ. ಇದರಿಂದ ಜಾಗತಿಕ ಮಟ್ಟದಲ್ಲಿ ಸ್ವದೇಶಿ ಎಥೆನಾಲ್ ಗೆ ಮಾರುಕಟ್ಟೆರ ಸೃಷ್ಟಿಯಾಗುತ್ತದೆ. ತನ್ಮೂಲಕ ಗ್ರಾಮೀಣ ಪ್ರದೇಶಕ್ಕೆ ಹಣದ ಹರಿವು ಹೆಚ್ಚಾಗುತ್ತಿದೆ. ಹೆಚ್ಚುಹೆಚ್ಚು ಉದ್ಯೋಗಗಳ ಸೃಷ್ಟಿಗೂ ಸಹಾಯವಾಗುತ್ತಿದೆ. ಆದ್ದರಿಂದ ಈ ಅಭಿವೃದ್ದಿ ಕೃಷಿ ಆರ್ಥಿಕತೆಯ ಬಲಿಷ್ಠತೆಗೆ ಸಹಾಯವಾಗಲಿದೆ.

Similar Posts

Leave a Reply

Your email address will not be published. Required fields are marked *