Kannadaರಾಜಕೀಯ

“ಪ್ರಿಯಾಂಕ” ಎಂಬ ಹೆಸರಿನ ಬಗ್ಗೆ ಕುಹಕವೇಕೆ ?

ಬಲಪಂಥ-ಎಡಪಂಥ – ನಡುಪಂಥ ಹೀಗೆ ಯಾವುದೇ ಪಂಥದ ಬಗ್ಗೆ ಒಲವಿರುವುದು ಬಿಡುವುದು ಅವರವರ ವೈಯಕ್ತಿಕ ಸಂಗತಿ. ೨೦೧೪ರಿಂದ ಆರಂಭಿಸಿ ಇಂದಿನವರೆಗೂ ಪಂಥಗಳ ನಡುವಿನ ವಾಕ್ಸಮರ ಮೀತಿ ಮೀರಿದೆ. ಆದರೆ ಎಲ್ಲದಕ್ಕೂ ಒಂದು ಮಿತಿ ಇರುತ್ತದೆ. ಯಾವುದೇ ಪಂಥದವರಾಗಿರಲಿ ಕುಹಕ ಆಡುವುದು ತಪ್ಪು ಅಲ್ಲವೇ ! ಕುಹಕ ಯಾವತ್ತಿಗೂ ಅಜ್ಞಾನದ ಮೂಲದಿಂದಲೇ ಬರುತ್ತದೆ.

ಇಂದು ಫೇಸ್‌ ಬುಕ್‌ ನಲ್ಲಿ ಫ್ರೆಂಡ್‌ ಆಗಿರುವ ಬಿಜೆಪಿ ಕಟ್ಟಾ ಬೆಂಬಲಿಗರು, ಪ್ರಧಾನಿ ನರೇಂದ್ರ ಮೋದಿ ಅವರ ಅಭಿಮಾನಿ, ಆರ್.ಎಸ್.ಎಸ್.‌ ಬಗ್ಗೆ ಅಪಾರ ಒಲವು ಹೊಂದಿರುವ ಒಬ್ಬರ ಪೋಸ್ಟ್‌ ನೋಡಿದೆ. ಓದಿದೆ. ಅಚ್ಚರಿಯಾಯಿತು. ಅಚ್ಚರಿಯಾಗಲು ಕಾರಣ ಎಂದರೆ ಇವರು ವಿದ್ಯಾವಂತರು. ದೇಶದ ಆಗುಹೋಗುಗಳ ಬಗ್ಗೆ ಆಸಕ್ತಿ ಇರುವವರು (ಇದೆಲ್ಲವೂ ಸಾಮಾಜಿಕ ಜಾಲತಾಣದಲ್ಲಿ ಅವರು ಹಾಕುವ ಪೋಸ್ಟ್‌ ಗಳಿಂದಲೇ ಗೊತ್ತಾದ ಸಂಗತಿ. ಜೂನ್‌ ೨೩ರಂದು ಅವರು ಹಾಕಿದ ಪೋಸ್ಟ್‌ ಮುಂದಿದೆ.

“ಏನಕ್ಕೂ ನಿಮ್ಮ ಹೆಸರು ನೋಂದಣಿ ಮಾಡಿಸಿ ಇಟ್ಟುಕೊಳ್ಳಿ.. ನೀವು ಯಾವುದೋ ಹೆಣ್ಣು ಮಗುವಿನ ಹೆಸರು ಕಾಪಿ ಮಾಡಿದ ಹಾಗೆ ನಿಮ್ಮ ಹೆಸರೂ ಕಾಪಿ ಆಗಿ, ಆಮೇಲೆ ನೀವೇನು ಒರಿಜಿನಲ್ ಹೌದಾ ಅಲ್ವೋ ಅನ್ನುವ ಡೌಟ್ ಬರಬಹುದು. RSS ಬಗ್ಗೆ ನಿಮಗೆ ಸಂದೇಹ ಬಂದ ಹಾಗೆ !  #ಪ್ರಿಯಾಂಕ್.. #ಪ್ರಿಯಾಂಕಾ”

ಇದಕ್ಕೆ ಬಂದ ಕಾಮೆಂಟ್‌ ಗಳು ಸಹ “ಪ್ರಿಯಾಂಕ” ಎನ್ನುವ ಹೆಸರಿನ ಬಗ್ಗೆಯೇ ಕುಹಕವಾಡಿವೆ. ಒಂದು ಗಮನಾರ್ಹ ಸಂಗತಿ ಎಂದರೆ ಭಾರತೀಯ ಸಂಸ್ಕೃತಿ ಬಗ್ಗೆ ಅಭಿಮಾನದಿಂದ ಎನ್ನುವುದಕ್ಕಿಂತಲೂ ಗುತ್ತಿಗೆ ಹಿಡಿದವರಂತೆ ಮಾತನಾಡುವ ಇವರಿಗೆ ಭಾರತೀಯ ಸಂಸ್ಕೃತಿಯ ಹೆಸರುಗಳ ಕನಿಷ್ಟ ಪರಿಚಯವೂ ಇಲ್ಲವೇ ಎಂಬ ಪ್ರಶ್ನೆಯೂ ಮೂಡಿತು.

ನಾನು ಸಹ ಈ ಕುಹಕದ ಪೋಸ್ಟಿಗೆ ಕಾಮೆಂಟುಗಳನ್ನು ಮಾಡಿದೆ. “ಪ್ರಿಯಾಂಕ” ಎಂದರೇನು ಎಂದು ವಿವರಿಸುವ ಪ್ರಯತ್ನವನ್ನೂ ಮಾಡಿದೆ. ಈ ಲೇಖನ ಬರೆಯುವ ತನಕವೂ ನನ್ನ ಕಾಮೆಂಟುಗಳಿಗೆ ಹಿಂದೆ ಕಾಮೆಂಟ್‌ ಮಾಡಿದವರಿಂದ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ. ಮುಂದೆ ಬರಬಹುದೇ ಗೊತ್ತಿಲ್ಲ

ಅಚ್ಚರಿ ಎಂದರೆ ಹಿಂದೆ ಮೈಸೂರು ಲೋಕಸಭಾ ಕ್ಷೇತ್ರವನ್ನು ಎರಡು ಬಾರಿ ಪ್ರತಿನಿಧಿಸಿದ್ದ ಪ್ರತಾಪ್‌ ಸಿಂಹ ಅವರು ಸಹ “ಪ್ರಿಯಾಂಕ” ಎನ್ನುವ ಹೆಸರಿನ ಬಗ್ಗೆ ಕುಹಕವಾಡಿದ್ದು ನನಗೆ ನೆನಪಿದೆ. ರಾಜಕೀಯಕ್ಕೆ ಬರುವ ಪೂರ್ವದಲ್ಲಿ ಖ್ಯಾತ ಪತ್ರಕರ್ತರು ಆಗಿದ್ದ ಇವರು ಅದೇಗೆ ಒಂದು ಹೆಸರಿನ ಬಗ್ಗೆ ಕುಹಕವಾಡಲು ಸಾಧ್ಯ ಎಂದು ಅಚ್ಚರಿಯಾಗುತ್ತಿತ್ತು.

ಇವರೆಲ್ಲರ ಕುಹಕ ಏನೆಂದರೆ “ಪ್ರಿಯಾಂಕ” ಎನ್ನುವುದು ಹೆಣ್ಣಿನ ಹೆಸರು. ಒಂದು ಹೆಣ್ಣಿನ ಹೆಸರನ್ನು ಕಾಂಗ್ರೆಸ್‌ ಪಕ್ಷದ ರಾಜಕಾರಣಿ ಪ್ರಿಯಾಂಕ್‌ ಖರ್ಗೆ ಅವರಿಗೆ ಇಡಲಾಗಿದೆ. ಇವರ ಇನ್ನೊಂದು ವ್ಯಂಗ್ಯ ಏನೆಂದರೆ ರಾಜೀವ್‌ ಗಾಂಧಿ ಅವರ ಮಗಳು ಪ್ರಿಯಾಂಕಾ ಗಾಂಧಿ,. ಇವರ ಹೆಸರನ್ನು ತಮ್ಮ ಮಗನಿಗೂ ಮಲ್ಲಿಕಾರ್ಜುನ ಖರ್ಗೆ ಅವರು ಇಟ್ಟು ತಮ್ಮ ನಿಷ್ಠೆ ವ್ಯಕ್ತಪಡಿಸುತ್ತಿದ್ದಾರೆ ಎನ್ನುವುದು.

ಇವೆರಡೂ ತಪ್ಪು ಗ್ರಹಿಕೆಗಳೇ ಎನ್ನುವುದು ಹೀಗೆ ಕುಹಕವಾಡುವವರಿಗೆ ಮನದಟ್ಟಾಗಿಲ್ಲ. “ಪ್ರಿಯಾಂಕ” ಎನ್ನುವುದು ಸಂಸ್ಕೃತ ಮೂಲದ ಹೆಸರು. ಈ ಹೆಸರಿನ ವ್ಯಾಪಕ ಬಳಕೆ ಹಿಂದೂ ಧರ್ಮದಲ್ಲಿಯೂ ಹಾಗೆ ಬೌದ್ಧ ಧರ್ಮದಲ್ಲಿಯೂ ಇದೆ.

ಪ್ರಿಯಾಂಕ ಎಂದರೆ ಅರ್ಥ: “ಪ್ರಿಯ” “ಪ್ರೀತಿಯವನು”, “ಪ್ರೀತಿಯುಳ್ಳವನು”, “ಮುದ್ದಾದವನು” ಅಥವಾ “ಸಿಹಿಯಾದ/ಲವಲವಿಕೆಯುಳ್ಳವನು” ಎಂಬ ಅರ್ಥವೂ ಇದೆ. ಹಾಗಾಗಿ ಪ್ರಿಯಾಂಕ ಎಂದು ಗಂಡು‌ ಮಕ್ಕಳಿಗೂ ಪ್ರಿಯಾಂಕಾ ಎಂದು ಹೆಣ್ಣುಮಕ್ಕಳಿಗೂ ಹೆಸರಿಡುತ್ತಾರೆ. ಪ್ರಿಯಾಂಕ ಎಂದರೆ ಪ್ರಿಯ, ಪ್ರೀತಿಯವಳು, ಪ್ರೀತಿಯುಳ್ಳವಳು, ಮುದ್ದಾದವಳು ಎಂಬ ಅರ್ಥ ಬರುತ್ತದೆ. ಅಂದರೆ ಪ್ರಿಯಾಂಕ ಎಂದು ಗಂಡು ಮಕ್ಕಳಿಗೂ, ಪ್ರಿಯಾಂಕಾ ಎಂದು ಹೆಣ್ಣು ಮಕ್ಕಳಿಗೂ ಹೆಸರು ಇಡುತ್ತಾರೆ. ಕರೆಯುವಾಗ ಇಬ್ಬರಿಗೂ ಪ್ರಿಯಾಂಕ್‌ ಎನ್ನುವುದು ಸಾಮಾನ್ಯ. ಉದಾಹರಣೆಗೆ ಗಂಡು ಮಕ್ಕಳಿಗೆ ನಂದ ಎಂದೂ ಹೆಣ್ಣುಮಕ್ಕಳಿಗೆ ನಂದಾ ಎಂದು ಹೆಸರಿಡುತ್ತಾರೆ. ಆದರೆ ಇಬ್ಬರನ್ನೂ ಕೂಗುವಾಗ ನಂದ್‌ ಎಂದು ಕರೆಯುವುದು ಸಾಮಾನ್ಯ

ಬುದ್ದನಿಗೆ “ಪ್ರಿಯದರ್ಶಿ” ಎಂದೂ‌ ಕರೆಯಲಾಗುತ್ತಿತ್ತು.‌ ಪ್ರಿಯಾಂಕ ಎನ್ನುವುದು ಸಹ ಈ ಹೆಸರನ್ನೇ ಹೋಲುತ್ತದೆ. ಅರ್ಥದಲ್ಲಿಯೂ ವ್ಯತ್ಯಾಸಗಳಾಗವುದಿಲ್ಲ. ಭಾರತದಲ್ಲಿ ಒಂದೇ ರೀತಿಯ ಹಲವು ಹೆಸರುಗಳನ್ನು ಗಂಡು ಮಕ್ಕಳಿಗೂ ಹೆಣ್ಣು ಮಕ್ಕಳಿಗೂ ಇಡುತ್ತಾರೆ. ಉದಾಹರಣೆಗೆ ಗಂಡುಮಕ್ಕಳಿಗೆ ಲಕ್ಷ್ಮಣ ಭೀಮ ಆದರೆ ಹೆಣ್ಣುಮಕ್ಕಳಿಗೆ ಈ ಹೆಸರು ಇಟ್ಟಾಗ  ಕರೆಯಬೇಕಾದ್ದು ಲಕ್ಷ್ಮಣಾ, ಭೀಮಾ ಎಂದು. ಈ ಎರಡು ಹೆಸರಿನ ಹೆಣ್ಣುನದಿಗಳೂ‌ ಇವೆ ಎಂಬುದನ್ನು ನೀವು ನೆನಪಿನಲ್ಲಿಡಬೇಕು. ಹಾಗೆಯೇ ಕೃಷ್ಣ. ಹೀಗೆ ಹೆಸರಿಟ್ಟುಕೊಂಡರೆ ಗಂಡು ಎಂದು ಕೃಷ್ಣಾ ಎಂದು ಹೆಸರಿಟ್ಟುಕೊಂಡರೆ ಹೆಣ್ಣು ಎಂದು ಅರಿಯಬೇಕು. ಹಾಗೆಯೇ ಕೃಷ್ಣಾ ಎನ್ನುವುದು ಹೆಣ್ಣು ಹೆಸರಿನ ನದಿಯೇ ಹೊರತು ಗಂಡು ಹೆಸರಿನ ನದಿಯಲ್ಲ ಎಂಬುದನ್ನು ನೆನಪಿನಲ್ಲಿಡಬೇಕು.

ಉದಾಹರಣೆಗೆ ಇನ್ನೂ ವಿಸ್ತರಿಸಿ  ಹೇಳುವುದಾದರೆ ಬಯಲುಸೀಮೆಯಲ್ಲಿ‌ “ಪ್ರಸನ್ನ” ಎನ್ನುವುದು ಗಂಡುಮಕ್ಕಳಿಗೆ ಇಡುವ ಹೆಸರು.‌ಕರಾವಳಿಯಲ್ಲಿ‌ ಹೆಣ್ಣುಮಕ್ಕಳಿಗೂ ಪ್ರಸನ್ನ ಎಂದು ಹೆಸರಿಡುವ ಅಭ್ಯಾಸ ಇದೆ.

ಈ ಎಲ್ಲ ಹಿನ್ನೆಲೆಯಲ್ಲಿ “ಪ್ರಿಯಾಂಕ” ಎನ್ನುವುದು ಗಂಡು ಹೆಸರು, ಪ್ರಿಯಾಂಕಾ ಎನ್ನುವುದು ಹೆಣ್ಣು ಹೆಸರು ಎಂದು ಕುಹಕವಾಡುವವರು ನೆನಪಿಡಬೇಕು. ಹೀಗೆ ಮಾಡದೇ ಕುಹಕ ಮುಂದುವರಿಸಿದರೆ ಅದು ಅಜ್ಞಾನದ ಪರಮಾವಧಿ!

Leave a Reply

Your email address will not be published. Required fields are marked *

error: Content is protected !!