ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಇರುವ ಆರೋಪಗಳ ತನಿಖೆಗೆ ರಾಜ್ಯಪಾಲರು ಅನುಮತಿ ನೀಡಿದ್ದಾರೆ. ಇದರಲ್ಲಿ ಅವರು ನಿಯಮಾವಳಿಗಳನ್ನು ಪಾಲಿಸಿದ್ದಾರೆಯೇ ? ಎಂಬ ಮೂಲಭೂತ ಪ್ರಶ್ನೆ ಏಳುತ್ತದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಇರುವ ಆರೋಪವೇನು ?

ಮುಡಾಗೆ ಸೇರಿದ ಜಮೀನು ಅಕ್ರಮವಾಗಿ ಡಿನೋಟಿಫೈ ಆಗಿದೆ. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವೇ ಅಭಿವೃದ್ಧಿ ಮಾಡಿ ನಿವೇಶನಗಳಾಗಿ ಹಂಚಿಕೆ ಮಾಡಲಾಗಿದ್ದ ಜಮೀನು, ಸಿದ್ದರಾಮಯ್ಯ ಅವರ ಸಂಬಂಧಿಯಿಂದ ಖರೀದಿ ಆಗಿದೆ.  ಈ ಪ್ರಕರಣದಲ್ಲಿ ಸಿದ್ದರಾಮಯ್ಯ ತಮ್ಮ ಪ್ರಭಾವ ಬಳಸಿದ್ದಾರೆ ಎಂಬುದು ಆರೋಪ ಆಗಿದೆ.

ಈ ಬಗ್ಗೆ ಟಿ.ಜೆ. ಅಬ್ರಾಹಂ ಅವರು ರಾಜ್ಯಪಾಲರಿಗೆ ದೂರು ನೀಡುತ್ತಾರೆ. ಇದರ ಸತ್ಯಾಸತ್ಯತೆ ಪರಿಶೀಲಿಸಲು ಸಂಬಂಧಿಸಿದ ತನಿಖಾ ಸಂಸ್ಥೆಗಳಿಗೆ ರಾಜ್ಯಪಾಲರು ಸೂಚಿಸಬೇಕಿತ್ತು. ಅದು ನೀಡಿದ ವರದಿ ಆಧಾರದ ಮೇಲೆ ತನಿಖೆಗೆ ಅನುಮತಿ ಕೊಡುವ ಅಥವಾ ಕೊಡದಿರುವ ಬಗ್ಗೆ ತೀರ್ಮಾನ ತೆಗೆದುಕೊಳ್ಳಬೇಕಿತ್ತು. ಆದರೆ ಹೀಗೆ ಮಾಡದೇ ತರಾತುರಿಯಲ್ಲಿ ನೋಟಿಸ್ ನೀಡಲಾಗಿದೆ. ಅಷ್ಟೇ ಬೇಗ ತನಿಖೆಗೆ ಅನುಮತಿ ನೀಡಲಾಗಿದೆ.

ಕೇಂದ್ರ ಸರ್ಕಾರದ ನಿಯಮಾವಳಿ

ಪ್ರಜಾ ಸಂಸದೀಯ ವ್ಯವಸ್ಥೆ ಮೂಲಕ ಆಯ್ಕೆಯಾಗಿ ಸಾರ್ವಜನಿಕ ಆಡಳಿತ ಕ್ಷೇತ್ರದ ಹುದ್ದೆಯಲ್ಲಿರುವ ವ್ಯಕ್ತಿಯನ್ನು ತನಿಖೆಗೆ ಒಳಪಡಿಸಲು ಹಂತಹಂತವಾದ ಕ್ರಮಗಳನ್ನು ಅನುಸರಿಸಬೇಕು. ಆರೋಪದ ವಿರುದ್ಧ ಶಾಸನಾತ್ಮಕ ಅಧಿಕಾರ ಇರುವ ಏಜೆನ್ಸಿಯಿಂದ ಪ್ರಾಥಮಿಕ ತನಿಖೆ ನಡೆಯಬೇಕು. 2021ರ ಸೆಪ್ಟೆಂಬರ್ ನಲ್ಲಿ ರೂಪಿಸಿರುವ ನಿಯಮಾವಳಿಗಳ ಸೆಕ್ಷನ್ 17 ಎ ಅನುಸಾರ ತನಿಖೆ ನಡೆಸುವ ಸಲುವಾಗಿ ಪೊಲೀಸ್ ಅಧಿಕಾರಿ ಅನುಮತಿ ಪಡೆಯಬೇಕು.

ಪ್ರಕರಣದಲ್ಲಿ ಯಾವ ವ್ಯಕ್ತಿಯ ವಿರುದ್ಧ ಆರೋಪ ಇದೆಯೋ ಅವರ ವಿರುದ್ಧ ಪ್ರಬಲ ಸಾಕ್ಷ್ಯಾಧಾರ ಅಂದರೆ ದಾಖಲೆಗಳು ಇರಬೇಕು. ಇವೆಲ್ಲವನ್ನು ಆಧರಿಸಿದ ಮಾಹಿತಿಯನ್ನು ತನಿಖಾ ಏಜೆನ್ಸಿ ನೀಡಿದ್ದಾಗ ಮಾತ್ರ ಆರೋಪಿತರ ವಿರುದ್ಧ ತನಿಖೆ ಮಾಡಲು ರಾಜ್ಯಪಾಲರು ಅನುಮತಿ ನೀಡಬಹುದು.

ಈ ಯಾವುದೇ ಪ್ರಾಥಮಿಕ ಅಂಶಗಳನ್ನು ಗಣನೆಗೆ ತೆಗೆದುಕೊಳ್ಳದೇ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ತನಿಖೆಗೆ ರಾಜ್ಯಪಾಲರು ಅನುಮತಿ ನೀಡಿದ್ದಾರೆ. ಇದು ಸಾರ್ವಜನಿಕ ಚರ್ಚೆಗೆ ಅನುವು ಮಾಡಿಕೊಟ್ಟಿದೆ. ಹಾಗೆ ನೋಡಿದರೆ ರಾಜ್ಯಪಾಲ ಥಾವರ್ ವಂದ್ ಗೆಹ್ಲೋಟ್ ಅವರು ವಿವೇಚನಾತ್ಮಕ ನಡೆಗೆ ಹೆಸರಾದವರು. ಇವರ ಇದುವರೆಗಿನ ಅಧಿಕಾರವಧಿಯಲ್ಲಿ ಯಾವುದೇ ವಿವಾದಕ್ಕೆ ಸಿಲುಕಿದವರಲ್ಲ. ಇವರ ಸಮತೂಕದ ನಡೆಗಳನ್ನು ಹಿಂದಿನ ವಿಧಾನಸಭೆ ಅವಧಿಯಲ್ಲಿ ವಿರೋಧಪಕ್ಷದ ನಾಯಕರಾಗಿದ್ದ ಸಿದ್ದರಾಮಮಯ್ಯ ಸದನದಲ್ಲಿಯೇ ಪ್ರಶಂಸೆ ವ್ಯಕ್ತಪಡಿಸಿದ್ದರು.

ಇಂಥ ಹಿನ್ನೆಲೆಯ ರಾಜ್ಯಪಾಲರು ಪ್ರಾಥಮಿಕ ನಿಯಮಾವಳಿಗಳನ್ನು ಅನುಸರಿಸದೇ ತನಿಖೆಗೆ ಅನುಮತಿ ಕೊಟ್ಟಿದ್ದು ಏಕೆ ? ಇವರ ಮೇಲೆ ಕೇಂದ್ರ ಸರ್ಕಾರದ ಚುಕ್ಕಾಣಿ ಹಿಡಿದಿರುವ ಬಿಜೆಪಿ ಹಿರಿಯ ನಾಯಕರು ಒತ್ತಡ ಹೇರಿರಬಹುದು.

ಸಿದ್ದರಾಮಯ್ಯ ಅವರ ವಿರುದ್ಧ ಸಿಟ್ಟು ಏಕೆ

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಗಳಿಗೆ ನೀಡಬೇಕಾದ ಸೂಕ್ತ ತೆರಿಗೆ ಪಾಲು ನೀಡುತ್ತಿಲ್ಲ. ಇದರ ವಿರುದ್ಧ ಕಾಂಗ್ರೆಸ್ ಸರ್ಕಾರ ನ್ಯಾಯಾಲಯಗಳಿಗೆ ಹೋಗಿದೆ.  ರಾಷ್ಟ್ರೀಯ ವೇದಿಕೆಗಳಲ್ಲಿ ಸಿದ್ದರಾಮಯ್ಯ ಅವರು ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ತಾರತಮ್ಯ ನೀತಿಗಳ ವಿರುದ್ಧ ಅಂಕಿಅಂಶ ಸಹಿತ ಮಾತನಾಡುತ್ತಿದ್ದಾರೆ. ಇದೆಲ್ಲವೂ ಕೇಂದ್ರದ ಹಿರಿಯ ಬಿಜೆಪಿ ನಾಯಕರ ಕಣ್ಣು ಕೆಂಪಾಗಿಸಿದೆ.

ಇದಲ್ಲದೇ ವಿಧಾನಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ 136 ಶಾಸಕ ಸ್ಥಾನಗಳನ್ನು ಪಡೆದಿದೆ. ಅಧಿಕಾರದ್ದಲ್ಲಿದ್ದ ಬಿಜೆಪಿ ಗಣನೀಯ ಸೋಲು ಕಂಡಿದೆ. ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಅವರು ಕರ್ನಾಟಕದಲ್ಲಿ ನಿರಂತರವಾಗಿ ಮಾಡಿದ ಚುನಾವಣಾ ಪ್ರಚಾರ ಸೋತಿದೆ. ಇದು ಸಹ ಬಿಜೆಪಿ ನಾಯಕರ ಧೃತಿಗೆಡಿಸಿದೆ.

ಮುಖ್ಯವಾಗಿ ರಾಜಕೀಯಯಾತ್ಮಕವಾಗಿ ಸಿದ್ದರಾಮಯ್ಯ ಪ್ರಬಲ ವಿರೋಧಿ ಧ್ವನಿಯಾಗಿರುವುದು, ಗ್ಯಾರಂಟಿ ಕಾರ್ಯಕ್ರಮಗಳ ಮೂಲಕ ಕಾಂಗ್ರೆಸ್ ವರ್ಚಸ್ಸು ಹೆಚ್ಚುತ್ತಿರುವುದು ಕೂಡ ರಾಜಕೀಯ ವಿರೋಧಿಗಳಿಗೆ ಅಸಹನೀಯ ಸಂಗತಿಯೆಂಬುದು ನಿರಾಕರಣೆ ವಿಷಯವಲ್ಲ.

ಈ ಎಲ್ಲ ಅಂಶಗಳು ಕರ್ನಾಟಕದ ರಾಜಭವನದ ಮೇಲೆ ರಾಜಕೀಯ ಒತ್ತಡಗಳಾಗಿ ಪರಿವರ್ತಿತವಾಗಿರಬಹುದು. ಈಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮುಂದಿನ ನಡೆ ಏನಾಗಬಹುದು ? ರಾಜ್ಯಪಾಲರ ತೀರ್ಮಾನದ ವಿರುದ್ಧ ನ್ಯಾಯಾಲಯ ಮೊರೆ ಹೋಗಬಹುದು !

Similar Posts

Leave a Reply

Your email address will not be published. Required fields are marked *