“ಒಳ ಮೀಸಲಾತಿಯ ಪೆಟ್ಟು, ಕಾಂಗ್ರೆಸ್ ಗ್ಯಾರಂಟಿ ಕಾರ್ಡುಗಳನ್ನು ನಂಬಿ ಜನರು ಮತ ಚಲಾಯಿಸಿರುವುದು ಮತ್ತು ಸರ್ಕಾರದ ವಿರುದ್ಧ ನಡೆದ ನಕಾರಾತ್ಮಕ ಪ್ರಚಾರ ನಮ್ಮ ಪಕ್ಷದ ಸೋಲಿಗೆ ಪ್ರಮುಖ ಕಾರಣ ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಗಿದೆ” ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರು ಹೇಳಿದ್ದಾರೆ.

ಬೆಂಗಳೂರಿನಲ್ಲಿ ಜೂನ್ 08ರಂದು ನಡೆದ ರಾಜ್ಯ ಬಿಜೆಪಿ ಸೋಲಿನ ಪರಾಮರ್ಶೆ ಸಭೆಯಲ್ಲಿ ಸೋಲಿಗೆ ಬೇರೆಬೇರೆ ಅಂಶಗಳು ಕಾರಣ ಎಂಬ ಅಭಿಪ್ರಾಯ ವ್ಯಕ್ತವಾಗಿದ್ದರೂ “ಕಾಂಗ್ರೆಸ್ ಗ್ಯಾರಂಟಿ ಕಾರ್ಡುಗಳನ್ನು ನಂಬಿ ಜನರು ಮತ ಚಲಾಯಿಸಿರುವುದು ಬಿಜೆಪಿ ಸೋಲಿಗೆ ಪ್ರಮುಖ ಕಾರಣ” ಎಂಬ ಅಂಶವೇ ಪ್ರಧಾನವಾಗಿದೆ.

ಕಾಂಗ್ರೆಸ್ ತನ್ನ ಗ್ಯಾರಂಟು ಕಾರ್ಡುಗಳನ್ನು ಮನೆಮನೆಗೆ ಹಂಚುತ್ತಿದ್ದಾಗ ಇತರ ರಾಜಕೀಯ ಪಕ್ಷಗಳಿಂದ ಕೇಳಿ ಬಾರದ ಈ ಕುರಿತ ಅಭಿಪ್ರಾಯಗಳು, ಟೀಕೆಗಳು ಕಾಂಗ್ರೆಸ್ ಸ್ಪಷ್ಟ ಬಹುಮತ ಪಡೆದ ನಂತರ ನಿತ್ಯವೂ ಕೇಳಿ ಬರತೊಡಗಿವೆ. ಅದರಲ್ಲಿಯೂ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಅವರು ಇತರ ಎಂಟು ಮಂದಿ ಶಾಸಕರೊಂದಿಗೆ ಪ್ರಮಾಣ ವಚನ ಸ್ವೀಕರಿಸಿ ಸರ್ಕಾರ ಅಸ್ತಿತ್ವಕ್ಕೆ ಬಂದ ಮರು ಕ್ಷಣದಿಂದಲೇ ಈ ಬಗೆಯ ಟೀಕೆಗಳು ಹೆಚ್ಚಾಗತೊಡಗಿವೆ.

ಸತ್ಯಕ್ಕೆ ಬೆನ್ನು

“ಗ್ಯಾರಂಟಿ ಕಾರ್ಡುಗಳಿಂದಲೇ ಕಾಂಗ್ರೆಸ್ ಅಧಿಕಾರಕ್ಕೇರಿದೆ” ಎಂಬುದನ್ನು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಸದ ಪ್ರತಾಪಸಿಂಹ ಅವರುಗಳಲ್ಲದೇ ಇತರ ಅನೇಕ ಬಿಜೆಪಿ ನಾಯಕರು ಹೇಳುತ್ತಿದ್ದಾರೆ. ಇದು ಇವರು ಸತ್ಯಕ್ಕೆ ಬೆನ್ನು ತೋರಿಸುತ್ತಿದ್ದಾರೆ. ತಮ್ಮ ಪಕ್ಷದ ಹಾಗೂ ತಮ್ಮ ಸರ್ಕಾರದ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಪದೇಪದೇ ಸುಳ್ಳು ಹೇಳುತ್ತಿದ್ದಾರೆ. “ಒಂದು ಸುಳ್ಳನ್ನು ಸಾವಿರ ಬಾರಿ ಹೇಳಿದರೆ ಅದು ನಿಜವಾಗುತ್ತದೆ” ಎಂದು ಪ್ರತಿಪಾದಿಸಿದ ಜೋಸೆಫ್ ಗೋಬ್ಬೇಲ್ಸ್ (Joseph Goebbels) ಸಿದ್ದಾಂತವನ್ನು ಅನುಕರಿಸುತ್ತಿದ್ದಾರೆ.

ಗ್ಯಾರಂಟಿಗಳ ಅತುರಾತುರ ಜಾರಿ

ವಿಚಿತ್ರ ಎಂದರೆ ಕಾಂಗ್ರೆಸ್ ಪಕ್ಷವೂ ಸಹ ವಿರೋಧ ಪಕ್ಷ ಹೇಳುತ್ತಿರುವ ಸುಳ್ಳನ್ನೇ ನಿಜವೆಂದು ನಂಬಿರುವಂತೆ ಕಾಣುತ್ತಿರುವುದು ! ರಾಜ್ಯ ಕಾಂಗ್ರೆಸ್ ಪಕ್ಷ ಸರ್ಕಾರ ರಚಿಸಿ ಮೊದಲ ಸಚಿವ ಸಂಪುಟ ಸಭೆಯಲ್ಲಿಯೇ ಐದೂ ಗ್ಯಾರಂಟಿ ಕಾರ್ಡುಗಳ ಜಾರಿಗೆ ತಾತ್ವಿಕ ಅನುಮೋದನೆ ನೀಡಿದೆ. ಈ ಬಳಿಕ ಅವುಗಳ ಅನುಷ್ಠಾನವಷ್ಟೇ ಬಾಕಿ. ಒಂದು ರಾಜಕೀಯ ಪಕ್ಷವಾಗಿ ಚುನಾವಣೆ ಸಂದರ್ಭದಲ್ಲಿ ಕೊಟ್ಟಿರುವ ಭರವಸೆಗಳನ್ನು ಅಧಿಕಾರ ಪಡೆದ ನಂತರ ಈಡೇರಿಸುವಾಗ ಜಬಾಬ್ದಾರಿ ದುಪ್ಪಟಾಗಿರುತ್ತದೆ. ಏಕೆಂದರೆ ಸರ್ಕಾರ ಜನತೆಗೆ ಉತ್ತರದಾಯಿಯೇ ಹೊರತು ರಾಜಕೀಯ ಪಕ್ಷಕ್ಕಲ್ಲ. ಪ್ರತಿಯೊಂದು ರೂಪಾಯಿಯನ್ನು ಅಳೆದು ತೂಗಿ ಖರ್ಚು ಮಾಡುವ ಹೊಣೆಗಾರಿಕೆ ಇರುತ್ತದೆ.

ಭರವಸೆಗಳಿಗೆ ಹೊಳಪು ನೀಡಬೇಕು

ಈ ಹಂತದಲ್ಲಿ ಪಕ್ಷ ನೀಡಿದ ಭರವಸೆಗಳನ್ನು ಉಜ್ಜಿ, ತೀಡಿ ಮತ್ತಷ್ಟು ಹೊಳಪು ನೀಡಬೇಕು. ಅರ್ಹರಿಗೆ ಮಾತ್ರ ಸರ್ಕಾರದ ಅರ್ಥಾತ್ ಜನತೆಯ ಹಣ ಸಲ್ಲುವಂತಾಗಬೇಕು. ವಿರೋಧ ಪಕ್ಷಗಳ ಒತ್ತಡ ತಂತ್ರಕ್ಕೆ ಮಣಿದ ಕಾಂಗ್ರೆಸ್ ಸರ್ಕಾರ ಆಳವಾಗಿ ಆಲೋಚಿಸದೇ ಅತುರಾತುರವಾಗಿ ಗ್ಯಾರಂಟಿ ಕಾರ್ಡುಗಳ ಅನುಷ್ಠಾನಕ್ಕೆ ಮುಂದಾಯಿತು. ಇದಕ್ಕೆ ಪದೇಪದೇ ಆಗುತ್ತಿರುವ ಗೋಜು, ಗೊಂದಲಗಳೇ ಸಾಕ್ಷಿ !

ಗ್ಯಾರಂಟಿ ನೀಡದೆಯೂ ಅಧಿಕಾರಕ್ಕೆ ಬರಬಹುದಿತ್ತೆ ?

ಗ್ಯಾರಂಟಿ ಜಾರಿಗಳ ಹಿಂದೆ ದೆಹಲಿಯಲ್ಲಿ, ಪಂಜಾಬಿನಲ್ಲಿ ಅಧಿಕಾರಕ್ಕೇರಿದ ಆಪ್, ಹಿಮಾಚಲದ ಕಾಂಗ್ರೆಸಿನ ತಂತ್ರಗಾರಿಕೆ ಪ್ರಭಾವ ನಿಚ್ಚಳವಾಗಿದೆ. ಕರ್ನಾಟಕದಲ್ಲಿ ಇದರ ಅವಶ್ಯಕತೆ ಇರಲಿಲ್ಲ. ಏಕೆಂದರೆ ಇಲ್ಲಿಯ ಮತದಾರರಿಗೆ ವಿಶೇಷವಾದ ರಾಜಕೀಯ ಪ್ರಜ್ಞೆಯಿದೆ. ಸರ್ಕಾರ ಎಡವಿದರೆ ಬದಲಾಯಿಸುವ ಗುಣವಿದೆ. ಇದಕ್ಕೆ ಚುನಾವಣೆಗಳ ಇತಿಹಾಸ ಗಮನಿಸಬಹುದು. 1989ರಲ್ಲಿ ವೀರೇಂದ್ರ ಪಾಟೀಲರ ಮುಚೂಣಿ ನಾಯಕತ್ವದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂತು. ಆದರೆ ಪಾಟೀಲರನ್ನು ಕೆಳಗಿಳಿಸಿದ್ದು ಬಂಗಾರಪ್ಪ, ವೀರಪ್ಪಮೊಯ್ಲಿ ಅನುಕ್ರಮವಾಗಿ ಮುಖ್ಯಮಂತ್ರಿಗಳಾಗಿದ್ದು, ಸರ್ಕಾರದ ಸಚಿವ ಸಂಪುಟದಲ್ಲಿದ್ದವರ ಪರಸ್ಪರ ಅಸಹಕಾರ, ಪಕ್ಷದ ಆಂತರಿಕ ಭಿನ್ನಮತದ ಸ್ಫೋಟಗಳಿಂದಾಗಿ 1994ರ ಚುನಾವಣೆಯಲ್ಲಿ ಅಧಿಕಾರ ಕಳೆದುಕೊಳ್ಳಬೇಕಾಯಿತು.

1994ರಲ್ಲಿ ಜನತಾ ಪಕ್ಷ ಅಧಿಕಾರಕ್ಕೆ ಬಂತಾದರೂ ಮುಖ್ಯಮಂತ್ರಿ ಬದಲಾವಣೆ ( ಹೆಚ್.ಡಿ. ದೇವೇಗೌಡ ಅವರು ಪ್ರಧಾನ ಮಂತ್ರಿಯಾಗಿ ದೆಹಲಿಗೆ ಹೋದರು), ಜೆ.ಹೆಚ್. ಪಾಟೀಲರ ಮುಖ್ಯಮಂತ್ರಿ ಅವಧಿಯಲ್ಲಿ ಆದ ಭಿನ್ನಮತ, ಬಿಗಿಯಿಲ್ಲದ ಆಡಳಿತ 1999ರ ಚುನಾವಣೆಯಲ್ಲಿ ಅಧಿಕಾರ ಕಳೆದುಕೊಳ್ಳುವಂತೆ ಮಾಡಿತು.

ಪಾಂಚಜನ್ಯ ಮೊಳಗಿಸಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದ ಎಸ್.ಎಂ. ಕೃಷ್ಣ ಅವರು ಮುಖ್ಯಮಂತ್ರಿಯಾಗಿ ದಕ್ಷ ಆಡಳಿತ ನೀಡಿದರು. ಆದರೆ ಆ ಸಮಯದಲ್ಲಿ ರಾಜ್ಯವನ್ನು ಮೂರುವರೆ ವರ್ಷ ಬರಗಾಲ ಕಾಡಿತು. ಚುನಾವಣೆಗೆ ಇನ್ನೂ ಆರು ತಿಂಗಳು ಬಾಕಿ ಇರುವಾಗಲೇ ವಿಧಾನಸಭೆ ವಿಸರ್ಜಿಸಿದರು. 2004ರಲ್ಲಿ ನಡೆದ ಚುನಾವಣೆಯಲ್ಲಿ ಅತಂತ್ರ ವಿಧಾನಸಭೆ ಉಂಟಾಯಿತು. ಕಾಂಗ್ರೆಸ್, ಜಾತ್ಯತೀತ ಜನತಾ ದಳ ಸಂಮಿಶ್ರ ಸರ್ಕಾರ ರಚಿಸಿದವು.

ಹೆಚ್.ಡಿ. ಕುಮಾರಸ್ವಾಮಿ ರಾಜಕೀಯ ನಡೆಯಿಂದ ಮುಖ್ಯಮಂತ್ರಿ ಸರ್ಕಾರದ ಆಯಸ್ಸು ಅಲ್ಪಾವಧಿಯದಾಯಿತು. 20 20 ಒಪ್ಪಂದದ ಅನ್ವಯ ಬಿಜೆಪಿ, ಜೆಡಿಎಸ್ ಸರ್ಕಾರ ರಚಿಸಿದವಾದರೂ ಈ ಸರ್ಕಾರ ಕೂಡ ಅವಧಿ ಪೂರೈಸಲಿಲ್ಲ. ಕೊಟ್ಟ ಮಾತಿನಂತೆ ಅಧಿಕಾರ ಬಿಟ್ಟುಕೊಡದ ಹೆಚ್.ಡಿ. ಕುಮಾರಸ್ವಾಮಿ ಅವರ ನಿಲುವಿನಿಂದಾಗಿ 2008ರಲ್ಲಿ ಚುನಾವಣೆ ನಡೆಯಿತು. ಆಪರೇಷನ್ ಕಮಲ ನಡೆಸಿ ಬಿಜೆಪಿ ಅಧಿಕಾರಕ್ಕೆ ಬಂತು. ಈ ಅವಧಿಯಲ್ಲಿ ಬಂದ ಆರೋಪಗಳಿಂದಾಗಿ ಮುಖ್ಯಮಂತ್ರಿಯಾಗಿದ್ದ ಬಿ.ಎಸ್. ಯಡಿಯೂರಪ್ಪ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದರು. ಜೈಲಿಗೂ ಹೋಗುವಂತಾಯಿತು.

ಸದಾನಂದ ಗೌಡ ನಂತರ ಜಗದೀಶ್ ಶೆಟ್ಟರ್ ಅನುಕ್ರಮವಾಗಿ ಮುಖ್ಯಮಂತ್ರಿಗಳಾದರು. ಆದರೆ ಪಕ್ಷದಲ್ಲಿ ಭುಗಿಲೆದ್ದ ಭಿನ್ನಮತ, ಬಿಗಿಯಿಲ್ಲದ ಆಡಳಿದ ಕಾರಣದಿಂದ 2013ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂತು. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಬಿಗಿಯಾದ, ದಕ್ಷ ಆಡಳಿತ ನೀಡಿತು. ಅನೇಕ ಭಾಗ್ಯಗಳನ್ನು ಜಾರಿಗೆ ತಂದರೂ ಅವುಗಳ ಪ್ರಚಾರದ ಕೊರತೆಯಿಂದಾಗಿ ಲಾಭವಾಗಲಿಲ್ಲ. ಜೊತೆಗೆ ಮುಸ್ಲೀಮ್ ಸಮುದಾಯದ ಪಕ್ಷಪಾತಿ ಎಂಬ ಪ್ರಚಾರವೂ ಮುಳುವಾಯಿತು. ಶಾದಿ ಭಾಗ್ಯ, ಟಿಪ್ಪು ಜಯಂತಿ ಸಂದರ್ಭದಲ್ಲಾದ ಗಲಭೆಗಳು ಈ ಆರೋಪಗಳ ಪ್ರಭಾವವನ್ನು ಮತ್ತಷ್ಟು ಹೆಚ್ಚಿಸಿದವು.

2018ರ ಚುನಾವಣೆಯಲ್ಲಿ ಮತ್ತೆ ಅತಂತ್ರ ವಿಧಾನಸಭೆ. ಕಾಂಗ್ರೆಸ್, ಜೆಡಿಎಸ್ ಒಟ್ಟುಗೂಡಿ ಹೆಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಸರ್ಕಾರ ರಚನೆಯಾಯಿತಾದರೂ ಇದಕ್ಕೂ ಅಲ್ಪಾಯುಷ್ಯ ಕಾಡಿತು. ಕಾಂಗ್ರೆಸಿನಿಂದ ಹಾರಿದ 17 ಮಂದಿ ಶಾಸಕರ ಸಹಾಯದಿಂದ ಬಿಜೆಪಿ ಸರ್ಕಾರ ರಚಿಸಿತು.

ಈ ಮೇಲಿನ ಸುದೀರ್ಘ ಚುನಾವಣಾ ರಾಜಕೀಯ ಇತಿಹಾಸ ಗಮನಿಸಿದರೆ ಕರ್ನಾಟಕದ ಮತದಾರರ ಪ್ರಬುದ್ಧ ನಿಲುವುಗಳು ತಿಳಿಯುತ್ತದೆ. 2008ರಲ್ಲಾಗಲಿ, 2018ರಲ್ಲಾಗಲಿ ಬಿಜೆಪಿ ಸ್ವತಂತ್ರ ಬಲದಿಂದ ಸರ್ಕಾರ ರಚಿಸಿಲ್ಲ ಎಂಬುದು ಮನದಟ್ಟಾಗುತ್ತದೆ. ರಾಜಕೀಯ ಪಕ್ಷ ಮತ್ತು ಅದು ರಚಿಸುವ ಸರ್ಕಾರ ಎಡವಿದಾಗಲೆಲ್ಲ

ಬಿಜೆಪಿ ವೈಫಲ್ಯಗಳೇನು ?
2019ರಲ್ಲಿ ಮತ್ತೆ ಆಪರೇಷನ್ ಕಮಲ ನಡೆಸಿ ಬಿಜೆಪಿ ಅಧಿಕಾರಕ್ಕೆ ಬಂತಾದರೂ ಅವಧಿಯ ಉದ್ದಕ್ಕೂ ಹಗರಣದ ಆರೋಪಗಳೇ ಅದನ್ನು ಕಾಡಿವೆ. ಇದರ ಜೊತೆಗೆ ಮುಖ್ಯಮಂತ್ರಿಯಾಗಿದ್ದ ಬಿ.ಎಸ್. ಯಡಿಯೂರಪ್ಪ ಅವರನ್ನು ಬಲವಂತಾಗಿ ಅಧಿಕಾರದಿಂದ ಕೆಳಗಿಳಸಲಾಯಿತೆಂಬ ಆರೋಪ, ರಾಜಿನಾಮೆ ನೀಡುವಾಗ ಅವರು ತೀವ್ರ ದುಃಖಭರಿತತರಾಗಿದ್ದು ಲಿಂಗಾಯಿತ ಸಮುದಾಯ ರೊಚ್ಚಿಗೇಳುವಂತೆ ಮಾಡಿತು. ಯಡಿಯೂರಪ್ಪ ಅವರೇ ಸೂಚಿಸಿದ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾದರೂ ಅವರು ಸರ್ಕಾರದಲ್ಲಿ ಸ್ವತಂತ್ರ ನಿರ್ಣಾಯಕರಲ್ಲ ಸೂತ್ರದ ಗೊಂಬೆ ಎಂಬ ಭಾವನೆ ಜನತೆಗೆ ಬಂತು. ಇವರ ಅವಧಿಯಲ್ಲಿ ಸಚಿವರ ಮೇಲೆ ಯಾರದ್ದೂ ನಿಯಂತ್ರಣವಿರಲಿಲ್ಲ. ಅಧಿಕಾರಿಗಳು ಯಾರ ಮಾತನ್ನೂ ಕೇಳುವುದಿಲ್ಲ, ಮುಖ್ಯಮಂತ್ರಿ ಬೊಮ್ಮಾಯಿ ಅವರ ಮಾತನ್ನೂ ಲೆಕ್ಕಿಸುವುದಿಲ್ಲ ಎಂಬ ಭಾವನೆಯೂ ಜನತೆಗೆ ಬಂತು. ಚುನಾವಣೆ ಸಂದರ್ಭದಲ್ಲಿ ಪ್ರಭಾವಿ ನಾಯಕರುಗಳ ವಲಸೆಯೂ ಪ್ರಭಾವ ಬೀರಿದೆ.

ನಿರಂತರ ಆರೋಪಗಳು

ಬಿಟ್ ಕಾಯಿನ್ ಹಗರಣ, ಕೊರನಾ ಅವಧಿಯಲ್ಲಿ ಭಾರಿ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪ, ಶೇಕಡ 40ರಷ್ಟು ಕಮೀಶನ್ ನೀಡದೇ ಸರ್ಕಾರದಲ್ಲಿ ಯಾವ ಕೆಲಸವೂ ಆಗುವುದಿಲ್ಲವೆಂಬ ಗುತ್ತಿಗೆದಾರರ ಸಂಘದ ನಿರಂತರ ಆರೋಪ, ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ, ಮಂತ್ರಿ ಕೆ.ಎಸ್. ಈಶ್ವರಪ್ಪ ರಾಜಿನಾಮೆ ಈ ಅಂಶಗಳೂ ಚುನಾವಣೆಯಲ್ಲಿ ಪ್ರಭಾವ ಬೀರಿವೆ

ವದಂತಿಗಳು

ಚುನಾವಣಾ ಸಂದರ್ಭದಲ್ಲಿ ಮುಂದೆ ಬಿಜೆಪಿ ಅಧಿಕಾರಕ್ಕೆ ಬಂದರೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮುಖ್ಯಮಂತ್ರಿಯಾಗುತ್ತಾರೆ ಎಂಬ ವದಂತಿ, ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರು ಲಿಂಗಾಯಿತರ ಬೆಂಬಲವನ್ನೇ ಪಕ್ಷ ನೆಚ್ಚಿಲ್ಲ ಎಂಬರ್ಥದಲ್ಲಿ ಹೇಳಿದ್ದಾರೆ ಎನ್ನಲಾದ ಮಾತಿನ ವಂದಂತಿಗಳು ಕೂಡ ಲಿಂಗಾಯಿತ ಸಮುದಾಯದ ಕೆಂಗಣ್ಣಿಗೆ ಗುರಿಯಾದವು.

ವಿವಾದಗಳು
ಶಾಲಾ – ಕಾಲೇಜು ಪಠ್ಯ ಪುಸ್ತಕಗಳ ಕೇಸರಿಕರಣ ವಿವಾದ, ಹಿಜಾಬ್ ವಿವಾದ, ಹಲಾಲ್ ವಿವಾದ, ಮುಸ್ಲೀಮ್ ಸಮುದಾಯದ ಶೇಕಡ 4ರಷ್ಟು ಮೀಸಲಾತಿಯನ್ನು ಕಿತ್ತು ಇತರ ಸಮುದಾಯಗಳಿಗೆ ಹಂಚಿದ ವಿವಾದಗಳಿಂದಲೂ ಜನತೆ ಬೇಸರಗೊಂಡಿದ್ದರು. ಕರಾವಳಿ, ಮಲೆನಾಡು ಭಾಗಗಳಲ್ಲಿ ಧರ್ಮಗಳ ಕಾರಣದಿಂದ ನಡೆದ ಗಲಾಟೆಗಳು, ಕೊಲೆಗಳಿಂದಲೂ ಕಾನೂನು ಸುವ್ಯವಸ್ಥೆ ಸರಿಯಾಗಿಲ್ಲ ಎಂಬ ಭಾವನೆ ಮೂಡಿತ್ತು.

ಕೇಂದ್ರದ ವೈಫಲ್ಯಗಳು

ಕೇಂದ್ರ, ರಾಜ್ಯ ಬಿಜೆಪಿ ಸರ್ಕಾರದ ಚುಕ್ಕಾಣಿ ಹಿಡಿದವರು ಪದೇಪದೇ ಡಬ್ಬಲ್ ಇಂಜಿನ್ ಸರ್ಕಾರ ಎಂದು ಹೇಳುತ್ತಿದ್ದರು. ಈ ಅಂಶ ಸಹ ಇವೆರಡೂ ಸರ್ಕಾರಗಳನ್ನು ಜನತೆ ಸಮೀಕರಿಸಿ ನೋಡುವಂತಾಯಿತು. ಕೇಂದ್ರ ಸರ್ಕಾರ ಸೂಕ್ತ ನೀತಿ ಅನುಸರಿಸದ ಕಾರಣ ಗ್ಯಾಸ್ ಸಿಲಿಡಂರ್ ಬೆಲೆ, ಪೆಟ್ರೋಲ್ ಡಿಸೇಲ್ ಬೆಲೆ, ನಿತ್ಯವಶ್ಯಕ ಧಾನ್ಯಗಳ ಬೆಲೆ, ಅಡುಗೆ ಎಣ್ಣೆ ಬೆಲೆ ನಿರಂತರವಾಗಿ ಏರಿಕೆಯಾಗಿದ್ದು, ನಿರುದ್ಯೋಗ, ಕೊರೊನಾ ಅವಧಿಯನ್ನು ಸಮರ್ಪಕವಾಗಿ ನಿರ್ವಹಣೆ ಮಾಡದೇ ಹೋಗಿದ್ದು, ಆಮ್ಲಜನಕದ ಸಿಲಿಂಡರುಗಳ ಕೊರತೆಯಿಂದ ಸಾವಿನ ಸಂಖ್ಯೆ ಏರಿದ್ದು ಕೂಡ ಪ್ರಭಾವ ಬೀರಿವೆ.

ಕೇಂದ್ರೀಕರಣವಾದ ಮುಸ್ಲೀಮ್ ಸಮುದಾಯದ ಮತಗಳು

ಸಾಮಾನ್ಯವಾಗಿ ಮುಸ್ಲೀಮ್ ಸಮುದಾಯದ ಮತಗಳು ಕಾಂಗ್ರೆಸ್ , ಜೆಡಿಎಸ್ ನಡುವೆ ವಿಕೇಂದ್ರೀಕರಣವಾಗುತ್ತಿತ್ತು. ಅತಂತ್ರ ವಿಧಾನಸಭೆ ರಚನೆಯಾದರೆ ಜೆಡಿಎಸ್ ಮತ್ತೆ ಬಿಜೆಪಿಯತ್ತ ಹೋಗಬಹುದು ಎಂಬ ಭಾವನೆಯೂ ಈ ಸಮುದಾಯ ಚನ್ನಪಟ್ಟಣ ಹೊರತುಪಡಿಸಿ ಉಳಿದೆಲ್ಲ ಕಡೆಯೂ ಕಾಂಗ್ರೆಸಿನತ್ತ ವಾಲುವಂತೆ ಮಾಡಿತು. ಈ ಕಾರಣದಿಂದಾಗಿಯೂ ಈ ಬಾರಿ ಜೆಡಿಎಸ್ , ಪಂಚರತ್ನ, ಜಲಧಾರೆಯಂಥ ಉತ್ತಮ ಪರಿಕಲ್ಪನೆಯ ಯೋಜನೆಗಳನ್ನು ಇಟ್ಟುಕೊಂಡು ಜನತೆ ಮುಂದೆ ಹೋದರೂ 19 ಸ್ಥಾನಕ್ಕೆ ಇಳಿಯುವಂತಾಯ್ತು.

ಕಾಂಗ್ರೆಸಿನ ನಿರಂತರ ಹೋರಾಟ

ಕಾಂಗ್ರೆಸ್ ಮುಖಂಡ ಡಿ.ಕೆ. ಶಿವ ಕುಮಾರ್ ರಾಜ್ಯ ಘಟಕದ ಅಧ್ಯಕ್ಷರಾದ ನಂತರ ಪಕ್ಷ ಮೈ ಕೊಡವಿ ಎದ್ದ ಪರಿ ನಿಜಕ್ಕೂ ಆಶ್ಚರ್ಯಕರ. ಸದನದ ಒಳಗೆ ಸಿದ್ದರಾಮಯ್ಯ, ಸದನದ ಹೊರಗೆ ಡಿ.ಕೆ. ಶಿವಕುಮಾರ್ ನೇತೃತ್ವದ ಪಕ್ಷವು ಬಿಜೆಪಿ ಸರ್ಕಾರದ ವಿರುದ್ಧ ಕೇಳಿ ಬರುತ್ತಿದ್ದ ಪ್ರತಿಯೊಂದು ಆರೋಪಗಳನ್ನು ಹಿಡಿದುಕೊಂಡು ಹೋರಾಟ ನಡೆಸತೊಡಗಿತು. ಚುನಾವಣೆ ತನಕವೂ ಈ ಹೋರಾಟದ ಕಾವು ಕಾಯ್ದುಕೊಂಡಿದ್ದು ಕೂಡ ಅದು ಅಧಿಕಾರಕ್ಕೆ ಬರುವಲ್ಲಿ ಸಹಕಾರಿಯಾಗಿದೆ.

ಏಕ ಕಾಲದಲ್ಲಿ ಎರಡು ಬಗೆಯ ಆಲೋಚನೆ

ಸಾಮಾನ್ಯವಾಗಿ ಭಾರತದ ಚುನಾವಣೆಗಳಲ್ಲಿ ಸಮುದಾಯಗಳು ಧರ್ಮ, ಜಾತಿಗಳ ಆಧಾರದ ಮೇಲೆ ವಿವೇಚಿಸುತ್ತವೆ. ಇದಕ್ಕೆ ಕರ್ನಾಟಕದಲ್ಲಿ ಪದೇಪದೇ ಅಪವಾದಗಳು ಕಂಡು ಬರುತ್ತಿವೆ. ಅಂದರೆ ಇಲ್ಲಿನ ಸಮುದಾಯಗಳು ಭಿನ್ನವಾಗಿ ಆಲೋಚಿಸುತ್ತಿವೆ. ಇಲ್ಲಿ ಬಡವರು, ಕೆಳ ಮಧ್ಯಮ ವರ್ಗದವರು, ಮೇಲ್ಮಧ್ಯಮ ವರ್ಗದವರು, ಶ್ರೀಮಂತ ವರ್ಗಗಳವರು ಒಂದೇ ರೀತಿ ವಿವೇಚಿಸಿದ್ದಾರೆ. ಈ ಅಂಶಗಳು ಬಿಜೆಪಿಯ ಕೇಂದ್ರ, ರಾಜ್ಯ ಸರ್ಕಾರಗಳ ಆಡಳಿತ ವೈಫಲ್ಯಗಳ ವಿರುದ್ಧ ಮತ ನೀಡುವಂತೆ ಮಾಡಿವೆ.

ಗ್ಯಾರಂಟಿ ಕಾರ್ಡುಗಳೇ ಬೇಕಿರಲಿಲ್ಲ
ಈ ಮೇಲಿನ ಅಂಶಗಳನ್ನೆಲ್ಲ ವಿವೇಚಿಸಿದಾಗ ಗ್ಯಾರಂಟಿ ಕಾರ್ಡುಗಳಿಲ್ಲದೆಯೂ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿತ್ತು ಎಂಬುದು ಮತ್ತೆಮತ್ತೆ ಮನದಟ್ಟಾಗುತ್ತದೆ..

Similar Posts

1 Comment

  1. ಗ್ಯಾರಂಟಿ ಘೋಷಣೆ ಮಾಡದಿದ್ದರೂ ಕಾಂಗ್ರೆಸ್
    ಅಧಿಕಾರ ಹಿಡಿತಿತ್ತು.

Leave a Reply

Your email address will not be published. Required fields are marked *