ಯಾರನ್ನಾದರೂ ಭೇಟಿಯಾಗುವ ಮುನ್ನ ಅವರಿಗೆ ಇಂಥ ದಿನ, ಇಂಥ ಸಮಯಕ್ಕೆ ಬರುತ್ತೇವೆ ಎಂದು ಹೇಳುವುದು ವಾಡಿಕೆ. ಸೆಲಿಬ್ರಿಟಿಗಳ ವಿಚಾರದಲ್ಲಯಂತೂ ಹೀಗೆ ಮಾಡುವುದು ಅತ್ಯಂತ ಅವಶ್ಯಕ. ಭೇಟಿಯನ್ನು ಖಚಿತಪಡಿಸಿಕೊಳ್ಳಬೇಕಾಗುತ್ತದೆ. ಮುಂಚಿತವಾಗಿ ಬರುತ್ತಿದ್ದೇವೆ ಎಂದು ಮಾಹಿತಿ ನೀಡುವುದು ಸೂಕ್ತ. ಭೇಟಿಯಾಗಬೇಕಾದವರಿಗೆ ಮಾಹಿತಿ ನೀಡದಿದ್ದರೆ ಮುಜುಗರದ ಪರಿಸ್ಥಿತಿ ಉಂಟಾಗಬಹುದು.
ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಕರ್ನಾಟಕದಲ್ಲಿ ರಾಜಕೀಯ ಪ್ರವಾಸ ಮಾಡುತ್ತಿದ್ದಾರೆ. ಸದ್ಯದಲ್ಲಿಯೇ ಆಯೋಜಿತವಾಗಿರುವ ರಾಜ್ಯ ಚುನಾವಣೆಯನ್ನೇ ಗಮನದಲ್ಲಿರಿಸಿಕೊಂಡು ಮಾಡುತ್ತಿರುವ ಪ್ರವಾಸವಿದು. ಈ ನಿಟ್ಟಿನಲ್ಲಿ ಪ್ರಭಾವಿ ಮಠಗಳ ಮಠಾಧೀಶರನ್ನು, ಜನಪ್ರಿಯತೆ ಹೊಂದಿರುವ ಪ್ರಮುಖ ವ್ಯಕ್ತಿಗಳನ್ನು ಭೇಟಿ ಮಾಡುತ್ತಿದ್ದಾರೆ.
ಜನಪ್ರಿಯ ವ್ಯಕ್ತಿಗಳನ್ನು ಶಾ ಭೇಟಿಯಾದಾಗ ಸಹಜವಾಗಿ ಮಾಧ್ಯಮ ಮತ್ತು ಜನತೆಯ ದೃಷ್ಟಿ ಅತ್ತ ಕೇಂದ್ರೀಕೃತವಾಗುತ್ತದೆ. ಕೆಲವು ಸಂದರ್ಭಗಳಲ್ಲಿ ರಾಜಕೀಯ ರಂಗಕ್ಕೆ ಸೆಳೆದು ಚುನಾವಣೆಗೆ ನಿಲ್ಲಿಸುವ ಕಾರ್ಯವಿರಬಹುದು ಎನ್ನಿಸುತ್ತದೆ. ಬೆಂಗಳೂರಿನಲ್ಲಿ ಬಿಜೆಪಿ ವಕ್ತಾರ ಅಶ್ವಥ್ ನಾರಾಯಣ ಅವರು ಮೈಸೂರಿನ ರಾಜವಂಶದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರನ್ನು ಅಮಿತ್ ಶಾ ಭೇಟಿ ಮಾಡುವ ಸಾಧ್ಯತೆಯಿದೆ ಎಂದರು. ಇದೇ ಪಕ್ಷದ ಇನ್ನೂ ಕೆಲವರು ಭೇಟಿ ನಿಗದಿತವಾಗಿದೆ ಎಂದರು.
ಇದರಿಂದ ಸಹಜವಾಗಿ ಮಾಧ್ಯಮಗಳ ದೃಷ್ಟಿ ಯದುವೀರ್ ಅವರತ್ತ ತಿರುಗಿತು. ಏಕೆಂದರೆ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರು ಕಾಂಗ್ರೆಸ್ ಪಕ್ಷದಿಂದ ಲೋಕಸಭೆಗೆ ಸ್ಪರ್ಧಿಸಿ ಎರಡು ಬಾರಿ ಸಂಸದರಾಗಿದ್ದರು. ಈ ನಂತರ ಒಮ್ಮೆ ಬಿಜೆಪಿಯಿಂದಲೂ ಒಮ್ಮೆ ಸ್ಪರ್ಧಿಸಿ ಸೋತಿದ್ದರು. ಈ ಹಿನ್ನೆಲೆಯಲ್ಲಿ ಇವರ ಕುಟುಂಬದವರನ್ನು ರಾಜಕೀಯಕ್ಕೆ ಸೆಳೆದು ಚುನಾವಣೆಗೆ ನಿಲ್ಲಿಸುವ ಆಲೋಚನೆ ಶಾ ಭೇಟಿ ಹಿಂದೆ ಇತ್ತು ಎನ್ನುವುದು ರಹಸ್ಯವಾದ ವಿಷಯವೇನಲ್ಲ.
ಅಚ್ಚರಿಯ ವಿಷಯವೇನೆಂದರೆ ಅಮಿತ್ ಶಾ ಅರಮನೆಗೆ ಭೇಟಿ ನೀಡುತ್ತಾರೆ ಎಂಬ ವಿಷಯ ಯದುವೀರ್ ಅವರಿಗೆ ಮುಂಚಿತವಾಗಿ ತಿಳಿದಿರಲಿಲ್ಲ. ಕೊಡಗು ಜಿಲ್ಲೆಗೆ ಭೇಟಿ ನೀಡಿದ ಸಂದರ್ಭದಲ್ಲಿಯೂ ಇದನ್ನು ಹೇಳಿದರು. ಇದನ್ನೇ ಮೈಸೂರಿನಲ್ಲಿ ಮಾಧ್ಯಮದವರ ಮುಂದೆ ಮತ್ತೊಮ್ಮೆ ಪುನಃರುಚ್ಚರಿಸಿದರು. ತಮ್ಮ ಕುಟುಂಬಕ್ಕೆ ಈ ಬಗ್ಗೆ ಮಾಹಿತಿಯಿಲ್ಲ ಎಂದರು. ಅಂದರೆ ಇವರ ತಾಯಿ ಪ್ರಮೋದದೇವಿ ಒಡೆಯರ್ ಅವರಿಗೂ ಈ ವಿಷಯ ಗೊತ್ತಿರಲಿಲ್ಲವೆಂದಾಯಿತು. ಇದೇ ಸಂದರ್ಭದಲ್ಲಿ ತಮಗೆ ರಾಜಕೀಯದ ಬಗ್ಗೆ ಯಾವುದೇ ಒಲವು-ಆಸಕ್ತಿಯೂ ಇಲ್ಲವೆಂದೇ ಯದುವೀರ್ ಮತ್ತೆಮತ್ತೆ ಹೇಳಿದರು. ಇದು ಭಾರಿ ಪ್ರಚಾರವೂ ಪಡೆಯಿತು.
ಯದುವೀರ್ ಹೇಳಿದ ಮಾತು ಸಹಜವಾಗಿ ರಾಜ್ಯದ ಪ್ರವಾಸದಲ್ಲಿರುವ ಅಮಿತ್ ಶಾ ಅವರಿಗೆ ಮಾಧ್ಯಮಗಳ ವರದಿಯಿಂದ ಗೊತ್ತಾಗಿರುತ್ತದೆ. ಇಂಥ ಸಂದರ್ಭದಲ್ಲಿ ಯದುವೀರ್ ಅವರ ಮಾತನ್ನು ಅವರು ಗಣನೆಗೆ ತೆಗೆದುಕೊಂಡಿದ್ದರೆ ಭೇಟಿ ಮಾಡುತ್ತಿರಲಿಲ್ಲ. ಹೇಗಾದರೂ ಮಾಡಿ ಕರ್ನಾಟಕದ ಅಧಿಕಾರದ ಗದ್ದುಗೆಯಲ್ಲಿ ಬಿಜೆಪಿ ಪ್ರತಿಷ್ಠಾಪಿಸಲೇಬೇಕು ಎಂದುಕೊಂಡಿರುವ ಅವರು ಇದನ್ನೆಲ್ಲ ಗಣನೆಗೆ ತೆಗೆದುಕೊಂಡಿಲ್ಲ.
ಯದುವೀರ್ ಹೇಳಿಕೆ ನಂತರ ಬಿಜೆಪಿ ಸ್ಥಳೀಯ ಮುಖಂಡರು ಭೇಟಿ ಮಾಡಿ ಶಾ ಭೇಟಿ ಕಾರ್ಯಕ್ರಮ ನಿಗದಿಪಡಿಸಿರಬಹುದು. ಸುತ್ತೂರು ಶ್ರೀಗಳನ್ನು ಭೇಟಿಯಾದ ನಂತರ ಅಮಿತ್ ಶಾ ನೇರ ತೆರಳಿದ್ದು ಅರಮನೆಗೆ. ಅಲ್ಲಿ ಯದುವೀರ್ ಮತ್ತು ಪ್ರಮೋದದೇವಿ ಒಡೆಯರ್ ಅವರನ್ನು ಭೇಟಿಯಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಪ್ರಮೋದದೇವಿ ಒಡೆಯರ್ ಅವರಿಗೆ ಮೈಸೂರಿನ ಕೆ.ಆರ್.ನಗರ ಕ್ಷೇತ್ರದಿಂದ ವಿಧಾನಸಭಾ ಸಭಾ ಚುನಾವಣೆಗೆ ಬಿಜೆಪಿಯಿಂದ ಸ್ಪರ್ಧಿಸಿ ಎಂದು ಆಹ್ವಾನ ನೀಡಿದರು ಎನ್ನಲಾಗಿದೆ.
ಇದಕ್ಕೆ ಕಾರಣವೂ ಇದೆ. ಈಗಾಗಲೇ ಯದುವೀರ್, ತನಗೆ ರಾಜಕೀಯದಲ್ಲಿ ಒಲವು ಇಲ್ಲ ಎಂದು ಬಹಿರಂಗವಾಗಿ ಹೇಳಿರುವುದು. ಕೆ.ಆರ್. ಕ್ಷೇತ್ರದಿಂದಲೇ ಸ್ಪರ್ಧಿಸಿ ಎಂದು ಹೇಳಿರುವುದಾದರೆ ಅದಕ್ಕೆ ಕಾರಣವೂ ಇದೆ. ಏಕೆಂದರೆ ಈ ಕ್ಷೇತ್ರದ ಜನತೆ ಮೈಸೂರು ಮಹಾರಾಜ ವಂಶಸ್ಥರ ಬಗ್ಗೆ ಭಾರಿ ಗೌರವ ಇರಿಸಿಕೊಂಡಿದ್ದಾರೆ. ಇದನ್ನು ಮತಗಳಾಗಿ ಪರಿವರ್ತಿತಗೊಳಿಸುವ ಹಿನ್ನೆಲೆಯಲ್ಲಿ ಈ ಕ್ಷೇತ್ರದಿಂದಲೇ ಸ್ಪರ್ಧಿಸಿ ಎಂದು ಹೇಳಿರಬಹುದು.
ಕೆ.ಆರ್ ಕ್ಷೇತ್ರದಿಂದ ಸ್ಪರ್ಧಿಸಲು ಸ್ಥಳೀಯ ಬಿಜೆಪಿ ಮುಖಂಡರಲ್ಲಿ ಭಾರಿ ಪೈಪೋಟಿ ಇದೆ. ಕಳೆದ ಬಾರಿಯೂ ಇದೇ ಪೈಪೋಟಿ ಇತ್ತು. ಇದೇ ಒಡಕಿಗೆ ಕಾರಣವಾಗಿ ಅದರ ಲಾಭ ಕಾಂಗ್ರೆಸಿಗೆ ದೊರಕಿತ್ತು. ಎಂ.ಕೆ. ಸೋಮಶೇಖರ್ ಶಾಸಕರಾಗಿ ಆಯ್ಕೆಯಾದರು. ಈ ಬಾರಿಯೂ ಇದು ಮರುಕಳಿಸದೇ ಇರಲಿ. ಪ್ರಭಾವಿ ವ್ಯಕ್ತಿಯೊಬ್ಬರನ್ನು ಕಣಕ್ಕಿಳಿಸಿದರೆ ಗೆಲ್ಲುವ ಸಾಧ್ಯತೆ ಹೆಚ್ಚು ಎಂಬ ಕಾರಣಕ್ಕೆ ಪ್ರಮೋದದೇವಿ ಒಡೆಯರ್ ಅವರನ್ನು ಅಭ್ಯರ್ಥಿಯನ್ನಾಗಿಸಲು ಯೋಚಿಸಿರಬಹುದು.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು ಮಾಡಿರಬಹುದಾದ ಈ ಸಲಹೆಗೆ ಪ್ರಮೋದದೇವಿ ಬಹುಶಃ ತಕ್ಷಣವೇ ಪ್ರತಿಕ್ರಿಯಿಸಿರಲಾರರು. ಯೋಚಿಸಿ ಹೇಳುತ್ತೇನೆ ಎಂದಿರಬಹುದು. ಶಾ ಭೇಟಿ ನಂತರ ಮಾಧ್ಯಮದವರು ಯದುವೀರ್ ಅವರನ್ನು ಸಂಪರ್ಕಿಸಿ ಭೇಟಿ ವಿಷಯವೇನು ಎಂದಾಗ ರಾಜಕೀಯ ಮಾತುಕತೆಗಳಾಗಿಲ್ಲ ಎಂದಿದ್ದಾರೆ. ಹೀಗೆ ಹೇಳುವುದು ಸಹಜ.
ಬಿಜೆಪಿಯ ಗುರಿ ಇದ್ದಿದ್ದು ಯದುವೀರ್ ಒಡೆಯರ್ ಅವರ ಮೇಲೆ. ಇತ್ತೀಚಿನ ದಿನಗಳಲ್ಲಿ ಇವರ ಜನಪ್ರಿಯತೆ ಹೆಚ್ಚುತ್ತಿದೆ. ಇವರು ಜನಸಾಮಾನ್ಯರ ನಡುವೆ ಹೆಚ್ಚುಹೆಚ್ಚಾಗಿ ಬೆರೆಯುತ್ತಿರುವುದು ಇದಕ್ಕೆ ಪ್ರಮುಖ ಕಾರಣ. ಇದನ್ನು ರಾಜಕೀಯವಾಗಿ ಬಳಸಿಕೊಳ್ಳಲು ಆ ಪಕ್ಷದ ಮುಖಂಡರು ಯೋಚಿಸಿದ್ದರು ಎನ್ನಲಾಗಿದೆ. ಆದರೆ ಅವರು ನಿರಾಸಕ್ತಿ ತೋರಿಸಿದಾಗ ಪ್ರಮೋದದೇವಿ ಅವರನ್ನು ಅಭ್ಯರ್ಥಿಯನ್ನಾಗಿಸುವ ಯೋಚನೆ ಮಾಡಿದ್ದಿರಬಹುದು.
ಒಂದು ಕುಟುಂಬದ ಪ್ರಮುಖ ವ್ಯಕ್ತಿ ಪದೇಪದೇ ತನಗೆ ರಾಜಕೀಯದಲ್ಲಿ ಆಸಕ್ತಿ ಇಲ್ಲ, ಬಿಜೆಪಿ ಅಧ್ಯಕ್ಷರು ಭೇಟಿ ಮಾಡುತ್ತಾರೆ ಎಂಬ ವಿಷಯವೇ ಗೊತ್ತಿಲ್ಲ ಎಂದಾಗ ಶಾಗೆ ಮುಜುಗರ ಉಂಟಾಗಿರಬಹುದಾದರೂ ತೋರ್ಪಡಿಸಿಕೊಳ್ಳದೇ ಹೋಗಿ ಭೇಟಿಯಾಗಿದ್ದಾರೆ. ಇದು ಒಂದೆಡೆ ಇವರ ಪಕ್ಷ ಗೆಲ್ಲಿಸುವ ತಂತ್ರಗಾರಿಕೆ ತೋರಿಸುತ್ತದೆ. ಮತ್ತೊಂದೆಡೆ ಅತ್ತೂ ಕರೆದು ಔತಣಕ್ಕೆ ಹೇಳಿಸಿಕೊಂಡವರ ಸ್ಥಿತಿಯಂತಾಗಿದೆ.