ನಿನ್ನೆ ರಾತ್ರಿ ಗೆಳೆಯರೊಬ್ಬರು ಕರೆ ಮಾಡಿದ್ದರು. “ಏಕೆ ಮಾರಾಯ, ಕಾಸರಗೋಡು ಹಿಂದೆ ಬಿದ್ದಿದ್ದೀಯಾ, ದಿನಾ ಫೇಸ್ಬುಕ್ ಪೋಸ್ಟ್ ಹಾಕ್ತಿದ್ದೀಯ, ಬ್ಲಾಗಿಂಗ್ ಮಾಡ್ತಿದ್ದೀಯ, ನಿನ್ನ ಎನರ್ಜಿ ಏಕೆ ವೇಸ್ಟ್ ಮಾಡ್ಕೋತೀಯ, ಅದೆಲ್ಲ ಮುಗಿದ ಕಥೆ” ಎಂದರು. ಬಹಳಷ್ಟು ಮಂದಿಗೆ ಇಂಥ ಭಾವನೆ ಇದೆ. ಜನಸಾಮಾನ್ಯರಿರಲಿ ಈ ಮಹಾನಾಡಿನ ಮುಖ್ಯಮಂತ್ರಿಗಳಾಗಿದ್ದ ಇಬ್ಬರು “ಕಾಸರಗೋಡಿನದು ಮುಗಿದ ವಿಚಾರ ಎಂದಿದ್ದರಂತೆ.
ಒಂದು ಭಾಷೆ ಎಂದರೆ ಅಗಾಧ ಸ್ಮೃತಿ ಅಡಕವಾಗಿರುತ್ತದೆ. ಸಂಸ್ಕೃತಿ ಬೆಳೆದು ಬಂದಿರುತ್ತದೆ. ಅದು ನೀಡಿದ ಗುರುತು ಮಾಸದೇ ಉಳಿಯುತ್ತದೆ. ಪೀಳಿಗೆಯಿಂದ ಪೀಳಿಗೆಗೆ ತನ್ನ ಕಸುವು ಹೆಚ್ಚಿಸಿಕೊಳ್ಳುತ್ತಾ ಸಾಗುವ ಜನಸಮುದಾಯದ ಮೇಲೆ ಅನ್ಯ ಸಂಸ್ಕೃತಿ, ಭಾಷೆ ದಾಳಿ ಮಾಡಿದಾಗ ಆಕ್ರಮಣಕ್ಕೀಡಾದ ಪ್ರಾಂತ್ಯದಲ್ಲಿ ಸ್ಥಳೀಯ ಭಾಷೆ ಸೊರಗುತ್ತಾ ಹೋಗುತ್ತದೆ. ರಾಜಕೀಯ ಉದ್ದೇಶಗಳಿದ್ದರಂತೂ ಭಾಷೆಯ ಮೂಲಕ ಉಳಿಯುತ್ತಾ ಬಂದ ಮೌಖಿಕ ನೆನಪುಗಳು ಮಾಸುತ್ತಾ ಹೋಗುತ್ತವೆ.
ನಮ್ಮ ಭಾಷೆ ನಮಗೆ ಹೊರ ಜಗತ್ತನ್ನು ತೋರಿಸುತ್ತದೆ. ಅಕ್ಷರದ ಅರಿವನ್ನು ಬಿತ್ತುತ್ತದೆ. ವಿಚಾರ ಮಾಡುವುದನ್ನು ಕಲಿಸುತ್ತದೆ. ಕಾವ್ಯ ಕಟ್ಟಲು ಪ್ರಚೋದಿಸುತ್ತದೆ. ಜನಸಂಸ್ಕೃತಿಗೆ ಕಾರಣವಾಗುತ್ತದೆ. ಇಂಥ ಭಾಷೆಯ ಪ್ರದೇಶವನ್ನು ಅನ್ಯಭಾಷೆಯೊಂದು ಆಕ್ರಮಿಸಿಕೊಂಡಾಗ ಹಾನಿಯ ಸರಣಿ ಬೆಳೆಯುತ್ತಾ ಹೋಗುತ್ತದೆ.
ಇಂಥ ಆಕ್ರಮಣಶೀಲತೆ ವಿರುದ್ಧ ಹೋರಾಡಬೇಕು. ಹೀಗೆಂದರೆ ಆಯುಧಗಳನ್ನು ಹಿಡಿದು ಹೋರಾಡುವುದಲ್ಲ. ಭಾಷೆ ಮೂಲಕವೇ, ಭಾಷಾ ರಾಜಕೀಯದ ಮೂಲಕ ಉತ್ತರಗಳನ್ನು ಕೊಡಲು ಸಾಧ್ಯವಾಗುತ್ತದೆ. ನಿಮಗೊಂದು ಉದಾಹರಣೆ ಕೊಡುತ್ತೇನೆ. ನಮ್ಮ ಆಫೀಸಿಗೆ ಎಸಿ ಅಳವಡಿಸಿದೆವು. ಇದಕ್ಕಾಗಿ ಬಂದವರಿಬ್ಬರೂ ಹಿಂದಿ ಮಾತೃಭಾಷಿಕರು. ಅವರೊಂದಿಗೆ ಮಾತನಾಡಬೇಕಲ್ಲ. ಕನ್ನಡದಲ್ಲಿ ಮಾತನಾಡತೊಡಗಿದೆ. ಅದಕ್ಕವರು ಹಿಂದಿಯಲ್ಲಿ ಮಾತನಾಡಿ, ಹಿಂದಿ ರಾಷ್ಟ್ರಭಾಷೆ ನಿಮಗೆ ಬರೋದಿಲ್ವ ಎಂದರು. ಬೆಂಗಳೂರಿಗೆ ಬಂದು ಎಷ್ಟು ವರ್ಷವಾಯಿತು ಎಂದೆ. ” ಎಂಟು ವರ್ಷವಾಯಿತು, ಎಲ್ರೂ ಹಿಂದಿಯಲ್ಲಿ ಮಾತನಾಡ್ತಾರೆ. ನೀವೂ ಮಾತನಾಡಿ” ಎಂದರು.
ಅವರ ಮಾತು ಕೇಳಿ ಮಾನಸಿಕವಾಗಿ ಅಕ್ಷರಶಃ ಆಘಾತವಾಯ್ತು. ಇಲ್ಲಿ ಬಂದು ನೆಲಸಿ ಎಂಟು ವರ್ಷವಾಗಿದೆ. ಸ್ಥಳೀಯರನ್ನೇ ನೀವು ಹಿಂದಿಯಲ್ಲಿ ಮಾತನಾಡಿ, ಹಿಂದಿ ರಾಷ್ಟ್ರಭಾಷೆ ಎನ್ನುವ ಧೈರ್ಯ ಬರಬೇಕಾದರೆ ಕನ್ನಡಿಗರ ಸೌಮ್ಯತೆ, ಸೌಹಾರ್ದತೆ ಮುಳುವಾಗುವಷ್ಟು, ಮುಳುಗಿ ಹೋಗುವಷ್ಟು ಇದೆ.
ಅನ್ನ ದೊರೆಯುವ ಜಾಗಕ್ಕೆ ಜನ ಉದ್ಯೋಗ ಅರಸಿ ಹೋಗುವುದು ಸಹಜ. ಹಾಗೆ ಹೋದವರು, ಬಂದವರು ಸ್ಥಳೀಯ ಭಾಷೆ, ಸಂಸ್ಕೃತಿ ಗೌರವಿಸಬೇಕು. ಆದರೆ ಆಗುತ್ತಿರುವುದೇನು, ಅನ್ಯ ಭಾಷಾ ಆಕ್ರಮಣಶೀಲತೆ. ಬೆಂಗಳೂರಿನಲ್ಲಿ ಉತ್ತರ ಭಾರತ ಸಂಸ್ಕೃತಿ, ಅದರ ಭಾಷೆ ಹೇಗೆಲ್ಲ ಕೆಟ್ಟ ಪ್ರಭಾವ ಬೀರಿದೆ ಎಂದು ನಿಮಗೆಲ್ಲ ಗೊತ್ತು.
ವಿಚಾರ ಹೀಗಿರುವಾಗ ಸಾವಿರಾರು ವರ್ಷಗಳಿಂದ ಬಂದ ಜನಸಂಸ್ಕೃತಿ, ಅದರ ಪಸರಿಸುವಿಕೆಗೆ ಕಾರಣವಾದ ಭಾಷೆ ಮೇಲೆ ಅನ್ಯರು ಆಕ್ರಮಣ ಮಾಡಿದಾಗ ರೋಷ ಮೂಡದಿದ್ದರೆ ಉಳಿಗಾಲವೇಗೆ ? ಅಸ್ತಿತ್ವ ಉಳಿಸಿಕೊಳ್ಳಲು ಸಾಧ್ಯವೇ ?
ಮೈಸೂರು ಸಮೀಪದ ವಯನಾಡು, ಮಂಗಳೂರು ಸನಿಹದ ಕಾಸರಗೋಡನ್ನು ಕೇರಳಕ್ಕೆ ಸೇರ್ಪಡೆ ಮಾಡುವಾಗ ಅಧಿಕಾರದಲ್ಲಿದ್ದ ರಾಜಕಾರಣಿಗಳಿಗೆ ಭಾಷೆಯ ಅಸ್ಮಿತೆ ನೆನಪಾಗಲಿಲ್ಲವೇ. ಹಿರಿಯರು ಕಟ್ಟಿದ್ದ ನಾಡನ್ನು ಉಳಿಸಿಕೊಳ್ಳಬೇಕು ಎಂಬ ಛಲ ಮೂಡಲಿಲ್ಲವೇ ? ಅಧಿಕಾರಕ್ಕಾಗಿ ಪ್ರತಿಭಟಿಸದೇ ಸುಮ್ಮನಾದರೆ ? ಇವೆಲ್ಲ ಸಂಗತಿಗಳು ಕಾಡುತ್ತವೆ.
ಬೆಂಗಳೂರು ಸಮೀಪದ ಹೊಸೂರು, ಅದರ ಸುತ್ತಲಿನ ಹಲವು ಗ್ರಾಮಗಳು, ಆದವಾನಿ ಸಮೀಪದ ಮಂತ್ರಾಲಯದವರೆಗಿನ ಪ್ರದೇಶ, ಮೈಸೂರು ದಾಟಿದರೆ ಸಿಗುವ ವಯನಾಡು, ಉದಕ ಮಂಡಲ (ಊಟಿ), ಇತ್ತ ಕಾಸರಗೋಡನ್ನು ಅನ್ಯ ರಾಜ್ಯಗಳಿಗೆ ಸೇರಿಸುವ ಮುನ್ನ ಗೆಜೆಟ್ ನೋಟಿಫೀಕೇಷನ್ ಹೊರಡಿಸುತ್ತಾರೆ. ಆಕ್ಷೇಪಣೆ ಇದ್ದರೆ ಹೇಳಲು ಆಹ್ವಾನಿಸಲಾಗುತ್ತದೆ. 1956 ರಲ್ಲಿ ಕರ್ನಾಟಕದಲ್ಲಿ ಅಧಿಕಾರ ಹಿಡಿದಿದ್ದವರು ಏಕೆ ಆಕ್ಷೇಪಣೆ ಸಲ್ಲಿಸಲಿಲ್ಲ. ಎಂಥಾ ಅನ್ಯಾಯ ಆಗಲು ಕಾರಣರಾದರು ಎನಿಸಿದೆ.
ಅವರು ಸುಮ್ಮನಾದರು. ನಾವು ಏಕೆ ಸುಮ್ಮನಿರಬೇಕು, ಇನ್ನೆಷ್ಟು ದಿನ ನಮ್ಮ ಸೌಮ್ಯತೆ, ಸೌಹಾರ್ದತೆ ಇರಬೇಕು. ಇದು ನಮ್ಮ ಅಸ್ತಿತ್ವಕ್ಕೆ ಸಂಚಕಾರ ತರುತ್ತಿದೆ ಅಲ್ಲವೇ ?
ಚಿತ್ರ: ಬಹು ಕಡಿದಾದ ಬ್ರಹ್ಮಗಿರಿ ಶಿಖರದ ನೆತ್ತಿ ಏರಲು ಚಾರಣ ಮಾಡುವ ಹಾದಿಯಲ್ಲಿ ಕಂಡ ಟೊಪ್ಪಿ ಹಾಕಿಸಿಕೊಂಡಂತೆ ಕಾಣುವ ಮರ. ಕನ್ನಡಿಗರ ಸ್ಥಿತಿಯೂ ಹೀಗೆ ಆಗಿದೆ ಅಲ್ಲವೇ ?