ಲೇಖಕ: ಕುಮಾರ ರೈತ

ಕರ್ನಾಟಕದಲ್ಲಿ ಕಳೆದ ಒಂದು ವರ್ಷದಿಂದ ಜಾತಿಗಣತಿ ಕುರಿತ ಚರ್ಚೆ ತೀವ್ರ ಚಾಲ್ತಿಯಲ್ಲಿದೆ. ಪರ – ವಿರೋಧ ವಾದಗಳಿವೆ. ಇದೇನೇ ಇದ್ದರೂ ಜಾತಿಗಣತಿ ಅನೇಕ ಕಾರಣಗಳಿಗೆ ಮಹತ್ವ ಪಡೆಯುತ್ತದೆ. ಸಾಮಾಜಿಕ – ಆರ್ಥಿಕ – ರಾಜಕೀಯ ನೀತಿಗಳು ಮತ್ತು ಮೀಸಲಾತಿಯ ಮರು ವಿಂಗಡಣೆ ನಿರ್ಧರಿಸಲು ಸಹಾಯಕ.
ಜಾತಿಗಣತಿ ಮೂಲಕ ಇದುವರೆಗೂ ಬೇರೆಬೇರೆ ಕಾರಣಗಳಿಂದ ನಿರ್ಲಕ್ಷ್ಯಕ್ಕೆ ಒಳಗಾದ ಜಾತಿಗಳಿಗೂ ಸೂಕ್ತ ಪ್ರಾತಿನಿಧ್ಯ ದೊರೆಯುವ ಸಾಧ್ಯತೆ ಇರುತ್ತದೆ. ಮುಖ್ಯವಾಗಿ ಯಾವ ಜಾತಿ ಹೆಚ್ಚು ಸಂಖ್ಯೆಯಲ್ಲಿದೆ. ಯಾವ ಜಾತಿ ಕಡಿಮೆ ಸಂಖ್ಯೆಯಲ್ಲಿದೆ. ಐತಿಹಾಸಿಕವಾಗಿ ಸಾಮಾಜಿಕ ಪ್ರಾಬಲ್ಯ ಹೊಂದಿರುವ ಜಾತಿಗಳೇ ಹೆಚ್ಚು ಸಂಖ್ಯೆಯಲ್ಲಿವೆಯೇ ಅಥವಾ ಇಲ್ಲವೇ ಎಂಬುದು ನಿಖರವಾಗಿ ತಿಳಿಯುತ್ತದೆ.
ಜಾತಿಗಣತಿಯಿಂದ ಹೊಮ್ಮಿದ ಫಲಿತಾಂಶದ ಮೇಲೆ ಇದುವರೆಗೂ ಇರುವ ನೀತಿಗಳ ವೈಜ್ಞಾನಿಕ ಪುರ್ನವಿಮರ್ಶೆ ಸಾಧ್ಯವಾಗುತ್ತದೆ. ಅತೀ ಹಿಂದುಳಿದ ಜಾತಿಗಳಿಗೆ ನ್ಯಾಯದ ಭರವಸೆ ದೊರೆಯುತ್ತದೆ. ಇಷ್ಟೆಲ್ಲ ಮಹತ್ವ – ಪ್ರಯೋಜನಗಳನ್ನು ಜಾತಿಗಣತಿ ಹೊಂದಿದೆ. ಆದರೆ ನಮ್ಮೆದುರಿಗೆ ಇರುವ ದೊಡ್ಡ ಪ್ರಶ್ನೆ ಕರ್ನಾಟಕದಲ್ಲಿ ನಡೆದಿರುವುದು ಜಾತಿಗಣತಿಯೋ ಅಥವಾ ಸಮೀಕ್ಷೆಯೋ ಎಂಬುದಾಗಿದೆ.
ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ. ಜಯಪ್ರಕಾಶ್ ಹೆಗ್ಡೆ ಅವರು ಫೆಬ್ರವರಿ 29, 2024 ರಂದು ವರದಿ ಸಲ್ಲಿಸಿದ್ದರು. ಏಪ್ರಿಲ್ 11, 2025ರಂದು ಇವರು ಸಲ್ಲಿಸಿದ್ದ “ಸಾಮಾಜಿಕ-ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ”( Socio-Economic and Educational Survey), ಕರ್ನಾಟಕ ಸರ್ಕಾರದ ಸಚಿವ ಸಂಪುಟದ ಮುಂದೆ ಮಂಡನೆಯಾಗಿದೆ. ಇದರ ವಿಸ್ತೃತ ಚರ್ಚೆ ಏಪ್ರಿಲ್ 17, 2025ರಂದು ಸಂಪುಟದಲ್ಲಿ ನಡೆಯಲಿದೆ. ಅಂದು ಪ್ರತಿಯೊಬ್ಬ ಸಚಿವರು ತಮ್ಮತಮ್ಮ ಅಭಿಪ್ರಾಯಗಳನ್ನು ಮಂಡಿಸುತ್ತಾರೆ.
ಮುಖ್ಯವಾಗಿ ಕೈಗೊಂಡ ಕಾರ್ಯದ ವರದಿಯೇ “ಸಾಮಾಜಿಕ-ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ”( Socio-Economic and Educational Survey) ಎಂದಿರುವುದು ಗಮನಾರ್ಹ. ಆದರೂ ಇದನ್ನು ಜಾತಿಗಣತಿ ಎಂದೇ ಕರೆಯಲಾಗುತ್ತಿದೆ.
ಜಾತಿಗಣತಿಯು ಜನಗಣತಿಯಲ್ಲ ಎಂಬುದು ಸರಿ ಇದ್ದರೂ ಜಾತಿಗಣತಿ ನಡೆದಾಗ ಕರ್ನಾಟಕದ ಜನಸಂಖ್ಯೆಯ ಲೆಕ್ಕವೂ ದೊರೆಯುತ್ತದೆ ಅಲ್ಲವೇ ? ಜಾತಿಗಣತಿ ಉದ್ದೇಶವೇ ಯಾವ ಜಾತಿ ಎಷ್ಟು ಸಂಖ್ಯೆಯಲ್ಲಿದೆ ಎಂಬುದನ್ನು ನಿಖರವಾಗಿ ತಿಳಿಯುವುದೇ ಆಗಿರುತ್ತದೆ.
ಕರ್ನಾಟಕದಲ್ಲಿ ಆಗಿರುವ “ಸಾಮಾಜಿಕ ಹಾಗೂ ಆರ್ಥಿಕ ಸಮೀಕ್ಷೆ” ( Socio-Economic and Educational Survey) ಸಮೀಕ್ಷೆಯು ಜನಗಣತಿಗಿಂತ ಭಿನ್ನ. ಏಕೆಂದರೆ ಇದನ್ನು ಕರ್ನಾಟಕ ರಾಜ್ಯ ಸರ್ಕಾರ ಸ್ವತಂತ್ರವಾಗಿ ನಡೆಸಿದೆ. ಪೂರ್ಣ ಜನಸಂಖ್ಯಾ ಎಣಿಕೆಗಿಂತ ನಿರ್ದಿಷ್ಟ ಸಾಮಾಜಿಕ-ಆರ್ಥಿಕ ಮತ್ತು ಶೈಕ್ಷಣಿಕ ಅಂಶಗಳ ಮೇಲೆ ಮೇಲೆ ಕೇಂದ್ರೀಕೃತವಾಗಿದೆ. ಉದಾಹರಣೆಗೆ ಹೇಳುವುದಾದರೆ ಸಮೀಕ್ಷೆಯು ಕರ್ನಾಟಕದ ಜನಸಂಖ್ಯೆಯ ಶೇಕಡ 94.17 ಅನ್ನು ಒಳಗೊಂಡಿದೆ (6.35 ಕೋಟಿಯಲ್ಲಿ 5.98 ಕೋಟಿ), ಅಂದರೆ ಸಮೀಕ್ಷೆಯು ಶೇಕಡ 5.83 (ಸರಿಸುಮಾರು 37 ಲಕ್ಷ ಜನರು) ಅನ್ನು ಬಿಟ್ಟಿದೆ. ಇದನ್ನು ಔಪಚಾರಿಕ ಜನಗಣತಿಗೆ ಹೋಲಿಸಿದರೆ ಗಮನಾರ್ಹ ಅಂತರವಾಗಿದೆ. ಈ ಅಪೂರ್ಣತೆ ಮತ್ತು ಜಾತಿ ಆಧಾರಿತ ದತ್ತಾಂಶದ ಮೇಲಿನ ಗಮನವು ಇದು ಗಣತಿಯಲ್ಲ, ಸಮೀಕ್ಷೆಯಾಗಿದೆ ಎಂಬುದನ್ನು ನಿರ್ದಿಷ್ಟವಾಗಿ ಸೂಚಿಸುತ್ತದೆ.
ವೈಜ್ಞಾನಿಕವಾಗಿ ಒಂದು ನಿರ್ದಿಷ್ಟ ಪ್ರದೇಶದಲ್ಲಿ ಜಾತಿಗಣತಿ ನಡೆದಾಗ ಅಲ್ಲಿರುವ ಪ್ರತಿಯೋರ್ವ ಖಾಯಂ ನಿವಾಸಿಯ ವಿವರಗಳು ದಾಖಲಾಗಬೇಕು. ವ್ಯಕ್ತಿಯ ಲಿಂಗ, ಧರ್ಮ, ಜಾತಿ, ವಿದ್ಯಾರ್ಥಿಯೇ, ಫಧವಿಧರರೇ, ಸ್ನಾತಕೋತ್ತರ ಪದವೀಧರರೇ, ಯಾವ ವಿಭಾಗದಲ್ಲಿ ಪದವಿ ಪಡೆದಿದ್ದಾರೆ. ಉದ್ಯೋಗಿಯೇ, ಸಾಮಾಜಿಕ – ಆರ್ಥಿಕ – ರಾಜಕೀಯ ಸ್ಥಾನಮಾನಗಳೇನು ?, ವಾರ್ಷಿಕ ವರಮಾನವೇನು ? ತೆರಿಗೆದಾರರೇ ಅಲ್ಲವೇ ಇತ್ಯಾದಿ ಪ್ರತಿಯೊಂದು ಅಂಶವೂ ದಾಖಲಾಗಬೇಕು
ಸಮೀಕ್ಷೆಯು ಮನೆಮನೆಗಳಿಗೂ ತೆರಳಿ ಗಣತಿ ಕಾರ್ಯ ನಡೆಸುವುದಿಲ್ಲ. ಇದು ಮಾದರಿ ದತ್ತಾಂಶ ಸಂಗ್ರಹಣಾ ವಿಧಾನ. ಪ್ರಾತಿನಿಧಿಕ ಮಾದರಿ ಅವಲಂಬಿಸಿರುತ್ತದೆ. ಇಲ್ಲಿ ಕರಾರುವಾಕ್ಕಾದ ಅಂಕಿಅಂಶ ಇರುತ್ತದೆ ಎಂದು ಹೇಳಲು ಸಾಧ್ಯವಾಗುವುದಿಲ್ಲ. ಏಕೆಂದರೆ ಸಮೀಕ್ಷೆಯು ಒಂದು ಪ್ರದೇಶದ ಸಮಗ್ರ ಜನಸಂಖ್ಯೆ ಒಳಗೊಂಡಿರುವುದಿಲ್ಲ.
ಸಮಗ್ರವಾಗಿ ಜಾತಿಗಣತಿ ನಡೆದಾಗ ಹೆಚ್ಚು ನಿಖರ ಮತ್ತು ವಿವರವಾದ ಡೇಟಾವನ್ನು ಪಡೆಯಬಹುದು. ಆದರೆ ಈ ಮಾದರಿ ಕಾರ್ಯಕ್ಕಾಗಿ ಹೆಚ್ಚು ಹಣಕಾಸು ಮತ್ತು ಸಮಯ ಬೇಕಾಗುತ್ತದೆ. ಸಮೀಕ್ಷೆಗೂ ಹೆಚ್ಚಿನ ಹಣಕಾಸು ಅಗತ್ಯವಿದ್ದರೂ ಸಮಗ್ರ ಜಾತಿಗಣತಿಗೆ ಹೋಲಿಸಿದಾಗ ಕಡಿಮೆ ವೆಚ್ಚವಾಗುತ್ತದೆ.
ಸಂಕ್ಷಿಪ್ತವಾಗಿ ಹೇಳುವುದಾದರೆ ಸಮಗ್ರವಾದ ಜಾತಿಗಣತಿಯು ಗೊಂದಲಗಳಿಗೆ ಆಸ್ಪದವಿಲ್ಲದ ಸಮಗ್ರ ಅಂಕಿಅಂಶ ನೀಡುತ್ತದೆ. ಆದರೆ ಸಮೀಕ್ಷೆಯು ಉದ್ದೇಶಿತ ಮಾಹಿತಿಯನ್ನು ಸಂಗ್ರಹಿಸಲು ಮಾದರಿ ಆಧಾರಿತ ವಿಧಾನವಾಗಿದೆ. ಎರಡೂ ಅಮೂಲ್ಯವಾದ ವಿಧಾನಗಳಾಗಿದ್ದರೂ ನಿಖರತೆ ದೃಷ್ಟಿಯಿಂದ ಸಮಗ್ರ ಜಾತಿಗಣತಿಯೇ ಸೂಕ್ತ.
ಏಪ್ರಿಲ್ 17, 2025ರಂದು ಕರ್ನಾಟಕದ ಸಚಿವ ಸಂಪುಟದಲ್ಲಿ “ಸಾಮಾಜಿಕ-ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ”( Socio-Economic and Educational Survey) ಬಗ್ಗೆ ಚರ್ಚೆಯಾಗಲಿದೆ.ಈಗಾಗಲೇ ವರದಿಯ ಮಾಹಿತಿಗಳು ಸೋರಿಕೆಯಾಗಿವೆ. ಇದು ಉದ್ದೇಶಪೂರ್ವಕವಾಗಿ ಆಗಿರಬಹುದು ಅಥವಾ ಆಗದೇಯೂ ಇರಬಹುದು. ಸಮಾಜದ ಒಟ್ಟಾರೆ ಅಭಿಪ್ರಾಯವನ್ನು ತಿಳಿಯುವ ಸಲುವಾಗಿಯೂ ಕೆಲವೊಮ್ಮೆ ವರದಿಗಳ ಸೋರಿಕೆಯಾಗುತ್ತದೆ.
ಕರ್ನಾಟಕದಲ್ಲಿ “ಸಾಮಾಜಿಕ-ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ” ಬಗ್ಗ ತೀವ್ರವಾದ ಪರ – ವಿರೋಧ ಅಭಿಪ್ರಾಯಗಳಿವೆ. ಸಚಿವ ಸಂಪುಟದ ಎಲ್ಲರಿಗೂ ಒಪ್ಪಿತವಾದಂತೆ ಕಾಣುವುದಿಲ್ಲ. ವಿರೋಧ ಪಕ್ಷಗಳಿಂದ, ಧಾರ್ಮಿಕ ವ್ಯಕ್ತಿಗಳಿಂದ ಭಿನ್ನಾಭಿಪ್ರಾಯ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ “ಸಮಗ್ರ ಜಾತಿಗಣತಿ”ಗೆ ಮುಂದಾಗುವುದು ಸೂಕ್ತ.

Similar Posts

1 Comment

  1. ಒಂದು ದೇಶ ಅಭಿವೃದ್ಧಿ ಪಥದಲ್ಲಿ ಸಾಗ ಬೇಕಾದರೆ ಹಲವು ಅಂಶಗಳನ್ನು ಗಣನೆಗೆ ತೆಗೆದು ಕೊಳ್ಳ ಬೇಕಾಗುತ್ತದೆ. ಅದರಲ್ಲಿಯೂ ಮುಖ್ಯವಾಗಿ ಸಾಮಾಜಿಕ ಮತ್ತು ಶೈಕ್ಷಣಿಕ ಪರೀಸ್ಥಿತಿಯ ವಿಚಾರದಲ್ಲಿ ಯಾವ ಅಂಶ ತೆಗೆದು ಕೊಂಡರೆ ಸೂಕ್ತ ಪರಿಹಾರಗಳನ್ನು ಒದಗಿಸ ಬಹುದು ಎಂಬುದು ಮುಖ್ಯವಾದ ವಿಚಾರ.
    ಈಗ ಜಾತಿಗಣತಿಯ ಮೂಲಕ ಸರ್ಕಾರ ಪರಿಹಾರ ಕಂಡುಕೊಳ್ಳಲು ಹೋಗಿ, ಪ್ರಜೆಗಳ ಕೈಲಿ ಕೋಲು ಕೊಟ್ಟು ಹೊಡೆಸಿಕೊಳ್ಳುವ ಪರಿಸ್ಥಿತಿ ಎದುರಾಗಿದೆ.
    ಒಬ್ಬ ಪ್ರಜೆಯ ಸಮಸ್ಯೆಯ ಪರಿಹಾರ ಜಾತಿ ಮೂಲಕ ಕಂಡು ಕೊಳ್ಳುವುದು ಪ್ರಾಮಾಣಿಕತೆಯ ಲಕ್ಷಣವಲ್ಲ. ಇಂದಿನ ರಾಜಕೀಯ ಪಕ್ಷಗಳು ವೋಟ್ ಬ್ಯಾಂಕ್ ದೃಷ್ಟಿಯಿಂದ ಜಾತಿಯನ್ನು ಮುನ್ನಲೆಗೆ ತಂದು ಕೋಮು ಕೋಮುಗಳ ನಡುವೆ ವೈಮನಸ್ಯ ಬೆಳೆಸಲು ಕಾರಣವಾಗುತ್ತಿದ್ದಾರೆ.
    ಈ ಸಮಸ್ಯೆಗೆ ಪರಿಹಾರ ಖಂಡಿತ ಜಾತಿ ಗಣತಿಯಿಂದ ಸಿಗುವುದಿಲ್ಲ. ಅದರ ಬದಲು ಒಬ್ಬ ವ್ಯಕ್ತಿಯ ಆಯಾ ವರುಷದ ಆರ್ಥಿಕ ಪರಿಸ್ಥಿತಿ, ವ್ಯಕ್ತಿಯ ಆಸ್ತಿ ಮತ್ತು ಸಂಪತ್ತು, ಮುಂತಾದವುಗಳನ್ನು ಗಣನೆಗೆ ತೆಗೆದು ಕೊಂಡು ವ್ಯಕ್ತಿಯ ಮಟ್ಟದಲ್ಲಿ ವಿಂಗಡಿಸಿ ಸೂಕ್ತ ಸೌಲಭ್ಯಗಳನ್ನು ಒದಗಿಸಿದಲ್ಲಿ ಮಾತ್ರ ಯಾವುದೇ ವೈಮನಸ್ಯ, ವೈಶಾಮ್ಯಗಳಿಲ್ಲದೆ ನೆರವೇರುತ್ತದೆ. ಈ ವಿಚಾರದಲ್ಲಿ ನಮ್ಮ ಇಂದಿನ ರಾಜಕಾರಿಣಿಗಳು ಬಹಳ ಹಿಂದೆ ಇದ್ದು ಅವರ ವಿಚಾರಧಾರೆಗಳು ಕೀಳುಮಟ್ಟದ ಲ್ಲಿ ಇದೆ. ಜಾತಿ ಗಾನತಿಯಿಂದ ಯಾವುದೇ ಸಮಸ್ಯೆ ಪರಿಹರಿಸಲು ಸಾಧ್ಯವಿಲ್ಲ. ಅದರ ಬದಲು ಇಂದಿನ ಕಂಪ್ಯೂಟರ್ ಯುಗದಲ್ಲಿ ವ್ಯಕ್ತಿಯ ಮಟ್ಟದಲ್ಲಿ ದತ್ತಾಂಶಗಳನ್ನು ಸಂಗ್ರಹಿಸಿ, ಸೂಕ್ತ ವ್ಯಕ್ತಿಗೆ ಸರ್ಕಾರದ ಸೌಲಭ್ಯ ಒದಗಿಸುವುದು ಸತ್ಯವೂ ಮತ್ತು ಪ್ರಾಮಾಣಿಕತೆಯಿಂದ ಲೂ ಕೂಡಿರುತ್ತದೆ.ವ್ಯಕ್ತಿಯ ಜಾತಿಎನ್ನು ಮಾನದಂಡವಾಗಿ ಪರಿಗಣಿಸಿ, ವೋಟ್ ಬ್ಯಾಂಕ್ ರಾಜಕೀಯ ಮಾಡುವುದನ್ನು ಮೊದಲು ರಾಜಕಾರಿಣಿಗಳು ಬಿಡ ಬೇಕು.

Leave a Reply

Your email address will not be published. Required fields are marked *