ಉಪ್ಪು ತಿಂದವರು ನೀರು ಕುಡಿಯಬೇಕು ಎಂಬುದು ಹಳೆಯ ಗಾದೆ. ಆದರೆ ಉಪ್ಪು ತಿನ್ನದವರಿಗೂ “ನೀರು” ಕುಡಿಸಬೇಕು ಎನ್ನುವುದು ಇಂದಿನ ರಾಜಕೀಯ ಗಾದೆ. ಇದರಂತೆ ಕರ್ನಾಟಕ – ರಾಜ್ಯದಲ್ಲಿ ಬಿಜೆಪಿ ಮತ್ತು ಜೆಡಿಎಸ್ ರಾಜಕಾರಣ ನಡೆಯುತ್ತಿದೆ. ಇಲ್ಲಿ ಪಕ್ಷ ರಾಜಕಾರಣ ಜೊತೆಗೆ ವ್ಯಕ್ತಿಗತ ದ್ವೇಷವೂ ಸಮ್ಮಿಶ್ರವಾದಂತೆ ಕಾಣುತ್ತದೆ.

ಇತ್ತೀಚಿನ ವರ್ಷಗಳಲ್ಲಿ ಈ ಥರದ ರಾಜಕಾರಣ ಮತ್ತು ಪ್ರತಿ ರಾಜಕಾರಣ ಸಾಮಾನ್ಯ ಎನ್ನುವ ಹಾಗೆ ಆಗಿದೆ. ಆದರೆ ಸ್ವ ಪಕ್ಷಿಯರು ಸಹ ರಾಜಿನಾಮೆ ಬಯಸುವುದು ಅಚ್ಚರಿ ಮೂಡಿಸುತ್ತದೆ !! “ನೈತಿಕ ನೆಲೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮುಜುಗರ ಆಗುವುದನ್ನು ತಪ್ಪಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜಿನಾಮೆ ನೀಡಬೇಕು. ತನಿಖೆ ಎದುರಿಸಿ ನಿಷ್ಕಂಳಕಿರಾಗಿ ಮತ್ತೆ ಅಧಿಕಾರ ಗದ್ದುಗೆಯೇರಬೇಕು” ಎಂಬ ಅಭಿಪ್ರಾಯವನ್ನು ಹಿರಿಯ ಕಾಂಗ್ರೆಸಿಗ, ವಿಧಾನಸಭೆಯ ಮಾಜಿ ಸಭಾಧ್ಯಕ್ಷ ಕೆ.ಬಿ. ಕೋಳಿವಾಡ್ ವ್ಯಕ್ತಪಡಿಸಿದ್ದಾರೆ.

ಈ ಅಭಿಪ್ರಾಯ ವ್ಯಕ್ತಪಡಿಸಿದ ಸಂದರ್ಭದಲ್ಲಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಗ್ಗೆ ಒಳ್ಳೆಯ ಮಾತುಗಳನ್ನೇ ಆಡಿದ್ದಾರೆ. ಈಗ ಸದ್ಯದಲ್ಲಿಯೇ ಉತ್ತರದಲ್ಲಿ ಮೂರು ರಾಜ್ಯಗಳ ಚುನಾವಣೆ ನಡೆಯಲಿದೆ. ಹರಿಯಾಣದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಚುನಾವಣಾ ಸಭೆ ಉದ್ದೇಶಿಸಿ ಮಾತನಾಡುತ್ತಾ ಮುಡಾ ಪ್ರಕರಣವನ್ನು ಹಗರಣ ಎಂಬಂತೆ ಬಿಂಬಿಸಿ ಮಾತನಾಡಿದ್ದಾರೆ. ಇದು ಕೆ.ಬಿ. ಕೋಳಿವಾಡ್ ಅವರ ಆತಂಕ್ಕೆ ಕಾರಣ. ಆದರೆ ಅವರು ಮೋದಿ ಅವರಿಗೆ ರಾಜಕೀಯ ತಿರುಗೇಟು ನೀಡುವುದರ ಬದಲು ಸ್ವ ಪಕ್ಷದ ವ್ಯಕ್ತಿಯೇ ರಾಜಿನಾಮೆ ನೀಡಬೇಕೆಂದು ಹೇಳುವುದು ಎಷ್ಟು ಸರಿ ? ಒಂದು ವೇಳೆ ಸಿದ್ದರಾಮಯ್ಯ ಅವರು ರಾಜಿನಾಮೆ ನೀಡಿದರೆ “ಬಿಜೆಪಿ ರೊಟ್ಟಿ ಜಾರಿ ತುಪ್ಪದಲ್ಲಿ ಬಿದ್ದಂತೆ” ಆಗುವುದಿಲ್ಲವೇ ?

ಬಿಜೆಪಿಯ ಕೇರಳ ಘಟಕದ ಮುಖಂಡ, ಮಾಜಿ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಅವರು ಸಿದ್ದರಾಮಯ್ಯ ಅವರ ರಾಜಿನಾಮೆಗೆ ಆಗ್ರಹಿಸುತ್ತಾ “ಮತ್ತೊಬ್ಬ ಅರವಿಂದ್ ಕೇಜ್ರಿವಾಲ್ ಆಗಬೇಡಿ” ಎಂದಿದ್ದಾರೆ. ಕೇಜ್ರಿವಾಲ್ ಅವರು ತಮಗೆ ಕೋರ್ಟಿನಿಂದ ಜಾಮೀನು ದೊರೆತು ಹೊರ ಬರುವವರೆಗೂ ದೆಹಲಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ಕೊಟ್ಟಿರಲಿಲ್ಲ. ಹೊರ ಬಂದ ಬಳಿಕ ರಾಜಿನಾಮೆ ನೀಡಿದರು. ಬಳಿಕ ಮುಂಚಿನ ಅವರ ಸರ್ಕಾರದಲ್ಲಿದ್ದ ಸಚಿವೆ ಆತಿಶಿ ಅವರು ಸಚಿವ ಸ್ಥಾನದಿಂದ ಮುಖ್ಯಮಂತ್ರಿ ಸ್ಥಾನಕ್ಕೆ ಬಡ್ತಿ ಪಡೆದುಕೊಂಡರು. ಇದೆಲ್ಲ ಅವರ ಪಕ್ಷದ ನಿರ್ಧಾರ.

ದೆಹಲಿ ಸರ್ಕಾರದ ಮದ್ಯನೀತಿ ಪ್ರಕರಣದಲ್ಲಿ ಅಕ್ರಮವಾಗಿ ಹಣ ವರ್ಗಾವಣೆಯಾಗಿದೆ ಎಂಬ ಆರೋಪದಡಿ ಕೇಜ್ರಿವಾಲ್ ಅವರನ್ನು ಸಿಬಿಐ ಬಂಧಿಸಿತ್ತು. ಇದು ಬಿಜೆಪಿಯ ರಾಜಕೀಯ ಷಡ್ಯಂತ್ರ ಎಂದು ಆರೋಪಿಸಿದ್ದ ಕೇಜ್ರಿವಾಲ್ ರಾಜಿನಾಮೆ ನೀಡಿರಲಿಲ್ಲ. ಜಾಮೀನು ನೀಡುವಾಗ ಕೋರ್ಟ್ ಸಹ ಇವರು ರಾಜಿನಾಮೆ ನೀಡಬೇಕೆಂದು ಹೇಳಿರಲಿಲ್ಲ. ಮುಖ್ಯಮಂತ್ರಿ ಕಚೇರಿಗೆ ಹೋಗಬಾರದು ಎಂಬ ನಿರ್ಬಂಧ ವಿಧಿಸಿತ್ತು.

ಅರವಿಂದ್ ಕೇಜ್ರಿವಾಲ್ ಅವರ ಪ್ರಕರಣಕ್ಕೂ ಸಿದ್ದರಾಮಯ್ಯ ಅವರ ವಿರುದ್ದ ಕೇಳಿ ಬಂದಿರುವ ಮುಡಾ ಪ್ರಕರಣದ ಆರೋಪಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಇಲ್ಲಿ ಅಕ್ರಮ ಹಣ ವರ್ಗಾವಣೆ ಆರೋಪವಿಲ್ಲ. ಲಂಚ ಸ್ವೀಕರಿಸಿದ ಆರೋಪವಿಲ್ಲ. ಇವರ ಪತ್ನಿ ಪಾರ್ವತಿ ಅವರಿಗೆ ಬಂದ ಜಮೀನು ಸಂಬಂಧದ ವಿಷಯ ಮತ್ತು ಕಳೆದುಕೊಂಡ ಜಮೀನಿಗೆ ಬದಲಿಯಾಗಿ 50/50 ಅನುಪಾತದಲ್ಲಿ ನಿವೇಶನಗಳನ್ನು ಪಡೆದುಕೊಂಡ ವಿಷಯದಲ್ಲಿ ಜನ ಪ್ರತಿನಿಧಿಯಾಗಿ ಸಿದ್ದರಾಮಯ್ಯ ಪ್ರಭಾವ ಬೀರಿರಬಹುದು. ಪ್ರಭಾವಿ ವ್ಯಕ್ತಿಯ ಕುಟುಂಬದವರಲ್ಲದೇ ಬೇರೆಯವರಿಗೆ ಈ ರೀತಿ ಅನುಕೂಲ ಆಗುತ್ತಿರಲಿಲ್ಲ ಎಂಬುದು ಆರೋಪ !

ಇಲ್ಲಿ ಸಿದ್ದರಾಮಯ್ಯ ಅವರು ಬಂಧಿತರಾಗುವ ಯಾವುದೇ ಅಂಶವೂ ಇಲ್ಲ. ಈಗಾಗಲೇ ನ್ಯಾಯಾಲಯ ಪ್ರಕರಣದ ವಿಚಾರಣೆಗೆ ಸೂಚಿಸಿದೆ. ಲೋಕಾಯುಕ್ತದ ಮೈಸೂರು ಘಟಕ ತನಿಖೆ ನಡೆಸಿ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸುತ್ತದೆ. ಬಳಿಕ ತಪ್ಪುಒಪ್ಪುಗಳನ್ನು ನ್ಯಾಯಾಲಯ ನಿರ್ಧರಿಸುತ್ತದೆ. ಇದು ಮುಂದಿನ ಬೆಳವಣಿಗೆ

ಇಷ್ಟಿದ್ದೂ ಮಾಜಿ ಸಚಿವ ರಾಜೀವ್ ಚಂದ್ರಶೇಖರ್ ಅವರು ಕೇಜ್ರಿವಾಲ್ ಅವರಿಗೂ ಸಿದ್ದರಾಮಯ್ಯ ಅವರಿಗೂ ಏಕೆ ಹೋಲಿಕೆ ಮಾಡಿದರು ? ಸಿದ್ದರಾಮಯ್ಯ ಬಂಧಿತರಾಗಬಹುದು ಎಂದು ಹೇಳುತ್ತಿದ್ದಾರೆಯೇ ? ತಮ್ಮ ಬಿಜೆಪಿ ಪಕ್ಷದ ಒಳಾಸೆಯೇ ಇದು ಎಂಬ ಸುಳಿವು ಬಿಟ್ಟು ಕೊಡುತ್ತಿದ್ದಾರೆಯೇ ?

ಈಗಾಗಲೇ ಮುಡಾ ಪ್ರಕರಣ ನ್ಯಾಯಾಲಯದ ಅಂಗಳದಲ್ಲಿದೆ. ಮೊದಲೇ ಹೇಳಿದಂತೆ ತಪ್ಪುಸರಿ ನಿರ್ಧಾರವನ್ನು ಅದು ತೆಗೆದುಕೊಳ್ಳುತ್ತದೆ. ಆದರೆ ಬಿಜೆಪಿ ಮುಖಂಡರು, ಜೆಡಿಎಸ್ ಮುಖಂಡರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ಕೊಡಿ ರಾಜಿನಾಮೆ ಕೊಡಿ ಎಂದು ಕೂಗುತ್ತಿರುವುದು ಏಕೆ ? ಸಿದ್ದರಾಮಯ್ಯ ಅವರ ಮೇಲೆ ಬಂದಿರುವುದು ಆರೋಪವಷ್ಟೆ. ರಾಜ್ಯಪಾಲರಾಗಲಿ ಅಥವಾ ರಾಜ್ಯಪಾಲರು ಅನುಮತಿ ಕೊಟ್ಟಿದ್ದನ್ನು ಎತ್ತಿ ಹಿಡಿದ ಹೈಕೋರ್ಟ್ ಆಗಲಿ ಸಿದ್ದರಾಮಯ್ಯ ತಪ್ಪಿತಸ್ಥರು ಎಂದು ಹೇಳಿಲ್ಲ. ವಿಚಾರಣೆ ಆಗಲಿ ಎಂದು ಹೇಳಿದ್ದಾರಷ್ಟೆ.

ವಿಷಯ ಹೀಗಿದ್ದೂ ಬಿಜೆಪಿ ನಿರಂತರವಾಗಿ ರಾಜಿನಾಮೆಗೆ ಆಗ್ರಹಿಸುತ್ತಿರುವುದರ ಹಿಂದೆ ಕೆಲವು ಕಾರಣಗಳು ಇವೆ. ಒಂದನೇಯದು ಬಿಜೆಪಿಯ ರಾಷ್ಟ್ರೀಯ, ಪ್ರಶ್ನಾತೀತ ನಾಯಕರಾದ ನರೇಂದ್ರ ಮೋದಿ, ಅಮಿತ್ ಶಾ ಅವರು ಕರ್ನಾಟಕಕ್ಕೆ ಬಂದು ನಿರಂತರ ಪ್ರಚಾರ ನಡೆಸಿದರೂ ಫಲಿತಾಂಶದಲ್ಲಿ ಪ್ರಯೋಜನವಾಗದಿರುವುದು, ಕಾಂಗ್ರೆಸ್ ಪಕ್ಷ 136 ಸ್ಥಾನಗಳನ್ನು ಪಡೆದು ಬೃಹತ್ ಆಗಿ ಹೊರ ಹೊಮ್ಮಿ ಸರ್ಕಾರ ರಚನೆ ಮಾಡಿದ್ದು, ಈ ನಂತರ ಕರ್ನಾಟಕಕ್ಕೆ ಕೇಂದ್ರದಿಂದ ಬರಬೇಕಾದ ಹಣಕಾಸಿನ ಪಾಲಿಗೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಆಗ್ರಹಿಸಿದ್ದು, ಇದಕ್ಕಾಗಿ ನ್ಯಾಯಾಲಯದ ಮೊರೆ ಹೋಗಿದ್ದು, ರಾಜ್ಯಗಳಿಗೆ ಬರಬೇಕಾದ ಅನುದಾನಗಳು ಬಾಕಿ ಇರುವ ಹಿನ್ನೆಲೆಯಲ್ಲಿ ಇತರ ರಾಜ್ಯಗಳ ಸರ್ಕಾರದೊಂದಿಗೆ ಚರ್ಚೆ ನಡೆಸುತ್ತಿರುವುದು, ಕೇಂದ್ರದೊಂದಿಗೆ ಸೂಕ್ತ ನೆಲೆಗಳಲ್ಲಿ ಸಂಘರ್ಷ ನಡೆಸುತ್ತಿರುವುದು ಇವೆಲ್ಲ ಸಂಗತಿಗಳೂ ಬಿಜೆಪಿಯನ್ನು ಮುಖ್ಯವಾಗಿ ಅದರ ರಾಷ್ಟ್ರೀಯ ನಾಯಕರನ್ನು ಇರಿಸು ಮುರಿಸು ಉಂಟು ಮಾಡುತ್ತಿವೆ.

ಈ ಹಿನ್ನೆಲೆಯಲ್ಲಿ ರಾಜ್ಯದ ಕಾಂಗ್ರೆಸ್ ಸರ್ಕಾರದಲ್ಲಿ ಒಂದು ಭಾರಿ ಪ್ರಮುಖ ವಿಕೇಟ್ ಪಡೆಯಬೇಕು; ಸರ್ಕಾರದ ಆಧಾರಸ್ತಂಭಗಳಲ್ಲಿ ಒಬ್ಬರಾಗಿರುವ ಸಿದ್ದರಾಮಯ್ಯ ಅವರಿಂದ ರಾಜಿನಾಮೆ ಕೊಡಿಸಬೇಕೆಂಬ ಹಠಕ್ಕೆ ಬಿಜೆಪಿ ಬಿದ್ದಿದೆ. ಆದರೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡುವ ಯಾವ ಸಕಾರಣಗಳೂ ಇಲ್ಲ ಎಂಬುದನ್ನು ಬಿಜೆಪಿ ಮರೆತಿದೆ.

Similar Posts

Leave a Reply

Your email address will not be published. Required fields are marked *