ಪತ್ರಿಕೆಗಳಲ್ಲಿ, ಫೇಸ್ಬುಕ್ಕಿನಲ್ಲಿ ಮಂಡ್ಯ ಚುನಾವಣಾ ಅಖಾಡದ ವಿಶ್ಲೇಷಣೆ ಮಾಡಿದವರಲ್ಲಿ ಈ ಮುಂದಿನ ಒಂದು ಪ್ರಶ್ನೆ ಎತ್ತಿದ್ದವರು ಇದ್ದಾರೆ. “ವೈಯಕ್ತಿಕ ಮತ್ತು ಸಂಘಟನೆಗಳ ನೆಲೆಯಲ್ಲಿ ಬಿಜೆಪಿ ಮತ್ತು ಮೋದಿಯನ್ನು ವಿರೋಧಿಸುವ ಸಾಕಷ್ಟು ಪ್ರಗತಿಪರರು ಮಂಡ್ಯದ ಚುನಾವಣೆ ಸಂದರ್ಭದಲ್ಲಿ ಸುಮಲತಾ ಪರ ನಿಲುವು ತಳೆದಿದ್ದಾರೆ. ಇವರು ಗೆದ್ದರೆ ಅದು ಮೋದಿಯ ಗೆಲುವಲ್ಲವೆ, ಪ್ರಗತಿಪರರು ಗೊಂದಲದಲ್ಲಿದ್ದಾರೆ” ಎಂದಿದ್ದಾರೆ. ಇವರ ಧ್ವನಿಯಲ್ಲಿ ಸುಮಲತಾ ಗೆಲುವು, ಮೋದಿಯ ಗೆಲುವು ಎಂಬ ಧ್ವನಿತವಿದೆ. ಅದು ಹೇಗೆ ಎಂಬುದೇ ನನ್ನ ಪ್ರಶ್ನೆ ಮತ್ತು ತಕರಾರು.
ಅಂಬರೀಷ್ ಅವರು ರಾಜಕಾರಣ ಮಾಡುತ್ತಿರುವ ದಿನಗಳಲ್ಲಿ ಎಂದೂ ಸಮಲತಾ ಅವರು ಸಕ್ರಿಯವಾಗಿ ಭಾಗವಹಿಸಿದ ಉದಾಹರಣೆಗಳಿಲ್ಲ. ಚುನಾವಣೆ ಸಂದರ್ಭಗಳಲ್ಲಿ ಬಹುತೇಕ ರಾಜಕಾರಣಿಗಳ ಪತ್ನಿಯಂದಿರು ಪ್ರಚಾರ ಮಾಡುವ ಹಾಗೆ ತಮ್ಮ ಪತಿ ಪರ ಪ್ರಚಾರದಲ್ಲಿ ಭಾಗವಹಿಸಿದ್ದರು ಅಷ್ಟೆ. ಅಂಬರೀಶ್ ನಿಧನರಾದ ಕೆಲವೇ ತಿಂಗಳುಗಳಲ್ಲಿ ಲೋಕಸಭಾ ಚುನಾವಣೆಯೂ ಬಂತು. ಆಗ ಅವರ ಅಭಿಮಾನಿಗಳಿಗೆ ಅವರು ಇದ್ದ ಕಾಂಗ್ರೆಸ್ ಪಕ್ಷದ ಅನೇಕ ಸ್ಥಳೀಯ ಮುಖಂಡರು, ಕಾರ್ಯಕರ್ತರಿಗೆ ಮಂಡ್ಯ ಕ್ಷೇತ್ರದಿಂದ ಸುಮಲತಾ ಅವರು ಸ್ಪರ್ಧಿಸಬಾರದೇಕೆ ಎಂಬ ಅಭಿಪ್ರಾಯ ಮೂಡಿತು. ಅವರು ಇದೇ ಮಾತನ್ನು ಸುಮಲತಾ ಅವರಿಗೂ ಹೇಳಿದ್ದಾರೆ. ಒತ್ತಾಯ ಮಾಡಿದ್ದಾರೆ.
ಅಭಿಪ್ರಾಯ ಸಂಗ್ರಹಣೆ: ಒತ್ತಾಯ ಬಂದ ಕೂಡಲೇ ಸುಮಲತಾ ನಾಮಪತ್ರ ಸಲ್ಲಿಸಲು ಮುಂದಾಗಲಿಲ್ಲ. ಕ್ಷೇತ್ರದ ಜನರ ರಾಜಕೀಯ ನಾಡಿಮಿಡಿತ ಅರಿಯುವ ಕಾರ್ಯ ಮಾಡಿದರು. ಮಂಡ್ಯ ಜಿಲ್ಲೆಯ ಜನ ಸಾಮಾನ್ಯವಾಗಿ ದಾಕ್ಷಿಣ್ಯಕ್ಕೆ ಒಳಗಾಗಿ ಮಾತನಾಡುವವರಲ್ಲ. ನೇರನುಡಿ. ನೀವು ಕ್ಷೇತ್ರದ ಅಭ್ಯರ್ಥಿಯಾಗಿ ಸ್ಪರ್ಧಿಸಿ, ನಮ್ಮ ಬೆಂಬಲವಿದೆ ಎಂದು ಹೇಳಿದ್ದಾರೆ. ಆದರೆ ಈ ಹಂತದಲ್ಲಿ ಕಾಂಗ್ರೆಸ್ – ಜೆಡಿಎಸ್ ನಡುವೆ ಕ್ಷೇತ್ರಗಳ ಹಂಚಿಕೆಯಾಗಿದೆ. ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ನಿಲ್ಲಿಸುವುದು ಎಂದು ಒಪ್ಪಂದವಾಗಿದೆ. ಈ ಕಾರಣದಿಂದಲೇ ಟಿಕೇಟ್ ನೀಡಲು ಸಾಧ್ಯವಾಗುವುದಿಲ್ಲವೆಂದು ಕಾಂಗ್ರೆಸ್ ಕೈ ಚೆಲ್ಲಿದೆ.
ಕುಟುಂಬ ರಾಜಕಾರಣ: ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್ ಮತ್ತಿತರ ಪಕ್ಷಗಳ ಜೊತೆ ಮಹಾಘಟ ಬಂಧನ್ ಅಂದರೆ ಮೈತ್ರಿ ಆಗಿದೆ. ಬಿಜೆಪಿಯನ್ನು ಸೋಲಿಸುವುದು ಇದರ ಮುಖ್ಯ ಅಜೆಂಡಾ. ಆದ್ದರಿಂದ ಗೆಲ್ಲುವ ಸಾಧ್ಯತೆ ಅಧಿಕವಾಗಿರುವ ಅಭ್ಯರ್ಥಿಗಳಿಗೆ ಪಕ್ಷದ ಟಿಕೇಟ್ ನೀಡುವುದು ಜೆಡಿಎಸ್ ಆದ್ಯತೆಯಾಗಬಹುದಾಗಿತ್ತು. ಸುಮಲತಾ ಅವರಿಗೆ ಟಿಕೇಟ್ ನೀಡಬಹುದಾಗಿತ್ತು. ಆಗ ಮಂಡ್ಯ ಜಿಲ್ಲೆಯಲ್ಲಿ ಅತ್ಯಧಿಕ ಮತಗಳ ಅಂತರದಿಂದ ಗೆದ್ದ ದಾಖಲೆಯೂ ದೊರೆಯುತ್ತಿತ್ತು. ಪಕ್ಷದ ಜಿಲ್ಲೆಯ ಕಾರ್ಯಕರ್ತರಲ್ಲಿ ಪ್ರಮುಖರಾದವರಿಗಾದರೂ ಟಿಕೇಟ್ ನೀಡಬಹುದಾಗಿತ್ತು. ಆದರೆ ಆ ಪಕ್ಷದ ಪ್ರಮುಖರು ಈ ಕೆಲಸಗಳನ್ನು ಮಾಡದೇ ನಿಖಿಲ್ ಕುಮಾರಸ್ವಾಮಿಗೆ ಟಿಕೇಟ್ ನೀಡಿದರು.
ಮೂಡಿದ ಸ್ವಾಭಿಮಾನದ ಪ್ರಶ್ನೆ: ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿಗೆ ಟಿಕೇಟ್ ಕೊಟ್ಟಿದ್ದು ಜಿಲ್ಲೆಯ ಜನರಿಗೆ ಇರಲಿ; ಪಕ್ಷದ ಬಹುತೇಕ ಕಾರ್ಯಕರ್ತರಿಗೂ ಅರಗಿಸಿಕೊಳ್ಳಲಾಗದ ವಿಷಯ. ಇದು ಅವರೆಲ್ಲರ ಸ್ವಾಭಿಮಾನವನ್ನು ಕೆರಳಿಸಿದ ಸಂಗತಿ. “ಮಂಡ್ಯದಲ್ಲಿ ಅಭ್ಯರ್ಥಿಗೆ ಬರವಿತ್ತೆ” ಎಂಬುದೇ ಅವರ ಮುಖ್ಯಪ್ರಶ್ನೆ. ಈ ಸ್ವಾಭಿಮಾನದ ಪ್ರಶ್ನೆಯೂ ಕೂಡ ಸಮಲತಾ ಅವರಿಗೆ ಅನುಕೂಲಕರ ಪರಿಸ್ಥಿತಿ ನಿಮಾರ್ಣ ಮಾಡುವುದಕ್ಕೆ ಪೂರಕ ಅಂಶವಾಯಿತು. ಒಂದು ವೇಳೆ ಸ್ಥಳೀಯ ಪ್ರಮುಖ ಕಾರ್ಯಕರ್ತರೊಬ್ಬರಿಗೆ ಟಿಕೇಟ್ ನೀಡಿದ್ದರೆ ಸುಮಲತಾ ಮತ್ತು ಜೆಡಿಎಸ್ ಅಭ್ಯರ್ಥಿ ಗೆಲುವಿನ ಸಾಧ್ಯತೆ 50 -50 ಇರುತ್ತಿತ್ತು. ಇಂಥವರೇ ಗೆಲ್ಲುತ್ತಾರೆ ಎಂದು ಖಚಿತವಾಗಿ ಹೇಳುವುದು ಸಾಧ್ಯವಾಗುತ್ತಿರಲಿಲ್ಲ
ಬಿಜೆಪಿಯ ತಂತ್ರಗಾರಿಕೆ: ಚುನಾವಣಾ ಸಂದರ್ಭದಲ್ಲಿ ರಾಜಕೀಯ ತಂತ್ರಗಾರಿಕೆಗಳು ನಡೆಯುತ್ತವೆ. ಬಿಜೆಪಿ ಮಾಡಿದ್ದು ಕೂಡ ಇದೇ ಕಾರ್ಯವನ್ನು. ಮಂಡ್ಯದಲ್ಲಿ ಮೈತ್ರಿ ಪಕ್ಷಗಳಿಂದ ಓರ್ವ ಅಭ್ಯರ್ಥಿ ನಿಲ್ಲುತ್ತಾರೆ ಎಂದ ಕೂಡಲೇ ಅವರಲ್ಲಿ ಮುಂದೇನು ಮಾಡುವುದು ಎಂಬ ಪ್ರಶ್ನೆ ಎದುರಾಗಿದೆ. ಏಕೆಂದರೆ ಇದುವರೆಗೂ ಮಂಡ್ಯದಲ್ಲಿ ಬಿಜೆಪಿ ಅಭ್ಯರ್ಥಿ ಗೆಲ್ಲುವುದಿರಲಿ, ಗೆಲುವಿನ ಸಮೀಪಕ್ಕೂ ಬರಲು ಸಾಧ್ಯವಾಗಿಲ್ಲ. ಕಳೆದ ಬಾರಿ ಬಿಜೆಪಿ ಅಭ್ಯರ್ಥಿ 2.4 ಲಕ್ಷ ಮತಗಳನ್ನು ಪಡೆದಿದ್ದರು. ಆದರೆ ಜೆಡಿಎಸ್ ಅಭ್ಯರ್ಥಿ ತನ್ನ ಸಮೀಪದ ಪ್ರತಿಸ್ಪರ್ಧಿಗಿಂತ 3 ಲಕ್ಷಕ್ಕೂ ಅಧಿಕ ಮತಗಳ ಅಂತರ ಪಡೆದಿದ್ದರು. ಇದು ಬಿಜೆಪಿ ನಾಯಕರನ್ನು ಯೋಚಿಸುವಂತೆ ಮಾಡಿದೆ. ಒಂದುವೇಳೆ ಕಾಂಗ್ರೆಸಿನಿಂದಲೂ ಉಮೇದುವಾರಿಕೆ ಇದ್ದಿದ್ದರೆ ಖಂಡಿತ ಅವರು ತಮ್ಮ ಪಕ್ಷದ ಅಭ್ಯರ್ಥಿಯನ್ನು ನಿಲ್ಲಿಸುತ್ತಿದ್ದರೆ ವಿನಃ ಪಕ್ಷೇತರ ಅಭ್ಯರ್ಥಿಗೆ ಬೆಂಬಲ ಸೂಚಿಸುವ ಕಾರ್ಯ ಮಾಡುತ್ತಿರಲಿಲ್ಲ.
ಬಿಜೆಪಿ ಅಭ್ಯರ್ಥಿಯಾಗಲು ಸಾಧ್ಯವಿಲ್ಲ: ಬಿಜೆಪಿ ಬೆಂಬಲಿಸಿದೆ ಎಂಬ ಕಾರಣಕ್ಕೆ ಸುಮಲತಾ ಬಿಜೆಪಿ ಅಭ್ಯರ್ಥಿಯಾಗಲು ಸಾಧ್ಯವಿಲ್ಲ. ತಾಂತ್ರಿಕ ಅಂಶಗಳಿರಲಿ, ನೈತಿಕ ಅಂಶಗಳು ಕೂಡ ಇದಕ್ಕೆ ಸಹಕಾರಿಯಾಗುವುದಿಲ್ಲ. ಏಕೆಂದರೆ ಕಾಂಗ್ರೆಸಿನ ಸ್ಥಳೀಯ ಮುಖಂಡರನೇಕರು, ಕಾರ್ಯಕರ್ತರು ಅವರಿಗೆ ಬೆಂಬಲ ಸೂಚಿಸಿದ್ದಾರೆ. ಜೆಡಿಎಸ್ ಪಕ್ಷದ ಸ್ಥಳೀಯ ಕಾರ್ಯಕರ್ತರನೇಕರು ಸ್ವಾಭಿಮಾನದ ಪ್ರಶ್ನೆಯಿಂದಾಗಿ ಬೆಂಬಲ ಸೂಚಿಸಿರುವುದು ಗುಟ್ಟಿನ ಸಂಗತಿಯೇನಲ್ಲ:
ರೈತಸಂಘದ ಬೆಂಬಲ: ಪ್ರಮುಖವಾಗಿ ರೈತಸಂಘ ಮತ್ತು ದಲಿತ ಸಂಘರ್ಷ ಸಮಿತಿ, ಸುಮಲತಾ ಅವರಿಗೆ ಬೆಂಬಲ ಸೂಚಿಸಿರುವುದು ಗಮನಾರ್ಹ. ಕೆ.ಎಸ್. ಪುಟ್ಟಣ್ಣಯ್ಯ ಜಿಲ್ಲೆಯ ರೈತಸಂಘದ ಪ್ರಶ್ನಾತೀತ ನಾಯಕರು. ರೈತಸಂಘದಿಂದ ಸ್ಪರ್ಧಿಸಿ ಶಾಸಕರಾಗಿದ್ದವರು. ಈ ಬಣದ ರೈತಸಂಘ ಜಿಲ್ಲೆಯಲ್ಲಿ ಬಲಿಷ್ಠವಾಗಿದೆ. ಇವರೆಲ್ಲ ಕೆ.ಎಸ್. ಪುಟ್ಟಣ್ಣಯ್ಯ ಅವರ ಪತ್ನಿ ಸುನೀತಾ ಪುಟ್ಟಣ್ಣಯ್ಯ ಮತ್ತು ಮಗ ದರ್ಶನ್ ನೇತೃತ್ವದಲ್ಲಿ ಸುಮಲತಾ ಅವರನ್ನು ಬೆಂಬಲಿಸಲು ತೀರ್ಮಾನಿಸಿದೆ.
ದಸಂಸ ಬೆಂಬಲ: ದಲಿತ ಚಳವಳಿಯಲ್ಲಿ ಮೂಲತಃ ಮಂಡ್ಯಜಿಲ್ಲೆಯವರೇ ಆದ ಗುರುಪ್ರಸಾದ್ ಕೆರೆಗೋಡು ಅವರದು ದೊಡ್ಡ ಹೆಸರು. ಜಿಲ್ಲೆಯಲ್ಲಿ ಇವರ ನೇತೃತ್ವದ ದಲಿತ ಸಂಘರ್ಷ ಸಮಿತಿಯೂ ಸಂಘಟನಾತ್ಮಕ ದೃಷ್ಟಿಯಿಂದ ಬಲಿಷ್ಠವಾಗಿದೆ. ಈ ಸಂಘಟನೆಯೂ ಸುಮಲತಾ ಅವರಿಗೆ ಬೆಂಬಲ ಸೂಚಿಸಿದೆ. ಕೆಲವಾರು ಮಹಿಳಾ ಸಂಘಟನೆಗಳು, ಕನ್ನಡಪರ ಸಂಘಟನೆಗಳು ಕೂಡ ಸುಮಲತಾ ಅವರಿಗೆ ಬೆಂಬಲ ಸೂಚಿಸಿವೆ.
ಈ ಎಲ್ಲ ಹಿನ್ನೆಲೆಯಲ್ಲಿ ಸುಮಲತಾ ಅವರನ್ನು ಏಕೆ ರೈತಸಂಘದ ಅಭ್ಯರ್ಥಿ ಅಥವಾ ಡಿ.ಎಸ್.ಎಸ್. ಅಭ್ಯರ್ಥಿ ಎಂದು ಪರಿಗಣಿಸುವುದಿಲ್ಲ. ಬಿಜೆಪಿಗಿಂತ ಮೊದಲು ಸುಮಲತಾ ಅವರಿಗೆ ಬೆಂಬಲ ಸೂಚಿಸಿದ್ದು ರೈತಸಂಘ ತಾನೇ. ಹಾಗಿದ್ದ ಮೇಲೆ ಅವರು ರೈತಸಂಘದ ಅಭ್ಯರ್ಥಿಯೆಂದೇ ಪರಿಗಣಿತವಾಗಬೇಕು. ಏಕೆಂದರೆ ಬಿಜೆಪಿಯನ್ನು ಹೊರತುಪಡಿಸಿ ಸುಮಲತಾ ಅವರಿಗೆ ಬೆಂಬಲ ಸೂಚಿಸಿದ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಜಿಲ್ಲೆಯಾದ್ಯಂತ ಚುನಾವಣಾ ಪ್ರಚಾರದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ. ಬಿಜೆಪಿ ಹೀಗೆ ಪ್ರಚಾರದಲ್ಲಿ ಪಾಲ್ಗೊಳ್ಳದೇ ಇರುವಾಗಲೂ ಆ ಪಕ್ಷದ ಅಧಿಕೃತ ಅಭ್ಯರ್ಥಿ ಎನ್ನುವ ರೀತಿ ಪರಿಗಣಿಸುವುದೇಕೆ ?
ಕ್ರೆಡಿಟ್ ತೆಗೆದುಕೊಳ್ಳುವ ಆಲೋಚನೆ: ಸದ್ಯ ಮಂಡ್ಯ ಜಿಲ್ಲೆಯಲ್ಲಿ ಸುಮಲತಾ ಅವರೇ ಗೆಲ್ಲುತ್ತಾರೆ ಎಂಬ ವಾತಾವರಣವಿದೆ. ಈ ಕಾರಣದಿಂದಲೇ ಮೊನ್ನೆ ಮೈಸೂರಿಗೆ ಮೋದಿ ಬಂದಾಗ ‘ಸುಮಲತಾ ಅವರನ್ನು ಬೆಂಬಲಿಸಿ’ ಎಂದರು. ಮಂಡ್ಯ ಜಿಲ್ಲೆಯ ಬಹುತೇಕ ಮತದಾರರು ಮೋದಿ ಮಾತನ್ನು ಕೇಳುತ್ತಾರೆ ಎಂಬ ವಾತವರಣವಿದ್ದರೆ ಆ ಪಕ್ಷದಿಂದ ಅಭ್ಯರ್ಥಿಯನ್ನು ನಿಲ್ಲಿಸಿ ಗೆಲ್ಲಿಸಿಕೊಳ್ಳುತ್ತಿದ್ದರು. ಆದರೆ ಹಾಗೆ ಆಗಿಲ್ಲವಲ್ಲ. ಸುಮಲತಾ ಗೆಲ್ಲುವ ಸಾಧ್ಯತೆ ದಟ್ಟವಾಗಿರುವುದರಿಂದಲೇ ಮೋದಿ ಅವರನ್ನು ಗೆಲ್ಲಿಸಿ ಎಂದರು. ನಾಳೆ ಗೆದ್ದ ನಂತರ ಈ ಗೆಲುವಿನ ಕ್ರೆಡಿಟ್ ಅನ್ನು ತೆಗೆದುಕೊಳ್ಳುವ ಕಾತರ. ಆದರೆ ಈ ಕ್ರಡಿಟ್ ಅನ್ನು ಮೋದಿಗೆ ಮಂಡ್ಯ ಜಿಲ್ಲೆಯ ಜನ ಕೊಡುತ್ತಾರೆಯೇ… ಖಂಡಿತಾ ಸಾಧ್ಯವಿಲ್ಲ. ಸುಮಲತಾ ಗೆದ್ದರೆ ಅದರ ಗೆಲುವಿನ ಕ್ರೆಡಿಟ್ ಮಂಡ್ಯ ಜಿಲ್ಲೆಯ ಜನ ಅಂಬರೀಷ್ ಮೇಲಿಟ್ಟಿರುವ ಅಭಿಮಾನಕ್ಕೆ, ಹೊರ ಜಿಲ್ಲೆಯ ವ್ಯಕ್ತಿಗೆ ಟಿಕೇಟ್ ಕೊಟ್ಟಿದ್ದಾರೆ ಎನ್ನುವ ಸ್ವಾಭಿಮಾನಕ್ಕೆ ದಕ್ಕುತ್ತದೆ ಅಲ್ಲವೆ…?
ಚುನಾವಣೆ ಫಲಿತಾಂಶ ಬಂದ ಮೇಲೆ ಸುಮಲತಾ ಅವರೇ ಗೆದ್ದಾಗ ಬಿಜೆಪಿಯನ್ನು ಬೆಂಬಲಿಸಲು ಸಾಧ್ಯವೆ…? ಖಂಡಿತಾ ಇಲ್ಲ. ಏಕೆಂದರೆ ಆಗ ವೈಯಕ್ತಿಕ – ಸಂಘಟನಾತ್ಮಕ ನೆಲೆಗಳಲ್ಲಿ ಬಿಜೆಪಿಯನ್ನು ವಿರೋಧಿಸುವ ವ್ಯಕ್ತಿಗಳು ಮತ್ತು ಸಂಘಟನೆಗಳ ವಿರೋಧವನ್ನು ಸುಮಲತಾ ಕಟ್ಟಿಕೊಳ್ಳುತ್ತಾರೆಯೇ… ಸುಮಲತಾ ಅವರ ಇದುವರೆಗಿನ ಪ್ರಬುದ್ಧ ನಡೆ-ನುಡಿ ಗಮನಿಸಿದರೆ ಆ ಸಾಧ್ಯತೆ ಇಲ್ಲವೇಇಲ್ಲ ಎನ್ನಬಹುದು. ಇಷ್ಟೆಲ್ಲ ಅಂಶಗಳು ಇರುವಾಗಲೂ ಸುಮಲತಾ ಗೆಲುವು ಅದ್ಹೇಗೆ ಮೋದಿ ಗೆಲುವಾಗಲು ಸಾಧ್ಯವಾಗುತ್ತದೆ. ಮತ್ತೆ ಹೇಳುವುದಾದರೆ ಅದೇನಿದ್ದರೂ ಮಂಡ್ಯ ಮತದಾರರ ಅಭಿಮಾನ ಮತ್ತು ಸ್ವಾಭಿಮಾನದ ಗೆಲುವು