ಮೂಡಿಗೆರೆ ತುಂಬ ಚಾರಣದ ಗೆಳೆಯರು. ಟ್ರೆಕ್ಕಿಂಗ್ ಗಾಗಿ ಅತ್ತ ಹೋದಾಗಲೆಲ್ಲ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರ ಭೇಟಿ ತಪ್ಪಿಸುತ್ತಿರಲಿಲ್ಲ. ಹಾಗೆ ಹೋದಾಗಲೆಲ್ಲ ಬೆತ್ತದ ಕುರ್ಚಿಯಲ್ಲಿ ಕುಳಿತು ಮಾತು – ಮಂಥನ ನಡೆಯುತ್ತಿತ್ತು. ವಯನಾಡಿನಂಥ ಭೂ ಕುಸಿತ ದುರಂತಗಳನ್ನು ತೇಜಸ್ವಿ ಆಗಲೇ ಅಂದಾಜಿಸಿದ್ದರು. ಆಗ ಅವರು ಹೇಳುತ್ತಿದ್ದ ಸಂಗತಿಗಳೇ ಅನನ್ಯ.
ಪಶ್ಚಿಮಘಟ್ಟದ ಹೆಗಲಿನಲ್ಲಿ ಕುಳಿತಿರುವ ಕೊಟ್ಟಿಗೆಹಾರದ ಸುತ್ತಮುತ್ತ ಸಾಕಷ್ಟು ಚಾರಣದ ಪಥಗಳಿವೆ. ಬಿರುಸು ಮಳೆಗಾಲದಲ್ಲಿ ಅವುಗಳನ್ನು ಹತ್ತಿಳಿಯುವುದು ಕಷ್ಟ. ಮಳೆಗಾಲ ಹೊರತುಪಡಿಸಿ ಉಳಿದ ದಿನಗಳಲ್ಲಿ ಅವುಗಳ ಪಥದಲ್ಲಿ ಚಾರಣ ಮಾಡುತ್ತಿದ್ದೆವು. ಜುಲೈ ತಿಂಗಳ ನಂತರ ಸಾಮಾನ್ಯವಾಗಿ ಮಳೆಯ ಬಿರುಸು ತಗ್ಗುತ್ತದೆ. ಆದರೆ ಚಾರ್ಮಾಡಿ ಬೆಟ್ಟಗಳಲ್ಲಿ ಹೀಗೆ ಎಂದು ಹೇಳಲು ಆಗುವುದಿಲ್ಲ. ಇದ್ದಕ್ಕಿದಂತೆ ಇಂಚುಗಳ ಲೆಕ್ಕದಲ್ಲಿ ಅತೀ ಭಾರಿ ಮಳೆ ಸುರಿಯುತ್ತದೆ.
ಮಳೆಗಾಲದಲ್ಲಿ ಕೊಟ್ಟಿಗೆಹಾರದಿಂದ ೨೭ ಕಿಲೋ ಮೀಟರ್ ದೂರದಲ್ಲಿ ಬೆಟ್ಟದ ಪಾದದಲ್ಲಿರುವ ಚಾರ್ಮಾಡಿ ಗ್ರಾಮದವರೆಗೂ ಅಕ್ಷರಶಃ ನೂರಾರು ಜಲಕನ್ಯೆಯರು ನರ್ತಿಸುತ್ತಿರುತ್ತಾರೆ. ಕಾಲುಗಳು ಗಟ್ಟಿಯಿದ್ದರೆ ಮಾರ್ಗದ ಬದಿಯಲ್ಲಿ ನಡೆಯುತ್ತಾ ಜಲಪಾತಗಳ ಸವಿಯನ್ನು ನೋಡಬಹುದು.
ಈ ಜಲಪಾತಗಳನ್ನು ನೋಡುವ ಸಲುವಾಗಿಯೇ ನಾನು, ನನ್ನ ಗೆಳೆಯರು ಸಾಕಷ್ಟು ಬಾರಿ ಈ ಮಾರ್ಗದಲ್ಲಿಓಡಾಡಿದ್ದೇವೆ. ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನ, ಗೆಳೆಯ ಧನಂಜಯ ಜೀವಾಳ ನೇತೃತ್ವದ “ವಿಸ್ಮಯ” ಬಳಗದವರು ಸಾಮಾನ್ಯವಾಗಿ ಪ್ರತಿವರ್ಷ ಈ ಮಾರ್ಗದಲ್ಲಿ ಮಳೆ ನಡಿಗೆ ಆಯೋಜಿಸುತ್ತಾರೆ. (೨೦೧೮ರಲ್ಲಿ ನಾನು ಸುದ್ದಿಟಿವಿಯಲ್ಲಿದ್ದಾಗ ಈ ಜಲಪಾತಗಳ ಬಗ್ಗೆಯೇ ಕಿರು ಡಾಕ್ಯುಮೆಂಟರಿ ಮಾಡಿದೆ. ಅದು “ಜಲಕನ್ಯೆಯರು” ಹೆಸರಿನಲ್ಲಿ ಯೂ ಟ್ಯೂಬ್ ನಲ್ಲಿದೆ. ಆಸಕ್ತರು ನೋಡಬಹುದು)
ಬಹುಶಃ ೨೦೦೫ – ೦೬ರ ಸಾಲು. ಗೆಳೆಯರೊಂದಿಗೆ ಚಾರ್ಮಾಡಿ ಪಥದ ಚಾರಣ ಮಾಡಿದೆ. ಚಾರ್ಮಾಡಿ ತನಕ ನಡೆದು ಅಲ್ಲಿಯ ಬ್ಯಾರಿ ಹೋಟೆಲಿನಲ್ಲಿ ಸಂಜೆ ಮೀನು, ಚಿಕನ್ ತಿಂದೆವು. ಉಜಿರೆಗೆ ಹೋಗಿ ತಂಗಿದೆವು. ಆಗ ಮೊಬೈಲ್ ಇರಲಿಲ್ಲ. ಮರುದಿನ ಬೆಳಗ್ಗೆ ಲ್ಯಾಂಡ್ ಲೈನ್ ನಿಂದ ತೇಜಸ್ವಿ ಮನೆಗೆ ಪೋನ್ ಮಾಡಿದೆ. ತೇಜಸ್ವಿಯೇ ಎತ್ತಿಕೊಂಡರು. “ಸರ್, ಇವತ್ತು ನಿಮ್ಮನ್ನು ಭೇಟಿ ಮಾಡಲು ಬರ್ತಿದ್ದೇವೆ” ಎಂದೆ. “ಬೇಡ ಅಂದ್ರೆ ಬಿಡ್ತಿರೇನ್ರಯ್ಯ, ಬನ್ನಿ” ಅಂದರು.
ಮೂಡಿಗೆರೆಗೆ ಹೋಗುವ ಕೆ.ಎಸ್.ಆರ್.ಟಿ.ಸಿ. ಬಸ್ ಹತ್ತಿ ಹ್ಯಾಂಡ್ ಪೋಸ್ಟ್ ನಲ್ಲಿ ಇಳಿದೆವು. ಅಲ್ಲಿದ “ನಿರುತ್ತರ” ತುಂಬ ಸನಿಹ. ಗೇಟು ತೆಗೆದು ಮತ್ತೆ ಮುಚ್ಚಿ ತುಸು ದೂರ ನಡೆದರೆ ಮನೆ ಎದುರಾಗುತ್ತದೆ. ಅಲ್ಲಿಯೇ ತೇಜಸ್ವಿ ನಿಂತು ಕಾಫಿಗಿಡಗಳನ್ನು ನೋಡುತ್ತಿದ್ದರು. ನಾವು ಕೋರಸ್ ನಲ್ಲಿ ನಮಸ್ಕಾರ ಎಂದೆವು. ತೇಜಸ್ವಿ ನಗಾಡುತ್ತಾ “ಏನ್ರಯ್ಯ ಎಲ್ಲಿ ಹೋಗಿದ್ರಿ” ಎನ್ನುತ್ತಾ ಮನೆ ಒಳಗೆ ಕರೆದೊಯ್ದರು. ಹಾಲ್ ನಲ್ಲಿದ್ದ ಬೆತ್ತದ ಕುರ್ಚಿಯಲ್ಲಿ ಅವರು ಕುಳಿತ ನಂತರ ನಾವು ಕುಳಿತೆವು.
“ಹೀಗೀಗೆ ಚಾರಣ ಹೋಗಿದ್ದೆವು” ಎಂದು ವರದಿ ಒಪ್ಪಿಸಿದೆ. ಅವರು “ಸೋಮನಕಾಡು” ನೋಡಿದ್ದಿರೆನ್ರಯ್ಯ ಎಂದರು. ಅದು ಚಾರ್ಮಾಡಿ ಕಣಿವೆಯಲ್ಲಿರುವ ಒಂದು ಸ್ಥಳ. ಇಲ್ಲ ಎಂದೆವು. “ಮುಂದಿನ ಸಲ ಸಾಧ್ಯವಾದರೆ ಆ ಕಡೆ ಚಾರಣ ಮಾಡಿ” ಎಂದರು.
ಹೀಗೆ ಮಾತು ಸಾಗಿರುವಾಗ ರಾಜೇಶ್ವರಿ ಅಮ್ಮ ದೊಡ್ಡ ಲೋಟಗಳಲ್ಲಿ ಕಾಫಿ ತರುತ್ತಿದ್ದರು. “ಅಮ್ಮ ಇಷ್ಟು ದೊಡ್ಡ ಲೋಟದಲ್ಲಿ ಕಾಫಿ ಬೇಡ, ಸ್ವಲ್ಪ ಸಾಕು” ಎನ್ನುತ್ತಿದ್ದೆವು. ಆಗ ತೇಜಸ್ವಿ ಪ್ರೀತಿಯಿಂದ ” ಮುಚ್ಕಂಡು ಕುಡಿರಯ್ಯ, ದೊಡ್ಡದೊಡ್ಡ ಬಾಟಲ್ ಬಿಯರ್ ಕುಡೀತೀರಿ, ಇಷ್ಟುದ್ದ ಲೋಟದ ಕಾಫಿ ಕುಡಿಯೋಕೆ ಆಗಲ್ವೇ” ಎಂದು ಪ್ರೀತಿಯಿಂದ ಗದರುತ್ತಿದ್ದರು.
ಹೀಗೆ ಚಾರ್ಮಾಡಿ, ಚಾರಣ, ಪರಿಸರದ ಸುತ್ತ ಮಾತು ಸಾಗಿತ್ತು. ಆಗ ನಡುವೆ ನಾನು “ಸರ್, ಚಾರ್ಮಾಡಿ ರೇಂಜ್ ನಲ್ಲಿ ಕಾಡು ಉಳಿದಿದೆ” ಎಂದೆ. ತಕ್ಷಣ ತೇಜಸ್ವಿ ಮುಖ ಗಂಭೀರವಾಯಿತು. “ಎಲ್ಲಯ್ಯ ಉಳಿದಿದೆ ? ಕಣಿವೆಗಿಳಿದು ನೋಡಿ, ಹೊರರಾಜ್ಯದಿಂದ ಬಂದವರು ಕಣಿವೆಯೆನ್ನೆಲ್ಲ ಬೋಳಿಸಿದ್ದಾರೆ. ಮುಂದೆ ಇದು ಘಾಟಿಗೂ ಅಪಾಯವಾಗಬಹುದು. ಇದನ್ನೆಲ್ಲ ಯಾರಿಗೇಳೋದು” ಅಂದೇಳಿ ತುಂಬ ದೀರ್ಘ ನಿಟ್ಟುಸಿರು ಬಿಟ್ಟರು.
ಮುಂದೆ ನಮ್ಮ ಗುಂಪು ತೇಜಸ್ವಿ ಪ್ರತಿಷ್ಠಾನದ ವತಿಯಿಂದಲೇ ಆಯೋಜಿಸಿದ್ದ ಸೋಮನಕಾಡು ಚಾರಣ ಮಾಡಿತು. ಆಗಂತೂ ತೀರಾ ಕಹಿ ಅನುಭವವಾಯಿತು. ಕಣಿವೆಯಲ್ಲಿರುವ ಎಸ್ಟೆಟಿನವರು ನಮ್ಮ ಮೇಲೆ ಏರಿ ಬಂದರು. ಇದು ಪ್ರೈವೇಟ್ ಜಾಗ, ಇಲ್ಲಿಗೆ ಹೇಗೆ ಬಂದಿರಿ, ಹೊರಡಿ”ಎಂದು ಗದರಿದರು. ಈ ನಂತರವೂ ನಾನು, ನನ್ನ ಗೆಳೆಯ ಚಾರ್ಮಾಡಿ ಕಣಿವೆಗೆ ಇಳಿದು ಸುತ್ತಿದ್ದೇವೆ. ಅಲ್ಲಿ ಎಲ್ಲಿದೆ ಕಾಡು ? ತಳದಲ್ಲಿ ಹರಿಯುತ್ತಿರುವ ನದಿಯ ಕಲ್ಲುಗಳ ಗಣಿಗಾರಿಕೆಯೂ ಅಲ್ಲಿ ನಡೆದಿದೆ. ಇತ್ತೀಚಿನ ವರ್ಷಗಳಲ್ಲಿ ಪದೇಪದೇ ಚಾರ್ಮಾಡಿ ರಸ್ತೆ ಕುಸಿಯುತ್ತಿದೆ. ಅಡಿಪಾಯ ಭದ್ರವಾಗಿಲ್ಲದ ಮನೆ ಹೇಗೆ ದುರ್ಬಲವೋ ಹಾಗೆಯೇ ಕಣಿವೆಯ ತಳದಲ್ಲಿ ನಡೆಯುವ ಮರಗಳ ಕಡಿತ, ಗಣಿಗಾರಿಕೆ, ಘಾಟಿಯ ಭದ್ರತೆಗೆ ಅಪಾಯವಲ್ಲವೇ ?
ಈಚಿನ ವಯನಾಡು ದುರಂತದ ಹಿನ್ನೆಲೆಯಲ್ಲಿ ಚಾರ್ಮಾಡಿಯೂ ಸೇರಿದಂತೆ ಪಶ್ಚಿಮಘಟ್ಟ ಪ್ರದೇಶಗಳಲ್ಲಿ ಮರಗಳ ಕಡಿತ, ರಸ್ತೆ ಅಗಲ ಮಾಡುವುದು, ಗಣಿಗಾರಿಕೆ ಮತ್ರೆತು ಸಾರ್ಟುಗಳ ನಿರ್ಮಾಣ ಚಟುವಟಿಕೆಗಳನ್ನು ನಿರ್ಬಂಧಿಸಲೇಬೇಕಾಗಿದೆ. ಏಕೆಂದರೆ ದುರಂತ ಎನ್ನುವುದು ದಿಢೀರನೇ ಸಂಭವಿಸುವುದಿಲ್ಲ. ಸಣ್ಣಸಣ್ಣ ಸೂಚನೆಗಳನ್ನು ಕೊಡುತ್ತಿರುತ್ತದೆ. ಚಾಮುಂಡಿ ಘಾಟಿ ರಸ್ತೆಯಲ್ಲಿ ಪದೇಪದೇ ಕುಸಿತವಾಗುತ್ತಿರುವುದು, ರಸ್ತೆ ಬಿರುಕು ಬಿಡುತ್ತಿರುವುದು ಅಂಥ ಸೂಚನೆಗಳೇ ಆಗಿರಬಹುದು !
ತೇಜಸ್ವಿಯೂ ಇಲ್ಲದ ಅಮ್ಮನೂ ಇರದ “ನಿರುತ್ತರ”
ತೇಜಸ್ವಿ ಭೌತಿಕವಾಗಿಯಷ್ಟೇ ಅಗಲಿದ ಮೇಲೆಯೂ “ನಿರುತ್ತರ” ದ ಭೇಟಿ ತಪ್ಪಿಸುತ್ತಿರಲಿಲ್ಲ. ಆಗ ಅಮ್ಮನ ಬಳಿ “ಸಣ್ಣ ಕಪ್ ನಲ್ಲಿ ಕಾಫಿ ಕೊಡಿ ಸಾಕು” ಎಂದು ರಿಕ್ವೆಸ್ಟ್ ಮಾಡುತ್ತಿದ್ದೆವು. ಗದರಲು ತೇಜಸ್ವಿ ಇರಲಿಲ್ಲ. ಈಗ ಅಮ್ಮನೂ ಇಲ್ಲ ! ನಿರುತ್ತರ ನಿರುತ್ತರವಾಗಿದೆಯೇ ? FB memory ಈ ಪೋಟೋ ನೆನಪಿಸಿದಾಗ ಇದನ್ನೆಲ್ಲ ನೆನೆದು ಕಣ್ಣು ತೇವವಾಯ್ತು.
ಚೆನ್ನಾಗಿದೆ.ಅದೇನೋ ಒಂಥರ ಬೇಸರವೂ ಬೇರೆ…