ನಿರ್ದೇಶಕ ಹೇಮಂತರಾವ್ ವಿಭಿನ್ನ ರೀತಿಯಲ್ಲಿ “ಕವಲುದಾರಿ” ನಿರೂಪಿಸಲು ಪ್ರಯತ್ನಿಸಿದ್ದಾರೆ. ಇದರಲ್ಲಿ ಎಷ್ಟುಮಟ್ಟಿಗೆ ಯಶಸ್ವಿಯಾಗಿದ್ದಾರೆ ಅಥವಾ ಇಲ್ಲ ಎಂಬುವುದು ಬೇರೆಯೇ ಚರ್ಚೆ. ನಾನು ಇಲ್ಲಿ ಹೇಳಲು ಹೊರಟಿರುವುದು ಈ ಸಿನೆಮಾ ಪೂರ್ವಾಗ್ರಹಪೀಡಿತ ಗ್ರಹಿಕೆ, ನಿಲುವುಗಳ ಮೂಲಕ ಜನರ ಮನಸಿನಲ್ಲಿ ತಪ್ಪು ಅಭಿಪ್ರಾಯಗಳನ್ನು ಬಿತ್ತಲು ಯತ್ನಿಸಿರುವುದರ ಬಗ್ಗೆ. ಸಿನೆಮಾದ ನಿರ್ದೇಶಕ ರಾಜಕೀಯ ಅಭಿಪ್ರಾಯಗಳನ್ನು ಹೊಂದಿರುವುದು ತಪ್ಪಲ್ಲ. ಆದರದು ಜನಮಾನಸದಲ್ಲಿ ತಪ್ಪು ಅಭಿಪ್ರಾಯ ಬಿತ್ತಬಾರದು.

ನಿರ್ದೇಶಕ ಸಿನೆಮಾದ ಕ್ಯಾಪ್ಟನ್. ಚಿತ್ರ ಯಾವ ಅಂಶವನ್ನು ಹೇಳುತ್ತದೆಯೋ ಅದಕ್ಕೆ ಆತನೇ ಹೊಣೆ. ಸಿನೆಮಾದ ಕಥೆಯೇ ಆ ರೀತಿ ಎಂದು ಜಾರಿಕೊಳ್ಳುವಂತಿಲ್ಲ. ಕವಲುದಾರಿಯ ಸಂದರ್ಭದಲ್ಲಿ ನಿರ್ದೇಶಕ ಹೇಮಂತರಾವ್ ಅವರೇ ಚಿತ್ರಕಥೆ ರಚಿಸಿದ್ದಾರೆ. ಅಂದಮೇಲೆ ಚಿತ್ರ ಧ್ವನಿಸುವ ಅಂಶಗಳಿಗೆ ಸಂಪೂರ್ಣ ಅವರೇ ಹೊಣೆಗಾರರು.

ತನಿಖಾಧಿಕಾರಿಯಲ್ಲದ ತನಿಖಾಧಿಕಾರಿ (ಟ್ರಾಫಿಕ್ ಸಬ್ ಇನ್ಸ್ಪೆಕ್ಟರ್) ಹೊರಟ ಹಾದಿಯಲ್ಲಿ ಸಿಗುವ ನಿವೃತ್ತ ಪೊಲೀಸ್ ಇನ್ಸ್ ಪೆಕ್ಟರ್ ಮುತ್ತಣ್ಣ ಪ್ರಕಾರ ದುರ್ಘಟನೆಯ ಮೂಲ ಕ್ರಿಯೆಗಳು ನಡೆದಿರುವುದು 1977ರ ಪ್ರಕಾರ. ಅಂದರೆ ದೇಶದಲ್ಲಿ ತುರ್ತುಪರಿಸ್ಥಿತಿ ಇದ್ದ ಕಾಲ. “ ಎಮರ್ಜ್ಜೇನ್ಸಿ ಕಾಲಘಟ್ಟದಲ್ಲಿ ಸಾಕಷ್ಟು ಕ್ರಿಮಿನಲ್ ಗಳು ಹೊರಬಂದರು. ರಾಜಕಾರಣ ಪ್ರವೇಶಿಸಿದರು”  ಎಂಬ ಮಾತನ್ನು ಮುತ್ತಣ್ಣನ ಮೂಲಕ ಮೂರು ಬಾರಿ ಹೇಳಿಸಿದ್ದಾರೆ.

ತುರ್ತುಪರಿಸ್ಥಿತಿ ಎನ್ನುವುದು ಹೇರಿಕೆ. ಇದರ ಪರವಾಗಿ ಮಾತನಾಡಲು ಸಾಧ್ಯವಿಲ್ಲ. ಆದರೆ 1975ರಿಂದ 77ರವರೆಗಿನ ಅವಧಿಯಲ್ಲಿದ್ದ ಎಮರ್ಜೆನ್ಸಿ ಸಂದರ್ಭದಲ್ಲಿ ಕ್ರಿಮಿನಲ್ ಗಳು ವಿಜೃಂಭಿಸಿದ್ದಾರೆ ? ಖಂಡಿತ ಇಲ್ಲ. ಇದು ಸುಳ್ಳು. ಈ ಅವಧಿಯಲ್ಲಿ ಕಾಳಸಂತೆಕೋರರು, ಸಮಾಜಘಾತುಕರನ್ನು ಮುಲಾಜಿಲ್ಲದೇ ಕಂಬಿಗಳ ಹಿಂದೆ ತಳ್ಳಲಾಗಿತ್ತು. ಹಾಗಿದ್ದರೆ ಈ ಸಂದರ್ಭದಲ್ಲಿ ಕ್ರಿಮಿನಲ್ ಗಳು ವಿಜೃಂಭಿಸಿದರು ಎನ್ನುವ ಅರ್ಥ ಬರುವ ಮಾತುಗಳು ಪೂರ್ವಾಗ್ರಹಪೀಡಿತ ತಾನೇ..

ಮೈಲೂರು ಶ್ರೀನಿವಾಸರಾವ್ ಏನು ತನ್ನ ಮೂಲಬೇರುಗಳನ್ನು ಕಳಚಿಕೊಂಡಿರುವುದಿಲ್ಲ. ಆತನ ಹಳ್ಳಿ, ಮನೆ ಯಾವುದು ಬದಲಾವಣೆಯಾಗಿರುವುದಿಲ್ಲ. ಮೂಲತಃ ಕ್ರಿಶ್ಚಿಯನ್ ಆದ ಈತ ತನ್ನ ಹೆಸರು ಫರ್ನಾಂಢೀಸ್ ಎಂದು ಇದ್ದಿದ್ದನ್ನು ಮೈಲೂರು ಶ್ರೀನಿವಾಸರಾವ್ ಎಂದು ಬದಲಾಯಿಸಿಕೊಂಡಿರುತ್ತಾನೆ. ಹೀಗೆ ಬದಲಾಯಿಸಿಕೊಳ್ಳುವ ಅಗತ್ಯವೇನಿತ್ತು? ಊರುಕೇರಿ, ಮೂಲಗಳೆಲ್ಲವನ್ನೂ ಬದಲಾಯಿಸದೇ ಕೇವಲ ಹೆಸರು ಬದಲಾವಣೆಯಿಂದ ಆಗುವ ಲಾಭಗಳೇನು ? ಇದನ್ಯಾವುದನ್ನು ನಿರ್ದೇಶಕ ಹೇಳಲು ಹೊರಡುವುದಿಲ್ಲ.

ತಪ್ಪುಗ್ರಹಿಕೆ, ಗೋಜಲುಗಳ ಮೂಲಕ ನಿರ್ದೇಶಕ/ ಕಥೆಗಾರ ಹೇಮಂತರಾವ್ ಏನನ್ನು ಹೇಳಲು ಹೊರಟ್ಟಿದ್ದಾರೆ. ಹೀಗೆ ಪೂರ್ವಾಗ್ರಹಪೀಡಿತ ಗ್ರಹಿಕೆಗಳ ಮೂಲಕ ಪ್ರೇಕ್ಷಕರ ಮನಸಿನಲ್ಲಿಯೂ ತಪ್ಪುಭಾವ/ಗ್ರಹಿಕೆ ಬಿತ್ತಲು ಯತ್ನಿಸಿರುವುದು ಸರಿಯೇ ? ಹೀಗೆ ಪ್ರಶ್ನೆಗಳು ಮೂಡುತ್ತವೆ.

Similar Posts

Leave a Reply

Your email address will not be published. Required fields are marked *