ಹಣ್ಣಿನ ಬೆಳೆಗಳಿಗೆ ರಾಸಾಯನಿಕ ಕೀಟನಾಶಕಗಳನ್ನು ಸಿಂಪಡಿಸುವುದರಿಂದ ಅದರ ಶೇಷಾಂಶ ಹಣ್ಣುಗಳಲ್ಲಿ ಉಳಿಯುತ್ತದೆ. ಇಂಥ ಹಣ್ಣುಗಳನ್ನು ಸೇವಿಸುವುದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗಬಹುದು. ಈ ವಿಷಯ ಮನಗಂಡಿರುವ ಗ್ರಾಹಕರು ಸಾವಯವ ಹಣ್ಣುಗಳಿಗೆ ಬೇಡಿಕೆ ಸಲ್ಲಿಸುತ್ತಿದ್ದಾರೆ. ನಗರ, ಮಹಾನಗರಗಳಲ್ಲಿ ಸಾವಯವ ಹಣ್ಣುಗಳಿಗೆ ಪ್ರತ್ಯೇಕ ಮಾರುಕಟ್ಟೆಯೇ ಸೃಷ್ಟಿಯಾಗಿದೆ. ವಿದೇಶಗಳಲ್ಲಿ ಭಾರತದ ಸಾವಯವ ಹಣ್ಣುಗಳಿಗೆ ಬಹುಬೇಡಿಕೆ ಇದೆ. ಇಂಥ ಅವಕಾಶಗಳನ್ನು ಬೆಳೆಗಾರರು ಸದುಪಯೋಗಪಡಿಸಿಕೊಳ್ಳುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಹಣ್ಣುಗಳ ರಾಜ ಎನ್ನಿಸಿಕೊಂಡಿರುವ ಮಾವು ಬೆಳೆಯನ್ನು ರಾಸಾಯನಿಕ ಕೀಟನಾಶಕ ಮುಕ್ತವಾಗಿ ಬೆಳೆಯುವುದು ಎಲ್ಲ ದೃಷ್ಟಿಯಿಂದಲೂ ಸಕಾರಾತತ್ಮಕ ಪರಿಣಾಮಗಳನ್ನು ಉಂಟು ಮಾಡುತ್ತದೆ.

ಮಾವು ಬೆಳೆಯನ್ನು ರಾಸಾಯನಿಕ ಪದ್ಧತಿಯಲ್ಲಿ ಬೆಳೆಯುವುದಕ್ಕೂ ಸಾವಯವ ಪದ್ಧತಿಯಲ್ಲಿ ಬೆಳೆಯುವುದಕ್ಕೂ ಅಪಾರ ವೆತ್ಯಾಸಗಳಿವೆ. ಮಾವನ್ನು ಬಾಧಿಸುವ ಕೀಟಗಳನ್ನು ನಿಯಂತ್ರಿಸಲು ಸಿಂಪಡಿಸುವ ಕೀಟನಾಶಕಗಳಿಂದ ನೆಲ-ಜಲ ಮತ್ತು ಬೆಳೆಗಾರರ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮಗಳು ಉಂಟಾಗುತ್ತವೆ. ಅದರಲ್ಲಿಯೂ ರಾಸಾಯನಿಕ ಕೃಷಿಪದ್ಧತಿಯಿಂದ ಉಂಟಾಗುವ ಖರ್ಚು-ವೆಚ್ಚಗಳು ಅತ್ಯಧಿಕ. ಹಣ್ಣಿಗೆ ಬಾಧೆ ನೀಡುವ ಕೀಟಗಳು ಬಹುಬೇಗ ರಾಸಾಯನಿಕ ನಿರೋಧಕ ಗುಣವನ್ನು ಬೆಳೆಸಿಕೊಳ್ಳುತ್ತವೆ.

“ಈ ದಿಶೆಯಲ್ಲಿ ಮಾವನ್ನು ಬಾಧಿಸುವ ಕೀಟಗಳನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಮೋಹಕ ಬಲೆಗಳನ್ನು ಬಳಸುವುದು ಸೂಕ್ತ. ಕೀಟಗಳನ್ನು ಬಹುಪರಿಣಾಮಕಾರಿಯಾಗಿ ನಿಯಂತ್ರಿಸಲು ಮಾವಿನ ಕಾಯಿಗಳು ಗೋಲಿಗಾತ್ರದಲ್ಲಿ ಇದ್ದಾಗಲೇ ಮೋಹಕ ಅಥವಾ ಲಿಂಗಾಕರ್ಷಕ ಬಲೆಗಳನ್ನು ಕಟ್ಟಬೇಕು” ಎಂದು ಕೀಟಶಾಸ್ತ್ರಜ್ಞರು ಅಭಿಪ್ರಾಯಪಡುತ್ತಾರೆ. ಸಾವಯವ ಪದ್ಧತಿಯಲ್ಲಿ ಮಾವು ಬೆಳೆಯುತ್ತಾ ಬಂದಿರುವ ತುಮಕೂರು ಜಿಲ್ಲೆ ಗಿಡದಪಾಳ್ಯ ಗ್ರಾಮದ ಮಾವು ಬೆಳೆಗಾರ ಗಂಗಾಧರಯ್ಯಸ್ವಾಮಿ ಅವರು “ಮೋಹಕ ಬಲೆಗಳಿಂದ ಪರಿಣಾಮಕಾರಿಯಾಗಿ ಮಾವಿಗೆ ಬಾಧೆ ನೀಡುವ ಕೀಟಗಳನ್ನು ನಿಯಂತ್ರಿಸಬಹುದು. ಇದು ನನ್ನ ಅನುಭವಕ್ಕೆ ಬಂದಿದೆ. ಮೋಹಕ ಬಲೆಗಳನ್ನು ಬಳಸುವ ಮೊದಲು ಮತ್ತು ನಂತರದ ಇಳುವರಿ ಪ್ರಮಾಣ ಗಮನಿಸಿದ್ದೇನೆ. ಇವುಗಳನ್ನು ತೋಟದಲ್ಲಿ ಕಟ್ಟಿದ ನಂತರ ಮಾವು ಇಳುವರಿ ಹೆಚ್ಚಾಗಿದೆ. ದೀರ್ಘತಾಳಿಕೆ ಇರುವ ಹಣ್ಣುಗಳು ದೊರೆಯುತ್ತವೆ” ಎಂದು ಸಂತಸ ವ್ಯಕ್ತಪಡಿಸುತ್ತಾರೆ.

ಮೋಹಕ ಬಲೆಗಳ ವಿಶಿಷ್ಟತೆ ಇವುಗಳ ಒಳಗೆ ಇರುವ ಲ್ಯೂರ್ ಗಳು ಲಿಂಗಾಕರ್ಷಕ ವಾಸನೆಯನ್ನು ಪರಿಸರದಲ್ಲಿ ಹರಡುತ್ತವೆ. ಇದರಿಂದ ಹೂಜಿನೊಣಗಳು ಇವುಗಳತ್ತ ಆಕರ್ಷಿತವಾಗುತ್ತವೆ. ಈ ಮೋಹಕ ಬಲೆಗಳನ್ನು ಬಳಸುವುದರಿಂದ ಮಾವಿನ ಬೆಳೆಗಾಗಲಿ, ಪರಿಸರಕ್ಕಾಗಲಿ ಯಾವುದೇ ಹಾನಿಯೂ ಉಂಟಾಗುವುದಿಲ್ಲ. ಇವುಗಳನ್ನು ಬಳಸುವುದರಿಂದ ಸಾವಯವ/ಜೈವಿಕ ಪದ್ಧತಿಯಲ್ಲಿ ಮಾವು ಬೆಳೆಯಲು ಸಹಾಯಕವಾಗುತ್ತದೆ.

“ಮಾವಿನ ಕಾಯಿಗಳು ಗೋಲಿಗಾತ್ರದಲ್ಲಿದ್ದಾಗಲೇ ಒಂದು ಎಕರೆಗೆ ಎಂಟು ಮೋಹಕ ಬಲೆಗಳನ್ನು ಕಟ್ಟಬೇಕು. ಒಂದುವೇಳೆ ಆ ಪರಿಸರದಲ್ಲಿ ಬಾಧೆ ನೀಡುವ ಹೂಜಿನೊಣಗಳ ಸಂಖ್ಯೆ ಹೆಚ್ಚಿದ್ದರೆ ಅವುಗಳು ನಿಯಂತ್ರಿತವಾಗುತ್ತವೆ. ಮಾವು ಕೊಯ್ಲಾಗುವವರೆಗೂ ಈ ಬಲೆಗಳನ್ನು ತೋಟದಲ್ಲಿ ಕಟ್ಟಿರಬೇಕು. ಒಮ್ಮೆ ಬಲೆ ಕಟ್ಟಿದರೆ ಅವುಗಳು ದೀರ್ಘಕಾಲ ಬಾಳಿಕೆ ಬರುತ್ತವೆ. ಆದರೆ ಅವುಗಳ ಒಳಗಿರುವ ಲಿಂಗಾಕರ್ಷಕ ಕೇಕ್ ಗಳನ್ನು ನಿರ್ದಿಷ್ಟ ದಿನಗಳಿಗೊಮ್ಮೆ ಬದಲಾಯಿಸಿದರೆ ಸಾಕು” ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.

ಈ ಕುರಿತ ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: 99008 00033

 

Similar Posts

Leave a Reply

Your email address will not be published. Required fields are marked *