ಪ್ರಾಚೀನ ಭಾರತೀಯರು ಉಪಕಾರಿ-ಅಪಕಾರಿ ಕೀಟ, ಪ್ರಾಣಿಗಳ ಬಗ್ಗೆ ಅನೇಕ ಜಾನಪದ ಕಥೆಗಳನ್ನು ಸೃಷ್ಟಿಸಿದ್ದಾರೆ. ಪ್ರಾಚೀನ ಗ್ರೀಕ್ ಸಮುದಾಯದವರು ಇದಕ್ಕೆ ಹೊರತಲ್ಲ. ಜೇಡಗಳ ರೂಪುಗೊಳ್ಳುವಿಕೆ ಕುರಿತು ಮನಮಿಡಿಸುವ ಜಾನಪದ ಕಥೆಯಿದೆ. ಇದರ ಪ್ರಕಾರ ಅರ್ಚನೆ ಎಂಬ ಹೆಸರಿನ ಕಲಾತ್ಮಕ ನೇಯ್ಗೆಗಾರ್ತಿಯೊಬ್ಬಳು ಪ್ರಾಚೀನ ಗ್ರೀಕ್ ನಲ್ಲಿ ಇದ್ದಳು. ಈಕೆ ಮಾಡುತ್ತಿದ್ದ ಕಸೂತಿ ಕೆಲಸ, ಬಟ್ಟೆಗಳ ನೇಯ್ಗೆ ಮನಮೋಹಕವಾಗಿರುತ್ತಿತ್ತು. ಈಕೆ ನೇಯ್ದ ಬಟ್ಟೆಯನ್ನು ಧರಿಸುವುದು ಪ್ರತಿಷ್ಠೆಯ ಸಂಗತಿಯಾಗಿತ್ತು. ತನ್ನ ಕೆಲಸ-ಕಾರ್ಯಗಳಿಗೆ ಅಪಾರ ಬೆಲೆಯಿದ್ದರೂ ಅರ್ಚನೆ ನಿರ್ಗವಿ, ಸರಳ ಸ್ವಭಾವದವಳು. ತನ್ನ ಕೆಲಸದಿಂದಲೇ ಆತ್ಮತೃಪ್ತಿ ಕಾಣುತ್ತಿದ್ದಾಕೆ.
ಈಕೆಯ ನೇಯ್ಗೆ ಹೇಗಿರುತ್ತಿತ್ತೆಂದರೆ ದೇವತೆಗಳು ಅವುಗಳನ್ನು ತೊಡಲು ಹಾತೊರೆಯುವ ರೀತಿ. ಹೀಗಿರುವಾಗ ಅರ್ಚನೆಗೂ ಗ್ರೀಕ್ ದೇವತೆ “ಪಲ್ಲಸ್ ಅಥನೆ”ಗೂ ನೇಯ್ಗೆ ಸ್ಪರ್ಧೆ ಏರ್ಪಡುತ್ತದೆ. ತೀರ್ಪುಗಾರರೆಲ್ಲರೂ ಮಾನವಳಾದ ಅರ್ಚನೆ ಮಾಡಿದ ನೇಯ್ಗೆಯೇ ಅತ್ಯುತ್ತಮ ಎಂದು ತೀರ್ಪು ನೀಡುತ್ತಾರೆ. ಇದರಿಂದ ಸಿಟ್ಟಾದ “ಪಲ್ಲಸ್ ಅಥನೆ” ಅರ್ಚನೆಯ ನೇಯ್ಗೆಯನ್ನು ತುಂಡುತುಂಡು ಮಾಡುತ್ತಾಳೆ. ಇದರಿಂದ ಮನನೊಂದ ಅರ್ಚನೆ ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ.
ಅರ್ಚನೆ ಆತ್ಮಹತ್ಯೆ ಮಾಡಿಕೊಂಡಿದ್ದರಿಂದ ಗ್ರೀಕ್ ದೇವತೆ ಪಲ್ಲಸ್ ಅಥನೆ”ಗೂ ಆಘಾತವಾಗುತ್ತದೆ. ಅರ್ಚನೆಯ ಆತ್ಮಕ್ಕೆ ಕ್ಷಮಿಸು ಎಂದು ಕೋರಿಕೊಂಡು, ಈಕೆ ಜೇಡವಾಗಿ ಜನ್ಮತಾಳಿ ಸದಾ ಸುಂದರ ನೇಯ್ಗೆ ಮುಂದುವರಿಸುವಂತೆ ವರ ನೀಡುತ್ತಾಳೆ. ಇದರ ಅನುಸಾರ ಜೇಡಗಳು ಸದಾ ಕಲಾತ್ಮಕವಾದ, ಮನುಷ್ಯರಿಂದಲೂ ಅಸಾಧ್ಯವಾದ ನೇಯ್ಗೆಯನ್ನು ಮಾಡುತ್ತಿವೆಯಂತೆ.
ಕೃಷಿಕಾರ್ಯಕ್ಕೆ ಅಪಾರ ಅನುಕೂಲ:
ಇಂಥ ಜೇಡಗಳಿಂದ ಕೃಷಿಕಾರ್ಯಕ್ಕೆ ಅಪಾರ ಅನುಕೂಲ. ಇದನ್ನು ಅರ್ಥಮಾಡಿಕೊಂಡಿದ್ದ ಪ್ರಾಚೀನ ಏಷಿಯನ್ನರು ಹೊಲ-ಗದ್ದೆ-ತೋಟಗಳಲ್ಲಿರುವ ಜೇಡಗಳನ್ನು ಕೊಲ್ಲುವ ಕಾರ್ಯ ಮಾಡುತ್ತಿರಲಿಲ್ಲ. ಇವುಗಳ ಚಟುವಟಿಕೆಗೆ ಯಾವುದೇ ಅಡ್ಡಿಯುಂಟಾಗದಂತೆ ಎಚ್ಚರ ವಹಿಸುತ್ತಿದ್ದರು. ಏಕೆಂದರೆ ಇವುಗಳು ಬೆಳೆಗಳಿಗೆ ತೀವ್ರ ಹಾನಿಯುಂಟು ಮಾಡುವ ಕೀಟಗಳನ್ನು ಭಕ್ಷಿಸಿ, ಬೆಳೆಗಳನ್ನು ಸಂರಕ್ಷಿಸುತ್ತಿದ್ದವು. ಇದರಿಂದ ಕೃಷಿಕರು ಸಮೃದ್ಧವಾಗಿ ಬೆಳೆದ ಬೆಳೆಯನ್ನು ಕೊಯ್ಲುಮಾಡಿ ನೆಮ್ಮದಿಯಿಂದ ಮನೆಗೆ ಸಾಗಿಸಲು ಅನುಕೂಲವಾಗುತ್ತಿತ್ತು.
ಮಸನೋಬ ಪುಕವೋಕ ಕೃತಿ
ಈ ಹಿನ್ನೆಲೆಯನ್ನೆಲ್ಲ ಅರ್ಥಮಾಡಿಕೊಂಡ ಜಪಾನಿನ ಕೃಷಿಋಷಿ ಮಸನೋಬ ಪುಕವೋಕ ಅವರು ಜೇಡಗಳ ಮಹತ್ವವನ್ನು ಬಹುಮಹತ್ವದ ಕೃತಿ “ಒನ್ ಸ್ಟ್ರಾ ರೆವಲ್ಯೂಷನ್” ನಲ್ಲಿ ಪ್ರಸ್ತಾಪಿಸಿದ್ದಾರೆ. ಅವುಗಳ ಉಳಿಯುವಿಕೆ, ಬೆಳೆಯುವಿಕೆಯಿಂದ ಕೃಷಿಕಾರ್ಯಕ್ಕೆ ಅಪಾರ ಅನುಕೂಲವಾಗುತ್ತದೆ ಎಂದು ವಿವರಿಸಿದ್ದಾರೆ. ಭಾರತದಲ್ಲಿಯೂ ಪ್ರಜ್ಞಾವಂತ ಕೃಷಿಕರು, ಆದಿವಾಸಿಗಳು ಬೆಳೆಗಳನ್ನು ಕೀಟಗಳಿಂದ, ರೋಗಗಳಿಂದ ರಕ್ಷಿಸುವ ನಿಟ್ಟಿನಲ್ಲಿ ಜೇಡಗಳ ಕಾರ್ಯಗಳಿಗೆ ಅಡ್ಡಿಯುಂಟಾಗದಂತೆ ಮುಂಜಾಗ್ರತೆ ವಹಿಸುತ್ತಿದ್ದಾರೆ.
ಆಂಧ್ರಪ್ರದೇಶ, ಒಡಿಸ್ಸಾ ರಾಜ್ಯಗಳ ಉತ್ತರ ಘಟ್ಟ ಪ್ರದೇಶಗಳಲ್ಲಿ ಸಾಕಷ್ಟು ಮಂದಿ ಆದಿವಾಸಿಗಳಿದ್ದಾರೆ. ಇವರು ತಮ್ಮ ಬದುಕಿಗೆ ಅರಣ್ಯ ಉತ್ಪನ್ನಗಳ ಜೊತೆಗೆ ವ್ಯವಸಾಯವನ್ನೂ ಅವಲಂಬಿಸಿದ್ದಾರೆ. ವಿವಿಧ ಹಣ್ಣಿನ ಬೆಳೆಗಳ ತೋಟಗಾರಿಕೆ ಮಾಡುವ ಇವರು ಭತ್ತವನ್ನೂ ಬೆಳೆಯುತ್ತಾರೆ. ಭತ್ತಕ್ಕೆ ಕಾಂಡಕೊರಕ, ಸುಳಿಕೊರಕಗಳ ಹಾವಳಿ ಹೆಚ್ಚು. ಇಂಥ ಕೀಟಗಳನ್ನು ನಿಯಂತ್ರಣ ಮಾಡುವಲ್ಲಿ ಜೇಡಗಳು ಮಹತ್ವದ ಪಾತ್ರ ವಹಿಸುತ್ತವೆ. ಈ ಜೇಡಗಳನ್ನು ಒರಿಯಾ ಆದಿವಾಸಿಗಳು “ಪಟ್ಮಕಿಡಿ” ಎನ್ನುತ್ತಾರೆ. ಆಂಧ್ರದ ಆದಿವಾಸಿಗಳು “ಸಲೆಪುರುಗು” ಎಂದು ಕರೆಯುತ್ತಾರೆ.
ಬೆಳೆಗಳಿಗೆ ಹಾನಿಯುಂಟು ಮಾಡುವ ಕೀಟಗಳನ್ನು ನಿಯಂತ್ರಿಸುವ ಕಾರ್ಯದಲ್ಲಿ ಜೇಡಗಳನ್ನು ಅವಲಂಬಿಸುವಿಕೆಯ ಅಭ್ಯಾಸ ಯಾವಾಗಿನಿಂದ ಇದೆ ಎಂದರೆ ತಲೆತಲೆಮಾರುಗಳಿಂದಲೂ ಇದು ಆಚರಣೆಯಲ್ಲಿದೆ ಎನ್ನುತ್ತಾರೆ. ಜೇಡಗಳ ಚಟುವಟಿಕೆ ಎಷ್ಟು ವಿಪುಲವಾಗಿದೆ ಎಂದರೆ ಕಾಂಡಕೊರಕ, ಸುಳಿಕೊರಕ ಬಾಧೆಗೆ ತುತ್ತಾದ ಒಂದೇಒಂದು ಭತ್ತದ ಪೈರು ಅಲ್ಲಿ ಕಾಣಸಿಗುವುದಿಲ್ಲ. ಪ್ರಸ್ತುತ ದಿನಗಳಲ್ಲಿ ಈ ಪ್ರದೇಶಗಳ ಬಹುತೇಕ ತೋಟಗಾರರು ವಿವಿಧ ಹಣ್ಣಿನ ಬೆಳೆಗಳನ್ನು ಬಾಧಿಸುವ ಹಾನಿಕಾರಕ ಕೀಟಗಳ ನಿಯಂತ್ರಣಕ್ಕೆ ಜೇಡಗಳ ಚಟುವಟಿಕೆಗಳನ್ನೆಲ್ಲ ಅವಲಂಬಿಸಿದ್ದಾರೆ. ಸಹಜವಾಗಿ ಇಲ್ಲೆಲ್ಲ ಬಹು ವಿಸ್ತಾರವಾದ ಜೇಡದ ಬಲೆಗಳು ಕಾಣುತ್ತವೆ. ಜೇಡಗಳು ನಿರಾತಂಕವಾಗಿ ಸಂಚರಿಸುತ್ತಿರುತ್ತವೆ. ಇಲ್ಲಿನ ಮಕ್ಕಳು ಹುಡುಗಾಟಿಕೆಯಿಂದ ಜೇಡಗಳ ಬಲೆಗೆ ಹಾನಿ ಉಂಟು ಮಾಡಿದರೆ ಹಿರಿಯರು ಕರೆದು ತಿಳಿವಳಿಕೆ ಹೇಳುತ್ತಾರೆ. ಇದರಿಂದಾಗಿ ಇವರ ಕೃಷಿಜ್ಞಾನ, ಪರಂಪರೆಯಿಂದ ಪರಂಪರೆಗೆ ಸಾಗಿಬರಲು ಸಾಧ್ಯವಾಗಿದೆ.
ಈ ಎರಡೂ ಪ್ರದೇಶಗಳ ಆದಿವಾಸಿಗಳೆಲ್ಲರೂ ತಾವು ಬೆಳೆಯುವ ಬೆಳೆಗಳಿಗೆ ರಾಸಾಯನಿಕ ಕೀಟನಾಶಕಗಳನ್ನು ಸಿಂಪಡಿಸುವುದಿಲ್ಲ. ಹಾಗೆ ಮಾಡಿದರೆ ಭೂತಾಯಿ ಸಿಟ್ಟಾಗುತ್ತಾಳೆ ಎಂಬ ನಂಬಿಕೆ ಅವರಲ್ಲಿದೆ. ಇಂಥ ನಂಬಿಕೆ ಉಳಿದ ಪ್ರದೇಶಗಳಲ್ಲಿ ಕಣ್ಮರೆಯಾಗಿರುವುದು ವಿಷಾದನೀಯ ಸಂಗತಿ.