ನದಿಮೂಲ. ಋಷಿಮೂಲ ಹುಡುಕಬಾರದು ಎನ್ನುತ್ತಾರೆ. ನದಿಗಳ ಮೂಲ ಎಲ್ಲಿ ಎಂದು ಶತಮಾನಗಳ ಹಿಂದೆಯೇ ಹುಡುಕಿ ಹೇಳಲಾಗಿದೆ. ಹುಡುಕಲಾರದೇ ಇದ್ದವುಗಳನ್ನು ನೂರು ವರ್ಷಗಳಿಂದೀಚೆಗೆ ಹುಡುಕಲಾಗಿದೆ. ಹಾಗಾಗಿ ನದಿಗಳ ಮೂಲ ಇಂದು ನಿಗೂಢವಲ್ಲ.
ದಕ್ಷಿಣ ಕನ್ನಡ ಜಿಲ್ಲೆಗೆ ಸೇರಿದ ಪುತ್ತೂರಿನಿಂದ 70 ಕಿಲೋ ಮೀಟರ್ ಅಂತರವಿರುವ ಕಾಸರಗೋಡಿಗೆ ಅಡ್ಕಸ್ಥಳ ಸೇತುವೆ ಮೇಲೆ ಹಾದು ಹೋಗಬೇಕು. ಮಳೆಗಾಲದಲ್ಲಿ ಮೈದುಂಬಿ ಜೇಡಿಮಣ್ಣಿನ ಬಣ್ಣದಲ್ಲಿ ಹರಿಯುವ ನದಿ ಹೆಸರೇನು, ಇದೆಲ್ಲಿ ಹುಟ್ಟಿ, ಎಲ್ಲಿ ಸಮುದ್ರ ಸೇರಬಹುದು ಎಂಬ ಕುತೂಹಲವಿತ್ತು.
ಇತ್ತೀಚೆಗೆ ಬೈಕಿನಲ್ಲಿ ಕಾಸರಗೋಡಿಗೆ ಹೋಗಿದ್ದೆ. ಅಡ್ಕಸ್ಥಳ ಸೇತುವೆ ಪಕ್ಕದಲ್ಲಿ ಇರುವ ಕಾಕಾ ಅಂಗಡಿಯಲ್ಲಿ ಕಡಕ್ ಚಾ ಕುಡಿಯುತ್ತಾ ಹಿನ್ನೆಲೆಯಲ್ಲಿ ವಿಶಾಲವಾಗಿ ಹರಿಯುತ್ತಿದ್ದ ನದಿ ನೋಡುತ್ತಾ ಕುಳಿತೆ. ಮಳೆ ಹನಿಯುತ್ತಿತ್ತು. ಬೆಟ್ಟಗಳ ಹಿನ್ನೆಲೆ, ಎರಡು ಬದಿಯ ದಡಗಳಲ್ಲಿ ತೆಂಗು-ಅಡಿಕೆ ತೋಟಗಳು. ನದಿ ಮೋಹಕವಾಗಿ ಕಾಣುತ್ತಿತ್ತು. ಜಿನುಗುತ್ತಿದ್ದ ಮಳೆಯಲ್ಲಿಯೂ ಒಂದಷ್ಟು ಪೋಟೋಗಳನ್ನು ಕ್ಲಿಕ್ ಮಾಡಿದೆ.
ಚಾ ಅಂಗಡಿಯವರನ್ನು ಈ ನದಿ ಹೆಸರೇನು ಎಂದು ಕೇಳಿದೆ. “ಸೀರೆ ಹೊಳೆ” ಎಂದರು. ನದಿಯೊಂದಕ್ಕೆ ಸೀರೆ ಎಂಬ ಹೆಸರು ಇರುವುದು ಕೇಳಿದ್ದು ಇದೇ ಮೊದಲು. ಕುತೂಹಲವಾಯಿತು. ಅವರ ಬಳಿ ಹೆಚ್ಚು ಮಾಹಿತಿ ಇರಲಿಲ್ಲ. ನಂತರ ಬೇರೆಬೇರೆಯವರಿಂದ ಮಾಹಿತಿ ಸಂಗ್ರಹಿಸಿದೆ.
ತೊರೆಯಾಗಿ ಹೊಳೆಯಾಗಿ ನಂತರ ನದಿಯಾಗುವ ಈ ನೀರಿನ ಹರಿವನ್ನು ಒಂದೊಂದು ಕಡೆ ಒಂದೊಂದು ಹೆಸರಿನಿಂದ ಕರೆಯುತ್ತಾರೆ. ಅಡ್ಕಸ್ಥಳ ಗ್ರಾಮದ ಮಗ್ಗುಲಿನಲ್ಲಿ ಹರಿಯುವುದರಿಂದ ಅಡ್ಕಸ್ಥಳ ಹೊಳೆ, ಕುಂಬ್ಳೆ ಬಳಿಯ ಶೆರಿಯಾ ಗ್ರಾಮದ ಬಳಿ ಅರಬ್ಬಿ ಸಮುದ್ರ ಸೇರುವುದರಿಂದ ಶಿರಿಯಾ ಹೊಳೆ/ ನದಿ ಎಂದು ಕರೆಯುತ್ತಾರೆ. ಇದಲ್ಲದೇ ಇದನ್ನು ಬದಂತೊಡ್ಕ ಹೊಳೆ, ಬಾಳೆಕ್ಕು ಹೊಳೆ, ಮುಡ್ನೂರು ಹೊಳೆ ಹೀಗೆಲ್ಲ ಆಯಾ ಸ್ಥಳನಾಮದಿಂದ ಗುರುತಿಸಲಾಗುತ್ತದೆ.
ಸಮುದ್ರ ಮಟ್ಟದಿಂದ ಸುಮಾರು 230 ಮೀಟರ್ ಎತ್ತರವಿರುವ ಆನೆಗುಂಡಿ ಅರಣ್ಯ ಪ್ರದೇಶದಲ್ಲಿ ಹುಟ್ಟುತ್ತದೆ. ಇದು ಪುತ್ತೂರಿಗೆ ಸಮೀಪ. ಪಶ್ಚಿಮ ದಿಕ್ಕಿಗೆ 11 ಕಿಲೋ ಮೀಟರ್ ದೂರ ಹರಿಯುತ್ತದೆ. ಈ ಬಳಿಕ ಉತ್ತರ ದಿಕ್ಕಿನತ್ತ ತಿರುಗುತ್ತದೆ. ಪುತ್ತೂರಿಗೆ ಸಮೀಪದ ಅರಣ್ಯ ಪ್ರದೇಶದಲ್ಲಿ ಹುಟ್ಟುವ ಪಲ್ಲತ್ತಡ್ಕ ತೊರೆಯು ಅಂಗಡಿಮೊಗರು ಗ್ರಾಮದಲ್ಲಿ ಎಡದಿಂದ ಮುಖ್ಯ ನದಿಯನ್ನು ಸೇರುತ್ತದೆ.
ಮುಖ್ಯ ನದಿ ಮುಂದೆ ಮತ್ತೆ ಪಶ್ಚಿಮ ದಿಕ್ಕಿಗೆ ತಿರುಗುತ್ತದೆ. ಪುತ್ತಿಗೆ, ಮುಗು, ಅಂಗಡಿಮೊಗರು, ಬಾದೂರು, ಮೈರೆ, ಕುಡ್ಲಮೇರ್ಕಳ, ಆರಿಕ್ಕಾಡಿ, ಉಜಾರ್, ಉಳ್ವಾರ, ಬೊಂಬ್ರಣ ಗ್ರಾಮಗಳ ಮಗ್ಗುಲಿನಲ್ಲಿ ಸುಮಾರು 30 ಕಿಲೋ ಹರಿದು ಪಶ್ಚಿಮ ದಿಕ್ಕಿಗೆ ತನ್ನ ಪಥ ಹೊರಳಿಸಿ ಮತ್ತೆ ದಕ್ಷಿಣ-ಪಶ್ಚಿಮವಾಗಿ ಹರಿಯುತ್ತದೆ. ಎಂಟು ಕಿಲೋ ಮೀಟರ್ ಬಳಿಕ ಮತ್ತೆ ಪಶ್ಚಿಮ ದಿಕ್ಕಿಗೆ ತಿರುಗುತ್ತದೆ.
ಹರಿಯುವ ಹಾದಿಯಲ್ಲಿ ಇದರೊಂದಿಗೆ ಹೊಳೆಗಳಾದ ಕಲ್ಲಾಂಜೆ ತೋಡು, ಕನ್ಯಾನ ತೋಡು, ಎರಮಟ್ಟಿ ಹೊಳೆ ಮತ್ತು ಕುಂಬಳ ಸೇರಿ ಸಮೃದ್ಧ ನದಿಯಾಗುತ್ತದೆ. ಕಾಸರಗೋಡಿನಿಂದ ಉತ್ತರ ದಿಕ್ಕಿನಲ್ಲಿ ಸುಮಾರು 11 ಕಿಲೋ ಮೀಟರ್ ದೂರದ ಶಿರಿಯಾದಲ್ಲಿ ಅರಬ್ಬಿ ಸಮುದ್ರದಲ್ಲಿ ಲೀನವಾಗುವ ಮುನ್ನ ಕುಂಬ್ಳೆ ಹಿನ್ನೀರಿನಲ್ಲಿ ಸಂಗಮಿಸುತ್ತದೆ.
ರಾಜಕೀಯ ನಕ್ಷೆ ಪ್ರಕಾರ ಶಿರಿಯಾ ನದಿ ಕರ್ನಾಟಕ ಮತ್ತು ಕೇರಳ ರಾಜ್ಯಗಳ ನಡುವೆ ಹರಿಯುತ್ತದೆ. ಹುಟ್ಟಿದಲ್ಲಿಂದ ಸಮುದ್ರ ಸೇರುವವರೆಗೂ ಇದು 67 ಕಿಲೋ ಮೀಟರ್ ಅಂತರ ಕ್ರಮಿಸುತ್ತದೆ. ಹರಿಯುವ ಹಾದಿಯ ಮಗ್ಗುಲುಗಳಲ್ಲಿ ಹಸಿರುಕ್ಕಲು, ರೈತರು ಸಮೃದ್ಧ ಜೀವನ ನಡೆಸಲು ಕಾರಣವಾಗಿದೆ. ಹಲವೆಡೆ ಕುಡಿಯುವ ನೀರಿನ ಆಸರೆಯು ಆಗಿದೆ. ಬೇಸಿಗೆ ಕಾಲದಲ್ಲಿ ಇದು ಹರಿಯುವ ಹಾದಿಯಲ್ಲಿರುವ ಗ್ರಾಮಗಳವರು ಸಣ್ಣಸಣ್ಣ ಕಟ್ಟ (ಬ್ಯಾರೇಜ್) ಗಳನ್ನು ಮರಳಿನ ಮೂಟೆಗಳಿಂದ ನಿರ್ಮಿಸಿ ವ್ಯವಸಾಯಕ್ಕೆ ನೀರು ಪಡೆದುಕೊಳ್ಳುತ್ತಾರೆ. ಶಿರಿಯಾ ಬಳಿ ಸಣ್ಣದೊಂದು ಅಣೆಕಟ್ಟೆ ನಿರ್ಮಾಣ ಮಾಡಲಾಗಿದೆ.
ಕನ್ನಡ – ತುಳು ಸಂಸ್ಕೃತಿ ಗ್ರಾಮಗಳು
ಶಿರಿಯಾ ನದಿ ಹರಿಯುವ ಉದಕ್ಕೂ ಇರುವುದು ಕನ್ನಡ ಮತ್ತು ತುಳು ಸಂಸ್ಕೃತಿ ಗ್ರಾಮಗಳು. ಕರ್ನಾಟಕದಲ್ಲಿ ಸೀರೆ/ ಶಿರಿಯಾ ನದಿ ಹರಿಯುವುದು 6 ಕಿಲೋ ಮೀಟರ್ ಅಷ್ಟೆ. ಆದರೆ ಭಾಷಾವಾರು ಪ್ರಾಂತ್ಯ ರಚನೆ ಸಂದರ್ಭದಲ್ಲಿ ತಪ್ಪಾಗಿ ಕೇರಳ ರಾಜ್ಯಕ್ಕೆ ಸೇರಿಸಲ್ಪಟ್ಟ ಕನ್ನಡ – ತುಳು ಪ್ರದೇಶ ಕಾಸರಗೋಡು ಜಿಲ್ಲೆಯಲ್ಲಿ 60 ಕಿಲೋ ಮೀಟರ್ ಹರಿಯುತ್ತದೆ. ನದಿ ಹರಿಯುವ ಉದ್ದಕ್ಕೂ ಕನ್ನಡ – ತುಳು ಸಂಸ್ಕೃತಿ ಸಮೃದ್ಧವಾಗಿ ಅರಳಿ ಬೆಳಗಿದೆ. ಇಲ್ಲಿನ ಗ್ರಾಮಗಳಲ್ಲಿ ಕನ್ನಡ ಶಾಲೆಗಳಿವೆ. ಆದರೆ ಕೇರಳ ಸರ್ಕಾರದ ಉದ್ದೇಶಪೂರ್ವಕ ಕಡೆಗಣನೆಗೆ ಒಳಗಾಗಿವೆ. ಇದರ ಬಗ್ಗೆ ಕರ್ನಾಟಕದ ಆಡಳಿತ ಚುಕ್ಕಾಣಿ ಹಿಡಿದ ರಾಜಕೀಯ ಮುಖಂಡರು ಸೊಲ್ಲೆತ್ತುತ್ತಿಲ್ಲ.
ನದಿಯ ಮೂಲ ಹೆಸರೇನು ?
ಸೀರೆಹೊಳೆ ಎನ್ನುವುದಕ್ಕೂ ಕಾರಣವಿದೆ. ನದಿ ಎಲ್ಲಿಯೂ ರಭಸವಾಗಿ ಹರಿದು, ಉಕ್ಕಿ, ಧುಮ್ಮಿಕ್ಕಿ ಮುನ್ನುಗುವುದಿಲ್ಲ. ಸಮತಟ್ಟಾದ ನೆಲದ ಮೇಲೆ ಸೀರೆ ಹಾಸಿದರೆ ಜೋರುಗಾಳಿ ಇಲ್ಲದ ಸಮಯದಲ್ಲಿ ಹೇಗೆ ನಿಶ್ಚಲವಾಗಿ ಇರುವುದು ಹಾಗೆ ನದಿಯ ಸಾಗುವಿಕೆಯೂ ಇದೆ. ಮೊದಲನೇ ನೋಟಕ್ಕೆ ನದಿಯೊಂದು ಹರಿಯುತ್ತಿದೆ ಎಂದು ಗೊತ್ತಾಗುವುದಿಲ್ಲ. ನಿಂತಿರುವ ನೀರೇನೋ ಎನಿಸುತ್ತದೆ. ಆದರೆ ತುಸು ಗಮನವಿಟ್ಟರೆ ನದಿಯ ಬಹು ನಿಧಾನಗತಿಯ ಹರಿವು ಗೊತ್ತಾಗುತ್ತದೆ.
ಸಿರಿ ಎಂದರೆ ತುಳುವಿನಲ್ಲಿ ಮೊಗ್ಗು, ಚಿಗುರು, ಹೊಂಬಾಳೆ ಎಂಬ ಅರ್ಥಗಳಿವೆ. ಚೆರಿಯಾ ಎಂದರೆ ಸಿಂಬಿ ಅಂದರೆ ಮಹಿಳೆಯರು ತಲೆ ಮೇಲೆ ನೀರು ತುಂಬಿದ ಪಾತ್ರೆಯನ್ನು ಇಟ್ಟುಕೊಳ್ಳಲು ಬಟ್ಟೆಯಲ್ಲಿ ಮಾಡಿದ ವೃತ್ತಾಕಾರದ ಸಿಂಬಿ ಇಟ್ಟುಕೊಳ್ಳುತ್ತಾರೆ. ಅಡುಗೆ ಮಡಿಕೆಗಳು, ಧಾನ್ಯ ತುಂಬಿದ ಮಡಿಕೆಗಳನ್ನು ಬಿದಿರಿನಿಂದ ಮಾಡಿದ ಸಿಂಬಿ ಮೇಲಿಡುತ್ತಾರೆ. ಆಕಾಶಮಾರ್ಗದಿಂದ ನೋಡಿದಾಗ ಈ ನದಿ ಸಿಂಬಿ ಆಕಾರದಲ್ಲಿ ಕಾಣುತ್ತದೆ. ಆದ್ದರಿಂದ ಇದರ ಹೆಸರು ಮೂಲ ಚೆರಿಯಾ ಎಂದಿರಬೇಕು. ನಂತರ ಅದು ಶಿರಿಯಾ, ಸೀರೆ ಹೀಗೆಲ್ಲ ಬದಲಾಗಿರುವ ಸಾಧ್ಯತೆಗಳಿವೆ.
Chennagide