ಕೆಲವೇ ದಶಕಗಳ ಹಿಂದೆ ಬಿತ್ತನೆ ಬೀಜಗಾಗಿ ಮಾರುಕಟ್ಟೆ ಮುಖ ನೋಡಬೇಕಾದೀತು ಎಂದರೆ ರೈತರು ಆಶ್ಚರ್ಯಪಡುತ್ತಿದ್ದರು. ಆದರೆ ಕಳೆದ ಮೂರು ದಶಕಗಳಿಂದೀಚೆಗೆ ಬಿತ್ತನೆ ಬೀಜಕ್ಕಾಗಿ ಮಾರುಕಟ್ಟೆಯತ್ತ ನೋಡದ ರೈತರ ಸಂಖ್ಯೆಯೇ ಅತ್ಯಲ್ಪ. ಇದಕ್ಕೆ ಅನೇಕ ಕಾರಣಗಳಿವೆ. ಸಾವಯವ ಕೃಷಿಕರು ಬಿತ್ತನೆಬೀಜದ ವಿಚಾರದಲ್ಲಿ ಸ್ವಾವಲಂಬಿಗಳಾಗಿರಬೇಕು. ಆಗ ಸಾವಯವ ಕೃಷಿಯ ಮಹತ್ವ ಮತ್ತಷ್ಟು ಹೆಚ್ಚಾಗುತ್ತದೆ. ಇತ್ತೀಚಿನ ವರ್ಷಗಳಲ್ಲಿ ಸಾವಯವ ಕೃಷಿ ಬಗ್ಗೆ ತಿಳಿವಳಿಕೆ ಹೆಚ್ಚುತ್ತಿರುವುದು ಸಮಾಧಾನದ ಸಂಗತಿ. ಆದರೂ ಬಿತ್ತನೆಬೀಜಕ್ಕಾಗಿ ಮಾರುಕಟ್ಟೆಯತ್ತ ನೋಡುವ ಕೃಷಿಕರ ಸಂಖ್ಯೆ ಅಪಾರವಾಗಿದೆ. ಇಂಥ ರೈತರು ಬಿತ್ತನೆ ಬೀಜ ಖರೀದಿಸುವಾಗ ಕೆಲವೊಂದು ಅಂಶಗಳನ್ನು ನೆನಪಿನಲ್ಲಿಡುವುದು ಅವಶ್ಯಕ. ಇದರಿಂದ ಬೆಳೆ ವಿಫಲವಾಗುವ ಸಾಧ್ಯತೆಗಳು ಕಡಿಮೆ. ಬೆಳೆ ವಿಫಲವಾದ ಮೇಲೆ ಕೊರಗುವುದಕ್ಕಿಂತಲೂ ಮುಂಚಿತವಾಗಿ ಜಾಗ್ರತೆ ವಹಿಸುವುದು ಅವಶ್ಯಕ
1. ಬಿತ್ತನೆ ಬೀಜ ನಿಗಮ ಮತ್ತು ಕೃಷಿ ಇಲಾಖೆಯಿಂದ ಮಾನ್ಯತೆ ಪಡೆದ ಮಳಿಗೆಗಳಲ್ಲಿ ಮಾತ್ರ ಬಿತ್ತನೆ ಬೀಜ ಖರೀದಿಸಬೇಕು
2. ಬೀಜದ ಚೀಲದ ಮೇಲೆ ಬಿತ್ತನೆ ಬೀಜ ನಿಗಮ ಮತ್ತು ಸಂಬಂಧಿಸಿದ ಇಲಾಖೆಗಳ ಚೀಟಿ ಇದೆಯೇ ನೋಡಬೇಕು. ಚೀಲದ ಮೇಲೆ ಮುದ್ರೆ ಹಾಕಿರುವ ಲಾಟ್ ನಂಬರ್, ಯಾವ ದಿನಾಂಕದವರೆಗೆ ಯೋಗ್ಯ, ಬೀಜ ಮೊಳಕೆಯೊಡೆಯುವ ಪ್ರಮಾಣ ಮತ್ತಿತರ ಅಂಶಗಳನ್ನು ತಿಳಿಸುವ ಲೇಬಲ್ ಇದೆಯೇ ನೋಡಬೇಕು.
3.ಚೀಲದಲ್ಲಿರುವ ಬಿತ್ತನೆ ಬೀಜ ಪರೀಕ್ಷಿಸಿದ ದಿನಾಂಕವನ್ನೂ ಲೇಬಲಿನಲ್ಲಿ ನಮೂದಿಸಿರುತ್ತಾರೆ. ನೀವು ಖರೀದಿಸುವ ಸಂದರ್ಭದಲ್ಲಿ ಬೀಜ ಪರೀಕ್ಷೆಯಾಗಿ ಒಂಭತ್ತು ತಿಂಗಳು ಕಳೆದಿದ್ದರೆ ಅಂಥ ಚೀಲ ಖರೀದಿಸಬಾರದು. ಏಕೆಂದರೆ ಮೊಳಕೆ ಪ್ರಮಾಣ ಕಡಿಮೆಯಾಗಿರುತ್ತದೆ. ಯಾವ ತರಹದ ಬೀಜದ ತಳಿ ಎಂಬ ವಿವರವನ್ನೂ ಗಮನಿಸಬೇಕು
4.ಬಿತ್ತನೆ ಬೀಜ ಖರೀದಿಸಿದ ನಂತರ ಮಳಿಗೆಯಿಂದ ಅಧಿಕೃತ ರಶೀದಿ ಕೇಳಿ ಪಡೆಯಿರಿ. ಮಳಿಗೆ ಸೀಲು ಹಾಕಿದ ಚೀಟಿ ಕೊಟ್ಟರೆ ನಿರಾಕರಿಸಿ. ರಶೀದಿಯಲ್ಲಿ ಮಾರಾಟಗಾರರ ಸಹಿಯೂ ಇರಬೇಕು
5.ಬಿತ್ತನೆ ನಂತರ ಮೊಳಕೆ ಪ್ರಮಾಣ ಕಡಿಮೆಯಾಗಿದ್ದರೆ ಸಮೀಪದ ರೈತ ಸಂಪರ್ಕ ಕೇಂದ್ರದಲ್ಲಿ ಲಿಖಿತ ದೂರು ದಾಖಲಿಸಿ. ನೀವು ಬಿತ್ತನೆ ಬೀಜದ ಚೀಲ, ರಶೀದಿಯ ನಕಲು ಮತ್ತು ಬಿತ್ತನೆ ಬೀಜದ ಚೀಲವನ್ನೂ ಹಾಜರು ಮಾಡಿ, ನಿಮ್ಮ ದೂರು ಸರಿಯೆಂದು ಖಾತ್ರಿಯಾದರೆ ಪರಿಹಾರ ಪಡೆಯಬಹುದು
6. ಬಿತ್ತನೆ ಬೀಜ ಖರೀದಿಸುವುದಕ್ಕೂ ಮೊದಲೇ ನಿಮ್ಮ ಜಮೀನಿರುವ ಪ್ರದೇಶಕ್ಕೆ ಒಗ್ಗುವ ತಳಿ, ಬಿತ್ತನೆಬೀಜದ ಬಗ್ಗೆ ಕೃಷಿ ಅಧಿಕಾರಿಗಳಿಂದ ಮಾಹಿತಿ ಪಡೆಯಿರಿ. ಇಂಥ ಮುಂಜಾಗ್ರತೆಗಳು ನೀವು ನಷ್ಟಕ್ಕೀಡಾಗುವುದನ್ನು ತಪ್ಪಿಸುತ್ತವೆ
7. ಬಿತ್ತನೆ ಮಾಡುವುದಕ್ಕಿಂತಲೂ ಮುಂಚಿತವಾಗಿ ನೀವು ಖರೀದಿಸಿದ ಬೀಜದ ಮೊಳಕೆ ಪ್ರಮಾಣ ಎಷ್ಟು ಎಂಬುದನ್ನು ತಿಳಿಯಬಹುದು. ಈ ವಿಧಾನಗಳನ್ನು ನೀವೇ ಅನುಸರಿಸಬಹುದು. ಇದನ್ನು ಪೇಪರ್ ವಿಧಾನ ಮತ್ತು ಮರುಳು ವಿಧಾನದ ಮೂಲಕ ತಿಳಿಯಬಹುದು. ಇದರ ಬಗ್ಗೆ ಮಾಹಿತಿಯನ್ನು ನಿಮ್ಮ ಸಮೀಪದ ಕೃಷಿ ಸಹಾಯಕರಿಂದ ತಿಳಿಯಬಹುದು.
ಈ ಅಂಶಗಳನ್ನು ಅನುಸರಿಸಿದರೆ ಉತ್ತಮ ಗುಣಮಟ್ಟದ ಬಿತ್ತನೇಬೀಜ ಖರೀದಿಸುವುದು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಕೃಷಿಕರು ಪ್ರತಿಯೊಂದು ಹಂತದಲ್ಲಿಯೂ ಮುಂಜಾಗ್ರತೆ ವಹಿಸಬೇಕು. ಒಮ್ಮೆ ಬೀಜ ಖರೀದಿಸಿ ಬಿತ್ತನೆ ಅಥವಾ ನಾಟಿ ಮಾಡಿದ ನಂತರ ಅವುಗಳು ಗುಣಮಟ್ಟದ್ದು ಆಗಿರದಿದ್ದರೆ ಲುಕ್ಸಾನು ಅನುಭವಿಸಬೇಕಾಗುತ್ತದೆ. ಇಂಥ ಸಾಧ್ಯತೆಯನ್ನು ತಪ್ಪಿಸುವುದು ಅಗತ್ಯ