೨೦೦೬. ಕುಮುದ್ವತಿ – ಆರ್ಕಾವತಿ ನದಿಗಳ ಸಂರಕ್ಷಣಾ ಬಳಗದವ್ರು ಬೆಂಗಳೂರಿನಲ್ಲಿ ಮುಂಗಾರು ಮಳೆ ಹಬ್ಬ ಆಯೋಜಿಸಲು ಸಿದ್ಧತೆ ನಡೆಸಿದ್ದೆವು. ಉದ್ಘಾಟನಾ ಸಮಾರಂಭಕ್ಕೆ ಪೂರ್ಣಚಂದ್ರ ತೇಜಸ್ವಿ ಅವರನ್ನು ಕರೆಸಬೇಕು ಎಂಬುದು ಸಮಿತಿ ಒಕ್ಕೂರಲ ಅಪೇಕ್ಷೆಯಾಗಿತ್ತು. ಬೆಳಗ್ಗೆಯಾದ್ರೆ ತೋಟ ಸುತ್ತಲು ಹೋಗ್ತಿರ್ತಾರೆ ಅಂತ ರಾತ್ರಿ ಪೋನ್ ಮಾಡಿದೆ.

ತೇಜಸ್ವಿ ಅವರೇ ಪೋನ್ ಎತ್ತಿಕೊಂಡ್ರು. ನಾನು ಹೀಗೀಗೆ ಅಂತ ವಿವರಿಸಿದೆ “ ಆಗಸ್ಟ್ ತಿಂಗಳಿನಲ್ಲಿ ಎಂಥಾ ಮುಂಗಾರು ಮಳೆ ಹಬ್ಬ ಮಾಡ್ತಿರ್ರಯಾ, ನನಗೆ ಬರೋಕೆ ಆಗೋಲ್ಲ ಮಾರಾಯ, ಭಾರಿ ಕೆಲ್ಸ ಇದೆ. ಒಳ್ಳೆಯ ಕೆಲ್ಸ ಮಾಡಿದ್ದೀರಿ ಮಾಡಿ; ಸಿಟಿಯವ್ರಿಗೆ ಮುಂಗಾರಿನ ಮಹತ್ವ ತಿಳಿಸ್ಬೇಕು” ಅಂತೇಳಿ ಪೋನ್ ಇಟ್ರು.

ಕೃಷಿಕರು – ವಕೀಲರು ಆಗರುವ ಹೆಚ್. ಆರ್. ಜಯರಾಂ ನೇತೃತ್ವದಲ್ಲಿ ಯಶಸ್ವಿಯಾಗಿ ಮುಂಗಾರು ಮಳೆ ಹಬ್ಬ ಆಯ್ತು. ಇದೇ ಸಂದರ್ಭದಲ್ಲಿ ಸಮಿತಿ ನನ್ನ ಸಂಪಾದಕತ್ವದಲ್ಲಿ ಹೊರ ತಂದಿದ್ದ “ಕುಮುದ್ವತಿ” ವಿಶೇಷ ಸಂಚಿಕೆ ಬಿಡುಗಡೆಯೂ ಆಯ್ತು.
ಮುಂಗಾರು ಮಳೆ ಹಬ್ಬ ಯಶಸ್ವಿಯಾದ ಖುಷಿಯಲ್ಲಿ ವಕೀಲ ಕರುಣಾಕರ್ ಮತ್ತು ನಾನು ಚಾರ್ಮಾಡಿಯಲ್ಲಿ ಮಳೆನಡಿಗೆ ಮಾಡುವುದೆಂದು ನಿರ್ಧರಿಸಿದೆವು. ಗೆಳೆಯರಾದ ಪ್ರಕಾಶ್ ನಾಯ್ದು, ಪುಟ್ಟಸ್ವಾಮಿ ನಾವೂ ಬರ್ತೀವಿ ಅಂದ್ರು. ಎಲ್ರೂ ಒಂದೆಡೆ ಸೇರಿ ಹೊರಡುವಷ್ಟೊತ್ತಿಗೆ ಸಂಜೆಯಾಗಿತ್ತು. ಬೇಲೂರಿಗೆ ಹೋಗಿ ರಾತ್ರಿ ಹಾಲ್ಟ್ ಆದೆವು.

ಬೆಳಗ್ಗೆ ಎದ್ದು ಉಜಿರೆಗೆ ಹೋಗುವ ಬಸ್ ಹಿಡಿದು ಕೊಟ್ಟಿಗೆಹಾರ ತಲುಪಿದೆವು. ಅಲ್ಲಿಂದ ನಡಿಗೆ ಶುರುವಾಯ್ತು. ಅಣ್ಣಪ್ಪ ದೇವಸ್ಥಾನದ ಬಳಿ ಬಂದಾಗ ಪ್ರಕಾಶ್ ನಾಯ್ದು, ಪುಟ್ಟಸ್ವಾಮಿ ಕಳಚ್ಕಂಡು ಬಸ್ ಹತ್ತಿದ್ರು. ಕರುಣಾಕರ್, ನಾನು ನಡಿಗೆ ಮುಂದುವರಿಸಿದೆವು.

ಸುಮಾರು ೨೭ ಕಿಲೋ ಮೀಟರ್ ಹಾದಿ. ಬೆಟ್ಟದಿಂದ ಜಿನುಗುವ ನೀರು, ಹಸಿರು, ಆಗಾಗ ಕಾಣಸಿಗುವ ನವಿಲುಗಳು ನೋಡುತ್ತಾ ಅಲ್ಲಲ್ಲಿ ಕೂತು, ಬೆಟ್ಟದ ತಳ ಚಾರ್ಮಾಡಿ ತಲುಪಿದಾಗ ಸೂರ್ಯ ಟಾಟಾ ಹೇಳುವ ಸಮಯ. ಸಿಕ್ಕಾಪಟ್ಟೆ ಸುಸ್ತಾಗಿತ್ತು. ಕಾಫಿ ಕುಡಿಯೋಣ ಅಂತ ಹೋಟೆಲಿಗೆ ಹೋದೆವು. ಮೀನಿನ ಘಮ ಮೂಗಿನ ಹೊರಳೆಗಳನ್ನು ಅರಳಿಸ್ತು. ಎರಡು ಪ್ಲೇಟ್ ಮೀನು ಬಾರಿಸಿದೆವು.

ಉಜಿರೆ ಬಸ್ ಹತ್ತಿದಾಗ ಸಂಜೆ ೭. ಅಲ್ಲಿ ಇಳಿದು ಒಳ್ಳೆಯ ಹೋಟೆಲ್ ಹುಡುಕಿ ರೂಮ್ ಮಾಡುವಷ್ಟರಲ್ಲಿ ಪ್ರಕಾಶ್ ನಾಯ್ದು, ಪುಟ್ಟಸ್ವಾಮಿ ಪ್ರತ್ಯಕ್ಷ. ಅವರಿಬ್ಬರೂ ಅಂದು ರಾತ್ರಿಯೇ ಬೆಂಗಳೂರಿಗೆ ಹೊರಟರು. ನನ್ನದು, ಕರುಣಾಕರ್ ಅವರದು ಇಷ್ಟು ದೂರ ಬಂದಿದ್ದೀವಿ; ವಾಪಸ್ ಬೆಂಗಳೂರಿಗೆ ಹೋಗ್ತಾ ಮೂಡಿಗೆರೆ ಹ್ಯಾಂಡ್ ಪೋಸ್ಟ್ ನಲ್ಲಿ ಇಳಿದು ತೇಜಸ್ವಿ ಅವರನ್ನು ಮಾತನಾಡಿಸಿಕೊಂಡು ಹೋಗೋಣ ಅಂತ ಪ್ಲಾನ್.

ತೇಜಸ್ವಿ ಅವರಿಗೆ ಪೋನಾಯಿಸಿದೆ. ಅವರೇ ಪೋನೆತ್ತಿಕೊಂಡ್ರು. ಏನಯ್ಯ ಅಂದ್ರು, “ಹೀಗೀಗೆ ಟ್ರೆಕ್ಕಿಂಗ್ ಬಂದಿದ್ದೊ, ಉಜಿರೆಯಲ್ಲಿದ್ದೀವಿ, ಹೊತ್ತಾರೆಕೆ ಎದ್ದು ಮೂಡಿಗೆರೆ ಕಡೆ ಬತ್ತೀವಿ, ನಿಮ್ಮನ್ನ ನೋಡ್ಕಂಡು ಹೋಯ್ತಿವಿ” ಅಂದೆ. “ಆಯ್ತು ಬಾ ಇರ್ತೀನಿ” ಅಂದ್ರು.

ಹೊತ್ನಂತೆ ಎದ್ದು ಮೂಡಿಗೆರೆ ಬಸ್ ಹಿಡಿದ್ವಿ. ನಮ್ ದುರಾದೃಷ್ಟಕ್ಕೆ ಆ ಚಾರ್ಮಾಡಿಯ ಕಡಿದು ಕಣಿವೆ ಹಾದಿಯಲ್ಲಿ ಬಸ್ ಚಲಾಯಿಸುತ್ತಿದ್ದ ಕೆ.ಎಸ್.ಆರ್.ಟಿ.ಸಿ. ಡ್ರೈವರ್ ಹೊಸಬರು ಅನ್ಸುತ್ತೆ, ಹೇರ್ ಪಿನ್ ಬೆಂಡುಗಳಲ್ಲಿ ಸರಿಯಾಗಿ ಬಸ್ ಚಲಾಯಿಸಲಾರದೇ ಪದೇಪದೇ ರಿವರ್ಸ್ ತೆಗೆದುಕೊಳ್ತಾ ಇದ್ರು. ಇದ್ರಿಂದ ಪ್ರಯಾಣಿಕರಿಗೆಲ್ಲ ಆತಂಕ. ಒಮ್ಮೆಯಂತೂ ಬಸ್ ಹಿಮ್ಮುಖವಾಗಿ ಜರ್ರನೆ ಜಾರಿದಾಗ ಪ್ರಯಾಣಿಕರ ಜೀವ ಬಾಯಿಗೆ ಬಂದಿತ್ತು. ಕಂಡಕ್ಟರ್ ಬಿರ್ರನೆ ಇಳಿದು ಚಕ್ರಕ್ಕೆ ದಪ್ಪನೆ ಪಟ್ಟಿ ಇಟ್ರು. ಅಂತೂ ಇಂತೂ ಬಸ್ ಬೆಟ್ಟ ಹತ್ತಿತು.

ಮೂಡಿಗೆರೆ ಹ್ಯಾಂಡ್ ಪೋಸ್ಟ್ ನಲ್ಲಿ ಇಳಿದೆವು. ಅಲ್ಲಿಂದ ತುಸು ದೂರ ನಡೆದು ನಿರುತ್ತರದ ಗೇಟ್ ತೆಗೆಯುವಾಗ ತೇಜಸ್ವಿ ಅವರ ಆಪ್ತ ಗೆಳೆಯ ಜೊತೆಗೆ ಅವರ ಕೆಲಸ ಕಾರ್ಯಗಳಲ್ಲಿ ಸಹಾಯಕರು ಆಗಿದ್ದ ರಾಘು ಬಂದ್ರು. ಮೂವರು ತೇಜಸ್ವಿ ಮನೆಗೆ ಅಡಿಯಿರಿಸಿದೆವು.

ತೇಜಸ್ವಿ ಮಹಡಿಯಲ್ಲಿದ್ದರು. ಕೆಳಗೆ ಇಳಿದು ಬಂದವರೆ ʼಹೆಂಗಪ್ಪಾ ಆಯ್ತು ನಿಮ್ಮ ಮುಂಗಾರು ಮಳೆಹಬ್ಬ” ಅಂದ್ರು. ಚೆನ್ನಾಗಾಯ್ತು ಸಾ, ನಿಮ್ಮನ್ನು ಬಾರಿ ನೆನೆಸ್ಕೊಂಡು ಅಂದೆ. ಅವ್ರೆ “ಯಾವ ಹಾದಿಯಲ್ಲಿ ಟ್ರೆಕ್ಕಿಂಗ್ ಹೋಗಿದ್ರಪ್ಪಾ” ಅಂದ್ರು “ಕೊಟ್ಟಿಗೆಹಾರದಿಂದ ಚಾರ್ಮಾಡಿ ತನ್ಕ ರಸ್ತೆಯಲ್ಲಿಯೇ ಹೋಗಿದ್ವಿ ಸಾ” ಅಂದೆ

“ಕಣಿವೆಗೆ ಇಳಿದು ನಡೆಯಬೇಕಿತ್ತು ಕಣ್ರಯ್ಯ, ಈಗ ಅದರ ಸ್ವರೂಪ ನೋಡ್ಬೇಕು, ಎಲ್ಲೆಲ್ಲಿಂದಲೂ ಬಂದವ್ರು ಕಾಡನ್ನೆಲ್ಲ ಬೋಳಿಸಿ ಇಟ್ಟವ್ರೆ. ಹೊರಗಿನಿಂದ ನೋಡೋಕಷ್ಟೆಯಾ ಅದು ಹಸಿರು” ಅಂತೇಳಿ ನಿಟ್ಟುಸಿರು ಬಿಟ್ರು. ನಮ್ಮ ಮಾತುಕತೆಯೆಲ್ಲ ಚಾರ್ಮಾಡಿಯೂ ಸೇರಿದಂತೆ ಪಶ್ಚಿಮಘಟ್ಟದತ್ತಲೇ ಕೇಂದ್ರೀಕೃತವಾಗಿತ್ತು.

ನಮ್ಮ ಮಾತು ಸಾಗುತ್ತಿರುವಾಗಲೇ ರಾಜೇಶ್ವರಿ ಮೇಡಂ, ಖಾರ –ಸಿಹಿ ಜೊತೆ ತಂದ ಕೊಳಗದಷ್ಟುದ್ದ ಇದ್ದ ಲೋಟಗಳಲ್ಲಿ ಕಾಫಿ ಕುಡಿದೆವು. ಇಬ್ಬರಿಗೂ ನಮಸ್ಕರಿಸಿ ಬಂದು ಬೆಂಗಳೂರು ಬಸ್ ಹತ್ತಿದೆವು. ದಾರಿಯುದ್ದಕ್ಕೂ ತೇಜಸ್ವಿ ಹೇಳಿದ ಮಾತುಗಳ ಕುರಿತೇ ಚರ್ಚೆ ಮಾಡುತ್ತಾ ಬಂದೆವು.

ಮುಂದೆ ತೇಜಸ್ವಿ ಪ್ರತಿಷ್ಠಾನದಿಂದಲೇ ಸೋಮನಕಾಡಿಗೆ ಟ್ರೆಕ್ಕಿಂಗ್ ಆಯೋಜಿಸಿದ್ರು. ಬಾಪೂ ದಿನೇಶ್, ಧನಂಜಯ ಜೀವಾಳ ಅವರ ನೇತೃತ್ವ. ಆಳವಾದ ಕಣಿವೆಗೆ ಇಳಿದು ನೋಡಿದ್ರೆ ಎಲ್ಲಿದೆ ಕಾಡು ? ಸುತ್ತಲೂ ಕುರುಚಲು ಕೂದಲಿದ್ದು ಒಳಗೆ ಬೋಳಾಗಿರುವ ಮನುಷ್ಯರ ನೆತ್ತಿಯಂತೆ ಇದೆ ಅಲ್ಲಿನ ಸ್ಥಿತಿ. ಅಭೇಧ್ಯ ಕಾಡೆನ್ನಿಸಿದ ಸೋಮನಕಾಡಿನಲ್ಲಿ ಕಾಡೇ ಇಲ್ಲ. ಅಲ್ಲಿಯ ಸಾವಿರಾರು ಎಕರೆಗೆ ಯಾರ್ಯಾರೋ ಯಜಮಾನರು ! ಪಶ್ಚಿಮಘಟ್ಟ ಹಾದು ಹೋಗಲು ಅವರ ಅನುಮತಿ ಬೇಕು. ಸದಾ ಅಲ್ಲಿ ಬಂದೂಕುಧಾರಿಗಳ ಸರ್ಪಗಾವಲು. ನಮ್ಮ ತಂಡಕ್ಕೂ ಅವರಿಗೂ ಮಾತಿನ ಚಕಮಕಿಯೇ ನಡೆದು ಹೋಯ್ತು.

೨೦೧೨ರ ಮೇ ತಿಂಗಳ ಒಂದು ದಿನ ಧನಂಜಯ ಜೀವಾಳ ಮತ್ತು ನಾನು ಪ್ರಾಣ ಪಣವಾಗಿಟ್ಟು ಮತ್ತೆ ಸೋಮನಕಾಡಿನ ಕಣಿವೆ ಇಳಿದು ಅಲ್ಲೆಲ್ಲ ಕಾಡು ಬೋಳಾಗಿರುವುದರ ಸಚಿತ್ರ ಮಾಹಿತಿ ಸಂಗ್ರಹಿಸಿದೆವು. ವರದಿ ಸಿದ್ಧ ಮಾಡಿ ಕೊಟ್ಟರು ಅದ್ಯಾಕೋ ನಾನು ಆಗ ಕೆಲಸ ಮಾಡುತ್ತಿದ್ದ ಪತ್ರಿಕೆಯಲ್ಲಿ ಆ ವಿಶೇಷ ವರದಿ ಪ್ರಕಟವಾಗಲಿಲ್ಲ !

ಈಗಲೂ ತೇಜಸ್ವಿ ಅವ್ರು ಹೇಳಿದ “ ರೀ ಕುಮಾರ್, ಚಾಮಾರ್ಡಿಯಲ್ಲಿ ಎಲ್ಲಿದೆರೀ ಕಾಡು ? ಎಲ್ಲವನ್ನೂ ಬೋಳಿಸಿ ಹಾಕವ್ರೆ” ಎಂದ ಮಾತುಗಳೇ ಆಗಾಗ ಪ್ರತಿಧ್ವನಿಸುತ್ತವೆ !

Similar Posts

3 Comments

  1. ಒಳ್ಳೆ ಅನುಭವಧ ಬರಹ ಧನ್ಯವಾದಗಳು

  2. ಒ‍ಳ್ಳೆಯ ಬರಹ,

    ನೀವು ಕಾಡಿನ ಕುರಿತು ಬರೆದ ಲೇಖನ ನಿಮ್ಮ ಪತ್ರಿಕೆ ಪ್ರಕಟಿಸದಿದ್ದರೇನಂತೆ ನೀವೇ ಇಲ್ಲಿ ಪ್ರಕಟಿಸಬಹುದಲ್ಲವೇ

    1. ಇಂಥ ವರದಿಗಳು ಬ್ಲಾಗ್‌ ಗಳಲ್ಲಿ ಪ್ರಕಟವಾಗುವುದಕ್ಕಿಂತ ಹೆಚ್ಚು ಪ್ರಸರಣ ಸಂಖ್ಯೆ ಇರುವ ಪತ್ರಿಕೆಗಳಲ್ಲಿ ಪ್ರಕಟವಾದರೆ ಸೂಕ್ತ ಎಂಬ ಅಭಿಪ್ರಾಯವಿತ್ತು

Leave a Reply

Your email address will not be published. Required fields are marked *