ಪ್ರತಿವರ್ಷ ಜುಲೈ ೧ ರಂದು ಕರ್ನಾಟಕದಲ್ಲಿ ಪತ್ರಿಕಾ ದಿನಾಚರಣೆ ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ಕರ್ನಾಟಕದಲ್ಲಿ ಪತ್ರಿಕಾ ಸ್ವಾತಂತ್ರ್ಯ ಎಷ್ಟರ ಮಟ್ಟಿಗಿದೆ ? ರಾಷ್ಟ್ರೀಯ ಮಟ್ಟದಲ್ಲಿ ವಿಚಾರ ಮಾಡುವುದಾದರೆ ಫ್ರೆಂಚ್‌ ಸರ್ಕಾರೇತರ ಸಂಸ್ಥೆ “ರಿಪೋರ್ಟಸ್‌ ವಿಥೌಟ್‌ ಬಾರ್ಡರ್ಸ್” ಪ್ರತಿವರ್ಷ ಬಿಡುಗಡೆ ಮಾಡುವ “ಪ್ರೆಸ್‌ ಫ್ರೀಡಮ್” ವರದಿ ಪ್ರಕಾರ ೧೮೦ ದೇಶಗಳಲ್ಲಿ ೧೬೧ನೇ ಸ್ಥಾನದಲ್ಲಿದೆ. ಪ್ರಸ್ತುತ ವರ್ಷ ೧೫೯ನೇ ಸ್ಥಾನದಲ್ಲಿದೆ.
ಪತ್ರಿಕಾ ಸ್ವಾತಂತ್ರ್ಯದ ವಿಚಾರದಲ್ಲಿ ಭಾರತದ ರಾಜ್ಯಗಳಲ್ಲಿ ಕರ್ನಾಟಕ ಎಷ್ಟನೇ ಸ್ಥಾನದಲ್ಲಿದೆ ? ನನ್ನ ಅರಿವಿಗೆ ಬಂದಂತೆ ಇದರ ಬಗ್ಗೆ ಸಮೀಕ್ಷೆ ಆಗಿಲ್ಲ. ಇದು ಆಗಬೇಕು. ಆದರೆ ನಡೆದಿರುವ ವಿದ್ಯಮಾನಗಳನ್ನು ಗಮನಿಸಿದರೆ ಇಲ್ಲಿಯೂ ಸ್ಥಿತಿ ಶೋಚನೀಯವೇ ಆಗಿದೆ.
ಕರ್ನಾಟಕದ ವರ್ಣರಂಜಿತ ಮುಖ್ಯಮಂತ್ರಿ ಎನಿಸಿಕೊಂಡಿದ್ದ ಅರ್.‌ ಗುಂಡೂರಾವ್‌ ಅವರು ತಮ್ಮ ಅಧಿಕಾರವಧಿಯಲ್ಲಿ “ಪತ್ರಕರ್ತರನ್ನು ಅರಬ್ಬಿ ಸಮುದ್ರಕ್ಕೆ ಎಸೆಯಬೇಕು” ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಅವರ ಮೂಗಿನ ನೇರಕ್ಕೆ ಪತ್ರಿಕಾ ವರದಿಗಳು ಇದ್ದಿದ್ದರೆ ಬಹುಶಃ “ಪತ್ರಕರ್ತರನ್ನು ಹಂಸತೂಲಿಕದಲ್ಲಿಟ್ಟು ತೂಗಬೇಕು” ಎನ್ನುತ್ತಿದ್ದರೋ ಏನೋ ? ಆದರೆ ಪತ್ರಕರ್ತರು ವಸ್ತುನಿಷ್ಠವಾಗಿ ಕೆಲಸ ಮಾಡಿದ್ದ ಕಾರಣದಿಂದಲೇ ಅವರಿಂದ ಮುಖ್ಯಮಂತ್ರಿ ಸ್ಥಾನಕ್ಕೆ ತಕ್ಕುದಲ್ಲದ ಹೇಳಿಕೆ ಬಂತು. ಇವರ ಹೇಳಿಕೆಗಳು, ನಡವಳಿಕೆಗಳು ಮತ್ತು ಸರ್ಕಾರವನ್ನು ನಡೆಸಿದ ರೀತಿಯಿಂದ ಚುನಾವಣೆಯಲ್ಲಿ ಕಾಂಗ್ರೆಸ್‌ ಸೋತಿತು.
ಈ ಬಳಿಕ ಮುಖ್ಯಮಂತ್ರಿ ಗಾದಿಗೇರಿದ ರಾಮಕೃಷ್ಣ ಹೆಗಡೆ, ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದಲ್ಲಿ ಪತ್ರಕರ್ತರ ಕಣ್ಮಣಿಯಾಗಿದ್ದರು. “ಮಿಸ್ಟರ್‌ ಕ್ಲೀನ್”” ಎಂದು ಬಿರುದು ಪಡೆದಿದ್ದರು. ಆದರೆ ಇದು ಹುಸಿ ಎಂಬುದು ಬಲುಬೇಗ ಗೊತ್ತಾಯಿತು. ಸಾಲುಸಾಲು ಹಗರಣಗಳ ಕಾರಣದಿಂದ ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ಕೊಡಬೇಕಾಯಿತು. ಇವರು ಇದಕ್ಕೂ ಮೊದಲು ಕರ್ನಾಟಕ ಶಾಸಕಾಂಗ (ಅಧಿಕಾರಗಳು, ಸವಲತ್ತುಗಳು ಮತ್ತು ವಿನಾಯಿತಿಗಳು) ಮಸೂದೆ, 1988 ಅನ್ನು ಜಾರಿಗೆ ತರಲು ಹೊರಟ್ಟಿದ್ದರು. ಇದು ಪತ್ರಿಕಾ ಸ್ವಾತಂತ್ರ್ಯಕ್ಕೆ ಮರಣ ಶಾಸನ ಬರೆಯುವಂತಿತ್ತು. ಆದರೆ ಅಷ್ಟರಲ್ಲಿ ಅಧಿಕಾರ ತ್ಯಾಗ ಮಾಡಬೇಕಾಯಿತು.
೧೯೯೦ರ ದಶಕದಲ್ಲಿ ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಪತ್ರಕರ್ತ ಕೆಂಚನಹಳ್ಳಿ ಗಂಗಾಧರಮೂರ್ತಿ ಎಂಬುವರ ಕೊಲೆಯಾಯಿತು. ಆದರೆ ಅಪರಾಧಿ ಯಾರು ಎಂಬುದೇ ಸಾಬೀತಾಗಲಿಲ್ಲ.
ನನ್ನ ಅನುಭವ ಹೇಳುವುದಾದರೆ ಖಾಸಗಿ ಸುದ್ದಿ ವಾಹಿನಿಯ ಬಳ್ಳಾರಿ ಬ್ಯುರೋ ಹೆಡ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದಾಗ ನನ್ನ ಮೇಲೆಯೂ ಕೊಲೆ ಯತ್ನ ನಡೆಯಿತು. ೨೦೧೦ರ ಮಾರ್ಚ್‌ ತಿಂಗಳಿನಲ್ಲಿ ಗಣಿ ಅಕ್ರಮಗಳ ಬಗ್ಗೆ ತನಿಖೆ ನಡೆಸಲು ಸರ್ವೇ ಆಫ್‌ ಇಂಡಿಯಾ ಅಧಿಕಾರಿಗಳು ಬಳ್ಳಾರಿಗೆ ಬಂದಿದ್ದರು. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿ ಸನಿಹದಲ್ಲಿಯೇ ಇರುವ ಬಾಲಾ ರೆಸಿಡೆನ್ಸಿಯಲ್ಲಿ ಅಧಿಕಾರಿಗಳ ಸಭೆ ಇತ್ತು. ಈ ಸಂದರ್ಭದಲ್ಲಿ ಕ್ಯಾಮೆರಾಮೆನ್‌ ಜೊತೆ ವರದಿಗೆ ತೆರಳಿದ್ದೆ. ನಂತರ ಪಕ್ಕದಲ್ಲಿಯೇ ಇರುವ ಬೇಕರಿಯಲ್ಲಿ ಕಾಫಿ ಕುಡಿಯಲು ಇತರ ಸುದ್ದಿ ವಾಹಿನಿಗಳ ಪತ್ರಕರ್ತರೊಂದಿಗೆ ತೆರಳಿದ್ದೆ. ಆಗ ಕಾರಿನಲ್ಲಿ ಬಂದ ಗೂಂಡಾಗಳು ಮೊದಲಿಗೆ ನನ್ನ ಮೇಲೆ ತೀವ್ರವಾಗಿ ಹಲ್ಲೆ ನಡೆಸಿದರು.
ಬೆಂಚಿನ ಮೇಲೆ ಕುಳಿತಿದ್ದ ನನ್ನ ಹೊಟ್ಟೆಗೆ ಗೂಂಡಾ ಒಬ್ಬ ಬೇಸ್ ಬಾಲ್‌ ಬ್ಯಾಟಿನಿಂದ ಬಲವಾಗಿ ಹೊಡೆದ. ಮತ್ತೊಬ್ಬ ನನ್ನ ತಲೆಯತ್ತ ಬ್ಯಾಟ್‌ ಬೀಸಿದ. ತಕ್ಷಣ ತಲೆ ತಗ್ಗಿಸಿದರೂ ಅದು ನನ್ನ ನೆತ್ತಿಗೆ ಬಲವಾಗಿ ತಾಕಿತು. ಮೊದಲಿಗೆ ಹೊಡೆದವನು ಮತ್ತೆ ನನ್ನತ್ತ ಬ್ಯಾಟ್‌ ಬೀಸಿದ. ಅದು ನನ್ನ ಭುಜಕ್ಕೆ ಬಿತ್ತು. ಇಷ್ಟಾದರೂ ನೋವು ಸಹಿಸಿಕೊಂಡು ತಲೆಯ ಮೇಲೆ ಎರಡೂ ಕೈಯಿರಿಸಿಕೊಂಡು ಅಲ್ಲಿಂದ ಓಡಿದೆ. ಬೆನ್ನ ಮೇಲೆಯೂ ಏಟುಗಳು ಬಿದ್ದವು.
ಇದೇ ವೇಳೆ ಅಲ್ಲಿದ್ದ ಟಪಾಲ್‌ ಗಣೇಶ್ ಅವರ ಮೇಲೂ ಗೂಂಡಾಗಳು ಹಲ್ಲೆ ನಡೆಸಿದರು. ನಾನು ಕೂಗಿಕೊಂಡು ಓಡುವುದಕ್ಕೂ ಗಣೇಶ್‌ ಅವರ ಹಿರಿಯ ಸಹೋದರ ಸೇರಿದಂತೆ ಅಲ್ಲಿ ಸುತ್ತಮುತ್ತ ನಿಂತವರು ಬೊಬ್ಬೆ ಹೊಡೆಯುತ್ತಾ ಸೇರುತ್ತಿದ್ದಂತೆ ಗೂಂಡಾಗಳು ಬಂದಿದ್ದ ಕಾರಿನಲ್ಲಿ ಪರಾರಿಯಾದರು.
ನನ್ನ ಮೇಲೆಯೂ ಏಕೆ ಹಲ್ಲೆ ನಡೆಯಿತು ಎಂಬ ಪ್ರಶ್ನೆ ಓದುಗರಿಗೆ ಎದುರಾಗಬಹುದು. ಗಣಿ ಅಕ್ರಮಗಳ ಬಗ್ಗೆ ಅತ್ಯಧಿಕ ವರದಿ, ತನಿಖಾ ವರದಿಗಳನ್ನು ಮಾಡಿದ್ದೆ. ಇದರಿಂದಾಗಿ ಸ್ಥಳೀಯ ಬಿಜೆಪಿ ನಾಯಕರ ಅಧೀನದಲ್ಲಿದ್ದ ಕೇಬಲ್ ಟಿವಿ ಸಂಸ್ಥೆ ನಾನು ಕೆಲಸ ಮಾಡುತ್ತಿದ್ದ ವಾಹಿನಿಯ ಪ್ರಸಾರವನ್ನೇ ಸ್ಥಗಿತಗೊಳಿಸಿತ್ತು.
ನನ್ನನ್ನು ಬಳ್ಳಾರಿಯ ವಿಮ್ಸ್‌ ಆಸ್ಪತ್ರೆಗೆ ದಾಖಲಿಸಲಾಯಿತು. ಪೊಲೀಸರು ಬಂದು ಹೇಳಿಕೆ ಪಡೆದರು. ತುಸು ಸುಧಾರಿಸಿಕೊಂಡ ಮೇಲೆ ಕೊಲೆ ಯತ್ನ ನಡೆಸಿದವರ ಮುಖ ಚಹರೆ, ಅವರು ಬಂದ ಕಾರಿನ ಗುರುತುಗಳನ್ನು ಹೇಳಿದೆ. ಆದರೆ ಅದರ ತನಿಖೆ ಏನಾಯಿತೋ ? ಇದುವರೆಗೂ ಹಲ್ಲೆ ಮಾಡಿದವರ ಬಂಧನವಾಗಿಲ್ಲ.
ಇದೇ ರೀತಿ ಬೇರೆಬೇರೆ ಪ್ರಕರಣಗಳಲ್ಲಿ, ಬೇರೆಬೇರೆ ಸ್ಥಳಗಳಲ್ಲಿ ಕರ್ತವ್ಯ ನಿರತ ಪತ್ರಕರ್ತರ ಮೇಲೆ ಹಲ್ಲೆಗಳಾಗಿವೆ. ಆದರೆ ಹಲ್ಲೆ ಮಾಡಿದ ಯಾರೊಬ್ಬರಿಗೂ ಶಿಕ್ಷೆಯಾದ ನಿದರ್ಶನಗಳಿಲ್ಲ.


ವಿಧಾನ ಸಭೆಯ ಸ್ಪೀಕರ್ ಹಾಗೂ ವಿಶೇಷಾಧಿಕಾರಗಳ ಸಮಿತಿಯ ಮುಖ್ಯಸ್ಥ ಕೆ.ಬಿ. ಕೋಳಿವಾಡ್ ಅವರು ತಮ್ಮ ಅಧಿಕಾರವಧಿಯಲ್ಲಿ (ಜುಲೈ ೫, ೨೦೧೬ ರಿಂದ ಮೇ ೧೫, ೨೦೧೮) ಹಿರಿಯ ಪತ್ರಕರ್ತರಾದ ರವಿ ಬೆಳಗೆರೆ, ಅನಿಲ್‌ ರಾಜು ಅವರುಗಳಿಗೆ ಒಂದು ವರ್ಷ ಜೈಲು ಶಿಕ್ಷೆ, ತಲಾ ೧೦, ೦೦೦ ರೂಪಾಯಿ ದಂಡ ವಿಧಿಸಿದ್ದರು. ಈ ಪತ್ರಕರ್ತರ ಮೇಲಿದ್ದ ಆರೋಪ ಎಂದರೆ ಶಾಸಕರ ಸಂಸದೀಯ ಸವಲತ್ತುಗಳ ಬಗ್ಗೆ ಮಾನ ಹಾನಿಕರ ಲೇಖನ ಪ್ರಕಟಿಸಿದ್ದಾರೆ ಎನ್ನುವುದಾಗಿತ್ತು.
ಒಂದು ವೇಳೆ ಪತ್ರಕರ್ತರ ಮೇಲೆ ಆರೋಪಗಳು ಬಂದರೆ ಅದರ ಬಗ್ಗೆ ನ್ಯಾಯಾಲಯದಲ್ಲಿ ವಿಚಾರಣೆ ನಡೆಯಬೇಕು. ಇದರ ಬದಲು ವಿಧಾನಸಭೆಯ ಸ್ಪೀಕರ್‌ ಶಿಕ್ಷೆ ವಿಧಿಸುತ್ತಾರೆ ಎಂದರೆ ಅವರಿಗೆ ಆ ಅಧಿಕಾರ ಹೇಗೆ ಪ್ರದತ್ತವಾಯಿತು ? ಇದರ ಬಗ್ಗೆ ಗಹನವಾದ ಚರ್ಚೆ ಪತ್ರಿಕೆಗಳಾಗಲಿ, ಟಿವಿಗಳಲ್ಲಾಗಲಿ ಆಗಲಿಲ್ಲ.
ಬಿಜೆಪಿ ಸರ್ಕಾರವಿದ್ದ ಅವಧಿಯಲ್ಲಿ (೨೦೧೨) ಆಡಳಿತ ಪಕ್ಷದ ಶಾಸಕರಾಗಿದ್ದ ಲಕ್ಷ್ಮಣ ಸವದಿ, ಸಿಸಿ ಪಾಟೀಲ ಅವರು ಸದನ ನಡೆಯುವಾಗ ಅಶ್ಲೀಲ ಚಿತ್ರಗಳನ್ನು ವೀಕ್ಷಿಸುತ್ತಿದ್ದರು ಎಂಬ ಆರೋಪಕ್ಕೆ ಒಳಗಾದರು. ಸದನದ ಕಲಾಪ ವರದಿ ಮಾಡುತ್ತಿದ್ದ ಖಾಸಗಿ ವಾಹಿನಿಯ ಕ್ಯಾಮೆರಾದಲ್ಲಿ ಈ ಆರೋಪದ ದೃಶ್ಯಗಳು ಸೆರೆಯಾಗಿದ್ದವು. ಇಲ್ಲಿ ಕ್ಯಾಮೆರಾಮೆನ್‌ ತಮ್ಮ ಕರ್ತವ್ಯವನ್ನು ನಿರ್ವಹಿಸಿದ್ದರು.
ಕರ್ನಾಟಕ ವಿಧಾನಸಭೆಗೆ ೨೦೧೩ರಲ್ಲಿ ಚುನಾವಣೆ ನಡೆದು ಕಾಂಗ್ರೆಸ್‌ ಅಧಿಕಾರಕ್ಕೆ ಬಂತು. ಈ ಪಕ್ಷದ ಅಧಿಕಾರವಧಿಯಲ್ಲಿ ಕಾಗೋಡು ತಿಮ್ಮಪ್ಪ, ಕೆ.ಬಿ.ಕೋಳಿವಾಡ್‌,  ವಿಧಾನಸಭೆಯ ಸ್ಪೀಕರ್‌ ಗಳಾಗಿದ್ದರು. ಇವರುಗಳ ಅಧಿಕಾರವಧಿಯಲ್ಲಿ ಖಾಸಗಿ ವಾಹಿನಿಗಳು ಸಹ ಸದನದ ಕಲಾಪವನ್ನು ನೇರ ಪ್ರಸಾರ ಮಾಡುತ್ತಿದ್ದವು. ಪತ್ರಕರ್ತರು ಸದನದ ಪ್ರೆಸ್‌ ಗ್ಯಾಲರಿಗೆ ತಮ್ಮತಮ್ಮ ಲ್ಯಾಪ್‌ ಟಾಪ್‌, ಮೊಬೈಲ್‌ ಪೋನ್‌ ಗಳನ್ನು ತೆಗೆದುಕೊಂಡು ಹೋಗಲು ಅವಕಾಶವಿತ್ತು.
೨೦೧೮ರಲ್ಲಿ ರಚಿತವಾದ ಕಾಂಗ್ರೆಸ್‌, ಜೆಡಿಎಸ್‌ ಮೈತ್ರಿ ಸರ್ಕಾರದ ಅವಧಿಯಲ್ಲಿ ಕೆ.ಆರ್.‌ ರಮೇಶ್‌ ಕುಮಾರ್‌ ಅವರು ಸದನದ ಸ್ಪೀಕರ್‌ ಆಗಿದ್ದರು. ಆಗಲೂ ಖಾಸಗಿ ವಾಹಿನಿಗಳ ನೇರ ಪ್ರಸಾರಕ್ಕೆ ಅವಕಾಶವಿತ್ತು. ಲ್ಯಾಪ್‌ ಟಾಪ್‌, ಮೊಬೈಲ್‌ ಪೋನ್‌ ಗಳನ್ನು ಪ್ರೆಸ್‌ ಗ್ಯಾಲರಿಗೆ ತೆಗೆದುಕೊಂಡು ಹೋಗಬಹುದಾಗಿತ್ತು.
ಕಾಂಗ್ರೆಸ್-‌ ಜೆಡಿಎಸ್‌ ಸಮ್ಮಿಶ್ರ ಸರ್ಕಾರ ೨೦೧೯ರಲ್ಲಿ ಪತನವಾಯಿತು. ಈ ನಂತರ ಬಿಜೆಪಿ, ಸರ್ಕಾರ ರಚಿಸಿತು. ಈ ಅವಧಿಯಲ್ಲಿ ವಿಧಾನಸಭೆಯ ಸ್ಪೀಕರ್‌ ಆದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ವಿಧಾನಸಭೆ ನಡೆಯುವಾಗ ಖಾಸಗಿ ವಾಹಿನಿಗಳು ನೇರವಾಗಿ ಕಲಾಪ ವರದಿ ಮಾಡುವುದನ್ನು ನಿರ್ಬಂಧಿಸಿದರು. ಸರ್ಕಾರಿ ವಾಹಿನಿ ಮಾಡುವ ಪ್ರಸಾರದ ಲಿಂಕ್ ಪಡೆದುಕೊಂಡು ಮರು ಪ್ರಸಾರ ಮಾಡುವ ದುಸ್ಥಿತಿ ಖಾಸಗಿ ವಾಹಿನಿಗಳಿಗೆ ಬಂತು.


ಖಾಸಗಿ ವಾಹಿನಿಗಳ ಕ್ಯಾಮೆರಾಗಳಿಗೆ ಅಲ್ಲದೇ ಪತ್ರಕರ್ತರ ಲ್ಯಾಪ್‌ ಟಾಪ್‌, ಮೊಬೈಲ್‌ ಪೋನ್‌ ಗಳಿಗೂ ನಿರ್ಬಂಧ ವಿಧಿಸಲಾಯಿತು. ಪತ್ರಕರ್ತರು ಕ್ಷಣಕ್ಷಣಕ್ಕೂ ತಮ್ಮ ಮಾಧ್ಯಮ ಸಂಸ್ಥೆಗಳಿಗೆ ಸದನದ ಕಲಾಪಗಳ ಅಪ್‌ ಡೇಟ್ ಕೊಡಬೇಕು. ಆದರೆ ಯಾವುದೇ ಎಲೆಕ್ಟ್ರಾನಿಕ್‌ ಉಪಕರಣ ತೆಗೆದುಕೊಂಡು ಹೋಗಲು ಅವಕಾಶವಿಲ್ಲದ ಕಾರಣ ಸದನದ ಹೊರಗೆ ಟಿವಿ ಇರುವಲ್ಲಿ ಕುಳಿತು ಸರ್ಕಾರಿ ವಾಹಿನಿ ಪ್ರಸಾರ ನೋಡುತ್ತಾ ವರದಿ ಮಾಡಬೇಕಾದ ಸ್ಥಿತಿ ಬಂತು.
ಸದನ ನಿರ್ವಹಣೆ ಮಾಡಬೇಕಾದ ಜವಾಬ್ದಾರಿ ವಿಧಾನಸಭೆ ಸಭಾಧ್ಯಕ್ಷರಿಗಿದೆ ನಿಜ. ಆದರೆ ಖಾಸಗಿ ವಾಹಿನಿಗಳ ಕ್ಯಾಮೆರಾಗಳಿಗೆ ಪತ್ರಕರ್ತರ ಮೊಬೈಲ್ ಪೋನ್‌ ಗಳಿಗೆ ಏಕೆ ನಿರ್ಬಂಧ ?
ಈ ರೀತಿಯ ಅನೇಕ ಪ್ರಶ್ನೆಗಳನ್ನು ಎತ್ತುತ್ತಾ ಹೋಗಬಹುದು. ಆದರೆ ಉತ್ತರ ? ನಿಜಕ್ಕೂ ಪತ್ರಿಕಾ ಸ್ವಾತಂತ್ರ್ಯವಿದೆಯೇ ಎಂಬುದನ್ನು ಮತ್ತೆಮತ್ತೆ ಕೇಳಬೇಕು. ಪತ್ರಿಕಾ ದಿನಾಚರಣೆ ಇದಕ್ಕೊಂದು ಸೂಕ್ತ ಸಂದರ್ಭ

Similar Posts

1 Comment

  1. Really a topic to rethink. As a reader we too has to have the freedom to say what we expect from a newspaper.. We are not interested to read birthday or congratulating the winner of a politician.. We are really keen to know the development from particular politician or gram panchayat regarding using our tax money.
    Thank you

Leave a Reply

Your email address will not be published. Required fields are marked *