ಬಳ್ಳಾರಿಯ ಕಬ್ಬಿಣದ ಅದಿರಿಗೆ ಅತೀಹೆಚ್ಚಿನ ಬೆಲೆ, ಇದೇ ಕಾಲದಲ್ಲಿ ಪರಸ್ಪರ ಸಂಗಾತಿಗಳಾದ, ಒಂದೇ ನಗರದ ಮೂವರು ರಾಜ್ಯ ಸರ್ಕಾರದ ಕ್ಯಾಬಿನೆಟ್ ನಲ್ಲಿ ಪವರ್ ಪುಲ್ ಖಾತೆಗಳನ್ನು ಹೊಂದಿ ಅತೀ ಪವರ್ ಪುಲ್ ಸಚಿವರುಗಳಾಗಿದ್ದ ಕಾಲಘಟ್ಟದಲ್ಲಿ ನಾನೂ ಬಳ್ಳಾರಿಯಲ್ಲಿ ಪತ್ರಕರ್ತನಾಗಿದ್ದೆ. ಬಳ್ಳಾರಿ ನನಗೆ ಸಿಹಿ-ಕಹಿ ನೆನಪುಗಳನ್ನು ನೀಡಿದೆ. ಆ ನೆನಪುಗಳ ಬಗ್ಗೆ ಬರೆಯಿರಿ ಎಂದು ಗೆಳೆಯರು ಮತ್ತೆಮತ್ತೆ ಒತ್ತಾಯ ಮಾಡುತ್ತಲೇ ಇದ್ದರು. ಈ ಹಿನ್ನೆಲೆಯಲ್ಲಿ ಬಳ್ಳಾರಿ ನೆನಪುಗಳು ಸರಣಿ ನಿಮ್ಮ ಮುಂದೆ….
‘ರಿಪಬ್ಲಿಕ್ ಆಫ್ ಬಳ್ಳಾರಿ’ ಈ ಮಾತು ಕೇಳಿದ್ರೆ ನಿಮಗೆ ಆಶ್ಚರ್ಯ ಆಗಬಹುದು. ಆದರೆ ಇದು ಅಕ್ಷರಶಃ ಸತ್ಯ. ಮೊನ್ನೆ ಮೊನ್ನೆಯವರೆಗೂ ದೇಶದ ಕಾನೂನುಗಳು ಇಲ್ಲಿ ಅನ್ವಯಿಸುವುದಿಲ್ಲ ಎಂಬ ವಾತಾವರಣ ಬಳ್ಳಾರಿಯಲ್ಲಿತ್ತು. ಗಣಿ ಮಾಫಿಯಾ ಇಂಥ ದುಸ್ಥಿತಿಯನ್ನು ನಿರ್ಮಾಣ ಮಾಡಿದೆ. ಇಲ್ಲಿ ನ್ಯಾಯಾಂಗ-ಕಾರ್ಯಾಂಗ-ಸರಕಾರ ಎಂಬ ಯಾವ ಪದಗಳಿಗೂ ಅರ್ಥವಿಲ್ಲದಂತಾಗಿ ಗಣಿ ಮಾಫಿಯಾದ ಮಾತೇ ಅಂತಿಮ ಎಂಬ ಪರಿಸ್ಥಿತಿ ನಿರ್ಮಾಣವಾಗಿತ್ತು. ಇತ್ತು ಅಂದ್ರೆ ಈಗ ಅಂಥ ವಾತಾವರಣ ನಿವಾರಣೆಯಾಗಿದೆಯೇ ಎಂದು ನೀವು ಪ್ರಶ್ನಿಸುತ್ತೀರೆಂದು ನನಗೆ ಗೊತ್ತು !. ಈ ಮಾತಿಗೆ ಉತ್ತರ, ಇದು ನಿವಾರಣೆಯಾಗಿದೆ ಎಂಬುದು ‘ಅರ್ಧ ಸತ್ಯ’ ಮಾತ್ರ ! ಇಂಥ ಬಳ್ಳಾರಿಯಲ್ಲಿ ಮಾಧ್ಯಮಗಳು ಅದರಲ್ಲಿಯೂ ಟಿವಿ ಮಾಧ್ಯಮಗಳು ಭಾರಿ ಸಂಕಷ್ಟ ಎದುರಿಸುತ್ತಿವೆ.
ನಾನು ಬಳ್ಳಾರಿಗೆ ವರ್ಗಾವಣೆಯಾಗಿ ಹೋದ ಹೊಸತು. ಸಚಿವ ಜನಾರ್ದನ ರೆಡ್ಡಿ ‘ಕುಟೀರ’( ಇದು ಪೂರ್ಣ ಹವಾನಿಯಂತ್ರಿತ, ಅದ್ದೂರಿ ಪೀಠೋಕರಣಗಳು, ಗುಪ್ತ ಕ್ಯಾಮೆರಾಗಳಿಂದ ಸಜ್ಜಾಗಿದೆ. ಆದರೆ ಹೆಸರಷ್ಟೆ ಕುಟೀರ)ದಲ್ಲಿ ಪತ್ರಿಕಾಗೋಷ್ಠಿ ಇಟ್ಟುಕೊಂಡಿದ್ದಾರೆ’ ಎಂದು ಜನಾರ್ದನ ರೆಡ್ಡಿ ಆಪ್ತ ಸಹಾಯಕರಿಂದ ಪೋನ್ ಬಂತು. ವಾಚ್ ನೋಡಿಕೊಂಡೆ. ಪತ್ರಿಕಾಗೋಷ್ಠಿ ಇಟ್ಟುಕೊಂಡಿದ್ದ ಸಮಯಕ್ಕೆ ಇನ್ನೊಂದು ಇಪ್ಪತ್ತು ನಿಮಿಷವಿತ್ತು. ತುರ್ತು ವಿಷಯವಿರಬೇಕು ಎಂದುಕೊಂಡು ಕೂಡಲೇ ಹೊರಟು ಸ್ಥಳ ತಲುಪಿದೆ. ಅಷ್ಟರಲ್ಲಾಗಲೇ ಬಳ್ಳಾರಿಯ ಮಾಧ್ಯಮ ಮಿತ್ರರೆಲ್ಲ ಬಂದಿದ್ದರು. ಕ್ಯಾಮೆರಾಮನ್ ಗಳು ಸಜ್ಜಾದರು. ಅರ್ಧ ತಾಸಾಯಿತು, ಒಂದು ತಾಸಾಯಿತು. ರೆಡ್ಡಿ ಬರುವ ಸೂಚನೆ ಕಾಣಲಿಲ್ಲ. ಅಂದು ಇನ್ನೂ ಮೂರು ಅಸೈನ್ ಮೆಂಟ್ ಗಳಿದ್ದವು. ಹೊರಟು ಬಿಡೋಣವೆಂದರೆ ಸಚಿವರು ಎಂಥ ಮಹತ್ವದ ವಿಷಯ ಹೇಳುತ್ತಾರೋ; ಇಂಥ ಸುದ್ದಿ ತಪ್ಪಿ ಹೋದರೆ ಎಂಬ ಆತಂಕ. ಅಂತೂ ಸಚಿವ ಜನಾರ್ದನ ರೆಡ್ಡಿ ನಿಧಾನವಾಗಿ ನಡೆದು ಬಂದು ಮುಗಳ್ನಗುತ್ತಾ-ಕ್ರಾಪು ಸರಿಪಡಿಸಿಕೊಳ್ಳುತ್ತಾ ಕುಳಿತರು.
ಪತ್ರಕರ್ತರ ಧಾವಂತಗಳು ಅವರಿಗೆ ಅರ್ಥವಾದಂತೆ ಕಾಣಲಿಲ್ಲ. ಯಾವುದೋ ಮಹತ್ವವಿಲ್ಲದ ವಿಷಯ ಪ್ರಸ್ತಾಪಿಸಿದ ನಂತರ ಕುಮಾರ ಸ್ವಾಮಿ, ದೇವೇಗೌಡರ ಮೇಲೆ ವಾಗ್ದಾಳಿ ಶುರು ಮಾಡಿದರು. ಅವರು ಪತ್ರಿಕಾಗೋಷ್ಠಿ ಕರೆದಿದ್ದ ವಿಷಯಕ್ಕೂ ಇದಕ್ಕೂ ಕಿಂಚಿತ್ತೂ ಸಂಬಂಧವೇ ಇರಲಿಲ್ಲ. ನಾನು ಇದನ್ನು ನೇರವಾಗಿ ಹೇಳಿ ‘ನಿಮಗೆ ಕುಮಾರ ಸ್ವಾಮಿ-ದೇವೇಗೌಡರ ಮೇಲೆ ಇರುವ ದ್ವೇಷ ನಿಮ್ಮ ಉದ್ಯಮದ ಕಾರಣದಿಂದಲೋ ಅಥವಾ ರಾಜಕೀಯವಾಗಿಯೋ ಅಥವಾ ಸೈದ್ದಾಂತಿಕ ಕಾರಣದಿಂದಲೋ’ ಎಂದು ಕೇಳಿದೆ. ‘ಮೂರು ಕಾರಣದಿಂದಲೂ ಅವರನ್ನು ದ್ವೇಷಿಸುತ್ತೇನೆ’ ಎಂಬ ಉತ್ತರ ಬಂತು. ಇದು ಪ್ರಸ್ತಾಪಿಸಲು ಕಾರಣವೇನೆಂದರೆ ಇದು ನನ್ನ ಮತ್ತು ಜನಾರ್ದನ ರೆಡ್ಡಿ ಮೊದಲ ಮುಖಾಮುಖಿ.
ಈ ನಂತರ ಪದೇಪದೇ ಮುಖಾಮುಖಿಯಾಗುವ ಸಂದರ್ಭ ಬರತೊಡಗಿತು. ನಾನು ನೀಡುತ್ತಿದ್ದ ವರದಿಗಳಿಂದ ‘ಸಾಹೇಬರು ಗರಂ ಆಗಿದ್ದಾರೆ’ ಎಂಬ ಮಾಹಿತಿ ಬರತೊಡಗಿತು. ಇದು ಎಷ್ಟರ ಮಟ್ಟಿಗೆಂದರೆ ನಾನು ಕೆಲಸ ಮಾಡುತ್ತಿದ್ದ ‘ಸುವರ್ಣ ನ್ಯೂಸ್’ ಚಾನಲ್ ಕಟ್ ಮಾಡುವ ಹಂತದವರೆಗೆ ಹೋಯಿತು. ಸುಪ್ರೀಮ್ ಕೋರ್ಟ್ ತೀರ್ಪು ಆಧರಿಸಿ ಅಕ್ರಮ ಗಣಿಗಾರಿಕೆ ಕುರಿತು ಎಕ್ಸಕ್ಲೂಸಿವ್ ಸುದ್ದಿ ನೀಡಿದ್ದೆ. ಇದು ನ್ಯೂಸ್ ಬುಲೆಟಿನ್ ಗಳಲ್ಲಿ ಪ್ರಮುಖವಾಗಿ ಪ್ರಸಾರವಾಗತೊಡಗಿತು. ಈ ವರದಿ ಪ್ರಸಾರವಾದ ಮುಕ್ಕಾಲು ಗಂಟೆ ನಂತರ ಬಳ್ಳಾರಿಯ ಸಾರ್ವಜನಿಕರಿಂದ ಪೋನುಗಳ ಮೇಲೆ ಪೋನು. ‘ ನಿಮ್ಮ ಚಾನಲ್ ಬರುತ್ತಿಲ್ಲ ಕಣ್ರಿ’ ನನಗೆ ಆಶ್ಚರ್ಯವಾಯಿತು. ಬಹುಶಃ ಟಿವಿ ಕೇಬಲ್ ರಿಪೇರಿಯಿರಬೇಕು ಅಥವಾ ಸ್ಥಳೀಯ ಕೇಬಲ್ ಪ್ರಸಾರ ಕೇಂದ್ರದಲ್ಲಿ ಮತ್ಯಾವುದೋ ತಾಂತ್ರಿಕ ಅಡಚಣೆಯಿರಬೇಕು ಎಂದು ಕೊಂಡೆ. ಪೋನ್ ಮಾಡಿದವರಿಗೂ ಇದೇ ಉತ್ತರ ನೀಡಿದೆ. ಆದ್ರೆ ಅವರು ‘ ನಿಮ್ಮ ಟಿವಿ ಚಾನಲ್ ಒಂದನ್ನು ಬಿಟ್ಟು ಎಲ್ಲ ಚಾನಲ್ ಗಳು ಬರುತ್ತಿವೆ’ ಎಂದರು. ಅಷ್ಟರಲ್ಲಿ ಕೊಪ್ಪಳ ವರದಿಗಾರ ಪೋನ್ ಮಾಡಿ ‘ ಇಲ್ಲಿ ಚಾನಲ್ ಬರುತ್ತಿಲ್ಲ. ಏನಾಗಿರಬಹುದು’ ಎಂದರು. ನಾನು ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲೆಗಳ ನ್ಯೂಸ್ ಬ್ಯೂರೋ ಚೀಫ್ ಆಗಿದ್ದ ಕಾರಣ ಅವರು ನನ್ನಿಂದ ಮಾಹಿತಿ ಬಯಸಿದ್ದರು. ಗದಗ-ರಾಯಚೂರು ಭಾಗಗಳಲ್ಲಿಯೂ ಚಾನಲ್ ಕಟ್ ಆಗಿತ್ತು. ವಿಷಯ ಕೆದಕಿದಾಗ ಜನಾರ್ದನ ರೆಡ್ಡಿ ಒಡೆತನದ ಸಿಟಿ ಕೇಬಲ್’ ತನ್ನ ಕೇಬಲ್ ಜಾಲವಿರುವ ಜಿಲ್ಲೆಗಳಲ್ಲೆಲ್ಲಾ ಚಾನಲ್ ಕಟ್ ಮಾಡಿದ್ದಾರೆ ಎಂದು ತಿಳಿಯಿತು. ಇದು ಜನಾರ್ದನ ರೆಡ್ಡಿ ಸೂಚನೆ ಮೇರೆಗೆ ಆಗಿತ್ತು.
ಆ ದಿನವೇ ಜನಾರ್ದನ ರೆಡ್ಡಿಗೆ ಪರಿಚಯವಿದ್ದ ಬೆಂಗಳೂರಿನ ನನ್ನ ಸಹೋದ್ಯೋಗಿ ಗೆಳೆಯರು ಪೋನ್ ಮಾಡಿ ಕಾರಣ ಕೇಳಿದಾಗ ‘ನಾನ್ಯಾರು ಗೊತ್ತ-ಹಾಗೆ-ಹೀಗೆ’ ಎಂದು ರೆಡ್ಡಿ ತಾರಕ ಸ್ವರದಲ್ಲಿ ಕೂಗಾಡಿದ್ದಾರೆ. ದಿನಗಳು ಉರುಳುತ್ತಾ ಹೋದವು. ತಿಂಗಳು ಸಮೀಪಿಸಿತು. ಚಾನಲ್ ಪ್ರಸಾರವಾಗಲಿಲ್ಲ. ಈ ಮಧ್ಯೆ ಪತ್ರಿಕಾಗೋಷ್ಠಿಯೊಂದು ಮುಗಿದ ನಂತರ ನನ್ನ ಸಹ ವರದಿಗಾರ ಈ ವಿಷಯ ಪ್ರಸ್ತಾಪಿಸಿ ಚಾನಲ್ ಮುಖ್ಯಸ್ಥರೊಂದಿಗೆ ಮಾತನಾಡಿ ಎಂದು ಪೋನ್ ಕೊಡಲು ಹೋದಾಗ ರೆಡ್ಡಿ ಸಾಹೇಬರು ಭಾರಿ ಸಿಟ್ಟಾಗಿ ‘ನಾನ್ಯಾರು ತೋರಿಸುತ್ತೇನೆ’ ಎಂದರಂತೆ !
ಟಿ.ವಿ. ಚಾನಲ್ ಗಳು ಟಿ. ಆರ್.ಪಿ. ಗಾಗಿ ಕೇಬಲ್ ನೆಟ್ ವರ್ಕ್ ಜಾಲವನ್ನೆ ಅವಲಂಬಿಸಿರುತ್ತವೆ. ಸದ್ಯಕ್ಕೆ ಈ ನಿಟ್ಟಿನಲ್ಲಿ ಡಿಷ್ ಅಂಟೆನಾ (ಡಿ.ಟಿ. ಎಚ್.) ಪರಿಗಣಿತವಾಗುತ್ತಿಲ್ಲ. ಆದ್ದರಿಂದ ಬೆಂಗಳೂರು ಕಚೇರಿಯಿಂದಲೂ ಸಿಟಿ ಕೇಬಲ್ ಮುಖಾಂತರ ಚಾನಲ್ ಪ್ರಸಾರವಾಗುವಂತೆ ಮಾಡಲು ಪ್ರಯತ್ನಗಳು ನಡೆಯತೊಡಗಿದವು. ಬಳ್ಳಾರಿಯಲ್ಲಿ ಆಗ ಎರಡು ಕೇಬಲ್ ನೆಟ್ ವರ್ಕ್ ಗಳು. ಒಂದು ‘ಅಮ್ಮಾ ಕೇಬಲ್’ ಇದು ಮಾಜಿ ಸಚಿವ ಕಾಂಗ್ರೆಸಿನ ಮುಂಡ್ಲೂರು ದಿವಾಕರ್ ಬಾಬು ಅವರ ಬಳಗದ್ದು. ಮತ್ತೊಂದು ಜನಾರ್ದನ ರೆಡ್ಡಿ ಮಾಲೀಕತ್ವದ ‘ಸಿಟಿ ಕೇಬಲ್’ ಬಳ್ಳಾರಿ ಸಿಟಿ ಮತ್ತು ಅದರ ಅಂಚಿನ ಗ್ರಾಮಗಳಲ್ಲಿ ಶೇಕಡ 75 ರಷ್ಟು ಅಮ್ಮಾ ಕೇಬಲ್ ಜಾಲ, ಉಳಿದಂತೆ ಗದಗ ಜಿಲ್ಲೆಯವರಿಗೂ ಸಿಟಿ ಕೇಬಲ್ ವ್ಯಾಪ್ತಿ.
ಆಗ ‘ಸುವರ್ಣ ನ್ಯೂಸ್ ಚಾನಲ್ ಅಮ್ಮಾ ಕೇಬಲ್ ನಲ್ಲಿ ಮೈನ್ ಬ್ಯಾಂಡ್ ನಲ್ಲಿ ಪ್ರಸಾರತ್ತಿರಲಿಲ್ಲ. 67 ನೇ ಪ್ಲೇಸ್ ಮೆಂಟಿನಲ್ಲಿತ್ತು. ಸಿಟಿ ಕೇಬಲ್ ನಲ್ಲಿ ಪ್ರಸಾರ ಕಟ್ಟಾದ ನಂತರ ಇವರು ಮೈನ್ ಬ್ಯಾಂಡಿನಲ್ಲಿ ಚಾನಲ್ ನೀಡತೊಡಗಿದರು. ನಾನು ಕೆಲಸ ಮಾಡುತ್ತಿದ್ದ ಚಾನಲ್ ಕಟ್ಟಾದ ವಿಷಯ ಹೀಗಾದರೆ ಮಾಜಿ ಮುಖ್ಯಮಂತ್ರಿ ಕುಮಾರ ಸ್ವಾಮಿ ಮಾಲೀಕತ್ವದ ಚಾನಲ್ ಅನ್ನು 2010 ರವರೆಗೂ ಸಿಟಿ ಕೇಬಲ್ ನಲ್ಲಿ ಕೊಟ್ಟಿರಲಿಲ್ಲ !
ಬಳ್ಳಾರಿಯಲ್ಲಿ ಚಾನಲ್ ಬಂದ್ ಆಗಿದ್ದರೂ ಗಣಿಗಾರಿಕೆ, ಸಿರಿವಾರ-ಚಾಗನೂರು ರೈತ ಹೋರಾಟದ ವರದಿಗಳನ್ನು ಕಳುಹಿಸುವುದನ್ನು ನಿಲ್ಲಿಸಲಿಲ್ಲ. ಅಂತೂ ಒಂದು ದಿನ ಚಾನಲ್ ಪ್ರಸಾರವಾಗತೊಡಗಿತು. ಅದೂ ಕಡೆಕಡೆಯ ಪ್ಲೇಸ್ ಮೆಂಟಿನಲ್ಲಿ. ಇದರಿಂದ ಟಿವಿಗಳಲ್ಲಿ ಸ್ಪಷ್ಟವಾದ ಚಿತ್ರ ಮೂಡುತ್ತಿರಲಿಲ್ಲ. ಇಂಥ ಕಹಿ ಅನುಭವ ಬಳ್ಳಾರಿಯಲ್ಲಿ ಬಹುತೇಕ ಚಾನಲ್ ಗಳಿಗೆ ಆಗಿದೆ. ಅಲ್ಲಿ ತೆಲುಗು ಚಾನಲ್ ಗಳನ್ನು ನೋಡುವವರೂ ಹೆಚ್ಚಿದ್ದಾರೆ. ತಮ್ಮ ವಿರುದ್ಧದ ಸುದ್ದಿಗಳನ್ನು ಪ್ರಸಾರ ಮಾಡುವಂಥ ತೆಲುಗು ಚಾನಲ್ ಗಳ ಪ್ರಸಾರ ಅಲ್ಲಿ ದೂರದ ಮಾತು.
ಬಳ್ಳಾರಿ ಪರಿಸ್ಥಿತಿ ಈಗ ಹೇಗಿರಬಹುದು ಎಂದು ಯೋಚಿಸುತ್ತಿದ್ದೀರಾ… ಅಂಥಾ ಮಹತ್ತರ ಬದಲಾವಣೆ ಏನೂ ಆಗಿಲ್ಲ. ಜಿಲ್ಲೆಯಲ್ಲಿ ಹರಿದು ಹೋಗುವ ತುಂಗಾಭದ್ರೆಯಲ್ಲಿ ಬಹಳಷ್ಟು ಬಾರಿ ಹೊಸನೀರು ಹರಿದು ಹೋಗಿರಬಹುದು ಆದರೆ ಆಂತರ್ಯದ ಬಳ್ಳಾರಿ ಮಾತ್ರ ಇನ್ನೂ ಹಾಗೆ ಇದೆ ಅನ್ನುತ್ತಾರೆ ಬಲ್ಲವರು… ಸಂಪೂರ್ಣ ಬದಲಾವಣೆ ಯಾವಾಗ..? ಕಾಲವೇ ಉತ್ತರಿಸಬೇಕು.