ಭಾರತದಲ್ಲಿ ಆಕಾಶವಾಣಿಗೆ 1927 ಜುಲೈ 23 ಪ್ರಮುಖ ದಿನ. ಅಂದು ಭಾರತದ ಪ್ರಮುಖ ಆಕಾಶವಾಣಿ ಮುಂಬಯಿ ಕೇಂದ್ರವನ್ನು ಅಂದಿನ ವೈಸರಾಯ್ ಲಾರ್ಡ್ ಇರ್ವಿನ್ ಉದ್ಘಾಟಿಸಿದರು. 1977ರಲ್ಲಿ ಆಕಾಶವಾಣಿಯ ಅರ್ಧಶತಮಾನೋತ್ಸವ ಆಚರಿಸಲಾಯಿತು. ಆದರೆ ನಿಜವಾಗಿ ಪ್ರಸಾರ ಆರಂಭವಾದದ್ದು 1926ರಲ್ಲಿ, 1927ರಲ್ಲಿ ಅಲ್ಲ ಎಂಬ ಅಭಿಪ್ರಾಯವೂ ಇದೆ.
ಆಗಿನ ಕಾಲದ ಪತ್ರಿಕಾ ವರದಿಗಳು ಇದರ ಬಗ್ಗೆ ಅಲ್ಪಸ್ವಲ್ಪ ಬೆಳಕು ಚೆಲ್ಲಿವೆ. ಇಂಡಿಯನ್ ಸ್ಟೇಟ್ಸ್ ಮತ್ತು ಈಸ್ಟರ್ನ್ ಏಜೆನ್ಸಿ ಲಿಮಿಟೆಡ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಎಫ್.ಇ. ರೋಷರ್ ಅವರಿಗೆ ಪ್ರಸಾರ ವ್ಯವಸ್ಥೆಯಲ್ಲಿ ಆಸಕ್ತಿ. ತಮ್ಮ ಬಾನುಲಿ ಪ್ರಸಾರ ಸೇವೆಯನ್ನು ಸ್ಥಾಪಿಸಲು ಅವರು ಭಾರತದಲ್ಲಿದ್ದ ಬ್ರಿಟಿಷ್ ಸರ್ಕಾರದಿಂದ ಅನುಮತಿ ಆಶಿಸಿದರು (1922). ಕೆಲವು ತಿಂಗಳುಗಳ ಬಳಿಕ ದೆಹಲಿಯಲ್ಲಿ ಪ್ರಸಾರ ಸಮ್ಮೇಳನ ನಡೆಯಿತು. ಅಲ್ಲಿ ಕಲ್ಕತ್ತಾ ಕೇಂದ್ರದಿಂದ ಆಕಾಶವಾಣಿ ಪ್ರಸಾರಕ್ಕೆ ಒಪ್ಪಿಗೆ ನೀಡಲಾಯಿತು.
ರೇಡಿಯೊ ಕ್ಲಬ್ ಆಫ್ ಬೆಂಗಾಲ್ ಸಹಕಾರದೊಡನೆ 1923 ನವೆಂಬರ್‍ನಲ್ಲಿ ಮೊದಲ ಕಾರ್ಯಕ್ರಮ ಪ್ರಸಾರವಾಯಿತು. ಹಾಗೆಯೇ ಬಾಂಬೆ ರೇಡಿಯೊ ಕ್ಲಬ್ 1924 ಜೂನ್‍ನಲ್ಲಿ ತನ್ನ ಪ್ರಸಾರ ಆರಂಭಿಸಿತು. ಈ ಎರಡೂ ಪ್ರಸಾರ ಯಂತ್ರಗಳನ್ನು ಮಾರ್ಕೋನಿ ಕಂಪನಿ ಎರವಲಾಗಿ ನೀಡಿತ್ತು. ಇಂಥ ಸಣ್ಣ ಪ್ರಸಾರ ಕೇಂದ್ರಗಳು ಮದರಾಸು, ಕರಾಚಿ ಮತ್ತು ರಂಗೂನ್ ಪಟ್ಟಣಗಳಲ್ಲಿ ನೆಲೆಗೊಂಡವು.
ಇವೆಲ್ಲಕ್ಕೂ ಮುನ್ನ ಪ್ರಾಯೋಗಿಕ ಪ್ರಸಾರವೊಂದು ನಡೆದಿತ್ತು. ಅಂಚೆ ಮತ್ತು ತಂತೀ ಇಲಾಖೆಯ ಸಹಕಾರದೊಡನೆ ಮುಂಬಯಿ ನಗರದ ಟೈಮ್ಸ್ ಆಫ್ ಇಂಡಿಯ ಪತ್ರಿಕೆ ತನ್ನ ಕಛೇರಿಯಿಂದ ಗವರ್ನರ್ ಸರ್ ಜಾರ್ಜ್ ಲಾಯ್ಡ್ ಕೇಳಲು ಅನುವಾಗುವಂತೆ ಪುಣೆ ನಗರದಲ್ಲಿ ವಿಶೇಷ ಸಂಗೀತ ಕಾರ್ಯಕ್ರಮವನ್ನು 1921 ಆಗಸ್ಟ್ ತಿಂಗಳಿನಷ್ಟು ಹಿಂದೆಯೇ ಪ್ರಸಾರ ಮಾಡಿತ್ತು. ಕಳೆದ ಶತಮಾನದ ಮೂರನೆಯ ದಶಕ ಪ್ರಾರಂಭವಾಗುವಾಗಲೇ ಭಾರತದಲ್ಲಿಯೂ ಬಾನುಲಿ ಪ್ರಸಾರದ ಬಗ್ಗೆ ಅನೇಕರಿಗೆ ‘ಹುಚ್ಚು ಹಿಡಿದಿತ್ತು. ಅವರಲ್ಲಿ ಬಹಳಷ್ಟು ಮಂದಿ ಹವ್ಯಾಸೀ ಪ್ರಸಾರಕರಾಗಲು ಇಚ್ಛಿಸಿದ್ದವರು.
ಇಂಥ ಹಲವು ಮಂದಿ ಸೇರಿ ಮದರಾಸಿನಲ್ಲಿ 1924 ಮೇ 16ರಂದು ಮದ್ರಾಸ್ ಪ್ರೆಸಿಡೆನ್ಸಿ ರೇಡಿಯೊ ಕ್ಲಬ್ ಸ್ಥಾಪಿಸಿದರು. ಮದ್ರಾಸ್ ಪ್ರಾಂತದ ಗವರ್ನರ್ ವೈಕೌಂಟ್ ಗೊಷೆನ್ ಇದರ ಪೋಷಕ. ಪ್ರಾಯೋಗಿಕ ಪ್ರಸಾರ ತತ್‍ಕ್ಷಣದಿಂದಲೇ ಆರಂಭವಾಯಿತಾದರೂ ಇದರ ಔಪಚಾರಿಕ ಉದ್ಘಾಟನೆ 1924 ಜುಲೈ 31ರಂದು ಆಯಿತು. ಕೃಷ್ಣಸ್ವಾಮಿ ಚೆಟ್ಟಿ ತಾವು ಇಂಗ್ಲೆಂಡಿನಿಂದ ತಂದಿದ್ದ ಪುಟ್ಟ ಪ್ರಸಾರ ಯಂತ್ರವನ್ನು ಇದಕ್ಕಾಗಿ ನೀಡಿದರು. ಇದರ ಸಾಮರ್ಥ್ಯ 40 ವ್ಯಾಟ್. ಕೆಲವು ಕಾಲಾನಂತರ 200 ವ್ಯಾಟ್ ಸಾಮರ್ಥ್ಯದ ಪ್ರಸಾರ ಯಂತ್ರವನ್ನು ಸ್ಥಾಪಿಸಲಾಯಿತು.
ಇಂಡಿಯನ್ ರೇಡಿಯೊ ಟೈಮ್ಸ್ ಪತ್ರಿಕೆ 1927 ಜುಲೈ 15ರಂದು ಪ್ರಕಟವಾಗಿ ಇಂಡಿಯನ್ ಬ್ರಾಡ್‍ಕಾಸ್ಟಿಂಗ್ ಕಂಪನಿಯ (ಭಾರತೀಯ ಪ್ರಸಾರ ಸಂಸ್ಥೆ) ಉದಯವನ್ನು ಗುರುತಿಸಿತು. ಮುಂಬಯಿ ಆಕಾಶವಾಣಿ ಕೇಂದ್ರ ಅಂದಿನ ವೈಸರಾಯ್ ಲಾರ್ಡ್ ಇರ್ವಿನ್‍ನಿಂದ 1927 ಜುಲೈ 23ರಂದು ಉದ್ಘಾಟಿಸಲ್ಪಟ್ಟಿತು. ಇದರ ಪ್ರಸಾರ ವ್ಯವಸ್ಥೆ ಬಗ್ಗೆ ಈ ಖಾಸಗಿ ಕಂಪನಿ ಮತ್ತು ಭಾರತ ಸರ್ಕಾರದ ನಡುವೆ ಒಂದು ಒಪ್ಪಂದ ಏರ್ಪಟ್ಟಿತು. ಇದೇ ಕಂಪನಿಯ ಸ್ವಾಮ್ಯದಲ್ಲಿದ್ದ ಕಲ್ಕತ್ತಾ ಕೇಂದ್ರವನ್ನು ಐದು ವಾರಗಳ ತರುವಾಯ ಆಗಸ್ಟ್ 26ರಂದು ಬಂಗಾಳದ ಗವರ್ನರ್ ಸರ್ ಸ್ಟಾನ್ಲಿ ಜಾಕ್‍ಸನ್ ಉದ್ಘಾಟಿಸಿದರು. ಮುಂಬಯಿ ಮತ್ತು ಕಲ್ಕತ್ತಾ ಕೇಂದ್ರಗಳಲ್ಲಿ 1.5 ಕೆವಿ ಮಧ್ಯಮ ತರಂಗದ ಪ್ರಸಾರ ಯಂತ್ರಗಳಿದ್ದುವು. ಪ್ರಸಾರ ವ್ಯಾಪ್ತಿ ಕೇವಲ 48 ಕಿಮೀ. ಈ ಕೇಂದ್ರಗಳು ಉನ್ನತಮಟ್ಟದ ಪ್ರತಿಭೆಯನ್ನು ಆಕರ್ಷಿಸಿದುವು. ವಿಖ್ಯಾತ ಸಂಗೀತಗಾರ ಕೆ.ಸಿ.ಡೇಯ ನೇತೃತ್ವದಲ್ಲಿ ಕಲ್ಕತ್ತಾ ಕೇಂದ್ರ ಸಂಗೀತ ಪಾಠ ಕಾರ್ಯಕ್ರಮ ಪ್ರಸಾರ ಮಾಡುತ್ತಿತ್ತು. ಮತ್ತೊಬ್ಬ ಸಂಗೀತಗಾರ ಪಂಕಜ್ ಮಲ್ಲಿಕ್ ಅವರ ರಬೀಂದ್ರ ಸಂಗೀತ ಪಾಠಗಳು ಅಷ್ಟೇ ಜನಪ್ರಿಯವಾಗಿದ್ದುವು.
ಭಾರತ ಸರ್ಕಾರದ ಆಕಾಶವಾಣಿ ತನ್ನ ಐದನೆಯ ಕೇಂದ್ರವನ್ನು 1937 ಡಿಸೆಂಬರ್ 16ರಂದು ಆರಂಭಿಸಿತು. ಇದರ ಸಾಮರ್ಥ್ಯ 5 ಕೆವಿ. ಮಧ್ಯಮ ತರಂಗದ ಪ್ರಸಾರಯಂತ್ರ. ಮಾರ್ಕೋನಿ ಕಂಪನಿಯ ಸಹಾಯದಿಂದ ವಾಯುವ್ಯ ಪ್ರಾಂತದ ಸರ್ಕಾರ ಪೇಷಾವರ್‍ನಲ್ಲಿ 1935ರಷ್ಟು ಹಿಂದೆಯೇ ಪ್ರಸಾರಕೇಂದ್ರ ಹೊಂದಿತ್ತು. ವಾಯುವ್ಯ ಪ್ರಾಂತದ ಸರ್ಕಾರ 1937 ಏಪ್ರಿಲ್ 1ರಂದು ಈ ಕೇಂದ್ರವನ್ನು ಭಾರತ ಸರ್ಕಾರಕ್ಕೆ ವಹಿಸಿಕೊಟ್ಟಿತು. ಮೂರು ವರ್ಷಗಳಲ್ಲಿ ಇಂಡಿಯನ್ ಬ್ರಾಡ್‍ಕಾಸ್ಟಿಂಗ್ ಕಂಪನಿ ಅವಸಾನ ಕಂಡಿತು. ಇಷ್ಟು ಹೊತ್ತಿಗಾಗಲೇ ಸಂಸ್ಥೆಗೆ ಎರಡು ಲಕ್ಷ ರೂಪಾಯಿ ನಷ್ಟ ಸಂಭವಿಸಿತ್ತು. ಇದು ಏನೇ ಇರಲಿ, ಆಕಾಶವಾಣಿ ಪ್ರಸಾರ ಈ ವೇಳೆಗೆ ಭಾರತದಲ್ಲಿ ಬೇರೂರಿತ್ತು.
ಇಂಚ್‍ಟೇಪ್ ಸಮಿತಿ ದೇಶದ ಪ್ರಸಾರ ವ್ಯವಸ್ಥೆ ನಷ್ಟದಲ್ಲಿ ನಡೆಯುತ್ತಿರುವುದನ್ನು ತೋರಿಸಿ. ಭಾರತಕ್ಕೆ ಇದು ತಕ್ಕುದಲ್ಲವೆಂದು ಹೇಳಿ ಅದನ್ನು ಕೊನೆಗೊಳಿಸಬೇಕೆಂದು ಶಿಫಾರಸು ಮಾಡಿತು. ಪತ್ರಿಕೆಗಳಲ್ಲಿ ಸಮಿತಿಯ ವರದಿ ಪ್ರಕಟವಾದದ್ದೇ ತಡ ಅದು ಸಾರ್ವಜನಿಕ ಅಭಿಪ್ರಾಯವನ್ನು ಕೆರಳಿಸಿತು. ಸಾರ್ವಜನಿಕ ಒತ್ತಡಕ್ಕೆ ಮಣಿದ ಸರ್ಕಾರ ಕೈಗಾರಿಕೆ ಮತ್ತು ಕಾರ್ಮಿಕ ಇಲಾಖೆಯ ಅಧೀನದಲ್ಲಿ ಪ್ರಸಾರ ವ್ಯವಸ್ಥೆಯನ್ನು ತಾನೇ ವಹಿಸಿಕೊಂಡಿತು, ಇಂಡಿಯನ್ ಸ್ಟೇಟ್ ಬ್ರಾಡ್‍ಕಾಸ್ಟಿಂಗ್ ಸರ್ವಿಸ್ ಭಾರತ ರಾಜ್ಯ ಪ್ರಸಾರ ಸೇವೆ ಎಂಬ ಅಂಕಿತದಲ್ಲಿ ಉದಯವಾಯಿತು. ಪ್ರಾಯೋಗಿಕ ಪ್ರಸಾರವ್ಯವಸ್ಥೆ ಮುಂದುವರಿಯಿತು.
ಎರಡು ವರ್ಷಗಳ ತರುವಾಯ ಅಂದರೆ 1932ರಲ್ಲಿ ಅಂತಿಮವಾಗಿ ಸರ್ಕಾರದ ಆಡಳಿತದಲ್ಲಿ ಪ್ರಸಾರ ಸೇವೆಯನ್ನು ನಡೆಸಿಕೊಂಡು ಹೋಗಲು ನಿರ್ಧರಿಸಲಾಯಿತು. ಮರುವರ್ಷದ (1933) ಅಂತ್ಯದಲ್ಲಿ ಪರವಾಗಿ ಪಡೆದ ರೇಡಿಯೊ ಸೆಟ್ಟುಗಳ ಸಂಖ್ಯೆ 10,872. ಪ್ರಸಾರ ವ್ಯವಸ್ಥೆಯ ಮೇಲೆ ಹಿಡಿತಹೊಂದಲು 1934 ಜನವರಿ 1ನೇ ತಾರೀಕಿನಂದು 1933ರ ಇಂಡಿಯನ್ ವೈರ್‍ಲೆಸ್ ಟೆಲಿಗ್ರಫಿ ಆ್ಯಕ್ಟ್ (ಭಾರತೀಯ ವೈರ್‍ಲೆಸ್ ದೂರದರ್ಶನ ಶಾಸನ) ಜಾರಿಗೆ ಬಂದಿತು. ಇದೇ ದೇಶದ ಬಾನುಲಿ ಪ್ರಸಾರ ವ್ಯವಸ್ಥೆಯನ್ನು ನಿಯಂತ್ರಿಸುತ್ತಿದೆ.
ಪ್ರಸಾರಸೇವೆ 1934ರಿಂದ ತ್ವರಿತ ಗತಿಯಲ್ಲಿ ವಿಸ್ತಾರಗೊಂಡಿತು. ಬ್ರಿಟಿಷ್ ಬ್ರಾಡ್‍ಕಾಸ್ಟಿಂಗ್ ಕಾರ್ಪೊರೇಷನ್ ಸಂಸ್ಥೆಯ ಲಯನೆಲ್ ಫೀಲ್ಡೆನ್ ಭಾರತೀಯ ಪ್ರಸಾರ ವ್ಯವಸ್ಥೆಯ ಮೊದಲ ನಿಯಂತ್ರಣಾಧಿಕಾರಿಯಾಗಿ ನೇಮಿತರಾದರು. ದೆಹಲಿ ಪ್ರಸಾರ ಕೇಂದ್ರ 1936 ಜನವರಿ 1ರಂದು ಅಸ್ತಿತ್ವಕ್ಕೆ ಬಂದಿತು. ಆಗ ಇಂಡಿಯನ್ ಬ್ರಾಡ್‍ಕಾಸ್ಟಿಂಗ್ ಸರ್ವಿಸ್ ಸಂಸ್ಥೆಯ ಹೆಸರನ್ನು ಆಲ್ ಇಂಡಿಯಾ ರೇಡಿಯೊ ಎಂದು ಬದಲಾಯಿಸಲಾಯಿತು. ಆಲ್ ಇಂಡಿಯಾ ರೇಡಿಯೊ ಎಂಬ ಹೆಸರನ್ನು ಸೃಷ್ಟಿಸಿದ ಕೀರ್ತಿ ಆಗಿನ ವೈಸ್‍ರಾಯ್ ಲಾರ್ಡ್ ಲಿನ್‍ಲಿತ್‍ಗೋ ಅವರಿಗೆ ಸಲ್ಲುತ್ತದೆ. ಭಾರತೀಯರಿಗೆ ಉಚ್ಚರಿಸಲು ಸುಲಭಸಾಧ್ಯವಾದ ಪದವಿದು. ಅದೇ ಇಂದಿಗೂ ಉಳಿದು ಬಂದಿದೆ.
ಇಷ್ಟು ಹೊತ್ತಿಗಾಗಲೇ ಆಕಾಶವಾಣಿ ಎಂಬ ಪದ ಚಾಲ್ತಿಯಲ್ಲಿತ್ತು. ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಮನೋವಿಜ್ಞಾನದ ಪ್ರಾಧ್ಯಾಪಕರಾಗಿದ್ದ ಎಂ. ವಿ. ಗೋಪಾಲಸ್ವಾಮಿಯವರು 1935ರಲ್ಲಿ ಪ್ರಾಯೋಗಿಕ ಪ್ರಸಾರದಲ್ಲಿ ತೊಡಗಿದ್ದರು. ಅವರಲ್ಲಿದ್ದ ಪ್ರಸಾರಯಂತ್ರದ ಸಾಮರ್ಥ್ಯ 30 ವ್ಯಾಟ್. ಅದನ್ನು ತಮ್ಮ ಮನೆಯಲ್ಲಿಯೇ ಸ್ಥಾಪಿಸಿದರು. ಸ್ವಲ್ಪ ಕಾಲಾನಂತರ 250 ವ್ಯಾಟ್ ಸಾಮರ್ಥ್ಯದ ಪ್ರಸಾರ ಯಂತ್ರವನ್ನು ಪಡೆದರು. ಮೈಸೂರಿನ ಬಾನುಲಿ ಕೇಂದ್ರವನ್ನು ಆಕಾಶವಾಣಿ ಎಂದೇ ಹೆಸರಿಸಿದರು. ಮೈಸೂರು ಪುರಸಭೆ ಅವರಿಗೆ ಅನುದಾನ ನೀಡುತ್ತಿತ್ತು. ಇಂಗ್ಲಿಷ್ ಮತ್ತು ವಿದೇಶೀ ಸುದ್ದಿಸೇವೆ ಬಿಟ್ಟರೆ ಸಾಮಾನ್ಯವಾಗಿ ಎಲ್ಲ ಪ್ರಸಾರಗಳಲ್ಲೂ ಈಗ ಈ ಶಬ್ದವನ್ನೇ ಬಳಸಲಾಗುತ್ತಿದೆ. ಆಗ ಮೈಸೂರು ಕೇಂದ್ರಕ್ಕೆ ಖಾಸಗಿಯವರ ನೆರವೂ ಇತ್ತು. ಮೈಸೂರು ರಾಜ್ಯ ಸರ್ಕಾರ 1942ರಲ್ಲಿ ಅದನ್ನು ತಾನೇ ವಹಿಸಿಕೊಂಡಿತು.
ಎರಡನೆಯ ಮಹಾಯುದ್ಧ ಆರಂಭವಾಗುತ್ತಿದ್ದಂತೆ ಬಾನುಲಿಗೆ ಹೆಚ್ಚು ಮಹತ್ತ್ವ ದೊರಕಿತು. ಯುದ್ಧದ ಲಕ್ಷಣಗಳು 1935ರಲ್ಲಿಯೇ ಕಾಣಿಸಿಕೊಂಡಿದ್ದುವು. ಮಿಲಿಟರಿ ಆಯಕಟ್ಟಿನ ದೃಷ್ಟಿಯಿಂದ ಭಾರತದ ಪ್ರಸಾರ ವ್ಯವಸ್ಥೆ ಮುಖ್ಯವಾಗಿತ್ತು. ಸಂಪರ್ಕ ಕೇಂದ್ರಗಳ ಸ್ಥಾಪನೆಗೆ ಸರ್ಕಾರ ಒಲವು ತೋರಿದ್ದು ಈಗಲೇ. ಯುದ್ಧದ ಕಾರಣ ಶತ್ರುಗಳಿಂದ ತೊಂದರೆ ಆಗುವುದನ್ನು ತಪ್ಪಿಸಲು ತಂತೀ ಮಾರ್ಗದ ಮೂಲಕ ಕೇಂದ್ರದಿಂದ ಕೇಂದ್ರಕ್ಕೆ ಸಂಪರ್ಕ ಕಲ್ಪಿಸುವುದು ಯುಕ್ತವೆಂದು ಕಂಡುಬಂದಿತು. ಭಾರತದಲ್ಲಿ ಬಾನುಲಿ ವ್ಯವಸ್ಥೆಯನ್ನು ಅಭಿವೃದ್ಧಿಗೊಳಿಸಲು ಬಿರುಸಿನ ಪ್ರಯತ್ನಗಳಾದುವು.
ವಾಯುವ್ಯ ಪ್ರಾಂತ್ಯ ಸರ್ಕಾರಕ್ಕೆ ಪ್ರಸಾರಯಂತ್ರಗಳನ್ನು ಎರವಲು ನೀಡಿದ ಮಾರ್ಕೋನಿ ಕಂಪನಿ ಗ್ರಾಮೀಣ ಪ್ರದೇಶಗಳಿಗಾಗಿ ಸಮುದಾಯ ರೇಡಿಯೊ ಸೆಟ್ಟುಗಳನ್ನು ನೀಡಲು ಮುಂದೆ ಬಂದಿತು. ಹಳ್ಳಿಗಳಿಗೆ ಬಾನುಲಿ ತಲುಪಿಸುವ ಮೊದಲ ಯತ್ನವಿದು. ಅದೇ ವರ್ಷ ಭಾರತೀಯ ಕೃಷಿ ಸಂಸ್ಥೆ ಅಲಹಾಬಾದಿನಲ್ಲಿ ಗ್ರಾಮೀಣ ಕಾರ್ಯಕ್ರಮಗಳ ಬಾನುಲಿ ಪ್ರಸಾರವನ್ನು ಆರಂಭಿಸಿತು. ಅದಾದ ಒಂದು ವರ್ಷಕ್ಕೆ ಡೆಹರಾಡೂನ್ ಹವ್ಯಾಸಿ ಪ್ರಸಾರ ಕ್ಲಬ್ ಬಾನುಲಿ ಪ್ರಸಾರವನ್ನು ಆರಂಭಿಸಿತು. ಸಾರ್ವಜನಿಕರಿಂದ ಚಂದಾ ಸಂಗ್ರಹಿಸಿ 1936 ಏಪ್ರಿಲ್ 6ರಂದು ಪ್ರಸಾರ ಕೈಗೊಳ್ಳಲಾಯಿತು. ಆದರೆ ಹಣದ ಮುಗ್ಗಟ್ಟಿನಿಂದ 1938ರಲ್ಲಿ ಈ ಕೇಂದ್ರಗಳನ್ನು ಮುಚ್ಚಲಾಯಿತು.
ಬಾನುಲಿ ಮಾಧ್ಯಮಕ್ಕೆ ಟೀಕಾಕಾರರು ಇರಲಿಲ್ಲ ಎಂದಲ್ಲ. ಅಂಥವರ ಪೈಕಿ ರಾಜಾಜಿ ಅವರು ಪ್ರಮುಖರು. ಆಗ ಮದ್ರಾಸ್ ಪ್ರಾಂತದ ಪ್ರಧಾನಿ ಆಗಿದ್ದ ಚಕ್ರವರ್ತಿ ರಾಜಗೋಪಾಲಾಚಾರಿಯವರು ಭಾರತದಲ್ಲಿ ಪ್ರಸಾರ ವ್ಯವಸ್ಥೆ ನೆಲೆ ಗೊಳಿಸುವುದರ ವಿರುದ್ಧ ಪ್ರಬಲವಾಗಿ ವಾದಿಸಿದರು. ಈ ನಡುವೆ ಅಂತಾರಾಷ್ಟ್ರೀಯ ಪ್ರಸಾರ ನಿಯಂತ್ರಣ ಮಂಡಲಿ ಭಾರತಕ್ಕೆ ತರಂಗಾಂತರಗಳನ್ನು ಮಂಜೂರು ಮಾಡಿತು. ದೆಹಲಿಯಲ್ಲಿ 1937 ಜನವರಿಯಲ್ಲಿ ಪ್ರಥಮ ಬಾರಿಗೆ ಭಾರತೀಯ ಬಾನುಲಿ ಕೇಂದ್ರ ನಿರ್ದೇಶಕರ ಸಮ್ಮೇಳನ ನಡೆಯಿತು. ಆ ವರ್ಷದ ಕೊನೆಯಲ್ಲಿ ಮೊದಲ ಹ್ರಸ್ವತರಂಗ ಪ್ರಸಾರಯಂತ್ರ ದೆಹಲಿಯಲ್ಲಿ ಕಾರ್ಯಾರಂಭಿಸಿತು. ಇಂಥ ಇತರ ಕೇಂದ್ರಗಳೆಂದರೆ ಮುಂಬಯಿ ಮತ್ತು ಕಲ್ಕತ್ತಾ. ಮಧ್ಯಮ ತರಂಗ ಪ್ರಸಾರ ಯಂತ್ರಗಳು ನೆಲೆಗೊಂಡ ನಗರಗಳು ಪೆಷಾವರ್, ಲಾಹೋರ್, ಲಕ್ನೋ ಮತ್ತು ಮದ್ರಾಸು.
ರಾಷ್ಟ್ರ ಸ್ವಾತಂತ್ರ್ಯಗಳಿಸಿದಾಗ ಇದ್ದ ಬಾನುಲಿಕೇಂದ್ರಗಳ ಸಂಖ್ಯೆ ಒಂಬತ್ತು. ಅವುಗಳಲ್ಲಿ ದೆಹಲಿ, ಕಲ್ಕತ್ತಾ, ಮುಂಬಯಿ, ಮದ್ರಾಸು, ಲಕ್ನೋ ಮತ್ತು ತಿರುಚ್ಚಿ ಕೇಂದ್ರಗಳು ಭಾರತದಲ್ಲಿ ಉಳಿದರೆ ಲಾಹೋರ್, ಪೆಷಾವರ್ ಮತ್ತು ಢಾಕಾ ಕೇಂದ್ರಗಳು ಪಾಕಿಸ್ತಾನಕ್ಕೆ ಸೇರಿದುವು. ಮಹಾರಾಜರ ಆಡಳಿತದಲ್ಲಿದ್ದ ರಾಜ್ಯಗಳನ್ನು ಭಾರತ ಒಕ್ಕೂಟಕ್ಕೆ ಸೇರಿಸಿಕೊಂಡ ಬಳಿಕ ಹೈದರಾಬಾದ್, ಔರಂಗಾಬಾದ್, ತಿರುವನಂತಪುರ, ಬಡೋದೆ ಮತ್ತು ಮೈಸೂರು ಕೇಂದ್ರಗಳು ಆಕಾಶವಾಣಿಯ ಸ್ವಾಮ್ಯಕ್ಕೆ ಒಳಪಟ್ಟವು. ಪಂಜಾಬ್ ವಿಭಜನೆ ಪರಿಸ್ಥಿತಿಯಿಂದಾಗಿ ಅಲ್ಲಿ ಕೂಡಲೆ ಒಂದು ಆಕಾಶವಾಣಿ ಕೇಂದ್ರ ಸ್ಥಾಪಿಸಬೇಕಾದ ಅಗತ್ಯವಿತ್ತು. ಹೀಗೆ 1947 ನವೆಂಬರ್ 1ರಂದು ಜಲಂಧರ್ ಕೇಂದ್ರ ಉದಯವಾಯಿತು. ಪಾಕಿಸ್ಥಾನ ಕಾಶ್ಮೀರದ ಮೇಲೆ ಆಕ್ರಮಣ ನಡೆಸಿದಾಗ ಜಮ್ಮುವಿನಲ್ಲಿ ಡಿಸೆಂಬರ್ 1ರಂದು ಆಕಾಶವಾಣಿ ನಿಲಯವನ್ನು ಸ್ಥಾಪಿಸಲಾಯಿತು. ಹ್ರಸ್ವತರಂಗ ಕೇಂದ್ರವನ್ನು ನಗರದಲ್ಲಿ 1948 ಜುಲೈ 1ರಂದು ಸ್ಥಾಪಿಸಲಾಯಿತು.
ಸರ್ದಾರ್ ವಲ್ಲಭಭಾಯಿ ಪಟೇಲರ ನೇತೃತ್ವದಲ್ಲಿ ವಾರ್ತಾ ಮತ್ತು ಪ್ರಸಾರ ಇಲಾಖೆ ದೇಶದಲ್ಲಿ ಆಕಾಶವಾಣಿ ಕೇಂದ್ರಗಳನ್ನು ಸ್ಥಾಪಿಸಲು ಒಂದು ಯೋಜನೆ ಕೈಗೊಂಡಿತು. ಇಲಾಖೆಯ ಎಂಟು ವರ್ಷಗಳ ಯೋಜನೆಯ ಅಂದಾಜು ವೆಚ್ಚ ರೂ 364 ಲಕ್ಷ. ಮಿತ ಸಾಮರ್ಥ್ಯದ ಪ್ರಸಾರಯಂತ್ರಗಳಿಗೆ ಆದ್ಯತೆ ನೀಡಲಾಯಿತು. 1950ರ ಸುಮಾರಿಗೆ ಬಾನುಲಿ ಕೇಂದ್ರಗಳ ಸಂಖ್ಯೆ ಇಪ್ಪತ್ತೈದನ್ನು ತಲಪಿತು. ಪ್ರಸಾರಕಾಲ 1947ರಲ್ಲಿ 26,342 ಗಂಟೆಗಳಿದ್ದರೆ 1950ರಲ್ಲಿ 60,000 ಗಂಟೆಗಳನ್ನು ತಲುಪಿತು. ಎಲ್ಲ ಪ್ರಾದೇಶಿಕ ಭಾಷೆಗಳಲ್ಲಿಯೂ ಪ್ರಸಾರವಾಗುತ್ತಿತ್ತು. ಮಧ್ಯಮ ತರಂಗ ಪ್ರಸಾರ ದೇಶದ ಜನಸಂಖ್ಯೆಯ ಶೇಕಡಾ 21ರಷ್ಟನ್ನು ತಲಪಿತು. ಭೌಗೋಳಿಕವಾಗಿ ಶೇಕಡಾ 12ರಷ್ಟು ಪ್ರದೇಶವನ್ನು ಒಳಗೊಂಡಿತು.
ರಾಜ್ಯಗಳ ರಾಜಧಾನಿಗಳ ಹೊಸ ಆಕಾಶವಾಣಿ ನಿಲಯಗಳನ್ನು ತೆರೆಯಲಾಯಿತು. ಇವಲ್ಲದೇ ಸಾಂಸ್ಕೃತಿಕ ನಗರಗಳಾದ ಅಲಹಾಬಾದ್, ಅಮೃತಸರ, ಅಹಮದಾಬಾದ್, ಕಲ್ಲಿಕೋಟೆ, ಕಟಕ್, ಧಾರವಾಡ, ಗುವಾಹಾತಿ, ನಾಗಪುರ, ಪಾಟ್ನಾ, ಷಿಲ್ಲಾಂಗ್ ಮತ್ತು ವಿಜಯವಾಡ ಬಾನುಲಿ ಕೇಂದ್ರಗಳನ್ನು ಪಡೆದುವು. ಸುದ್ದಿಸೇವೆ ಮತ್ತು ವಿದೇಶಸೇವೆ ವಿಭಾಗಗಳನ್ನು 1948ರಲ್ಲಿ ಪ್ರತ್ಯೇಕಿಸಲಾಯಿತು. ಆಕಾಶವಾಣಿ 1950ರಲ್ಲಿ 11 ಭಾಷೆಗಳಲ್ಲಿ ವಾರಕ್ಕೆ 116 ಗಂಟೆಗಳ ಕಾಲ ಕಾರ್ಯಕ್ರಮಗಳನ್ನು ಬಿತ್ತರಿಸುತ್ತಿತ್ತು.
ಭಾರತದ ಸಂವಿಧಾನ 1950 ಜನವರಿ 26ರಂದು ಚಾಲ್ತಿಗೆ ಬಂದಿತು. ಅದರಂತೆ ಆಕಾಶವಾಣಿ ಪೂರ್ಣವಾಗಿ ಕೇಂದ್ರ ಸರ್ಕಾರದ ನಿಯಂತ್ರಣಕ್ಕೆ ಒಳಪಟ್ಟಿತು. ಪಂಚವಾರ್ಷಿಕ ಯೋಜನೆಗಳು ಆರಂಭವಾಗಿ ಅವುಗಳ ಅಂಗವಾಗಿ ಆಕಾಶವಾಣಿಯನ್ನು ಕ್ರಮೇಣ ವಿಸ್ತಾರಗೊಳಿಸಲಾಯಿತು. ಕಲ್ಕತ್ತಾ, ಮುಂಬಯಿ, ಅಹಮದಾಬಾದ್, ಜಲಂಧರ್ ಮತ್ತು ಲಕ್ನೋ ಕೇಂದ್ರಗಳು 50 ಕಿಲೋವ್ಯಾಟ್ ಮಧ್ಯಮ ತರಂಗ ಪ್ರಸಾರಯಂತ್ರಗಳನ್ನು ಪಡೆದುವು. ಪುಣೆ, ರಾಜಕೋಟೆ, ಇಂದೂರು, ಬೆಂಗಳೂರು, ಜೈಪುರ ಮತ್ತು ಸಿಮ್ಲಾ ನಗರಗಳಲ್ಲಿ ಬಾನುಲಿ ಕೇಂದ್ರಗಳನ್ನು ತೆರೆಯಲಾಯಿತು, ಜೊತೆಗೆ 14,000 ಸಮುದಾಯ ರೇಡಿಯೊ ಸೆಟ್ಟುಗಳನ್ನು ಸ್ಥಾಪಿಸಲಾಯಿತು.
ಬೆಂಗಳೂರು ಕೇಂದ್ರ 1955 ನವೆಂಬರ್ 2ರಿಂದ ತನ್ನ ಕಾರ್ಯಕ್ರಮಗಳನ್ನು ಬಿತ್ತರಿಸಿತು. ಜೈಪುರ ಮತ್ತು ಅಜ್ಮೀರ್‍ಗಳನ್ನು ಡಿಸೆಂಬರ್ 11ರಂದು ಒಟ್ಟುಗೂಡಿಸಲಾಯಿತು. ಈ ಮುನ್ನ 1952ರಲ್ಲಿ ರಾಷ್ಟ್ರೀಯ ಸಂಗೀತ ಕಾರ್ಯಕ್ರಮವನ್ನು ರೂಪಿಸಲಾಯಿತು. ಮರುವರ್ಷ ರಾಷ್ಟ್ರೀಯ ಭಾಷಣ ಮತ್ತು ಚರ್ಚಾ ಕಾರ್ಯಕ್ರಮಗಳನ್ನು ಬಿತ್ತರಿಸಲಾಯಿತು. ಮೊದಲ ಬಾನುಲಿ ಸಂಗೀತ ಸಮ್ಮೇಳನ 1953 ಅಕ್ಟೋಬರ್ 23 ರಂದು ನಡೆಯಿತು. ಸರ್ದಾರ್ ಪಟೇಲ್ ಸ್ಮಾರಕ ಭಾಷಣಗಳು ಮತ್ತು ಬಾನುಲಿ ಸುದ್ದಿ ನಿರೂಪಣೆ 1955ರಲ್ಲಿ ಪ್ರಾರಂಭವಾದುವು.
ಮೊದಲ ಪಂಚವಾರ್ಷಿಕ ಯೋಜನೆ ಮುಗಿಯುವ ವೇಳೆಗೆ ಇದ್ದ 25 ಬಾನುಲಿ ಕೇಂದ್ರಗಳು ದೇಶದ ಶೇಕಡಾ 31ರಷ್ಟು ಪ್ರದೇಶ ಮತ್ತು ಶೇಕಡಾ 41ರಷ್ಟು ಜನಸಂಖ್ಯೆಯನ್ನು ಆವರಿಸಿಕೊಂಡಿದ್ದುವು. ಅಂದರೆ ಸುಮಾರು 15.5 ಲಕ್ಷ ಕಿಮೀ ಪ್ರದೇಶ ಮತ್ತು ಸುಮಾರು 22 ಕೋಟಿ ಜನರನ್ನು ತಲಪುತ್ತಿದ್ದುವು. ಹೊಸ ಪ್ರಸಾರ ಕೇಂದ್ರಗಳು ಹುಟ್ಟಿದ ಹಾಗೆ ಹಳೆಯ ಕೆಲವು ಕೇಂದ್ರಗಳನ್ನು ಸರ್ಕಾರ ಮುಚ್ಚಿತು. ಗೌಹಾತಿ ಕೇಂದ್ರವನ್ನು ಪ್ರಾರಂಭಿಸಿದಾಗ ಷಿಲ್ಲಾಂಗ್ ಬಾನುಲಿ ಕೇಂದ್ರವನ್ನೂ ಅಹಮದಾಬಾದ್ ಕೇಂದ್ರ ಆದಾಗ ಬಡೋದೆಯ ಕೇಂದ್ರವನ್ನೂ ಜಲಂಧರ ಕೇಂದ್ರ ಆದಾಗ ಅಮೃತಸರ ಕೇಂದ್ರವನ್ನೂ ಬೆಂಗಳೂರು ಕೇಂದ್ರ ಆದಾಗ ಮೈಸೂರು ಕೇಂದ್ರವನ್ನೂ ಮುಚ್ಚಲಾಯಿತು.
ವಿವಿಧ ಭಾರತಿ ಕಾರ್ಯಕ್ರಮವನ್ನು 1957 ಮಾರ್ಚ್ 22ರಂದು ಮುಂಬಯಿಯಲ್ಲಿ ಉದ್ಘಾಟಿಸಲಾಯಿತು. ಸ್ವಲ್ಪ ಕಾಲಾನಂತರ ಮದ್ರಾಸಿನಲ್ಲಿಯೂ ವಿವಿಧ ಭಾರತಿ ಪ್ರಸಾರ ಕೇಂದ್ರವನ್ನು ಆರಂಭಿಸಲಾಯಿತು. ವಿವಿಧ ಭಾರತಿ ಲಘು ಸಂಗೀತ ಕಾರ್ಯಕ್ರಮವನ್ನು ಬಿತ್ತರಿಸುತ್ತದೆ. ಗೌಹಾತಿ ಮತ್ತು ರಾಂಚಿ ಕೇಂದ್ರಗಳಿಂದ 29 ವಿವಿಧ ಗಿರಿಜನ ಬುಡಕಟ್ಟುಗಳಿಗಾಗಿ ಕಾರ್ಯಕ್ರಮಗಳನ್ನು ಪ್ರಸಾರಿಸಲಾಗುತ್ತಿತ್ತು. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ದೆಹಲಿಯಿಂದ 1959 ಆಗಸ್ಟ್ 15ರಂದು ವಿಶೇಷ ಪ್ರಸಾರಸೇವೆ ಪಡೆದುವು. ರೇಡಿಯೊ ಸಿಲೋನ್ ಪ್ರಸಾರಕ್ಕಿದ್ದ ಜನಪ್ರಿಯತೆಯನ್ನು ಕಡಿಮೆಗೊಳಿಸಿ ಭಾರತೀಯ ಪ್ರಸಾರಕ್ಕೆ ದೇಶದ ಶ್ರೋತೃಗಳನ್ನು ಸೆಳೆಯುವುದೇ ವಿವಿಧ ಭಾರತಿ ಕಾರ್ಯಕ್ರಮದ ಉದ್ದೇಶ.
ಮೂರನೆಯ ಪಂಚವಾರ್ಷಿಕ ಯೋಜನಾವಧಿಯಲ್ಲಿ ಬಾನುಲಿಗಾಗಿ ರೂ 7.64 ಕೋಟಿಯನ್ನು ನಿಗದಿಗೊಳಿಸಲಾಗಿತ್ತು. ಪ್ರಸಾರ ವ್ಯವಸ್ಥೆಯನ್ನು ಅಮೂಲಾಗ್ರವಾಗಿ ಪರಿಶೀಲಿಸಿ ಶಿಫಾರಸುಗಳನ್ನು ಮಾಡಲು ಭಾರತ ಸರ್ಕಾರ ಅಶೋಕ ಚಂದಾ ಅವರ ನೇತೃತ್ವದಲ್ಲಿ 1964ರಲ್ಲಿ ಸಮಿತಿಯೊಂದನ್ನು ರಚಿಸಿತು. ಇದು ತನ್ನ ವರದಿಯನ್ನು 1966ರಲ್ಲಿ ಸಲ್ಲಿಸುತ್ತ ಬಾನುಲಿ ಮತ್ತು ದೂರದರ್ಶನಗಳಿಗೆ ಪ್ರತ್ಯೇಕ ಸ್ವಾಯತ್ತ ಸಂಸ್ಥೆಗಳನ್ನು ರೂಪಿಸಬೇಕೆಂದು ಶಿಫಾರಸು ಮಾಡಿತು. ಇದನ್ನು ಸರ್ಕಾರ 1970ರಲ್ಲಿ ಔಪಚಾರಿಕವಾಗಿ ತಿರಸ್ಕರಿಸಿತು. .ಆದರೆ ವಾಣಿಜ್ಯ ಪ್ರಸಾರಕ್ಕೆ ಸಂಬಂಧಿಸಿದ ಶಿಫಾರಸನ್ನು ಒಪ್ಪಿಕೊಂಡಿತು. ಆಕಾಶವಾಣಿ ತನ್ನ ವಾಣಿಜ್ಯ ಸೇವೆಯನ್ನು 1967 ನವೆಂಬರಿನಲ್ಲಿ ಮುಂಬಯಿ-ನಾಗಪುರ-ಪುಣೆ ಕೇಂದ್ರಗಳಿಂದ ಬಿತ್ತರಿಸಿತು. ಇದು ಕ್ರಮೇಣ ದೆಹಲಿ, ಮದ್ರಾಸು ಮತ್ತು ತಿರುಚ್ಚಿರಾಪಳ್ಳಿಯ ಕೇಂದ್ರಗಳಿಗೆ 1969ರಲ್ಲಿ ವಿಸ್ತೃತಗೊಂಡಿತು. ಇದಾದ ತರುವಾಯದ ಮೂರು ವಾರ್ಷಿಕ ಯೋಜನೆಗಳಲ್ಲಿ ಮಧ್ಯಮ ತರಂಗದ ಇನ್ನೂ 11 ಆಕಾಶವಾಣಿ ನಿಲಯಗಳನ್ನು ಸ್ಥಾಪಿಸಲಾಯಿತು.
ನಾಲ್ಕನೆಯ ಯೋಜನೆಯ ಅವಧಿಯಲ್ಲಿ (1969-74) ವಿದೇಶಪ್ರಸಾರಕ್ಕಾಗಿ ಅತಿಬಲಿಷ್ಠ ಪ್ರಸಾರಯಂತ್ರಗಳನ್ನು ಕಲ್ಕತ್ತ ಮತ್ತು ರಾಜಕೋಟೆಗಳಲ್ಲಿ ಸ್ಥಾಪಿಸಲಾಯಿತು. ಶಕ್ತ ಮಧ್ಯಮ ತರಂಗ ಪ್ರಸಾರಯಂತ್ರಗಳನ್ನು ಕೋಹಿಮಾ, ಜೋಧಪುರ ಮತ್ತು ಸಿಮ್ಲಾ ನಗರಗಳು ಪಡೆದುವು. ಗಡಿಪ್ರದೇಶಗಳಲ್ಲಿ ಭಾರತದ ಪ್ರಸಾರವನ್ನು ಬಲಪಡಿಸಲಾಯಿತು. ಎತ್ತರದ ಪ್ರದೇಶಗಳಾದ ಲೇಹ್ ಮತ್ತು ತವಾಂಗ್ ಸಹ ಪ್ರಸಾರಕೇಂದ್ರಗಳನ್ನು ಪಡೆದುವು. ವಿವಿಧ ಭಾರತಿ ವಿಭಾಗವನ್ನು 1971ರಲ್ಲಿ ದೆಹಲಿಯಿಂದ ಮುಂಬಯಿಗೆ ವರ್ಗಾಯಿಸಲಾಯಿತು. ಇದೇ ವೇಳೆ ಭಾರತ ರೇಡಿಯೋ ಸೆಟ್ಟುಗಳ ನಿರ್ಮಾಣದಲ್ಲಿ ಸ್ವಯಂಪೂರ್ಣತೆ ಸಾಧಿಸಿತು. ಬೆಂಗಳೂರಿನ ಭಾರತ್ ಎಲೆಕ್ಟ್ರಾನಿಕ್ಸ್ ಕಾರ್ಖಾನೆ ಬೇಕಾದ ವಸ್ತುಗಳನ್ನು ತಯಾರಿಸತೊಡಗಿತು.
ಆಕಾಶವಾಣಿಯ ತಾಂತ್ರಿಕ ವಿಭಾಗ ಸಹ ಪ್ರಗತಿಪಥದಲ್ಲಿ ಮುನ್ನಡೆಯಿತು. ವಿದೇಶೀ ನೆರವಿಲ್ಲದೆಯೇ ಆಕಾಶವಾಣಿಯ ತಂತ್ರವಿದರು ಪ್ರಸಾರ ನಿರ್ವಹಣೆಯಲ್ಲಿ ಸ್ವಸಾಮರ್ಥ್ಯ ಮತ್ತು ಹ್ರಸ್ವತರಂಗ ಯಂತ್ರಗಳ ಪ್ರಸಾರದ ಮೇಲೆ ಹತೋಟಿ ಸಾಧಿಸಿದರು.
ಆಕಾಶವಾಣಿಯ ಸಂಶೋಧನ ವಿಭಾಗ ರಷ್ಯಾದ ಸ್ಪುಟ್ನಿಕ್ 1 ಉಪಗ್ರಹದಿಂದ 1957 ಅಕ್ಟೋಬರಿನಲ್ಲಿ ಬೀಪ್ ಬೀಪ್ ಸಂಜ್ಞೆಗಳನ್ನು ತೋಡಪುರ್ ಕೇಂದ್ರದಲ್ಲಿ ಗ್ರಹಿಸಿ ತನ್ನ ಕೌಶಲವನ್ನು ಪ್ರದರ್ಶಿಸಿತು. ಹಾಗೆಯೇ 1963 ಜೂನ್ 20ರಂದು ಗಗನಯಾತ್ರಿ ರಷ್ಯಾದ ವ್ಯಾಲೆಂಟೀನಾ ತೆರೆಷ್ಕೊವಾ ಅವರ ಧ್ವನಿಯನ್ನು ದಾಖಲೆ ಮಾಡಿಕೊಂಡ ಪ್ರಥಮ ಯಶಸ್ಸು ಭಾರತೀಯ ಆಕಾಶವಾಣಿಗೆ ಸೇರಿತು. ವಿಶೇಷ ಧ್ವನಿ ದಾಖಲು ಯಂತ್ರಗಳನ್ನು ಬಳಸಿ ಆಕಾಶ ನೌಕೆಗಳ ಸಂಜ್ಞೆಗಳನ್ನು ಗುರುತಿಸಿದ್ದು ತೋಡಪುರ ಕೇಂದ್ರ.
ಯುವ ಪ್ರತಿಭೆ ಗುರುತಿಸಲು ಸಹಾಯಕವಾಗುವಂತೆ ಯುವವಾಣಿ ಕಾರ್ಯಕ್ರಮವನ್ನು 1973ರಲ್ಲಿ ಪ್ರಸಾರಪಟ್ಟಿಯಲ್ಲಿ ಸೇರಿಸಲಾಯಿತು. ಕಾಲಕ್ರಮೇಣ ಕಾರ್ಯಕ್ರಮಗಳ ವೈವಿಧ್ಯ ಜಾಸ್ತಿ ಆಯಿತು. ಸೇನಾಪಡೆ, ಗಡಿಪ್ರದೇಶ, ಕಾರ್ಖಾನೆ ಕಾರ್ಮಿಕರು, ಗುಡ್ಡಗಾಡು ಜನರು ಮತ್ತು ಇತರರಿಗಾಗಿ ಕಾರ್ಯಕ್ರಮಗಳನ್ನು ರೂಪಿಸಲಾಯಿತು. ಆರು ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಿಗಾಗಿ ವಿಶೇಷ ಕಾರ್ಯಕ್ರಮ ಪ್ರಸಾರವಾಗತೊಡಗಿತು.
ಆಂತರಿಕ ತುರ್ತುಪರಿಸ್ಥಿತಿ 1975 ಜೂನ್ 25ರಂದು ಜಾರಿಗೆ ಬಂದಾಗ ಆಕಾಶವಾಣಿಯ ನೀತಿ ಸಂಹಿತೆಯನ್ನು ಕೈಬಿಟ್ಟು ಪ್ರಸಾರ ವ್ಯವಸ್ಥೆಯನ್ನು ಪೂರ್ವ ಪರಿಶೀಲನೆಗೆ ಒಳಪಡಿಸಲಾಯಿತು. ಜನತಾ ಸರ್ಕಾರ 1977 ಮಾರ್ಚ್‍ನಲ್ಲಿ ಅಧಿಕಾರಕ್ಕೆ ಬಂದ ಕೂಡಲೇ ನೀತಿಸಂಹಿತೆಯನ್ನು ಮತ್ತೆ ಜಾರಿಗೆ ತರಲಾಯಿತು. ದೂರದರ್ಶನವನ್ನು ಆಕಾಶವಾಣಿಯಿಂದ 1976 ಏಪ್ರಿಲ್ 1ರಂದು ಪ್ರತ್ಯೇಕಿಸಿ ದೂರದರ್ಶನವೆಂದು ಹೆಸರಿಸಲಾಯಿತು. ಮೊದಲ ಎಫ್‍ಎಮ್ ಕೇಂದ್ರ ಮದ್ರಾಸಿನಲ್ಲಿ 1977 ಜುಲೈ ತಿಂಗಳಲ್ಲಿ ಸ್ಥಾಪನೆಯಾಯಿತು. ಮುಂದೆ ದೇಶದ ಪ್ರಮುಖ ನಗರಗಳಲ್ಲಿ ಸ್ಥಾಪನೆಯಾಗಿವೆ.
ಮಾಹಿತಿ ಕೃಪೆ : ಮೈಸೂರು ವಿಶ್ವಕೋಶ