“ಪ್ರತಿಯೊಂದು ರಾಜಕೀಯ ಪಕ್ಷ- ಸಂಘಟನೆಗಳಿಗೂ ಅಜೆಂಡಾಗಳಿರುತ್ತವೆ. ಆರ್.ಎಸ್.ಎಸ್. ತನ್ನದೇ ಆದ ಅಜೆಂಡಾ ಹೊಂದಿದೆ. ಇದರ ಬಗ್ಗೆ ಅದಕ್ಕೆ ಸ್ಪಷ್ಟತೆಯಿದೆ. ಬಿಜೆಪಿ ಅಜೆಂಡಾವೂ ಸ್ಪಷ್ಟತೆಯಿದೆ. ಆದರೆ ಕಾಂಗ್ರೆಸ್ ಸ್ಪಷ್ಟವಾದ ಅಜೆಂಡಾ ಹೊಂದಿಲ್ಲ. ಒಂದು ನಿಲುವನ್ನು ಹೊಂದುವುದರ ಬಗ್ಗೆಯೇ ಅದಕ್ಕೆ ಗೊಂದಲಗಳಿವೆ” ಎಂದು ಪ್ರಜಾವಾಣಿ – ಡೆಕ್ಕನ್ ಹೆರಾಲ್ಡ್ ಬಳಗದ ಹಿರಿಯ ಪತ್ರಕರ್ತ ಕೆ.ಎನ್. ಹರಿಕುಮಾರ್ ಅಭಿಪ್ರಾಯಪಟ್ಟರು.
“ಬಯಲು ಬಳಗ” ಅರ್ಥಪೂರ್ಣ ಸಂವಾದಗಳನ್ನು ನಡೆಸುತ್ತಿದೆ. ವಿಚಾರಾಸಕ್ತರ ಮುಂದೆ ವಿವಿಧ ಕ್ಷೇತ್ರಗಳ ಹಿರಿಯರನ್ನು ಮುಖಾಮುಖಿಯಾಗಿಸುತ್ತಿದೆ. ವರ್ತಮಾನದಲ್ಲಿ ಇದು ಮಹತ್ವದ ಸಂಗತಿ. ಇದೇ ಮಾಲಿಕೆಯಲ್ಲಿ ಸೆಪ್ಟೆಂಬರ್ 21ರಂದು ಡೆಕ್ಕನ್ ಹೆರಾಲ್ಡ್ – ಪ್ರಜಾವಾಣಿ ಬಳಗದ ಹಿರಿಯ ಪತ್ರಕರ್ತ ಕೆ.ಎನ್. ಹರಿಕುಮಾರ್ ಅವರಿಂದ “ಮಾಧ್ಯಮ ಮತ್ತು ವರ್ತಮಾನದ ಸವಾಲುಗಳು” ಕುರಿತು ಮಂಥನ ಆಯೋಜಿಸಿತ್ತು.
ಈ ಸಂದರ್ಭದಲ್ಲಿ ಕೆ.ಎನ್. ಹರಿಕುಮಾರ್ ಅವರು. ತಮ್ಮ ಗ್ರಹಿಕೆಗೆ ಬಂದ ಸಂಗತಿಗಳನ್ನು ವಿಶ್ಲೇಷಿಸಿ ಮಾತನಾಡಿದರು. “ರಾಷ್ಟ್ರೀಯವಾದ ವಿಚಾರದಲ್ಲಿ ಬಿಜೆಪಿ ಅಗ್ರೆಸೀವ್ ಆಗಿದೆ. ಆದರೆ ಈ ವಿಚಾರದಲ್ಲಿ ಕಾಂಗ್ರೆಸ್ ಸ್ಪಷ್ಟವಾಗಿಲ್ಲ. ಅದು ಅಗ್ರೆಸೀವ್ ಆಗಿಲ್ಲದಿರುವುದು ಕೊರತೆ. ಅದಿನ್ನೂ ಗೊಂದಲದಲ್ಲಿ ಇದ್ದಂತಿದೆ. ಆರ್.ಎಸ್.ಎಸ್.ಗೆ ಸಂವಿಧಾನದಲ್ಲಿ ನಂಬಿಕೆ ಇಲ್ಲದಂತೆ ಕಂಡರೂ ಬಿಜೆಪಿ ಸಂವಿಧಾನದ ವಿರುದ್ಧ ಹೋಗುತ್ತಿಲ್ಲ ಎಂಬುದು ಗಮನಾರ್ಹ. ಅದು ತರುತ್ತಿರುವ ಬದಲಾವಣೆಗಳು ಅದರ ಚೌಕಟ್ಟಿನಲ್ಲಿಯೇ ಇವೆ.ಅಸ್ಸಾಂನಲ್ಲಿ ತಂದ ಎನ್.ಆರ್.ಸಿ. ಸುಪ್ರೀಕೋರ್ಟ್ ನಿರ್ದೇಶನದ ಪ್ರಕಾರವೇ ಆಗಿದೆ. ಅಸ್ಸಾಂ ರಾಜ್ಯ ಕೂಡ ಇದರ ಪರವಾಗಿಯೇ ಇದೆ. ಕಾಶ್ಮೀರದಲ್ಲಿನ 370ನೇ ವಿಧಿ ತೆಗೆದಿರುವ ಕ್ರಮ ಕೂಡ ಸಂವಿಧಾನಕ್ಕೆ ವಿರೋಧಿಯಾಗಿಲ್ಲ”
ಮಾಧ್ಯಮಗಳು ಸಂಪೂರ್ಣ ಬಿಜೆಪಿ ಪರವಾಗಿವೆ ಎಂಬ ಮಾತನ್ನು ಹರಿಕುಮಾರ್ ಸಂಪೂರ್ಣ ಒಪ್ಪಲಿಲ್ಲ. “ಕೆಲವು ಟಿವಿ ಮಾಧ್ಯಮಗಳು ಪಕ್ಷಪಾತಿಯಾಗಿರುವುದು ನಿಜ. ಎನ್.ಡಿ.ಟಿ.ವಿ.ಯಂಥ ನಿಷ್ಪಕ್ಷಪಾತ ವಾಹಿನಿಗಳೂ ಇವೆ. ಮುದ್ರಣ ಮಾಧ್ಯಮ ವಿಶ್ವಾಸಾರ್ಹತೆ ಕಳೆದುಕೊಂಡಿಲ್ಲ. ತೀರಾ ಬಿಜೆಪಿ ಕಟ್ಟರ್ ಎಂದು ಯಾವುದೇ ಟಿವಿ, ಪತ್ರಿಕೆಗಳನ್ನು ಹೇಳುವ ಹಾಗಿಲ್ಲ. ಬಿಜೆಪಿ ಸರ್ಕಾರಗಳ ವಿರುದ್ಧವಾದ ವರದಿಗಳು, ವಿಶ್ಲೇಷಣೆಗಳೂ ಅಲ್ಲಿ ಬರುತ್ತಿವೆ” ಎಂದರು
ಮಾಧ್ಯಮಗಳಲ್ಲಿ ಸಕಾರಾತ್ಮಕತೆ, ನಕಾರಾತ್ಮಕತೆ ಎರಡೂ ಇದೆ. ಪ್ರತಿಯೊಂದು ರಾಜಕೀಯ ಪಕ್ಷಗಳು ತಮ್ಮದೇ ಆದ ಟಿವಿ ಮಾಧ್ಯಮಗಳನ್ನು ಹೊಂದಿವೆ. ನೆರೆಯ ತಮಿಳುನಾಡಿನ ಪ್ರತಿ ರಾಜಕೀಯ ಪಕ್ಷಕ್ಕೂ ಅವುಗಳದ್ದೇ ಪ್ರತ್ಯೇಕ ನ್ಯೂಸ್ ಚಾನೆಲ್ ಇದೆ. ಜೆಡಿಎಸ್ ಕೂಡ ತನ್ನದೇ ನ್ಯೂಸ್ ಚಾನೆಲ್ ಹೊಂದಿದೆ.
ಮಾಧ್ಯಮಗಳ ವಿಚಾರದಲ್ಲಿ ಇಂದಿರಾ ಕಠಿಣ ನಿಲುವು ತಾಳಿದ್ದರು. ಆದರೆ ಮೋದಿ ಅವರಲ್ಲಿ ಇಂಥ ಧೋರಣೆ ಕಾಣುತ್ತಿಲ್ಲ. ಮಮತಾ ಬ್ಯಾನರ್ಜಿ ವಿಷಯಕ್ಕೆ ಹೇಳುವುದಾದರೆ ಇವರು ಮಾಧ್ಯಮಗಳನ್ನು ತೀವ್ರವಾಗಿ ಟೀಕಿಸುತ್ತಾರೆ. ಇದೇ ಮಾದರಿಯನ್ನು ಹೆಚ್.ಡಿ. ಕುಮಾರಸ್ವಾಮಿ ಅನುಸರಿಸುತ್ತಾರೆ. ಬಹುತೇಕ ರಾಜಕಾರಣಿಗಳದ್ದೂ ಇದೇ ಮನಸ್ಥಿತಿ ಎಂದರು.
ಮುದ್ರಣ ಸ್ವರೂಪದ ಪತ್ರಿಕೆಗಳು ಇನ್ನೂ ಬಹಳ ವರ್ಷ ಮುಂದುವರಿಯುತ್ತದೆ ಎಂದು ಹೇಳಲು ಅಗುವುದಿಲ್ಲ. ಆದರೆ ಸಂಪೂರ್ಣ ಎಲೆಕ್ಟ್ರಾನಿಕ್ ಸ್ವರೂಪದಲ್ಲಿ ನಮ್ಮ ಮುಂದೆ ಬಂದರೂ ಪ್ರಜಾವಾಣಿ ಪ್ರಜಾವಾಣಿಯಾಗಿಯೇ ಇರುತ್ತದೆ ಎನ್ನುವುದರ ಮೂಲಕ ಅದರ ಧೋರಣೆಗಳು ಬದಲಾಗಲಾರವು ಎಂದು ಸೂಚ್ಯವಾಗಿ ಹೇಳಿದರು.
ಮೂರು ದಶಕಗಳ ಹಿಂದಿನ ಆಡಳಿತ, ಆ ಸಂದರ್ಭದ ದೌರ್ಜನ್ಯಗಳಿಗೆ ಹೋಲಿಸಿದರೆ ಇಂದಿನ ಪರಿಸ್ಥಿತಿ ಅಗಾಧ ರೀತಿಯಲ್ಲಿ ಸುಧಾರಣೆ ಆಗಿದೆ. ಆದರೆ ಎಲ್ಲವೂ ಫರ್ಫೆಕ್ಟ್ ಆಗಿದೆ ಎಂದು ಹೇಳಲು ಆಗುವುದಿಲ್ಲ. ಈಗ ಜನ ಹೆಚ್ಚೆಚ್ಚು ಮಾತನಾಡುತ್ತಿದ್ದಾರೆ. ಹಿಂದೆ ಇಂಥ ಪರಿಸ್ಥಿತಿ ಇರಲಿಲ್ಲ. ಯುಪಿಎ ಸರ್ಕಾರ, ಆಂಧ್ರದ ಜಗನ್ಮೋಹನ್ ರೆಡ್ಡಿ ವಿರುದ್ಧ ಸರಣಿ ಪ್ರಕರಣಗಳನ್ನು ದಾಖಲಿಸಿತ್ತು. ಇದೇ ಧೋರಣೆಯನ್ನು ಎನ್.ಡಿ.ಎ. ಸರ್ಕಾರ ಹೊಂದಿದೆ. ಅನುಸರಿಸುತ್ತಿದೆ.
“ಕೆಲವೊಮ್ಮೆ ಶಾ ಅಗ್ರೆಸೀವ್ ಅನಿಸಿದರೆ ಕೆಲವೊಮ್ಮೆ ಮೋದಿ. ಆಯಾ ಬೆಳವಣಿಗೆಗೆ ತಕ್ಕಂತೆ ಈ ಪಾತ್ರಗಳು ಬದಲಾಗುತ್ತಿರುತ್ತವೆ. ಇದೊಂದು ರೀತಿ ಗುಡ್ ಪೊಲೀಸ್, ಬ್ಯಾಡ್ ಪೊಲೀಸ್ ಇದ್ದಂತೆ ಎಂದ ಅವರು ಇದೇ ಮಾದರಿಯಲ್ಲಿ ವಾಜಪೇಯಿ ಸೌಮ್ಯವಾದಿಯಾಗಿದ್ದರೆ ಅಡ್ವಾಣಿ ತೀವ್ರವಾದಿಯಾಗಿದ್ದರು ಎಂಬುದು ಗಮನಾರ್ಹ. ಇನ್ನೊಂದು ಕುತೂಹಲಕಾರಿ ಸಂಗತಿಯೆಂದರೆ ಸಂಘ ಪರಿವಾರದ ಗೋಡ್ಸೆ, ಗಾಂಧಿ ವಿರೋಧಿ. ಆದರೆ ಅದೇ ಪರಿವಾರದ ಮೋದಿ, ಗಾಂಧಿ ಅವರನ್ನು ಮತ್ತೆಮತ್ತೆ ಸ್ಮರಿಸುವ, ಸ್ತುತಿಸುವ ಕೆಲಸ ಮಾಡುತ್ತಿದ್ದಾರೆ. ಇವರ ಮೂಲ ನಿಲುವು ಡೆಮಾಕ್ರಟಿಕ್ ಆಗಿಲ್ಲದೇ ಇರಬಹುದು. ಆದರೆ ಡೆಮಾಕ್ರಟಿಕ್ ಸಿಸ್ಟಂ ಅವರನ್ನು ಹೆಚ್ಚುಹೆಚ್ಚು ತಿದ್ದುತ್ತಿದೆ. ಡೆಮಾಕ್ರಟಿಕ್ ಹಾದಿಯಲ್ಲಿಯೇ ಹೋಗುವಂತೆ ಮಾಡುತ್ತಿದೆ. ಆಡಳಿತದ ವಿಚಾರಕ್ಕೆ ಬಂದಾಗ ಮೋದಿ ಆಡಳಿತ ಕ್ರಮದಲ್ಲಿ ಡೈನಮಿಸಂ ಇದೆ”
“ಸಿಖ್ ಗಲಭೆ ನಡೆದ ಸಂದರ್ಭದಲ್ಲಿ ಯಾರಿಗೂ ಶಿಕ್ಷೆಗಳಾಗಿರಲಿಲ್ಲ. ಆದರೆ ಗುಜರಾತಿನಲ್ಲಿ ಗೋಧ್ರಾ ಗಲಭೆಯಾದಾಗ ಅದರಲ್ಲಿ ಪಾಲ್ಗೊಂಡವರಿಗೆ ಶಿಕ್ಷೆಯಾಗಿದೆ ಎಂಬುದು ಗಮನಾರ್ಹ. ಗುಜರಾತ್ ಮಾದರಿ ಭಾರತ ಆಗುತ್ತಿದೆ ಎಂದು ಒಪ್ಪಲು ಆಗುವುದಿಲ್ಲ. ಪ್ರಧಾನಿ ಮೋದಿ ಆಡಳಿತದಲ್ಲಿ ನರಮೇಧ, ನಿರಂಕುಶ ಪ್ರಭುತ್ವವೇನೂ ಇಲ್ಲ. ಇಲ್ಲಿ ಫ್ಯಾಸಿಸಂ ಇಲ್ಲ ಎಂದು ಇಂಡಿಯನ್ ಎಕ್ಸ್ ಪ್ರೆಸ್ ನಲ್ಲಿ ಹಿರಿಯ ಕಮ್ಯುನಿಸ್ಟ್ ನಾಯಕ ಪ್ರಕಾಶ್ ಕಾರಟ್ ಹೇಳಿದ್ದಾರೆ. ಆದರೆ ಈ ಮಾತನ್ನು ಕನ್ಹಯ್ಯ ಕುಮಾರ್ ಒಪ್ಪುತ್ತಿಲ್ಲ” ಎಂದರು.
ಭಾರತದ ನೆರೆಹೊರೆ ರಾಷ್ಟ್ರಗಳಾದ ಚೈನಾ, ಶ್ರೀಲಂಕಾ ಮತ್ತು ದೂರದ ವಿಯಟ್ನಾಂ ಅಭಿವೃದ್ಧಿ ವಿಚಾರದಲ್ಲಿ ಹೊಂದಿರುವ ವೇಗವನ್ನು ಭಾರತ ಹೊಂದಿಲ್ಲ. ಇಲ್ಲಿನ ಅಭಿವೃದ್ಧಿ ಕೆಟ್ಟದಾಗಿದೆ. ಇಲ್ಲಿನ ಸರ್ಕಾರಗಳ ನೀತಿಗಳು ಜನಸಾಮಾನ್ಯರಿಗಿಂತ ಕಾರ್ಪೋರೆಟ್ ಕಂಪನಿಗಳ ಅಭಿವೃದ್ಧಿಗೆ ಸಹಾಯಕವಾಗಿವೆ. ಇಂಥ ಸಂಸ್ಥೆಗಳೇ ಅಭಿವೃದ್ಧಿಯಾಗಿವ. ಕೃಷಿರಂಗ ಪ್ರಗತಿಯಾಗಿಲ್ಲ. ಹಿಂದಿನ ಸರ್ಕಾರಗಳಲ್ಲಿಯೂ ಇದೇ ಪರಿಸ್ಥಿತಿ ಇತ್ತು. ಆದರೆ ಇದೇ ಸಂದರ್ಭದಲ್ಲಿ ಗುಜರಾತ್, ಮಧ್ಯಪ್ರದೇಶ ಕೃಷಿಕ್ಷೇತ್ರಗಳಲ್ಲಿ ಶೇಕಡ 10ರಷ್ಟು ಅಭಿವೃದ್ಧಿಯಾಗಿದೆ. ಇದಕ್ಕೆ ಮೋದಿ ಅಥವಾ ಬಿಜೆಪಿ ಆಡಳಿತ ಕಾರಣ ಎಂಬ ಮಾತನ್ನು ಹೇಳಲಾಗುವುದಿಲ್ಲ ಎಂದರು.
ನಮ್ಮ ಮನಸ್ಥಿತಿಗೆ ತಕ್ಕ ಉತ್ತರ ನಿರೀಕ್ಷಿಸುತ್ತೇವೆಯೇ ?
ಕೆ.ಎನ್. ಹರಿಕುಮಾರ್ ಅವರಿಗೆ ಸಾಕಷ್ಟು ಪ್ರಶ್ನೆಗಳು ಎದುರಾದವು. ಅವುಗಳಿಗೆ ಅವರು ಸಮಚಿತ್ತದ ವಿವರಣೆ ನೀಡಿದರು. ಈ ಸಂದರ್ಭದಲ್ಲಿ ಮಹಿಳಾ ಸಭಿಕರೊಬ್ಬರು ಎದ್ದುನಿಂತು ” ಮೋದಿ ಅವರು ಎಲ್ಲದಕ್ಕೂ ನೆಹರು ಅವರನ್ನೇ ಹೊಣೆ ಮಾಡುವ ಪ್ರವೃತ್ತಿ ಹೊಂದಿದ್ದಾರೆ. ನೀವೂ ಅವರಂತೆಯೇ ಮಾತನಾಡುತ್ತಿದ್ದೀರಿ. ಬೇರೆಬೇರೆ ಪುರುಷ ರಾಜಕೀಯ ನಾಯಕರ ಬಗ್ಗೆ ಮಾತನಾಡುವಾಗ ಬಹುವಚನ ಬಳಸಿದಿರಿ. ಆದರೆ ಮಮತಾ ವಿಚಾರ ಬಂದಾಗ ಅವಳು ಎಂದಿರಿ” ಎಂದು ಆಕ್ಷೇಪಿಸಿದರು.
ಹರಿಕುಮಾರ್ ಅವರು ಮಾಧ್ಯಮದ ನೆಲೆಯಲ್ಲಿ ನಿಂತು ಸಾಕ್ಷಿಪ್ರಜ್ಞೆಯ ದೃಷ್ಟಿಯಿಂದ ಮಾತನಾಡಿದರು. ಅವರು ಯಾವ ಪಕ್ಷ, ವ್ಯಕ್ತಿಯ ಪರವಾಗಿಯೂ ಮಾತನಾಡಲಿಲ್ಲ. ಹಾಗೆ ನೋಡಿದರೆ ಅಭಿವೃದ್ಧಿ ವಿಚಾರದಲ್ಲಿ ಅನಾಣ್ಯೀಕರಣ (demonetization) ವಿಚಾರದಲ್ಲಿ ಮೋದಿ ಸರ್ಕಾರದ ನಿಲುವುಗಳನ್ನು ಅವರು ಒಪ್ಪಲಿಲ್ಲ.
ಬಿಜೆಪಿ ಮತ್ತು ಮೋದಿ ಸರ್ಕಾರದ ವಿರುದ್ಧ ಪತ್ರಕರ್ತ ಹರಿಕುಮಾರ್ ತೀವ್ರವಾಗಿ ಹರಿಹಾಯುತ್ತಾರೆ ಎಂಬ ನಿರೀಕ್ಷೆಯಲ್ಲಿ ಬಂದವರಿಗೆ ಬಹುಶಃ ನಿರಾಶೆಯಾಗಿರಬಹುದು. ಅವರು ಇದೇರೀತಿ ಮಾತನಾಡಬೇಕು ಎಂಬ ನಿರೀಕ್ಷೆಯಾದರೂ ಏಕೆ. ಅವರ ಮಾತನ್ನು ಒಪ್ಪದಿರಬಹುದು. ಆದರೆ ನೀವು ಮೋದಿ ಅವರಂತೆಯೇ ಮಾತನಾಡುತ್ತೀರಿ ಎಂದು ಆಕ್ಷೇಪಿಸಿದ್ದು ಸೂಕ್ತವೆನಿಸಲಿಲ್ಲ.
ಮಮತಾ ಬ್ಯಾನರ್ಜಿ ಅವರ ವಿಷಯದಲ್ಲಿಯೂ ಅವರು ಅಗೌರವದಿಂದ ಮಾತನಾಡಲಿಲ್ಲ. ಇದು ನನ್ನ ಸಮರ್ಥನೆಯಲ್ಲ. ಹರಿಕುಮಾರ್ ಮಾತಿನ ಓಘ, ಕನ್ನಡದ ಧಾಟಿ ಆಗಿತ್ತು. ಅವರು ಪುರುಷ ರಾಜಕಾರಣಿಗಳ ಬಗ್ಗೆಯೂ ಮಾತನಾಡುವಾಗಲೂ ಕೆಲವು ಬಾರಿ ಏಕವಚನದಲ್ಲಿ ಮಾತನಾಡಿದರು. ನಿನ್ನೆ ಅವರು ಆಡಿದ ಮಾತುಗಳು ರೆಕಾರ್ಡ್ ಆಗಿವೆ. ಅವಶ್ಯಕವಿದ್ದರೆ ಅದನ್ನು ಕೇಳಬಹುದು.
ಅಧ್ಯಕ್ಷತೆ ವಹಿಸಿದ್ದ ಕೆ.ವೈ. ನಾರಾಯಣಸ್ವಾಮಿ ಅವರು ಹರಿಕುಮಾರ್ ಅವರ ವಿಚಾರಗಳನ್ನು ಗ್ರಹಿಸಿ ಅರ್ಥಪೂರ್ಣವಾಗಿ ಮಾತನಾಡಿದರು. ಇವರು ಬಿಜೆಪಿ, ಮೋದಿ ಪರವಾಗಿಯಿಲ್ಲ. ಸಮಗ್ರನೋಟದ ಹಿನ್ನೆಲೆಯಲ್ಲಿ ಮಾತನಾಡಿದ್ದಾರೆ. ಇವರ ಮಾತುಗಳನ್ನು ತಪ್ಪಾಗಿ ಗ್ರಹಿಸಬಾರದು ಎಂದರು.