“ಸಕ್ಕರೆ ಬೈಲು ಆನೆ ಶಿಬಿರದಲ್ಲಿರುವ ಬಾಲಣ್ಣ ಎಂಬ 35 ವರ್ಷದ ಆನೆಯನ್ನು ಶಿವಮೊಗ್ಗ ದಸರಾ ಮಹೋತ್ಸವಕ್ಕೆ ಕಳುಹಿಸಲಾಗಿತ್ತು. ಆ ಸಂದರ್ಭದಲ್ಲಿ ಗಾಯಗೊಂಡಿದ್ದ ಆನೆಗೆ ಐ.ವಿ. ಚುಚ್ಚುಮದ್ದು ನೀಡುವ ಸಂದರ್ಭದಲ್ಲಿ ಆಗಿರುವ ನಿರ್ಲಕ್ಷ್ಯದಿಂದ ಸೋಂಕು ಆಗಿ ನರಳುತ್ತಿದೆ, ಇದರ ಜೊತೆಗೆ ಶಿಬಿರದಲ್ಲಿರುವ ಸಾಗರ್ ಎಂಬ ಆನೆಯೂ ಸೇರಿದಂತೆ ಒಟ್ಟು 4 ಆನೆಗಳು ಗಾಯದಿಂದ ಬಳಲುತ್ತಿವೆ. ಇಲ್ಲಿ ಪಶುವೈದ್ಯರ ಕೊರತೆ ಇದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ” ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಟಿಪ್ಪಣಿಯಲ್ಲಿ ತಿಳಿಸಿದ್ದಾರೆ. ಇದರ ಜೊತೆಗೆ ಎಂದಿನಂತೆ ಅವರು ಹೇಳಿರುವ ಮಾತು ಮುಂದಿದೆ.
ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ರಾಜ್ಯದಲ್ಲಿರುವ ಎಲ್ಲ ಆನೆ ಶಿಬಿರಗಳಲ್ಲಿ ಮತ್ತು ಮೃಗಾಲಯಗಳಲ್ಲಿ ಸಮರ್ಪಿತ ವೈದ್ಯಾಧಿಕಾರಿ ಇರಬೇಕು, ವೈದ್ಯರ ಕೊರತೆ ಇದ್ದರೆ ಗುತ್ತಿಗೆಯ ಆಧಾರದಲ್ಲಿ ಅಥವಾ ನಿಯೋಜನೆಯ ಮೇಲೆ ವೈದ್ಯರನ್ನು ತಕ್ಷಣ ನೇಮಕ ಮಾಡಿಕೊಳ್ಳಬೇಕು ಎಂದು ಈ ಹಿಂದೆ ಹಲವು ಸಭೆಗಳಲ್ಲಿ ತಿಳಿಸಲಾಗಿದೆ. ಈ ಬಗ್ಗೆ ತುರ್ತು ಕ್ರಮ ವಹಿಸಲು ಮತ್ತು ಬಾಲಣ್ಣ ಆನೆಗೆ ಚುಚ್ಚು ಮದ್ದು ನೀಡುವ ವೇಳೆ ವೈದ್ಯಾಧಿಕಾರಿ, ಅಧಿಕಾರಿ ಹಾಗೂ ಸಿಬ್ಬಂದಿಯ ನಿರ್ಲಕ್ಷ್ಯ ಇದ್ದಲ್ಲಿ, ಅವರ ವಿರುದ್ಧ ಶಿಸ್ತುಕ್ರಮದ ಶಿಫಾರಸಿನೊಂದಿಗೆ 1 ವಾರದೊಳಗೆ ಸಮಗ್ರ ವರದಿಯನ್ನು ಈ ಕಚೇರಿಗೆ ಕಡ್ಡಾಯವಾಗಿ ಸಲ್ಲಿಸಲು ಸೂಚಿಸಿದೆ.

ಅರಣ್ಯ ಇಲಾಖೆಯ ಅದಕ್ಷತೆಯಿಂದ ಅನೇಕ ಉಂಟಾಗುತ್ತಿರುವ ತೊಂದರೆಗಳು ಉಂಟಾಗುತ್ತಿವೆ. ತೀವ್ರ ಗಂಭೀರವಾದ ತೊಂದರೆಗಳು ಉಂಟಾದ ಮೇಲೆ ವರದಿ ಕೊಡಿ, ಅಧಿಕಾರಿ, ಸಿಬ್ಬಂದಿ ನಿರ್ಲಕ್ಷ್ಯ ಇದ್ದಲ್ಲಿ ಶಿಸ್ತುಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳುವ ಪರಿಪಾಠ ಏಕೆ ಬೆಳೆಸಿಕೊಂಡಿದ್ದೀರಿ ಅರಣ್ಯ ಸಚಿವರೇ ? ಬಹುಶಃ ಈ ಮಾದರಿಯ ಪತ್ರಗಳನ್ನು ದಾಖಲೆ ಸಂಖ್ಯೆಯಲ್ಲಿ ಬರೆದ ಅರಣ್ಯ ಸಚಿವರು ನೀವೊಬ್ಬರೇ ಇರಬಹುದು. ಆದರೆ ಸುಧಾರಣೆಯಾಗಿರುವುದೇನು ?
ರಾಜ್ಯದಲ್ಲಿರುವ ಆನೆ ಶಿಬಿರಗಳ ನಿರ್ವಹಣೆ ಬಗ್ಗೆ ಸಾಕಷ್ಟು ಆರೋಪಗಳಿವೆ. ಅವುಗಳ ಬಗ್ಗೆ ವನ್ಯಜೀವಿ ಪ್ರೇಮಿಗಳು ಸಾಕಷ್ಟು ಬಾರಿ ಅರಣ್ಯ ಇಲಾಖೆ ಗಮನಕ್ಕೂ ತಂದಿದ್ದಾರೆ. ಆದರೆ ಯಾವುದೇ ಪ್ರಯೋಜನವೂ ಆಗಿಲ್ಲ. ಅವುಗಳ ಬಗ್ಗೆ ರಾಜ್ಯದ ವನ್ಯಜೀವಿ ತಜ್ಞ ಜೋಸೆಫ್ ಹೂವರ್ ಹೇಳಿರುವುದು ಮುಂದಿದೆ.
ಕರ್ನಾಟಕ ಸರ್ಕಾರದ ಮುಂದೆ ವನ್ಯಪ್ರಾಣಿಗಳ ಸುರಕ್ಷತೆಗೆ ಸಂಬಂಧಿಸಿದಂತೆ ಬೇಡಿಕೆ ಇಡುತ್ತಿದ್ದೇವೆ. ಸೆರೆ ಹಿಡಿದ ಆನೆಗಳನ್ನು ಕ್ಷೇಮವಾಗಿ ನೋಡಿಕೊಳ್ಳಲು ಆಗದಿದ್ದರೆ ಆನೆ ಶಿಬಿರಗಳನ್ನು ದಯವಿಟ್ಟು ಮುಚ್ಚಿ. ಕರ್ನಾಟಕದ ಎಲ್ಲ ಆನೆ ಶಿಬಿರಗಳಲ್ಲಿಯೂ ತೊಂದರೆಗಳಿವೆ. ಅಲ್ಲಿನ ವ್ಯವಸ್ಥೆಗಳು ಸರಿ ಇಲ್ಲ. ಮೊದಲನೇಯದಾಗಿ ಅರಣ್ಯ ಇಲಾಖೆಯ ಅಧಿಕಾರಿಗಳಿಂದ ಆರಂಭಿಸಿ ಗಾರ್ಡ್ ತನಕ ಯಾರಿಗೂ ಆನೆ ನಿರ್ವಹಣೆ, ಸುರಕ್ಷತೆ ಬಗ್ಗೆ ಗೊತ್ತೇ ಇಲ್ಲ. ಅವರಿಗೆ ಇವುಗಳ ಬಗ್ಗೆ ಕಲಿಯುವ ಆಸಕ್ತಿಯೂ ಇಲ್ಲ.
ಇವೆಲ್ಲ ಕೊರತೆಗಳ ನಡುವೆ ವನ್ಯಜೀವನ, ವನ್ಯಪ್ರಾಣಿಗಳ ಆರೋಗ್ಯ, ಅವುಗಳ ಕಾಯಿಲೆಗಳ ಬಗ್ಗೆ ಆಳವಾದ ತಿಳಿವಳಿಕೆ ಇರುವ ಪಶುವೈದ್ಯರ ಕೊರತೆ ಅಪಾರವಾಗಿದೆ. ಈ ಕೊರತೆ ನೀಗಿಸಿ, ಪಶುವೈದ್ಯರನ್ನು ಅಗತ್ಯಕ್ಕೆ ತಕ್ಕಂತೆ ನೇಮಕ ಮಾಡಿ ಎಂದು ೨೦೧೯ರಿಂದಲೂ ಮನವಿ ಸಲ್ಲಿಸುತ್ತಿದ್ದೇವೆ. ಐ.ಎಫ್.ಎಸ್., ಕೆ.ಎಫ್.ಎಸ್. , ನೇಮಕಾತಿಗಳು ನಡೆಯುವ ಹಾಗೆ ನೇರವಾಗಿ ಪಶುವೈದ್ಯರನ್ನು ನೇಮಕ ಮಾಡಿಕೊಳ್ಳಿ ಎಂದು ಹೇಳುತ್ತಿದ್ದೇವೆ. ಇದನ್ನೆಲ್ಲ ಮತ್ತೆ ಹೇಳುವ ಸ್ಥಿತಿ ನಿರ್ಮಾಣವಾಗಿದೆ.
ಶಿವಮೊಗ್ಗ ಜಿಲ್ಲೆಯ ಸಕ್ರೆಬೈಲಿನ ಆನೆ ಶಿಬಿರದಲ್ಲಿ ಇರುವ ಬಾಲಣ್ಣ ಎಂಬ ಆನೆಗೆ ತೀವ್ರ ಗಂಭೀರ ಸೋಂಕು ಉಂಟಾಗಿದೆ. ಸಾವು – ಬದುಕಿನ ಮಧ್ಯೆ ತೋಯ್ದಾಡುತ್ತಿದೆ. ಈ ಆನೆಗೆ ತೀವ್ರ ಕಾಲು ನೋವಿದ್ದರೂ ದಸರಾ ಮೆರವಣಿಗೆಗೆ ತೆಗೆದುಕೊಂಡು ಹೋಗಿದ್ದರು. ಅದು ಅನುಭವಿಸುತ್ತಿದ್ದ ಮಾರಣಾಂತಿಕ ನೋವನ್ನು ಸಹ ಪರಿಗಣಿಸಿಲ್ಲ. ಸತತವಾಗಿ ಇಂಜೆಕ್ಷನ್ ಗಳನ್ನು ಕೊಟ್ಟು ಕರೆದುಕೊಂಡು ಹೋಗಿದ್ದಾರೆ. ಇವೆಲ್ಲದರ ಪರಿಣಾಮ ಬಾಲಣ್ಣ ಆನೆಯ ಸೋಂಕು ಉಲ್ಬಣಿಸಿದೆ. ಸೋಂಕಿನಿಂದ ಅದರ ಕಿವಿ ಬಿದ್ದು ಹೋಗುವಂಥ ದುಸ್ಥಿತಿ ಉಂಟಾಗಿದೆ.
ಶರಾವತಿ ಪಂಪ್ ಸ್ಟೋರೇಜ್ ಸಂಬಂಧಿತ ಹೋರಾಟಕ್ಕೆ ಶಿವಮೊಗ್ಗಕ್ಕೆ ಹೋದಾಗ ಸಕ್ರೆಬೈಲ್ ಆನೆ ಕ್ಯಾಂಪಿಗೆ ಭೇಟಿ ಕೊಟ್ಟಿದ್ದೆವು. ಅಲ್ಲಿ ಅಡ್ಕಬಡ್ಕ ಎನ್ನುವ ಆನೆಯನ್ನು ಕ್ರಾಲ್ ನೊಳಗೆ ಇಟ್ಟಿದ್ದರು. ಅದರ ಕಾಲು ಸೋಂಕಿನಿಂದ ತೀವ್ರ ಊದಿಕೊಂಡಿತ್ತು !ಅದಕ್ಕೆ ಚಿಕಿತ್ಸೆ ನೀಡುತ್ತಿದ್ದರು. ವಿಕ್ರಾಂತ್ ಎನ್ನುವ ಆನೆಯನ್ನು ಕ್ರಾಲ್ ನಲ್ಲಿಟ್ಟು ಬಡಿದು, ಚುಚ್ಚಿದ್ದರಿಂದ ಅದಕ್ಕೆ ಸೋಂಕು ಉಂಟಾಗಿ ಚೇತರಿಸಿಕೊಳ್ಳುತ್ತಿತ್ತು.
ಇದನ್ನೆಲ್ಲ ನೋಡಿದಾಗ ಸಕ್ರೆಬೈಲು ಆನೆ ಕ್ಯಾಂಪಿನೊಳಗೆ ಏಕೆ ಅತೀಹೆಚ್ಚು ತೊಂದರೆಗಳು ಕಂಡು ಬರುತ್ತಿವೆ ಎಂಬ ಪ್ರಶ್ನೆ ಮೂಡುತ್ತದೆ. ಇತ್ತೀಚೆಗೆ ನಡೆದ ದಸರಾಕ್ಕೆ ಹೆಣ್ಣಾನೆಯೊಂದನ್ನು ತೆಗೆದುಕೊಂಡು ಹೋಗಿದ್ದರು. ಅದು ದಸರಾ ಸಮಯದಲ್ಲಿಯೇ ಮರಿಗೆ ಜನ್ಮನೀಡಿತು. ಒಂದು ಆನೆ ಗರ್ಭೀಣಿಯಾಗಿದೆ ಎನ್ನುವ ಸಂಗತಿಯೇ ದಸರಾ ಶಿಬಿರದ ಪಶುವೈದ್ಯರಿಗೆ, ನಿರ್ವಹಣೆ ಜವಾಬ್ದಾರಿ ಹೊತ್ತಿದ್ದ ಡಿ.ಎಫ್.ಒ.ಗೆ ಗೊತ್ತಾಗಲಿಲ್ಲ ಎಂದರೆ ಶೋಚನೀಯ ಸ್ಥಿತಿ. ಶಿವಮೊಗ್ಗದ ಸಕ್ರೆಬೈಲ್ ಕ್ಯಾಂಪಿನ ಇನ್ನೊಂದು ಆನೆಯ ಆರೋಗ್ಯ ಸ್ಥಿತಿಯೂ ಗಂಭೀರವಾಗಿದೆ ಎಂಬ ಮಾಹಿತಿ ಇದೆ. ಸಕ್ರೆಬೈಲು ಸೇರಿದಂತೆ ಯಾವ ಆನೆ ಶಿಬಿರಗಳಲ್ಲಿಯೂ ಸುಸಜ್ಜಿತವಾದ ಪಶು ಆಸ್ಪತ್ರೆಳಿಲ್ಲ.
ಗ್ರಾಮಠಾಣಗಳ ಜಮೀನುಗಳಿಗೆ ನುಗ್ಗಿ ತೊಂದರೆ ಮಾಡುತ್ತಿದೆ ಎಂದು ಆನೆಗಳನ್ನು ಸರೆಹಿಡಿದು ದೀರ್ಘಾವಧಿ ಕ್ರಾಲ್ ನಲ್ಲಿಟ್ಟು ಪಳಗಿಸುವಾಗ ಹಿಂಸೆ ಕೊಡುತ್ತೀರಿ. ಈ ಸಂದರ್ಭದಲ್ಲಿಯೂ ಅವುಗಳಿಗೆ ಗಾಯಗಳಾಗಿ ಸೋಂಕುಗಳಾಗುತ್ತವೆ. ತುರ್ತುಚಿಕಿತ್ಸೆಗಳು ಲಭ್ಯವಾಗುತ್ತಿಲ್ಲ. ಇಷ್ಟೆಲ್ಲ ಕೊರತೆ ಇರುವಾಗ ಆನೆ ಶಿಬಿರಳನ್ನು ಏಕೆ ನಡೆಸುತ್ತೀರಿ. ಅವುಗಳನ್ನು ಮುಚ್ಚಿ ನರಕದಿಂದ ಆನೆಗಳಿಗೆ ಬಿಡುಗಡೆ ನೀಡುವುದು ಸೂಕ್ತ
