ಸದಾ ತಂಪು ನೀಡುವ, ತಂಗಾಳಿ ಸೂಸುವ ಮರಗಳೆಡೆಯ ಪ್ರೆಸ್ ಕ್ಲಬ್ಬಿನ ಸಭಾಂಗಣ ಕಿಕ್ಕಿರಿದಿತ್ತು. ಮೊನಚಾದ ಪ್ರಶ್ನೆಗಳು ರೊಯ್ಯನೆ ಬರುತ್ತಿದ್ದವು. ಅವುಗಳಿಂದ ವೇದಿಕೆಯಲ್ಲಿದ್ದ ಆ ಹೆಣ್ಣುಮಗಳು ವಿಚಲಿತರಾಗಲಿಲ್ಲ. ಪ್ರತಿಯೊಂದು ಪ್ರಶ್ನೆಗೂ ಸ್ಪಷ್ಟ, ದಿಟ್ಟ ಉತ್ತರ ನೀಡುತ್ತಿದ್ದರು. ಅವುಗಳ ಖಚಿತೆತೆ ಮುಂದಿನ ಸಾಲಿನಲ್ಲಿದ್ದ ಮಾಗಿದ ಹಿರಿಯ ಪತ್ರಕರ್ತರು ವ್ಹಾ ಎಂದು ತಲೆದೂಗಿದರು. ಸಂವಾದದ ಆರಂಭದಿಂದ ಕೊನೆಯ ತನಕ ಎಲ್ಲಿಯೂ ತಾಳ್ಮೆಗೆಡದೆ, ಅವಸರಿಸದೆ ನೀಡಿದ ನೀಡಿದ ಪ್ರತಿಕ್ರಿಯೆಗಳು ಹಿರಿಕಿರಿಯ ಪತ್ರಕರ್ತರ ಮೆಚ್ಚುಗೆಗೆ ಪಾತ್ರವಾಯಿತು.
ಹೀಗೆ ಇಂದು (ಏಪ್ರಿಲ್ 4, 2019) ಮಾತನಾಡಿದವರು ಸುಮಲತಾ ಅಂಬರೀಶ್. ಬೆಂಗಳೂರು ವರದಿಗಾರರ ಕೂಟ ಮತ್ತು ಪ್ರೆಸ್ ಕ್ಲಬ್ ಸಂಯುಕ್ತವಾಗಿ ಏರ್ಪಡಿಸಿದ್ದ ಸಂವಾದ ಅದು. ಪ್ರಸ್ತಾವಿಕ ಮಾತುಗಳ ಸಂದರ್ಭದಲ್ಲಿಯೇ ಬಾಲ್ಯದಲ್ಲಿ ಅನುಭವಿಸಿದ ಸಂಕಷ್ಟಗಳನ್ನು ತೆರೆದಿಟ್ಟರು. ಇನ್ನೂ ಹಾಲುಗಲ್ಲದ ಏಳನೇ ವಯಸ್ಸು. ಅಪ್ಪನ ಮುಖ ಮನದಲ್ಲಿ ಅಚ್ಚೊತ್ತುವ ಮುನ್ನವೇ ಆ ಚಿತ್ರ ಮರೆಯಾಗಿತ್ತು. ಪತಿಯನ್ನು ಕಳೆದುಕೊಂಡ ಅಮ್ಮ ಅವರು ನೀಡಿಹೋದ ಐವರು ಮಕ್ಕಳನ್ನು ಸಲಹಿದ್ದು ಬಹುಕಷ್ಟದಲ್ಲಿ. ಈ ಸಂಕಷ್ಟದಲ್ಲಿ ಓದಲಾಗಿತ್ತು 10ನೇ ತರಗತಿವರೆಗೆ ಮಾತ್ರ. ಚಿತ್ರರಂಗದಲ್ಲಿ ಅವಕಾಶ ಸಿಕ್ಕಿತ್ತು. ಅಭಿನಯವನ್ನು ಜನ ಮೆಚ್ಚಿದ್ದರು. ಇದೇ ಹಾದಿಯಲ್ಲಿ ಪಯಣಿಸುತ್ತಿದ್ದಾಗಲೇ ಅಂಬಿ ಮೆಚ್ಚಿದರು. ಮುಂದಿನ ಜೀವನದ ಹೆಜ್ಜೆಗಳು ಅವರ ಹೆಜ್ಜೆಗಳೊಡನೆ ಸಾಗಿತು. ಹೀಗೆ ತಮ್ಮ ಬದುಕಿನ ಬಂಡಿ ಸಾಗಿಬಂದ ಕಥೆಯನ್ನು ಅವರು ಸಂಕ್ಷಿಪ್ತವಾಗಿ ತೆರೆದಿಟ್ಟರು.
ಸುಮಲತಾ ಮಾತು ನಿಲ್ಲಿಸಿದ ಕ್ಷಣಗಳ ಕಾಲ ಕಡುಮೌನ. ಅದನ್ನು ಮುರಿಯಲೋ ಎಂಬಂತೆ ಪ್ರಶ್ನೆಯೊಂದು ಕೇಳಿಬಂತು. ರಾಜಕೀಯಕ್ಕೆ ಬರುವುದು ಅನಿವಾರ್ಯವಾಗಿತ್ತೆ…? “ ರಾಜಕೀಯಕ್ಕೆ ಬರುವ ಬಗ್ಗೆ ಯೋಚಿಸಿರಲಿಲ್ಲ. ಅಂಬರೀಷ್ ನಿಧನರಾದ ನಂತರ ಮಂಡ್ಯದಲ್ಲಿ ರಾಜಕೀಯರಂಗಕ್ಕೆ ಇಳಿಯಬೇಕು ಎಂಬ ಒತ್ತಾಯ ಬಂತು. ನಾನೇನೂ ತಕ್ಷಣ ಹ್ಹುಗುಟ್ಟಲಿಲ್ಲ. ಜಿಲ್ಲೆಯಾದ್ಯಂತ ಪ್ರವಾಸ ಮಾಡಿ ಜನಭಿಪ್ರಾಯ ಕೇಳಿದೆ. ನೀವು ಚುನಾವಣೆಗೆ ನಿಲ್ಲಬೇಕು, ಗೆದ್ದು ಮಂಡ್ಯದ ಜನರ ಹಿತಾಸಕ್ತಿ ಗಮನದಲ್ಲಿಟ್ಟುಕೊಂಡು ಅಭಿವೃದ್ಧಿಕಾರ್ಯ ಮಾಡಬೇಕು ಎಂಬ ಒತ್ತಾಯ ಪ್ರಬಲವಾಗಿ ಕೇಳಿಬಂತು”
ಬೆಂಬಲ ದೊರಕಿದೆ: ಮಂಡ್ಯದಲ್ಲಿ ಲೋಕಸಭೆಗೆ ಕಾಂಗ್ರೆಸ್ ಟಿಕೇಟ್ ಕೊಡಲಾಗುವುದಿಲ್ಲ; ಬೆಂಗಳೂರಿನಲ್ಲಿ ಬೇಕಿದ್ದರೆ ಸ್ಪರ್ಧಿಸಿ. ಅದಾಗದಿದ್ದರೆ ಎಂ.ಎಲ್.ಸಿ. ಯಾಗಿ ಆಯ್ಕೆ ಮಾಡಲು ಪ್ರಯತ್ನಿಸುತ್ತೇವೆ ಎಂದರು. ಮಂಡ್ಯದಲ್ಲಿ ಅಂಬರೀಶ್ ಅವರಿಗೆ ವಿಶಿಷ್ಟ ಅಸ್ತಿತ್ವವಿದೆ. ಆ ಅಸ್ತಿತ್ವದ ಮುಂದುವರಿಕೆ ಭಾಗವಾಗಿ ಅಲ್ಲಿಂದಲೇ ಸ್ಪರ್ಧಿಸುವಂತೆ ಕಾಂಗ್ರೆಸಿನ ಸ್ಥಳೀಯ ಮುಖಂಡರು, ಕಾರ್ಯಕರ್ತರು, ಅಂಬಿ ಅಭಿಮಾನಿಗಳು ಮತ್ತು ಬಹುತೇಕ ಜನತೆಯ ಒತ್ತಾಯವನ್ನು ನಿರಾಕರಿಸುವುದು, ನಿರ್ಲಕ್ಷ್ಯಿಸಿ ನಡೆಯುವುದು ಸೂಕ್ತವಲ್ಲ ಇದು ಭಾವನಾತ್ಮಕವಾಗಿ ತೀವ್ರವಾಗಿ ತಟ್ಟಿತು. ಜನರ ನಿರೀಕ್ಷೆಗಳನ್ನು ಹುಸಿ ಮಾಡಬಾರದೆಂದುಕೊಂಡೆ. ಅದರ ಅಭಿವ್ಯಕ್ತಿ; ಲೋಕಸಭೆ ಅಭ್ಯರ್ಥಿಯಾಗಿ ಸ್ಪರ್ಧಿಸಿರುವುದು.
ನನಗೊಂದು ಅಸ್ತಿತ್ವವಿದೆ: ಪ್ರತಿಯೊಬ್ಬ ವ್ಯಕ್ತಿಗೂ ಅವರದೇ ಐಡೆಂಟಿಟಿ ಇರುತ್ತದೆ. ಇದರ ಅವರ ಮನೆತನಗಳ ಐಡೆಂಟಿಯೂ ಸೇರಿರುತ್ತದೆ. ಅಂಬರೀಷ್ ಪತ್ನಿ, ಮಳ್ಳವಳ್ಳಿ ಮಂಚೇಗೌಡರ ಸೊಸೆ, ಅಭಿಷೇಕ್ ತಾಯಿ. ಎದುರುಪಕ್ಷದವರು ನನ್ನ ಐಡೆಂಟಿಯನ್ನು ಪ್ರಶ್ನೆ ಮಾಡಿದಾಗ ಹೀಗೆ ಉತ್ತರಿಸಲೇಬೇಕಿತ್ತು. ಅಂಬರೀಷ್ ಇದ್ದಾಗ ರಾಜಕಾರಣದ ಪರಿಚಯ ಇತ್ತಾದರೂ ಸಕ್ರಿಯ ರಾಜಕಾರಣ ಗೊತ್ತಿರಲಿಲ್ಲ. ಈ ಐದು ತಿಂಗಳು ಸಾಕಷ್ಟು ಪಾಠ ಕಲಿಸಿದೆ, ರಾಜಕೀಯ ಒಳಸುಳಿಗಳು ನಿಧಾನವಾಗಿ ಅರ್ಥವಾಗತೊಡಗಿದೆ. ಅಂಬರೀಶ್ ಎಂದೂ ವ್ಯಕ್ತಿಗತ ಟೀಕೆಗಳನ್ನು ಮಾಡುವ ರಾಜಕಾರಣ ಮಾಡಲಿಲ್ಲ. ನನ್ನದೂ ಅದೇ ಸ್ವಭಾವ. ಟೀಕೆ, ಪ್ರತಿಟೀಕೆಗಳೇ ರಾಜಕಾರಣದ ಮಾದರಿಗಳಲ್ಲ ಎಂದು ಸುಮಲತಾ ಮಾತನಾಡುತ್ತಾ ಹೋದರು.
ಗೆದ್ದನಂತರ ಬಿಜೆಪಿ ಬೆಂಬಲಿಸುತ್ತೀರಾ ಎಂಬ ಪ್ರಶ್ನೆ ಕೇಳಿಬಂತು. ಸಕ್ರಿಯ ರಾಜಕಾರಣದಲ್ಲಿ ಎಲ್ಲರ ಬೆಂಬಲ ಕೋರುವುದು ಅಗತ್ಯ. ಈ ಹಿನ್ನೆಲೆಯಲ್ಲಿ ಬಿಜೆಪಿ ನಾಯಕರನ್ನು ಭೇಟಿಯಾದೆ. ಆ ಪಕ್ಷದ ಹಿರಿಯ ನಾಯಕರು ಬೆಂಬಲ ನೀಡುತ್ತೇವೆ ಎಂದರು. ಆದರೆ ತಮ್ಮ ಪಕ್ಷಕ್ಕೆ ಬೆಂಬಲಿಸಬೇಕು ಎಂಬ ಷರತ್ತುಗಳನ್ನೇನೂ ವಿಧಿಸಿಲ್ಲ. ಪ್ರಚಾರಕ್ಕೆ ಬರುವುದರ ಬಗ್ಗೆಯೂ ಅವರು ಚರ್ಚೆ ಮಾಡಿಲ್ಲ. ನಾನು ಪಕ್ಷೇತರ ಅಭ್ಯರ್ಥಿ. ಗೆದ್ದ ಬಳಿಕ ಮುಂದಿನ ನಡೆ ಹೇಗಿರಬೇಕು, ಯಾವ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು ಎಂಬುದು ಜಿಲ್ಲೆಯ ಜನತೆ ಅಭಿಪ್ರಾಯದ ಮೇಲೆ ನಿರ್ಧರಿತವಾಗಿರುತ್ತದೆ ಮುಖ್ಯವಾಗಿ ನನ್ನ ಬೆಂಬಲಕ್ಕೆ ಸ್ಥಳೀಯ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ನಿಂತಿರುವಾಗ ಅವರ ಅಭಿಪ್ರಾಯಗಳನ್ನು ಗಮನದಲ್ಲಿಟ್ಟುಕೊಳ್ಳಬೇಕಾಗುತ್ತದೆ ಎಂದರು.
ಮಂಡ್ಯದ ಅಭಿವೃದ್ಧಿ ಮಾದರಿ ಬಗ್ಗೆ ಯೋಜನೆಗಳಿವೆ: ಮಂಡ್ಯವನ್ನು ಸಿಂಗಾಪೂರ್ – ಹಾಂಕಾಂಗ್ ಮಾಡುತ್ತೇವೆ. ಇಂದ್ರನಗರಿಯನ್ನೇ ತಂದಿಳಿಸುತ್ತೇನೆ ಎಂದು ಇಲ್ಲದ ಭರವಸೆಗಳ್ನು ನೀಡಲು ಹೋಗುವುದಿಲ್ಲ. ಆದರೆ ಮಂಡ್ಯದ ಸಮಸ್ಯೆಗಳೇನು ಎಂಬ ಬಗ್ಗೆ ಅರಿವಿದೆ. ಪಕ್ಷ ರಾಜಕಾರಣಗಳ ದ್ವೇಷದಿಂದ ತಮಗೆ ಹೆಚ್ಚು ಲೀಡ್ ನೀಡದ ಪ್ರದೇಶಗಳ ಅಭಿವೃದ್ಧಿಯನ್ನೇ ಇಲ್ಲಿ ಈಗ ಗೆದ್ದಿರುವ ಕೆಲವರು ಮಾಡಿಲ್ಲ. ಇವರ ಬಗ್ಗೆ ಕಾಂಗ್ರೆಸ್ ಕಾರ್ಯಕರ್ತರು ಸಿಟ್ಟುಕೊಳ್ಳಲು ಇದೂ ಒಂದು ಕಾರಣ. ಇಲ್ಲಿಯ ರಸ್ತೆ, ಕೆರೆ ಅಭಿವೃದ್ಧಿ ಸ್ವಸಹಾಯ ಸಂಘಗಳು, ಯುವಜನತೆಗೆ ಉದ್ಯೋಗಾವಕಾಶಗಳು, ಮಹಿಳೆಯರ ಸಬಲೀಕರಣ ಈ ಬಗ್ಗೆ ಸಾಕಷ್ಟು ಕೆಲಸ ಮಾಡುವುದಿದೆ. ಕಬ್ಬುಬೆಳೆಗಾರರ ಸಂಕಷ್ಟಗಳಿವೆ. ಸಕ್ಕರೆ ಕಾರ್ಖಾನೆಗಳ ಸಮಸ್ಯೆಗಳಿವೆ. ಇವುಗಳ ಪರಿಹಾರಕ್ಕಾಗಿ ಶ್ರಮಿಸಬೇಕಿದೆ. ಇವುಗಳನ್ನು ಮಾಡುವ ವಿಶ್ವಾಸವೂ ನನಗಿದೆ ಎಂದರು.
ಒಂದು ತಾಸಿಗೂ ಹೆಚ್ಚಿನ ಸುದೀರ್ಘ ಸಂವಾದದಲ್ಲಿ ಎಲ್ಲಿಯೂ ವಿಚಲಿತರಾಗದೇ, ಗೊಂದಲಕ್ಕೊಳಗಾಗದೇ ಮಾತನಾಡಿದರು. ಮಂಡ್ಯದಲ್ಲಿ ಮಾಡಬೇಕಾದ ಅಭಿವೃದ್ಧಿ ಕಾರ್ಯಗಳ ಬಗ್ಗೆಯೂ ಸ್ಪಷ್ಟನಿಲುವು ಹೊಂದಿದ್ದಾರೆ. ಆದರೆ ಬಹುಮುಖ್ಯವಾಗಿ ಮಂಡ್ಯ ರಾಜಕೀಯ ಪ್ರತಿಷ್ಠಿಯ ಕಣವಾಗಿದೆ. ಅಲ್ಲಿ ನಡೆಯುತ್ತಿರುವ ಜಿದ್ದಾಜಿದ್ದಿನ ರಾಜಕಾರಣದಲ್ಲಿ ಸುಮ ಅರಳುತ್ತದೆಯೋ ಅಥವಾ ಬಾಡುತ್ತದೆಯೋ ಎಂಬುದು ಬಹುಮುಖ್ಯ ಪ್ರಶ್ನೆಯಾಗಿದೆ. ರಾಜ್ಯದ ಜನತೆಯ ಕುತೂಹಲವೂ ಆಗಿದೆ.