ಬೇರೆಬೇರೆ ಕ್ಷೇತ್ರದ ಸೆಲಿಬ್ರಿಟಿಗಳು ಮುಖ್ಯವಾದ ಸುದ್ದಿ ಕೊಡುತ್ತೇವೆ ಎಂದಾಗ ಎಲ್ಲರ ಚಿತ್ತವೂ ಅತ್ತ ನೆಟ್ಟಿರುತ್ತದೆ. ಅದರಲ್ಲಿಯೂ ರಾಜಕೀಯ ಕ್ಷೇತ್ರದ ಗಣ್ಯ ನಾಯಕರು ಸುದ್ದಿಯೊಂದನ್ನು ಬ್ರೇಕ್ ಮಾಡುತ್ತೇವೆ ಎಂದಾಗಲಂತೂ ಮಾಧ್ಯಮಗಳ ಹದ್ದಿನ ಕಣ್ಣಿನ ಜೊತೆಗೆ ರಾಜಕೀಯ ವಲಯ, ಜನಸಾಮಾನ್ಯರ ಕಣ್ಣುಗಳು ಅತ್ತಲೇ ನಿರುಕಿಸುತ್ತಿರುತ್ತವೆ. ಬಿ.ಎಸ್.ವೈ ವಿಷಯದಲ್ಲಿಯೂ ಆಗಿದ್ದು ಇದೇ…..
ಮಾರ್ಚ್ 15ರ ಮಧ್ಯಾಹ್ನ ಟ್ವೀಟರ್ ನಲ್ಲಿ ಬಿ.ಎಸ್. ಯಡಿಯೂರಪ್ಪ ಅವರ ಅಕೌಂಟಿನಲ್ಲಿ ‘ಬ್ರೇಕಿಂಗ್ ನ್ಯೂಸ್’ ನಾಳೆ ಸಂಜೆ 5 ಗಂಟೆಗೆ ಎಂಬ ಟ್ವೀಟ್ ಬಂದ ಕೂಡಲೇ ಏನೋ ಮಹತ್ವದ ವಿಷಯವೇ ಇರಬೇಕು. ರಾಜ್ಯ ಸರ್ಕಾರಕ್ಕೆ ಭಾರಿ ಇರುಸು-ಮುರುಸು ಉಂಟು ಮಾಡಬಹುದಾದ ಸಂಗತಿಯನ್ನು ಬ್ರೇಕ್ ಮಾಡಬಹುದು, ಮಂತ್ರಿಗಳ ತಲೆದಂಡವಾದರೂ ಆಗಬಹುದು, ಜೆಡಿಎಸ್ ಜೊತೆ ರಾಜಕೀಯ ಹೊಂದಾಣಿಕೆ ಘೋಷಿಸಬಹುದು ಎಂಬ ಚರ್ಚೆಗಳು ಆರಂಭವಾದವು. ಒಂದೆರಡು ಸುದ್ದಿವಾಹಿನಿಗಳಂತೂ ನಿರೀಕ್ಷಿತ ಟ್ವೀಟ್ ಬಗ್ಗೆ ಪುಂಖಾನುಪುಂಖ ಸುದ್ದಿಗಳನ್ನು ಹೊರಡಿಸತೊಡಗಿದವು.
ಮಾರ್ಚ್ 16ರ ಮಧ್ಯಾಹ್ನ ನಂತರದಿಂದಲೇ ಮಾಧ್ಯಮ, ರಾಜಕೀಯ ವಲಯ, ಜನತೆಯ ಕಣ್ಣುಗಳು ಯಡಿಯೂರಪ್ಪ ಅವರ ಟೀಟ್ವರ್ ಅಕೌಂಟಿನತ್ತಲೇ ನೆಟ್ಟವು. ಸಮಯ ಐದಾಯಿತು, ಆರಾಯಿತು ಬ್ರೇಕಿಂಗ್ ನ್ಯೂಸ್ ಬಾರಲೇ ಇಲ್ಲ. ಇದರ ಬದಲು ಫೇಸ್ ಬುಕ್ಕಿನಲ್ಲಿ ಬಿ.ಎಸ್.ವೈ. ವಿಡಿಯೋ ಪ್ರಸಾರವಾಯಿತು. ಆದರೆ ಅದು ಲೈವ್ ವಿಡಿಯೋ ಆಗಿರಲೇ ಇಲ್ಲ. ಮೊದಲೇ ರೆಕಾರ್ಡ್ ಮಾಡಲಾದ ವಿಡಿಯೋವನ್ನು ತರಾತುರಿಯಲ್ಲಿ ಅಪ್ ಲೋಡ್ ಮಾಡಲಾಯಿತು.
ಅಲ್ಲಿ ಹೊಸತೇನೂ ಇರಲಿಲ್ಲ. ರಾಜ್ಯ ಸರ್ಕಾರದ ವಿರುದ್ಧ ಹಿಂದೆ ಮಾಡಿದ್ದ ಆರೋಪಗಳನ್ನೇ ಬಿ.ಎಸ್.ವೈ. ಪುನುರುಚ್ಚರಿಸಿದ್ದರು ಅಷ್ಟೆ. ಇದರಿಂದ ಗರಿಗೆದರಿದ್ದ ನಿರೀಕ್ಷೆಗಳು ಹುಸಿಯಾದವು. ಬ್ರೇಕಿಂಗ್ ನ್ಯೂಸ್ ಸಿಡಿಯದೇ ಹೋದಾಗ ಕಳೆದುಹೋಗಿದ್ದು ಬಿಜೆಪಿಯ ರಾಜ್ಯಾಧ್ಯಕ್ಷ, ಮಾಜಿ ಮುಖ್ಯಮಂತ್ರಿ ವಿಶ್ವಾಸಾರ್ಹತೆ. ಪೂರ್ವ ಸಿದ್ಧತೆಯಿಲ್ಲದೇ ದಿಢೀರ್ ಹೇಳಿಕೆ ನೀಡಿ ಜನತೆಯ ಗಮನವನ್ನು ತನ್ನತ್ತ ಸೆಳೆದರೆ ಏನಾಗಬಹುದು ಎಂದು ಯೋಚಿಸದೇ ಮಾಡಿದ ಸಂಗತಿ.
ಬ್ರೇಕಿಂಗ್ ನ್ಯೂಸ್ ಕೊಡುತ್ತೇನೆ ಎಂದಿದ್ದು ಬಿ.ಎಸ್.ವೈ. ಆದರೂ ಟ್ವೀಟರ್ ನಲ್ಲಿ ಅದನ್ನು ಆಕರ್ಷಕ ಪ್ಲೇಟ್ ಮೂಲಕ ಹಾಕಿದ್ದು ಅವರ ಟ್ವೀಟರ್ ಅಕೌಂಟ್ ನಿರ್ವಹಣೆ ಮಾಡುವವರೇ. ಬಹುಶಃ ಅದನ್ನು ಬಿ.ಎಸ್.ವೈ ನೋಡಿದ್ದರೆ ಜನರಲ್ಲಿ ಗರಿಗೆದರುವ ನಿರೀಕ್ಷೆಯನ್ನು ಅಂದಾಜಿಸುತ್ತಿದ್ದರು. ಬಹುಶಃ ಅದನ್ನವರು ಮಾಧ್ಯಮಗಳಲ್ಲಿ ಭಾರಿ ಸುದ್ದಿಯಾದ ಮೇಲೆ ಗಮನಿಸಿರಬಹುದು. ಆದರೆ ಅಷ್ಟರಲ್ಲಾಗಲೇ ಕಾಲ ಮಿಂಚಿ ಹೋಗಿತ್ತು. ಏನಾದರೊಂದು ಹೇಳುವ ಅನಿವಾರ್ಯತೆಗೆ ಸಿಲುಕಿದ್ದರಿಂದಲೇ ತರಾತುರಿಯಲ್ಲಿ ಹಳೇ ಆರೋಪಗಳನ್ನೇ ಅದೂ ಸೂಕ್ತ ಆಧಾರ ವಹಿಸದ ಆರೋಪಗಳನ್ನೇ ಹೇಳಿದ್ದು ಹಾಸ್ಯಾಸ್ಪದಕ್ಕೆ ಕಾರಣವಾಯಿತು. ಆಡಳಿತ ಪಕ್ಷದ ಪ್ರಮುಖ ನಾಯಕರುಗಳ ಗೇಲಿಗೂ ಕಾರಣವಾಯಿತು. ಇದಕ್ಕೂ ಮೊದಲೇ ರಾಜ್ಯದ ಕಾಂಗ್ರೆಸ್ ಘಟಕ ಅದು ನ್ಯೂಸ್ ಅಲ್ಲ, ನ್ಯೂಸೆನ್ಸ್, ಅದು ಬಿಜೆಪಿಯ ವ್ಯವಹಾರಗಳ ಬಗ್ಗೆಯೇ ಬ್ರೇಕಿಂಗ್ ನ್ಯೂಸ್ ಆಗಿರಬಹುದೆಂದು ಕಾಲೆಳೆಯಿತು.
ಯಡಿಯೂರಪ್ಪ ಅವರ ಬ್ರೇಕಿಂಗ್ ನ್ಯೂಸ್ ! ರಾಷ್ಟ್ರಮಟ್ಟದಲ್ಲಿಯೂ ಸದ್ದು ಮಾಡಿತ್ತು. ಕಾಂಗ್ರೆಸ್ ಮತ್ತಿತರ ವಿರೋಧ ಪಕ್ಷಗಳಿರಲಿ ಸ್ವತಃ ಬಿಜೆಪಿಯ ನಾಯಕರುಗಳಲ್ಲಿ ಕುತೂಹಲ ಮಡುಗಟ್ಟಿತ್ತು. ಇದೆಲ್ಲವೂ ಮಾರ್ಚ್ 16ರ ಸಂಜೆ 6 ನಂತರ ಹುಸಿಯಾಗಿ ಹೋಯಿತು. ತನ್ಮೂಲಕ ಯಡಿಯೂರಪ್ಪ ತಮ್ಮ ಕೈ ತೋರಿಸಿ ಅವಲಕ್ಷಣ ಎನಿಸಿಕೊಂಡರು. ಪೂರ್ವಸಿದ್ಧತೆಯಿಲ್ಲದೇ ಹೀಗೆ ಪ್ರಚಾರ ಪಡೆಯುವುದು ಹುಲಿಯ ಬೇನ್ನೇರಿ ಸವಾರಿ ಮಾಡಿದಂತೆ ಎಂಬುದನ್ನು ಅವರು ಮರೆತು ಬಿಟ್ಟರು.