ಭಾರತ ಮತ್ತು ಚೀನಾ ಬಾಂಧವ್ಯಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ವಾಣಿಜ್ಯ ವ್ಯವಹಾರಗಳು, ಅಧ್ಯಾತ್ಮಿಕ ಅನುಸಂಧಾನಗಳು ನಡೆದಿವೆ. ಆದರೆ ಬೇರೆಬೇರೆ ರಾಜಮನೆತನಗಳ ಆಳ್ವಿಕೆಯಲ್ಲಿ ಚೆದುರಿ ಹೋಗಿದ್ದ ಚೀನಾ, ಕಮ್ಯುನಿಸ್ಟ್ ಕ್ರಾಂತಿಯಿಂದ “ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾ” ಅಡಿಯಲ್ಲಿ ಒಂದುಗೂಡಿತು. ಈ ನಂತರ ನೆರೆಹೊರೆಯವರೊಂದಿಗಿನ ಅದರ ದೃಷ್ಟಿಕೋನಗಳು ಆಕ್ರಮಣಶೀಲವಾಗಿ ಬದಲಾದವು.
ಚೀನಾಕ್ಕೆ ಮನ್ನಣೆ ನೀಡಿದ ಮೊದಲ ರಾಷ್ಟ್ರ
ಬಹು ಪ್ರಮುಖ ಸಂಗತಿಯೆಂದರೆ 1950ರಲ್ಲಿ ಭಾರತ, “ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾ”ಕ್ಕೆ ರಾಜತಾಂತ್ರಿಕ ಮನ್ನಣೆ ನೀಡಿದ ಮೊದಲ ದೇಶಗಳಲ್ಲಿಯೇ ಅಂಗ್ರಪಕ್ತಿಯಲ್ಲಿ ನಿಲ್ಲುತ್ತದೆ. ಈ ವೇಳೆಗಾಗಲೇ ಪ್ರಬಲ ರಾಷ್ಟ್ರಗಳಾಗಿದ್ದ ರಷ್ಯಾ ಮತ್ತು ಅಮೆರಿಕಾ ನಡುವೆ ಶೀತಲ ಸಮರ ಆರಂಭವಾಗಿತ್ತು. ಆದರೆ ಭಾರತ ಅಲಿಪ್ತ ನೀತಿ ಅನುಸರಿಸಿದ್ದ ಕಾರಣ ಸಮಾನ ಅಂತರ ಕಾಯ್ದುಕೊಂಡಿದ್ದರೂ ಕಮ್ಯುನಿಸ್ಟ್ ರಷ್ಯಾ ಜೊತೆಗಿನ ರಾಜತಾಂತ್ರಿಕ ಸಂಬಂಧ ಹೆಚ್ಚು ಸುಮಧುರವಾಗಿತ್ತು. ಬಹುಶಃ ಇದು ಕೂಡ ಕಮ್ಯುನಿಸ್ಟ್ ಚೀನಾ ರಗಳೆಗೆ ಮುಂದಾಗದಿರುವುದಕ್ಕೆ ಪ್ರಮುಖ ಕಾರಣ.
ಚೀನಾದ ಆಕ್ರಮಣಶೀಲ ದೃಷ್ಟಿ ಸ್ವಾಯತ್ತ ಟಿಬೇಟ್ ಮೇಲೆ ತಿರುಗಿತು. ಇಲ್ಲಿ ನಾವು ಗಮನಿಸಬೇಕಾಗಿರುವ ವಿಷಯವೆಂದರೆ ರಾಜತಾಂತ್ರಿಕತೆ, ಸಾವಿರಾರು ವರ್ಷಗಳ ಆಧ್ಯಾತ್ಮಿಕ ಅನುಸಂಧಾನ, ವ್ಯಾಪಾರ ವಹಿವಾಟುಗಳಲ್ಲಿ ಭಾರತ – ಟಿಬೇಟ್ ಸಂಬಂಧ ಗಾಢವಾಗಿತ್ತು. ಚೀನಾ ಜೊತೆಗಿನ ಅದರ ಸಂಬಂಧ ಅಷ್ಟಕಷ್ಟೆ. ಆದರೆ ನೆಲದಾಹದ ಚೀನಿ ಸರ್ಕಾರ ಅಲ್ಲಿಗೆ ತನ್ನ ಸೈನ್ಯ ನುಗ್ಗಿಸಿತು. 1959ರಲ್ಲಿ ಅಶಾಂತಿ ಸೃಷ್ಟಿಸಿತು. ಟಿಬೇಟ್ ಧರ್ಮಗುರು ದಲೈಲಾಮ ಭಾರತಕ್ಕೆ ಪಲಾಯನ ಮಾಡುವ ದುಸ್ಥಿತಿ ನಿರ್ಮಾಣವಾಯಿತು. ಇವರನ್ನು ಅನುಸರಿಸಿ ಲಕ್ಷಾಂತರ ಟಿಬೇಟಿನಿಯರು ಧಾವಿಸಿ ಬಂದರು.
ನೆಹರು ನೇತೃತ್ವದ ಕೇಂದ್ರ ಸರ್ಕಾರ ದಲೈಲಾಮ ಸೇರಿದಂತೆ ಬಂದ ಟಿಬೇಟಿಯನ್ನರಿಗೆ ಆಶ್ರಯ ನೀಡುವ ನಿರ್ಧಾರವನ್ನು ತೆಗೆದುಕೊಂಡಿತು. ವಿವಿಧ ರಾಜ್ಯಗಳಲ್ಲಿ ಬಹು ವಿಸ್ತಾರದ ಶಿಬಿರಗಳನ್ನು ತೆರೆಯಲಾಯಿತು. ವಸತಿ, ಕೃಷಿಭೂಮಿ ಸೇರಿದಂತೆ ಅಗತ್ಯ ನೆರವು ನೀಡಲಾಯಿತು. ಇದು ಚೀನಾ ಕೆಂಗಣ್ಣಿಗೆ ಪ್ರಮುಖ ಕಾರಣ. ಅಲ್ಲಿನ ಪ್ರಧಾನಿ ಚೌ ಎನ್. ಲಾಯ್ “ಭಾರತವು ಚೀನಾದ ವಿರುದ್ಧ ತಂತ್ರಗಾರಿಕೆ ರೂಪಿಸುತ್ತಿದೆ” ಎಂದು ದೂರಿದರು. ಆದರೆ ಇಲ್ಲಿನ ಸರ್ಕಾರ ಅದಕ್ಕೆ ಕಿಂಚಿತ್ತೂ ಮನ್ನಣೆ ನೀಡಲಿಲ್ಲ.
ಚೀನಾ – ಭಾರತ ಯುದ್ಧ:
ಅಕ್ಟೋಬರ್ 20, 1962. ಚೀನಾದ ಮಿಲಿಟರಿ ತುಕಡಿಗಳು ಅಪಾರ ಸಂಖ್ಯೆಯಲ್ಲಿ ಲಡಾಕ್ ಮತ್ತು ಮೆಕ್ ಮೋಹನ್ ಗಡಿಯುದ್ದಕ್ಕೂ ಮುನ್ನುಗಿದ್ದವು. ಈ ದಾಳಿಯನ್ನು ಭಾರತದ ಪಡೆಗಳು ಹಿಮ್ಮೆಟ್ಟಿಸಲು ಪ್ರಯತ್ನಿಸಿದರೂ ಸಫಲವಾಗಲಿಲ್ಲ. ಮುಂದುವರೆದ ಚೀನಿ ಸೈನ್ಯ ಪಶ್ಚಿಮದ ಚಶೂಲ್ನಲ್ಲಿ ರೇಝೂಂಗ್ ಲಾ, ಪೂರ್ವದಲ್ಲಿ ತವಾಂಗ್ ಅನ್ನು ಆಕ್ರಮಿಸಿದವು. ಈ ಯುದ್ಧದಲ್ಲಿ ಎರಡೂ ಕಡೆಯೂ ಸಾವುನೋವುಗಳಾದರೂ ಭಾರತೀಯ ಸೈನ್ಯಕ್ಕೆ ಹೆಚ್ಚಿನ ಹಾನಿಯಾಗಿತ್ತು. ಕದನ ವಿರಾಮ ಘೋಷಣೆಯಾದ ನಂತರ ಚೀನಿ ಪಡೆಗಳು ಆಕ್ರಮಿತ ಪ್ರದೇಶ ಬಿಟ್ಟು ಹಿಂದೆ ತೆರಳಿದವು.

ಭಾರತ – ಚೀನಾ ನಡುವೆ 1962ರಲ್ಲಿ ಯುದ್ಧ ನಡೆದ ಸಂದರ್ಭ ಭಾರತೀಯ ಸೈನಿಕರು ಸನ್ನದ್ಧರಾಗಿರುವುದು

ಇದಾದ ಬಳಿಕ ಮಿಲಿಟರಿ ದೃಷ್ಟಿಕೋನದಿಂದ ಚೀನಾ, ಭಾರತದ ವಿರುದ್ಧ ಕತ್ತಿ ಮಸೆಯುತ್ತಲೇ ಇದೆ. ಲಡಾಕ್ ನಲ್ಲಿ ತನ್ನ ಪ್ರದೇಶದಲ್ಲಿ ಬಾರತ ಕೈಗೊಂಡ ಅಭಿವೃದ್ಧಿ ಕಾರ್ಯಗಳ ಬಗ್ಗೆಯೂ ತಕರಾರು ಎತ್ತುತ್ತಲೇ ಇದೆ. ಅರುಣಾಚಲ ಪ್ರದೇಶಕ್ಕೆ ಕೇಂದ್ರ ಸರ್ಕಾರದ ಪ್ರತಿನಿಧಿಗಳು, ಮಿಲಿಟರಿ ಅಧಿಕಾರಿಗಳು ಭೇಟಿ ನೀಡುವುದಕ್ಕೂ ಆಕ್ಷೇಪಣೆ ಸಲ್ಲಿಸುತ್ತಲೇ ಇದೆ. ಮೆಕ್ ಮೋಹನ್ ಗಡಿರೇಖೆಯನ್ನು ಭಾರತ ಒಪ್ಪಿಕೊಂಡಿದ್ದರೂ ಚೀನಾ ನಿರಾಕರಿಸುತ್ತಿರುವುದರಿಂದಲೇ ಈ ವಿವಾದ ಉಂಟಾಗಿದೆ.
ಏಷ್ಯಾಖಂಡದಲ್ಲಿ ಎಲ್ಲದೃಷ್ಟಿಯಿಂದಲೂ ಏಕಮೇವ ಸಾರ್ವಭೌಮ ರಾಷ್ಟ್ರವಾಗಬೇಕು ಎಂದು ಬಯಸಿರುವ ಚೀನಾ, ಭಾರತದ ಆರ್ಥಿಕ ಮತ್ತು ಮಿಲಿಟರಿ ಬೆಳವಣಿಗೆಯನ್ನು ಸಹಿಸುತ್ತಿಲ್ಲ. ಇದರಿಂದ 1967, 1975ರಲ್ಲಿ ಗಡಿಯಲ್ಲಿ ಉದ್ರಿಕ್ತ ವಾತಾವರಣ ನಿರ್ಮಿಸಲು ಯತ್ನಿಸಿ ಭಾರತೀಯ ಸೈನಿಕರು ಜಗ್ಗದ ಪರಿಣಾಮ ಹಿಮ್ಮೆಟ್ಟಿದೆ. ಇದಾದ ನಂತರ ಅದರ ತಂತ್ರಗಾರಿಕೆ ಬದಲಾಗಿರುವುದು ಗಮನಾರ್ಹ
ಶತ್ರುವಿನ ಶತ್ರು ಮಿತ್ರ ಎಂಬ ನೀತಿ
ವಿಶೇಷವಾಗಿ 1990 ನಂತರ 2005 ಅದರಲ್ಲಿಯೂ 2010ರ ನಂತರ ಅದು ಭಾರತದ ನೆರೆಹೊರೆ ರಾಷ್ಟ್ರಗಳ ಜೊತೆ ರಾಜತಾಂತ್ರಿಕ ಸಂಬಂಧಗಳನ್ನು ಬಲಪಡಿಸಿಕೊಂಡಿದೆ. ಈ ನಿಟ್ಟಿನಲ್ಲಿ ಅದು ದೂರದ ಅಮೆರಿಕಾವನ್ನೂ ದೃಷ್ಟಿಯಲ್ಲಿಟ್ಟುಕೊಂಡಿದೆ. ಒಂದುವೇಳೆ ಯುದ್ಧವಾದರೆ ಭಾರತದ ಸುತ್ತಲಿನ ರಾಷ್ಟ್ರಗಳನ್ನು ತನ್ನ ಸೇನಾನೆಲೆಯನ್ನಾಗಿ ಮಾಡಿಕೊಳ್ಳುವ ದೃಷ್ಟಿಯನ್ನು ಅದು ಹೊಂದಿದೆ ಎಂಬುದರಲ್ಲಿ ಎರಡು ಮಾತಿಲ್ಲ.
ಪಾಕಿಸ್ತಾನ:
1951ರಲ್ಲಿ ಚೀನಾ – ಪಾಕಿಸ್ತಾನದ ನಡುವೆ ಅಧಿಕೃತ ರಾಜತಾಂತ್ರಿಕ ಸಂಬಂಧ ಶುರುವಾಯಿತು. ಎರಡೂ ಕಡೆಗಳಲ್ಲಿಯೂ ರಾಯಭಾರ ಕಚೇರಿಗಳು ತೆರೆಯಲ್ಪಟ್ಟವು. ಶತ್ರುವಿನ ಶತ್ರು ತನ್ನ ಮಿತ್ರ ಎಂಬ ನೀತಿಯಂತೆ 1962ರಲ್ಲಿ ಭಾರತ – ಚೀನಾ ನಡುವೆ ಯುದ್ಧವಾದ ಅದರ ಪ್ರಯೋಜನ ಪಡೆಯಲು ಪಾಕಿಸ್ತಾನ ಮುಂದಾಯಿತು. ಚೀನಾದ ಜೊತೆಗಿನ ಅದರ ಸಂಬಂಧ ಮತ್ತಷ್ಟೂ ಬಲವಾಯಿತು. ಪರಸ್ಪರ ಗಡಿವಿವಾದವನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಂಡವು. ಇದಕ್ಕೆ ಪ್ರತಿಯಾಗಿ ಪಾಕಿಸ್ತಾನ ಪ್ರತಿಪಾದಿಸುತ್ತಿರುವ ಕಾಶ್ಮೀರ ತನ್ನದು ಎಂಬ ಉದ್ದಟತನದ ಧೋರಣೆಗೆ ಚೀನಾ ಬೆಂಬಲ ನೀಡುತ್ತಿದೆ. ಭಾರತದ ಜೊತೆ ಘರ್ಷಣೆ ಹೇಗೆ ಆಗಲಿ ಅದರ ಪ್ರಯೋಜನ ಪಡೆಯಬೇಕೆಂಬುದು ಈ ಎರಡೂ ರಾಷ್ಟ್ರಗಳ ದುರಾಲೋಚನೆ. ಇತ್ತೀಚೆಗಂತೂ ಇವೆರಡೂ ರಾಷ್ಟ್ರಗಳ ದ್ವಿಪಕ್ಷೀಯ ಸಂಬಂಧಗಳು ಮತ್ತಷ್ಟೂ ಸುಧಾರಣೆಯಾಗಿವೆ. ಮೊದಲು ಅಮೆರಿಕಾದ ಜೊತೆ ಯಾವ ರೀತಿ ಸಖ್ಯವನ್ನು ಪಾಕಿಸ್ತಾನ ಹೊಂದಿತ್ತೊ ಅದೇ ರೀತಿಯ ಗೆಳತನವನ್ನೂ ಚೀನಾದ ಜೊತೆಯೂ ಹೊಂದಿದೆ.


ಅಫ್ಘಾನಿಸ್ತಾನ:
ಚೀನಾ – ಅಫ್ಘಾನಿಸ್ತಾನ ಗಡಿ ಹಂಚಿಕೊಂಡಿವೆ. ಆದರೆ ಭಾರತ ಮತ್ತು ಅಫ್ಘಾನಿಸ್ತಾನ ನೆರೆಹೊರೆಯ ರಾಷ್ಟ್ರವಲ್ಲವಾದರೂ ಭೌಗೋಳಿಕ, ವಾಯುವ್ಯ ಮಾರ್ಗಗಳ ಮೂಲಕ ಹತ್ತಿರವಿರುವ ರಾಷ್ಟ್ರಗಳು. ದೂರದ ಅಮೆರಿಕಾ ಇಲ್ಲಿ ಯಾವುದೇ ಕಾರಣಕ್ಕೂ ಮಿಲಿಟರಿ ನೆಲೆ ಸ್ಥಾಪಿಸಬಾರದು ಎಂಬ ದೃಷ್ಟಿಯಿಂದ ಇಲ್ಲಿಯೂ ಉತ್ತಮ ರಾಜತಾಂತ್ರಿಕ ಸಂಬಂಧ ಸ್ಥಾಪಿಸುವಲ್ಲಿ ಚೀನಾ ಯಶಸ್ವಿಯಾಗಿದೆ. ಇಲ್ಲಿನ ಸಾರಿಗೆ, ವಾಣಿಜ್ಯ ವಹಿವಾಟುಗಳು ಮತ್ತು ಆರ್ಥಿಕ ಪುನಶ್ಚೇತನಕ್ಕಾಗಿ “ ಶ್ರದ್ಧೆ – ಸಕಾರಾತ್ಮಕ ಮನೋಭಾವ” ಅಳವಡಿಸಿಕೊಂಡಿದೆ. ಇದರಿಂದಾಗಿ ಯಾವುದೇ ವಿಷಮ ಪರಿಸ್ಥಿಯಲ್ಲಿಯೂ ಅಫ್ಘಾನೀಸ್ತಾನ, ಚೀನಾ ನೆರವಿಗೆ ನಿಲ್ಲುವುದರಲ್ಲಿ ಸಂಶಯವಿಲ್ಲ.
ನೇಪಾಳ:
ಸಾವಿರಾರು ವರ್ಷಗಳಿಂದಲೂ ಭಾರತ – ನೇಪಾಳ ರಾಜತಾಂತ್ರಿಕ ಸಂಬಂಧ ಸೌಹಾರ್ದಯುತವಾಗಿತ್ತು. ಇವೆರಡರ ನಡುವೆ ಪ್ರಜೆಗಳ ಪರಸ್ಪರ ಸಂಚಾರಕ್ಕೆ ಮುಕ್ತ ಅವಕಾಶವಿದೆ. ಅಪಾರ ಸಂಖ್ಯೆಯ ನೇಪಾಳಿಗರು ಭಾರತದಲ್ಲಿ ಉದ್ಯೋಗಗಳನ್ನು ಕಂಡುಕೊಂಡಿದ್ದಾರೆ. ಬದುಕಿನ ನೆಲೆ ಅರಸಿ ಯಶಸ್ವಿಯಾಗಿದ್ದಾರೆ. ಅಲ್ಲಿ ಭಾರತದ ಕರೆನ್ಸಿಯೇ ಹೆಚ್ಚು ಪ್ರಮಾಣದಲ್ಲಿ ಚಲಾವಣೆಯಾಗುತ್ತದೆ. ಭಾರತದ ಜೊತೆಗಿರುವಷ್ಟು ಸುಮಧುರ ರಾಜತಾಂತ್ರಿಕ ಸಂಬಂಧವನ್ನು ಚೀನಾ ಜೊತೆ ಹೊಂದಿರಲಿಲ್ಲವಾದರೂ ಘರ್ಷಣೆ ಮಾರ್ಗ ಹಿಡಿದಿರಲಿಲ್ಲ. ಜೊತೆಗೆ 1961 ರಿಂದೀಚೆಗೆ ಪರಸ್ಪರ ಗಡಿ ವಿವಾದಗಳೂ ಇಲ್ಲ. ಇತ್ತೀಚಿನ ವರ್ಷಗಳಲ್ಲಿ ನೇಪಾಳದಲ್ಲಿ ಚೀನಾ ಭಾರಿ ಆರ್ಥಿಕ ಹೂಡಿಕೆ ಮಾಡತೊಡಗಿದೆ. ಅಭಿವೃದ್ಧಿಗೂ ನೆರವಾಗಿದೆ. ಈ ರಾಷ್ಟ್ರವನ್ನು ಸಂಕಷ್ಟದಲ್ಲಿ ಆರ್ಥಿಕ ನೆರವು ನೀಡುವ ರಾಷ್ಟ್ರವಾಗಿ ನೇಪಾಳ ಭಾವಿಸಿರುವುದು ಪ್ರಮುಖ ಬೆಳವಣಿಗೆ. ಇಲ್ಲಿಯೂ ಕಮ್ಯುನಿಸ್ಟ್ ಸರ್ಕಾರ ಬಂದ ನಂತರ ಇವೆರಡರ ನಡುವಿನ ದ್ವಿಪಕ್ಷೀಯ ಸಂಬಂಧಗಳು ಮತ್ತೊಂದು ಮಜಲು ತಲುಪಿವೆ. ಈ ಧೈರ್ಯವೇ ಭಾರತದ ವಿರುದ್ಧ ನೇಪಾಳ ಬಹಿರಂಗವಾಗಿ ಕಿಡಿಕಾರಲು ಕಾರಣ. ಜಮ್ಮು-ಕಾಶ್ಮೀರ ಮತ್ತು ಲಡಾಕ್ ಪ್ರಾಂತ್ಯಗಳನ್ನು ಕೇಂದ್ರಾಡಳಿತ ಪ್ರದೇಶವಾಗಿ ಘೋಷಣೆ ಮಾಡಿದ ನಂತರ ಭಾರತ ಬಿಡುಗಡೆ ಮಾಡಿರುವ ನಕ್ಷೆಯಲ್ಲಿ ಸೇರಿರುವ ಕಾಲಪಾನಿ ಮತ್ತು ಲಿಪುಲೇಕ್ ಪ್ರದೇಶ ತನಗೆ ಸೇರಿದ್ದು ಎಂದು ನೇಪಾಳ ತಗಾದೆ ತೆಗೆದಿದೆ. ಇದರ ಹಿಂದೆ ಚೀನಾ ಚಿತಾವಣೆಯಿದ್ದರೂ ಆಶ್ಚರ್ಯವಿಲ್ಲ. ಹೀಗಾಗಿ ನೇಪಾಳ ಕೂಡ ಎಂಥ ವಿಷಮ ಸ್ಥಿತಿಯಲ್ಲಿಯೂ ಚೀನಾ ಪರ ನಿಲ್ಲುವ ಸಾಧ್ಯತೆ ಹೆಚ್ಚು.

ಬಾಂಗ್ಲಾದೇಶ
2005 ರಿಂದ ಚೀನಾ ಮತ್ತು ಬಾಂಗ್ಲಾದೇಶದ ದ್ವಿಪಕ್ಷೀಯ ಸಂಬಂಧಗಳು ಪ್ರಬಲ ಎನಿಸುವಷ್ಟು ಮಟ್ಟಿಗೆ ಸುಧಾರಿಸಿವೆ. ಕೇವಲ ರಾಜತಾಂತ್ರಿಕ ಕಾರುಭಾರುಗಳಿಗೆ ಮಾತ್ರ ಸೀಮಿತವಾಗದೇ ಪರಸ್ಪರ ವಾಣಿಜ್ಯ ವ್ಯವಹಾರಗಳನ್ನು ಗರಿಷ್ಠ ಮಟ್ಟದಲ್ಲಿ ನಡೆಸುತ್ತಿವೆ. ಬಾಂಗ್ಲಾದಲ್ಲಿ ಕಾರ್ಮಿಕ ವೆಚ್ಚ ಕಡಿಮೆಯಿರುವುದರಿಂದ ಅಲ್ಲಿ ತಯಾರಾಗುವ ಸೆಣಬಿನ ಉತ್ಪನ್ನಗಳನ್ನು, ಟೆಕ್ಸ್ ಟೈಲ್ ಉದ್ಯಮಗಳ ಉತ್ಪನ್ನಗಳನ್ನು ಚೀನಾ ಖರೀದಿಸುತ್ತಿದೆ. ಬಾಂಗ್ಲಾ, ಎಲೆಕ್ಟ್ರಾನಿಕ್ ಸೇರಿದಂತೆ ತನಗೆ ಅವಶ್ಯವಿರುವ ಎಲ್ಲ ಉತ್ಪನ್ನಗಳನ್ನು ಚೀನಾದಿಂದಲೇ ಆಮದು ಮಾಡಿಕೊಳ್ಳುತ್ತಿದೆ. ಪ್ರತಿಯಾಗಿ ಚೀನಾ ಕೂಡ ಅಲ್ಲಿ ಆರ್ಥಿಕ ಹೂಡಿಕೆ ಮಾಡಿದೆ. ಇಷ್ಟಕ್ಕೆ ಮಾತ್ರ ಸೀಮಿತವಾಗದೇ ತಮ್ಮ ನಡುವಿನ ರಾಜತಾಂತ್ರಿಕ ಸಂಬಂಧಗಳನ್ನು ಮತ್ತೊಂದು ಮಜಲಿಗೆ ಹೊಯ್ದಿರುವ ಈ ಎರಡೂ ರಾಷ್ಟ್ರಗಳು ತಮ್ಮ ಸೈನ್ಯಗಳನ್ನು ತೀವ್ರ ಸ್ವರೂಪದ ಜಂಟಿ ಸಮರಾಭ್ಯಾಸದಲ್ಲಿಯೂ ತೊಡಗಿಸಿವೆ. ಇತ್ತೀಚೆಗೆ ಎನ್.ಆರ್.ಸಿ. ವಿಷಯದಲ್ಲಿ ಭಾರತದ ವಿರುದ್ಧ ಬಾಂಗ್ಲಾ ಮುನಿಸಿಕೊಂಡಂತೆ ತೋರುತ್ತಿದೆ. ಇವೆಲ್ಲ ಕಾರಣದಿಂದ ಬಾಂಗ್ಲಾ ದೇಶವು ಚೀನಾ ಪರ ನಿಂತರೂ ಅಚ್ಚರಿಯಿಲ್ಲ.
ಶ್ರೀಲಂಕಾ
ದ್ವೀಪರಾಷ್ಟ್ರ ಶ್ರೀಲಂಕಾ ಮತ್ತು ಚೀನಾ ನಡುವಿನ ರಾಜತಾಂತ್ರಿಕ ಮತ್ತು ಧಾರ್ಮಿಕ ಸಂಬಂಧಗಳು ಇಂದು ನಿನ್ನೆಯದಲ್ಲ. ಆದರೆ ಕಳೆದ ದಶಕದಿಂದೀಚೆಗೆ ಇವುಗಳ ಸಂಬಂಧ ಬೇರೆಬೇರೆ ಆಯಾಮಗಳನ್ನು ಪಡೆದುಕೊಂಡಿದೆ. 2010ರಲ್ಲಿ ಶ್ರೀಲಂಕಾಕ್ಕೆ ಚೀನಾದಿಂದ ಅಪಾರ ಪ್ರಮಾಣದ ವಿದೇಶಿ ಹೂಡಿಕೆ ಹರಿದು ಬಂದಿದೆ. ಕೆಲವು ವರದಿಗಳ ಪ್ರಕಾರ 2004 ಮತ್ತು 2014ರ ನಡುವೆ 7 ಬಿಲಿಯನ್ ಡಾಲರ್ ಮೊತ್ತದ ಹಣ ಚೀನಾದಿಂದ ಶ್ರೀಲಂಕಾಕ್ಕೆ ಸಾಲ ಮತ್ತು ಹೂಡಿಕೆ ರೂಪದಲ್ಲಿ ಬಂದಿದೆ. ಇದಿಷ್ಟೆ ಅಲ್ಲ, ಇವೆರಡರ ನಡುವೆ ಮಿಲಿಟರಿ ಬಾಂಧವ್ಯವೂ ಬೆಸೆದುಕೊಂಡಿದೆ. ಶ್ರೀಲಂಕಾದ ಸೇನಾ ಆಯುಧಗಳ ಸಾಮರ್ಥ್ಯವನ್ನು ಮೇಲ್ದರ್ಜೆಗೇರಿಸಲು ಚೀನಾ ಶಸ್ತ್ರಾಸ್ತ್ರಗಳನ್ನು ಒದಗಿಸಿದೆ. ತಮ್ಮ ರಾಜತಾಂತ್ರಿಕ ಸಂಬಂಧಗಳು ಯಾವುದೇ ಕಾರಣಕ್ಕೂ ಕಹಿಯಾಗದಂತೆ ನೋಡಿಕೊಳ್ಳಲು ಶ್ರಮಿಸುತ್ತಿವೆ. ಈ ದೃಷ್ಟಿಯಿಂದಲೂ ಶ್ರೀಲಂಕಾ, ಚೀನಾ ಪರ ನಿಲ್ಲುವ ಸಾಧ್ಯತೆ ಅಧಿಕ.

ಈ ಎಲ್ಲ ಬೆಳವಣಿಗೆಗಳನ್ನು ಅವಲೋಕಿಸಿದಾಗ ಬಾರತದ ವಿರುದ್ಧ ಅತಿಕ್ರಮಣದ ಹೆಜ್ಜೆಯಿಡುವ ಮುನ್ನವೇ ಚೀನಾ ದೂರಾಲೋಚನೆಯಿಂದ ರಣತಂತ್ರಗಳನ್ನು ಹೆಣೆದಿದೆ ಎಂಬುದು ಮನವರಿಕೆಯಾಗುತ್ತದೆ. ಆದರೆ ಇದೆಲ್ಲವನ್ನೂ ಅದು ಮಾಡುತ್ತಿರುವುದು ಮೂಲತಃ ಶಾಂತಿಪ್ರಿಯ ರಾಷ್ಟ್ರವಾದ ಭಾರತದ ಕುರಿತಾದ ಆತಂಕದಿಂದಲ್ಲ. ಬಹುದೂರದಲ್ಲಿರುವ ಅಮೆರಿಕಾದ ಭಯವೇ ಅದನ್ನು ಕಾಡುತ್ತಿದೆ. ಇದರ ನಡುವೆಯೂ ಭಾರತವನ್ನು ತನ್ನ ಕಕ್ಷೆಯೊಳಗೆ ಇರಿಸಿಕೊಳ್ಳುವ ದೃಷ್ಟಿಯಿಂದಲೂ ದಾಳವುರುಳಿಸಿದೆ. ಇದಕ್ಕೆ ಭಾರತ ಹೇಗೆ ಪ್ರತ್ಯುತ್ತರ ನೀಡಬಹುದು ಎಂಬುದನ್ನು ಜಗತ್ತಿನ ಪ್ರಮುಖ ರಾಷ್ಟ್ರಗಳು ಎವೆಯಿಕ್ಕದೇ ನೋಡುತ್ತಿವೆ.

ಚಿತ್ರಕೃಪೆ: ಅಂತರ್ಜಾಲ

Similar Posts

Leave a Reply

Your email address will not be published. Required fields are marked *