ಸಿನಿಮಾ

ಮಧ್ಯರಾತ್ರಿಯ ವಿವಿಧ ಕಥೆಗಳ ಹೆಣಿಗೆ

ಮಲೆಯಾಳಮ್ ಸಿನಿಮಾ ಪಾಥೀರಾತ್ರಿ (Paathirathri) ವಿಭಿನ್ನ ಕಥೆಗಳ ಸಂಕಲನ (anthology)ವೇನಲ್ಲ; ಒಂದೇ ಕಥೆಯಲ್ಲಿ ವಿವಿಧ ಪಾತ್ರಗಳ ಕಥೆಗಳ ಹೆಣಿಗೆ. ಇವುಗಳನ್ನು ನಿರ್ದೇಶಕ ಪ್ರಸೆಂಟ್ ಮಾಡಿರುವ ರೀತಿಯೂ ಗಮನಾರ್ಹ. ಅಂದಹಾಗೆ ಪಾಥೀರಾತ್ರಿ ಎಂದರೆ ಕನ್ನಡದಲ್ಲಿ ಮಧ್ಯರಾತ್ರಿ ! ಈ ಹೊತ್ತಿನಲ್ಲಿ ನಡೆಯುವ ಘಟನೆಯೊಂದು ಹಲವು ತಿರುವುಗಳಿಗೆ ನಾಂದಿಯಾಡುತ್ತದೆ.

ಕಾಡು, ಎಸ್ಟೇಟುಗಳು ಸುತ್ತುವರೆದಿರುವ ಸಣ್ಣ ಊರು. ಪೊಲೀಸ್ ಸ್ಟೇಷನ್, ಖಡಕ್ ಮಹಿಳಾ ಸಬ್ ಇನ್ಸ್ಪೆಕ್ಟರ್ ! ಸಹೃದಯಿ ಸಹೋದ್ಯೋಗಿಗಳು ! ಆರಂಭದಲ್ಲಿಯೇ ಎಸ್.ಐ. ಜಾನ್ಸಿ ಕುರಿಯನ್ (Navya Nair – ನವ್ಯಾ ನಾಯರ್ )ಕರ್ತವ್ಯಪಟುತ್ವದ ಪರಿಚಯವಾಗುತ್ತದೆ. ಬಹುಶಃ ಇದು ಈಕೆಯ ಸುತ್ತಲಿನ ಕಥೆ ಎನಿಸಿದರೂ ಅದಷ್ಟೇ ಆಗಿರುವುದಿಲ್ಲ. ಈಕೆಯ ಕೌಟುಂಬಿಕ ತಾಪತ್ರಯಗಳೂ ಉದ್ದಕ್ಕೂ ಇಣುಕುತ್ತವೆ.

ಕರ್ತವ್ಯದಲ್ಲಿ ದಕ್ಷತೆಯಿಲ್ಲದ, ಸಾಂಸಾರಿಕ ತಾಪತ್ರಯಗಳಿಗೆ ಸಿಲುಕಿದ ಪೊಲೀಸ್ ಜೀಪ್ ಡ್ರೈವರ್ ಹರೀಶ್. (Soubin Shahir – ಸೌಬಿನ್ ಶಾಹೀರ್) ಎಸ್.ಐ. ಜಾನ್ಸಿ, ಡ್ರೈವರ್ ಹರೀಶ್ ಮಧ್ಯರಾತ್ರಿಯ ಗಸ್ತಿಗೆ ತೆರಳುತ್ತಾರೆ. ಆಗ ಕಾಡಿನಲ್ಲಿ ಓರ್ವ ಯುವಕ, ಓರ್ವ ಯುವತಿ ಕಾರಿನಲ್ಲಿ ಕಾಣುತ್ತಾರೆ. ಹಿಡಿದು ಪ್ರಶ್ನಿಸಬೇಕೆನ್ನುವಷ್ಟರಲ್ಲಿ ಯುವಕ ಓಡಿ, ಹಳ್ಳವೊಂದರಲ್ಲಿ ಬಿದ್ದು ಮರೆಯಾಗುತ್ತಾನೆ, ಯುವತಿ ಕಾರಿನಲ್ಲಿ ಪರಾರಿಯಾಗುತ್ತಾಳೆ.

ಈ ಘಟನೆಯನ್ನು ಮೇಲಿನ ಅಧಿಕಾರಿಗಳಿಗೆ ವರದಿ ಮಾಡಬೇಕೆನ್ನುವುದು ಎಸ್.ಐ. ಜಾನ್ಸಿ ಇರಾದೆ. ಹರೀಶನದು ಉಢಾಪೆ. “ಯಾರೋ ಲವರ್ಸ್ ಇರಬಹುದು. ಇದನ್ನು ವರದಿ ಮಾಡುವ ಅಗತ್ಯವಿಲ್ಲ” ಎನ್ನುವ ಮಾತು. ಇದೇ ಇವರಿಬ್ಬರನ್ನೂ ಅಪಾಯಕ್ಕೆ ದೂಡುತ್ತದೆ. ಬೆಳವಣಿಗೆಯಾಗುವ ಕಥೆಯೊಳಗೆ ಡಿವೈಎಸ್ಪಿ ಪ್ರವೇಶವಾಗುತ್ತದೆ. ಆತನಿಗೂ ಕಥನದೊಳಗೆ ಸಂಬಂಧವಿದೆ. ಅದು ಜಾನ್ಸಿ, ಹರೀಶ್ ಇಬ್ಬರನ್ನು ಜೈಲಿಗೆ ಅಟ್ಟುವ ಅವಕಾಶ ಇರುವ ಬೆಳವಣಿಗೆಗೂ ಕಾರಣವಾಗುತ್ತದೆ.

ಹೀಗೆ ಪಾಥೀರಾತ್ರಿ ಅನೇಕ ಅನಿರೀಕ್ಷಿತ ಪಾತ್ರಗಳು, ಘಟನೆಗಳಿಗೆ ಸಾಕ್ಷಿಯಾಗುತ್ತಾ ಸಾಗುತ್ತದೆ. ಕಥೆಯ ಕೇಂದ್ರಬಿಂದುವಿನೊಂದಿಗೆ ಅವೆಲ್ಲವುಗಳಿಗೂ ಸಂಬಂಧವಿದೆ. ಇವೆಲ್ಲದರ ನಡುವೆ ಎಸ್.ಐ. ಜಾನ್ಸಿ ಕುರಿಯನ್, ಡ್ರೈವರ್ ಹರೀಶ್ ಪಾರಾಗುತ್ತಾರಾ ?

ಕಥೆಯನ್ನು ಸ್ವಾರಸ್ಯಕರವಾಗಿ ಹೆಣೆದಿರುವ ನಿರ್ದೇಶಕ ರಥೀನಾ ಪಿಟಿ (Ratheena PT) ಅಧ್ಯಯನಶೀಲತೆ ಮೆಚ್ಚುಗೆ ಗಳಿಸುತ್ತದೆ. ಆದರೆ ಅವರದು ಪುರುಷ ಪ್ರಧಾನ ನೋಟ ! ಇದು ಕೆಲವೆಡೆ ಚಿತ್ರದಲ್ಲಿ ಅಸಹಜ ಬೆಳವಣಿಗೆಗೆ ಕಾರಣವಾಗುತ್ತದೆ. ಉದ್ಯೋಗ – ಕೌಟುಂಬಿಕ ಒತ್ತಡಗಳಿಂದ ಬಳಲಿದ ಜೀವ ಆಸರೆಗೆ ಚಡಪಡಿಸುವುದು ಸಹಜವಾದರೂ ಇಲ್ಲಿ ಡ್ರೈವರ್ ಹರೀಶ್ ಜೊತೆಗೆ ಭಾವನಾತ್ಮಕ ಸಂಬಂಧಕ್ಕೆ ಜೊತೆ ಮಾಡುವುದು ಅಸಹಜ ಎನಿಸುತ್ತದೆ. ಕೊನೆಯಲ್ಲಿ ರಥೀನಾ ಪಿಟಿ ತನ್ನ ತಪ್ಪು ತಿದ್ದಿಕೊಳ್ಳುತ್ತಾರೆ. ಇವರ

ಸಹಜ ಅಭಿನಯಕ್ಕೆ ಹೆಸರಾದ ಕನ್ನಡ ಚಿತ್ರರಂಗದ ಖ್ಯಾತ ನಟ ಅಚ್ಯುತ್ ಕುಮಾರ್ ಡಿವೈಎಸ್ಪಿಯಾಗಿ ಅಭಿನಯಿಸಿದ್ದಾರೆ. ಸ್ಟಿರಿಯೋಟೈಪ್ ವಿಲನ್ ಗಳ ಅಭಿನಯಕ್ಕಿಂತ ಭಿನ್ನ ನಟನೆಯಿಂದ ಗಮನ ಸೆಳೆಯುತ್ತಾರೆ. ನವ್ಯಾ ನಾಯರ್, ಸೌಬಿನ್ ಶಾಹೀರ್, ಸನ್ನಿವೇನೆ, ಆನಾ ಆಗಸ್ಟಿನ್, ಆತ್ಮೀಯ ರಾಜನ್, ಹರೀಶ್ರೀ ಅಶೋಕನ್, ಶಬರೀಶ್ ವರ್ಮ,ಆಡುಕಲಮ್ ನರೇನ್, ಇಂದ್ರನ್ಸ್ ಸಹಜಾಭಿನಯ ಗಮನ ಸೆಳೆಯುತ್ತದೆ.

ಶೆಹನಾದ್ ಜಲಾಲ್ ಐಎಸ್ಸಿ (Shehnad Jalal ISC) ಮಾಡಿರುವ ಛಾಯಾಗ್ರಹಣ ಚಿತ್ರಕಥೆಗೆ ಪೂರಕವಾಗಿದೆ. ಶ್ರೀಜಿತ್ ಸಾರಂಗ್ (Sreejith Sarang) ಶ್ರೀಜಿತ್ ಸಾರಂಗ್ ಮಾಡಿರುವ ಸಂಕಲನವು ವೇಗೋತ್ಕರ್ಷಕ್ಕೆ ಅವಕಾಶವಿಲ್ಲದೇ ಚಿತ್ರ, ಮಧ್ಯಗತಿಯ ವೇಗದಲ್ಲಿ ಸಾಗುವಂತೆ ಮಾಡಿದೆ. ಜೆಕ್ಸ್ ಬಿಜೊಯ್ (Jakes Bejoy) ಇನ್ನು ಉತ್ತಮವಾಗಿ ಹಿನ್ನೆಲೆ ಸಂಗೀತ ನೀಡುವ ಅವಕಾಶವಿತ್ತು.

ಡಾ. ಕೆವಿ, ಅಬ್ದುಲ್‌ ನಾಜರ್‌, ಆಶ್ರೀಯಾ ನಾಜರ್‌ (Dr.KV.Abdul Nazar. Ashiya Nazar) ನಿರ್ಮಿಸಿರುವ ಪಾಥೀರಾತ್ರಿ, ಅಕ್ಟೋಬರ್‌ ೧೭, ೨೦೨೫ರಂದು ಚಿತ್ರಮಂದಿರಗಳಲ್ಲಿ ತೆರೆಕಂಡಿದೆ. ೨೦೨೬ರ ಫೆಬ್ರವರಿ ೨೦ರಂದು ಒಟಿಟಿ ಫ್ಲಾಟ್ಫಾರಂ ಜಿ೫ನಲ್ಲಿ ಪ್ರದರ್ಶಿತವಾಗುತ್ತಿದೆ.

Leave a Reply

Your email address will not be published. Required fields are marked *

error: Content is protected !!