ಸಿನೆಮಾಸಕ್ತರಿಗೆ ಫಿಲ್ಮ್ ಫೆಸ್ಟಿವಲ್ ಎಂದರೆ ಉತ್ಸಾಹ; ಸಂಭ್ರಮ- ಸಡಗರ. ಸಾಮಾನ್ಯವಾಗಿ ಇದನ್ನು ತಪ್ಪಿಸಿಕೊಳ್ಳುವುದಿಲ್ಲ. ಏಕೆಂದರೆ ಜಗತ್ತಿನಾದ್ಯಂತದ ಅತ್ಯುತ್ತಮ ಸಿನೆಮಾಗಳನ್ನು ನೋಡುವ ಸದವಕಾಶ ದೊರೆಯುತ್ತದೆ. ಇದಕ್ಕಾಗಿ ತಿಂಗಳುಗಳ ಮುಂಚಿನಿಂದ ಪ್ಲಾನ್ ಮಾಡಿಕೊಂಡಿರುತ್ತಾರೆ. ರಜೆಗಳನ್ನು ಉಳಿಸಿಕೊಂಡಿರುತ್ತಾರೆ. ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುವವರಂತೂ ಬಹಳ ಕಷ್ಟಪಟ್ಟು ರಜೆ ಪಡೆದುಕೊಂಡಿರುತ್ತಾರೆ.
ನೋಂದಣಿ ಮಾಡಿಕೊಂಡ ಸಿನೆಮಾ ಅಧ್ಯಯನ ಕೂಟಗಳ ಸದಸ್ಯರು, ವಿದ್ಯಾರ್ಥಿಗಳಿಗೆ ತಲಾ ರೂ. ೪೦೦ ಇತರರಿಗೆ ರೂ. ೮೦೦ ಪಾಸ್ ಶುಲ್ಕವಿದೆ. ಇದಲ್ಲದೇ ಉಚಿತವಾಗಿ ಸಾವಿರಾರು ಪಾಸುಗಳನ್ನು ಹಂಚಲಾಗಿರುತ್ತದೆ. ಓರ್ವ ವ್ಯಕ್ತಿ ಭರಿಸುವ ಶುಲ್ಕದ ಸುಮಾರು ೨೦ ರಿಂದ ೨೫ ಪಟ್ಟು ಹಣವನ್ನು ಸರ್ಕಾರವೇ ಭರಿಸುತ್ತದೆ. ಮಾರ್ಚ್ ೦೧ ರಿಂದ ೦೭ರ ತನಕ ಒರಿಯನ್ ಮಾಲ್ ನಲ್ಲಿ ನಡೆಯುವ ಚಿತ್ರೋತ್ಸವಕ್ಕೆ ಕರ್ನಾಟಕ ಸರ್ಕಾರ ಬಾಡಿಗೆ, ನಿರ್ವಹಣಾ ಶುಲ್ಕವಾಗಿ ಕೋಟ್ಯಂತರ ರೂ. ಪಾವತಿಸಿರುತ್ತದೆ.
ಸರ್ಕಾರವೇ ೭ ದಿನಗಳ ಕಾಲದ ಶುಲ್ಕ ಪಾವತಿಸಿರುವಾಗಲೂ ಒರಿಯನ್ ಮಾಲ್ ನಲ್ಲಿ ಪಾರ್ಕಿಂಗ್ ಶುಲ್ಕ ತೆಗೆದುಕೊಳ್ಳಲಾಗುತ್ತದೆ. ಬೈಕಿಗೆ ೩ ರಿಂದ ೪ ತಾಸಿಗೆ ೧೦೦ ರೂ. ಕಾರಾದರೆ ಇದರ ದುಪ್ಪಟ್ಟು ಹಣವಿದೆ. ಕರ್ನಾಟಕ ಚಲನಚಿತ್ರ ಅಕಾಡೆಮಿಯಿಂದ ವಿತರಿಸಿದ ಅಧಿಕೃತ ಪಾಸ್ ತೋರಿಸಿದರೂ ರಿಯಾಯತಿ ನೀಡುವುದಿಲ್ಲ !
ಪಾರ್ಕಿಂಗ್ ಶುಲ್ಕದಲ್ಲಿ ರಿಯಾಯತಿ ಪಡೆಯಬೇಕೆಂದರೆ ಟಿಕೇಟ್ ಕೌಂಟರ್ ನಲ್ಲಿ ವಿತರಿಸುವ ಪಾರ್ಕಿಂಗ್ ಪಾಸ್ ತರಬೇಕು. ಆಯಾ ದಿನದ ಪಾಸನ್ನು ಅವತ್ತೇ ನೀಡುತ್ತಾರೆ. ಹೀಗಿರುವಾಗ ಸಮಸ್ಯೆ ಏನು ಎಂಬುದು ನಿಮ್ಮ ಪ್ರಶ್ನೆಯಾಗಬಹುದು. ಸಮಸ್ಯೆ ಇರುವುದು ಇಲ್ಲಿಯೇ ಅಂದರೆ ನಿಮಗೆ ಆಶ್ಚರ್ಯವಾಗುತ್ತದೆ.
ರಿಯಾಯತಿ ಪಾರ್ಕಿಂಗ್ ಶುಲ್ಕದ ಪಾಸ್ ನೀಡುವುದು ಸಂಜೆ ೬ರ ನಂತರ. ಅಂದರೆ ಬೆಳಗ್ಗೆ ೯.೩೦ಕ್ಕೆ ಸ್ವಂತ ವಾಹನದಲ್ಲಿ ಬಂದು ಒರಿಯನ್ ಮಾಲ್ ನಲ್ಲಿ ಪಾರ್ಕಿಂಗ್ ಮಾಡಿದ ವ್ಯಕ್ತಿ, ಪಾಸು ಪಡೆಯಲು ಸಂಜೆ ೬ ಗಂಟೆ ತನಕ ಇರಬೇಕು. ಅನೇಕರು ಒಂದೋ ಎರಡೋ ಸಿನೆಮಾ ನೋಡಿಕೊಂಡು ಹೋಗೋಣ ಎಂದು ಪ್ಲಾನ್ ಮಾಡಿ ಬಂದಿರುತ್ತಾರೆ. ಒಂದು ಸಿನೆಮಾ ಸಾಮಾನ್ಯವಾಗಿ ಸರಾಸರಿ ಒಂದೂವರೆ ತಾಸಿನ ಅವಧಿಯದಾಗಿರುತ್ತದೆ. ಎರಡು ಸಿನೆಮಾ ಆದರೆ ಮಧ್ಯದ ಬಿಡುವು ಸೇರಿಸಿ ಮೂರುವರೆ ತಾಸಾಗುತ್ತದೆ. ವಸತಿ ಸ್ಥಳದಿಂದ ಬರಲು ಕನಿಷ್ಟ ಒಂದರಿಂದ ಒಂದೂವರೆ ತಾಸಾಗುತ್ತದೆ. ಮತ್ತೆ ಹೋಗಲು ಒಂದೂವರೆ ತಾಸು ಆಗುತ್ತದೆ. ಅಥವಾ ಟ್ರಾಫಿಕ್ ಹೆಚ್ಚದ್ದರೆ ಇದಕ್ಕೂ ಹೆಚ್ಚಿನ ಸಮಯ ತಗುಲಬಹುದು. ಅಲ್ಲಿಗೆ ಸುಮಾರು ೮ ತಾಸು ವಿನಿಯೋಗವಾಗಿರುತ್ತದೆ.
ವಾಸ್ತವ ಹೀಗಿರುವಾಗ ಪ್ರತ್ಯೇಕವಾಗಿ ಅದೂ ಸಂಜೆ ೬ಕ್ಕೆ ಪಾರ್ಕಿಂಗ್ ರಿಯಾಯತಿ ಪಾಸು ವಿತರಿಸುವುದೇಕೆ ? ಇದಕ್ಕೇನಾದರೂ ವೈಜ್ಞಾನಿಕ ಮಾನದಂಡವಿದೆಯೇ ? ಅಕಾಡೆಮಿ ವಿತರಿಸಿದ ಸಿನೆಮಾ ಎಂಟ್ರಿ ಪಾಸು ತೋರಿಸಿದರೆ ಸಾಕಾಗುವುದಿಲ್ಲವೇ ? ಚಿತ್ರೋತ್ಸವ ಆಯೋಜಿಸುವ ಹೊಣೆ ಹೊತ್ತ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ / ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧಿಕಾರಿಗಳು ಇತ್ತ ಗಮನ ಹರಿಸುವರೆ ? ಫಿಲ್ಮ್ ಫೆಸ್ಟಿವಲ್ ನಡೆಯುವ ೭ ದಿನ ಪಾಸು ಹೊಂದಿದವರ ವಾಹನಕ್ಕೆ ಉಚಿತವಾಗಿ ಪಾರ್ಕಿಂಗ್ ನೀಡಲು ತೊಂದರೆಯಾದರೂ ಏನು ?