ಕನ್ನಡ ಸಿನಿಮಾ ಕ್ಷೇತ್ರದಲ್ಲಿ ಅಧ್ಯಯನಶೀಲತೆ ಕೊರತೆ ಇದೆಯೇ ?
ಕನ್ನಡ ಸಿನಿಮಾ (ಸ್ಯಾಂಡಲ್ವುಡ್) ಕ್ಷೇತ್ರದಲ್ಲಿ ಸಿನಿಮಾಗಳ ಪೂರ್ವಭಾವಿ ಅಧ್ಯಯನಶೀಲತೆ (ಪ್ರೀ-ವಿಝುಯಲೈಸೇಶನ್ ಅಥವಾ ಪ್ರೀವಿಝ್) ಮತ್ತು ವರ್ಕ್ಶಾಪ್ಗಳ ಕೊರತೆ ಎದ್ದು ಕಾಣುತ್ತದೆ. ಇಲ್ಲಿನ ಎಲ್ಲ ಸಿನಿಮಾಗಳ ಬಗ್ಗೆಯೂ ಇದೇ ಮಾತು ಅನ್ವಯಿಸುವುದಿಲ್ಲ. ಚಿತ್ರಕಥೆಯನ್ನು ಉತ್ತಮವಾಗಿ ರಚಿಸಿರುವುದಲ್ಲದೇ, ಪ್ರತಿಯೊಂದು ಸಣ್ಣಸಣ್ಣ ಅಂಶಗಳ ಬಗ್ಗೆಯೂ ಗಮನವಿಟ್ಟು ಮಾಡಿರುವ ಸಿನಿಮಾಗಳಿವೆ. ಅದರೆ ಹೀಗೆ ತಯಾರಾದ, ತಯಾರಾಗುವ ಸಿನಿಮಾಗಳ ಸಂಖ್ಯೆ ಕಡಿಮೆ !!
ಪ್ರೀ-ವಿಝುಯಲೈಸೇಶನ್ ಎಂದರೇನು? ಇದು ಸಿನಿಮಾ ನಿರ್ಮಾಣದ ಮೊದಲು ಸ್ಟೋರಿಬೋರ್ಡ್, ಅನಿಮ್ಯಾಟಿಕ್ಸ್ ಅಥವಾ ಡಿಜಿಟಲ್ ಮಾಡೆಲ್ಗಳ ಮೂಲಕ ದೃಶ್ಯಗಳನ್ನು ಪ್ಲಾನ್ ಮಾಡುವ ಪ್ರಕ್ರಿಯೆ. ಇದು ಹಣ ಮತ್ತು ಸಮಯ ಉಳಿಸುತ್ತದೆ. ವಿಶೇಷವಾಗಿ VFX-ಹೆವಿ ಸಿನಿಮಾಗಳಲ್ಲಿ ಈ ಅಂಶಗಳು ಇದ್ದೇ ಇರುತ್ತವೆ. ಸಿನಿಮಾ ಆರಂಭಕ್ಕೂ ಪೂರ್ವಭಾವಿಯಾಗಿ ಕಲಾವಿದರು, ಪ್ರಮುಖ ತಂತ್ರಜ್ಞರಿಗೆ ವರ್ಕ್ ಶಾಪ್ ಗಳು ಸಾಮಾನ್ಯವಾಗಿ ಇರುತ್ತವೆ. ಆದರೆ ಕನ್ನಡದಲ್ಲಿ ಇಂಥ ಪ್ರವೃತ್ತಿ ಕಡಿಮೆ.
ಅನಿಮ್ಯಾಟಿಕ್ಸ್ ಅಥವಾ ಡಿಜಿಟಲ್ ಮಾಡೆಲ್ಗಳು ಬರುವ ಮುನ್ನವೂ ಸ್ಟೋರಿಬೋರ್ಡ್ ಗಳನ್ನು ಅಚ್ಚುಕಟ್ಟಾಗಿ ಮಾಡಿಕೊಳ್ಳುವ ಪ್ರಕ್ರಿಯೆ ಇತ್ತು. ನಿರ್ದೇಶಕರು, ಸಹ ನಿರ್ದೇಶಕರು, ಸಹಾಯಕ ನಿರ್ದೇಶಕರು ಸೇರಿ ಸ್ಕ್ರಿಪ್ಟ್ ನಲ್ಲಿರುವ ಪ್ರತಿಯೊಂದು ಅಂಶವನ್ನೂ ಕೂಲಂಕುಷವಾಗಿ ಚರ್ಚಿಸುತ್ತಿದ್ದರು. ಎಲ್ಲಿಯಾದರೂ ತಪ್ಪು ಕಂಡರೆ ಸರಿಪಡಿಸಿಕೊಳ್ಳುತ್ತಿದ್ದರು. ಇಂದಿಗೂ ಈ ಪ್ರವೃತ್ತಿ ತಮಿಳು, ಮಲೆಯಾಳಮ್, ತೆಲುಗು, ಹಿಂದಿ ಸಿನಿಮಾರಂಗಗಳಲ್ಲಿದೆ. ಕನ್ನಡ ಸಿನಿಮಾರಂಗದಲ್ಲಿಯೂ ಇದೆಯಾದರೂ ಇದನ್ನು ಅನುಸರಿಸುವ ನಿರ್ದೇಶಕರ ಸಂಖ್ಯೆ ಕಡಿಮೆ !!
ಮುಖ್ಯ ಕಾರಣಗಳು:
ಸಾಮಾನ್ಯವಾಗಿ ಕನ್ನಡ ಚಿತ್ರರಂಗದ ಹೆಚ್ಚಿನ ಸಿನಿಮಾಗಳು ಕಡಿಮೆ ಬಜೆಟ್ನಲ್ಲಿ ನಿರ್ಮಾಣವಾಗುತ್ತವೆ. ಇಂಥ ನಿರ್ಮಾಣ ತಂಡಗಳಿಗೆ ಪ್ರೀವಿಝ್ ಅಥವಾ ವರ್ಕ್ಶಾಪ್ಗಳು ದುಬಾರಿಯಾಗುತ್ತವೆ. VFX ಟೀಮ್ಗಳನ್ನು ಲೇಟ್ ಇನ್ವಾಲ್ವ್ ಮಾಡುವುದರಿಂದ ಅನಸ್ಟೇನಬಲ್ ಸಿಸ್ಟಮ್ ಉಂಟಾಗುತ್ತದೆ. ವಿಷನ್ ಮತ್ತು ಇನ್ಫ್ರಾಸ್ಟ್ರಕ್ಚರ್ ಕೊರತೆಯೂ ಇದೆ. ಉದ್ಯಮದಲ್ಲಿ ದೀರ್ಘಕಾಲೀನ ಬೆಳವಣಿಗೆಯ ವಿಷನ್ ಕಡಿಮೆ ಇರುವುದು ಎದ್ದು ಕಾಣುತ್ತದೆ. ಹೆಚ್ಚಿನ ಸಿನಿಮಾ ಪ್ರಾಜೆಕ್ಟ್ಗಳಲ್ಲಿ “ರೀ-ಇನ್ವೆಂಟ್ ದಿ ವೀಲ್” ಮಾಡುತ್ತಾರೆ, ಅಂದರೆ ಸ್ಟ್ಯಾಂಡರ್ಡ್ ಪ್ರೊಸೆಸ್ ಇಲ್ಲದೆ ಪ್ರತಿ ಬಾರಿ ಶೂನ್ಯದಿಂದ ಶುರು ಮಾಡುತ್ತಾರೆ. ಇದು ಪ್ರೀ-ಪ್ರೊಡಕ್ಷನ್ ಕ್ಲಾರಿಟಿಯನ್ನು ಕಡಿಮೆ ಮಾಡುತ್ತದೆ.
ಸಾಂಪ್ರದಾಯಿಕ ನಿರ್ಮಾಣ ವಿಧಾನ ಮತ್ತು ಯೂನಿಟಿ ಕೊರತೆಯೂ ಇರುವುದು ಗಮನಾರ್ಹ. ಹಿಂದೆ ರೀಮೇಕ್ಗಳ ಮೇಲೆ ಹೆಚ್ಚು ಅವಲಂಬನೆ ಇತ್ತು, ಇವುಗಳು ಒರಿಜಿನಲ್ ಪ್ಲಾನಿಂಗ್ ಗಳನ್ನು ಕಡಿಮೆ ಮಾಡಿದವು. ಈಗ ಒರಿಜಿನಲ್ ಸಿನಿಮಾಗಳು ಹೆಚ್ಚು, ಆದರೆ ಖ್ಯಾತ ಕಲಾವಿದರು, ಯಶಸ್ವಿ ನಿರ್ದೇಶಕರು ಆಗಾಗ್ಗೆ ಸಿನಿಮಾ ಮಾಡದೆ ಇರುವುದು (1ರಿಂದ 3 ವರ್ಷಗಳ ಗ್ಯಾಪ್) ಉದ್ಯಮವನ್ನು ಸ್ಟ್ಯಾಗ್ನಂಟ್ ಮಾಡಿದೆ. ಯೂನಿಟಿ ಕೊರತೆಯಿಂದ ತರಬೇತಿ ಅಥವಾ ವರ್ಕ್ಶಾಪ್ಗಳನ್ನು ಆಯೋಜಿಸುವುದು ಖಂಡಿತವಾಗಿಯೂ ಕಷ್ಟ.
ಕನ್ನಡ ಸಿನಿಮಾಗಳು ಸೀಮಿತ ಸಂಖ್ಯೆಯ ಪ್ರೇಕ್ಷಕರನ್ನು ಆಕರ್ಷಿಸುವುದರಿಂದ ಮೈಂಡ್ಸ್ಪೇಸ್ ಲಾಸ್ಟ್ ಆಗಿದೆ. ಪಬ್ಲಿಸಿಟಿ ಮತ್ತು ಮಾರ್ಕೆಟಿಂಗ್ ಕೊರತೆಯಿಂದಾಗಿ ಹೊಸ ಟೆಕ್ನಿಕ್ಗಳನ್ನು (ಪ್ರೀವಿಝ್) ಅಳವಡಿಸುವ ಉತ್ಸಾಹ ಕಡಿಮೆಯಾಗಿದೆ. AI ನಂತಹ ಹೊಸ ಟೂಲ್ಗಳು ಈಗ ಪ್ರೀವಿಝ್ನ್ನು ಸರಳಗೊಳಿಸಿದ್ದರೂ ಬಳಸಿಕೊಳ್ಳುವ ಉತ್ಸಾಹ ಕಾಣುತ್ತಿಲ್ಲ.
ಸಾಂಸ್ಕೃತಿಕ ಕಂಟೆಂಟ್ ಕೊರತೆಗಳು ಇವೆ. ಸ್ಥಳೀಯ ಸಂಸ್ಕೃತಿಗಳು, ಸಮಸ್ಯೆಗಳನ್ನು ಬಳಸಿಕೊಂಡು ಸಿನಿಮಾ ಮಾಡುವವರ ಸಂಖ್ಯೆ ಬೆರಳೆಣಿಕೆಯಷ್ಟು ! ಇತ್ತೀಚೆಗೆ ದರ್ಶನ್ ನಟನೆಯ ಕಾಟೇರ, ದುನಿಯಾ ವಿಜಯ್ ನಟನೆಯ ಲ್ಯಾಂಡ್ ಲಾರ್ಡ್ ಯಶಸ್ಸು ಕಂಡಿವೆ. ಇಂಥ ಸಿನಿಮಾಗಳ ಅವಶ್ಯಕತೆ ಹೆಚ್ಚಿದೆ. ಆದರೆ ಇಂಥ ಚಿತ್ರಕಥೆಗಳನ್ನು ಕೈಗೆತ್ತಿಕೊಳ್ಳುವವರ ಸಂಖ್ಯೆ ಕಡಿಮೆ. ಕಾಂತಾರ, ಕಾಂತಾರ ಸಿಕ್ವೆಲ್ – ಕೆಜಿಎಫ್ ನಂತಹ ಹಿಟ್ಗಳಿಂದ ಕನ್ನಡ ಇಂಡಸ್ಟ್ರಿ ಪ್ಯಾನ್ ಇಂಡಿಯಾ ಮಟ್ಟಕ್ಕೆ ಬೆಳೆಯುತ್ತಿದ್ದರೂ ಹೆಚ್ಚಿನ ಸಿನಿಮಾಗಳಲ್ಲಿ ಸಿನಿಮಾಪೂರ್ವ ಅಧ್ಯಯನಶೀಲತೆ ಕಡಿಮೆ ಇದೆ.
ಅಧ್ಯಯನಶೀಲತೆಯನ್ನು ಕ್ಲಿಷ್ಟಕರ ವಿಷಯ ಎಂದು ನೋಡುವ ಅಗತ್ಯವೂ ಇಲ್ಲ. ಉದಾಹರಣೆಗೆ ಹೇಳುವುದಾದರೆ ಕನ್ನಡ ಸಿನಿಮಾಗಳಲ್ಲಿ ಪೊಲೀಸ್ ಅಧಿಕಾರಿಗಳ ವೇಷಭೂಷಣ ಹೇಗಿರುತ್ತವೆ, ಸಬ್ ಇನ್ಸ್ಪೆಕ್ಟರ್, ಪೊಲೀಸ್ ಇನ್ಸ್ ಪೆಕ್ಟರ್, ಡಿವೈಎಸ್ಪಿ, ಎಸ್ಪಿ, ಐಜಿಪಿ ಇತ್ಯಾದಿ ರ್ಯಾಂಕ್ ಗಳ ಭುಜಕೀರ್ತಿಗಳ ನಡುವಿನ ವ್ಯತ್ಯಾಸವೂ ಅನೇಕ ನಿರ್ದೇಶಕರಿಗೆ ತಿಳಿದಿರುವುದಿಲ್ಲ. ಇನ್ನು ಯಾವಯಾವ ದರ್ಜೆಯ ಅಧಿಕಾರಿಗಳು ಯಾವ ಬಗೆಯ ವಾಹನಗಳನ್ನು ಬಳಸುತ್ತಾರೆ, ಅವುಗಳ ಲಾಂಛನಗಳೇನು ಎಂಬುದೂ ತಿಳಿದಿರುವುದಿಲ್ಲ. ವಿಚಿತ್ರ ಎಂದರೆ ಇದು ಕನ್ನಡ ಕಿರುತೆರೆ ನಿರ್ಮಾಣಗಳಲ್ಲಿಯೂ ಇದೆ.
ಈ ಸಂದರ್ಭದಲ್ಲಿ ನನಗೆ ನೆನಪಿಗೆ ಬರುವುದೇನೆಂದರೆ ನಟ ಕೆ.ಎಸ್. ಅಶ್ವಥ್ ಅವರು ತಾವು ರಾಜ್ ಕುಮಾರ್ ಅಭಿನಯದ “ಬೆಟ್ಟದ ಹುಲಿ” ಸಿನಿಮಾದಲ್ಲಿ ಪೊಲೀಸ್ ಅಧಿಕಾರಿಯಾಗಿ ಅಭಿನಯಿಸುವಾಗ ಮಾಡಿಕೊಂಡ ಪೂರ್ವ ತಯಾರಿ ಬಗ್ಗೆ ಹೇಳಿದ್ದು. ತಮ್ಮ ಪಾತ್ರದ ಬಗ್ಗೆ ತಿಳಿದೊಡನೆ ಅವರು ಮೈಸೂರಿನಲ್ಲಿ ತಾವಿದ್ದ ಮನೆ ಸಮೀಪದ ಸರಸ್ವತಿಪುರಂ ಪೊಲೀಸ್ ಠಾಣೆಗೆ ಹೋಗಿ ಚಿತ್ರಕಥೆ ಕಾಲಘಟ್ಟದ ಪೊಲೀಸ್ ಠಾಣಾಧಿಕಾರಿ ಧರಿಸುತ್ತಿದ್ದ ಸಮವಸ್ತ್ರದ ಬಗ್ಗೆ ಮಾಹಿತಿ – ಮಾದರಿ ಸಂಗ್ರಹಿಸಿದರು. ಕಾಸ್ಟ್ಯೂಮ್ ಡಿಸೈನರ್ ಗೆ ಅದೇ ಮಾದರಿ ನೀಡಿದರು. ಇಂಥ ಅಧ್ಯಯನಶೀಲತೆ ನಿರ್ದೇಶಕರಿಗೆ ಇರಬೇಕಲ್ಲವೇ ?
ನಿನ್ನೆ ಒಟಿಟಿ ಫ್ಲಾಟ್ ಫಾರಂನಲ್ಲಿ ತೆರೆಕಂಡ ನಟ ರಾಘವೇಂದ್ರ ಅಭಿನಯದ “ರಾಕ್ಷಸ” ಧಾರವಾಹಿ ನೋಡುತ್ತಿದ್ದೆ. ನಿರ್ದೇಶಕರಿಗೆ ಪೊಲೀಸ್ ಇನ್ಸ್ಪೆಕ್ಟರ್, ಡಿವೈಎಸ್ಪಿ, ಎಸ್ಪಿ ಭುಜಕೀರ್ತಿಗಳ ವ್ಯತ್ಯಾಸವೂ ತಿಳಿದಿಲ್ಲ. ಇದನ್ನು ನೋಡಿ ಭಾರಿ ಬೇಸರವಾಯಿತು.
ಕಂಟಿನ್ಯುಟಿ (continuity) ಕೊರತೆ
ಕನ್ನಡ ಸಿನಿಮಾಗಳಲ್ಲಿ ಒಂದು ದೃಶ್ಯದಿಂದ ಇನ್ನೊಂದಕ್ಕೆ ಕಂಟಿನ್ಯುಟಿ (continuity) ಕೊರತೆ ಸಾಮಾನ್ಯವಾಗಿ ಕಾಣುತ್ತದೆ. ಉದಾಹರಣೆಗೆ ಕಲಾವಿದರ ಉಡುಪು ಬದಲಾಗುವುದು, ಪ್ರಾಪರ್ಟಿಗಳ ಸ್ಥಾನ ಬದಲಾಗುವುದು, ಬೆಳಕು/ನೆರಳು ಸರಿಯಿಲ್ಲದಿರುವುದು, ಆಕ್ಷನ್ ಸೀಕ್ವೆನ್ಸ್ನಲ್ಲಿ ತಪ್ಪುಗಳು ತೀರಾ ಸಾಮಾನ್ಯ ಎಂಬಂತಾಗಿದೆ.
ಹೆಚ್ಚಿನ ಕನ್ನಡ ಸಿನಿಮಾಗಳು ಕಡಿಮೆ ಬಜೆಟ್ನಲ್ಲೇ ತಯಾರಾಗುವುದರಿಂದ ಸ್ಕ್ರಿಪ್ಟ್ ಸೂಪರ್ವೈಸರ್ (continuity supervisor ಅಥವಾ script supervisor) ಅನ್ನು ನೇಮಿಸಿಕೊಳ್ಳುವುದು ಅಪರೂಪ. ಈ ವ್ಯಕ್ತಿ ಶೂಟಿಂಗ್ ಸಮಯದಲ್ಲಿ ಪ್ರತಿ ಶಾಟ್ನಲ್ಲಿ ಡೀಟೇಲ್ಗಳನ್ನು ನೋಟ್ ಮಾಡಿ, ಎಲ್ಲ ದೃಶ್ಯಗಳು ಸರಿಯಾಗಿ ಮ್ಯಾಚ್ ಆಗುವಂತೆ ನೋಡಿಕೊಳ್ಳುತ್ತಾರೆ. ಹಾಲಿವುಡ್, ಬಾಲಿವುಡ್ ದೊಡ್ಡ ಪ್ರೊಡಕ್ಷನ್ಗಳಲ್ಲಿ ಇದು ಸ್ಟ್ಯಾಂಡರ್ಡ್ !
ಇವುಗಳಿಗೆಲ್ಲ ಪೂರ್ವಭಾವಿ ಪ್ಲಾನಿಂಗ್ ಮತ್ತು ಪ್ರೀ-ಪ್ರೊಡಕ್ಷನ್ ಕೊರತೆಯೇ ಮುಖ್ಯ ಕಾರಣ. ಹಿಂದೆಯೇ ಪ್ರಸ್ತಾಪಿಸಿರುವಂತೆ ಸ್ಟೋರಿಬೋರ್ಡ್, ಶಾಟ್ ಲಿಸ್ಟ್ ಅಥವಾ ಡೀಟೇಲ್ಡ್ ಶೂಟಿಂಗ್ ಪ್ಲಾನ್ ಕಡಿಮೆ. ಇದರಿಂದ ಶೂಟಿಂಗ್ ಸಮಯದಲ್ಲಿ ಇಂಪ್ರೊವೈಸ್ (ತಕ್ಷಣ ಬದಲಾವಣೆ) ಮಾಡುವುದು ಹೆಚ್ಚು. ಇದು ಕಂಟಿನ್ಯುಟಿಯನ್ನು ಹಾಳು ಮಾಡುತ್ತದೆ ಎಂಬುದನ್ನು ಹಲವರು ಯೋಚಿಸಲೂ ಹೋಗುವುದಿಲ್ಲ. ಇಂಥ ಪ್ರಮಾದಗಳನ್ನು ಪೋಸ್ಟ್-ಪ್ರೊಡಕ್ಷನ್ನಲ್ಲಿ ಸರಿಪಡಿಸಲೂ ಸಾಧ್ಯವಿಲ್ಲ.

Very Insightful Sir ..