ಪುರುಷ ಪ್ರಧಾನ ಸಮಾಜದ ದೃಷ್ಟಿಯಲ್ಲಿ ಹೆಣ್ಣು ಭೋಗಕ್ಕಾಗಿಯೇ ಇರುವುದು, ಆಕೆಗೆ ಮದುವೆಯೇ ಅಂತಿಮ ಎಂಬ ನಿಲುವು. ಆಯ್ಕೆಯ ಅವಕಾಶಗಳನ್ನು ಆಕೆಗೆ ನಿರಾಕರಿಸುವುದರಿಂದ ಏನೆಲ್ಲ ಸಂಕಟಗಳು – ತಲ್ಲಣಗಳು ಉದ್ಬವಿಸಬಹುದು. ಇಂಥ ಚೌಕಟ್ಟಿನ ಮರಳುಗಾಡಿನಲ್ಲಿ ಓಯಸಿಸ್ ನಂತೆ ಕಂಡ ಪರ ಪುರುಷನ ಕುರಿತ ತುಮಲಗಳನ್ನು “ ಉಯ್ಯಾಲೆ” ಸಿನೆಮಾ ಹೇಳುತ್ತಾ ಹೋಗುತ್ತದೆ.
ಸಿನೆಮಾ ಆರಂಭವಾಗುವುದೇ ಮೈಸೂರು ದೊಡ್ಡ ಗಡಿಯಾರದಿಂದ ಲಾಂಗ್ ಶಾಟಿನಲ್ಲಿ ಕಾಣುವ ಒಡೆಯರ್ ವೃತ್ತ, ಅರಮನೆ ಮೂಲಕ. ಮತ್ತೆ ಕ್ಯಾಮೆರಾ ನೇಮ್ ಬೋರ್ಡ್ ಮೇಲೆ ಕೇಂದ್ರಿಕೃತವಾಗುತ್ತದೆ. ಪ್ರೊ. ಶೇಷಗಿರಿರಾವ್, ಪ್ರಾಧ್ಯಾಪಕರು. ವಿಶ್ವವಿದ್ಯಾಲಯ, ಮೈಸೂರು ಎಂಬುದು ಕಾಣುತ್ತದೆ. ಮತ್ತದು ಫ್ರೇಮಿನಲ್ಲಿರುವ ದಂಪತಿ ಪೋಟೋ ಮೇಲೆ ಫೋಕಸ್ ಆಗುತ್ತದೆ. ಇಷ್ಟರ ಮೂಲಕವೇ ವಾಚ್ಯದಲ್ಲಿ ಹೇಳಬಹುದಾದ ಸಂಗತಿಗಳನ್ನು ದೃಶ್ಯಗಳನ್ನು ಅನುಕ್ರಮವಾಗಿ ಕಟ್ಟುವಿಕೆ ಮೂಲಕವೇ ತೋರಿಸಲಾಗಿದೆ.
ಪ್ರೊ. ಶೇಷಗಿರಿರಾವ್ ಅವರಿಗೆ ಸದಾ ಅನ್ಯಮನಸ್ಕತೆ. ಅಡುಗೆ – ಊಟ ತಿಂಡಿ – ಸಂಗೀತ – ಸಿನೆಮಾ – ನಾಟ್ಯ ಯಾವುದರಲ್ಲಿಯೂ ಆಸಕ್ತಿ ಇಲ್ಲ. ಓದುವುದು – ಬೋಧನೆ ಹೊರತುಪಡಿಸಿ ಜೀವನದ ಎಲ್ಲ ಸುಖಗಳಿಗೂ ಮುಖ ತಿರುಗಿಸಿದಂಥ ವ್ಯಕ್ತಿ, ನುಡಿಸುವಿಕೆಗೂ – ಬಾರಿಸುವಿಕೆಗೂ ವ್ಯತ್ಯಾಸ ಗೊತ್ತಿಲ್ಲ.. ಹೆಣ್ಣಿಗೇಕೆ ಸಂಗೀತ- ಕಲೆ ಎನ್ನುವಂಥ ವ್ಯಕ್ತಿತ್ವ. ಪತ್ನಿ ರಾಧೆಯದು ಇದಕ್ಕೆ ತದ್ವಿರುದ್ಧ ಮನಸ್ಥಿತಿ. ಅವಳಿಗೆ ಹಾಡಲು, ಸೀತಾರ್ ನುಡಿಸಲು ಬರುತ್ತದೆ. ಮನೆಯನ್ನು ಅಲಂಕರಿಸುವುದರಲ್ಲಿಯೂ ಅಪರಿಮಿತ ಆಸಕ್ತಿ. ಬದುಕು ನೀಡಿರುವ ಎಲ್ಲ ಸುಖಗಳನ್ನು ಅನುಭವಿಸಬೇಕು ಎಂಬ ಜೀವಪ್ರೀತಿಯ ಹಂಬಲವಿದೆ.
ಒಮ್ಮೆ ತನ್ಮಯಳಾಗಿ ರಾಧೆ, ಸೀತಾರ್ ನುಡಿಸುವಾಗ ಶೇಷು ಸಿಡಿಮಿಡಿಗೊಳ್ಳುತ್ತಾನೆ. “ನನಗೆ ತೊಂದರೆಯಾಗುತ್ತಿದೆ. ಬಾರಿಸುವುದನ್ನು ನಿಲ್ಲಿಸು” ಎನ್ನುತ್ತಾನೆ’. ಈ ಸಂದರ್ಭದಲ್ಲಿ ಆಕೆಗೆ ದುಃಖ ಒತ್ತರಿಸಿ ಬರುತ್ತದೆ. ಸನ್ನಿವೇಶದ ದುಗುಡತೆಯನ್ನು ಹಿನ್ನೆಲೆ ಸಂಗೀತ ಮತ್ತಷ್ಟೂ ಗಾಢವಾಗಿ ಕಟ್ಟಿಕೊಡುತ್ತದೆ. ಬದುಕು ಫ್ಲಾಷ್ ಬ್ಯಾಕ್ ಕಡೆ ತಿರುಗುತ್ತದೆ. ಆದರೆ ಇದನ್ನು ಓವರ್ ಲ್ಯಾಪಿಂಗ್ ತಂತ್ರದ ಮೂಲಕವೇ ತ್ವರಿತವಾಗಿದ್ದರೂ ವಿವರಗಳುಳ್ಳ ತುಂಡುತುಂಡು ದೃಶ್ಯಗಳು – ಸ್ವಗತ- ಸಂಭಾಷಣೆ ಮೂಲಕ ಕಟ್ಟಿಕೊಡಲಾಗಿದೆ.
ರಾಧಾ: ” ಸಿತಾರ್ ನುಡಿಸಲೂ ಸ್ವಾತಂತ್ರವಿಲ್ಲ. ಸಣ್ಣಸಣ್ಣ ಸುಖಗಳಿಂದಲೂ ವಂಚಿತೆ. ಉದ್ದಕ್ಕೂ ನನ್ನ ಬದುಕೇ ಹೀಗಾಯ್ತಲ್ಲ. ಮದುವೆ ನಿಷ್ಕರ್ಶೆಯಾಗಿದ್ದಾಗ ವಿಧಿ ನನ್ನ ತಂದೆಯನ್ನು ಕರೆದುಕೊಂಡು ಹೋಗಿ ಎಂಥಾ ದುರಂತ ಆಯ್ತು.” ದೃಶ್ಯ ಕಟ್ ಆಗುತ್ತದೆ. ಮತ್ತೊಂದು ದೃಶ್ಯ. ತಾಯಿ- ಮಗಳಿದ್ದಾರೆ.
ತಾಯಿ: “ರಾಧಾ ನಿನ್ನ ತಂದೆ ತೀರಿಕೊಂಡಿದ್ದು ಅಪಶಕುನವಂತೆ, ಅದಕ್ಕೆ ಸಂಬಂಧಬೇಡ ಎಂದು ಗಂಡಿನ ಕಡೆಯವರು ಕಾಗದ ಬರೆದಿದ್ದಾರೆ.” ದೃಶ್ಯ ಕಟ್ ಆಗಿ ಮತ್ತೊಂದರತ್ತ ತಿರುಗುತ್ತದೆ.
ರಾಧಾ: “ನಾನು ಕಾಲೇಜಿನಲ್ಲಿ ಓದುತ್ತಿದ್ದಾಗ ನನ್ನ ಕಾಲೇಜ್ ಮೇಟ್ ನಾರಾಯಣ್ ಮೊದಲೇ ಮದುವೆಯಾಗಿದ್ದರೂ ಹೇಳದೇ ಮುಚ್ಚಿಟ್ಟು ನನ್ನನ್ನು ಮದುವೆಯಾಗ್ತೀನಿ ಅಂತೇಳಿ ವಂಚಿಸಿದ” ದೃಶ್ಯ ಕಟ್. ಮತ್ತೊಂದು ದೃಶ್ಯದಲ್ಲಿ
ನಾರಾಯಣ್: “ ಹೌದು ರಾಧಾ, ನನ್ನ ಮದುವೆಯಾಗಿರೋದೇನೋ ನಿಜ, ಆದರೆ ಮದುವೆಯಾದ ತಕ್ಷಣ ಪ್ರಣಯ ಜೀವನವೇ ಬೇಡ ಎಂತ ಹೇಳ್ತೀಯಾ”
ರಾಧಾ: “ ವಿವಾಹದಲ್ಲಿ ಮುಕ್ತಾಯವಾಗದ ಪ್ರೇಮ ನನಗಿಷ್ಟವಿಲ್ಲ.” ಕಟ್ ಮತ್ತೊಂದು ಫ್ರೇಮು
ತಾಯಿ: “ಗಂಡು ಹುಡುಕಿಹುಡುಕಿ ಸಾಕಾಗಿ ಹೋಗಿದ್ದಾರೆ. ಒಂದು ಸಂಬಂಧ ಬಂದಿದೆ. ಆತನಿಗೆ ಮದುವೆಯಾದ ಎರಡ್ಮೂರು ತಿಂಗಳಿಗೆ ಹೆಂಡತಿ ತೀರಿಕೊಂಡಿದ್ದಾಳೆ. ಮಕ್ಕಳಿಲ್ಲ. ಕೈ ತುಂಬ ಸಂಬಳ. ಈ ಸಂಬಂಧ ಬಿಟ್ಟರೆ ನೀನು ಮದುವೆಯಾಗದೇ ಒಬ್ಬಳೇ ಇರಬೇಕಾಗುತ್ತದೆ ಸುಮ್ನೆ ಒಪ್ಕೊಮ್ಮ.”
ರಾಧಾ: ”  ದುಃಖದಿಂದ ಮೌನವಾಗಿ ತಲೆಯಾಡಿಸುತ್ತಾಳೆ ”
ಫ್ಲಾಷ್ ಬ್ಯಾಕ್ ಕಟ್. ಕ್ಕ್ಯಾಮೆರಾ ದಂಪತಿ ಇರುವ ಪೋಟೋ ಚೌಕಟ್ಟಿನತ್ತ ತಿರುಗುತ್ತದೆ. ಒಪ್ಪಿಕೊಂಡ ಚೌಕಟ್ಟಿನೊಳಗೆ ಬದುಕು ? ಎಂಬ ಭಾವದಿಂದ ರಾಧಾ ನೋಡುತ್ತಾಳೆ. ಇಲ್ಲಿ ನಿರ್ದೆಶಕ ನಾಲ್ಕು ಅಂಶಗಳನ್ನು ಹೇಳುತ್ತಾನೆ. ಹುಡುಗಿಯ ಅಪ್ಪ ತೀರಿಕೊಳ್ಳುವುದಕ್ಕೂ ನಿಶ್ಚಯವಾದ ಮದುವೆಗೂ ಸಂಬಂಧ ಕಲ್ಪಿಸುವ ವೈದಿಕಶಾಹಿ ಸಮಾಜದ ಅಂಧಶ್ರದ್ಧೆ. ಹೆಣ್ಣಿಗೆ ಮದುವೆಯೇ ಅಂತಿಮ. ಗಂಡನೇ ದಿಕ್ಕು ಎಂಬ ಮನೋಭಾವ. ಹೆಣ್ಣಿರುವುದೇ ಭೋಗಕ್ಕಾಗಿ ಎಂಬ ಪುರುಷನ ನಿಲುವು. ವಿವಾಹದಲ್ಲಿ ಕೊನೆಗಾಣದ ಪ್ರೇಮ, ಪ್ರೇಮವೇ ಅಲ್ಲ ಎಂಬ ನಿಲುವಿನ ಹೆಣ್ಣು.
ಇನ್ನೊಂದು ದೃಶ್ಯದಲ್ಲಿ ಪುಟ್ಟ ಮಕ್ಕಳ ಮುಗ್ಧತೆಯನ್ನು ನೋಡಿ ಉಯ್ಯಾಲೆಯಲ್ಲಿ ಕುಳಿತ ಆಕೆ ತನ್ನಷ್ಟಕ್ಕೆ ನಗುತ್ತಿರುತ್ತಾಳೆ. ಅಲ್ಲಿಗೆ ಬರುವ ಶೇಷು “ಏನ್ ನಗ್ತಾ ಇದ್ದಿಯಲ್ಲ” ಎಂದು ನಗುತ್ತಲೇ ಕೇಳುತ್ತಾನೆ. ಎದ್ದುನಿಂತ ರಾಧೆ, “ಮಕ್ಕಳ ಬಗ್ಗೆ ಯೋಚನೆ ಮಾಡ್ತಾ ಇದ್ದೆ. ನಮ್ಮ ಹಾಗೆ ಎಂದೋ ನಡೆದಿದ್ದನ್ನು ಮನಸಿನಲ್ಲಿಟ್ಟುಕೊಂಡು ಕೊರಗುವುದಿಲ್ಲ. ವೈಷಮ್ಯ ಸಾಧಿಸುವುದಿಲ್ಲ. ಎಲ್ಲವನ್ನೂ ಸುಲಭವಾಗಿ ಮರೆತುಬಿಡುತ್ತವೆ. ದೊಡ್ಡವರು ಎನಿಸಿಕೊಂಡಿರುವ ನಾವು ಈ ಮಕ್ಕಳ ಮನೋಭಾವನೆ ಬೆಳೆಸಿಕೊಂಡರೆ ಎಂಥಾ ಸಮಸ್ಯೆಯನ್ನಾದರೂ ಸುಲಭವಾಗಿ ಪರಿಹಾರ ಮಾಡಿಕೊಳ್ಳಬಹುದು” ಎಂದು ಉಯ್ಯಾಲೆ ಹಿಡಿದು ನುಡಿಯುತ್ತಾಳೆ.
ತನ್ನೆಡೆಗೆ, ಮಗುವಿನೆಡೆಗೆ ಗಮನವನ್ನೇ ಹರಿಸದ ಪತಿಯ ಕುರಿತ ಭಾವನೆಗಳನ್ನು ರಾಧೆ ಹೊರಹಾಕದೇ ಇದ್ದರೂ ಅಸಮಾಧಾನದ ಗಿಡ ಬೆಳೆಯುತ್ತಲೇ ಹೋಗುತ್ತದೆ. ಈ ಸಂದರ್ಭದಲ್ಲಿ ಪತಿಯ ಬಾಲ್ಯದ ಗೆಳೆಯ ಕೃಷ್ಣೇಗೌಡನ ಆಗಮನವಾಗುತ್ತದೆ. ಉನ್ನತ ವ್ಯಾಸಂಗಕ್ಕೆ ಬಂದ ಆತನನ್ನು ಹಾಸ್ಟೇಲಿನಲ್ಲಿ ಇರಗೊಡದೇ ತನ್ನ ಮನೆಯಲ್ಲಿಯೇ ಇರಬೇಕೆಂದು ಶೇಷು ಒತ್ತಾಯಿಸಿರುತ್ತಾನೆ.
ಇದಕ್ಕೆ ಕಾರಣವೂ ಇದೆ. ಕೃಷ್ನೇಗೌಡರ ತಂದೆಯ ಸಹಕಾರದಿಂದ ಶೇಷು ವಿದ್ಯಾಭ್ಯಾಸ ಮಾಡಿರುತ್ತಾನೆ. ಪದ್ಮಾ ಜೊತೆ ಮದುವೆಯೂ ಇವರದೇ ನೇತೃತ್ವದಲ್ಲಿ ಆಗಿರುತ್ತದೆ. ಈತ ಬಂದ ಖುಷಿಗೆ ಹಬ್ಬದೂಟ ಮಾಡಲಾಗಿರುತ್ತದೆ. ಊಟ ಮಾಡುವ ಸಮಯದಲ್ಲಿ ಶೇಷು, “ ಅಣ್ಣನಾದ ನಿನ್ನ ಮದುವೆಗೂ ಮೊದಲೇ ನಿನ್ನ ತಮ್ಮನ ಮದುವೆಯಾಯ್ತು ಎಂದು ಕೇಳಿದೆ” ಎನ್ನುತ್ತಾನೆ.


ಇದಕ್ಕೆ ಕೃಷ್ಣೇಗೌಡ “ಏನ್ ಕೇಳ್ತಿಯಾ, ಅದೊಂದು ದೊಡ್ಡಕಥೆ, ಅಲ್ಲ ಕಣಯ್ಯ, ನಮ್ಮ ಗೋಪಾಲ, ಮದುವೆಯಾಗ್ತೀನಿ ಅಂತ ಸುಳ್ಳು ಹೇಳಿ ಒಂದ್ ಹುಡುಗಿಯನ್ನು ಹಾಳು ಮಾಡಿಬಿಡೋದಾ, ಆ ಹುಡುಗಿ ಬಾಳು ಕೆಡದೇ ಇರಲಿ ಅಂತ ನಾನೇ ಬಲವಂತವಾಗಿ ನನ್ನ ತಮ್ಮನಿಗೆ ಆ ಹುಡುಗಿಯನ್ನು ತಂದ್ಕೋಬೇಕಾಗಿ ಬಂತು. ಇದು ಮನುಷ್ಯ ಧರ್ಮ ಅಲ್ಲವೇನಯ್ಯ ಎಂದು ಮಾರುತ್ತರ ನೀಡುತ್ತಾನೆ. ಅಡುಗೆಮನೆ ಬಾಗಿಲಿನ ಚೌಕಟ್ಟಿಗೆ ಒರಗಿ ನಿಂತ ರಾಧೆ ಕಡೆಯಿಂದ ಪೋಕಸ್ ಆಗಿದ್ದ ಕ್ಯಾಮೆರಾ ಮತ್ತೆ ಆಕೆಯತ್ತಲೇ ತಿರುಗುತ್ತದೆ. ಹಿನ್ನೆಲೆಯಲ್ಲಿ ಸಂತೋಷದ ಸಂಗೀತ ಕೇಳಿಸುತ್ತದೆ. ಇದರ ಮೂಲಕ ಆತನ ಬಗ್ಗೆ ಹೊಸ್ತಿಲಿನಲ್ಲಿ ನಿಂತ ಆಕೆಗೆ ಉದಯಿಸುವ ಸಕಾರಾತ್ಮಕ ಮನೋಭಾವನೆ ಕುರಿತು ಹೇಳಲಾಗಿದೆ.
ಕೃಷ್ಣೇಗೌಡನ ಸರಳ ಸ್ವಭಾವ, ನಿಷ್ಕಲ್ಮಶ ಮನಸು, ಸಂಗೀತ – ಸಾಹಿತ್ಯ –ನಾಟ್ಯದೆಡೆಗಿನ ಒಲವು, ಮಗುವಿನೆಡೆಗೆ ಅದಮ್ಯ ಪ್ರೀತಿ. ಈತನನ್ನು ಮಾಮ ಎಂದು ಮುದ್ದಿನಿಂದ ಕರೆಯುತ್ತಾ ಅಷ್ಟೇ ತೀವ್ರವಾಗಿ ಹಚ್ಚಿಕೊಳ್ಳುವ ಪುಟ್ಟ ಪ್ರಭಾ. ಇವೆಲ್ಲವೂ ಪ್ರಕ್ಷುಬ್ದಗೊಂಡ ರಾಧೆ ಮನಸಿನಲ್ಲಿ ತಂಗಾಳಿ ಬೀಸಿದಂಥ ಭಾವವನ್ನು ಕೊಡುತ್ತಾ ಹೋಗುತ್ತದೆ.
ಕೃಷ್ಮೇಗೌಡ ಊರಿಗೆ ತೆರಳಿರುತ್ತಾನೆ. ಪುಟ್ಟ ಪ್ರಭಾಳಿಗೆ ತೀವ್ರಜ್ವರ. ನಾಳೆ ಡಾಕ್ಟರ್ ಬಳಿ ಕರೆದೋಯ್ಯೋಣ ಎಂದು ಶೇಷು ದಿನಗಳನ್ನು ದೂಡುತ್ತಾನೆ. ಜ್ವರ ತಾರಕಸ್ಥಿತಿಗೆ ಏರುತ್ತದೆ. ಆಗ ಬಂದ ಕೃಷ್ಣೇಗೌಡ ಧಾವಿಸಿ ವೈದ್ಯರನ್ನು ಕರೆದುಕೊಂಡು ಬರುತ್ತಾನೆ. ಆದರೆ ಅಷ್ಟರಲ್ಲಿ ಪರಿಸ್ಥಿತಿ ಕೈ ಮೀರಿರುತ್ತದೆ. ಪುಟ್ಟ ಪ್ರಭಾ ಮೃತಳಾಗಿರುತ್ತಾಳೆ. ಇದು ಮೊದಲೇ ನೊಂದ ರಾಧೆ ಹೃದಯದ ಮೇಲೆ ಬರೆ ಎಳೆದಂತೆ ಆಗುತ್ತದೆ.
ಆಕೆಯನ್ನು ಕೃಷ್ಣೇಗೌಡ ಸಂತೈಸಲು ಪ್ರಯತ್ನಿಸಿ, ದುರ್ಘಟನೆ ಮರೆಯಲು ಹೇಳುತ್ತಾನೆ. ಆಗ ನಿಟ್ಟುಸಿರು ಬಿಡುವ ರಾಧೆ. “ಮರೆಯೋದಿಕ್ಕೆ ನಾನು ಪ್ರಯತ್ನಪಡ್ತಿದ್ದೀನಿ. ಆದರೆ ಒಂದು ವಿಷಯ ಮಾತ್ರ ನನ್ನ ಬಾಧಿಸುತ್ತಿದೆ. ಜ್ವರ ಕಂಡ ಕೂಡಲೇ ಅವರು ಮಗುವನ್ನು ಆಸ್ಪತ್ರೆಗೆ ಸೇರಿಸಿದ್ದರೆ ನನ್ನ ಪ್ರಭಾ ನನ್ನ ಕೈ ಬಿಡ್ತಿರಲಿಲ್ಲವೋ ಏನೋ. ಇಲ್ಲ ಅವರಿಗೆ ಇದು ಯಾವುದೂ ಬೇಕಾಗಿಲ್ಲ. ಇಂಥವರಿಗೆ ಹೆಂಡತಿ ಮಕ್ಕಳು ಏಕೆ ಬೇಕು ಹೇಳಿ” ಎಂದು ತನ್ನ ಒಡಲ ನೋವನ್ನು ಹೊರ ಹಾಕುತ್ತಾಳೆ.


ಕೃಷ್ಣೇಗೌಡನ ಸತತ ಪ್ರಯತ್ನ. ಈತನೂ ಪಾತ್ರಧಾರಿಯಾಗಿದ್ದ “ಸಾವಿಲ್ಲದ ಮನೆಗೆ ಸಾಸಿವೆ ತರಲು ಹೋಗುವ ಕಿಸಾ ಗೌತಮಿ ನಾಟಕ ವೀಕ್ಷಣೆ ಇವೆಲ್ಲದರಿಂದ ಆಕೆಯ ಮನಸು ಮತ್ತೆ ಯಥಾಸ್ಥಿತಿಗೆ ಬರಲು ತೊಡಗುತ್ತದೆ. ಈ ಬಳಿಕ ಈತನ ಬಗ್ಗೆ ಆಕೆ ತೀವ್ರವಾಗಿ ಆಕರ್ಷಿತಳಾಗತೊಡಗುತ್ತಾಳೆ. ಆದರೆ ಸಂಯಮದ ವರ್ತನೆ ತೋರುವ ಕೃಷ್ಣೇಗೌಡ ದುಡುಕುವುದಿಲ್ಲ. ಈ ಒತ್ತಡದಿಂದ ತಪ್ಪಿಸಿಕೊಳ್ಳಲು ಆತ ತನ್ನ ಸಹಪಾಠಿಯನ್ನು ಪ್ರೇಮಿಸುವಂತೆ ನಟಿಸುತ್ತಾನೆ. ಅಧ್ಯಾತ್ಮದ ಮೊರೆ ಹೋಗುತ್ತಾನೆ. ಆದರೂ ದಿನದಿಂದ ದಿನಕ್ಕೆ ಮನೋ ದುಗುಡು – ಒತ್ತಡ ಹೆಚ್ಚುತ್ತಲೇ ಹೋಗುತ್ತದೆ.
ಎಲ್ಲರೂ ಪ್ರವಾಸ ಹೋಗಿ ಪ್ರವಾಸಿ ಬಂಗಲೆಯಲ್ಲಿ ಇಳಿದುಕೊಂಡಿರುತ್ತಾರೆ. ಮಂಚದ ಮೇಲೆ ಕುಳಿತು ಶೇಷು ಓದುತ್ತಿರುತ್ತಾನೆ. ವಿಶೇಷ ಅಲಂಕಾರ ಮಾಡಿಕೊಂಡಿರುವ ರಾಧಾ ಕುರ್ಚಿಯ ಮೇಲೆ ಕುಳಿತು ಕಸೂತಿ ಹಾಕುವಾಗ ಶೇಷ ನಿರ್ಲಿಪ್ತವಾಗಿ ಮಲಗುತ್ತಾನೆ. ಆತನತ್ತ ನೋಡಿ ಮತ್ತೆ ಕುಸುತಿ ಹಾಕಲು ಆರಂಭಿಸುತ್ತಾಳೆ. ಆಕೆಗೆ ದಾಹವಾಗುತ್ತದೆ. ಹೊರಗೆ ಹೊರಡುತ್ತಾಳೆ. ಕ್ಯಾಮೆರಾ ಹಿಂಬಾಲಿಸುತ್ತದೆ. ತುರುಬನ್ನು ಕಟ್ಟಿಕೊಂಡು ಅದರ ಸುತ್ತಲೂ ಇಳಿಬಿದ್ದ ಮಲ್ಲಿಗೆ ಹೂವು ಮುಡಿದಿರುತ್ತಾಳೆ.
ಪಕ್ಕದ ರೂಮಿನಲ್ಲಿ ಕೃಷ್ಣೇಗೌಡ ಓಡಾರುವ ನೆರಳು ಕಾಣಿಸುತ್ತದೆ. ಆಕೆ ಕುಡಿಯಲು ಎತ್ತಿಕೊಂಡ ನೀರಿನ ಗ್ಲಾಸ್ ಅನ್ನು ಕುಡಿಯದೇ ಹಾಗೆ ಕೆಳಗಿಡುತ್ತಾಳೆ. ಮೆಲ್ಲನೆ ಅತ್ತ ಅಡಿಯಿಡುತ್ತಾಳೆ. ಕ್ಯಾಮೆರಾ ಆಕೆಯ ಪಾದಗಳತ್ತ ಪೋಕಸ್ ಆಗುತ್ತದೆ.ಆತನ ನೆರಳು ಬೀಳುತ್ತಿರುವ ಬಾಗಿಲಿನ ಗಾಜಿನ ಪರದೆಗೆ ತನ್ನೆರಡೂ ಹಸ್ತಗಳನ್ನು ಒತ್ತುತ್ತಾಳೆ. ಬೆರಳುಗಳಿಂದ ಮೆಲ್ಲನೆ ಬಾಗಿಲು ಕುಟ್ಟುತ್ತಾಳೆ.. ತೆಗೆಯುವುದಿಲ್ಲ. ಮತ್ತೆ ಕುಟ್ಟುತ್ತಾಳೆ. ಕೃಷ್ಣೇಗೌಡನ ಉದ್ವೇಗ ತಾರಕಕ್ಕೆ ಹೋಗುತ್ತದೆ. ಆತ ಗಾಜಿನ ಪರದೆ ಬಳಿ ನಿಲ್ಲುತ್ತಾನೆ. ಎರಡೂ ನೆರಳುಗಳು ಮುಖಾಮುಖಿಯಾಗುತ್ತವೆ. ಆಕೆ ಮತ್ತೆ ಬಾಗಿಲು ಬಡಿಯುತ್ತಾಳೆ. ಆಕೆ ಉದ್ವೇಗ ತಾರಕಕ್ಕೆ ಹೋಗಿ ತುಟಿಗಳು ಕಂಪಿಸತೊಡಗುತ್ತವೆ. ಕಣ್ಣುಗಳು ಪ್ರಣಯದ ಬಯಕೆ ಚೆಲ್ಲುತ್ತಿವೆ. ಬಾಗಿಲಿನ ಮೇಲೆ ಹಸ್ತವನ್ನು ಹಾಗೆ ಇಟ್ಟಿರುತ್ತಾಳೆ. ಕೃಷ್ಣೇ್ಔಡ ಬಾಗಿಲು ತೆರೆದ ಕೂಡಲೇ ಅಲ್ಲಿ ನಿಲ್ಲದೇ ಓಡಿಹೋಗಿ ಹೊರ ಗಾಜಿನ ತೆರೆಯಿರುವ ಬಾಗಿಲು ಮುಚ್ಚಿಕೊಂಡು ನಿಲ್ಲುತ್ತಾಳೆ. ಅಲ್ಲಿ ಆಕೆಯ ನೆರಳು ಗೋಚರಿಸತೊಡಗುತ್ತದೆ. ಗಡಿಯಾರದ ಪೆಡಾಲಂನಂತೆ ಅವರಿಬ್ಬರ ಭಾವನೆಗಳು ಅತ್ತಿಂದಿತ್ತ ಹೊಯ್ದಾಡುತ್ತಿರುತ್ತವೆ.

ಇಲ್ಲಿ ಸೂಜಿ, ಕಸೂತಿ, ವಿಶೇಷ ಅಲಂಕಾರ, ನೀರು, ನೆರಳು, ಬಾಗಿಲು, ಗಾಜಿನ ತೆರೆ ಎಲ್ಲವುಗಳನ್ನು ಸಮರ್ಥ ಸಂಕೇತಗಳಾಗಿ ದುಡಿಸಿಕೊಳ್ಲಲಾಗಿದೆ.  ಹೆಂಡತಿ ಚೆಂದ ಅಲಂಕಾರ ಮಾಡಿಕೊಂಡಿದರೂ ಒಂದೂ ಪ್ರಶಂಸೆಯ ಮಾತನಾಡದ ನಿರ್ಲಿಪ್ತತೆ- ನಿದ್ರೆಯೂ ಕೂಡ ಆತನ ಸ್ವಭಾವದ ಸಂಕೇತಗಳಾಗಿ ಹೊಮ್ಮಿವೆ. ಆಕೆಯ ದಾಹ ಪ್ರಣಯದ ಉತ್ಕಟ ಬಯಕೆ. ಎತ್ತಿಕೊಂಡ ನೀರನ್ನು ಕುಡಿಯದೇ ಕೆಳಗಿಡುವುದು ಕೂಡ ಅಪೇಕ್ಷೆಯೇ ಬೇರೆ ಎಂಬುದನ್ನು ಸಮರ್ಥವಾಗಿ ಬಿಂಬಿಸುತ್ತದೆ. ನೆರಳುಗಳನ್ನು ಭಾವನೆಯ ತಾಕಲಾಟ – ಮುಖಾಮುಖಿಯ ತವಕ – ಹಿಂಜರಿತದ ಪ್ರಾತಿನಿಧಿಕಗಳಾಗಿ ಬಳಸಲಾಗಿದೆ.
ಮರುದಿನ ಪ್ರವಾಸಿ ಮಂದಿರ ಹೊರಗಿರುವ ಉಯ್ಯಾಲೆಯಲ್ಲಿ ಕುಳಿತ ರಾಧೆ ““ಹೌದು ಹಾಗೆ ಮಾಡಿದರೆ ಗೊತ್ತಿರುವ ಸೆರೆಮನೆಯಿಂದ ಗೊತ್ತಿಲ್ಲದ ಸೆರೆಮನೆಗೆ ಪ್ರವೇಶ ಮಾಡಿದ ಹಾಗೆ ಆಗುವುದಿಲ್ಲವೇ ? ಸಂಸಾರ ಎನ್ನುವುದು ಇಷ್ಟ ಬಂದಾಗ ಕಳಚಿಡುವ, ಬೇಕಾದಾಗ ತೊಡುವ ಅಂದದ ಬಳೆಯಲ್ಲ” ಎಂದು ಸ್ವಗತವಾಡುತ್ತಾಳೆ.  ಮುಂದೆ ಯಾವುದೇ ಅಚಾತುರ್ಯ ಆಗದಂತೆ ನಡೆದುಕೊಳ್ಳುವ ನಿರ್ಧಾರ ಮಾಡುತ್ತಾಳೆ.
ರಾಧಾ ಉಯ್ಯಾಲೆಯಲ್ಲಿ ಕುಳಿತಿರುವುದು ಕಿಟಕಿಯಿಂದ ಕೃಷ್ನೇಗೌಡನಿಗೆ ಕಾಣುತ್ತದೆ. ಇನ್ನೂ ಇಲ್ಲಿದ್ದರೆ ಸಂಯಮದ ಕಟ್ಟೆ ಒಡೆಯಬಹುದು ಎಂದು ನಿರ್ಧರಿಸಿದ ಆತ ಕಾಗದ ಬರೆಯಲಾರಂಭಿಸುತ್ತಾನೆ. ಮೇಜಿನ ಮೇಲೆ ಆತನೇ ತಂದಿಟ್ಟುಕೊಂಡ ವಿವೇಕಾನಂದರ ಪುಟ್ಟ ಪಟವಿದೆ. ಶೇಷು ಬರುವುದರೊಳಗೆ ರಾಧೆಗೂ ಹೇಳದೇ ಹೊರಟು ಹೋಗುತ್ತಾನೆ.
ಈತನನ್ನು ಮರಳಿ ಕರೆತರಲು ಇಬ್ಬರೂ ರೈಲ್ವೇ ನಿಲ್ದಾಣದತ್ತ ಹೊರಡುತ್ತಾರೆ. ರಾಧೆ, ಧಾವಂತದಿಂದ ಓಡತೊಡಗುತ್ತಾಳೆ. ನಿಧಾನವಾಗಿ ಹೋಗು ಎನ್ನುವ ಶೇಷುವಿನ ಮಾತು ಅವಳಿಗೆ ಕೇಳುವುದಿಲ್ಲ. “ತಾನು ಮಾಡಿದ್ದ ನಿರ್ಧಾರವನ್ನು ತಿಳಿಸುವ ಧಾವಂತ ಕಾಣುತ್ತದೆ. ನಿಲ್ದಾಣಕ್ಕೆ ಹತ್ತಿರವಾಗುತ್ತಿದಂತೆ ರೈಲು ಹೊರಡತೊಡಗುತ್ತದೆ. ಆಕೆಯ ಕಳವಳ, ದುಃಖಭರಿತ ಮುಖದ ಮೇಲೆ ಕ್ಯಾಮೆರಾ ಪೋಕಸ್ ಆಗುತ್ತದೆ. ಬೋಗಿಗಳು ಚಲಿಸುವ ಸದ್ದು ಹಿನ್ನೆಲೆಯಲ್ಲಿ ಕೇಳತೊಡಗುತ್ತದೆ. ಆಳತೊಡಗುತ್ತಾಳೆ. “ಕಾಲ ಎಲ್ಲವನ್ನೂ ಮರೆಸುತ್ತದೆ” ಎನ್ನುವ ಶೇಷು ಆಕೆಯ ಬೆನ್ನು ಬಳಸಿ, ಹೆಗಲ ಮೇಲೆ ಕೈಯಿಟ್ಟು ಸಮಾಧಾನ ಹೇಳುತ್ತಾನೆ. ಇಬ್ಬರೂ ನಿಲ್ದಾಣಕ್ಕೆ ಬೆನ್ನು ತಿರುಗಿಸಿ ನಡೆಯತೊಡಗುತ್ತಾರೆ. ಕ್ಯಾಮೆರಾ ಅತ್ತಲೇ ಪೋಕಸ್ ಆಗುತ್ತದೆ. ಆಕೆಯ ಹೆಗಲ ಮೇಲೆ ಇಟ್ಟ ಕೈಯನ್ನು ಶೇಷು ತೆಗೆಯುದಿರುವುದಿಲ್ಲ. ಇದು ಬದುಕಿನ ಮತ್ತೊಂದು ಮಜಲು ಆರಂಭವಾಗುವುದರ ಸೂಚನೆಯೂ ಹೌದು.
ಇಲ್ಲಿ ಸಮಾಜದ ಸಂಕೇತವಾಗಿ ಕಿತಾಪತಿ ಈತನ ಪತ್ನಿ ಪೀಪಿಯನ್ನು ತಂದಿದ್ದಾರೆ. ಈ ಹೆಸರುಗಳನ್ನು ಇಟ್ಟಿರುವ ರೀತಿ ನೋಡಿದರೆ ವಿವೇಚಿಸದೇ ಕುಹಕವಾಡುವ ಸಮಾಜದ ಬಗ್ಗೆಗಿನ ವ್ಯಂಗ್ಯ ಎದ್ದು ಕಾಣುತ್ತದೆ. ಈ ಪಾತ್ರಗಳನ್ನು ತಂದಿರುವ ರೀತಿಯಲ್ಲಿ ಮೆಲೋಡ್ರಾಮ ಇದೆ. ಆದರೆ ಅದು ಚಿತ್ರಕ್ಕೆ ಭಾರವೇನೂ ಆಗಿಲ್ಲ.
ಶೇಷು ಕೂಡ ದುಷ್ಟನಲ್ಲ. ಬಚ್ಚಲುಮನೆಯಲ್ಲಿ ಸಂಭವಿಸಿದ ಅಗ್ನಿ ಅಪಘಾತದಲ್ಲಿ ಆಕೆಯ ಮೊದಲ ಪತ್ನಿ ಪದ್ಮಾ ಮಡಿದಿದ್ದಾಳೆ. ಮೊದಲೇ ಅನ್ಯಮನಸ್ಕ, ಅಂತರ್ಮುಖಿಯಾದ ಆತ ಆಮೆ ತನ್ನ ಚಿಪ್ಪಿನೊಳಗೆ ಕತ್ತನೆಳೆದುಕೊಳ್ಳುವಂತೆ ಒಳಗೆ ಸರಿದಿದ್ದಾನೆ. ಜಾತಿಯಲ್ಲಿ ಈತ ಬ್ರಾಹ್ಮಣಣಾದರೂ ಎಲ್ಲಿಯೂ ಈತ ಕೃಷ್ಣೇಗೌಡನನ್ನು ಜಾತಿಶ್ರೇಣಿಯಲ್ಲಿ ನೋಡುವುದಿಲ್ಲ. ರಾಧೆಯೂ ಆತಿಥ್ಯದಲ್ಲಿ ತಾರತಮ್ಯತೆ ತೋರುವುದಿಲ್ಲ.
ಇಲ್ಲಿ ಕಾಡುವುದೇನೆಂದರೆ ತನ್ನ ಸಹೋದರನಿಗೆ ತನಗಿಂತ ಮೊದಲೇ ಮದುವೆ ಮಾಡಿಸಿದ ಕೃಷ್ಣೇಗೌಡ ತನ್ನ ಬಗ್ಗೆ ಸಹಪಾಠಿ ಕನಕಳಲ್ಲಿ ಪ್ರೀತಿ ಮೂಡುವಂತೆ ಮಾಡಿ ಹಠಾತ್ತನೇ ಹಿಂದೆ ಸರಿದ ಎನ್ನುವುದು. ಒಂದು ಹೆಣ್ಣನ್ನು ಪ್ರೀತಿಸುವುದರಿಂದಲೇ ಇನ್ನೊಂದು ವಿವಾಹಿತ ಹೆಣ್ಣಿನಲ್ಲಿ ತಿರಸ್ಕಾರ ಭಾವನೆ ಮೂಡುವಂತೆ ಮಾಡಬಹುದು ಎಂಬ ಆತನ ಯೋಚನೆ ಸಮರ್ಪಕವಾಗಿ ಕಾಣುವುದಿಲ್ಲ. ಆದರೆ ಮನುಷ್ಯ, ಆವೇಗಕ್ಕೆ ಒಳಗಾದಾಗ ಹೇಗೆಲ್ಲ ವರ್ತಿಸಬಹುದು ಎಂಬುವುದನ್ನು ಲೇಖಕರು ಹೀಗೆ ಚಿತ್ರಿಸಿರಲೂಬಹುದು.
ಕೃಷ್ಣೇಗೌಡ, ಸಂಯಮದ ವರ್ತನೆ ತೋರುತ್ತಾನೆ. ಇದು ಈತನ ಮೂಲಭೂತ ಸ್ವಭಾವ ಜೊತೆಗೆ ತನ್ನ ಪ್ರಾಣಸ್ನೇಹಿತನ (ಬಾಲ್ಯದಲ್ಲಿ ಕಾವೇರಿನದಿಯಲ್ಲಿ ಮುಳಗಿ ಹೋಗುತ್ತಿದ್ದ ಈತನನ್ನು ಶೇಷು ರಕ್ಷಿಸಿರುತ್ತಾನೆ) ಹೆಂಡತಿ ಎಂಬ ಭಾವನೆಯೂ ಇರುತ್ತದೆ. ತನ್ನ ತೊಳಲಾಟಗಳಿಂದ ತಪ್ಪಿಸಿಕೊಳ್ಳುವ ಸಲುವಾಗಿ ಆಧ್ಯಾತ್ಮದ ಮೊರೆ ಹೋಗುವ ಈತ ಹೋದಲೆಲ್ಲ ಆದರ್ಶಗಳ ಸಂಕೇತವಾದ ವಿವೇಕಾನಂದರ ಚಿತ್ರವನ್ನೂ ಜೊತೆಯಲ್ಲಿಯೇ ತೆಗೆದುಕೊಂಡು ಹೋಗುತ್ತಾನೆ ಎಂಬುದನ್ನು ಗಮನಿಸಬೇಕು.
ಉಯ್ಯಾಲೆಯೂ ಒಂದು ಪಾತ್ರ:
ಸಿನೆಮಾದ ಉದ್ದಕ್ಕೂ ಕಾಣುವ ಉಯ್ಯಾಲೆ ಒಂದು ಶಕ್ತಿಶಾಲಿ ರೂಪಕ ಜೊತೆಗೆ ಇದೊಂದು ಪಾತ್ರ. ಪ್ರಮುಖ ಬೆಳವಣಿಗೆಗಳಿಗೆಲ್ಲ ಇದು ಸಾಕ್ಷಿಯಾಗಿದೆ. ಉಯ್ಯಾಲೆ ಮೇಲೆ ಕುಳಿತೇ ಕೃಷ್ಣೇಗೌಡನಿಗೆ ಕೇಳಿಸುವ ಹಾಗೆ ರಾಧಾ “ದೋಣಿಯೊಳಗೆ ನೀನು ಕರೆಯ ಮೇಲೆ ನಾನು” ಹಾಡೇಳುತ್ತಾಳೆ. ಅಂತಿಮ ಹಂತದಲ್ಲಿ ಈ ತಾಕಲಾಟಕದ ಕುರಿತಂತೆ ಧೃಢ ನಿರ್ಧಾರಕ್ಕೆ ಆಕೆ ಬರುವುದು ಕೂಡ ಪ್ರವಾಸಿ ಮಂದಿರದ ಆಚೆ ಇರುವ ಉಯ್ಯಾಲೆಯಲ್ಲಿ ಕುಳಿತೇ ಎಂಬುದು ಗಮನಾರ್ಹ
ಪ್ರತಿಭಾವಂತ ನಿರ್ದೇಶಕ ಎನ್. ಲಕ್ಷ್ಮಿನಾರಾಯಣ್ ಅವರು ತಮ್ಮ ಸಿನೆಮಾದ ದೃಶ್ಯಗಳನ್ನು ಕಟ್ಟುವ ರೀತಿಯೇ ಅನನ್ಯ. ಇಂಥ ದೃಶ್ಯ ಹೀಗೆ ಬರಬೇಕು. ಫ್ರೇಮು ಹೀಗೆ ಇರಬೇಕು, ಹಿನ್ನೆಲೆಯಲ್ಲಿ ಇಂಥದ್ದೇ ಪರಿಕರಗಳಿರಬೇಕು ಎಂಬ ವಿಷಯದಲ್ಲಿ ಅವರು ಎಷ್ಟು ಕಟ್ಟುನಿಟ್ಟು- ಶ್ರದ್ಧೆ ಉಳ್ಳವರಾಗಿದ್ದರು ಎಂಬುದು ತಿಳಿಯುತ್ತಾ ಹೋಗುತ್ತದೆ. ಈ ಕಾರಣದಿಂದಲೇ ಅವರು ಚಿತ್ರಕಥೆಯನ್ನು ದೃಶ್ಯಗಳಾಗಿ ಪರಿವರ್ತಿಸಿರುವ ರೀತಿಯನ್ನು ವಿವರವಾಗಿ ಹೇಳಿದ್ದೇನೆ.
ಅಭಿನಯ
ರಾಧೆಯಾಗಿ ಕಲ್ಪನಾ, ಶೇಷುವಾಗಿ ಕೆ.ಎಸ್. ಅಶ್ವಥ್, ಕೃಷ್ಣೇಗೌಡನಾಗಿ ರಾಜ್ ಕುಮಾರ್, ಸಾಂಪ್ರದಾಯಿಕ ಸಮಾಜದ ಪ್ರತಿಬಿಂಬಗಳಾಗಿ ಬಾಲಕೃಷ್ಣ, ರಮಾದೇವಿ ಅವರ ಅಭಿನಯ ಚೆಂದ. ಭಾರಿ ಸವಾಲೆನ್ನಿಸುವ ರಾಧಾ – ಕೃಷ್ಣೇಗೌಡರ ಪಾತ್ರಗಳಲ್ಲಿ ಕಲ್ಪನಾ – ರಾಜ್ ಕುಮಾರ್ ಪರಕಾಯ ಪ್ರವೇಶವನ್ನೇ ಮಾಡಿದ್ದಾರೆ. ಇವರ ಆಂಗಿಕ ಭಾಚೆಯೂ ಅನನ್ಯ.
ಉಯ್ಯಾಲೆ ಇದೇ ಹೆಸರಿನ ಕಾದಂಬರಿ ಆಧರಿತ. ಇದನ್ನು ರಚಿಸಿದ ಚದುರಂಗ (ಸುಬ್ರಮಣ್ಯರಾಜೇ ಅರಸ್) ಅವರೇ ಸಿನೆಮಾಕ್ಕೂ ಸಂಭಾಷಣೆ ಬರೆದಿದ್ದಾರೆ ಎಂಬುದು ವಿಶೇಷ. ಎನ್.ಪಿ. ರಾವ್ ಅವರು ಚಿತ್ರಕಥೆಯನ್ನು ಸಂಪೂರ್ಣ ಅರ್ಥಮಾಡಿಕೊಂಡು ಛಾಯಾಗ್ರಹಣ ಮಾಡಿದ್ದಾರೆ. ವಿಜಯಭಾಸ್ಕರ್ ಅವರ ಹಿನ್ನೆಲೆ ಸಂಗೀತ ದೃಶ್ಯಗಳ ಗಾಢತೆಯನ್ನು ಹೆಚ್ಚಿಸಿದೆ.
ಭಾರತ್ ಎಂಟರ್ ಪ್ರೈಸಸ್ ಸಂಸ್ಥೆ 1969 ರಲ್ಲಿ ನಿರ್ಮಿಸಿದ “ಉಯ್ಯಾಲೆ” ರಾಜ್ಯ, ರಾಷ್ಟ್ರ, ಅಂತರರಾಷ್ಟ್ರ ಮಟ್ಟದಲ್ಲಿಯೂ ಮನ್ನಣೆ ಪಡೆದಿದೆ. 2019ರಲ್ಲಿ ಗೋವಾದಲ್ಲಿ ನಡೆದ ಪ್ರತಿಷ್ಠಿತ ಅಂತರಾಷ್ಟ್ರೀಯ ಸಿನೆಮೋತ್ಸವದ ಭಾರತೀಯ ಚಿತ್ರರಂಗದ ಪುನಾರವಲೋಕನ ವಿಭಾಗದಲ್ಲಿ ಆಯ್ಕೆಯಾದ ಹನ್ನೊಂದು ಸಿನೆಮಾಗಳಲ್ಲಿ ಇದು ಸೇರಿತ್ತು.

Similar Posts

4 Comments

  1. ಉಯ್ಯಾಲೆ ಚಿತ್ರವನ್ನು ಮತ್ತೊಮ್ಮೆ ನೋಡಿದಂತೆ ಆಯಿತು… ತುಂಬಾ ಚೆನ್ನಾಗಿದೆ ವಿಮರ್ಶೆ…

    1. ಧನ್ಯವಾದ

  2. ಸಿನೆಮಾವನ್ನು ನೋಡುವುದು ಬೇರೆ, ಅರ್ಥೈಸುವುದು ಬೇರೆ. ಸೊಗಸಾಗಿ ಇದನ್ನು ಉಣಬಡಿಸಿದ್ದೀರಿ ಕುಮಾರ್. ಅಭಿನಂದನೆಗಳು. ಇತ್ತೀಚಿನ ವ್ಯಾಪಾರೀ ಸಿನೆಮಾಗಳಲ್ಲೂ ಸಂಕೇತಗಳು ಇರುತ್ತವೆ.‌ ಆದರೆ ಅವೆಷ್ಟು ಒರಟೊರಟಾಗಿ ಸಂಭಾಷಣೆಯಲ್ಲಿ, ಪ್ರತಿಮೆಗಳಲ್ಲಿ, ಹೆಸರುಗಳಲ್ಲಿ ತುರುಕಿದಂತಾಗುತ್ತದೆ.‌ನವಿರತೆ ಮಾಯವಾಗಿದೆ.‌

    1. ನಿಮ್ಮ ಅಭಿಪ್ರಾಯ ಸೂಕ್ತವಾಗಿದೆ…

Leave a Reply

Your email address will not be published. Required fields are marked *